Home / ಲೇಖನಗಳು / ” ಹಲಾಲ್ ” ಎಬ್ಬಿಸಿದ ಕೋಲಾಹಲ..

” ಹಲಾಲ್ ” ಎಬ್ಬಿಸಿದ ಕೋಲಾಹಲ..

✍🏽 ಮುಷ್ತಾಕ್ ಹೆನ್ನಾಬೈಲ್

“ಹಲಾಲ್” ಮೊಟ್ಟಮೊದಲು ಭೂಮಿಯ ಮೇಲೆ ಅನುಸರಿಸಲು ಆರಂಭಿಸಿದವರು ಯಹೂದಿಗಳು. ಮರುಭೂಮಿಯ ಮೇಲಿನ ಜನಾಂಗಗಳು ಮೂಲತಃ ಮಾಂಸಹಾರಿಗಳು. ಧರ್ಮಸಂಹಿತೆಗಳು ಸಾರ್ವತ್ರಿಕವಾಗದ ಅಜ್ಞಾನ ಕಾಲದಲ್ಲಿ ಮನುಷ್ಯ ಆಹಾರಕ್ಕಾಗಿ ಪ್ರಾಣಿಗಳನ್ನು ತೋಚಿದ ರೀತಿಯಲ್ಲಿ ಕೊಲ್ಲುತ್ತಿದ್ದ. ಸ್ವತಃ ಮಾಂಸಹಾರಿ ಪ್ರಾಣಿಗಳೂ ಕೂಡ ತಮ್ಮ ಬೇಟೆಯನ್ನು ನಿರ್ದಿಷ್ಟವಾದ ವಿಧಾನದ ಮೂಲಕ ಪಡೆಯುತ್ತವೆ. ಬಹುತೇಕ ಮಾಂಸಹಾರಿ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವುದು ಕತ್ತಿನ ಕೆಳಭಾಗದ ಜೀವನಾಡಿಗಳಾದ ಶ್ವಾಸನಾಳ, ಅನ್ನನಾಳ ಮತ್ತು ರಕ್ತನಾಳವನ್ನು ಕಚ್ಚಿ ಕಡಿಯುವುದರ ಮೂಲಕವೇ. ಕೆಲವೇ ತಿಂಗಳುಗಳ ಹಿಂದಷ್ಟೇ ಹುಟ್ಟಿರಬಹುದಾದ ಹುಲಿ-ಸಿಂಹ-ಚಿರತೆಯ ಮರಿಯೂ ಯಾವುದೇ ತರಬೇತಿಯಿಲ್ಲದೆ ಸ್ವಪ್ರೇರಣೆಯಿಂದ ತನ್ನ ಬೇಟೆಯ ಕತ್ತಿನ ಭಾಗವನ್ನೇ ಕತ್ತರಿಸುತ್ತವೆ. ಪ್ರಾಣಿಗಳು ತಮ್ಮ ಬೇಟೆಯ ಕತ್ತಿನ ಭಾಗ ಕಡಿಯುವ ಸಂದರ್ಭದಲ್ಲಿ ಅಪಾಯವನ್ನು ಕೂಡ ಎದುರಿಸುತ್ತವೆ. ಚಿರತೆಯೊಂದು ಕಾಡುಕೋಣದ ಕತ್ತಿನ ಭಾಗಕ್ಕೆ ಬಾಯಿಯನ್ನು ಹಾಕಿದಾಗ ಕಾಡುಕೋಣ ತನ್ನ ಹರಿತ ಮತ್ತು ಬಲಶಾಲಿ ಕೊಂಬಿನ ಮೂಲಕ ಚಿರತೆಯನ್ನು ತಿವಿಯುವ ಸಾಧ್ಯತೆಯೂ ಇರುತ್ತದೆ. ಸಿಂಹವು ಆನೆಯ ಕತ್ತಿನ ಭಾಗವನ್ನು ಕಡಿಯಲು ಹವಣಿಸಿದಾಗ ಆನೆಯು ಸೊಂಡಿಲಿನಿಂದ ಸಿಂಹವನ್ನು ಸುತ್ತಿಕೊಂಡು ನೆಲಕ್ಕೆ ಬಡಿಯುವ ಅಪಾಯವೂ ಇರುತ್ತದೆ. ಆಕಾಶದೆತ್ತರದಲ್ಲಿ ಜಿರಾಫೆಯ ಕತ್ತಿದ್ದರೂ ಕೂಡ ಕೆಳಗೆ ಬಿಳುವ ಸಾಧ್ಯತೆಯ ಹೊರತಾಗಿಯೂ ಮಾಂಸಹಾರಿ ಪ್ರಾಣಿ ಅದನ್ನು ಕೆಡಹಿ ಅಥವಾ ಏರಿ ಕತ್ತನ್ನೇ ಹಲ್ಲಿನಿಂದ ಕಡಿಯುತ್ತದೆ. ಮಾಂಸಹಾರಿ ಕಾಡುಪ್ರಾಣಿಗಳು ಬೇಟೆಯ ಸಂದರ್ಭಗಳಲ್ಲಿ ಕತ್ತನ್ನು ಗುರಿಯಾಗಿಸಿ ಕಡಿಯುವಾಗ ಇಂತಹ ಅಪಾಯವಿರುವ ಹೊರತಾಗಿಯೂ ಅವುಗಳು ತಮ್ಮ ಬೇಟೆಯನ್ನು ನೆಲಕ್ಕೆ ಬಡಿದೋ, ಜೀವ ಹೋಗಬಹುದಾದ ದೇಹದ ಇತರ ಭಾಗಗಳಾದ ಎದೆಯ ಭಾಗ, ಮರ್ಮಾಂಗ, ಉಸಿರು ಕಟ್ಟಿಸಲು ಅನುವಾಗುವ ಬಾಯಿ-ಮೂಗಿನ ಭಾಗವನ್ನು ಗುರಿಯಾಗಿಸಿ ಕಡಿಯುವುದಿಲ್ಲ. ಅವುಗಳು ಬೇಟೆಯ ಕತ್ತಿನ ಕೆಳಭಾಗವನ್ನೇ ತಮ್ಮ ಹರಿತ ಹಲ್ಲುಗಳ ಮೂಲಕ ಕಡಿಯುವುದರ ಮೂಲಕ ಏಕಸ್ವರೂಪದಲ್ಲಿ ಬೇಟೆಯಾಡುತ್ತವೆ.

ಪ್ರಕೃತಿದತ್ತವಾದ ಪ್ರಾಣಿಗಳ ಇಂತಹ ಏಕಸ್ವರೂಪದ ಬೇಟೆಯ ತತ್ಸಮಾನ ರೂಪವೇ ಇಸ್ಲಾಮಿಕ್ ಹಲಾಲ್ (ದ್ಸಬಹ್). ಪ್ರಾಣಿಗಳು ಪ್ರಾಣಿಗಳನ್ನು ಬೇಟೆಯಾಡುವಾಗ ಹಲ್ಲಿನ ಮೂಲಕ ಜೀವಿಯ ಜೀವನಾಡಿಗಳನ್ನು ಕಡಿತಗೊಳಿಸಿ ಜೀವಿಯ ಜೀವಹೋಗುವ ಪ್ರಕ್ರಿಯೆ ಸುಲಭಗೊಳಿಸಿದರೆ, ಹಲಾಲ್ ನಲ್ಲಿ ಹಲ್ಲಿನ ಜಾಗದಲ್ಲಿ ಹರಿತ ಕತ್ತಿ ಈ ಕೆಲಸ ಮಾಡುತ್ತದೆ.

ಹಲಾಲ್ ಹಿನ್ನೆಲೆ, ಪರಿಣಾಮ, ಸ್ವರೂಪಗಳ ಬಗ್ಗೆ ಕುತೂಹಲಕಾರಿ ವಿಚಾರಗಳಿವೆ. ನಾಗರೀಕತೆ ಬೆಳೆದು ಸಾಂಘಿಕ ರೂಪ ಪಡೆದಾಗ ಧರ್ಮಸಂಹಿತೆಗಳು ಅವತೀರ್ಣಗೊಳ್ಳ ತೊಡಗುತ್ತವೆ. ಅಂತಹ ಸಂಹಿತೆಯಲ್ಲಿ ವಧಾಸಂಹಿತೆಯೂ ಒಂದು. ವಧಾಸಂಹಿತೆಯಲ್ಲಿ ಎರಡು ವಿಧವಿದೆ. ಒಂದು ಆಹಾರಕ್ಕಾಗಿ ಪ್ರಾಣಿ ವಧೆ. ಇನ್ನೊಂದು ಅಪರಾಧಕ್ಕಾಗಿ ಮನುಷ್ಯ ವಧೆ. ಪರ್ಯಾಯವಾಗಿ ಸಸ್ಯ ಸಂಕುಲವಿರುವಾಗ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಮೇಲ್ನೋಟಕ್ಕೆ ತಪ್ಪುಮತ್ತು ಕ್ರೂರತೆಯಾಗಿ ಕಾಣುತ್ತದೆ. ಆದರೆ ಸೃಷ್ಟಿಯ ನಿಗೂಢ ನಿಯಮ ಮತ್ತು ಪ್ರೇರಣೆಯ ಪ್ರಕಾರ ಮಾನವ ಹಸ್ತಕ್ಷೇಪವಿಲ್ಲದೇ ಪ್ರಾಣಿಗಳೇ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಮಾಂಸಹಾರಿ ಪ್ರಾಣಿಗಳಾದ ಸಿಂಹ, ಹುಲಿ, ಚಿರತೆ ಮುಂತಾದವುಗಳ ಹಲ್ಲುಗಳು ಕೂಡ ಮಾಂಸ ಸಿಗಿಯುವುದಕ್ಕೆ ಮತ್ತು ಬೇಟೆಯಾಡುವುದಕ್ಕೆ ಪೂರಕ ಸಂರಚನೆಯಾಗಿಯೇ ಗೋಚರಿಸುತ್ತದೆ. ಇಂತಹ ಪೂರಕತೆ ಮತ್ತು ಪ್ರೇರಕತೆಯ ಅಧಾರದ ಮೇಲೆ ಮಾಂಸಹಾರವು ಸೃಷ್ಟಿ ಸಮ್ಮತವೆನ್ನುವುದು ಸ್ಪಷ್ಟವಾಗಿ ಮನಗಾಣಬಹುದು.

ಹಾಗಾಗಿ ಮನುಷ್ಯನು ಕೂಡ ಆಯ್ದ ಪ್ರಾಣಿಗಳನ್ನು ತಿನ್ನುವುದಕ್ಕೆ ಸೃಷ್ಟಿಯು ಅಧಿಕೃತವಾಗಿ ಅನುಮೋದಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದೇ ಹೇಳಬಹುದು. ಜೀವ ಕಾರುಣ್ಯವು ಧರ್ಮದ ಪ್ರಧಾನ ಭಾವ. ಲಕ್ಷೋಪಲಕ್ಷ ಜೀವರಾಶಿಗಳ ಮೇಲೆ ಕಾರುಣ್ಯದ ಕೃಪೆ ಇಲ್ಲದ ಧರ್ಮ ಧರ್ಮವೇ ಅಲ್ಲ. ಈ ಮಾಲಿಕೆಯಲ್ಲಿ ಆಹಾರವಾಗುವ ಪ್ರಾಣಿಗಳ ವಧೆಯ ಸಂದರ್ಭದಲ್ಲಿ ಯಾತನೆಯನ್ನು ಕನಿಷ್ಠಗೊಳಿಸುವ ಮತ್ತು ತಕ್ಕಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳನ್ನು ಅನುಸರಿಸಲು ಧರ್ಮದಲ್ಲಿ ಕಡ್ಡಾಯ ವಧಾಸಂಹಿತೆ ಜಾರಿಯಾಯಿತು. ಸಾಂಘಿಕ ಸ್ವರೂಪದ ಸಮಾಜ ವ್ಯವಸ್ಥೆಯಲ್ಲಿ ವಧಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಸುಮಾರು 3500 ವರ್ಷಗಳ ಹಿಂದೆ ಜಾರಿಗೆ ತಂದಿದ್ದು ಬನೀ ಇಸ್ರಾಯೀಲರು ಅಂದರೆ ಈಗಿನ ಯಹೂದಿಗಳು. ಇಂದಿಗೂ ಯಹೂದಿಗಳಲ್ಲಿ ಪ್ರಾಣಿಗಳ ವಧೆಗೆ ಮುಸ್ಲಿಮರ ಹಲಾಲಿನ ತದ್ರೂಪವಾದ “ಕೋಶರ್” ಎಂಬ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರಲಾಗುತ್ತಿದೆ. ಸರಿಸುಮಾರು 1400 ವರ್ಷಗಳ ಹಿಂದೆ ಪವಿತ್ರ ಕುರ್ ಆನ್ ಅವತೀರ್ಣಗೊಂಡಾಗ ಅದರಲ್ಲಿಯೂ ಆಹಾರಕ್ಕಾಗಿ ಪ್ರಾಣಿ ವಧೆಗೆ “ದ್ಸಬಹ್” (ಹಲಾಲ್) ಕಡ್ಡಾಯಗೊಳಿಸಲಾಯಿತು. ಇಲ್ಲಿ ಹಲಾಲ್ ಎಂದರೆ ಅರಬ್ಬಿಯಲ್ಲಿ ಸಮ್ಮತ ಎಂದಷ್ಟೇ ಅರ್ಥವಿರುವುದು.

ಹಲಾಲ್ ಪದದ ಅನ್ವಯ-ವ್ಯಾಪ್ತಿ ವಿಶಾಲವಾದುದು. “ದ್ಸಬಹ್” ಎನ್ನುವುದು ನಿರ್ದಿಷ್ಟವಾಗಿ ಪ್ರಾಣಿ ವಧೆಯಲ್ಲಿ ಕತ್ತನ್ನು ಕೊಯ್ಯುವುದನ್ನು ಸೂಚಿಸುವ ಅರಬ್ಬಿ ಪದ. ಇದೇ ನಿಜವಾದ ಇಸ್ಲಾಮಿಕ್ ಪ್ರಾಣಿ ವಧಾ ಪ್ರಕ್ರಿಯೆಯ ಅರ್ಥ ಸೂಚಿಸುವ ಪದ. ಇಸ್ಲಾಮಿಕ್ ಸಂಹಿತೆಯಲ್ಲಿ ಆಹಾರಕ್ಕಾಗಿ ಪ್ರಾಣಿ ವಧೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ದೇವ ನಾಮ ಸ್ಮರಣೆಯೊಂದಿಗೆ ಹರಿತವಾದ ಕತ್ತಿಯಿಂದ ಅನುಭವವಿರುವ ವ್ಯಕ್ತಿಯು ಒಂದೇ ಮುಮ್ಮುಖ ಮತ್ತು ಹಿಮ್ಮುಖ ತಿರುವಿನ ಮೂಲಕ ಅನ್ನನಾಳ, ಶ್ವಾಸನಾಳ, ರಕ್ತನಾಳ ಮತ್ತು ಬೆನ್ನು ಹುರಿಯನ್ನು ಹೊರತುಪಡಿಸಿದ ಇತರ ನಾಳಗಳನ್ನು ಕ್ಷಣಾರ್ಧದಲ್ಲಿ ಕತ್ತರಿಸಬೇಕೆಂಬುದು ಪ್ರಧಾನ ನಿಯಮ. ಈ ವಿಧಾನವನ್ನು ಹೊರತಪಡಿಸಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಜಾರಿಯಲ್ಲಿರುವ ಕತ್ತು ತಿರುವಿ ಕೊಲ್ಲುವುದು, ದೇಹದ ಇತರ ಭಾಗಗಳಿಗೆ ಚುಚ್ಚುವುದು ಯಾ ಕತ್ತರಿಸುವುದು, ತಲೆಯ ಮೇಲೆ ಹೊಡೆಯುವುದು, ಮೇಲಿನಿಂದ ಕೆಳಕ್ಕೆ ಬೀಳಿಸುವುದು, ಬಾಯಿ ಮೂಗನ್ನು ಒತ್ತಿಹಿಡಿದು ಉಸಿರು ಕಟ್ಟಿಸುವುದು, ಒಂದೇ ಪೆಟ್ಟಿಗೆ ತಲೆ ಕಡಿಯುವುದು ಇದೆಕ್ಕೆಲ್ಲ ಹಲಾಲ್ ಪದ್ಧತಿಯಲ್ಲಿ ಕಡ್ಡಾಯವಾಗಿ ನಿಷೇಧವಿದೆ. ಹಲಾಲ್ ಮಾಡುವಾಗ ವಧೆಯಾಗುವ ಪ್ರಾಣಿಗೆ ಇನ್ನೊಂದು ವಧೆಯಾದ ಪ್ರಾಣಿಯನ್ನು ಮತ್ತು ಹಲಾಲ್ ಮಾಡುವ ಕತ್ತಿಯನ್ನು ತೋರಿಸಬಾರದು. ಹಲಾಲ್ ಮಾಡುವ ಕತ್ತಿಯ ಹರಿತವನ್ನು ಒಂದಕ್ಕಿಂತ ಹೆಚ್ಚು ಜನರು ಪರಿಶೀಲಿಸಬೇಕು. ಸರಿಯಾಗಿ ಹರಿತವಾಗದ ಕತ್ತಿಯ ಕಡಿತದಿಂದ ಪ್ರಾಣಿಯ ಕತ್ತಿನ ನಾಳಗಳು ಜಗ್ಗಲ್ಪಟ್ಟು ಯಾತನೆಯಾಗಬಾರದು ಎಂಬುದು ಕತ್ತಿಯ ಹರಿತದ ಪರಿಶೀಲನೆಯ ಉದ್ದೇಶ. ಹಲಾಲ್ ಮಾಡುವ ಮುಂಚೆ ನಾಳಗಳ ಸರಾಗ ಕತ್ತರಿಸುವಿಕೆಗೆ ಅನುವಾಗುವ ಕಾರಣಕ್ಕೆ ಕತ್ತಿನ ಮೇಲೆ ಕತ್ತಿಯ ಪ್ರಯೋಗಕ್ಕೆ ಮುಂಚೆ ನೀರನ್ನು ಕುಡಿಸಬೇಕು. ಹಲಾಲ್ ಮಾಡುವ ವ್ಯಕ್ತಿಯು ಪ್ರಾಣಿಗೆ ನೇರ ಕಾಣದೆ ಕತ್ತಿನ ಹಿಂಭಾಗದಿಂದ ಕತ್ತನ್ನು ಕತ್ತರಿಸಬೇಕು. ಯಾವುದೇ ಕಾರಣಕ್ಕೂ ಪೂರ್ತಿಯಾಗಿ ಬೆನ್ನುಹುರಿಯ ಸಮೇತ ಪೂರ್ತಿ ಕತ್ತನ್ನು ಕತ್ತರಿಸುವಂತಿಲ್ಲ. ಪೂರ್ತಿ ಕತ್ತನ್ನು ಕತ್ತರಿಸಿದರೆ ಪ್ರಾಣಿಯ ದೇಹ ನಿಶ್ಚಲವಾಗಿ ರಕ್ತ ಹೊರಬರದೆ ದೇಹದೊಳಗಿನ ಮಾಂಸದೊಂದಿಗೆ ರಕ್ತ ಬೆರೆಯುತ್ತದೆ. ಇಂತಹ ರಕ್ತ ಸಹಿತ ಮಾಂಸ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯವಿಜ್ಞಾನ ಖಚಿತ ಪಡಿಸಿದೆ.

ಮನುಷ್ಯನಿಗೆ ಬರುವಷ್ಟೇ ರೋಗಗಳು ಪ್ರಾಣಿಗಳಿಗೂ ಬರುತ್ತವೆ. ಮನುಷ್ಯ ರೋಗಗಳು ಶತಶತಮಾನಗಳ ಸಂಶೋಧನೆಗಳ ಕಾರಣದಿಂದಾಗಿ ಶಮನ ಸಾಧ್ಯತೆಗಳು ಹೊಂದಿವೆ. ಆದರೆ ಪ್ರಾಣಿಗಳಿಗೆ ಬರುವ ರೋಗಗಳು ಈ ರೀತಿಯ ಸಂಶೋಧನೆಗಳಿಗೆ ಒಳಗಾಗಿಲ್ಲ. ಹೀಗಾಗಿ ಔಷಧಿಗಳ ಅಲಭ್ಯತೆಯಿಂದಾಗಿ ಶಮನ ಸಾಧ್ಯತೆ ತೀರ ಕಡಿಮೆ. ಪ್ರಾಣಿಗಳಿಗೆ ಬರುವ ರೋಗಗಳಲ್ಲಿ ಹೆಚ್ಚಿನವು ಸಾಂಕ್ರಾಮಿಕ ರೋಗಗಳು. ಇಂತಹ ರೋಗಗಳಿಂದ ಪ್ರಾಣಿಗಳು ಕ್ಷಿಪ್ರ ಕಾಲದಲ್ಲೇ ಸಾಮೂಹಿಕವಾಗಿ ಸಾಯುತ್ತವೆ. ಈ ರೋಗಗಳ ರೋಗಾಣುಗಳು ಅತಿಹೆಚ್ಚು ಕಂಡು ಬರುವುದು ಪ್ರಾಣಿಗಳ ರಕ್ತದಲ್ಲೇ. ಬಹುತೇಕ ಪ್ರಾಣಿಗಳ ರಕ್ತದಲ್ಲಿ ರೋಗಾಣುಗಳು ಸದಾ ಕಂಡುಬರುತ್ತವೆ. ಮಾನವ ಆರೋಗ್ಯದ ನಿರ್ಣಾಯಕ ಅಂಶವೂ ಕೂಡ ರಕ್ತವೇ. ಆರೋಗ್ಯವಂತ ಮನುಷ್ಯನೂ ಕೂಡ ಪ್ರಾಣಿ ರಕ್ತದ ಸೇವನೆಯಿಂದ ಮಾರಕ ರೋಗಗಳಿಗೆ ತುತ್ತಾಗಿ ಅನಾರೋಗ್ಯಪೀಡಿತನಾಗುವ ಸಂಭವವಿರುತ್ತದೆ. ತನ್ನ ಆಹಾರದಿಂದಾಗಿ ಮನುಷ್ಯ ರೋಗಗ್ರಸ್ತನಾಗಬಾರದೆಂಬ ಕಾಳಜಿಯು ಹಲಾಲ್ ನಲ್ಲಿ ಅಡಕವಾಗಿರುವುದನ್ನು ಕಾಣಬಹುದು. ಹಲಾಲ್ ಮಾಡಲಾದ ಪ್ರಾಣಿಯ ಬೆನ್ನಹುರಿ ಕಡಿಯದೆ ಬಿಟ್ಟರೆ ವಧೆಯಾದ ಪ್ರಾಣಿಯ ದೇಹದೊಳಗೆ ಒತ್ತಡ ಸೃಷ್ಟಿಯಾಗಿ ರಕ್ತವೆಲ್ಲ ಕೆಲವೇ ಸೆಕೆಂಡುಗಳಲ್ಲಿ ಕತ್ತರಿಸಲ್ಪಟ್ಟ ನಾಳಗಳ ಮೂಲಕ ಸರಾಗವಾಗಿ ಹೊರಹೋಗುತ್ತದೆ. ಇದರಿಂದ ಪ್ರಾಣಿಯ ಜೀವವೂ ದೇಹದಿಂದ ಶಾಂತ ಮತ್ತು ಸುಲಭ ರೀತಿಯಲ್ಲಿ ಹೋಗುತ್ತದೆ ಎಂಬುದು ಜೀವ ವಿಜ್ಞಾನದಿಂದ ಶ್ರುತಪಟ್ಟಿರುವ ವಿಚಾರ.

ಪ್ರಾಣಿಗಳ ಹಲಾಲ್ ಸಂದರ್ಭದಲ್ಲಿ ಇನ್ನಷ್ಟು ನಿಯಮಗಳಿವೆ. ಪ್ರಾಣಿಯನ್ನು ಹಲಾಲ್ ಮಾಡಲು ಕನಿಷ್ಠ ಸಮಯವನ್ನು ತೆಗೆದುಕೊಳ್ಳಬೇಕು. ಪ್ರಾಣಿಯ ಸುತ್ತ ಅಗತ್ಯಕ್ಕಿಂತ ಹೆಚ್ಚು ಜನರು ಸೇರಬಾರದು. ವಧೆಯಾಗುವ ಪ್ರಾಣಿಯು ಧರ್ಮಸಮ್ಮತ ಮಾರ್ಗದಲ್ಲಿ ದುಡಿದ ಹಣದಿಂದ ಖರೀದಿಸಿದ್ದೋ ಅಥವಾ ಅನ್ಯಮಾರ್ಗದಿಂದ ತಂದಿದ್ದೋ ಎಂಬುದನ್ನು ಹಲಾಲ್ ಮಾಡುವ ವ್ಯಕ್ತಿ ಸಾಧ್ಯವಾದ ಪ್ರಯತ್ನ ಮಾಡಿ ಖಚಿತ ಪಡಿಸಿಕೊಳ್ಳಬೇಕು. ಪ್ರಾಣಿ ಖರೀದಿಯ ಪೂರ್ವಾಪರದ ಬಗ್ಗೆ ಗೊಂದಲವಿದ್ದಾಗ ಮತ್ತು ಕತ್ತಿಯ ಹರಿತವು ಸಮಾಧಾನಕರವಾಗದಿದ್ದಾಗ ಹಲಾಲ್ ಮಾಡುವುದನ್ನು ನಿರಾಕರಿಸುವ ಹಕ್ಕು ಹಲಾಲ್ ಮಾಡುವವನಿಗೆ ಇದೆ. ಆಗಾಗ ಹೀಗೆ ನಿರಾಕರಿಸುವ ವಿದ್ಯಮಾನಗಳು ನಡೆಯುತ್ತಿರುತ್ತವೆ.

ಮನುಷ್ಶ ಸೇವನೆಯ ಉದ್ದೇಶದಿಂದ ಹಲಾಲ್ ಮಾಡಿದ ಮಾಂಸ ಇತರ ಪ್ರಾಣಿಗಳಿಗೆ ತಿನ್ನಿಸುವಂತಿಲ್ಲ. ದೀರ್ಘ ಸಮಯ ಸೇವಿಸದೆ ಕಾಯ್ದಿರಿಸುವಂತಿಲ್ಲ. ಹಲಾಲ್ ಮಾಡಿದ ನಂತರ ರಕ್ತ ಸಂಪೂರ್ಣವಾಗಿ ಹೊರಹೋಗಿ ಪ್ರಾಣಿಯ ದೇಹ ನಿಶ್ಚಲವಾಗುವವರೆಗೆ ಆ ಪ್ರಾಣಿಯನ್ನು ಯಾರೂ ಸ್ಪರ್ಶಿಸುವುದಾಗಲಿ, ಸ್ಥಳ ಬದಲಾಯಿಸುವುದಾಗಲಿ ಮಾಡುವಂತಿಲ್ಲ. ಪ್ರಾಣಿ ವಧೆಯ ಸಂದರ್ಭದಲ್ಲಿ ಪ್ರಾಣಿಯ ಕತ್ತಿನ ನೇರ ಕೆಳಗೆ ಮಣ್ಣಿನಲ್ಲಿ ಹೊಂಡವನ್ನು ತೋಡಿ ಹರಿದ ರಕ್ತವು ಇತರ ಪ್ರಾಣಿಗಳು ಸೇವಿಸದಂತೆ, ಕಾಣದಂತೆ ಮತ್ತು ಇತರ ಭಾಗಗಳಿಗೆ ಹರಿಯದಂತೆ ಹಲಾಲ್ ಪ್ರಕ್ರಿಯೆ ಮುಗಿದ ತಕ್ಷಣ ಮುಚ್ಚಬೇಕಿದೆ. ದುರ್ಬಲ ಹೃದಯದವರು, ಮಕ್ಕಳು, ಕಟ್ಟುನಿಟ್ಟಿನ ಸಸ್ಯಾಹಾರಿಗಳು, ತೀವ್ರತರ ಕಾಯಿಲೆಯಿರುವವರ ಮುಂದೆ ವಧಾ ಪ್ರಕ್ರಿಯೆ ನಡೆಸುವಂತಿಲ್ಲ. ಮದ್ಯ ವ್ಯಾಪಾರ, ಬಡ್ಡಿ, ಜೂಜು, ವೇಶ್ಯಾವಾಟಿಕೆಯ ಆದಾಯದಿಂದ ಖರೀದಿಸಿದ ಪ್ರಾಣಿಯ ಹಲಾಲ್ ಮಾಡುವುದು ಕಡ್ಡಾಯವಾಗಿ ನಿಷಿದ್ಧ. ಇಸ್ಲಾಮಿನಲ್ಲಿ ವರದಕ್ಷಿಣೆ ಹರಾಮ್(ನಿಷಿದ್ಧ). ವರದಕ್ಷಿಣೆಯ ಹಣದಿಂದ ತಂದ ಮತ್ತು ವಾರ್ಷಿಕ ಕಡ್ಡಾಯವಾಗಿ ಬಡವರಿಗೆ ನೀಡಬೇಕಾದ ದಾನ “ಝಕಾತ್” ನೀಡದೆ ಬಚ್ಚಿಟ್ಟ ಹಣದಿಂದ ತಂದ ಪ್ರಾಣಿಯ ಹಲಾಲ್ ಕೂಡ ಮಾಡುವಂತಿಲ್ಲ.

ವಧೆಯಾಗುವ ಪ್ರಾಣಿಯ ಪಾಲನೆ ಮತ್ತು ಖರೀದಿಯ ಹಿನ್ನಲೆಯ ಖಚಿತತೆ ಇಲ್ಲದಿದ್ದರೆ ಬಹಳಷ್ಟು ಜನ ಹಲಾಲ್ ಮಾಡುವವರು ವಧೆಗೆ ಹಿಂಜರಿಯುತ್ತಾರೆ. ಇಸ್ಲಾಮಿಕ್ ಇತಿಹಾಸ ಗ್ರಂಥಗಳ ಪ್ರಕಾರ, ಕೆಲವೊಮ್ಮೆ ಊರಿನಲ್ಲಿ ಎಲ್ಲಾದರೂ ಪ್ರಾಣಿಗಳು ಕಳವಾದರೆ, ಧಾರ್ಮಿಕ ನಿಷ್ಠರು ಕಳವಾದ ಪ್ರಾಣಿ ಸಿಗುವವರೆಗೆ ಅಥವಾ ನಿರ್ದಿಷ್ಟ ಕಾಲಘಟ್ಟದವರೆಗೆ ಮಾಂಸಾಹಾರವನ್ನೇ ತ್ಯಜಿಸಿದ ಉದಾಹರಣೆಗಳಿವೆ. ಕಳವು ಮಾಡಿದ, ಬಲಪ್ರಯೋಗದಿಂದ ಪಡೆದ ಅಂದರೆ ಹಲಾಲಿಗೆ ವಿರುದ್ಧವಾಗಿ ಹರಾಮ್ ಆಗಿರುವ ಮಾಂಸ ಸೇವನೆಯು ಇಸ್ಲಾಮಿನಲ್ಲಿ ಕಡ್ಡಾಯವಾಗಿ ನಿಷಿದ್ಧ ಎಂಬ ಕಾರಣಕ್ಕೆ ಈ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತಿತ್ತು.

ಆಹಾರದ ಕಾರಣಕ್ಕೆ ಹಲಾಲ್ ಮಾಡುವ ಪ್ರಾಣಿವಧೆಗೆ ಹೀಗೆ ಬಹಳಷ್ಟು ಕಾರಣಗಳಿದ್ದರೆ, ಧಾರ್ಮಿಕ ಉದ್ದೇಶಕ್ಕಾಗಿ ವಧೆ ಮಾಡುವ ಪ್ರಾಣಿಗಳ ವಿಚಾರದಲ್ಲಿ ಇನ್ನಷ್ಟು ಕಠಿಣ ಮತ್ತು ಕಡ್ಡಾಯ ನಿಯಮಗಳಿವೆ. ಧಾರ್ಮಿಕ ಉದ್ದೇಶಕ್ಕೆ ಹಲಾಲ್ ಮಾಡುವ ಪ್ರಾಣಿಗಳನ್ನು ವಧೆಗಿಂತ ಬಹಳಷ್ಟು ದಿನಗಳ ಮುಂಚೆಯೇ ಖರೀದಿಸಿ ಸರಿಯಾದ ಆಹಾರವನ್ನು ನೀಡಿ ಬಹಳ ಕಾಳಜಿ ಮತ್ತು ಪ್ರೀತಿಯಿಂದ ಸಲಹಬೇಕು. ಬಲಿಯ ಕೆಲವೇ ಗಂಟೆಗಳ ಮುಂಚೆ ಖರೀದಿಸಿದ ಪ್ರಾಣಿಯ ವಧೆಯು ಇಸ್ಲಾಮಿನಲ್ಲಿ ಸಮ್ಮತಾರ್ಹವಲ್ಲ. ಪ್ರಾಣಿಯು ದೈಹಿಕ ದೌರ್ಬಲ್ಯ ಹೊಂದಿರಬಾರದು ಮತ್ತು ಆಂಗಿಕ ಊನತೆ ಇರಬಾರದು, ಗಾಯಗೊಂಡಿರಬಾರದು. ನುರಿತ ಧರ್ಮಗುರುಗಳೇ ಧಾರ್ಮಿಕ ಉದ್ದೇಶದ ಹಲಾಲ್ ಕಾರ್ಯವನ್ನು ನೆರವೇರಿಸಬೇಕು. ಬಲಿಯಾಗುವ ಪ್ರಾಣಿಯು ನಿರ್ದಿಷ್ಟ ವಯಸ್ಸನ್ನು ಮೀರಿರಬೇಕು. ಅತೀ ಮುಖ್ಯವಾದ ವಿಚಾರವೆಂದರೆ ಧಾರ್ಮಿಕ ಉದ್ದೇಶಕ್ಕೆ ವಧೆ ಮಾಡಿದ ಪ್ರಾಣಿಯ ಮಾಂಸವನ್ನು ಅನ್ಯಧರ್ಮದವರಿಗೆ ಕೊಡುವಂತಿಲ್ಲ. ಹೀಗೆ ಪ್ರಾಣಿ ವಧೆಯ ಸಂದರ್ಭದಲ್ಲಿನ ಇಸ್ಲಾಮಿಕ್ ಹಲಾಲ್ ಕಟ್ಟುನಿಟ್ಟಿನ ಕಠಿಣ ನಿಯಮಗಳನ್ನು ಹೊಂದಿದೆ.

ಪ್ರಾಣಿವಧೆಯಿಂದ ಹೊರತಾಗಿರುವ ಇನ್ನೊಂದು ವಧಾಸಂಹಿತೆಯಿರುವುದು ಅಪರಾಧಕ್ಕಾಗಿ ಮನುಷ್ಯವಧೆ. ಇದು ತೀರ ಸಂಕ್ಷಿಪ್ತ. ಅಪರಾಧ ಸಾಬೀತಾದ ನಂತರ ಜಾಗತಿಕವಾಗಿ ಜಾರಿಯಲ್ಲಿರುವ ನೇಣು ಹಾಕುವುದು, ಕಬ್ಬಿಣದ ಕುರ್ಚಿಯ ಮೇಲೆ ಕೂರಿಸಿ ವಿದ್ಯುತ್ ಪ್ರವಹಿಸಿ ಕೊಲ್ಲುವುದು, ಗುಂಡು ಹೊಡೆಯುವುದು, ಸುಟ್ಟು ಕೊಲ್ಲುವುದು, ಹೊಗೆ ಬಿಟ್ಟು ಯಾ ಮುಚ್ಚಿದ ಪೆಟ್ಟಿಗೆಗಳಲ್ಲಿ ಹಾಕಿ ಉಸಿರು ಕಟ್ಟಿಸಿ ಕೊಲ್ಲುವುದು, ಕ್ರೂರ ಪ್ರಾಣಿಗಳನ್ನು ಬಿಟ್ಟು ಕೊಲ್ಲುವುದು, ಓಡಿಸಿ ಹಿಂದಿನಿಂದ ಗುಂಡು ಹೊಡೆಯುವುದು, ಕೊಲೆ ಮಾಡಲ್ಪಟ್ಟ ಅಥವ ಅತ್ಯಾಚಾರ ಮಾಡಲ್ಪಟ್ಟ ಕುಟುಂಬದವರಿಂದ ಕೊಲ್ಲಿಸುವುದು, ಕಾದ ಎಣ್ಣೆಯ ಕೊಪ್ಪರಿಗೆಗೆ ಕೈಕಾಲು ಕಟ್ಟಿ ಮುಳುಗಿಸುವುದು ಇಸ್ಲಾಮಿನಲ್ಲಿ ಕಡ್ಡಾಯವಾಗಿ ನಿಷಿದ್ಧ. ಸಾಮಾನ್ಯವಾಗಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜಾರಿಯಲ್ಲಿರುವ ಹಗ್ಗದಿಂದ ನೇಣುಹಾಕುವ ಪದ್ಧತಿಯಲ್ಲೂ ಕೂಡ ಮನುಷ್ಯ ಯಾತನಾಮಯವಾಗಿ ದೀರ್ಘ ಸಮಯ ನರಳಾಡಿ ಸಾಯುತ್ತಾನೆ ಎಂಬ ಕಾರಣಕ್ಕೆ ಇಸ್ಲಾಮಿನಲ್ಲಿ ಇದು ಸಮ್ಮತಾರ್ಹವಲ್ಲ. ಇಸ್ಲಾಮೀ ವಧಾಸಂಹಿತೆಯ ಪ್ರಕಾರ, ಪ್ರಾಣಿವಧೆಗೆ ತದ್ವಿರುದ್ಧವಾಗಿ ಮನುಷ್ಯವಧೆಯಲ್ಲಿ ಮೊದಲು ಅಪರಾಧಿಯನ್ನು ಮಂಡಿಯೂರಿ ತಲೆಬಗ್ಗಿಸಿ ಕೂರಿಸಲಾಗುತ್ತದೆ. ಪ್ರಾಣಿವಧೆಯಲ್ಲಿ ಬೆನ್ನುಹುರಿಯ ಭಾಗವನ್ನು ಬಿಟ್ಟು ಉಳಿದೆಲ್ಲ ಪ್ರಮುಖ ನಾಳಗಳನ್ನು ಕತ್ತರಿಸಿದರೆ, ಮನುಷ್ಯ ವಧೆಯಲ್ಲಿ ಅಪರಾಧಿಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬೆನ್ನುಹುರಿಯ ಸಮೇತ ಸಂಪೂರ್ಣ ಕತ್ತನ್ನು ಏಕಕಾಲದಲ್ಲಿ ಕತ್ತರಿಸುವುದರ ಮೂಲಕ ದೇಹದಿಂದ ಬೇರ್ಪಡಿಸಿ ಕ್ಷಣಾರ್ಧದಲ್ಲಿ ದೇಹ ನಿಶ್ಚಲವಾಗುವಂತೆ ಮಾಡಲಾಗುತ್ತದೆ. ಹೀಗೆ ಆಹಾರಕ್ಕಾಗಿ ಪ್ರಾಣಿವಧೆ ಮತ್ತು ಅಪರಾಧಕ್ಕಾಗಿ ಮನುಷ್ಯ ವಧೆಯಲ್ಲಿ ಭಿನ್ನ ನಿಯಮಗಳನ್ನು ಅನುಸರಿಸಲಾಗುತ್ತದೆ. ಎರಡೂ ರೀತಿಯ ವಧೆಯು ದೇವರ ನಾಮವನ್ನು ಉಚ್ಚರಿಸುವುದರ ಮೂಲಕವೇ ಆರಂಭವಾಗುತ್ತದೆ. ಆಹಾರಕ್ಕಾಗಲೀ, ಅಪರಾಧಕ್ಕಾಗಲಿ ಜೀವವೊಂದನ್ನು ತೆಗೆಯುವ ಮುಂಚೆ ಜೀವ ನೀಡಿದ ಸರ್ವಶಕ್ತನನ್ನು ಸ್ಮರಿಸುವುದರ ಮೂಲಕ ಅಪ್ಪಣೆ ಪಡೆಯುವುದು ಈ ಸ್ಮರಣೆಯ ಉದ್ದೇಶ.

ಪ್ರಾಣಿವಧೆಯಲ್ಲಿ ದೇವರ ನಾಮ ಉಚ್ಚರಿಸುವುದು ಪ್ರಾಣಿಯನ್ನು ದೇವರು ತಿನ್ನುತ್ತಾನೆ ಅಥವ ತಿನ್ನುವವರು ಧರ್ಮಾಂತರವಾಗಬೇಕು ಎನ್ನುವ ಉದ್ದೇಶದಿಂದಲ್ಲ. ಹೀಗೆ ಆಲೋಚಿಸುವುದು ತೀರ ಬಾಲಿಶ ಮತ್ತು ಹಾಸ್ಯಾಸ್ಪದ. ಹಲಾಲ್ ಸೇರಿದಂತೆ ಬಹಳಷ್ಟು ಜೀವಪ್ರಕ್ರಿಯೆಯಲ್ಲಿ ದೇವನಾಮ ಸ್ಮರಣೆ ಅಥವ ಸಮರ್ಪಣೆಗಳ ಮತ್ತೊಂದು ಪ್ರಮುಖ ಉದ್ದೇಶ, ದೈವಿಕವಾದ ಜೀವಪರ ನಿಯಮಗಳು ದೇವಭಯ, ಬದ್ಧತೆ ಮತ್ತು ಸಂವೇದನಾಶೀಲತೆಯಿಂದ ಕೂಡಿ ಕಟ್ಟುನಿಟ್ಟಾಗಿ ಸುಸೂತ್ರವಾಗಿ ಅನುಷ್ಠಾನವಾಗಲಿ ಎನ್ನುವ ಸದುದ್ದೇಶದಿಂದಲೇ ಇರುವುದು. ತಿನ್ನುವವರೆಲ್ಲರನ್ನು ವಂಚಿಸಬೇಕೆಂಬ ಉದ್ದೇಶದಿಂದಲ್ಲ. ಮುಸ್ಲಿಮರೊಂದಿಗೆ ಕಟ್ಟರ್ ವೈರತ್ವವನ್ನು ಹೊಂದಿರುವ ಯಹೂದಿಗಳ ಕೋಶರ್ ಪದ್ಧತಿಯು ಮುಸ್ಲಿಮರ ಹಲಾಲ್ ಪದ್ದತಿಯನ್ನು ಹೆಚ್ಚು ಕಡಿಮೆ ಬಹುತೇಕವಾಗಿ ಹೋಲುವಂಥದ್ದು. ಹಲಾಲ್ ಮಾಂಸದ ಅಲಭ್ಯತೆಯಲ್ಲಿ ಯಹೂದಿಗಳ ಕೋಶರ್ ಪದ್ದತಿಯ ಮಾಂಸವು ಮುಸ್ಲಿಮರಿಗೆ ಸಮ್ಮತಾರ್ಹವಾದುದು. ಮುಸ್ಲಿಂ ರಾಷ್ಟ್ರಗಳನ್ನು ಹೊರತುಪಡಿಸಿ ಬಹುತೇಕ ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೇರಿಕಾದಲ್ಲಿ ಮುಸ್ಲಿಮರು ಯೆಹೂದಿಗಳ ಕೋಶರ್ ಪ್ರಮಾಣಿಕೃತಗೊಂಡಿರುವ ಮಾಂಸಗಳನ್ನೇ ಸೇವಿಸುವುದು. ಬಹುಶಃ ಬಹುತೇಕ ಮುಸ್ಲಿಮರಿಗೂ ಗೊತ್ತಿಲ್ಲದ ರೋಚಕ ವಿಚಾರವೆಂದರೆ, ಒಂದೊಮ್ಮೆ ಆಹಾರದ ಅಲಭ್ಯತೆಯಿಂದಾಗಿ ಮುಸ್ಲಿಮನೊಬ್ಬ ಸಾಯುವ ಪರಿಸ್ಥಿತಿ ನಿರ್ಮಾಣವಾದರೆ ಹಲಾಲ್ ಮಾಡದ ಸತ್ತ ಹಂದಿಯ ಮಾಂಸವನ್ನೂ ಕೂಡ ಸೇವಿಸುವ ವಿನಾಯಿತಿಯನ್ನು ಇಸ್ಲಾಮ್ ನೀಡುತ್ತದೆ. ಪ್ರಾಣಿವಧೆಯ ಕುರಿತು ಹಲಾಲ್ (ದ್ಸಬಹ್) ನಿಯಮವಿರುವುದು ಅಕ್ಷರಶಃ ಮಾನವ ಆರೋಗ್ಯಕ್ಕೆ ಪೂರಕವಾಗಿಯೇ ಹೊರತು ಯಾವುದೇ ಅನ್ಯ ಧರ್ಮಕ್ಕೆ ಮಾರಕವಾಗಿ ಅಲ್ಲ.

ಹಲಾಲ್ ಮಾಂಸವನ್ನು ಸೇವಿಸುವುದರ ಮೂಲಕ ಅನ್ಯ ಧರ್ಮದವರು ಇಸ್ಲಾಮಿಗೆ ಮತಾಂತರವಾದಂತೆ ಎಂದು ಭಾವಿಸುವವರು, ಯಹೂದಿಗಳ ಕೋಶರ್ ಪದ್ಧತಿಯಂತೆಯೇ ಮಾಂಸವನ್ನು ಸೇವಿಸುವ ಮುಸ್ಲಿಮರು ಯಹೂದಿಗಳಾದರು ಎಂದು ಭಾವಿಸುವರೆ? ಜಾಗತಿಕವಾಗಿ ಪರಮ ಆಸ್ತಿಕರಿರುವ ಹಿಂದೂ ಮುಸ್ಲಿಮ್ ಯಹೂದಿ ಸಮುದಾಯಗಳಲ್ಲಿ ಪ್ರತಿಯೊಂದಕ್ಕೂ ದೇವರನ್ನು ಸ್ಮರಿಸುವುದು ಮತ್ತು ಬಹಳಷ್ಟನ್ನು ದೇವರಿಗೆ ಸಮರ್ಪಿಸುವುದು ಅವರವರ ಧರ್ಮಶ್ರದ್ಧೆ ಮತ್ತು ನಂಬಿಕೆಯ ಭಾಗ. ಆಸ್ತಿಕರ ಪ್ರತಿಯೊಂದು ಕಾಯಕ-ಕರ್ಮದಲ್ಲಿ ಧರ್ಮವು ಗೋಚರ- ಅಗೋಚರ, ಪ್ರತ್ಯಕ್ಷ-ಪರೋಕ್ಷವಾಗಿ ಇದ್ದೇ ಇರುತ್ತದೆ. ಪ್ರತಿಯೊಂದು ವಸ್ತುಗಳ ಪ್ರತಿಯೊಬ್ಬ ಮಾರಾಟಗಾರನೂ ತನ್ನ ಸರಕುಗಳನ್ನು ಮಾರಾಟ ಮಾಡುವಾಗ ಮತ್ತು ಅದಕ್ಕೆ ಸ್ವರೂಪ ನೀಡುವಾಗ ತನ್ನದೇ ಆದ ಧರ್ಮ-ನಂಬಿಕೆಗಳಿಗೆ ಅನುಗುಣವಾಗಿಯೇ ಅವನಿರುತ್ತಾನೆ. ಗಲ್ಲುಶಿಕ್ಷೆ ನೀಡುವ ಕಟುಕನು ಕೂಡ ಶಿಕ್ಷೆ ನೀಡುವ ಕೊನೆಗಳಿಗೆಯಲ್ಲಿ ಅಪರಾಧಿಯ ಕಿವಿಯಲ್ಲಿ” ನಾನು ನಂಬುವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ. ನನ್ನನ್ನು ಕ್ಷಮಿಸು” ಎಂದು ಹೇಳಿಯೇ ಕುಣಿಕೆ ಹಾಕುತ್ತಾನೆ. ಸಾಯುವ ಪ್ರಾಣಿ ಮತ್ತು ಸಾಯುವ ಮನುಷ್ಯನ ಸನಿಹ ಸಾಯಿಸುವವನು ದೇವರ ನೆನೆದರೆ ಅದು ಧರ್ಮ ಮತ್ತು ದೇಶದ್ರೋಹ ಹೇಗಾಗುವುದೋ ಆ ಪರಮಾತ್ಮನೇ ಬಲ್ಲ.

ದೇಶದ ದೊಡ್ಡ ದೊಡ್ಡ ಮಾಂಸ ರಫ್ತು ಕಂಪೆನಿಗಳು ಸರ್ಕಾರದ ಸುಪರ್ದಿಯಲ್ಲಿ ಮುಸ್ಲಿಮ್ ಹೆಸರುಗಳೊಂದಿಗೆ ಮುಸ್ಲಿಮೇತರರ ಒಡೆತನದಲ್ಲಿದ್ದು ದೇಶವನ್ನು ವಿಶ್ವದ ಅತ್ಯಂತ ಪ್ರಮುಖ ಮಾಂಸ ರಪ್ತು ದೇಶವನ್ನಾಗಿ ಮಾಡಿರುವಾಗ, ಊರಿಗೊಬ್ಬನಿದ್ದು ದಿನಕ್ಕೆ 500-1000 ದುಡಿಯುವ ಬಡಪಾಯಿ ಕಸಾಯಿ ತನ್ನ ಸಂಸಾರ ನಿಭಾಯಿಸಿ ಅದು ಹೇಗೆ ಅದರಲ್ಲಿ ಉಳಿಸಿ ದೇಶವಿರೋಧಿ ಚಟುವಟಿಕೆ ನಡೆಸಬಲ್ಲನೆನ್ನುವುದೂ ಕೂಡ ಮತ್ತದೇ ಪರಮಾತ್ಮನೇ ಹೇಳಬೇಕು.

ಮುಸ್ಲಿಮರಲ್ಲಿ ಪಂಗಡವಾದವಿರುವುದು ಏಕದೇವಾರಾಧನೆಯ ಬದ್ಧತೆ, ಸ್ವರೂಪ, ಅನುಸರಣೆ ಮತ್ತು ಪ್ರವಾದಿ ಸಂದೇಶ-ಚರ್ಯೆಯ ಅರ್ಥೈಸುವಿಕೆಯ ಆಧಾರದ ಮೇಲೆ. ಈ ಎಲ್ಲ ಪಂಗಡಗಳೂ ಗರಿಷ್ಠ ಆಚರಣೆ ಮತ್ತು ಅನುಸರಣೆಯ ನಂತರವೇ ತಾವೇ ನೈಜ ಮುಸಲ್ಮಾನರು ಎಂದು ಭಾವಿಸುವುದು ಮತ್ತು ಇತರ ಮುಸ್ಲಿಮರನ್ನು ಒಪ್ಪುವುದು. ಹೀಗಿರುವಾಗ ಅರ್ಧ ಕೆಜಿ ಮಾಂಸ ಮುಸ್ಲಿಮರಿಂದ ಖರೀದಿಸಿ ತಿಂದ ಅನ್ಯಧರ್ಮದವನು ಏಕಾಏಕಿ ಮುಸ್ಲಿಮ್ ಆಗಿ ಬದಲಾಗುತ್ತಾನೆ ಎಂಬ ನಿನ್ನೆ ಮೊನ್ನೆಯ ಸಂಶೋಧನೆಯು ಜಾಗತಿಕ ಇತಿಹಾಸದ ಮಹಾ ಸಂಶೋಧನೆ ಎಂದೇ ಹೇಳಬಹುದು!

ಹಲಾಲ್ ಮಾಂಸ ತಿನ್ನದೇ ಇರುವುದರಿಂದ ಒಂದಿಡೀ ಧರ್ಮದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ, ಮನುಷ್ಯನ ಆರೋಗ್ಯದ ಮೇಲೆ ಹಲಾಲ್ ಮತ್ತು ಹಲಾಲ್ ಅಲ್ಲದ ಮಾಂಸದ ಪರಿಣಾಮ ಒಂದೇ ಎನ್ನುವುದು ಭ್ರಮೆಯೇ ಹೊರತು ವಾಸ್ತವವಲ್ಲ. ಯಾರು ಅದೇನೇ ಹೇಳಿದರೂ, ಸಸ್ಯಾಹಾರವು ಮಾಂಸಹಾರಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ದೇಹಾರೋಗ್ಯಕ್ಕೆ ಸಹಕಾರಿ. ಬಹಳಷ್ಟು ಕಾಯಿಲೆಗಳ ಮೂಲವು ಅವೈಜ್ಞಾನಿಕ ಮತ್ತು ಅನಿಯಂತ್ರಿತವಾಗಿ ಸೇವಿಸುವ ಮಾಂಸಹಾರವೇ. ಯಾವುದೇ ಧರ್ಮವಿರಲಿ, ಧಾರ್ಮಿಕ ಸಂಹಿತೆಗಳ ರೂಪದಲ್ಲಿರುವ ಉಲ್ಲೇಖಗಳಲ್ಲಿ ಸದುದ್ದೇಶವಿರುತ್ತದೆಯೇ ಹೊರತು ದುರುದ್ದೇಶವಿರಲಾರದು. ಹೀಗೆ ಮನುಷ್ಯ ಆರೋಗ್ಯಕ್ಕೆ ಪೂರಕವಾಗಿ ಸದುದ್ದೇಶವಿರುವ ಸಂಹಿತೆಗಳಲ್ಲಿ ವಧಾ ಸಂಹಿತೆಯೂ ಒಂದು.

3500 ವರ್ಷಗಳ ಹಿಂದೆ ಯಹೂದಿಗಳಿಂದ ಆರಂಭವಾಗಿ ಶತಮಾನಗಳ ಸಾಗುವಿಕೆಯ ನಂತರವೂ ಇಂದಿಗೂ ಜಗತ್ತಿನ 180ಕ್ಕೂಹೆಚ್ಚಿನ ರಾಷ್ಟ್ರಗಳ ಸರಕಾರದ ಅಧೀಕೃತ ಸಮ್ಮತಿಯಿದ್ದು ಲೋಕಮನ್ನಣೆ ಗಳಿಸಿದ ಹಲಾಲ್ ವಿಚಾರದಲ್ಲಿ, ಪ್ರಭುತ್ವದ ಮೌನ ಸಮ್ಮತಿ, ಮಾಧ್ಯಮಗಳ ಹುಚ್ಚಾಟ ಮತ್ತು ಪ್ರಜ್ಞಾವಂತರ ಮೌನ ಸ್ವೀಕಾರದಡಿಯಲ್ಲಿ ನಡೆಯುವ ರಾಜಕೀಯ ಪ್ರೇರಿತ ಅನಪೇಕ್ಷಿತ ಅನಾಗರಿಕ ಆಟಗಳು ನಿಲ್ಲಬೇಕು. ಯಾವುದಾದರು ಧರ್ಮದ ಏನಾದರು ಒಳ್ಳೆಯ ವಿಚಾರವಿದ್ದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸಿದರೆ ತಪ್ಪೇನೂ ಇಲ್ಲ.

ಯಹೂದಿಗಳ ಮೂಲ ಭಾಷೆ ಹಿಬ್ರೂ ಭಾಷೆಯ ಕುಶೇರ್ ಮತ್ತು ಅರಬ್ಬಿ ಭಾಷೆಯ ಹಲಾಲ್ ಎಂಬುದು ಒಂದೇ ಅರ್ಥದ ಪದಗಳು. ಪ್ರವಾದಿ ಮುಹಮ್ಮದರ ಸಂದೇಶ ಮತ್ತು ಮುಸ್ಲಿಮರ ಆಚಾರ ವಿಚಾರಗಳನ್ನು ಅಂಗೀಕರಿಸಲು ಯಹೂದಿಗಳು ನಿರಾಕರಿಸಿದರೂ, ತಮಗಿಂತ 2100 ವರ್ಷಗಳ ಹಿಂದೆ ತಮ್ಮ ಪೂರ್ವ ಪರಂಪರೆಯ ಬನೀ ಇಸ್ರಾಯಿಲರ ಪಾಲಿನ ಪ್ರವಾದಿ ಮೂಸಾ(ಮೊಸೆಸ್)ರಿಗೆ ಅವತೀರ್ಣಗೊಂಡ ಗ್ರಂಥವಾದ ತೌರಾತಿನಲ್ಲಿ ಉಲ್ಲೇಖವಾಗಿ ನಂತರ ಕುರ್ ಆನಿನಲ್ಲಿ ಸಮರ್ಥಿಸಲ್ಪಟ್ಟ ಪ್ರಾಣಿವಧಾ ಪದ್ಧತಿಯನ್ನು ಪ್ರವಾದಿ ಮೊಹಮ್ಮದರು ತಮ್ಮ ಜನಾಂಗಕ್ಕೂ ಅನ್ವಯಿಸಿಕೊಂಡರು. ಇದರ ಮುಖ್ಯ ಉದ್ದೇಶ ಆರೋಗ್ಯ ಹೊರತು ಆರಾಧನೆಯಲ್ಲ. ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಟಿವಿ ಚಾನೆಲ್ಲುಗಳ ಅರಚಾಟ ಮತ್ತು ರಾಜಕಾರಣಿಗಳ ಅಸಂಬದ್ಧ ಪ್ರಲಾಪಗಳನ್ನು ಧಿಕ್ಕರಿಸಿ ಜ್ಞಾನದ ಪದತಲದಲ್ಲಿ ಕುಳಿತು ಆಲೋಚಿಸುವುದರಲ್ಲೇ ಒಳಿತಿದೆ. ಆಹಾರ ಅವರವರ ಹಕ್ಕು. ಸಸ್ಯಾಹಾರಿಗೆ ಮಾಂಸಹಾರಿಯ ಪದ್ಧತಿ, ಮಾಂಸಹಾರಿಗೆ ಸಸ್ಯಹಾರಿಯ ಕ್ರಮಗಳು ಇಷ್ಟವಾಗದೇ ಇರಬಹುದು. ಯಾರೂ ಯಾರನ್ನೂ ಯಾವುದನ್ನೇ ಆಗಲಿ ಸೇವಿಸುವಂತೆ ಬಲವಂತಪಡಿಸುವುದು ಅಕ್ಷಮ್ಯ ಅಪರಾಧ. ಜಗತ್ತಿನ ಅದೆಷ್ಟೋ ಜಾತಿ ಧರ್ಮದ ಜನ ಪರಸ್ಪರರ ಮನೆ-ಹೋಟೆಲು-ಕಾರ್ಯಕ್ರಮಗಳಲ್ಲಿ ಆಹಾರ ಸೇವಿಸುವುದಿಲ್ಲ. ಅದು ಅವರವರ ಹಕ್ಕು ಮತ್ತು ಆದ್ಯತೆಗಳಷ್ಟೆ. ಸಜೀವ ಜಗತ್ತಿನಲ್ಲಿ ಜೀವಪರ ಧಾರ್ಮಿಕ ನೀತಿ ನಿಯಮಾವಳಿಗಳು ದುರ್ಜನರ ಪ್ರೇರಣೆಗೊಳಗಾಗಿ ನಿರ್ಜೀವವಾದರೆ ಸಮಸ್ಯೆಯಾಗುವುದು ಮನುಷ್ಯರಿಗೆ ಹೊರತು ದೇವರಿಗಲ್ಲ ಎಂಬುದು ಸಾಮಾನ್ಯ ಜ್ಞಾನ. ಜ್ಞಾನ ಮತ್ತು ಶಾಂತಿಯ ಸಮತೋಲಿತ ಸಮಾಜವಾದ ಭಾರತೀಯ ಸಮಾಜವು ಇಂತಹ ವಿಕೃತಿಗಳಿಂದ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …