Home / ಲೇಖನಗಳು / ಈಮಾನ್ (ಸತ್ಯವಿಶ್ವಾಸ)

ಈಮಾನ್ (ಸತ್ಯವಿಶ್ವಾಸ)

ಅಮ್ರ್ ಬಿನ್ ಅಬಸ (ರ) ಹೇಳುತ್ತಾರೆ. “ನಾನು ಪ್ರವಾದಿ (ಸ) ರೊಂದಿಗೆ ಈಮಾನ್ ಎಂದರೇನು ಎಂದು ಪ್ರಶ್ನಿಸಿದೆ. ಪ್ರವಾದಿ (ಸ) ಹೇಳಿದರು. “ಸಬ್ರ್ ಮತ್ತು ಸಮಾಹತ್”

ಈ ಪ್ರವಾದಿ ವಚನದಲ್ಲಿ ಈಮಾನ್ ಎಂದರೆ ಸಬ್ರ್ ಮತ್ತು ಸಮಾಹತ್ ಎಂದು ಹೇಳಲಾಗಿದೆ. ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ..ಇನ್ನಲ್ಲಾಹ ಮ ಅಸ್ಸಾಬಿರೀನ್” ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ”

ಮನುಷ್ಯ ಈ ಲೋಕದಲ್ಲಿ ಅಲ್ಲಾಹನ ಮಾರ್ಗದರ್ಶನ ಪ್ರಕಾರ ಜೀವಿಸುವಾಗ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು. ಇಂತಹ ಸಂಧರ್ಭಗಳಲ್ಲಿ ಅಲ್ಲಾಹನು ನಮ್ಮ ಜೊತೆಗಿದ್ದಾನೆ ಎಂದು ಬಲವಾಗಿ ನಂಬಿ ಅವನ ಆಶ್ರಯ ಹಿಡಿದು ಮುಂದೆ ಸಾಗುವುದರ ಹೆಸರಾಗಿದೆ ಸಬ್ರ್ ಎಂಬುದು. ಪವಿತ್ರ ಕುರ್ ಆನಿನ ಅನೇಕ ಕಡೆಗಳಲ್ಲಿ ಗತಿಸಿಹೋದ ಸಜ್ಜನರ, ಪ್ರವಾದಿಗಳ ವೃತ್ತಾಂತವನ್ನು ಅಲ್ಲಾಹನು ವಿವರಿಸಿ ಕೊಟ್ಟಿದ್ದಾನೆ. ಎಲ್ಲದರಲ್ಲಿಯೂ ಸಹನೆಯು ಸಜ್ಜನ ದಾಸರ ವೈಶಿಷ್ಟ್ಯವಾಗಿತ್ತು .ಸಹನೆ ವಹಿಸಿದ ಸತ್ಯವಿಶ್ವಾಸಿಗಳು ಇಹಜೀವನದಲ್ಲಿಯೂ ವಿಜಯಿಗಳಾದರು.

ಪವಿತ್ರ ಕುರ್ ಆನಿನ ಅರ್ರ ಅದ್ ಅಧ್ಯಾಯದಲ್ಲಿ ಅಲ್ಲಾಹನು ಬುದ್ದಿ ಜೀವಿಗಳ ಬಗ್ಗೆ ವಿವರಿಸುತ್ತಾ ಹೇಳುತ್ತಾನೆ:
ಮರಣದ ಸಂದರ್ಭ ” ದೇವಚರರು ಎಲ್ಲ ದಿಕ್ಕುಗಳಿಂದಲೂ ಅವರನ್ನು ಸ್ವಾಗತಿಸಲು ಬರುವರು. ಮತ್ತು ಅವರೊಡನೆ ಹೇಳುವರು ಸಲಾಮುನ್ ಅಲೈಕುಮ್ ಬಿಮಾ ಸ್ವಬರ್ ತುಮ್ .ಅಂದರೆ ನಿಮ್ಮ ಮೇಲೆ ರಕ್ಷಣೆ ಇರಲಿ ನೀವು ಭೂ ಲೋಕದಲ್ಲಿ ಸಹನೆ ವಹಿಸಿದ ಫಲವಾಗಿ ಇಂದು ಸ್ವರ್ಗಕ್ಕೆ ಅರ್ಹರಾಗಿರುತ್ತೀರಿ. ಪರಲೋಕ ಗೃಹ ಅದೆಷ್ಟು ಉತ್ತಮ”

ಹಾಗೆಯೇ ಅತ್ತಹ್ ರೀಮ್ ಅಧ್ಯಾಯದಲ್ಲಿ ಸಹನೆ ವಹಿಸಿದ ಇಬ್ಬರು ಮಹಿಳೆಯರ ಪ್ರಸ್ತಾಪವಿದೆ. ಲೋಕಾಂತ್ಯದ ವರೆಗಿನ ದೇವ ವಿಶ್ವಾಸಿಗಳಿಗೆ ಉದಾಹರಣೆಯಾಗಿ ನೀಡಲಾಗಿದೆ.

ಫಿರ್ ಔನನ ಪತ್ನಿ ಆಸಿಯಾ… ತನ್ನ ಪತಿ ಮೂಸಾರ ಶತ್ರುವೆಂದು ಗೊತ್ತಿದ್ದರೂ ಮೂಸಾರ ಪ್ರಭುವಿನ ಮೇಲೆ ಅಸಿಯಾರು ವಿಶ್ವಾಸವಿರಿಸಿದ್ದರು..ಅದಕ್ಕಾಗಿ ಮಾನಸಿಕವಾಗಿಯೂ ಶಾರೀರಿಕವಾಗಿಯೂ ಹಿಂಸೆ ಅನುಭವಿಸಿದ್ದರು ಎಂಬುದು ಅವರ ಪ್ರಾರ್ಥನೆಯಿಂದ ವ್ಯಕ್ತವಾಗುತ್ತದೆ.. ಪತಿಯ ಅರಮನೆಯಲ್ಲಿದ್ದರೂ ಅದರ ಬಗ್ಗೆ ಸ್ವಲ್ಪವೂ ಆಸೆ ಪಡದೆ .. ಓ ನನ್ನ ಪ್ರಭೂ ನನಗಾಗಿ ನಿನ್ನ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು ಮತ್ತು ನನ್ನನ್ನು ಫಿರ್ ಔನನಿಂದಲೂ ಅವನ ಕರ್ಮಗಳಿಂದಲೂ ರಕ್ಷಿಸು ಎಂದು ಪ್ರಾರ್ಥಿಸಿದ್ದರು ಎಂಬುದು ಕುರ್ ಆನ್ ನಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಹಾಗೆಯೇ ಇಮ್ರಾನರ ಪುತ್ರಿ ಈಸಾ (ಅ) ರ ತಾಯಿ ಮರ್ಯಮ್(ಅ).. ಮರ್ಯಮ್ (ಅ)ರು ಮಾನವನ್ನು ಕಾಪಾಡಿಕೊಂಡಿದ್ದ ಮಹಿಳೆ ಎಂದೇ ಪ್ರಸಿದ್ಧರಾಗಿದ್ದರು.. ಆದರೆ ಅಲ್ಲಾಹನ ಆಜ್ಙೆಯ ಪ್ರಕಾರ ಗರ್ಭಿಣಿಯಾಗಿ, ಮಗುವನ್ನು ಎತ್ತಿಕೊಂಡು ಸಮಾಜದ ಮುಂದೆ ಬರುವ ಆ ಚಿತ್ರಣವನ್ನು ಊಹಿಸುಲಿಕ್ಕೂ ಸಾಧ್ಯವಾಗುವುದಿಲ್ಲ.. ಜನರು ಮಗುವನ್ನು ಕಂಡು ದುರಾಚಾರಿ ಸ್ರೀ ಎಂದು ಕರೆದರು. ಮರ್ಯಮರು ಎಲ್ಲವನ್ನೂ ಸಹಿಸಿದರು.. ಸಹನೆಯೇ ಈಮಾನ್ ಎಂಬುದು ಸ್ಪಷ್ಟವಾಗುತ್ತದೆ.

ಈಮಾನ್ ನ ಇನ್ನೊಂದು ಅರ್ಥ ಸಮಾಹತ್ ಎಂದು ಪ್ರವಾದಿ (ಸ) ಹೇಳಿದರು..ಸಮಾಹತ್ ಗೆ ಅಲ್ಲಾಹನ ಮಾರ್ಗದ ಖರ್ಚು, ಹೃದಯ ವೈಶಾಲ್ಯ, ಮೃದುತ್ವ ಎಂಬ ಅರ್ಥವಿದೆ.

ಈ ಮೂರು ಗುಣಗಳು ನಮ್ಮಲ್ಲಿ ಇಲ್ಲ ಎಂದಾದರೆ ನಮ್ಮಲ್ಲಿ ಈಮಾನ್ ಇಲ್ಲ ಎಂದು ನಾವು ಭಾವಿಸಬೇಕು.. ಮೃದುತ್ವದ ಬಗ್ಗೆ ಪ್ರವಾದಿ (ಸ) ಹೇಳುತ್ತಾರೆ.. ನರಕದ ಅಗ್ನಿಯು ಪ್ರತಿಯೊಬ್ಬ ತೀವ್ರವಾದಿ ಅಲ್ಲದ, ಮೃದು ಸ್ವಭಾವದ, ಜನರಿಗೆ ಹತ್ತಿರವಾಗಿರುವ ಮತ್ತು ಸರಳ ವ್ಯಕ್ತಿಯ ಮೇಲೆ ನಿಷಿದ್ಧವಾಗಿದೆ. ಅಂದರೆ ಇಂತಹವರು ಸ್ವರ್ಗಕ್ಕೇ ಅರ್ಹರಾಗಿದ್ದಾರೆ ಎಂಬುದು ಇದರ ಅರ್ಥವಾಗಿದೆ.

ಹಾಗೆಯೇ ಸಮಾಹತ್ ಗೆ ಅಲ್ಲಾಹನ ಮಾರ್ಗದ ಖರ್ಚು ಎಂಬ ಅರ್ಥವೂ ಇದೆ.

ಅಲ್ಲಾಹನ ಮಾರ್ಗದಲಿ ಖರ್ಚು ಮಾಡದ ಶ್ರೀಮಂತರ ಬಗ್ಗೆ ಪ್ರವಾದಿ (ಸ) ಹೇಳಿದರು.. ಸ್ಥಿತಿವಂತರಾಗಿದ್ದೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದವರು ಸಂಪೂರ್ಣ ನಾಶ ಹೊಂದುವರು. ತಮ್ಮ ಸಂಪತ್ತನ್ನು ಧಾರೆಯೆರೆಯುವವರು, ತಮ್ಮ ಮುಂದೆ ಇರುವವರಿಗೆ ನೀಡುವವರು, ತಮ್ಮ ಹಿಂದೆ ಇರುವವರಿಗೆ ನೀಡುವವರು ಮತ್ತು ತಮ್ಮ ಎಡಭಾಗದಲ್ಲಿರುವವರಿಗೆ ನೀಡುವವರು ವಿಜಯ ಹೊಂದುವರು .ನಂತರ ಹೇಳಿದರು. ಇಂತಹ ಧನಿಕರು ಬಹಳ ಕಡಿಮೆ .
ದಾನ ಮಾಡದ ಶ್ರೀಮಂತರಿಗೆ ನಾಶ ಎಂಬ ಪದವನ್ನು ಪ್ರವಾದಿ (ಸ) ಬಳಸಿರುವುದು ದಾನ ಎಷ್ಟು ಮಹತ್ವದ ವಿಷಯ ಎಂಬುದು ಮನದಟ್ಟಾಗುತ್ತದೆ.. ನನ್ನ ಬಳಿ ಉಹುದ್ ಪರ್ವತದಷ್ಟು ಚಿನ್ನ ಇದ್ದರೂ ನಾನು ಬಯಸುವುದೇನೆಂದರೆ ಮೂರು ರಾತ್ರಿಗಳಲ್ಲಿ ಅವುಗಳಲ್ಲಿ ಒಂದು ದೀನಾರ್ ಕೂಡ ನನ್ನಲ್ಲಿ ಉಳಿದಿರಬಾರದು. ನಾನು ಸಾಲ ಮರುಪಾವತಿಗಾಗಿ ತೆಗೆದಿರಿಸಿದ್ದರ ಹೊರತು ಎಂದು ಹ.ಅಬೂ ಹುರೈರಾ (ರ) ವರದಿ ಮಾಡಿದ ಸಹೀಹ್ ಬುಖಾರಿಯಲ್ಲಿ ಪ್ರವಾದಿ (ಸ) ಹೇಳಿರುವುದು ಕಂಡು ಬರುತ್ತದೆ. ಒಬ್ಬನಿಗೆ ಸಾಲ ಇಲ್ಲ ಎಂದಾದರೆ ಅವನು ದಾನ ಮಾಡುವ ವಿಷಯದಲ್ಲಿ ತಡಮಾಡಬಾರದು ಎಂಬ ಸೂಚನೆ ಈ ಹದೀಸಿನಲ್ಲಿದೆ.

ಹಾಗೆಯೇ ಕುರ್ ಆನಿನಲ್ಲಿ ತೋಟದ ಮಾಲಿಕನ ನ ಘಟನೆಯು ನಮಗೆ ಪಾಠವಾಗಿದೆ. ತೋಟದ ಮಾಲಿಕನು ಬಡವರು ಯಾರೂ ಬಾರದ ಹಾಗೆ ಕತ್ತಲೆಯಲ್ಲಿ ತೋಟಕ್ಕೆ ಹೋಗಿ ಫಸಲು ಕೊಯ್ಯಬೇಕೆಂಬ ತೀರ್ಮಾನ ಮಾಡುತ್ತಾನೆ. ತನ್ನ ಜನರೊಂದಿಗೆ ಸಮಾಲೋಚಿಸಿ ತೀರ್ಮಾನ ಮಾಡಿದಂತೆಯೇ ಬಡವರ ಕಣ್ಣು ತಪ್ಪಿಸಿ ರಾತ್ರಿ ವೇಳೆ ಫಸಲು ತೆಗೆಯಲು ಹೊರಡುತ್ತಾನೆ. ಆದರೆ ತೋಟವು ಸಂಪೂರ್ಣ ನಾಶವಾಗಿರುವುದನ್ನು ಕಂಡು ಅವನಿಗೆ ನಂಬಲಾಗಲಿಲ್ಲ. ಅವರ ಬಾಯಿಂದ ಬಂದ ಮಾತು. ನಾವು ದಾರಿ ತಪ್ಪಿದ್ದೇವೆ ಎಂದಾಗಿತ್ತು. ಅವರು ಹಾಗೆ ಹೇಳುವುದಾದರೆ ಅಲ್ಲಾಹನು ತೋಟದ ಸ್ವರೂಪವನ್ನು ಯಾವ ರೀತಿ ಬದಲಾಯಿಸಿ ಬಿಟ್ಟಿರಬಹುದು. ಅಂದಾಜಿಸಿ ನೋಡಿ. ಕೊನೆಗೆ ಅವರು ಪಶ್ಚಾತ್ತಾಪ ಪಟ್ಟರು ಎಂದು ಕುರ್ ಆನ್ ನ ಅಲ್ ಕಲಮ್ ಅಧ್ಯಾಯದಲ್ಲಿ ಬಂದಿದೆ. ಇದರಿಂದ ನಮಗೆ ತಿಳಿದು ಬರುವುದೇನೆಂದರೆ ಅಲ್ಲಾಹನು ಸಂಪತ್ತಿನ ಅನುಗ್ರಹವನ್ನು ನಮಗೆ ನೀಡಿದರೆ ನಾವು ಅದರಲ್ಲಿ ಬಡವರ ಪಾಲನ್ನು ನಿಶ್ಚಯಿಸಬೇಕು. ಇಲ್ಲದಿದ್ದರೆ ಅಲ್ಲಾಹನ ಕ್ರೋದಕ್ಕೆ ಪಾತ್ರರಾಗುತ್ತೇವೆ. ಅಲ್ಲಾಹನು ಸಂಪತ್ತನ್ನು ನಾಶ ಪಡಿಸುತ್ತಾನೆ.

ಸಮಾಹತ್ ನ ಇನ್ನೊಂದು ಅರ್ಥ ಹೃದಯ ವೈಶಾಲ್ಯತೆ.
ನಮ್ಮಲ್ಲಿ ಹೃದಯ ವೈಶಾಲ್ಯತೆ ಇಲ್ಲದೆ ಇರಲು ಮುಖ್ಯ ಕಾರಣ ನಮ್ಮ ಮಕ್ಕಳ ಮೇಲಿನ ಪ್ರೀತಿಯಾಗಿರುತ್ತದೆ.. ಅವರ ಭವಿಷ್ಯಕ್ಕಾಗಿ ಬೇಕಾದಷ್ಟು ಸಂಗ್ರಹಿಸಿಡಬೇಕೆಂಬುದು ನಮ್ಮ ಭಾವನೆಯಾಗಿರುತ್ತದೆ. ನಮ್ಮ ಯೋಜನೆ ಆಗಿರುತ್ತದೆ.. ಆದರೆ ಅಲ್ಲಾಹನ ತೀರ್ಮಾನ ಬೇರೆಯೇ ಆಗಿರುತ್ತದೆ.

ಪ್ರವಾದಿ (ಸ) ಹೇಳುತ್ತಾರೆ.. ಅಲ್ಲಾಹನು ಸಂಪತ್ತು ಮತ್ತು ಸಂತಾನಗಳನ್ನು ದಯಪಾಲಿಸಿದ ಇಬ್ಬರು ವ್ಯಕ್ತಿಗಳನ್ನು ಕರೆದು ಪ್ರಶ್ನಿಸುತ್ತಾನೆ. ನಾನು ನಿನಗೆ ದಯಪಾಲಿಸಿದ್ದ ಸಂಪತ್ತನ್ನು ನೀನು ಏನು ಮಾಡಿದೆ? ಅವನು ಹೇಳುವನು ನನ್ನ ಪ್ರಭೂ ಆ ಸಂಪತ್ತು ನನ್ನ ಸಂತಾನಗಳಿಗೆ ಬಿಟ್ಟಿದ್ದೇನೆ..ನನ್ನ ಬಳಿಕ ಅವರು ದಾರಿದ್ರ್ಯದಲ್ಲಿ ಸಿಲುಕಬಾರದೆಂದು ನಾನು ಭಾವಿಸಿದೆ. ಅಲ್ಲಾಹನು ಹೇಳುವನು ನೀನು ನಿಜಸ್ಥಿತಿಯನ್ನು ಅರಿತಿದ್ದರೆ ನೀನು ನಗುತ್ತಿರಲಿಲ್ಲ..ಅಳುತ್ತಿದ್ದೆ..ನೋಡು ನಿನ್ನ ಸಂತಾನಗಳು ದಾರಿದ್ರ್ಯದ ಜೀವನ ಸಾಗಿಸುತ್ತಿದೆ..

ಇನ್ನೊಬ್ಬನೊಡನೆ ಇದೇ ರೀತಿಯ ಪ್ರಶ್ನೆ ಕೇಳುವನು..ಅವನು ಹೇಳುವನು. ನನ್ನ ಪ್ರಭೂ ನೀನು ದಯಪಾಲಿಸಿದ್ದ ಸಂಪತ್ತನ್ನು ನಿನ್ನ ಮಾರ್ಗದಲ್ಲಿ ಖರ್ಚು ಮಾಡಿದೆ. ನನ್ನ ಸಂತಾನಗಳ ಬಗ್ಗೆ ನಿನ್ನ ಆಸರೆಯನ್ನು ನಂಬಿದೆ. ನೀನು ನನ್ನ ಮಕ್ಕಳನ್ನು ಹಾಳು ಮಾಡಲಾರೆ ಎಂಬ ನಂಬಿಕೆಯೊಂದಿಗೆ ಅವರನ್ನು ನಿನ್ನ ಕೃಪಾಶ್ರಯಕ್ಕೆ ಒಪ್ಪಿಸಿದೆ. ಆಗ ಅಲ್ಲಾಹನು ಹೇಳುವನು. ನಿನ್ನ ಸಂತಾನಗಳ ಬಗ್ಗೆ ನೀನು ಏನನ್ನು ನಂಬಿದ್ದೆಯೋ ನಿನ್ನ ನಂತರ ಅದನ್ನೇ ನಾನು ನೀಡಿದೆ. ನಿನ್ನ ಸಂತಾನ ಸಂಪನ್ನ ಹಾಗೂ ಸಂತೃಪ್ತಿಯ ಜೀವನ ಸಾಗಿಸುತ್ತಿದೆ..

ಆದ್ದರಿಂದ ಸಹೋದರಿಯರೇ ನಾವು ಮೂಮಿನ್ ಗಳಾಗಬೇಕಾದರೆ ಸಂಕುಚಿತ ಮನೋಭಾವದಿಂದ ದೂರವಿರಬೇಕು. ನಮಗೆ ಸಾಲ ಇಲ್ಲ ಎಂದಾಗಿದ್ದರೆ ನಮ್ಮ ಸಂಪತ್ತು ಅಪೇಕ್ಷಿತರ ಮೇಲೆ ಖರ್ಚು ಮಾಡಬೇಕು..

ಅಲ್ಲಾಹನು ಅತ್ತಗಾಬುನ್ ಅಧ್ಯಾಯದಲ್ಲಿ ಹೇಳುತ್ತಾನೆ..
ನಿಮ್ಮ ಸಂಪತ್ತು ಮತ್ತು ಸಂತತಿಗಳು ಒಂದು ಪರೀಕ್ಷೆಯಾಗಿದೆ. ಅತ್ಯುನ್ನತ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲೇ ಇದೆ. ಆದುದರಿಂದ ನಿಮ್ಮಿಂದ ಸಾಧ್ಯವಿರುವಷ್ಟು ಅಲ್ಲಾಹನನ್ನು ಭಯಪಡಿರಿ. ಮತ್ತು ಆಲಿಸಿರಿ. ಹಾಗೂ ಆಜ್ಙಾಪಾಲನೆ ಮಾಡಿರಿ. ಇದು ನಿಮಗೆ ಹಿತಕರವಾಗಿದೆ. ತಮ್ಮ ಮನಸ್ಸಿನ ಸಂಕುಚಿತತೆಯಿಂದ ಸುರಕ್ಷಿತರಾಗಿರುವವರು ಮಾತ್ರ ಯಶಸ್ವಿಗಳು. ನೀವು ಅಲ್ಲಾಹನಿಗೆ ಉತ್ತಮ ಸಾಲ ನೀಡಿದರೆ ಅವನು ನಿಮಗೆ ಎಷ್ಟೋ ಪಟ್ಟು ವರ್ಧಿಸಿ ಕೊಡುವನು ಮತ್ತು ನಿಮ್ಮ ತಪ್ಪುಗಳನ್ನು ಕ್ಷಮಿಸುವನು..

ಪ್ರವಾದಿ (ಸ) ಯಾವಾಗಲೂ ಪ್ರವಚನ ಮಾಡಿ ಮುಗಿದ ಬಳಿಕ ಪ್ರತ್ಯೇಕವಾಗಿ ಮಹಿಳೆಯರ ಬಳಿಗೆ ಹೋಗಿ ದಾನಧರ್ಮ ಮಾಡುವಂತೆ ಉಪದೇಶಿಸುತ್ತಿದ್ದರು ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ನಾವು ಮಾಡುವ ದಾನ ಅಲ್ಲಾಹನಿಗೆ ನಾವು ನೀಡುವ ಸಾಲ ಎಂದು ಹೇಳುವ ಮೂಲಕ ಅಲ್ಲಾಹನು ದಾನಿಗೆ ಯಾವ ರೀತಿಯ ಸ್ಥಾನಮಾನವನ್ನು ನೀಡುತ್ತಿದ್ದಾನೆ ಎಂಬುದನ್ನು ನಾವು ಅರ್ಥ ಮಾಡಬೇಕು.ಅತ್ಯುತ್ತಮ ದಾನ ಯಾವುದೆಂದರೆ ಪ್ರವಾದಿ (ಸ) ಹೇಳಿದರು.. ದಾನ ಮಾಡಿದವನ ಶ್ರೀಮಂತಿಕೆ ಬಾಕಿ ಉಳಿಯಬೇಕು. ಕೆಳಗಿನ ಕೈ ಗಿಂತ ಮೇಲಿನ ಕೈ ಉತ್ತಮವಾಗಿದೆ. ನಿಮ್ಮ ಮನೆಮಂದಿಯಿಂದಲೇ ಆರಂಭಿಸಿರಿ..ಇದುವೇ ಅತ್ಯುತ್ತಮ ದಾನವಾಗಿದೆ ..ಹಾಗೆಯೇ ನಿಂದ್ಯರೂ ನಿಸ್ಸಹಾಯಕರೂ ಆಗದಂತೆ ಖರ್ಚು ಮಾಡಬೇಕೆಂಬುದು ಅಲ್ಲಾಹನ ಆದೇಶವಾಗಿದೆ..ಇದನ್ನು ಕೂಡ ನಾವು ಮರೆಯಬಾರದು. ಅಲ್ಲಾಹ್ ಹೇಳಿರುವುದಾಗಿ ಪ್ರವಾದಿ (ಸ) ಹೇಳುತ್ತಾರೆ ನೀವು ನನ್ನ ಮೇಲೆ ಖರ್ಚು ಮಾಡಿರಿ. ನಾನು ನಿಮ್ಮ ಮೇಲೆ ಖರ್ಚು ಮಾಡುವೆನು.

🖋ಶಮೀರ ಜಹಾನ್

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …