Home / ಲೇಖನಗಳು / ಸ್ತ್ರೀ: ಶಿಕ್ಷಣ ಮತ್ತು ಇತರ ಹಕ್ಕುಗಳು

ಸ್ತ್ರೀ: ಶಿಕ್ಷಣ ಮತ್ತು ಇತರ ಹಕ್ಕುಗಳು

ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯಲು ಸ್ತ್ರೀಯರಿಗೆ ಅನುಮತಿ ನೀಡಲಾಗಿರುವುದು ಮಾತ್ರವಲ್ಲ ಸ್ತ್ರೀ ಶಿಕ್ಷಣಕ್ಕೂ ಪುರುಷರ ಶಿಕ್ಷಣದಷ್ಟೆ ಮಹತ್ವವನ್ನು ಇಸ್ಲಾಮ್ ಕಲ್ಪಿಸಿದೆ. ಪುರುಷರಂತೆ ಸ್ತ್ರೀಯರೂ ಪ್ರವಾದಿ ಮುಹಮ್ಮದ್‍ರಿಂದ(ಸ) ಧಾರ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಆದರೆ ಸ್ತ್ರೀಯರ ಶಿಕ್ಷಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ರೀತಿ ಪ್ರವಾದಿಯ ಪತ್ನಿಯರು ಅದರಲ್ಲಿಯೂ ವಿಶೇಷವಾಗಿ ಪ್ರವಾದಿ ಪತ್ನಿ ಹ. ಆಯಿಶಾರವರು(ರ) ಸ್ತ್ರೀಯರಂತೆ ಪುರುಷರಿಗೂ ಕಲಿಸುತ್ತಿದ್ದರು. ಪ್ರವಾದಿ ವರ್ಯರ(ಸ) ಅನೇಕ ಸಂಗಾತಿಗಳು ಮತ್ತು ಅವರ ನಂತರದ ಅನುಯಾಯಿಗಳೂ ಹ. ಆಯಿಶಾರಿಂದ(ರ) ಕುರ್‍ಆನ್, ಹದೀಸ್, ಇಸ್ಲಾವಿೂ ನ್ಯಾಯ ಶಾಸ್ತ್ರ ಮತ್ತು ಕರ್ಮ ಶಾಸ್ತ್ರಗಳನ್ನು ಕಲಿತಿದ್ದರು.

ಶಿಕ್ಷಣ ತರಬೇತಿಗಳನ್ನು ನೀಡುವುದರಲ್ಲಿ ಸ್ತ್ರೀ-ಪುರುಷರಲ್ಲಿ ಭೇದಭಾವ ಮಾಡಬಾರದೆಂದು ಇಸ್ಲಾಮ್ ಸ್ಪಷ್ಟಪಡಿಸುತ್ತದೆ. ಆದರೆ ಸ್ತ್ರೀ-ಪುರುಷರಿಗೆ ಒಂದೇ ರೀತಿಯ ಶಿಕ್ಷಣ ತರಬೇತಿಯನ್ನು ನೀಡಬೇಕೆಂದು ಮಾತ್ರ ಅದು ಬಯಸುವುದಿಲ್ಲ. ಇಸ್ಲಾಮಿನ ದೃಷ್ಟಿಯಲ್ಲಿ ಸ್ತ್ರೀಯನ್ನು ಉತ್ತಮ ಮಗಳಾಗಿಯೂ, ಸೋದರಿಯಾಗಿಯೂ, ಗೃಹಿಣಿಯಾಗಿಯೂ, ಮಾತೆ ಯಾಗಿಯೂ ಮಾರ್ಪಡಿಸುವ ಶಿಕ್ಷಣವೇ ಉತ್ಕ್ರಷ್ಟ ಶಿಕ್ಷಣವಾಗಿದೆ. ಅವಳ ಕಾರ್ಯ ಕ್ಷೇತ್ರವು ಮನೆಯೇ ಎಂಬುದನ್ನು ಮರೆಯಬಾರದು. ಆದ್ದರಿಂದ ಆ ಕ್ಷೇತ್ರದಲ್ಲಿ ಆಕೆ ಹೆಚ್ಚು ಉಪಯುಕ್ತ ಮತ್ತು ದಕ್ಷಳಾಗುವಂತೆ ಮಾಡುವ ಶಿಕ್ಷಣವೇ ಆಕೆಯ ಮಟ್ಟಿಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಮಾತ್ರವಲ್ಲ ಆಕೆ ನೈತಿಕತೆ, ಸಂಸ್ಕ್ರತಿ, ಇತಿಹಾಸ, ಆರೋಗ್ಯ, ಜ್ಞಾನ, ವಿಜ್ಞಾನಗಳಲ್ಲಿಯೂ ಉತ್ತಮ ತಿಳುವಳಿಕೆ ಹೊಂದಿ ಉತ್ತಮ ಗೃಹಿಣಿಯ ಜೊತೆಗೆ ಉತ್ತಮ ಪ್ರಜೆಯೂ ಉತ್ತಮ ಮಾನವಳೂ ಆಗುವಂತೆ ಮಾಡುವ ಶಿಕ್ಷಣ ಆಕೆಗೆ ಅಗತ್ಯವಾಗಿದೆ. ಅವರವರಿಗೆ ಅಭಿರುಚಿ ಇರುವ ಇತರ ವಿಜ್ಞಾನ ಕ್ಷೇತ್ರದಲ್ಲಿಯೂ ಹೆಚ್ಚಿನ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ ಶಿಕ್ಷಣ ಪಡೆಯುವಾಗ ಅವರು ಇಸ್ಲಾಮಿನಲ್ಲಿ ಸ್ಪಷ್ಟಪಡಿಸಲಾಗಿರುವ ನೈತಿಕ ಮತ್ತು ಸಾಮಾಜಿಕ ನಿಯಮಗಳನ್ನು ಪಾಲಿಸಬೇಕಾದುದಗತ್ಯ.

ಪ್ರತ್ಯೇಕ ಶಿಕ್ಷಣ ವ್ಯವಸ್ಥೆ

ಪ್ರಾಥಮಿಕ ಮಟ್ಟದಲ್ಲೇ ಬಾಲಕಿಯರಿಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆಯನ್ನು ಏರ್ಪಡಿಸ ಬೇಕಾದುದು ಇಸ್ಲಾಮಿನ ಬೇಡಿಕೆಯಾಗಿದೆ. ಕನಿಷ್ಠ ಪಕ್ಷ ಪ್ರೌಢಶಾಲಾ ಮಟ್ಟದಲ್ಲಾದರೂ ಬಾಲಕಿಯರಿಗೆ ಪ್ರತ್ಯೇಕ ಶಿಕ್ಷಣದ ಏರ್ಪಾಡು ಬೇಕೇ ಬೇಕು. ಆ ಮಟ್ಟದಲ್ಲಿ ಸಹ-ಶಿಕ್ಷಣದ ಸಂಪ್ರದಾಯವನ್ನು ಇಸ್ಲಾಮ್ ಒಪ್ಪುವುದೇ ಇಲ್ಲ. ಇಂದು ಮುಸ್ಲಿಮ್ ಸ್ತ್ರೀಯರು ಶಿಕ್ಷಣದ ಬಗ್ಗೆ ಅಲಕ್ಷ್ಯ ತೋರುತ್ತಿರುವುದಕ್ಕೆ ಇಸ್ಲಾಮಿನ ಬಗೆಗಿನ ಅವರ ಜ್ಞಾನದ ಕೊರತೆಯ ಜೊತೆಗೆ ಬಾಲಕಿಯರಿಗೆ ಪ್ರತ್ಯೇಕ ಶಿಕ್ಷಣದ ಏರ್ಪಾಟಿನ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ.

ಸ್ತ್ರೀಯರನ್ನು ಅತ್ಯಂತ ಹೀನಾಯವಾಗಿ, ತುಚ್ಛವಾಗಿ, ಪಾಪದ ಪ್ರತೀಕವಾಗಿ, ಅಧರ್ಮ- ಅನೀತಿಯ ಪ್ರೇರಕವಾಗಿ ಕಾಣುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಅನೇಕ ಆಧಾರಗಳಿವೆ. ಅನೇಕ ದೇಶಗಳಲ್ಲಂತೂ ತನಗೆ ಹೆಣ್ಣು ಮಗು ಹುಟ್ಟಿದ ಸುದ್ದಿ ತಿಳಿಯುತ್ತಲೇ ತಂದೆಯು ನಾಚಿಕೆಯಿಂದ ತಲೆ ತಗ್ಗಿಸುವ ಮತ್ತು ಅದನ್ನು ಜೀವಂತ ಹೂಳುವ ಮೂಲಕ ಅಥವಾ ಇನ್ನಾವುದೇ ವಿಧಾನದಿಂದ ಕೊಂದು ಹಾಕುವ ಮೂಲಕ ಆ ಅವಮಾನದಿಂದ ಪಾರಾಗುವ ಅಮಾನುಷ ರೂಢಿ ಸಾಮಾನ್ಯವಾಗಿತ್ತು. ನಿರಕ್ಷರಿ ಮತ್ತು ಅಜ್ಞಾನಿಗಳ ವಿಷಯವಂತಿರಲಿ, ಜ್ಞಾನಿಗಳೂ ಧರ್ಮ ಧುರೀಣರೂ ಅನೇಕ ಶತಮಾನಗಳ ತನಕ ಸ್ತ್ರೀಯರನ್ನು ಮಾನವಳಾಗಿ ಕಾಣಬೇಕೆ, ಆಕೆಗೂ ಆತ್ಮ ಇದೆಯೇ ಎಂಬುದನ್ನು ಕೂಡಾ ನಿಖರವಾಗಿ ಹೇಳುವ ಸ್ಥಿತಿಯಲ್ಲಿರಲಿಲ್ಲ.

ಸ್ತ್ರೀ ಪಾಪ ಜನನಿಯೇ?

ಸ್ತ್ರೀಯು ಶಿಕ್ಷಣಕ್ಕೆ ಅನರ್ಹಳೆಂದೂ ಸ್ತ್ರೀ ಸಂಪರ್ಕ ಪಡೆದವರಿಗೆ ಮೋಕ್ಷವಿಲ್ಲವೆಂದೂ ಎಲ್ಲ ಪಾಪಗಳಿಗೂ ಸ್ತ್ರೀಯೇ ಪ್ರೇರಕ ಶಕ್ತಿಯೆಂದೂ ಅನೇಕ ಧರ್ಮಗಳಲ್ಲಿ ನಂಬಲಾಗಿತ್ತು. ಎಲ್ಲ ರೀತಿಯ ಗೌರವ, ಅಧಿಕಾರಗಳಿಂದ ವಂಚಿತಳಾಗಿ ಗುಲಾಮಗಿರಿಯ ಜೀವನ ನಡೆಸಲು ಆಕೆ ನಿರ್ಬಂಧಿತಳಾಗಿದ್ದಳು. ತನ್ನ ಗಂಡನನ್ನೇ ದೇವರೆಂದು ಬಗೆದು ಆತನನ್ನು ಪೂಜಿಸುವುದು ಮತ್ತು ಆತನ ಸರ್ವಾಂಗೀಣ ಸೇವೆ ಮಾಡುತ್ತಿರುವುದು ತನ್ನ ಧರ್ಮವೆಂದು ಭಾವಿಸಿದ್ದಳು.

ಮಹಿಳೆಯ ಈ ದುಸ್ಥಿತಿಯನ್ನು ಅತ್ಯಂತ ಕ್ರಾಂತಿಕಾರೀ ರೀತಿಯಲ್ಲಿ ನ್ಯಾಯ ಸಮ್ಮತವೂ ವ್ಯಾವಹಾರಿಕವೂ ತರ್ಕಬದ್ಧವೂ ಎನಿಸುವಂತೆ ಬದಲಾಯಿಸಿದ ಶ್ರೇಯಸ್ಸು ಇಸ್ಲಾಮ್ ಧರ್ಮಕ್ಕೆ ಸಲ್ಲುತ್ತದೆ. ಇಸ್ಲಾಮ್ ಸ್ತ್ರೀ-ಪುರುಷ ಮನೋಭಾವವನ್ನೇ ಆಮೂಲಾಗ್ರವಾಗಿ ಬದಲಾಯಿಸಿದೆ. ಸ್ತ್ರೀಗೆ ಸಮಾಜದಲ್ಲಿ ಎಲ್ಲ ರೀತಿಯ ಹಕ್ಕು ಬಾಧ್ಯತೆಗಳನ್ನೂ ಗೌರವಾದರದ ಸ್ಥಾನಮಾನಗಳನ್ನೂ ನೀಡಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ. ಆಧುನಿಕ ಯುಗದಲ್ಲಿ ಆಗಾಗ ಕೇಳಿ ಬರುತ್ತಿರುವ ‘ಸ್ತ್ರೀ ಸ್ವಾತಂತ್ರ್ಯ’, ‘ಸ್ತ್ರೀ ಶಿಕ್ಷಣ’, ‘ಸ್ತ್ರೀ-ಪುರುಷ ಸಮಾನತೆ’, ‘ಸ್ತ್ರೀ ವಿಮೋಚನೆ’ಯ ಕೂಗು ಪ್ರವಾದಿ ಮುಹಮ್ಮದ್(ಸ) ಹದಿನಾಲ್ಕು ಶತಮಾನಗಳ ಹಿಂದೆಯೇ ನೀಡಿದ ಕರೆಯ ಪ್ರತಿಧ್ವನಿಯಾಗಿದೆ. ಸ್ತ್ರೀಯೂ ಪುರುಷನಷ್ಟೇ ಮಾನವೀಯ ಅಂಶಗಳನ್ನು ಪಡೆದವಳೆಂಬುದನ್ನು ಅವರು ಜಗತ್ತಿಗೆ ಸಾರಿ ಹೇಳಿದರು.

ಸ್ತ್ರೀ-ಪುರುಷ ಸಮಾನತೆ

“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹುಟ್ಟಿಸಿದನು.” (ಪವಿತ್ರ ಕುರ್‍ಆನ್, 4:1)

ದೇವನು ಸ್ತ್ರೀ-ಪುರುಷರಲ್ಲಿ ವ್ಯತ್ಯಾಸ ಕಾಣುವುದಿಲ್ಲವೆಂಬುದಕ್ಕೆ ಪವಿತ್ರ ಕುರ್‍ಆನಿನ ಈ ಕೆಳಗಿನ ಸೂಕ್ತವು ಸಾಕ್ಷಿಯಾಗಿದೆ-
“ಪುರುಷರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ, ಸ್ತ್ರೀಯರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ.” (4:32)

ವಿಶ್ವಾಸ, ಶ್ರದ್ಧೆ, ಸತ್ಕಾರ್ಯ, ಸದ್ಗುಣಗಳ ಫಲವಾಗಿ ಪುರುಷರು ಉನ್ನತ ಸ್ಥಾನ ಮಾನಗಳನ್ನು ಪಡೆಯಬಹುದಾದರೆ ಸ್ತ್ರೀಯರೂ ಅದೇ ತೆರನಾಗಿ ಪಡೆಯಬಲ್ಲರು.
“ನಾನು ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನೂ ನಿಷ್ಫಲಗೊಳಿಸುವವನಲ್ಲ. ಪುರುಷರಾಗಲಿ, ಸ್ತ್ರೀಯರಾಗಲಿ ನೀವೆಲ್ಲಾ ಒಂದೇ ವರ್ಗದವರು. ಆದುದರಿಂದ ಯಾರು ನನಗಾಗಿ ದೇಶ ತ್ಯಾಗ ಮಾಡಿದರೋ ನನ್ನ ಮಾರ್ಗದಲ್ಲಿ ತಮ್ಮ ಮನೆ ಮಾರುಗಳಿಂದ ಹೊರ ಹಾಕಲ್ಪಟ್ಟರೋ ಸತಾಯಿಸಲ್ಪಟ್ಟರೋ ನನಗಾಗಿ ಹೋರಾಟ ನಡೆಸಿದರೋ ಮತ್ತು ವಧಿಸಲ್ಪಟ್ಟರೋ ಅವರೆಲ್ಲರ ಅಪರಾಧಗಳನ್ನು ನಾನು ಕ್ಷಮಿಸಿ ಬಿಡುವೆನು ಮತ್ತು ಅವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಉದ್ಯಾನಗಳಲ್ಲಿ ಪ್ರವೇಶ ಕೊಡುವೆನು.” (3:195)

“ಪುರುಷನಿರಲಿ ಸ್ತ್ರೀ ಇರಲಿ ಸತ್ಕರ್ಮ ಮಾಡುವವರು ಸತ್ಯವಿಶ್ವಾಸಿಗಳಾಗಿದ್ದರೆ, ಇಂತಹವರೇ ಸ್ವರ್ಗದಲ್ಲಿ ಪ್ರವೇಶ ಪಡೆಯುವರು. ಕಿಂಚಿತ್ತೂ ಇವರ ಹಕ್ಕುಚ್ಯುತಿಯಾಗಲಾರದು.” (4:124)

ಪ್ರವಾದಿ ಮುಹಮ್ಮದ್‍ರವರು(ಸ) ಹೀಗೆ ಹೇಳಿರುವರು:
“ಪುರುಷರು ತಮ್ಮ ಸ್ತ್ರೀಯರ ಮೇಲೆ ಅಧಿಕಾರ ಹೊಂದಿರುವಂತೆಯೇ ಸ್ತ್ರೀಯರೂ ತಮ್ಮ ಪುರುಷರ ಮೇಲೆ ಅಧಿಕಾರ ಹೊಂದಿದ್ದಾರೆ.”

ಪವಿತ್ರ ಕುರ್‍ಆನ್ ಕೂಡಾ ಈ ವಿಷಯವನ್ನು ಈ ರೀತಿ ಸ್ಪಷ್ಟಪಡಿಸಿದೆ:
“ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಚಿತ ಹಕ್ಕು ಇದೆ.” (2:228)

ಸ್ತ್ರೀಯನ್ನು ಅವಮಾನ, ಅವಹೇಳನಗಳ ಸ್ಥಿತಿಯಿಂದ ಮೇಲೆತ್ತಿ ಅವಳಿಗೆ ಘನತೆ-ಗೌರವಗಳ ಸ್ಥಾನವನ್ನು ಪ್ರವಾದಿ ಮುಹಮ್ಮದ್(ಸ) ದೊರಕಿಸಿ ಕೊಟ್ಟರು. ಹೆಣ್ಣು ಮಗುವಿನ ಜನನ ಅವಮಾನಕರವಲ್ಲವೆಂದೂ ಅದನ್ನು ಬೆಳೆಸಿ ವಿದ್ಯಾಭ್ಯಾಸ, ತರಬೇತಿ ನೀಡಿ ಮದುವೆ ಮಾಡಿಕೊಡುವುದು ತಂದೆಯ ಮೋಕ್ಷಕ್ಕೆ ಮಾರ್ಗವೆಂದೂ ಅವರು ತಿಳಿಸಿದರು. ಅಲ್ಲಾಹನ ಬಳಿಕ ಮನುಷ್ಯನ ಪಾಲಿಗೆ ತನ್ನ ತಾಯಿಯೇ ಅತ್ಯಧಿಕ ಗೌರವಾದರಗಳಿಗೆ ಪಾತ್ರಳು ಎಂದು ಪ್ರವಾದಿ ಮುಹಮ್ಮದ್(ಸ) ಬಹಳ ಒತ್ತುಕೊಟ್ಟು ಹೇಳಿರುವರು. “ತಾಯಿಯ ಪಾದದಡಿ ಸ್ವರ್ಗ ವಿದೆಯೆಂದೂ ಈ ಜಗತ್ತಿನ ಅತ್ಯುತ್ತಮ ಅನುಗ್ರಹ ಓರ್ವ ಗುಣವತಿಯಾದ ಪತ್ನಿಯೆಂದೂ” ಹೇಳುವ ಮೂಲಕ ಪ್ರವಾದಿ ಮುಹಮ್ಮದ್(ಸ) ಸ್ತ್ರೀಗೆ ಅತ್ಯುನ್ನತ ಸ್ಥಾನಮಾನವನ್ನು ಒದಗಿಸಿ ಕೊಟ್ಟರು.

ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಆಸ್ತಿಯ ಹಕ್ಕು; ತನ್ನ ತಂದೆ, ಪತಿ ಹಾಗೂ ಮಕ್ಕಳ ಸೊತ್ತಿನಲ್ಲಿ ವಾರೀಸು ಹಕ್ಕು; ಸ್ವತಂತ್ರವಾಗಿ ಸಂಪತ್ತನ್ನು ಹೊಂದುವ, ವಿನಿಯೋಗಿಸುವ ಮತ್ತು ಅದನ್ನು ಲಾಭದಾಯಕ ವ್ಯಾಪಾರದಲ್ಲಿ ತೊಡಗಿಸುವ ಹಕ್ಕನ್ನೂ ನೀಡಲಾಗಿದೆ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …