Home / ಲೇಖನಗಳು / ಮಕ್ಕಳಿಗೆ ಹೇಗೆ ಉಪವಾಸದಲ್ಲಿ ಪ್ರೀತಿ ಹುಟ್ಟಿಸಬಹುದು?

ಮಕ್ಕಳಿಗೆ ಹೇಗೆ ಉಪವಾಸದಲ್ಲಿ ಪ್ರೀತಿ ಹುಟ್ಟಿಸಬಹುದು?

ಖದೀಜ ನುಸ್ರತ್, ಅಬುಧಾಬಿ

ಮಕ್ಕಳನ್ನು ಬೆಳೆಸುವಾಗ ಪೋಷಕರ ಅತಿ ದೊಡ್ಡ ಜವಾಬ್ದಾರಿ ಅವರಲ್ಲಿ ಧರ್ಮನಿಷ್ಠೆಯನ್ನುಂಟು ಮಾಡುವುದು, ಆರಾಧನೆಗಳಲ್ಲಿ ಹುರುಪು ಉತ್ಸಾಹವನ್ನುಂಟು ಮಾಡುವುದು ಮತ್ತು ಅವರ ಪರಲೋಕ ವಿಜಯಕ್ಕಾಗಿ ನಿರಂತರ ಶ್ರಮಿಸುವುದು. ಅತಿ ಸಣ್ಣ ವಯಸ್ಸಿನಲ್ಲಿಯೇ ಎಲ್ಲಾ ಆರಾಧನೆಗಳಿಗೆ ಸಿಗುವ ಪ್ರತಿಫಲವನ್ನು ವಿವರಿಸುತ್ತಾ ಸ್ವ ಇಚ್ಛೆಯಿಂದ ಸತ್ಕರ್ಮಗಳನ್ನು ಮಾಡುವಂತಹ ಸ್ಫೂರ್ತಿಯನ್ನುಂಟು ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ, ಆಟಪಾಠ, ಊಟೋಪಚಾರ ದಂತೆಯೇ ಅವರ ಆರಾಧನೆಯ ಬಗ್ಗೆಯೂ ಕಾಳಜಿ ವಹಿಸಬೇಕಾದುದು ಹೆತ್ತವರ ಜವಾಬ್ದಾರಿಯಾಗಿರುತ್ತದೆ.

ಮಕ್ಕಳು ಪ್ರೌಢಾವಸ್ಥೆಗೆ ತಲುಪುವ ತನಕ ಅವರ ಮೇಲೆ  ಉಪವಾಸ ವ್ರತ ಕಡ್ಡಾಯವಲ್ಲ. ಮಕ್ಕಳಿಗೆ ಏಳು ವರ್ಷ  ಪ್ರಾಯವಾದಾಗ ನಮಾಝ್‍ಗೆ ಆಜ್ಞಾಪಿಸಲು ಮತ್ತು ಹತ್ತು ವರ್ಷದವರಾದಾಗ ನಮಾಝ್ ಮಾಡದಿದ್ದರೆ ಹೊಡೆಯಲು ಪ್ರವಾದಿ ಮುಹಮ್ಮದ್(ಸ) ಹೇಳಿರುವರು. ನಮಾಝ್ ಮತ್ತು ಉಪವಾಸ ವ್ರತ ಎರಡೂ ಕಡ್ಡಾಯ ಕರ್ಮವಾದುದರಿಂದ ಹೆಚ್ಚಿನ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಏಳು ವರ್ಷವಾದಾಗ ಉಪವಾಸ ವ್ರತ ಆಚರಿಸಲು ಉಪದೇಶಿಸಬೇಕು ಮತ್ತು ಹತ್ತು  ವರ್ಷವಾಗಿಯೂ ಉಪವಾಸ ವ್ರತ ಆಚರಿಸದಿದ್ದರೆ ಹೊಡೆಯಬಹುದು.

ಹಾಗಿದ್ದರೂ, ಯಾವ ವಯಸ್ಸಿನಲ್ಲಿ ಉಪವಾಸ ವ್ರತವನ್ನು ಆಚರಿಸಲು ಆರಂಭಿಸಬೇಕೆಂಬುದು ಪ್ರತಿ ಮಕ್ಕಳಲ್ಲಿ ವ್ಯತ್ಯಸ್ಥವಾಗಿರುತ್ತದೆ. ಅದು ಅವರವರ ದೈಹಿಕ ರಚನೆಯನ್ನು ಆಧಾರಿತವಾಗಿರುತ್ತದೆ. ಕೆಲವೊಮ್ಮೆ ವಾಸಿಸುವ  ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿರುತ್ತದೆ. ಏಕೆಂದರೆ ಸಣ್ಣ ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಉಪವಾಸವು ಸ್ವಲ್ಪ ಕಷ್ಟವೂ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸುಲಭವೂ ಆಗಿರುತ್ತದೆ. ಅದೇ ರೀತಿ ಕೆಲವೊಂದು ಪ್ರದೇಶಗಳಲ್ಲಿ ಉಪವಾಸದ
ಅವಧಿಯು ದೀರ್ಘವಾಗಿರುತ್ತದೆ.

ಉಪವಾಸ ವ್ರತ ಆರಂಭಿಸುವಾಗ ಅದರ ಮಹತ್ವ, ಅದನ್ನು ಆಚರಿಸುವವರಿಗೆ ಸಿಗಲಿರುವ ಪ್ರತಿಫಲ, ರಮಝಾನ್ ತಿಂಗಳಲ್ಲಿ ಇತರ ಎಲ್ಲಾ ಕರ್ಮಗಳಿಗೆ ಸಿಗಲಿರುವ ಪ್ರತಿಫಲ ಹಾಗೂ ರೈಯಾನ್ ಎಂಬ ಬಾಗಿಲಿನ ಮೂಲಕ ಸ್ವರ್ಗ ಪ್ರವೇಶಿಸುವುದರ  ಬಗ್ಗೆ ಹೇಳಿ ಕೊಡಬೇಕು. ಒಂದಿಷ್ಟು ಹಣವನ್ನು ಅವರ ಕೈಗೆ ನೀಡಿ ದಾನ ನೀಡಲು ಪ್ರೇರೇಪಿಸಿರಿ.  ತರಾವೀಹ್ ನಮಾಝ್ ಮಾಡಲು ಸಾಧ್ಯವಾದರೆ ಮಕ್ಕಳನ್ನು ಮಸೀದಿಗೆ ಕರೆದುಕೊಂಡು ಹೋಗಿರಿ. ಸಾಮಾನ್ಯವಾಗಿ ಐದಾರು ವಯಸ್ಸಾಗುವಾಗಲೇ  ಮಕ್ಕಳಿಗೆ ಉಪವಾಸ ವ್ರತ ಆಚರಿಸಲು ಇಷ್ಟವಿರುತ್ತದೆ. ಆ ಸಮಯದಲ್ಲಿ ಅವರಿಗೆ ಅರ್ಧ ದಿನದ ಉಪವಾಸವನ್ನು ಕೊಟ್ಟು ಪೆ ಪ್ರೋತ್ಸಾಹಿಸಬಹುದು.

ಉಪವಾಸ ವ್ರತ ಆಚರಿಸುವ ಮಕ್ಕಳಿಗೆ ಪ್ರತಿ ದಿನ ಅಥವಾ ವಾರಕ್ಕೊಮ್ಮೆ ಅಥವಾ ಈದ್‍ನ ದಿನ ಏನಾದರೂ ಉಡುಗೊರೆ ನೀಡಬೇಕು. ಸಾಧ್ಯವಾದರೆ ದಿನಂಪ್ರತಿ ಉಡುಗೊರೆ ನೀಡುವುದರಿಂದ ಅವರ ಉತ್ಸಾಹವು ಹೆಚ್ಚುವುದು. ಸಹ್ರೀ ಹಾಗೂ ಇಫ್ತಾರ್‍ನ ಸಮಯದಲ್ಲಿ ಅವರಿಗೆ ಇಷ್ಟವಾದ ತಿಂಡಿಯನ್ನು ಮಾಡಿಕೊಡಿರಿ. ಜೊತೆಗೆ ಆರೋಗ್ಯಪೂರ್ಣ ಆಹಾರವನ್ನು ನೀಡುವಲ್ಲಿಯೂ ಗಮನ ಹರಿಸಬೇಕು. ಮಕ್ಕಳಿಗೆ ಉಪವಾಸವಿದ್ದರೂ ಇಲ್ಲದಿದ್ದರೂ ಇಫ್ತಾರ್ ಸಮಯದಲ್ಲಿ ನಿಮ್ಮೊಂದಿಗೆ ಕುಳ್ಳಿರಿಸಿರಿ.  ರಮಝಾನ್‍ನಲ್ಲಿ ಮಕ್ಕಳನ್ನು ಸಹರಿಗಾಗಿ ಎಬ್ಬಿಸುವಾಗ ಸ್ವಲ್ಪ ಕಷ್ಟವಾದರೂ ಸಹ ತಾಳ್ಮೆ ಮತ್ತು ಪೀತಿಯಿಂದ ಎಬ್ಬಿಸಿರಿ. ಸಹರಿ ತಿನ್ನುವುದರ ಪ್ರಾಮುಖ್ಯತೆಯ ಬಗ್ಗೆ ಮತ್ತು ಇಹ ಪರಲೋಕದಲ್ಲಿ ಲಭಿಸಬಹುದಾದ ಪ್ರತಿಫಲದ ಬಗ್ಗೆ ಸರಿಯಾಗಿ  ಅರ್ಥವಾಗುವ ರೀತಿಯಲ್ಲಿ ವಿವರಿಸಿರಿ.

ಉಪವಾಸದ ವೇಳೆಯಲ್ಲಿ ಹಸಿವು ಗೊತ್ತಾಗದಂತೆ ಸಮಯ ಕಳೆಯಲು ವಿವಿಧ ಚಟುವಟಿಕೆಯಲ್ಲಿ ನಿಬಿಡರಾಗಿಸಿರಿ. ಕಡ್ಡಾಯ ನಮಝï, ಕುರ್‍ಆನ್ ಪಾರಾಯಣ, ಕುರ್‍ಆನ್‍ನ ಒಂದು ಭಾಗವನ್ನು ಕಂಠಪಾಠ ಮಾಡಲು,  ಇನ್ನಿತರ ಪುಸ್ತಕ ಓದಲು  ಪ್ರೋತ್ಸಾಹಿಸಿರಿ. ಮನೆಯೊಳಗೆ ಆಯಾಸವಾಗದಂತಹ ಆಟಗಳನ್ನು ಆಡಲು ಸ್ವಲ್ಪ ಸಮಯವನ್ನು ಮೀಸಲಿರಿಸಬಹುದು. ಇಸ್ಲಾಮೀ ಚಾನೆಲ್ ಅಥವಾ ಯೂಟ್ಯೂಬ್‍ನಲ್ಲಿ ಲಭ್ಯವಿರುವಂತಹ ಉಪಯುಕ್ತವಾದ ವೀಡಿಯೋಗಳನ್ನು ನೋಡಲು ಅನುಮತಿ  ನೀಡಬಹುದು. ಆಧುನಿಕ ಕಾಲದಲ್ಲಿ ಮಕ್ಕಳು ದೃಶ್ಯ ಮಾಧ್ಯಮಗಳ ಸಹಾಯದಿಂದ ಬೇಗನೆ ಕಲಿಯುತ್ತಾರೆ.

ಉಪವಾಸದಿಂದ ಮಕ್ಕಳ ದೇಹವು ದುಬರ್ಲವಾಗುವುದೆಂದು ಭಾವಿಸಬೇಡಿರಿ. ಶಾಲೆಯಿದೆ, ಪರೀಕ್ಷೆಯಿದೆಯೆಂದು ಉಪವಾಸ ಆಚರಿಸಲು ಕಷ್ಟವಾಗಬಹುದೆಂದು ಆಲೋಚಿಸಬೇಡಿರಿ. ಅಗತ್ಯವಿರುವಷ್ಟು ನೀರು ಮತ್ತು ಆಹಾರ ಸೇವಿಸಿದರೆ ಅವರಿಗೆ ಉಪವಾಸವು ಕಷ್ಟವಾಗಲಾರದು. ಬೇಸಿಗೆಯಲ್ಲಿ ಹೊರಗೆ ಆಟವಾಡಿ ದಣಿವಾಗದಂತೆ ಜಾಗ್ರತೆ ವಹಿಸಬೇಕು. ತಾಯಂದಿರು ಕುರ್‍ಆನ್ ಪಾರಾಯಣ ಮಾಡುವಾಗ ಅಥವಾ ಇನ್ನಿತರ ಯಾವುದೇ ಕೆಲಸ ಮಾಡುವಾಗ ಮಕ್ಕಳು ತೊಂದರೆ ಕೊಡುತ್ತಾರೆಂದು  ಅವರ ಕೈಗೆ ಮೊಬೈಲ್ ಕೊಟ್ಟು ಕಳುಹಿಸಬಾರದು. ಆರಾಧನೆಗಳಲ್ಲಿ ಯಾವುದೇ ಆಸಕ್ತಿಯಿಲ್ಲದೆ ಮೊಬೈಲ್, ವೀಡಿಯೋಗೇಮ್, ಚೆಂಡುಗಳ ಆಟಗಳಲ್ಲೇ ಬೆಳೆದು ದೊಡ್ಡವರಾದ ನಂತರ ಹೆತ್ತವರಿಗೆ ಉಪದೇಶಿಸಲು ಸಾಧ್ಯವಾಗದು.

ಮಕ್ಕಳು ಮಾಡುವಂತಹ ಸತ್ಕರ್ಮ ಹೆತ್ತವರಿಗೆ ಕಣ್ಮನವಾಗಿರುತ್ತದೆ. ನೆರೆಕರೆಯ ಮಕ್ಕಳು ಅಥವಾ ಸಂಬಂಧಿಕರ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಉಪವಾಸವ್ರತ ಆಚರಿಸುತ್ತಾರೆಂದು ಹೋಲಿಕೆ ಮಾಡಬೇಡಿರಿ. ಉಪವಾಸವ್ರತ ಆಚರಿಸಲು ನಿರ್ಬಂಧಿಸಬೇಡಿರಿ. ನಿಮ್ಮ ಮಕ್ಕಳ ಸತ್ಕರ್ಮದ ಬಗ್ಗೆ ಇತರರಲ್ಲಿ ಹೇಳುತ್ತಾ ಹೆಮ್ಮೆ ಪಡಬೇಡಿರಿ. ಬದಲಾಗಿ ಮಕ್ಕಳು ಮಾಡುವ ಸತ್ಕರ್ಮವನ್ನು ಅವರ ಮುಂದೆಯೇ ಹೊಗಳಿರಿ. ಹೆತ್ತವರ ಹೊಗಳಿಕೆಯು ಅವರಿಗೆ ಪ್ರೋತ್ಸಾಹವಾಗಿರುತ್ತದೆ. ಆರಾಧನೆಯ  ವಿಷಯದಲ್ಲಿ ಮಕ್ಕಳನ್ನು ಮಕ್ಕಳಂತೆಯೇ ಪರಿಗಣಿಸಬೇಕೆ ಹೊರತು ಕಠಿಣವಾಗಿ ವರ್ತಿಸಬಾರದು. ಮಕ್ಕಳಲ್ಲಿ ಸದಾ ಆರಾಧನೆಯ ಬಗ್ಗೆ ಹುರುಪು ಉತ್ಸಾಹವಿರಲು ಹೆತ್ತವರ ಪ್ರಾರ್ಥನೆಯು ಅತಿ ಅಗತ್ಯವಾಗಿದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …