Home / ಲೇಖನಗಳು / ಇಸ್ಲಾಮೋಫೋಬಿಯಾ

ಇಸ್ಲಾಮೋಫೋಬಿಯಾ

ಸಂಗ್ರಹ: ಎನ್.ಎಂ. ಪಡೀಲ್

ಅನ್ ಅನಸಿಬ್ನಿ ಮಾಲಿಕಿನ್ ರದಿಯಲ್ಲಾಹು ಅನ್‍ಹು ಕಾಲ; ಕಾಲ ರಸೂಲುಲ್ಲಾಹಿ(ಸ) ಯಅïತೀ ಅಲನ್ನಾಸಿ ಝಮಾನುನ್ ಅಸ್ಸಾಬಿರು ಫೀಹಿಮ್ ಅಲಾ ದೀನಿಹಿ ಕಲ್‍ಕಾಬಿದಿ ಅಲಲ್ ಜಮ್‍ರಿ.  (ರವಾಹು ತಿರ್ಮಿದಿ)
ಪ್ರವಾದಿಯವರು(ಸ) ಹೇಳಿದರು: ಜನರಿಗೆ ಒಂದು ಕಾಲ ಬರಲಿದೆ. ತನ್ನ ಧರ್ಮದಲ್ಲಿ ಓರ್ವರು ಸ್ಥಿರವಾಗಿ ನಿಲ್ಲುವುದು ಬೆಂಕಿಯ ಕೆಂಡವನ್ನು ಕೈಯಲ್ಲಿ ಹಿಡಿಯುವುದಕ್ಕೆ ಸಮಾನವಾಗಿರುತ್ತದೆ.

ಈ ಹದೀಸ್ ಇಸ್ಲಾಮ್ ಧರ್ಮವನ್ನು ಅನುಸರಿಸಿ, ಅದರ ಮೌಲ್ಯಗಳನ್ನು ರೂಢಿಸಿ ಬದುಕಬೇಕೆಂದು ಬಯಸುವವರಿಗೆ ಈ ಲೋಕವೆಂಬುದು ಸುಖದ ಸುಪ್ಪತ್ತಿಗೆಯಾಗಿರುವುದಿಲ್ಲ. ಬದಲಾಗಿ ಹಲವಾರು ಕಷ್ಟ-ನಷ್ಟಗಳನ್ನು ಅವರು ಸಹಿಸಬೇಕಾಗಿ ಬರುತ್ತದೆ ಎಂಬುದನ್ನು ಸುಂದರವಾಗಿ ಸೂಚಿಸಿದೆ.

ಇಂದು ದೇಶದ ಪರಿಸ್ಥಿತಿಯನ್ನು ನೋಡುವಾಗ ಮುಸ್ಲಿಮರ ಟೋಪಿ, ಗಡ್ಡ, ಪರ್ದಾ, ಮುಸ್ಲಿಮ್ ನಾಮವನ್ನಿರಿಸಿಕೊಂಡರೆ ನಿರ್ಭಯವಾಗಿ ಹೊರಗಿಳಿದು ಸಂಚರಿಸದಂತಹ ಪರಿಸ್ಥಿತಿ ಇದೆ. ಅವರ ಮೇಲೆ ನಡೆಯುವ ಆಕ್ರಮಣಗಳು, ಗುಂಪು ಹತ್ಯೆ, ಗುಂಡು ಹಾರಿಸಿ ಕೊಲ್ಲುವುದು, ತೀವ್ರವಾಗಿ ಹಿಂಸಿಸುವುದು ಇವೆಲ್ಲವನ್ನೂ ನಮ್ಮ ದೇಶದಲ್ಲೂ, ಇತರ ಕಡೆಗಳಲ್ಲೂ ಅನುಭವಿಸುತ್ತಿದ್ದೇವೆ.

`ಇಸ್ಲಾಮೋಫೋಬಿಯಾ’ ಎಂಬ ಹೆಸರು ಇಂದು ಬಹಳವಾಗಿ ಚಾಲ್ತಿಯಲ್ಲಿದೆ. ಇಸ್ಲಾಮೋಫೋಬಿಯಾ ಸೃಷ್ಟಿಸಿದವರು ತಮ್ಮ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಎಂದೇ ಹೇಳ ಬಹುದು. ಇಸ್ಲಾಮಿನ ಬಗ್ಗೆ ಪೂರ್ವಗ್ರಹಪೀಡಿತ ಮನೋಭಾವವನ್ನು ಬೆಳೆಸುವ ಅವರನ್ನು ಇತರರಿಗಿಂತ ಭಿನ್ನರಾಗಿ ಪ್ರಚುರ ಪಡಿಸುವುದೇ ಇಸ್ಲಾಮೋಫೋಬಿಯಾ ಇಸ್ಲಾಮ್ ಎಂದರೆ ಭಯದಿಂದ ನೋಡಬೇಕಾದ ಒಂದು ಧರ್ಮ. ಅದು ಇತರ ಧರ್ಮ, ರಾಷ್ಟ್ರ, ಜಾತಿಗಳಿಗೆ ಒಂದು ಬೆದರಿಕೆಯಾಗಿದೆ ಎಂಬ ಒಂದು ಉದ್ದೇಶವೇ ಇಸ್ಲಾಮೋಫೋಬಿಯಾದ ಗುರಿ.

1980ರ ಮಧ್ಯದಲ್ಲಿ ಈ ಪದವು ರೂಪುಗೊಂಡಿದ್ದರೂ, 2001ರ ಸೆಪ್ಟೆಂಬರ್ 11 ರಲ್ಲಿ ವಲ್ರ್ಡ್ ಟ್ರೇಡ್ ಸೆಂಟರ್ ಸ್ಫೋಟದೊಂದಿಗೆ ಇದು ವ್ಯಾಪಕ ಪ್ರಚಾರ ಪಡೆಯಿತು. 1997ರಲ್ಲಿ ಬ್ರಿಟಿಷ್ ಸಂಘಟನೆಯೊಂದು ಈ ಪದವನ್ನು ವ್ಯಾಖ್ಯಾನಿಸಿದ್ದು ಹೀಗೆ. ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಭಯ ಹುಟ್ಟಿಸುವುದು, ಅವರನ್ನು ಸಾಮಾಜಿಕ, ರಾಜಕೀಯ, ಸಾರ್ವಜನಿಕ ಜೀವನದಿಂದ ದೂರವುಳಿಸುವುದು  ಅವರೊಂದಿಗೆ ಅಸಮಾನತೆ ತೋರಿಸುವುದು, ಇಸ್ಲಾಮ್ ಶಾಂತಿಯ ಧರ್ಮವಲ್ಲ, ಬದಲಾಗಿ ಹಿಂಸೆ ಅಶಾಂತಿಗಳ ಧರ್ಮ… ಎಂಬ ರೀತಿಯಲ್ಲಿ ಇಸ್ಲಾಮೋಫೋಬಿಯಾ ವ್ಯಾಖ್ಯಾನಿಸಲ್ಪಟ್ಟಿತು.

ಭಾರತದಲ್ಲಿ ಇಸ್ಲಾಮ್‍ನ ವಿರುದ್ಧ ಹಲವು ಅಪಪ್ರಚಾರಗಳು ಇಸ್ಲಾಮಿನ ವಿರುದ್ಧ ನಡೆಯುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಶೇಕಡಾ 80 ರಷ್ಟಿರುವ ಹಿಂದೂ ಜನಸಂಖ್ಯೆಯನ್ನು ಮುಸ್ಲಿಮರ ಜನಸಂಖ್ಯೆಯು ಮೀರಿಸುತ್ತಿದೆ ಎಂಬಂತಹ ಯಾವುದೇ ತಲೆ ಬುಡವಿಲ್ಲದ ಆಪಾದನೆಗಳು. ಅದೇ ರೀತಿ ಲವ್ ಜಿಹಾದ್, ಫುಡ್ ಜಿಹಾದ್ ಹೀಗೆ ಹಲವಾರು ಜಿಹಾದ್‍ಗಳನ್ನು ಇಸ್ಲಾಮ್‍ನ ತಲೆಗೆ ಕಟ್ಟುವುದು. ಪರ್ದಾ ಮತ್ತು ಗಡ್ಡ ಭಯೋತ್ಪಾದನೆಯ ಸಂಕೇತವೆಂದು ಬಿಂಬಿಸುವಂತಹದು ಇಂತಹ ಅಪಪ್ರಚಾರಗಳಲ್ಲಿ ಇಸ್ರೇಲ್‍ನಂತಹ ಇಸ್ಲಾಮ್ ವಿರೋಧಿ ಶಕ್ತಿಗಳು ಮಿಲಿಯನ್ ಡಾಲರ್ ಹಣವನ್ನು  ವ್ಯಯಿಸುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಇಸ್ಲಾಮ್‍ಗೆ ಸಂಬಂಧಿಸಿದಂತೆ ಇದೇನೂ ಹೊಸ ವಿಚಾರವಲ್ಲ. ಇಸ್ಲಾಮ್‍ನ ಆರಂಭದಿಂದಲೇ ಎಲ್ಲಾ ಪ್ರವಾದಿಗಳ ಕಾಲದಲ್ಲೂ ಇದ್ದ ವಿರೋಧಿಗಳು ಇಸ್ಲಾಮೋಫೋಬಿಯಾ ವಕ್ತಾರರಾಗಿದ್ದರು.

ಮೂಸಾ(ಅ)ರ ಕಾಲದ ಕುರಿತು ಸೂರಃ ಅಅïರಾಫ್‍ನಲ್ಲಿ ಅಲ್ಲಾಹನು ಹೇಳುತ್ತಾನೆ, “ಫಿರ್‍ಔನ್‍ನ ಸರದಾರರು ಹೇಳಿದರು, ಮೂಸಾ ಮತ್ತು ಅವನ ಇಸ್ರಾಯೀಲ್ ಸಮುದಾಯವನ್ನು ಈ ದೇಶದಲ್ಲಿ ಕ್ಷೋಭೆಯುಂಟು ಮಾಡಲು ಬಿಟ್ಟು ಬಿಡುತ್ತೀರಾ” ಎಂದು ಫರೋವನೊಡನೆ ಕೇಳುತ್ತಾರೆ. ಅಂದರೆ ಸಮಾಜದಲ್ಲಿ ಅವರು ಕ್ಷೋಭೆ ಉಂಟು ಮಾಡುವ ಜನರು ಎಂಬ ಭಾವನೆಯನ್ನು ಮೂಡಿಸುವುದು ಅದರ ಉದ್ದೇಶವಾಗಿತ್ತು. ಆಗ ಫರೋವ ಹೇಳುತ್ತಾನೆ: “ನಾನು ಅವರ ಗಂಡು ಮಕ್ಕಳನ್ನು ಕೊಂದು ಮುಗಿಸುತ್ತೇನೆ. ಅವರ ಸ್ತ್ರೀಯರನ್ನು ನಮ್ಮ ಆವಶ್ಯಕತೆಗಳಿಗಾಗಿ ಬದುಕಲು ಬಿಡುತ್ತೇವೆ.”

ಹೀಗೆ ಎಲ್ಲಾ ಪ್ರವಾದಿಗಳ ಕಾಲದಲ್ಲೂ ಇಸ್ಲಾಮೋಫೋಬಿಯಾ ನಮಗೆ ಕಂಡು ಬರುತ್ತದೆ. ಪ್ರವಾದಿ ಮುಹಮ್ಮದ್(ಸ)ರ ಕುರಿತು ಸೂರಃ ಸಾದ್‍ನಲ್ಲಿ ಅಲ್ಲಾಹನು ಕುರೈಶಿಗಳ ಕುರಿತು ಹೇಳುತ್ತಾನೆ. ಪ್ರವಾದಿವರ್ಯ(ಸ)ರನ್ನು ಈ ಲೋಕಕ್ಕೆ ಮುನ್ನೆಚ್ಚರಿಕೆ ನೀಡಲು ಕಳಿಸಲಾಗಿದೆ ಎಂದಾಗ ಇವನೊಬ್ಬ ಸುಳ್ಳುಗಾರ, ಮಾಟಗಾರ ಎನ್ನಲಾಯಿತು. ಅದೇ ರೀತಿ ನೀನೋರ್ವ ಹುಚ್ಚ (ನವೂದು ಬಿಲ್ಲಾ) ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಂದಿಸಲಾಯಿತು. ಸತ್ಯವಿಶ್ವಾಸಿಗಳ ಕುರಿತು ನಿಷೇಧಿಗಳು ಇವರು ದಾರಿಗೆಟ್ಟವರು ಎಂದು ಹೇಳಿದರು. ಈಗ ಮುಸ್ಲಿಮರನ್ನು ಭಯೋತ್ಪಾದಕರು ಎನ್ನಲಾಗುತ್ತದೆ.

ಕುರ್‍ಆನ್‍ನ ಪಾರಾಯಣವನ್ನು ನೀವು ಆಲಿಸಬಾರದು. ಅದು ಓದುವುದು ಕಂಡರೆ ಬೇರೆ ಸದ್ದುಗದ್ದಲ ಮಾಡಿ ಅವರನ್ನು ಜನರಿಗೆ ಕೇಳದಂತೆ ಮಾಡಬೇಕು. ಅಂತಾದರೆ ಮಾತ್ರ ಇಸ್ಲಾಮ್‍ನ ವಿರುದ್ಧ ಯಶಸ್ವಿಯಾಗಲು ಸಾಧ್ಯ ಎಂದು ವಿರೋಧಿಗಳು ಹೇಳಿದರು. ಹೀಗೆ ಹಲವಾರು ಸೂಕ್ತಗಳ ಮೂಲಕ ಅಲ್ಲಾಹನು ಇಸ್ಲಾಮೋಫೋಬಿಯಾದ ಕುರಿತು ತಿಳಿಸಿದ್ದಾನೆ.

ಅಲ್ಲಾಹನು ಸೂರಃ ಅಸ್ಸಫ್ಫ್ ನಲ್ಲಿ ಹೇಳುತ್ತಾನೆ, “ಇವರು ಅಲ್ಲಾಹನ ಜ್ಯೋತಿಯನ್ನು ತಮ್ಮ ಬಾಯಿಯಿಂದ ಊದಿ ನಂದಿಲಿಚ್ಛಿಸುತ್ತಾರೆ ಮತ್ತು ಅಲ್ಲಾಹನು ತನ್ನ ಜ್ಯೋತಿಯನ್ನು ಸಂಪೂರ್ಣವಾಗಿ ಹಬ್ಬಿಸಿಯೇ ತೀರಲು ನಿರ್ಧರಿಸಿದ್ದಾನೆ. ಇದು ಸತ್ಯನಿಷೇಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.” (61:8)
ಇಸ್ಲಾಮೋಫೋಬಿಯಾ ಮೂಲಕ ಇಸ್ಲಾಮನ್ನು ನಿರ್ನಾಮ ಮಾಡಲು ಯತ್ನಿಸಿದರೂ ಅದು ಫಲಕಾರಿಯಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಲ್ಲಿ ನೀಡಿದ್ದಾನೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …