Home / ವಾರ್ತೆಗಳು / ದ್ವೇಷ ಮತ್ತು ಕೊರೋನ ವಿರುದ್ಧ ಒಂದಾಗಿ ಹೋರಾಡುತ್ತಿರುವ ಉತ್ತರ ತೆಲಂಗಾಣದ ಹಿಂದೂ-ಮುಸ್ಲಿಮರು

ದ್ವೇಷ ಮತ್ತು ಕೊರೋನ ವಿರುದ್ಧ ಒಂದಾಗಿ ಹೋರಾಡುತ್ತಿರುವ ಉತ್ತರ ತೆಲಂಗಾಣದ ಹಿಂದೂ-ಮುಸ್ಲಿಮರು

ಇಡೀ ದೇಶಕ್ಕೆ ಮಾದರಿ ಈ ಯುವ ಜನರು

ಕೊರೋನ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಎ.27ರಂದು ಉತ್ತರ ತೆಲಂಗಾಣದ ನಿರ್ಮಲ್ ನಿವಾಸಿ ಎಲ್ಲಮ್ಮ್ಮ (65) ಕೊನೆಯುಸಿರೆಳೆದಿದ್ದರು. ನಿರ್ಗತಿಕರಾಗಿದ್ದ ಎಲ್ಲಮ್ಮ ಮತ್ತು ಆಕೆಯ ಪತಿ ಕಿಶನ್ ರಸ್ತೆ ಬದಿಯ ರೆಪಡಿಯಲ್ಲಿ ವಾಸವಾಗಿದ್ದರು. ಎಲ್ಲಮ್ಮ ಕೋರೋನ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದ ನೆರೆಕರೆಯವರು ಆಕೆಯ ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದರು.

ಈ ವೇಳೆ ವೃದ್ಧ ದಂಪತಿಯ ಪಡಿತರ ಅಗತ್ಯವನ್ನು ವಿಚಾರಿಸಲೆಂದು ಸಾಮಾಜಿಕ ಕಾರ್ಯಕರ್ತ ಶೇಖ್ ಇರ್ಷಾನ್ ಅಲ್ಲಿಗೆ ಬಂದಿದ್ದರು. ದುಃಖತಪ್ತ ಕಿಶನ್ ಅಸಹಾಯಕ ಸ್ಥಿತಿಯಲ್ಲಿದ್ದನ್ನು ಕಂಡ ಅವರು ತನ್ನ ಗೆಳೆಯರನ್ನು ಅಲ್ಲಿಗೆ ಕರೆಸಿಕೊಂಡು ಪೊಲೀಸರ ಅನುಮತಿಯೊಂದಿಗೆ ಎಲ್ಲಮ್ಮನ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.

ಕೋಮು ಉದ್ವಿಗ್ನತೆಯ ಪ್ರದೇಶದಲ್ಲಿ ಸೌಹಾರ್ದತೆ

ರಾಜ್ಯದ ಅತ್ಯಂತ ಕೋಮುಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವ ಉತ್ತರ ತೆಲಂಗಾಣವು ಇತ್ತೀಚಿನ ವರ್ಷಗಳಲ್ಲಿ ತೀವ್ರ ಘರ್ಷಣೆಗಳನ್ನು ಕಂಡಿದೆ. ಕೋವಿಡ್-19 ಸಾಂಕ್ರಾಮಿಕ ಪಿಡುಗು ತೆಲಂಗಾಣ ಸೇರಿದಂತೆ ದೇಶಾದ್ಯಂತ ಕೋಮುದ್ವೇಷ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಉದಾಹರಣೆಗೆ ಕಳೆದ ತಿಂಗಳು ಆದಿಲಾಬಾದ್ ಜಿಲ್ಲೆಯ ಭೈಂಸಾ ಪಟ್ಟಣ ಸಣ್ಣ ಪ್ರಮಾಣದ ಕೋಮು ಘರ್ಷಣೆಗೆ ಸಾಕ್ಷಿಯಾಗಿತ್ತು. ಆದರೆ ತೆಲಂಗಾಣದಲ್ಲಿ ತಳಮಟ್ಟದಲ್ಲಿ ಹಲವಾರು ಜನರು ಒಗ್ಗಟ್ಟಿನೊಂದಿಗೆ ಕೊರೋನ ವೈರಸ್ ಪಿಡುಗಿಗೆ ಉತ್ತರಿಸಿರುವುದರಿಂದ ಆಶಾವಾದಕ್ಕೂ ಕಾರಣವಿದೆ.

ಆದಿಲಾಬಾದ್ ಜಿಲ್ಲೆಯ ಗಾಂಧಿನಗರದಲ್ಲಿ ಕಳೆದ ತಿಂಗಳು ದಶರಥ ಎಂಬಾತ ಜಾಂಡಿಸ್‌ನಿಂದ ಮೃತಪಟ್ಟಿದ್ದು, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಝೀಝ್ ಎನ್ನುವವರು ತನ್ನ ಸ್ನೇಹಿತರಾದ ವಿಠಲ,ತಾಹಿರ್ ಮತ್ತು ಶ್ರೀಕಾಂತ ಅವರ ಜೊತೆಗೂಡಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ದಶರಥ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದ ನೆರೆಕರೆಯವರು ಮನೆಯ ಬಳಿ ಆತನ ಶವ ತರಲು ಅವಕಾಶ ನಿರಾಕರಿಸಿದ್ದರು, ಆತನ ಅಂತ್ಯಸಂಸ್ಕಾರ ನಡೆಸಲೂ ನಿರಾಕರಿಸಿದ್ದರು. ಅಝೀಝ್ ಬಳಗ ಕಳೆದ ಕೆಲವು ವಾರಗಳಿಂದಲೂ ದಶರಥನ ಕುಟುಂಬಕ್ಕೆ ಆಹಾರ, ಪಡಿತರ ಸಾಮಗ್ರಿಗಳನ್ನು ಒದಗಿಸುತ್ತಿದೆ.

ಕೆಲವು ದಿನಗಳ ಬಳಿಕ ಸ್ಥಳೀಯ ಆಸ್ಪತ್ರೆಯೊಂದು ಅಝೀಝ್‌ರನ್ನು ಸಂಪರ್ಕಿಸಿತ್ತು. ಸ್ಥಳೀಯ ಹತ್ತಿ ಗಿರಣಿಯಲ್ಲಿ ದುಡಿಯುತ್ತಿರುವ ಮಹಾರಾಷ್ಟ್ರ ಮೂಲದ ವಲಸೆ ಕಾರ್ಮಿಕರ ಪೈಕಿ ಕಲಾವತಿ ಎಂಬಾಕೆ ಮೃತಪಟ್ಟಿದ್ದಳು. ವಾರದ ಬಳಿಕ ಆಕೆಯ ಪತಿ ಶೇಷರಾವ್ ಕೂಡ ಕೊನೆಯುಸಿರೆಳೆದಿದ್ದ. ಅಝೀಝ್ ಬಳಗ ಇಬ್ಬರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ, ಹಿಂದು ಸಂಪ್ರದಾಯದಂತೆ ನಡೆಸಿತ್ತು.

ಹಿಂದುಗಳು ಮತ್ತು ಮುಸ್ಲಿಮರನ್ನು ಒಟ್ಟಾಗಿಸುತ್ತಿರುವ ಸ್ಥಳೀಯ ಸಂಘಟನೆಗಳು

ಕಳೆದೆರಡು ವರ್ಷಗಳಲ್ಲಿ ಕೋಮು ದ್ವೇಷ ತೀವ್ರ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಆದಿಲಾಬಾದ್, ನಿರ್ಮಲ್,ಕಾಗಜ್‌ನಗರ,ಭೈಂಸಾ,ಮಂಚರಿಯಲ್ ಇತ್ಯಾದಿ ಕಡೆಗಳಲ್ಲಿ ಸ್ಥಳೀಯ ಯುವಕರು ಕೋಮು ಸಾಮರಸ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಸಮಾಜ ಕಲ್ಯಾಣ ಗುಂಪುಗಳನ್ನು ಮತ್ತು ಸಂಘಗಳನ್ನು ರಚಿಸಿಕೊಳ್ಳುತ್ತಿದ್ದಾರೆ.

ಅಗತ್ಯವುಳ್ಳವರಿಗೆ ನೆರವಾಗುವ ಮತ್ತು ನಿರ್ಮಲ್ ಜಿಲ್ಲೆಯಲ್ಲಿನ ಆಂತರಿಕ ಸಮಸ್ಯೆಗಳನ್ನು ಸೌಹಾರ್ದಪೂರ್ವಕವಾಗಿ ಬಗೆಹರಿಸಿಕೊಳ್ಳುವ ಉದ್ದೇಶದೊಂದಿಗೆ ಹಿಂದು ಮತ್ತು ಮುಸ್ಲಿಮ್ ಯುವಜನರನ್ನೊಳಗೊಂಡ ‘ಹಮಾರಾ ಸಹಾರಾ’ಎಂಬ ಸಂಘವನ್ನು ನಾವು ಸ್ಥಾಪಿಸಿದ್ದು,1,000ಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ ಎಂದು ಇರ್ಷಾನ್ (26) ತಿಳಿಸಿದರು.

‘ಲಾಕ್‌ಡೌನ್ ಪ್ರಕಟಿಸಿದ ಬೆನ್ನಿಗೇ ನಾವು ಕಾರ್ಯರಂಗಕ್ಕೆ ಇಳಿದಿದ್ದೆವು. ಸ್ಥಳೀಯ ಆಡಳಿತದ ನೆರವಿನೊಂದಿಗೆ ನಿರ್ಗತಿಕರಿಗೆ ಮತ್ತು ಪರಿತ್ಯಕ್ತರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಆರಂಭಿಸಿದ್ದೆವು ’ಎಂದು ಸಂಘದ ಇನ್ನೋರ್ವ ಸದಸ್ಯ ಮಹೇಶ ಕುಮಾರ ಹೇಳಿದರು.

ಉತ್ತರ ತೆಲಂಗಾಣದ ವಿವಿಧ ನಗರಗಳಲ್ಲಿ ಇಂತಹ ಹಲವಾರು ಗುಂಪುಗಳು ತಲೆಯೆತ್ತಿವೆ. ಅಂತರ ಸಾಮುದಾಯಿಕ ಸಂಬಂಧಗಳನ್ನು ಬಲಗೊಳಿಸುವ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಆಚರಿಸುವ ಪರಿಕಲ್ಪನೆಯೊಂದಿಗೆ ಈ ಗುಂಪುಗಳು ಕಾರ್ಯಾಚರಿಸುತ್ತಿವೆ. ಅವರೆಲ್ಲ ದಿನವಿಡೀ ಒಂದಾಗಿ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ. ಹಬ್ಬ-ಹರಿದಿನಗಳಂದು ಈ ಯುವಜನರು ಪುಟ್ಟ ಭೋಜನ ಕೂಟಗಳನ್ನೂ ಹಮ್ಮಿಕೊಳ್ಳುತ್ತಾರೆ ಮತ್ತು ಸಂಜೆಗಳನ್ನು ಮೋಜಿನಲ್ಲಿ ಕಳೆಯುತ್ತಾರೆ.

ಮೇ 22ರಂದು ನಿರ್ಮಲ್ ಜಿಲ್ಲೆಯಲ್ಲಿ ಸ್ವಯಂಸೇವಕರ ಗುಂಪೊಂದು ದಿನವಿಡೀ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸಿದ ಬಳಿಕ ಮರಳುತ್ತಿದ್ದಾಗ ತಿರುಪತಿ ಎಂಬ ಸ್ವಯಂ ಸೇವಕನಿಗೆ ಇದು ಇಫ್ತಾರ್, ಅಂದರೆ ರಮಝಾನ್ ಉಪವಾಸವನ್ನು ಮುರಿಯುವ ಸಮಯ ಎನ್ನುವುದು ಅರಿವಾದಾಗ ಆತ ತಕ್ಷಣವೇ ಗುಂಪಿನಲ್ಲಿದ್ದ ಮುಸ್ಲಿಮ್ ಸ್ವಯಂ ಸೇವಕರಿಗಾಗಿ ಪುಟ್ಟದೊಂದು ಔತಣ ಕೂಟವನ್ನು ಏರ್ಪಡಿಸಿದ್ದ.

ಪಡಿತರ, ರಕ್ತದಾನ ಮತ್ತು ವೈದ್ಯಕೀಯ ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಒಳಗೊಂಡಿರುವ ಪೋಸ್ಟರ್‌ಗಳನ್ನು ಆದಿಲಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾಣಬಹುದು. ಆದಿಲಾಬಾದ್‌ನ ‘ಫ್ರೆಂಡ್ಸ್ ವೆಲ್ಫೇರ್ ಸೊಸೈಟಿ’ಯೊಂದೇ ಕಳೆದ ಎರಡು ತಿಂಗಳುಗಳಲ್ಲಿ 1,000ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ರಕ್ತ ಬ್ಯಾಂಕುಗಳು ಮತ್ತು ಆಸ್ಪತ್ರೆಗಳಲ್ಲಿ ಸಾಕಷ್ಟು ರಕ್ತದ ಅಲಭ್ಯತೆಯಿಂದಾಗಿ ಬೇಡಿಕೆ ಹೆಚ್ಚಾಗಿತ್ತು. ಸ್ಥಳೀಯ ಯುವಕರು ಮತ್ತು ಅವರ ಗುಂಪುಗಳು ಬೃಹತ್ ಪ್ರಮಾಣದಲ್ಲಿ ರಕ್ತದಾನವನ್ನು ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಿದ್ದರು. ದಾಖಲೆಯ 51 ಸಲ ರಕ್ತದಾನ ಮಾಡಿರುವ ರಾಜಕುಮಾರ ರೆಡ್ಡಿ ಎಂಬ ಯುವಕ ಲಾಕ್‌ಡೌನ್ ಸಂದರ್ಭದಲ್ಲಿಯೂ ರಕ್ತ ದಾನದಲ್ಲಿ ತೊಡಗಿಕೊಂಡಿದ್ದ.

ಲೋಕೋಪಕಾರವೇ ಇವರ ಧ್ಯೇಯ

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಕಳೆದ ವಾರ ಉಪವಾಸನಿರತ ವಾಜಿದ್ ಅಲಿ ಎಂಬ ಯುವಕ ವಿನಯ ಎಂಬ ಒಂಭತ್ತು ತಿಂಗಳ ಮಗುವಿಗೆ ರಕ್ತ ನೀಡಲು ಸುಡುಬಿಸಿಲಿನಲ್ಲಿ 60 ಕಿ.ಮೀ.ದೂರದ ಕೋಮುಸೂಕ್ಷ್ಮ ಭೈಂಸಾ ಪಟ್ಟಣಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದ್ದ. ಇದೇ ಭೈಂಸಾದಲ್ಲಿ ಮೇ 11ರಂದು ಕುಡುಕನೋರ್ವ ಆರಾಧನಾ ಸ್ಥಳವನ್ನು ಪ್ರವೇಶಿಸಿದ ಬಳಿಕ ಸಣ್ಣ ಪ್ರಮಾಣದಲ್ಲಿ ಕೋಮು ಘರ್ಷಣೆ ನಡೆದಿತ್ತು.

ತಮ್ಮ ಗುಂಪುಗಳ ಪ್ರಯತ್ನಗಳು ಒಂದಲ್ಲೊಂದು ದಿನ ಫಲ ನೀಡುತ್ತವೆ ಮತ್ತು ಉಭಯ ಸಮುದಾಯಗಳ ನಡುವೆ ವಿಶ್ವಾಸವನ್ನು ನಿರ್ಮಿಸುತ್ತವೆ ಎಂದು ರಾಜಕುಮಾರ್ ಮತ್ತು ವಾಜಿದ್ ಆಶಾವಾದಿಗಳಾಗಿದ್ದಾರೆ.

ಹೆದ್ದಾರಿಯಲ್ಲಿ ತಮ್ಮ ರಾಜ್ಯಗಳಿಗೆ ನಡೆದುಕೊಂಡು ಸಾಗುತ್ತಿರುವ ಸಾವಿರಾರು ವಲಸೆ ಕಾರ್ಮಿಕರಿಗೆ ಸ್ಥಳೀಯರು ಆಹಾರ, ಪಡಿತರ ಮತ್ತು ಪಾದರಕ್ಷೆಗಳನ್ನು ಒದಗಿಸುತ್ತಿದ್ದಾರೆ. “ನಾವು ಪ್ರತಿದಿನ 1,000 ವಲಸೆ ಕಾರ್ಮಿಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ” ಎಂದು ಬಾಲ್ಯದ ಗೆಳೆಯರಾದ ರಾಜೇಶ ಮತ್ತು ಕರೀಂ ಹೇಳಿದರು. ಹಸಿದವರ ಹೊಟ್ಟೆ ತುಂಬಿಸಲು ರಾಜೇಶ ತನ್ನ ಕಾರನ್ನೇ ಮಾರಾಟ ಮಾಡಿದ್ದಾನೆ. ಈ ಸಮಯದಲ್ಲಿ ಪ್ರಾಣಗಳನ್ನು ಉಳಿಸುವುದಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ ಎನ್ನುತ್ತಾನೆ ಆತ. ತಾವು ಪ್ರತಿದಿನ 500 ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುತ್ತೇವೆ ಎಂದು ಚರಣ ಗೌಡ ಮತ್ತು ಆತನ ಸ್ನೇಹಿತರು ತಿಳಿಸಿದರು. ಈ ಕಾರ್ಯಕ್ಕಾಗಿ ಇವರಿಗೆ ಹಣಕಾಸು ಮತ್ತು ಮಾರ್ಗದರ್ಶನ ನೀಡುತ್ತಿರುವುದು ನೆರೆಯ ಸಾಜಿದ್.

ಆದಿಲಾಬಾದ್‌ನ ಉದ್ಯಮಿ ನಿಝಾಮ್ ವಲಸೆ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಹಾರ ಒದಗಿಸಲು ಹೆದ್ದಾರಿಯಲ್ಲಿ ‘ರೋಟಿ ಕಿಚನ್ ’ ಹೆಸರಿನಲ್ಲಿ ಸಮುದಾಯ ಪಾಕ ಶಾಲೆಯನ್ನು ನಡೆಸುತ್ತಿದ್ದಾರೆ. ರಸ್ತೆಗಳಲ್ಲಿ ಸಾಗುವ ವಲಸೆ ಕಾರ್ಮಿರಿಗೆ ಆಹಾರವೊದಗಿಸಲು ಅವರು 45 ಡಿ.ಸೆ. ಬಿರುಬಿಸಿಲಿನಲ್ಲಿ ಕಾಯುತ್ತಿರುತ್ತಾರೆ.

ಕಾಗಜ್‌ನಗರದ ಸಾಮಾಜಿಕ ಕಾರ್ಯಕರ್ತೆ ಡಾ.ಕೆ.ವ್ಯಾಲೆಂಟಿನಾ ಅವರು ಸ್ಥಳೀಯ ಕಾರ್ಯಕರ್ತ ವಾಸೀಂ ಅಹ್ಮದ್ ಅವರ ಬೆಂಬಲದೊಂದಿಗೆ ಸಮೀಪದ ಸುಮಾರು 20 ಬುಡಕಟ್ಟು ಗ್ರಾಮಗಳಿಗೆ ವ್ಯಾಪಕ ಪ್ರಯಾಣ ಮಾಡುತ್ತ ಆಹಾರ ಧಾನ್ಯಗಳನ್ನು ಒದಗಿಸುತ್ತಿದ್ದಾರೆ.

ಹಜ್ ಗೆ ತೆರಳಲು ಆಸ್ತಿ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದ ಆದಿಲಾಬಾದ್‌ನ ಸಾಮಾಜಿಕ ಕಾರ್ಯಕರ್ತ ಸಾಜಿದ್ ಖಾನ್ ಈಗ ಆ ಹಣವನ್ನು ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸಲು ವೆಚ್ಚ ಮಾಡುತ್ತಿದ್ದಾರೆ.

ದೇಶಾದ್ಯಂತ ಕೋವಿಡ್-19ರಿಂದಾಗಿ ಸಾವುಗಳು,ಸಂಕಷ್ಟಗಳು ಮತ್ತು ಕೋಮು ಹಿಂಸಾಚಾರದ ವರದಿಗಳ ಮಹಾಪೂರದ ನಡುವೆಯೇ ಸ್ಥಳೀಯ ಸಮುದಾಯಗಳು ಒಂದಾಗಿ ಒಗ್ಗಟ್ಟಿನ ಭಾವನೆಯನ್ನು ಮೂಡಿಸುತ್ತಿರುವುದು ನಿಜಕ್ಕೂ ಕಪ್ಪು ಆಗಸದಲ್ಲಿನ ಬೆಳ್ಳಿಯ ಗೆರೆಯಾಗಿದೆ.

  • ಕೃಪೆ: ವಾರ್ತಾ ಭಾರತಿ
SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …