Home / ಲೇಖನಗಳು / ಇಬ್ರಾಹೀಮ್(ಅ)ರ ಜೀವನ ಮತ್ತು ಹಜ್ಜ್ ಕರ್ಮಗಳ ಇತಿಹಾಸ

ಇಬ್ರಾಹೀಮ್(ಅ)ರ ಜೀವನ ಮತ್ತು ಹಜ್ಜ್ ಕರ್ಮಗಳ ಇತಿಹಾಸ

✍️ಖದೀಜ ನುಸ್ರತ್

ಜೀವಮಾನದಲ್ಲಿ ಮಕ್ಕಾ ನಗರಕ್ಕೆ ತೆರಳಿ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆರೋಗ್ಯ, ಸಂಪತ್ತು, ಯಾತ್ರಾ ಸೌಕರ್ಯವಿರುವ ಎಲ್ಲಾ ಸ್ತ್ರೀ-ಪುರುಷರಿಗೆ ಇದು ಕಡ್ಡಾಯವಾಗಿದೆ. ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದರೂ ಮುಸ್ಲಿಮರೆಲ್ಲರೂ ತಮ್ಮ ಆದಾಯದ ಉಳಿತಾಯದ ಹಣದಲ್ಲಿ ಚಿಕ್ಕ ಪಾಲನ್ನು ಈ ಪವಿತ್ರ ಯಾತ್ರೆಗಾಗಿ ಜೋಪಾನವಾಗಿಡುತ್ತಾರೆ.

ಈ ಯಾತ್ರೆಯು ಅಲ್ಲಾಹನ ಕರೆಗೆ ಓಗೊಟ್ಟು ನಮ್ಮ ಮನೆಯಿಂದ ಆರಂಭವಾಗಿ ಅಲ್ಲಾಹನ ಅತಿಥಿಗಳಾಗಿ ಅವನ ಭವನದೆಡೆಗೆ ಮಾಡುವಂತಹ ಪವಿತ್ರ ಯಾತ್ರೆಯಾಗಿದೆ. ಪ್ರತೀ ವರ್ಷ ಜಗತ್ತಿನ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಬಡವ-ಶ್ರೀಮಂತ, ಕರಿಯ-ಬಿಳಿಯ, ಅರಬ್- ಅರಬೇತರರೆಂಬ ಭೇದ-ಭಾವವಿಲ್ಲದೇ ಈ ಪುಣ್ಯಯಾತ್ರೆಗಾಗಿ ಅಲ್ಲಾಹನ ಭವನದೆಡೆಗೆ ಧಾವಿಸುತ್ತಾರೆ. ಇದು ಅಂತಾರಾಷ್ಟಿçÃಯ ವೈವಿಧ್ಯ ತೆಯ ಪ್ರತೀಕವಾಗಿದೆ. ಭೂಮಿಯ ಮೇಲೆ ಹಜ್ಜ್ಗಿಂತ ಹೆಚ್ಚು ಜನರು ಒಂದುಗೂಡುವ ಧಾರ್ಮಿಕ ಆರಾಧನೆ ಬೇರೆ ಯಾವುದೂ ಇಲ್ಲ.

ಇದೊಂದು ವಿಶ್ವ ಮಹಾ ಸಮ್ಮೇಳನ ವಾಗಿದ್ದು ಪ್ರತಿ ವರ್ಷ ಸ್ತ್ರೀ-ಪುರುಷರೆಂಬ ಭೇದ ಭಾವವಿಲ್ಲದೇ 20-30 ಲಕ್ಷಕ್ಕಿಂತಲೂ ಅಧಿಕ ಜನರು ಭಾಗವಹಿಸುತ್ತಾರೆ. ಅಲ್ಲಾಹನ ಅತಿಥಿಗಳನ್ನು ಸ್ವಾಗತಿಸಲು ಸೌದಿ ಅರೇಬಿಯಾದಲ್ಲಿ ಮಕ್ಕಾ ನಗರ ಮತ್ತು ಪರಿಸರದಲ್ಲಿ ವಿವಿಧ ರೀತಿಯ ಸುಸಜ್ಜಿತ ಏರ್ಪಾಡುಗಳನ್ನು ಮಾಡಲಾಗುತ್ತದೆ. ಈ ಮಹಾ ಸಮ್ಮೇಳನ ನಡೆಯಬೇಕಾದ ಸಮಯ, ದಿನಾಂಕ, ಸ್ಥಳ, ಕ್ರಮ, ವಸ್ತ್ರ, ಕರ್ಮ, ರೀತಿ, ನೀತಿ ನಿಯಮ ಮತ್ತು ಕಾರ್ಯಕ್ರಮಗಳ ಪಟ್ಟಿಯನ್ನು ಅಲ್ಲಾಹನೇ ನಿಗದಿಪಡಿಸಿದ್ದಾನೆ. ಅದು ಹೇಗೆ ಮತ್ತು ಯಾಕೆ ನಿರ್ವಹಿಸಬೇಕೆಂದು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ತಿಳಿಸಲಾಗಿದೆ. ಇದು ಯಾವುದೇ ಹವಾಮಾನಕ್ಕೆ ತಕ್ಕಂತೆ ಬದಲಾಗುವುದಿಲ್ಲ.

ಈ ಮಹಾ ಸಮ್ಮೇಳನಕ್ಕೆ ಹಲವಾರು ವರ್ಷಗಳ ಹಿಂದೆ ಇಬ್ರಾಹೀಮ್(ಅ) ಮುಖಾಂತರ ಜನರಿಗೆ ಕರೆ ನೀಡಲಾಗಿದೆ. ಇದಕ್ಕಾಗಿ ಜನರನ್ನು ಆಯ್ಕೆ ಮಾಡುವ ಕಾರ್ಯವನ್ನು ಅಲ್ಲಾಹನೇ ಮಾಡುತ್ತಾನೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್(ಅ) ಕಅಬಾ ಭವನ ನಿರ್ಮಿಸಿದಂದಿನಿಂದ ಹಜ್ಜ್ ಕರ್ಮ, ತವಾಫ್, ಸಈ, ಬಲಿದಾನ ನಡೆಯುತ್ತಿದೆ.

ಈ ಮಹಾ ಸಮ್ಮೇಳನದ ಕೆಲವು ಕಡ್ಡಾಯ ಕರ್ಮಗಳು ಮಹಾನ್ ಪ್ರವಾದಿ ಹಝ್ರತ್ ಇಬ್ರಾಹೀಮ್(ಅ)ರವರ ಜೀವನದ ಐತಿಹಾಸಿಕ ಘಟನೆಗಳನ್ನು ಮತ್ತು ಅವರ ತ್ಯಾಗೋಜ್ವಲವಾದ ಜೀವನವನ್ನು ನೆನಪಿಸುತ್ತದೆ. ಅದರಲ್ಲಿ ಮುಖ್ಯವಾದುದು ಸಫಾ ಮತ್ತು ಮರ್ವಾ ಪರ್ವತಗಳ ನಡುವೆ 7 ಬಾರಿ ಪ್ರದಕ್ಷಿಣೆ ಮಾಡುವುದು ಮತ್ತು ಬಲಿ ಕರ್ಮವಾಗಿದೆ.

ಅಲ್ಲಾಹನು ತನ್ನ ಮಿತ್ರ ಇಬ್ರಾಹೀಮ್(ಅ)ರನ್ನು ಹಲವು ಬಾರಿ ಪರೀಕ್ಷೆ ಮಾಡಿದನು. ಆ ಎಲ್ಲಾ ಪರೀಕ್ಷೆಗಳಲ್ಲಿ ಅವರು ವಿಜಯವನ್ನು ಹೊಂದಿದರು. ಬಹಳ ದಿನಗಳ ಪ್ರಾರ್ಥನೆಯ ನಂತರ ತನ್ನ ವೃದ್ಧಾಪ್ಯದಲ್ಲಿ ಲಭಿಸಿದ ಮಗುವನ್ನು ದೂರದ ಮರುಭೂವಿಯಲ್ಲಿ ಬಿಟ್ಟು ಬರುವಂತೆ ಇಬ್ರಾಹೀಮ್(ಅ)ರಿಗೆ ಆದೇಶಿಸಲಾಯಿತು. ಹಾಗೆ ಅಲ್ಲಾಹನ ಆಜ್ಞೆಯಂತೆ ಹಸುಗೂಸಾದ ಇಸ್ಮಾಯಿಲ್(ಅ) ಮತ್ತು ಪ್ರಿಯ ಪತ್ನಿ ಹಾಜಿರಾರನ್ನು ಜನ ವಾಸದ ಕುರುಹುಗಳಿಲ್ಲದ ಕಲ್ಲು ಬಂಡೆಗಳಿಂದಾವೃತವಾದ ಒಣ ಬಂಜರು ಮರುಭೂಮಿಯಲ್ಲಿ ಸ್ವಲ್ಪ ನೀರು ಮತ್ತು ಖರ್ಜೂರವನ್ನು ನೀಡಿ ಕಾಬಾ ಭವನದೆಡೆಗೆ ಮುಖ ಮಾಡಿ ಅಲ್ಲಾಹನೊಂದಿಗೆ ಪ್ರಾರ್ಥನೆಯನ್ನು ಮಾಡಿ ಭಾರವಾದ ಹೃದಯದಿಂದ ಕಣ್ಣೀರಿನೊಂದಿಗೆ ವಿದಾಯ ಹೇಳಿದರು.

ಅದಾದ ಒಂದೆರಡು ದಿನಗಳ ನಂತರ ತನ್ನ ಬಳಿ ಇದ್ದಂತಹ ಆಹಾರ ಮತ್ತು ನೀರು ಮುಗಿದಾಗ ಬಾಯಾರಿಕೆಯಿಂದ ಮಗು ಸತತವಾಗಿ ಅಳಲು ಆರಂಭಿಸಿತು. ಬೇರೆ ದಾರಿ ಕಾಣದೇ ತಾಯಿಯ ಹೃದಯವು ಕಂಪಿಸಿತು. ದುಃಖದಿಂದ ನೀರಿಗಾಗಿ ಅಲೆದಾಡಿದರು. ಎಲ್ಲಿಯಾದರೂ ನೀರು ಮತ್ತು ಜನರು ಗೋಚರಿಸಬಹುದೇ ಎಂದು ಪಕ್ಕದಲ್ಲಿದ್ದ ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳ ನಡುವೆ ಸತತವಾಗಿ ಏಳು ಬಾರಿ ವೇಗವಾಗಿ ಓಡಾಡಿದರು. ಮಗು ಕಾಲುಗಳನ್ನಪ್ಪಳಿಸಿ ಕೂಗುತ್ತಿದ್ದಾಗ ಅಲ್ಲಿ ನೀರಿನ ಚಿಲುಮೆಯೊಂದು ಚಿಮ್ಮುತ್ತಾ ನೀರು ಧಾರಾಕಾರವಾಗಿ ಹರಿಯಿತು. ತಾಯಿಯು ಸಂತೋಷದಿಂದ ಮಗುವಿನ ಬಳಿ ಬಂದು ನೀರುಣಿಸಿದರು. ಹಾಜರಾರ ಅಚಲವಾದ ವಿಶ್ವಾಸದಿಂದ ಸಂತೃಪ್ತಗೊಂಡ ಅಲ್ಲಾಹನು ಸಫಾ ಮತ್ತು ಮರ್ವಾ ಪರ್ವತಗಳ ಮಧ್ಯೆ ನಡೆಯುವುದನ್ನು ಇಸ್ಲಾಮಿನ ಪ್ರಧಾನ ಆರಾಧನಾ ಕರ್ಮವಾದ ಹಜ್ಜ್ ಮತ್ತು ಉಮ್ರಾದ ಅವಿಭಾಜ್ಯ ಅಂಗವಾಗಿ ಮಾಡಿದನು.

ಇಸ್ಮಾಈಲ್(ಅ)ರು ತಮ್ಮ ಹದಿಹರೆಯ ತಲುಪಿದಾಗ ಇಬ್ರಾಹೀಮ್(ಅ) ತನ್ನ ಮಗನನ್ನು ಕಂಡು ಹರ್ಷಿಸುವ ಮತ್ತು ಜವಾಬ್ದಾರಿಕೆಗಳನ್ನು ಹಸ್ತಾಂತರಿಸುವ ಸಮಯವಾಗಿತ್ತು. ಆಗ ಅಲ್ಲಾಹನು ಪುನಃ ಇಬ್ರಾಹೀಮ್(ಅ)ರನ್ನು ಪರೀಕ್ಷಿಸಬಯಸಿದನು. ತನ್ನ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ತನ್ನ ಏಕೈಕ ಪುತ್ರನನ್ನು ಬಲಿ ನೀಡಬೇಕೆಂದು ಅಲ್ಲಾಹನು ಕನಸಿನಲ್ಲಿ ಆಜ್ಞಾಪಿಸಿದನು.

“ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲಪಿದಾಗ (ಒಂದು ದಿನ) ಇಬ್ರಾಹೀಮರು ಅವನೊಡನೆ, “ಮಗೂ, ನಾನು (ಬಲಿಯರ್ಪಿಸಲಿಕ್ಕಾಗಿ) ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕನಸಿನಲ್ಲಿ ಕಂಡೆನು. ಈಗ ನಿನ್ನ ಅಭಿಪ್ರಾಯವೇನೆಂದು ಹೇಳು” ಎಂದರು. ಆಗ ಅವನು, “ಅಪ್ಪಾ, ತಮಗೆ ಆಜ್ಞಾಪಿಸಲಾಗಿರುವುದನ್ನು ಮಾಡಿಬಿಡಿರಿ, ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ” ಎಂದನು. (ಪವಿತ್ರ ಕುರ್‌ಆನ್- 37: 102)

ಹಾಗೆ ಒಂದು ದಿನ ತನ್ನ ಮಗನನ್ನು ಬಲಿ ನೀಡಲು ಮಕ್ಕಾ ನಗರದಿಂದ ಮಿನಾದ ಒಂದು ಪರ್ವತದ ಕಡೆಗೆ ಕರೆದುಕೊಂಡು ಹೋದರು.

ತನ್ನ ತಂದೆಯೊಂದಿಗೆ ನನ್ನ ಕತ್ತನ್ನು ಕೊಯ್ಯುವಾಗ ಚಾಕು ಹರಿತವಾಗಿರಬೇಕು. ನೋವಿನಿಂದ ಓಡಿ ಹೋಗಲು ಪ್ರಯತ್ನಿಸದಂತೆ ನನ್ನ ಕೈ ಕಾಲುಗಳನ್ನು ಗಟ್ಟಿಯಾಗಿ ಕಟ್ಟಬೇಕು. ನನ್ನ ರಕ್ತವನ್ನು ಕಂಡು ಧೈರ್ಯಗೆಡಬಾರದು. ಬಲಿ ನೀಡುವಾಗ ನನ್ನ ಮುಖ ಮತ್ತು ಕಣ್ಣುಗಳು ಕಾಣದ ಹಾಗೆ ಮಲಗಿಸಬೇಕು. ಏಕೆಂದರೆ ನನ್ನ ಮೇಲಿನ ಪ್ರೀತಿಯಿಂದ ತಾವು ಕರ್ಮವೆಸಗುವಾಗ ಹಿಂಜರಿಯಬಾರದು. ನನ್ನ ತಾಯಿಗೆ ನನ್ನ ಅಂತಿಮ ಸಲಾಂ ತಿಳಿಸಬೇಕು. ನನ್ನ ರಕ್ತ ಮಿಶ್ರಿತವಾದ ಬಟ್ಟೆಗಳನ್ನು ತಾಯಿಗೆ ತೋರಿಸಬಾರದು ಎಂಬ ಧೈರ್ಯದ ಮಾತುಗಳನ್ನು ಮತ್ತು ಉತ್ತಮ ಸಲಹೆಗಳನ್ನು ನೀಡಿದರು. ಇಸ್ಮಾಈಲ್(ಅ)ರನ್ನು ಸಹನಶೀಲ ಬಾಲಕ ಎಂದೇ ಪವಿತ್ರ ಕುರ್‌ಆನ್‌ನಲ್ಲಿ ಪರಾಮರ್ಶಿಸಲಾಗಿದೆ.

“ಕೊನೆಗೆ ಇಬ್ಬರೂ ವಿಧೇಯತೆಯೊಂದಿಗೆ ಶಿರಬಾಗಿದರು ಮತ್ತು ಇಬ್ರಾಹೀಮರು ಮಗನನ್ನು ಅಧೋಮುಖಿಯಾಗಿ ಮಲಗಿಸಿದರು.

ಆಗ ನಾವು ಹೀಗೆ ಕೂಗಿ ಹೇಳಿದೆವು, “ಇಬ್ರಾಹೀಮ್, ನೀವು ಸ್ವಪ್ನವನ್ನು ಸತ್ಯಗೊಳಿಸಿ ತೋರಿಸಿದಿರಿ. ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ. ನಿಶ್ಚಯವಾಗಿಯೂ ಇದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು.” ನಾವು ಒಂದು ದೊಡ್ಡ ಬಲಿದಾನವನ್ನು ಪರಿಹಾರವಾಗಿ ಕೊಟ್ಟು ಆ ಬಾಲಕನನ್ನು ಬಿಡಿಸಿದೆವು. (ಪವಿತ್ರ ಕುರ್‌ಆನ್-37: 103-107)

ಅಲ್ಲಾಹನ ಆಜ್ಞೆಯಂತೆ ತನ್ನ ಪುತ್ರನನ್ನು ಬಲಿ ನೀಡಲು ಆರಂಭಿಸಿದಾಗ ಈ ಪುಣ್ಯ ಕರ್ಮದಿಂದ ತಡೆಯಲು ಶೈತಾನನು ವಿವಿಧ ರೀತಿಯ ಕುತಂತ್ರಗಳನ್ನು ಪ್ರಯೋಗಿಸಲು ಪ್ರಯತ್ನಿಸಿದನು. ಇಬ್ರಾಹೀಮ್(ಅ) ಶೈತಾನನನ್ನು 3 ಸಲ ಕಲ್ಲೆಸೆದು ಓಡಿಸಿದರು. ಅಲ್ಲಾಹನು ಲೋಕಾಂತ್ಯದವರೆಗೆ ಪ್ರಾಣಿಬಲಿ ನೀಡುವುದನ್ನು ಮತ್ತು ಶೈತಾನನಿಗೆ ಕಲ್ಲೆಸೆಯುವ ಕರ್ಮವನ್ನು ಹಜ್ಜ್ ನ ಪ್ರಧಾನ ಆರಾಧನಾ ಕರ್ಮವಾಗಿ ಮಾಡಿದನು.

ಪ್ರವಾದಿ ಇಬ್ರಾಹೀಮ್(ಅ) ಭೂಮಿಯ ಮೇಲೆ ಗೌರವಾನ್ವಿತ ಪ್ರವಾದಿಯಾಗಿರುತ್ತಾರೆ. ಪವಿತ್ರ ಕುರ್‌ಆನ್‌ನಲ್ಲಿ ಅತೀ ಹೆಚ್ಚು ಪ್ರಶಂಸಿಸಲ್ಪಟ್ಟ ಪ್ರವಾದಿಯಾಗಿದ್ದಾರೆ. ಪವಿತ್ರ ಕುರ್‌ಆನ್‌ನಲ್ಲಿ 70 ಕ್ಕಿಂತಲೂ ಅಧಿಕ ಸೂಕ್ತಗಳಲ್ಲಿ ಪ್ರಸ್ತಾಪಿಸಲ್ಪಡುತ್ತಾರೆ. ಅಲ್ಲಾಹನ ಮಿತ್ರ (ಖಲೀಲುಲ್ಲಾಹ್) ಎಂಬ ಬಿರುದನ್ನು ಪಡೆದಿರುವ ಪ್ರವಾದಿ. ಇಬ್ರಾಹೀಮರಲ್ಲಿ ನಿಮಗೆ ಅತ್ಯುತ್ತಮ ಮಾದರಿ ಇದೆ ಎಂದು ಕುರ್‌ಆನ್‌ನಲ್ಲಿ ಹೇಳಲಾಗಿದೆ.

ಅಲ್ಲಾಹನು ಅವರನ್ನು ಸರ್ವ ಜನರ ನಾಯಕರನ್ನಾಗಿ ಮಾಡಿರುವನು. ಇಬ್ರಾಹೀಮರು ಸ್ವಯಂ ತಾನೇ ಒಂದು ಸಮುದಾಯವಾಗಿದ್ದರು (ಇಡೀ ಸಮುದಾಯ ಮಾಡಬೇಕಿದ್ದ ಕೆಲಸವನ್ನು ಇಬ್ರಾಹೀಮ್(ಅ) ಒಬ್ಬರೇ ಮಾಡಿದ್ದರು). ಏಕನಿಷ್ಠರಾಗಿದ್ದರು, ಅಲ್ಲಾಹನ ಆಜ್ಞಾನು ಸರಣೆ ಮಾಡುತ್ತಿದ್ದರು, ಅಲ್ಲಾಹನ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು, ಸಹನಾಶೀಲರೂ ಕೋಮಲ ಹೃದಯಿಯೂ ಎಲ್ಲ ಸ್ಥಿತಿಗಳಲ್ಲೂ ಅಲ್ಲಾಹನ ಕಡೆಗೆ ಒಲಿಯುವವರೂ ಆಗಿದ್ದರು. ಇಬ್ರಾಹೀಮ್(ಅ)ರ ನಂತರ ಬಂದ ಎಲ್ಲಾ ಪ್ರವಾದಿಗಳು ಅವರ ಸಂತತಿಯಿಂದಲೇ ಆಗಿದ್ದರು. ಅರಬರಲ್ಲಿ ಪ್ರವಾದಿ ಮುಹಮ್ಮದ್(ಸ) ಇಸ್ಮಾಈಲ್(ಅ)ರ ಸಂತತಿಯಿಂದ ಹಾಗೂ ಬನೀ ಇಸ್ರಾಈಲರಲ್ಲಿ ಬಂದ ಪ್ರವಾದಿಗಳೆಲ್ಲರೂ ಇಸ್ಹಾಕ್(ಅ) ಎಂಬ ಪುತ್ರನ ಸಂತತಿಯಾಗಿದ್ದಾರೆ.

ಇಬ್ರಾಹೀಮ್(ಅ)ರ ಜನಾಂಗವು ಅವರನ್ನು ಎದುರಿಸಿದಾಗ, ಹಿಂಸೆ, ಕಿರುಕುಳ ನೀಡಿದಾಗ, ಅವರ ತಂದೆ ಅವರಿಗೆ ವಿರುದ್ಧವಾಗಿ ನಿಂತಾಗ, ನಮ್ರೂದ್ ರಾಜನು ಬೆಂಕಿಗೆಸೆದಾಗ “ಅಲ್ಲಾಹನು ಸಾಕು ಮತ್ತು ಅವನೇ ಅತ್ಯುತ್ತಮ ಕಾರ್ಯಸಾಧಕನು” ಎಂದು ಅಲ್ಲಾಹನ ಮೇಲೆ ಭರವಸೆಯಿಟ್ಟರು. ಇಡೀ ಸಮಾಜವು ತಿರಸ್ಕರಿಸಿದಾಗ ಒಂಟಿಯಾಗಿ ಸತ್ಯ ಮತ್ತು ನ್ಯಾಯದ ಪರವಾಗಿ ನಿಂತರು.

ಇಂದು ವಿಮಾನದಲ್ಲಿ ಮಾತ್ರ ಪ್ರಯಾಣಿಸಿ ತಲುಪಬಹುದಾದಂತಹ ದೂರದ ಪ್ರದೇಶಗಳಿಗೆ ಅಂದು ಕಾಲ್ನಡಿಗೆಯಲ್ಲೇ ಸಂದೇಶ ಪ್ರಚಾರ ಮಾಡುತ್ತಾ ವಲಸೆ ಹೋದ ಪ್ರಥಮ ಪ್ರವಾದಿಯಾಗಿದ್ದರು. ಅವರ ಜೀವನವು ಸಮರ್ಪಣಾಭಾವ, ಸಹನೆ, ಧೈರ್ಯ, ತ್ಯಾಗ, ಬಲಿದಾನಗಳ ಅತ್ಯುತ್ತಮ ಉದಾಹರಣೆಗಳ ಮೂಲಕ ನಮಗೆ ಮಾದರಿಯಾಗಿದ್ದಾರೆ.

 

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …