Home / ಲೇಖನಗಳು / “ಮಾಲ್ಕಮ್ ಎಕ್ಸ್” : ಹಜ್ ಅನುಭವ

“ಮಾಲ್ಕಮ್ ಎಕ್ಸ್” : ಹಜ್ ಅನುಭವ

ಆಫ್ರೊ ಅಮೇರಿಕನ್ ಕರಿಯನ್ನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು “ಮಾಲ್ಕಮ್ ಎಕ್ಸ್” ಅಥವಾ ಅಲ್‌ಹಾಜ್ ಮಲಿಕ್ ಅಲ್-ಶಾಬಾಜ್.

1946ರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಾಲ್ಕಮ್ ಜೈಲು ಸೇರಿದ ಮೇಲೆ ಸಹೋದರ ರಿಜಿನಾಲ್ಡ್ ಮಾಲ್ಕಮ್‌ನ ಮೂಲಕ ನೇಷನ್ ಆಫ್ ಇಸ್ಲಾಮ್‌ನ ನಾಯಕ ಕರಿಯನ್ನರ ಪ್ರವಾದಿ ಎಂದು ಗುರುತಿಸಿದ್ದ ತೀವ್ರ ಇಸ್ಲಾಮೀ ಚಿಂತಕ ಎಲಿಜಾ ಮುಹಮ್ಮದ್‌ರ ಪರಿಚಯವುಂಟಾಗಿ ನೇಷನ್ ಆಫ್ ಇಸ್ಲಾಮ್ ಸೇರಿದರು. ನಂತರ ಅವರು ಅದರ ಅತ್ಯುನ್ನತ ನಾಯಕನಾಗಿ ಹೊರ ಹೊಮ್ಮಿದರು.

1960ರ ಆರಂಭದಲ್ಲಿ ಎಲಿಜಾ ಮುಹಮ್ಮದರ ತೀವ್ರ ಹಿಂಸಾ ರೂಪದ ಆಲೋಚನೆಯಿಂದ ಭ್ರಮನಿರಸನಗೊಂಡು ಇಸ್ಲಾಮಿನ ಮೂಲಭೂತ ಸಿದ್ಧಾಂತದ ಕಡೆಗೆ ಹೆಚ್ಚು ಒಲವು ತೋರಿದರು. ಇಸ್ಲಾಮಿನ ಉದಾರತೆ ಮತ್ತು ಸಮನ್ವಯತೆಯನ್ನು ತಿಳಿಯಲು ಬಯಸಿದರು. ನೇಷನ್ ಆಫ್ ಇಸ್ಲಾಮ್‌ನ ವಿಭಜನಾ ಧೋರಣೆಯನ್ನು ವಿರೋಧಿಸಿದರು. ಸರ್ವರನ್ನೂ ಒಳಗೊಂಡ ಮಾನವ ಹಕ್ಕು ಹೋರಾಟಕ್ಕೆ ನಾಂದಿ ಹಾಡಿದರು.

1964 ಎಪ್ರಿಲ್ 13 ರಂದು ಅಮೇರಿಕಾದಿಂದ ಹಜ್ಜ್ ನಿರ್ವಹಣೆಗಾಗಿ ಮಕ್ಕಾದ ಕಡೆ ಯಾತ್ರೆ ಮಾಡಿದರು. ಆ ಯಾತ್ರೆಯಲ್ಲಿ ಓರ್ವ ನೀಗ್ರೊ ಅಮೇರಿಕನ್ ಅನುಭವಿಸಿದುದನ್ನು ಅವರು ಹೀಗೆ ಹಂಚಿಕೊಂಡಿದ್ದಾರೆ :

“ಹ. ಇಬ್ರಾಹೀಮ್(ಅ), ಮುಹಮ್ಮದ್(ಸ) ಹಾಗೂ ವೇದ ಗ್ರಂಥದಲ್ಲಿರುವ ಇತರ ಪ್ರವಾದಿಗಳು ಮೆಚ್ಚಿದ ಅತೀ ಪುರಾತನ ಪುಣ್ಯ ಭೂಮಿಯಲ್ಲಿ ವಿವಿಧ ವರ್ಣದ ವಂಶದ ಜನರಿಗೆ ನೀಡುತ್ತಾ ಬಂದಿರುವ ಸಮಾನತೆ, ಆತಿಥ್ಯ ಮರ್ಯಾದೆಗಳನ್ನು ಈ ಮುಂಚೆ ನಾನೆಲ್ಲೂ ನೋಡಿರಲಿಲ್ಲ. ಕಳೆದ ಒಂದು ವಾರದಿಂದ ಜನರು ತೋರಿಸಿದ ಉದಾರತೆಯ ಎದುರು ನಾನು ಸ್ಥಂಬೀಭೂತನಾಗಿರುವೆ.

ಅಲ್ಲಾಹನ ಅಪಾರವಾದ ಅನುಗ್ರಹದಿಂದ ಪುಣ್ಯ ನಗರವಾದ ಮಕ್ಕವನ್ನು ಸಂದರ್ಶಿಸುವ ಅವಕಾಶ ಒದಗಿತು. ಮುಹಮ್ಮದ್ ಎಂಬ ಹೆಸರಿನ ಯುವ `ಮುತವ್ವ'(ಧರ್ಮ ಪಂಡಿತ)ನ ಜೊತೆಗೂಡಿ ಏಳು ಬಾರಿ`ಕಅಬ’ಕ್ಕೆ ಪ್ರದಕ್ಷಿಣೆ ಹಾಕಿದೆ. ಝಂ ಝಂ ಭಾವಿ ನೀರನ್ನು ಕುಡಿದೆ. ಸಫಾ ಮರ್ವಾ ಬೆಟ್ಟಗಳ ನಡುವಿನ ಹಾದಿಯಲ್ಲಿ ಏಳು ಬಾರಿ ನಡೆದೆ. ಪ್ರಾಚೀನ ನಗರವಾದ ಮಿನಾದಲ್ಲೂ, ಅರಫಾದಲ್ಲೂ ತಂಗಿ ದೀರ್ಘವಾಗಿ ಪ್ರಾರ್ಥಿಸಿದೆ.

ಲೋಕದ ನಾನಾ ಕಡೆಗಳಿಂದ ಆಗಮಿಸಿದ ಸಾವಿರಾರು ಯಾತ್ರಿಕರು ಮಕ್ಕಾದಲ್ಲಿ ಸೇರಿದ್ದರು. ನೀಲಿ ಕಣ್ಣಿನವ, ಗುಂಗುರು ಕೂದಲನ್ನು ಹೊಂದಿದವನಿಂದ ಮೊದಲ್ಗೊಂಡು ಕಪ್ಪು ಚರ್ಮದ ಆಫ್ರಿಕಾದ ನೀಗ್ರೋಗಳವರೆಗೆ ವ್ಯತ್ಯಸ್ತ ಜನರಿದ್ದರು. ನಾವೆಲ್ಲರೂ ಒಟ್ಟಾಗಿ ಒಂದೇ ಕರ್ಮವನ್ನು (ಹಜ್ಜ್) ಅನುಷ್ಠಾನಗೊಳಿಸಲು ಸೇರಿದವರಾಗಿದ್ದೆವು. ಐಕ್ಯತೆ, ಸಾಹೋದರ್ಯದ ಚೈತನ್ಯವನ್ನು ಪ್ರಕಟಗೊಳಿಸುವುದಾಗಿದೆ ಹಜ್ಜ್ ಕರ್ಮ ಎಂದು ನಾನರಿತುಕೊಂಡೆ.

ಬಿಳಿಯರು ಮತ್ತು ಬಿಳಿಯರಲ್ಲದವರ ನಡುವೆ ಐಕ್ಯತೆ ಯಾವ ಕಾಲದಲ್ಲೂ ಸಾಧ್ಯವಿಲ್ಲವೆಂಬ ನಿಲುವು ನನ್ನದಾಗಿತ್ತು. ಇದು ಅಮೇರಿಕನ್ ಕೊಡುಗೆ. ಅಮೇರಿಕಾ ಇಸ್ಲಾಮನ್ನು ಅರ್ಥೈಸಬೇಕಾದ ಅಗತ್ಯವಿದೆ. ಏಕೆಂದರೆ, ಸಮಾಜದಲ್ಲಿ ನೆಲೆಯೂರಿರುವ ವಂಶೀಯ ಸಮಸ್ಯೆಗಳನ್ನು ಅಳಿಸಿ ಹಾಕುವ ಸಾಮರ್ಥ್ಯ ಇಸ್ಲಾಮ್‌ಗೆ ಮಾತ್ರ ಇದೆ.

ಮುಸ್ಲಿಮ್ ಜಗತ್ತಿನೊಳಗಿನ (ಅರಬ್ ರಾಷ್ಟ್ರದಲ್ಲಿ) ಯಾತ್ರೆಯಲ್ಲಿ ಅಮೇರಿಕದ ಬಿಳಿಯರೊಂದಿಗೆ ನಾನು ಸಂಭಾಷಣೆಯಲ್ಲಿ ಏರ್ಪಡುತ್ತಲೂ ಅವರೊಂದಿಗೆ ಊಟ ಮಾಡುತ್ತಲೂ ಇದ್ದೆನು. ಅವರ ಮನಸ್ಸಿನಿಂದ ನಾವು ಬಿಳಿಯನ್ನರು ಎಂಬ ಅಹಂಭಾವವನ್ನು ಇಸ್ಲಾಮ್ ಅಳಿಸಿ ಹಾಕಿತ್ತು. ಯಾವುದೇ ವರ್ಣ ಭೇದವಿಲ್ಲದೆ ತಾರತಮ್ಯವಿಲ್ಲದೆ ಬಿಳಿಯನ್ನರು ಮತ್ತು ಕರಿಯನ್ನರು ಸಹೋದರತೆಯಿಂದಿರುವುದನ್ನು ನಾನೆಲ್ಲಿಯೂ ನೋಡಿರಲಿಲ್ಲ. ಇದು ನನಗೆ ಹೊಸ ಅನುಭವವಾಗಿತ್ತು. ನನ್ನ ಮಾತಿನಿಂದ ನಿಮಗೆ ಆಶ್ಚರ್ಯವುಂಟಾಗಬಹುದು. ಇದು ಹಜ್ ಯಾತ್ರೆಯಲ್ಲಿ ಕಂಡ ಸತ್ಯವಾಗಿದೆ.

ಈ ವಿಶಾಲ ಮನೋಭಾವದಿಂದಾಗಿ ನಾನು ಸ್ವತಃ ತಿದ್ದಿಕೊಂಡೆ. ತೀವ್ರ ನಿಲುವಿನಿಂದ ಹಿಂದೆ ಸರಿಯಲು ನಿರ್ಬಂಧಿತನಾದೆ.
ಮುಸ್ಲಿಮ್ ಜಗತ್ತಿನಲ್ಲಿ ಕಳೆದ ಹನ್ನೊಂದು ದಿವಸವೂ ನಾವೆಲ್ಲರೂ ಜೊತೆಯಾಗಿ ಪ್ರಾರ್ಥಿಸಿದೆವು. ಒಂದೇ ತಟ್ಟೆಯಲ್ಲಿ ಊಟ ಮಾಡಿದೆವು, ಒಂದೇ ಲೋಟೆಯಿಂದ ನೀರು ಕುಡಿದೆವು. ಒಂದೇ ಬಿಡಾರದಲ್ಲಿ ಮಲಗಿದೆವು. ನನ್ನ ಜೊತೆಗಾರರಲ್ಲಿ ನೀಲಿಯಲ್ಲಿ ಕಡು ನೀಲಿ ಕಣ್ಣಿನವರೂ, ಬಂಗಾರ ಕೂದಲಿನವರೂ, ಅತೀ ಬಿಳಿ ಚರ್ಮದವರೂ ಇದ್ದರು. ಬಿಳಿಯನ್ನರಾದ ಮುಸ್ಲಿಮರ ನೋಟದಲ್ಲಾಗಲಿ, ವರ್ತನೆಯಲ್ಲಾಗಲಿ, ಕರ್ಮದಲ್ಲಾಗಲಿ, ಮಾತಿನಲ್ಲಾಗಲಿ ಯಾವ ತಾರತಮ್ಯವನ್ನೂ ನಾನು ಕಾಣಲಿಲ್ಲ. ನೈಜೀರಿಯಾ, ಸುಡಾನ್, ಘಾನಾ, ಆಫ್ರಿಕನ್ ಮುಸ್ಲಿಮರು ನನ್ನಲ್ಲಿ ತೋರಿದ ಆತ್ಮೀಯತೆ ಅಗಾಧವಾದುದು.

ನಾವೆಲ್ಲರೂ ಸಹೋದರರಾಗಿದ್ದೆವು. ದೇವರ ಮೇಲಿದ್ದ ನಂಬಿಕೆಯೇ ಅವರ ಮನಸ್ಸಿನಿಂದ, ವರ್ತನೆಯಿಂದ, ಮಾತಿ ನಿಂದ `ಬಿಳಿಯನ್ನರು’ ಎಂಬ ಅಹಂಭಾವವನ್ನು ತೆಗೆದು ಹಾಕಿತ್ತು.

ವರ್ಣಗಳ ಭಿನ್ನತೆಯಿಂದ ಜನರನ್ನು ತೂಗಿ ಅಳೆಯುವುದು, ಅವರಿಗೆ ತೊಂದರೆ ಕೊಡುವುದು, ವಿಷಮವನ್ನುಂಟು ಮಾಡುವುದನ್ನು ಕೊನೆಗೊಳಿಸಲು ಅಮೇರಿಕನ್ ಬಿಳಿಯರಿಗೆ ಸಾಧ್ಯವಿದೆ.

ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿಲ್ಲವೆಂಬಂತೆ ಅಮೇರಿಕಾದಲ್ಲಿ ವಂಶೀಯತೆ ಹರಡಿಕೊಂಡಿದೆ. ವಿನಾಶಕಾರಿಯಾದ ಈ ಸಮಸ್ಯೆಗೆ ಪರಿಹಾರವೇನೆಂದರೆ ಅಮೇರಿಕಾದ ಕ್ರೈಸ್ತ ಬಿಳಿಯರ ಹೃದಯವು ಕ್ಷಮಾ ರೂಪವನ್ನು ತಾಳಬೇಕು. ಆಸನ್ನವಾಗುವ ದುರಂತಗಳಿಂದ ಈ ಮೂಲಕ ಅಮೇರಿಕಾವನ್ನು ರಕ್ಷಿಸಲು ಸಾಧ್ಯವಾಗಬಹುದು. ವಂಶೀಯತೆಯೂ ಇದೇ ರೀತಿಯ ವಿನಾಶವನ್ನು ಜರ್ಮನಿಯಲ್ಲಿ ಉಂಟು ಮಾಡಿತ್ತು. ಕೊನೆಯದಾಗಿ ಜರ್ಮನಿ ಸ್ವಯಂ ನಾಶ ಹೊಂದಿತು.

ಅಮೇರಿಕಾದ ಕರಿಯರು ಮತ್ತು ಬಿಳಿಯರ ನಡುವೆ ಏನು ನಡೆಯುತ್ತಿದೆ? ಪುಣ್ಯ ಭೂಮಿಯಲ್ಲಿ ಕಳೆದ ಒಂದೊಂದು ನಿಮಿಷಗಳೂ ಪ್ರಸ್ತುತ ಘಟನೆಗಳನ್ನು ಹೆಚ್ಚಾಗಿ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅವಲೋಕಿಸಲು ನನ್ನನ್ನು ಪ್ರೇರೇಪಿಸಿತು. ವರ್ಣ ವಿಭಜನೆಯಿಂದಾಗಿ ಉಂಟಾದ ವೈರುಧ್ಯದ ಹೆಸರಿನಲ್ಲಿ ಅಮೇರಿಕಾದ ನೀಗ್ರೋಗಳನ್ನು ಅಥವಾ ಕರಿಯರನ್ನು ಒಮ್ಮೆಯೂ ಅಪರಾಧಿಗಳೆಂದು ತಿಳಿಯದಿರಿ! ನಾಲ್ಕುನೂರು ವರ್ಷಗಳ ಕಾಲ ಬಿಳಿಯನ್ನರು ಕರಿಯನ್ನರ ಮೇಲೆ ಉದ್ದೇಶ ಪೂರ್ವಕವಾಗಿ ಎಸಗಿದ ವಂಶ ಹತ್ಯೆಯ ಪ್ರತೀಕಾರ ಮಾತ್ರವಾಗಿದೆ.

ಇಷ್ಟು ದೊಡ್ಡ ಪ್ರೀತಿ ಮತ್ತು ಗೌರವ ನನಗೊಮ್ಮೆಯೂ ಸಿಕ್ಕಿರಲಿಲ್ಲ. ಹಿಂದೊಮ್ಮೆಯೂ ನಾನು ಇಷ್ಟು ಗೌರವಾರ್ಹನೆಂದು ಅಂದುಕೊಂಡಿರಲಿಲ್ಲ. ಒಬ್ಬ ಅಮೇರಿಕಾದ ನೀಗ್ರೋನಿಗೆ ಇಷ್ಟೊಂದು ಗೌರವಗಳು ರಾಶಿಯಾಗಿ ಸಿಗುವುದೆಂದಾದರೆ ಇದನ್ನು ನಂಬುವವರಾರು?

ನಾನು ಜಿದ್ದಾದಲ್ಲಿರುವುದು ಅಮೇರಿಕಾದ ಬಿಳಿಯ ವ್ಯಕ್ತಿಯಿಂದಾಗಿ ಮಕ್ಕಾದ ಆಡಳಿತಾಧಿಕಾರಿ ಫೈಸಲ್ ರಾಜಕುಮಾರರಿಗೆ ತಿಳಿಯಿತು. ತನ್ನ ತಂದೆಯ ಆದೇಶದಂತೆ ರಾಷ್ಟ್ರದ ಅತಿಥಿಯಾಗಿ ಸ್ವೀಕರಿಸಲಾಗಿದೆಯೆಂದು ಮರುದಿನವೇ ಫೈಸಲ್ ರಾಜಕುಮಾರ್‌ರರ ಮಗ ನನಗೆ ನೇರವಾಗಿ ಬಂದು ತಿಳಿಸಿದರು. ಡೆಪ್ಯೂಟಿ ಚೀಫ್ ಆಫ್ ಪ್ರೊಟೊಕಾಲ್‌ನಲ್ಲಿ ರಾಜ ಮರ್ಯಾದೆಯೊಂದಿಗೆ ಹಜ್ಜ್ ಕೂಟಕ್ಕೆ ಕರಕೊಂಡು ಹೋದರು. ಶೈಖ್ ಮುಹಮ್ಮದ್ ಹರ್‌ಕಾನ್‌ರು ಮಕ್ಕಾ ಸಂದರ್ಶನಕ್ಕೆ ಅನುಮತಿ ನೀಡಿದರು. ತನ್ನ ಮುದ್ರೆ ಒತ್ತಿ ಸಹಿ ಮಾಡಿದ ಇಸ್ಲಾಮಿನ ಬಗ್ಗೆ ಇರುವ ಎರಡು ಪುಸ್ತಕವನ್ನು ನೀಡಿದರು. ಅಮೇರಿಕಾದಲ್ಲಿ ಸತ್ಯ ಸಂದೇಶ ಪ್ರಚಾರ ಮಾಡುವಾಗ ಯಶಸ್ಸು ಕಾಣಲು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಒಂದು ಕಾರು, ಡ್ರೈವರ್ ಮತ್ತು ಗೈಡ್ ನನಗೆ ನೀಡಲಾಗಿತ್ತು. ಅದರಿಂದಾಗಿ ಮಕ್ಕಾದ ಪುಣ್ಯ ಭೂಮಿಯಲ್ಲಿ ನಾನು ಬಯಸಿದ ಜಾಗದಲ್ಲೆಲ್ಲಾ ಸಂದರ್ಶಿಸಿದೆ. ಇಸ್ಲಾಮಿನ ಇತಿಹಾಸದ ಬಗ್ಗೆ ಚೆನ್ನಾಗಿ ಅರ್ಥೈಸಿ ಕೊಂಡೆ. ಸರ್ಕಾರ ನನಗಾಗಿ ಏರ್ ಕಂಡೀಷನರ್ ವಸತಿ ಸೌಕರ್ಯ ಒದಗಿಸಿತ್ತು. ಕೆಲಸದಾಳುಗಳನ್ನು ನಿಯೋಜಿಸಿತ್ತು.

ಇಷ್ಟು ದೊಡ್ಡ ಗೌರವ ದೊರೆಯಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅಮೇರಿಕಾದಲ್ಲಿ ರಾಜರಿಗೆ ಮಾತ್ರ ಸಿಗುವ ಉನ್ನತ ಗೌರವಗಳು ಮಕ್ಕಾ ಸಂದರ್ಶನದ ಸಂದರ್ಭದಲ್ಲಿ ಒಬ್ಬ ನೀಗ್ರೋನಿಗೆ ಸಿಕ್ಕಿದ್ದು ಅಶ್ಚರ್ಯಕರವಾಗಿತ್ತು.

ಸರ್ವಲೋಕ ನಿಯಂತ್ರಕನಾದ ಅಲ್ಲಾಹನಿಗೆ ಸರ್ವಸ್ತುತಿ!

ಅಲ್‌ಹಾಜ್ ಮಲಿಕ್ ಅಲ್-ಶಾಬಾಜ್
(ಮಾಲ್ಕಂ ಎಕ್ಸ್) 25/04/1964

✍️ ಅಶೀರುದ್ದೀನ್ ಆಲಿಯಾ ಸಾರ್ತಬೈಲ್

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …