Home / ಲೇಖನಗಳು / ನಮ್ರೂದನ ಅಗ್ನಿ ಕುಂಡಗಳೇ ತುಂಬಿರುವ ಜಗತ್ತಿನಲ್ಲಿ…

ನಮ್ರೂದನ ಅಗ್ನಿ ಕುಂಡಗಳೇ ತುಂಬಿರುವ ಜಗತ್ತಿನಲ್ಲಿ…

  • ಡಾ| ಅಬ್ದುಲ್ ವಾಸಿಅ

ಸುದೀರ್ಘವಾದ ಪ್ರವಾದಿಗಳ ಪರಂಪರೆಯಲ್ಲಿ ಪ್ರವಾದಿ ಇಬ್ರಾಹೀಮ್(ಅ)ರು ಒಂದು ಅಪರೂಪದ ವಿದ್ಯಮಾನವಾಗಿದ್ದರು. ಗ್ರಂಥ ನೀಡಲ್ಪಟ್ಟ ಸಮೂಹವೆಲ್ಲವೂ ಇಬ್ರಾಹೀಮ್ ಸಂಪ್ರದಾಯವನ್ನು ಪ್ರತಿಪಾದಿಸುತ್ತಿದ್ದಾಗ ಮತ್ತು ಅದರ ಬಗ್ಗೆ ಪರಸ್ಪರ ಜಗಳವಾಡುತ್ತಿರುವಾಗ ಪವಿತ್ರ ಕುರ್‌ಆನ್ ಮಧ್ಯೆ ಪ್ರವೇಶಿಸಿತು: “ಓ ಗ್ರಂಥದವರೇ, ತೌರಾತ್ ಮತ್ತು ಇಂಜೀಲ್ ಇಬ್ರಾಹೀಮರ ಅನಂತರವೇ ಅವತೀರ್ಣ ಗೊಂಡಿವೆಯಷ್ಟೆ. ಇನ್ನೇನು ನಿಮಗೆ ಇಷ್ಟೂ ತಿಳಿಯುವುದಿಲ್ಲವೇ? ನೀವು ನಿಮಗೆ ತಿಳಿದಿರುವ ವಿಷಯದಲ್ಲಿ ಸಾಕಷ್ಟು ವಾದಗಳನ್ನು ಮಾಡಿಲಾಯಿತು. ಈಗ ನಿಮಗೆ ತಿಳಿದಿಲ್ಲದ ವಿಷಯಗಳಲ್ಲಿ ಏಕೆ ವಾದಿಸುತ್ತಿರುವಿರಿ? ಅಲ್ಲಾಹ್ ತಿಳಿದಿರುವನು; ನೀವು ತಿಳಿದಿರುವುದಿಲ್ಲ. ಇಬ್ರಾಹೀಮರು ಯಹೂದಿಯೋ, ಕ್ರೈಸ್ತರೋ ಆಗಿರಲಿಲ್ಲ. ಅವರು ಓರ್ವ ಏಕನಿಷ್ಠ ಮುಸ್ಲಿಮರಾಗಿದ್ದರು- ಮತ್ತು ಅವರು ಬಹದೇವ ವಿಶ್ವಾಸಿಗಳಂತು ಆಗಿರಲೇ ಇಲ್ಲ. ಇಬ್ರಾಹೀಮರೊಂದಿಗೆ ಸಂಬಂಧವಿರಿಸಿಕೊಳ್ಳಲು ಎಲ್ಲರಿಗಿಂತಲೂ ಅಧಿಕ ಹಕ್ಕು ಸಲ್ಲುವುದಿದ್ದರೆ ಅದು ಅವರನ್ನು ಅನುಸರಿಸಿದವರಿಗೆ ಮತ್ತು ಈಗ ಈ ಪ್ರವಾದಿ ಹಾಗೂ ಇವರನ್ನು ಮಾನ್ಯ ಮಾಡುವವರು ಈ ವಿಷಯದಲ್ಲಿ ಅಧಿಕ ಹಕ್ಕುದಾರರು. ಅಲ್ಲಾಹ್ ಸತ್ಯದ ಮೇಲೆ ವಿಶ್ವಾಸವಿಟ್ಟವರಿಗೆ ಮಾತ್ರ ಸಹಾಯಕನಾಗಿರುತ್ತಾನೆ.” (ಅಲೆ ಇಮ್ರಾನ್: 65-68)

ಕೇವಲ ವಾದವನ್ನು ಮಾಡುವುದಕ್ಕಿಂತ ಆಚೆಗೆ ಇಬ್ರಾಹೀಮಿಯನ್ ಮಿಲ್ಲತ್ ಅನ್ನು ಸ್ಪಷ್ಟವಾಗಿ ಅನುಸರಿಸುವವರು ಜನರಲ್ಲಿ ಅವರಿಗೆ ಅತ್ಯಂತ ನಿಕಟವರ್ತಿಗಳು ಎಂಬುದು ಪವಿತ್ರ ಕುರ್‌ಆನ್‌ನ ವಿವರಣೆ.

ವಿಶ್ವದೆಲ್ಲೆಡೆ ಧರ್ಮ ವಿಶ್ವಾಸಿಗಳು ಏಕ ಸ್ವರದಲ್ಲಿ ತಮ್ಮವರೆಂದು ಇಬ್ರಾಹೀಮರನ್ನು ಪ್ರತಿಪಾದಿಸಲು ಅವರು ಮಾಡಿರುವ ಪವಾಡವಾದರೂ ಏನು- ಎಂಬುದು ಎಲ್ಲರಿಗೂ ಕುತೂಹಲ ಮೂಡುವ ಸಂಗತಿಯೇ ಆಗಿದೆ. ಇತಿಹಾಸವು ಕಂಡ ಅತ್ಯಂತ ಕ್ರೂರಿಯೂ, ಸರ್ವಾಧಿಕಾರಿಯೂ ಆದ ಓರ್ವ ರಾಜನ ಆಡಳಿತ ಕಾಲದಲ್ಲಿ ಹ. ಇಬ್ರಾಹೀಮ್(ಅ) ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿತ್ತು.

ಮೆಸಪಟೋಮಿಯಾ ನಾಗರಿಕತೆಯ ನೆರಳಲ್ಲಿ ಬೆಳೆದು, ಅಹಂಕಾರ ಮತ್ತು ದರ್ಪದ ಮೂರ್ತರೂಪವಾಗಿದ್ದ ನಮ್ರೂದನನ್ನು ಪವಿತ್ರ ಕುರ್‌ಆನ್ ಹೀಗೆ ಚಿತ್ರೀಕರಿಸುತ್ತದೆ: “ನೀವೇನು ಇಬ್ರಾಹೀಮರೊಂದಿಗೆ ತರ್ಕ ಮಾಡಿದ ವ್ಯಕ್ತಿಯ ಕುರಿತು ಗಮನಿಸಲಿಲ್ಲವೇ? ತರ್ಕವು ಇಬ್ರಾಹೀಮರ ಪ್ರಭು ಯಾರು ಎಂಬುದರ ಕುರಿತು ಮತ್ತು ಅಲ್ಲಾಹನು ಆ ವ್ಯಕ್ತಿಗೆ ಅಧಿಕಾರವನ್ನು ಕೊಟ್ಟಿದ್ದುದರ ಆಧಾರದಲ್ಲಿ- “ಜೀವನ ಮತ್ತು ಮರಣ ಯಾರ ಅಂಕೆಯಲ್ಲಿರುವುದೋ ಅವನು ನನ್ನ ಪ್ರಭು” ಎಂದು ಇಬ್ರಾಹೀಮರು ಹೇಳಿದಾಗ ಅವನು, “ಜೀವ ಮತ್ತು ಮರಣ ನನ್ನ ಅಧಿಕಾರದಲ್ಲಿದೆ” ಎಂದನು. ಇಬ್ರಾಹೀಮರು, “ಸರಿ, ಹಾಗಾದರೆ ಅಲ್ಲಾಹನು ಸೂರ್ಯನನ್ನು ಪೂರ್ವ ದಿಕ್ಕಿನಿಂದ ಮೂಡಿಸುತ್ತಾನೆ. ನೀನು ಅದನ್ನು ಪಶ್ಚಿಮ ದಿಕ್ಕಿನಿಂದ ಮೂಡಿಸು” ಎಂದರು. ಇದನ್ನು ಕೇಳಿ ಆ ಸತ್ಯನಿಷೇಧಿ ದಿಗ್ಬ್ರಮೆಗೊಂಡನು. ಆದರೆ ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರಿಸುವುದಿಲ್ಲ. (ಅಲ್‌ಬಕರ- 258)

ತನ್ನ ಪ್ರಜೆಗಳ ಮೇಲೆ ಸರ್ವಾಧಿಕಾರ ಚಲಾಯಿಸಿದ, ದೇವನ ಗುಣಗಳನ್ನು ಸ್ವಯಂ ಪಡೆದುಕೊಂಡಿದ್ದೇನೆಂದು ಹೇಳುತ್ತಿದ್ದ ದುರಾಗ್ರಹವುಳ್ಳ ವ್ಯಕ್ತಿ. ಇಲ್ಲಿಯೂ ಇಬ್ರಾಹೀಮೀಯನ್ ಪವಾಡ ಹುಟ್ಟಿದೆ. ಆಕ್ರಮಣಕಾರಿ ಆಡಳಿತಗಾರ ಅಥವಾ ಮೇಲ್ವರ್ಗದವರನ್ನು ಎದುರಿಸುವ ಮತ್ತು ವಿರೋಧಿಸುವಂತಹ ಕಾರ್ಯಗಳು ಇಬ್ರಾಹೀಮ್(ಅ)ರ ಮೊದಲು ಮತ್ತು ನಂತರ ಪ್ರವಾದಿಗಳ ಇತಿಹಾಸದಲ್ಲಿ ಸಂಭವಿಸಿದೆ. ಆದರೆ ಇಬ್ರಾಹೀಮ್(ಅ) ಯಾವ ರೀತಿಯ ಅದ್ಭುತವನ್ನು ಸೃಷ್ಟಿಸಿದರು ಎಂಬುದು ಖಂಡಿತ ಕುತೂಹಲದ ಸಂಗತಿಯೇ ಆಗಿದೆ. ವಿಶ್ವ ಕಂಡ ನಿರಂಕುಶಾಧಿ ಪತಿಗಳಲ್ಲಿ ಒಬ್ಬನಾಗಿದ್ದ ನಮ್ರೂದ್‌ನ ಕಾಲದಲ್ಲಿ ಇಬ್ರಾಹೀಮ್(ಅ)ರು ಶಾಂತಿ ಹಾಗೂ ನಿರ್ಭಯದಿಂದ ಕೂಡಿದ ಸಾಮಾಜಿಕ ಜೀವನದ ಕನಸು ಕಂಡರು. ಅದಕ್ಕಾಗಿ ಪರಿಶ್ರಮಿಸಿದರು. ಪವಿತ್ರ ಕುರ್‌ಆನ್ ವಿವರಿಸುವ ಇಬ್ರಾಹೀಮರು ಕಣ್ಣು ತೆರೆದು ನಿರಂತರವಾಗಿ ಸ್ವಪ್ನ ಕಾಣುತ್ತಿದ್ದ ಹೋರಾಟಗಾರರಾಗಿದ್ದರು. ಭೂಮಿಯಲ್ಲಿ ಒಂದು ಭಾಗದಲ್ಲಿ ನಮ್ರೂದ್‌ನ ಅಕ್ರಮ ಅತ್ಯಾಚಾರ ಮೇರೆ ಮೀರಿದ್ದ ಸಂದರ್ಭದಲ್ಲಿ ಮಕ್ಕಾವನ್ನು ಕೇಂದ್ರೀಕರಿಸಿ ಶಾಂತಿ-ಸಮಾಧಾನ ತುಂಬಿದ ಕಲ್ಯಾಣ ರಾಷ್ಟ್ರಕ್ಕೆ, ಇಬ್ರಾಹೀಮ್(ಅ) ಅಡಿಗಲ್ಲು ಹಾಕಿದರು. ಇರಾಕ್‌ನಿಂದ ಹಿಜಿರಾ ಹೊರಟು ಮಕ್ಕಾದಲ್ಲಿ ಕಾಲಿರಿಸಿದ ಇಬ್ರಾಹೀಮ್(ಅ) ತನ್ನ ಪ್ರಭುವಿನೊಂದಿಗೆ ಕೇಳಿದ `ವರ’ ಮತ್ತೊಂದಾಗಿತ್ತು. ಇಬ್ರಾಹೀಮರು,

“ಓ ನನ್ನ ಪ್ರಭೂ! ಈ ನಗರವನ್ನು ಶಾಂತಿಯ ನಗರವನ್ನಾಗಿ ಮಾಡು ಮತ್ತು ಇಲ್ಲಿಯ ನಿವಾಸಿಗಳ ಪೈಕಿ ಅಲ್ಲಾಹ್ ಮತ್ತು ಅಂತಿಮ ದಿ ನದಲ್ಲಿ ವಿಶ್ವಾಸವಿಡುವ ವರಿಗೆ ನಾನಾ ಫಲಗಳ ಆಹಾರವನ್ನು ನೀಡು” ಎಂದ ಸಂದರ್ಭವನ್ನು ಸ್ಮರಿಸಿರಿ. ಅವರ ಪ್ರಭುವು, “ನಾನು ಭೂಲೋಕದ ಅಲ್ಪಕಾಲದ ಜೀವನಾಧಾರವನ್ನು ಅವಿ ಶ್ವಾಸಿಗೂ ಕೊಡುವೆನು. ಆದರೆ ಆ ಮೇಲೆ ಅವನನ್ನು ನರಕಕ್ಕೆ ತಳ್ಳುವೆನು. ಅದು ಅತ್ಯಂತ ನಿಕೃಷ್ಟ ನೆಲೆಯಾಗಿರುತ್ತದೆ” ಎಂದು ಉತ್ತರಿಸಿದನು. (ಅಲ್‌ಬಕರ- 126)

ವಿಶ್ವ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಅಮ್ನ್ ಅಥವಾ ನಿರ್ಭಯತೆಯ ಆಧಾರದಲ್ಲಿ ಒಂದು ನಾಗರಿಕತೆಯ ಕನಸು ಕಂಡು ಅದರ ಮಾದರಿಯಾಗಿ ಹರಮ್ ಅನ್ನು ಪುನರ‍್ರಚಿಸಿದ್ದು ಇಬ್ರಾಹೀಮ್(ಅ) ಆಗಿದ್ದರು. ಅದಕ್ಕಾಗಿಯೇ ಅತ್ಯಂತ ಕೊನೆಯಲ್ಲಿ ಅಲ್ಲೇ ಮಕ್ಕಾದಲ್ಲೇ ನಿಯುಕ್ತರಾದ ಪ್ರವಾದಿ ಮುಹಮ್ಮದ್(ಸ)ರೊಂದಿಗೆ ಇಬ್ರಾಹೀಮ್(ಅ) ಆರಂಭಿಸಿದ್ದನ್ನು ಮುಂದುವರಿಸಲು ಹೇಳಿದ್ದಾಗಿರಬಹುದು. “ಅನಂತರ ನೀವು ಏಕನಿಷ್ಠರಾಗಿ ಇಬ್ರಾಹೀಮರ ಪಥದಲ್ಲಿ ನಡೆಯಲಿಕ್ಕಾಗಿ ನಾವು ನಿಮ್ಮ ಕಡೆಗೆ ದಿವ್ಯವಾಣಿ ಕಳುಹಿಸಿದೆವು. ಮತ್ತು ಅವರು ಬಹುದೇವ ವಿಶ್ವಾಸಿಗಳಾಗಿರಲಿಲ್ಲ.” (ಅನ್ನಹ್ಲ್- 123)

ಅಲ್ಲಾಹನು ಪ್ರವಾದಿ ಮುಹಮ್ಮದ್(ಸ) ರಿಗೆ ವಹಿಸಿಕೊಟ್ಟ ಹೊಣೆಗಾರಿಕೆಯು ಇಬ್ರಾಹೀಮ್(ಅ)ರ ಕನಸಿನ ಪೂರ್ತೀಕರಣವಾಗಿತ್ತು. ಸಹಜವಾಗಿಯೇ, ಮಕ್ಕಾದಲ್ಲಿ ತನ್ನ ಅನುಚರರು ಸತ್ಯನಿಷೇಧಿಗಳಿಂದ ಕ್ರೂರ ಮರ್ದನಗಳಿಗೆ ಗುರಿಯಾದ ಸಂದರ್ಭದಲ್ಲಿ ಪ್ರವಾದಿಯವರು(ಸ) ಅವರ ಕಣ್ಣು ಹಾಗೂ ಹೃದಯದಲ್ಲಿ ತುಂಬಿಸಿದ್ದು ಇಬ್ರಾಹೀಮಿಯನ್ ಕನಸನ್ನಾಗಿತ್ತು. ಕುರೈಶರ ಅಸಹನೀಯ ಹಿಂಸೆಯನ್ನು ಸಹಿಸಲಾಗದೆ ಪ್ರವಾದಿವರ್ಯರ(ಸ) ಮುಂದೆ ದೂರಿನೊಂದಿಗೆ ಬಂದ ಖಬ್ಬಾಬ್ ಇಬ್ನುಲ್ ಅರತ್(ರ)ರರಿಗೆ ಹೇಳಿದ ಕನಸು ಇದಾಗಿತ್ತು-

“ಅಲ್ಲಾಹನಾಣೆ, ಈ ಉದ್ದೇಶವನ್ನು ಅಲ್ಲಾಹನು ಖಂಡಿತ ಪೂರ್ಣಗೊಳಿಸುವನು. ಸನ್‌ಆದಿಂದ ಹಝರಲ್ ಮೌತ್ ನವರೆಗೆ ಓರ್ವ ಯಾತ್ರಿಕನಿಗೆ ಅಲ್ಲಾಹ್ ಮತ್ತು ತನ್ನ ಆಡಿನ ಹಿಂಡನ್ನು ಆಕ್ರಮಿಸುವ ತೋಳಗಳನ್ನು ಹೊರತು ಬೇರೆ ಯಾವುದರ ಕುರಿತೂ ಭಯವಿಲ್ಲದೆ ಸಂಚರಿಸಲು ಸಾಧ್ಯವಾಗುವ ಕಾಲ ಖಂಡಿತ ಬರಲಿದೆ.”

ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ತನ್ನ ಅದ್ಭುತವಾದ ಸೃಷ್ಟಿಯ ನಾಮದ ಆಣೆಯನ್ನು ಹಾಕುವ ಒಂದು ಶೈಲಿಯನ್ನು ಬಳಸಿದ್ದಾನೆ. ಆಕಾಶ-ಭೂಮಿ, ಸೂರ್ಯ ಚಂದ್ರರು, ಮರಗಳು, ಸಸ್ಯಗಳು, ರಾತ್ರಿ ಹಗಲುಗಳು ಇವೆಲ್ಲಾ ಅದಕ್ಕೆ ಉದಾಹರಣೆಯಾಗಿದೆ. ಅದು ಭೂಮಿಯ ಅದ್ಭುತಗಳು ಹಾಗೂ ದೃಷ್ಟಾಂತಗಳಾದ್ದರಿಂದ ಅದಕ್ಕೆ ದೇವನ ಅಂಗೀಕಾರ ಲಭಿಸಿದ್ದು. ಈ ರೀತಿ ಅಲ್ಲಾಹನು ವಿಶೇಷವಾಗಿ ಎತ್ತಿ ಹೇಳಿ, ಶಪಥ ಹಾಕಲು `ಅಲ್‌ಬಲದುಲ್ ಅಮೀನ್’ ಅಥವಾ ನಿರ್ಭಯ ರಾಷ್ಟ್ರವನ್ನೂ ಉಪಯೋಗಿಸಿದ್ದಾನೆ. ಅಲ್ಲಾಹನ ಕಾವಲಿನಲ್ಲಿ ಪ್ರವಾದಿ ಇಬ್ರಾಹೀಮ್ ಭೂಮಿಯಲ್ಲಿ ನಿರ್ಮಿಸಿದ, ವಿಶ್ವಾಸಿಗಳು ಭೂಮಿಯಲ್ಲಿ ನಿರ್ಮಿಸಬೇಕಾದ ಒಂದು ಅದ್ಭುತವದು. ಇಬ್ರಾಹೀಮ್(ಅ) ಆರಂಭಿಸಿ, ಮುಹಮ್ಮದ್(ಸ) ಪೂರ್ಣಗೊಳಿಸಿದ, ವಿಶ್ವದ ಮುಸ್ಲಿಮ್ ಸಮುದಾಯವು ಪುನಃ ಪಡೆದುಕೊಳ್ಳಬೇಕಾದ ಅಲ್ಲಾಹನ ಭೂಮಿಯಲ್ಲಿ ಅಪರೂಪವಾಗಿಯಾದರೂ ಆವರ್ತಿಸಲ್ಪಡಬೇಕಾದ ಅದ್ಭುತ.

“ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದವರೊಡನೆ ಅಲ್ಲಾಹನು ಅವರಿಗಿಂತ ಮುಂಚಿನವರನ್ನು ಭೂಮಿ ಯಲ್ಲಿ ಪ್ರತಿನಿಧಿಗಳಾಗಿ ಮಾಡಿದಂತೆಯೇ ಅವರನ್ನೂ ಮಾಡುವನೆಂದು ವಾಗ್ದಾನ ಮಾಡಿರುವನು. ತಾನು ಅವರಿಗಾಗಿ ಮೆಚ್ಚಿರುವ ಅವರ ಧರ್ಮವನ್ನು ಸುಭದ್ರ ಬುನಾದಿಗಳಲ್ಲಿ ಸ್ಥಾಪಿಸುವನು ಮತ್ತು ಅವರ (ಪ್ರಚಲಿತ) ಭಯಾವಸ್ಥೆಯನ್ನು ಶಾಂತಿಯಾಗಿ ಮಾರ್ಪಡಿಸಿ ಬಿಡುವನು. ಅವರು ನನ್ನ ದಾಸ್ಯ ಆರಾಧನೆ ಮಾತ್ರ ಮಾಡಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಇದಾದ ಬಳಿಕ ಯಾರು `ದೇವಸಹಭಾಗಿತ್ವ’ ಮಾಡುವರೋ ಅವರೇ ಕರ್ಮಭ್ರಷ್ಟರು.” (ಅನ್ನೂರ್: 55)

ಪ್ರವಾದಿಗಳ ನೇತೃತ್ವದಲ್ಲಿ ವಿಶ್ವಾಸಿಗಳ ಪ್ರಯತ್ನದಲ್ಲಿ ರೂಪಿಸಲ್ಪಟ್ಟ ನಿರ್ಭಯ ರಾಷ್ಟ್ರವು ಭೂಮಿಯಲ್ಲಿ ಅಲ್ಲಾಹನ ಸ್ವರ್ಗವಾಗಿತ್ತು. ಪ್ರವಾದಿ ಇಬ್ರಾಹೀಮರು ಮಲಕ್‌ಗಳನ್ನು ಆಹ್ವಾನಿಸಿದ್ದು ಅಲ್ಲಾಹನ ಭೂಮಿಯಲ್ಲಿ ಸ್ವರ್ಗವನ್ನು ನಿರ್ಮಿಸಲಿಕ್ಕಾಗಿತ್ತು. “ನಾವು ಕಅಬಾವನ್ನು ಜನರಿಗೆ ಕೇಂದ್ರ ಹಾಗೂ ಶಾಂತಿ ಸ್ಥಾನವನ್ನಾಗಿ ನಿಶ್ಚಯಿಸಿದ ಸಂದರ್ಭವನ್ನು ಸ್ಮರಿಸಿರಿ. ಇಬ್ರಾಹೀಮರು ಆರಾಧನೆಗಾಗಿ ನಿಲ್ಲುವ ಸ್ಥಾನವನ್ನು ನೀವು ಸ್ಥಿರವಾದ ನಮಾಝ್‌ನ ತಾಣವನ್ನಾಗಿಸಿಕೊಳ್ಳಿರಿ” ಎಂದು ನಾವು ಜನರಿಗೆ ಆಜ್ಞಾಪಿಸಿದ್ದೆವು. (ಅಲ್‌ಬಕರ- 125) “ಅದರಲ್ಲಿ ಸುವ್ಯಕ್ತ ಕುರುಹುಗಳಿವೆ. `ಮಕಾಮು ಇಬ್ರಾಹೀಮ್’ (ಇಬ್ರಾಹೀಮರು ದೇವಾರಾಧನೆಗಾಗಿ ನಿಂತ ಸ್ಥಾನ) ಇದೆ ಮತ್ತು ಅದರೊಳಗೆ ಪ್ರವೇಶಗೊಂಡವನು ಸಂರಕ್ಷಣೆ ಹೊಂದಿದನು.” (ಅಲೆ ಇಮ್ರಾನ್: 97) ಹರಮ್ ಇಸ್ಲಾಮ್ ವಿಶ್ವದಲ್ಲಿ ನಿರ್ಮಿಸ ಬಯಸುತ್ತಿರುವ ಸಾಮಾಜಿಕ ವ್ಯವಸ್ಥೆಯ ಉತ್ತಮ ಮಾದರಿಯಾಗಿದೆ. “ನಾವು ಒಂದು ಶಾಂತಿ ಪೂರ್ಣ ಹರಮ್ (ಸನ್ಮಾನ್ಯ ಸ್ಥಳ) ಮಾಡಿರುವುದನ್ನುಇವರು ನೋಡುವುದಿಲ್ಲವೇ?” (ಅಂಕಬೂತ್: 67)

ಹಜ್ ಯಾತ್ರಿಕರು ಕಅಬಾದ ಸುತ್ತಲೂ ಪ್ರದಕ್ಷಿಣೆ ಮಾಡುವಾಗ, ತಾವು ನಿರ್ಮಿಸಬೇಕಾದ ಸಾಮಾಜಿಕ ವ್ಯವಸ್ಥೆಯನ್ನು ತಮ್ಮ ಹೃದಯದಲ್ಲಿ ಕೆತ್ತುತ್ತಾರೆ. ಕಅಬಾದತ್ತ ಮುಖ ಮಾಡಿ ದಿನಕ್ಕೆ ಐದು ಬಾರಿ ನಮಾಝ್ ಮಾಡುವ ಪ್ರತಿಯೊಬ್ಬ ಮುಸ್ಲಿಮನೂ ತನ್ನ ಕಣ್ಣುಗಳಲ್ಲಿ ಬೇರೇನೂ ತುಂಬಿಕೊಳ್ಳುವುದಿಲ್ಲ. ಹರಮ್‌ನಿಂದ ಹಜ್ಜ್ ಯಾತ್ರೆ ಮುಗಿಸಿ ವಿಶ್ವದ ನಾನಾ ಸ್ಥಳಗಳಿಗೆ ಹಿಂದಿರುಗುವ ಯಾತ್ರಿಕರ ಅಲ್ಲೆಲ್ಲಾ `ಹರಮ್’ ಅಥವಾ ಸುರಕ್ಷಿತ ಸ್ಥಳವನ್ನು ನಿರ್ಮಿಸಬೇಕು. ಇಬ್ರಾಹೀಮ್(ಅ) ನಿರ್ಮಿಸಿದ ಹರಮ್ ಅನ್ನು ವಿಶ್ವ ವ್ಯಾಪಕಗೊಳಿಸುವುದಕ್ಕೆ ಬದಲು, ನಮ್ರೂದ್‌ನ ಅಗ್ನಿಕುಂಡಗಳು ವ್ಯಾಪಕವಾಗಿ ಉರಿಯುತ್ತಿರುವುದು ಇಂದು ಮಾನವ ಜಗತ್ತು ಅನುಭವಿಸುತ್ತಿರುವ ಅತ್ಯಂತ ದೊಡ್ಡ ದುರಂತ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …