Home / ಲೇಖನಗಳು / ಮುಹರ‍್ರಮ್ ತಿಂಗಳ ಉಪವಾಸದ ಮಹತ್ವ

ಮುಹರ‍್ರಮ್ ತಿಂಗಳ ಉಪವಾಸದ ಮಹತ್ವ

✍️ ಇಲ್ಯಾಸ್ ಮೌಲವಿ

ಖಂಡಿತವಾಗಿಯೂ ಮುಹರ‍್ರಮ್ ತಿಂಗಳಿಗೆ ವಿಶೇಷ ಮಹತ್ವವಿದೆ. ಎಂಬುದನ್ನು ಗ್ರಂಥಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ.  ರಮಝಾನಿನ ನಂತರ ಪ್ರವಾದಿವರ್ಯರು(ಸ) ಅತ್ಯಂತ ಹೆಚ್ಚು ಮಹತ್ವವನ್ನು ಕಲ್ಪಿಸಿರುವುದು ಅಶೂರಾ ಉಪವಾಸದ ಬಗ್ಗೆ ಎಂಬುದು ಆಧಾರ ಪ್ರಮಾಣಗಳಿಂದ ಅರಿಯಬಹುದು.

ಪ್ರವಾದಿವರ್ಯರು ಹಿಜಿರಾ ಯಾತ್ರೆಗಿಂತ ಮೊದಲೂ ಆ ನಂತರವೂ ನಿರಂತರ ಅಶೂರಾ  (ಮುಹರ‍್ರಮ್ 10) ಉಪವಾಸದ ವ್ರತ ಆಚರಿಸುತ್ತಿದ್ದರು. ಯಹೂದಿಗಳು ಕೂಡಾ ಅದೇ ದಿನ ಉಪವಾಸ ಆಚರಿಸುತ್ತಾರೆಂದೂ ಪ್ರವಾದಿ ಮೂಸಾ(ಅ)ರ ಚರ್ಯೆಯನ್ನು ಅನುಸರಿಸುತ್ತಾರೆಂದೂ ತನ್ನ ಕೊನೆಯ ಕಾಲದಲ್ಲಿ ಅರಿತ ಪ್ರವಾದಿವರ್ಯರು(ಸ) ಪ್ರವಾದಿ ಮೂಸಾ(ಅ)ರೊಂದಿಗೆ ಯಹೂದಿಗಳಿಗಿಂತ ಹೆಚ್ಚಿನ ನಂಟು ನಮಗಿದೆಯೆಂದೂ ಅದಕ್ಕಾಗಿ ಮುಂದಿನ ವರ್ಷ ನಾನು ಬದುಕಿದ್ದರೆ  ಒಂಬತ್ತರಂದು ಕೂಡಾ ಉಪವಾಸ ಆಚರಿಸುತ್ತೇನೆಂದು ಹೇಳಿದ್ದರು. ಆದರೆ ಮುಂದಿನ ವರ್ಷ ಮುಹರ‍್ರಮ್ ಆಗುವಾಗ ಪ್ರವಾದಿವರ್ಯರು(ಸ) ಇಹಲೋಕ ತ್ಯಜಿಸಿದ್ದರು. ಆದ್ದರಿಂದ ಈ ಉಪವಾಸ ಆಚರಿಸಲಾಗಲಿಲ್ಲ.
ಮುಹರ‍್ರಮ್ ತಿಂಗಳ ಉಪವಾಸದ ವಿಶೇಷತೆಗಳನ್ನು ಸಾರುವ ಸಹೀಹ್ ಆದ ಧಾರಾಳ ಹದೀಸ್‌ಗಳಿವೆ.

ಉದಾಹರಣೆಗೆ ಅಬೂ ಹುರೈರಾ(ರ)ರಿಂದ ವರದಿ: ಪ್ರವಾದಿ(ಸ) ಹೇಳುತ್ತಿದ್ದರು, ರಮಝಾನ್ ಉಪವಾಸದ ನಂತರ ಅತ್ಯಂತ  ಶ್ರೇಷ್ಟವಾದ ಉಪವಾಸ ಅಲ್ಲಾಹನ ತಿಂಗಳಾದ ಮುಹರ‍್ರಮ್ ತಿಂಗಳ ಉಪವಾಸವಾಗಿದೆ. ಫರ್ಝ್(ಕಡ್ಡಾಯ) ನಮಾಝ್‌ನ ನಂತರ  ಅತ್ಯಂತ ಶ್ರೇಷ್ಟತೆಯಿರುವ ನಮಾಝ್ ರಾತ್ರಿ ವೇಳೆ ಇರುವಂತಹ ನಮಾಝ್ ಆಗಿದೆ. (2812)

ಈ ಹದೀಸ್‌ನಿಂದ ಮುಹರ‍್ರಮ್ ತಿಂಗಳಲ್ಲಿ ಸುನ್ನತ್(ಐಚ್ಛಿಕ) ಉಪವಾಸದಲ್ಲಿ ಹೆಚ್ಚು ನಿರತರಾಗಿರುವುದು ಹೆಚ್ಚು ಪುಣ್ಯ ಪ್ರತಿಫಲಕ್ಕೆ  ಅರ್ಹವಾದುದು ಎಂಬುದನ್ನು ಅರ್ಥೈಸಬಹುದು. ಅಷ್ಟೆ ಅಲ್ಲ ಈ ತಿಂಗಳನ್ನು ಅಲ್ಲಾಹನ ಮಾಸ ಎಂದೂ ವರ್ಣಿಸಲಾಗಿದೆ. ಇದನ್ನು  ಬಹಳ ಗೌರವಾದರವುಳ್ಳ ತಿಂಗಳು ಎನ್ನಲಾಗಿದೆ. ಬಯ್ತುಲ್ಲಾಹ್ ಎಂದರೆ ಅಲ್ಲಾಹನ ಭವನ ಎಂದರ್ಥ. ನಾಖತುಲ್ಲಾಹ್ ಎಂದರೆ  ಅಲ್ಲಾಹನ ಒಂಟೆ ಎಂಬಂತೆ ಇದನ್ನು ವರ್ಣೀಸಲಾಗಿದೆ. ಆದ್ದರಿಂದ ಮುಹರ‍್ರಮ್ ತಿಂಗಳಲ್ಲಿ ಅತ್ಯಂತ ಹೆಚ್ಚು ಪುಣ್ಯ ಕರ್ಮ ಆರ್ಜಿಸಲು ಪ್ರಯತ್ನಿಸಬೇಕು. ಒಳಿತುಗಳಲ್ಲಿ ನಿರತನಾಗಿದ್ದುಕೊಂಡು ಕೆಡುಕಿನಿಂದ ದೂರವಿದ್ದು ಈ ತಿಂಗಳ ಗೌರವವನ್ನು ಕಾಪಾಡಬೇಕು.

ಇಬ್ನು ಅಬ್ಬಾಸ್(ರ) ಹೇಳುತ್ತಾರೆ. “ಅಶೂರಾ ಉಪವಾಸ ವ್ರತ ಆಚರಿಸಲು ಉತ್ಸಾಹ ತೋರಿಸಿ ಅದನ್ನು ಕಾಯುತ್ತಿರುವಂತೆ ಮತ್ತೊಂದು  ದಿನದ ಕಾತರದಲ್ಲಿರುವುದನ್ನು ನಾನು ಕಂಡಿಲ್ಲ.” (ಬುಖಾರಿ; 2006)

ಈ ಮಹತ್ವವನ್ನು ಅರಿತುಕೊಂಡು ತಮ್ಮ ಮನೆಯ ಪುಟ್ಟ ಮಕ್ಕಳನ್ನು ಕೂಡಾ ಉಪವಾಸದಲ್ಲಿ ನಿರತರಾಗಿರಲು ಸಹಾಬಿಗಳು  ಪ್ರೇರೇಪಿಸುತ್ತಿದ್ದರು. ಮುಅವ್ವಿದ್‌ರ ಮಗಳು ರುಬಿಯ್ಯಿ ಹೀಗೆ ಹೇಳುತ್ತಾರೆ. “ಅಶೂರಾ ದಿನದ ಪ್ರಭಾತದಲ್ಲಿ ಪ್ರವಾದಿವರ್ಯರು(ಸ) ಅನ್ಸಾರಿಗಳ ಗ್ರಾಮಗಳಿಗೆ ಹೀಗೆ ಹೇಳಿ ಜನರನ್ನು ಕಳುಹಿಸುತ್ತಿದ್ದರು- ಈ ದಿನ ಯಾರಾದರೂ ಉಪವಾಸ ವ್ರತಧಾರಿಗಳಾಗಿದ್ದರೆ ಅವರು ಆ ದಿವಸವನ್ನು ಪೂರ್ತಿಗೊಳಿಸಲಿ. ನಂತರ ನಾವು ನಿರಂತರ ಉಪವಾಸ ಆಚರಿಸತೊಡಗಿದೆವು. ನಮ್ಮ ಮಕ್ಕಳ ಜೊತೆಯೂ ಉಪವಾಸ ವ್ರತಧಾರಿಗಳಾಗಿರಲು ಶ್ರಮಿಸುತ್ತಿದ್ದೆವು. ರೋಮದಿಂದ ತಯಾರಿಸಿದ ಆಟದ ಸಾಮಾನುಗಳನ್ನು ಇಡುತ್ತಿದ್ದೆವು, ಆ ಮಕ್ಕ ಳಲ್ಲಿ  ಯಾರಾದರೂ ಅತ್ತು ಬಿಟ್ಟರೆ ಆ ಆಟದ ವಸ್ತುವಿನಿಂದ ಅವರನ್ನು ಆಟವಾಡಿಸುತ್ತಿದ್ದೆವು. ಅವರು ಉಪವಾಸದ ಪಾರಣೆಯವರೆಗೆ ಅದರ  ಆಟದಲ್ಲಿ ಅವರು ನಿರತರಾಗುತ್ತಿದ್ದರು. (ಬುಖಾರಿ- 1960)

ಪ್ರವಾದಿ(ಸ) ಹೇಳಿದರು, ಅರಫಾ ದಿವಸದ ಉಪವಾಸದ ಮುಖಾಂತರ ಅದರ ಹಿಂದಿನ ಒಂದು ವರ್ಷದ ಮತ್ತು ಆ ನಂತರದ ಒಂದು ವರ್ಷದ ಪಾಪವು ಕ್ಷಮಿಸಲ್ಪಡುವುದು. ಅಶೂರಾ ಉಪವಾಸದ ಮುಖಾಂತರ ಅದರ ಹಿಂದಿನ ಒಂದು ವರ್ಷದ ಪಾಪಗಳು  ಕ್ಷಮಿಸಲ್ಪಡುವುದು ಎಂದು ನಾನು ಅಲ್ಲಾಹನಿಂದ ನಿರೀಕ್ಷಿಸುತ್ತೇನೆ. (ಮುಸ್ಲಿಮ್: 2803)

ಇನ್ನೊಂದು ಪ್ರವಾದಿ ವಚನ ಹೀಗಿದೆ.
ಅಶೂರಾ ದಿನದ ಉಪವಾಸ ಅದರ ಹಿಂದಿನ ಒಂದು ವರ್ಷದ ಪಾಪಗಳ ಪ್ರಾಯಶ್ಚಿತ್ತವಾಗಿದೆ ಎಂದು ನಾನು ಭಾವಿಸುತ್ತೇನೆ.
(ಇಬ್ನು ಮಾಜಾ: 1738, ಮುಸ್ಲಿಮ್: 2803)

ಮುಹರ‍್ರಮ್ ಉಪವಾಸದ ಅತ್ಯಂತ ಉತ್ತಮವಾದ ರೂಪ ಹೇಗೆ?
ಮುಹರ‍್ರಮ್ ಉಪವಾಸಕ್ಕೆ ಸಂಬಂಧಿಸಿ ಬಂದ ಎಲ್ಲಾ ವರದಿಗಳನ್ನು ವಿವರವಾಗಿ ಚರ್ಚಿಸಿದ ಬಳಿಕ ಇಮಾಮ್ ಇಬ್ನುಲ್ ಖಯ್ಯಿಮ್ ಹೀಗೆ ದಾಖಲಿಸಿದ್ದಾರೆ. ಮುಹರ‍್ರಮ್ ಉಪವಾಸದ ಕ್ರಮವು ಮೂರು ಹಂತಗಳಲ್ಲಿವೆ. ಅದರಲ್ಲಿ ಅತ್ಯಂತ ಶ್ರೇಷ್ಟತೆಯಿರುವುದು ಮುಹರ‍್ರಮ್ ಹತ್ತರ ಹಿಂದಿನ ಮತ್ತು ನಂತರ ದಿನವನ್ನೂ ಸೇರಿಸಿ ಉಪವಾಸ ವ್ರತ ಆಚರಿಸುವುದಾಗಿದೆ. ಅದರ ನಂತರ ಮುಹರ‍್ರಮ್  ಒಂಬತ್ತು ಮತ್ತು ಹತ್ತರಂದು ಉಪವಾಸ ವ್ರತಧಾರಿಯಾಗುವುದು ಅದರ ಶ್ರೇಷ್ಟತೆಯಲ್ಲಿ ಸೇರಿದೆ ಎಂದಿದೆ ಮತ್ತು ಶ್ರೇಷ್ಟತೆಯ  ಮೂರನೇ ಹಂತ ಮುಹರ‍್ರಮ್ ಹತ್ತರಂದು ಮಾತ್ರ ಉಪವಾಸ ಆಚರಿಸುವುದಾಗಿದೆ. (ಸಾದುಲ್ ಮುಆದ್) ಇಮಾಮ್ ಇಬ್ನು ಹಜರ್ ಅಲ್  ಅಸ್ಖಲಾನಿ ಇದೇ ಅಭಿಪ್ರಾಯವನ್ನು ದಾಖಲಿಸಿದ್ದಾರೆ (ಫತ್ಹುಲ್ ಬಾರಿ)

ಅನು: ಅಬೂ ಸಲ್ವಾನ್

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …