Home / ಲೇಖನಗಳು / ಜೊತೆಯಲ್ಲಿ ಕರ್ಮಗಳು ಮಾತ್ರ ಇರುತ್ತವೆ

ಜೊತೆಯಲ್ಲಿ ಕರ್ಮಗಳು ಮಾತ್ರ ಇರುತ್ತವೆ

@ ಹಾಪಿಝ್ ಬಶೀರ್
ಅನು: ಅಬೂ ಸಲ್ವಾನ್

ಅನಸ್ ಬಿನ್ ಮಾಲಿಕ್(ರ)ರವರಿಂದ ವರದಿಯಾಗಿದೆ. ಪ್ರವಾದಿ(ಸ)ರು ಹೇಳಿರುವುದನ್ನು ನಾನು ಕೇಳಿದ್ದೇನೆ- ಓರ್ವ ವ್ಯಕ್ತಿ ಮರಣ ಹೊಂದಿದಾಗ ಮೂರು ವಿಚಾರಗಳು ಅವನ ಜೊತೆ ಇರುತ್ತವೆ.  ಅದರಲ್ಲಿ ಎರಡು ಹಿಂದಕ್ಕೆ ಬರುತ್ತವೆ. ಒಂದು ಮಾತ್ರ ಅವನಲ್ಲಿ ಬಾಕಿ ಉಳಿಯುತ್ತದೆ. ಕುಟುಂಬ, ಸಂಪತ್ತು ಮತ್ತು ಅವನು ಮಾಡಿದ ಕರ್ಮಗಳು ಅವನನ್ನು ಹಿಂಬಾಲಿಸುತ್ತಿರುತ್ತವೆ. ಕುಟುಂಬ ಮತ್ತು  ಸಂಪತ್ತು ಆತನಿಂದ ಹಿಂದಿರುಗಿ ಬರುತ್ತವೆ. ಅವನ ಕರ್ಮಗಳು ಅವನೊಂದಿಗೆ ಇರುತ್ತವೆ.  (ಸಹೀಹುಲ್ ಮುಸ್ಲಿಮ್)

ಪ್ರತಿಯೊಬ್ಬ ಮನುಷ್ಯನೂ ಜೀವನವೆಂಬ ದೋಣಿಯಲ್ಲಿ ಪ್ರಯಾಣಿಸುತ್ತಿರುತ್ತಾನೆ. ಈ ಭೂಮಿಯಲ್ಲಿ ಜನಿಸಿದ ಯಾವನಿಗೂ ಈ ಪ್ರಯಾಣ ನಡೆಸದೆ ಇರಲು ಸಾಧ್ಯವಿಲ್ಲ. ಮನುಷ್ಯನ ಜೀವನದ ಈ  ಪಯಣದಲ್ಲಿ ಅವನ ಜೊತೆ ಅವನು ಎಂದೆಂದಿಗೂ ಪ್ರೀತಿಸುತ್ತಿರುವ ಅವನ ಸಂಪತ್ತು ಗಳಿಕೆ ಅವನ ಎಲ್ಲ ಸಂದಿಗ್ಧ ಘಟ್ಟದಲ್ಲಿಯೂ ಅವನಿಗೆ ಆಧಾರವಾಗಿ ಅವನ ಜೊತೆ ಇರುವ ಕುಟುಂಬ ಮತ್ತು ಅವನು ಆಲಸ್ಯದಿಂದಲೋ ಅಥವಾ ಉತ್ಸಾಹದಿಂದಲೋ ಮಾಡಿದ ಕರ್ಮ ಮಾತ್ರ ಇರುತ್ತದೆ. ಅವನು ಇಹಲೋಕ ತ್ಯಜಿಸಿದ ಕೂಡಲೇ ಅವನ ಸಂಪತ್ತು ಅವನಿಗೆ ಸಲಾಮ್ ಹೇಳಿ ಹಿಂದಿರುಗುತ್ತದೆ. ಬಳಿಕ  ಕೆಲವಾರು ಗಂಟೆಗಳ ಕಾಲ ಆತನ ಕುಟುಂಬದ ಬಂಧು ಬಾಂಧವರು ಜೊತೆ ಇರುತ್ತಾರೆ. ಆತನ ಮೃತ ದೇಹವನ್ನು ಗೋರಿಗೆ ಇಳಿಸಿದ ಬಳಿಕ ಅವರೂ ಹಿಂದಿರುಗಿ ತೆರಳುತ್ತಾರೆ.

ಬಳಿಕ ಆ ಕತ್ತಲ ಕೋಣೆಯಲ್ಲಿ ಹೆದರಿ ಭಯದಿಂದ ಕಂಪಿಸುತ್ತಿರುವಾಗ ಅವನಿಗೆ ಧೈರ್ಯ ತುಂಬುವುದು ಆತನ ಕರ್ಮಗಳಾಗಿವೆ. ಜೀವನದ ಈ ಆಯುಷ್ಯದಲ್ಲಿ ನಾವು ಕರ್ಮಗಳ ಜೊತೆ ಉತ್ತಮವಾಗಿ ವ್ಯವಹರಿಸಿದರೆ  ನಮ್ಮನ್ನು ಸ್ವರ್ಗ ತಲುಪಿಸುವವರೆಗೆ ಅದು ನಮ್ಮೊಂದಿಗಿರುವುದು. ಬದಲಾಗಿ ನಾವು ಅದರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸದಿದ್ದರೆ ಅದಕ್ಕೆ ಸಿಗುವ ಪ್ರತಿಫಲ ದೊರೆಯುವ ತನಕ ಅದು ನಮ್ಮ  ಜೊತೆ ಇರುತ್ತದೆ. ಅಲ್ಲಾಹನ ಪ್ರವಾದಿವರ್ಯರು(ಸ) ಈ ವಿಚಾರವನ್ನು ಮೇಲಿನ ವಚನದಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬದುಕಿನಲ್ಲಿ ಆತನು ಏನನ್ನು ಮಾಡಿದ್ದಾನೋ ಅದರ ಪ್ರತಿಫಲ ಮಾತ್ರ ಅವನಿಗೆ ಲಭ್ಯವಾಗುತ್ತದೆ. ಅಲ್ಲಾಹನ ನ್ಯಾಯಾಲಯದಲ್ಲಿ ಮೊತ್ತ ಮೊದಲ ವಿಚಾರಣೆ ಆತನ ಕರ್ಮಗಳ ಕುರಿತಾಗಿದೆ. ಪ್ರವಾದಿವರ್ಯರು(ಸ) ಹೇಳಿರುತ್ತಾರೆ; “ಪುನರು ತ್ಥಾನ ದಿನದಂದು ಜನರು ಮೊತ್ತ  ಮೊದಲು ನಮಾಝ್‍ನ ಬಗ್ಗೆ ಪ್ರಶ್ನಿಸಲ್ಪಡುವರು.”

ಗತಕಾಲದ ನಮ್ಮ ಮಹನೀಯರ ಕುರಿತು ಅಧ್ಯಯನ ಮಾಡಿದಾಗ ಅವರ ಕರ್ಮಗಳ ವಲಯಗಳು ಸಕ್ರಿಯವಾಗಿದ್ದವು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಸತ್ಯವಿಶ್ವಾಸಿಗಳ ಸ್ವಭಾವದ ಕುರಿತು  ಪವಿತ್ರ ಕುರ್‍ಆನಿನಲ್ಲಿ ಈ ರೀತಿ ಹೇಳಲಾಗಿದೆ:
“ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ  ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಆಲೆ ಇಮ್ರಾನ್: 134)

ಅಂತಹ ಸತ್‍ಕರ್ಮಗಳಲ್ಲಿ ಅವರು ಪರಸ್ಪರ ಸ್ಪರ್ಧಿಸುತ್ತಿದ್ದರು ಎಂಬುದನ್ನು ಪವಿತ್ರ ಕುರ್‍ಆನ್ ನಿಂದ ನಮಗೆ ತಿಳಿಯಬಹುದು.
“ಧಾವಿಸಿರಿ ಮತ್ತು ನಿಮ್ಮ ಪ್ರಭುವಿನ ಕ್ಷಮೆ ಹಾಗೂ ಭೂಮಿ-ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ಧಾವಿಸುವಲ್ಲಿ ಪರಸ್ಪರ ಸ್ಪರ್ಧಿಸಿರಿ. ಅದನ್ನು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿದವರಿಗಾಗಿ ಸಿದ್ಧಗೊಳಿಸಲಾಗಿದೆ. ಇದು ಅಲ್ಲಾಹನ ಅನುಗ್ರಹ. ಅವನಿದನ್ನು ತಾನಿಚ್ಛಿಸಿದವರಿಗೆ ನೀಡುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹ ಶಾಲಿಯಾಗಿದ್ದಾನೆ.” (ಅಲ್ ಹದೀದ್: 21)

ನಿಮಗೆ ಒಳಿತು ಮಾಡಲು ಎಷ್ಟು ಸಾಧ್ಯವೋ ಅಷ್ಟರವರೆಗೆ ಅದಕ್ಕಾಗಿ ಪರಿಶ್ರಮಿಸಿರಿ. ಕರ್ಮಗಳಲ್ಲಿ ಏನಾದರೂ ಲೋಪದೋಶಗಳು ಸಂಭವಿಸಬಹದೇ ಎಂದು ಅವರು ಅತ್ಯಂತ ಹೆಚ್ಚು ಭಯ ಪಡುತ್ತಾರೆ. ಮತ್ತು ಆ ಬಗ್ಗೆ ಅವರು ಎಚ್ಚರಿಕೆಯಿಂದ ಇರುತ್ತಾರೆ.

“ಮತ್ತು ಕೊಡುವುದನ್ನು ಕೊಟ್ಟು ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆ ಯಿಂದ ಕಂಪಿಸುತ್ತಿರುವ ಹೃದಯಗಳಿರುವವರು.” ಸೂರ ಮೂಮಿನೂನ್‍ನ ಈ ವಚನದ ಕುರಿತು ಆಯಿಶಾ(ರ)  ಕೇಳಿದಾಗ ಪ್ರವಾದಿವರ್ಯರು(ಸ) ಹೇಳಿದರು; “ಅಬೂಬಕರ್‍ ರವರ ಪುತ್ರಿಯೇ, ಉಪವಾಸ ವೃತ ಅನುಷ್ಠಾನಿಸಿ ನಮಾಝ್ ನಿರ್ವಹಿಸಿ ದಾನ ಧರ್ಮಗಳನ್ನು ಮಾಡುತ್ತಿರುವಾಗಲೂ ಅದನ್ನು ಅಲ್ಲಾಹನು ಸ್ವೀಕರಿಸಬಹುದೇ ಎಂಬ ಬಗ್ಗೆ ಅವರು ಭಯಪಡುವವರಾಗಿದ್ದಾರೆ.
(ತಿರ್ಮಿದಿ)

“ಅವರು ಒಳಿತುಗಳ ಕಡೆಗೆ ಧಾವಿಸುವವರು ಮತ್ತು ಸ್ಪರ್ಧಿಸಿ ಅವುಗಳನ್ನು ಪಡೆದು ಕೊಳ್ಳುವವರು” (ಅಲ್ ಮೂಮಿನೂನ್: 61).

ಅತ್ಯಂತ ಹೆಚ್ಚು ಆತ್ಮಾರ್ಥತೆಯಿದ್ದು ಕೂಡಾ ನಮ್ಮಲ್ಲಿ ಜಿಪುಣತೆ ಬಂದು ಎಲ್ಲವೂ ವಿಫಲವಾಗಬಹುದೇ ಎಂಬ ಬಗ್ಗೆ ಸತ್ಯವಿಶ್ವಾಸಿಗಳು ಆತಂಕಿತರಾಗಬೇಕು. ಇಮಾಮ್ ಹಸನುಲ್ ಬಸರಿ(ರ) ಯವರು  ಹೇಳುತ್ತಾರೆ: ಕೆಲವು ಸಹಾಬಿಗಳನ್ನು ನಾನು ನೋಡಿದ್ದೇನೆ. ಅವರು ತಮ್ಮ ಸತ್ಕರ್ಮಗಳನ್ನು ಅಲ್ಲಾಹನು ಸ್ವೀಕರಿಸುವನೇ ಎಂಬ ಬಗ್ಗೆ ಭಯವಿಹ್ವಲರಾಗಿದ್ದರು. ಎಲ್ಲಿಯವರೆಗೆಂದರೆ ತಮ್ಮ ಪಾಪಗಳ  ಹೆಸರಲ್ಲಿ ಶಿಕ್ಷೆಗೆ ಗುರಿಯಾಗಬಹುದೇ ಎಂದು ನೀವು ಆತಂಕ ಭಯಪಡುವುದಕ್ಕಿಂತ ಹೆಚ್ಚು. (ಕುರ್ತುಬಿ)

ತಾಬಿಈ ವಿದ್ವಾಂಸರಾದ ಅತ್ವಾಅ(ರ) ತಾನು ಕಷ್ಟಪಟ್ಟು ಹೊಲಿದ ಒಂದು ವಸ್ತ್ರದೊಂದಿಗೆ ಅಂಗಡಿಗೆ ತೆರಳಿ ವ್ಯಾಪಾರಿಯೊಂದಿಗೆ ಬೆಲೆಯನ್ನು ಹೇಳಿದರು. ವ್ಯಾಪಾರಿಯು ಬಟ್ಟೆಯನ್ನು ಪರಿಶೀಲಿಸಿ ಇದರಲ್ಲಿ ಇಂತಿಂತಹ ಕುಂದು ಕೊರತೆಗಳಿವೆ. ತಾವು ಹೇಳಿದ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದನು. ಇದನ್ನು ಆಲಿಸಿದ ವಿದ್ವಾಂಸರು ಸ್ವಲ್ಪ ಹೊತ್ತು ಆಲೋಚಿಸಿ ಬಳಿಕ ಅಳ ತೊಡಗಿದರು. ನಾನು  ಹೇಳಿದ ಬೆಲೆ ಕಡಿಮೆಯಾಯಿತೆಂದು ಅಳುತ್ತಿದ್ದಾರೆಂದು ಭಾವಿಸಿದ ವ್ಯಾಪಾರಿಯು ಅಳಬೇಡಿ ತಾವು ಹೇಳಿದ ಬೆಲೆಯನ್ನು ನಾನು ನಿಮಗೆ ನೀಡುತ್ತೇನೆ ಎಂದು ಹೇಳಿದನು. ಆಗ ವಿದ್ವಾಂಸರು ಹೇಳಿದರು:  ಈ ಬಟ್ಟೆಯ ತಯಾರಿಕೆಯ ಹಿಂದೆ ಒಂದು ರಾತ್ರಿಯ ಪರಿಶ್ರಮವಿದೆ. ಆದರೂ ನೀವು ಇದರ ಕುಂದು ಕೊರತೆಗಳನ್ನು ಕಂಡು ಹಿಡಿದಿದ್ದೀರಿ ಮತ್ತು ಅದರ ಬೆಲೆಯನ್ನೂ ಕಡಿತಗೊಳಿಸಿದಿರಿ. ಹಾಗೆಯೇ ಸ್ವರ್ಗ ಲಭಿಸಲಿಕ್ಕಾಗಿ ಧಾರಾಳ ಕರ್ಮಗಳನ್ನು ನಾನು ನಿರ್ವಹಿಸಿದ್ದೇನೆ. ಅದನ್ನು ಆದಷ್ಟು ಉತ್ತಮ ಪಡಿಸಲು ನಾನು ಶ್ರಮಿಸಿದ್ದೇನೆ. ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ಹಾಜರಾಗುವಾಗ ತಾವು ತಾನು  ಹೊಲಿದ ಈ ಬಟ್ಟೆಯ ಕುಂದು ಕೊರತೆಗಳನ್ನು ಹುಡುಕಿದಂತೆ ಅಲ್ಲಾಹನು ನಾಳೆ ಪರಲೋಕದಲ್ಲಿ ನನ್ನ ಕರ್ಮಗಳಲ್ಲಿನ ಕುಂದು ಕೊರತೆಗಳನ್ನು ಕಂಡು ಹಿಡಿದರೆ ನಾನು ಪರಾಜಿತನಾದರೆ ಎಂಬುದನ್ನು ಸ್ಮರಿಸಿ ನಾನು ಅತ್ತುಬಿಟ್ಟೆ ಎಂದರು.

ನಮ್ಮ ಕರ್ಮಗಳ ಬಗ್ಗೆ ನಾವು ಅವಲೋಕನ ನಡೆಸಬೇಕು. ಅಲ್ಲಾಹನ ಸನ್ನಿಧಿಗೆ ತಲುಪಿದಾಗ ಮೊದಲು ನಾವು ನಿರ್ವಹಿಸಿದ ನಮಾಝ್‍ನ ಬಗ್ಗೆ ಪ್ರಶ್ನಿಸಲಾಗುವುದು. ಅದರಲ್ಲಿ ಭಯ ಭಕ್ತಿ ಇಲ್ಲದೆ ಇತರ ಲೋಪ ದೋಷಗಳನ್ನು ತೋರಿಸಿ ನಮ್ಮ ನಮಾಝ್‍ನ ಪ್ರತಿಫಲವನ್ನು ಇಲ್ಲವಾಗಿಸುವ ಬಗ್ಗೆ ನಾವು ಜಾಗೃತರಾಗಬೇಕು. ನಮ್ಮ ಕರ್ಮಗಳನ್ನು ಎಷ್ಟು ಉತ್ತಮ ಗೊಳಿಸಲು ಸಾಧ್ಯವೋ ಅಷ್ಟು  ಉತ್ತಮಗೊಳಿಸಲು ಪ್ರಯತ್ನಿಸಬೇಕು. ಜೊತೆಯಲ್ಲಿ ಕರ್ಮಗಳು ಮಾತ್ರ ಇರುತ್ತದೆ ಎಂಬುದನ್ನು ಸ್ಮರಿಸಿರಿ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …