Home / ಲೇಖನಗಳು / ನಮ್ಮ ಸ್ವಭಾವ ಕುರ್‍ಆನ್ ಆಗಲಿ

ನಮ್ಮ ಸ್ವಭಾವ ಕುರ್‍ಆನ್ ಆಗಲಿ

ಡಾ| ಯೂಸುಫುಲ್ ಕರ್ಝಾವಿ

ಕುರ್‍ಆನನ್ನು ಹೆಚ್ಚು ಗೌರವಿಸುವವನೂ, ಅವಗಣಿಸುವವನೂ, ಸಂಭ್ರಮಿಸುವವನೂ ಮರೆತು ಬಿಡುವವನೂ ಒಂದೇ ರೀತಿಯಲ್ಲಿ ನಿರ್ಲಕ್ಷ್ಯರಾಗಿರುವ ವಿಷಯವೇನೆಂದರೆ ಜೀವನದಲ್ಲಿ ಕುರ್‍ಆನನ್ನು ಅನುಸರಿಸುವ ವಿಚಾರ.

ಸಾವಿರಾರು ಅಥವಾ ಲಕ್ಷಾಂತರ ಮಂದಿ ಕುರ್‍ಆನನ್ನು ಕಂಠಪಾಠ ಮಾಡುತ್ತಾರೆ. ಮಿಲಿಯನ್ ಸಂಖ್ಯೆಯ ಮಂದಿ ಕುರ್‍ಆನನ್ನು ರಾತ್ರಿ, ಹಗಲೆನ್ನದೆ ಪಾರಾಯಣ ಮಾಡುತ್ತಾರೆ ಅಥವಾ ಆಲಿಸುತ್ತಾರೆ. ಇನ್ನೂ ಲಕ್ಷಾಂತರ ಮಂದಿ ಗೋಡೆಗಳಲ್ಲೂ,  ಭಿತ್ತಿಗಳಲ್ಲೂ, ಕ್ಯಾನ್‍ವಾಸ್‍ಗಳಲ್ಲೂ ಕುರ್‍ಆನನ್ನು ಸುಂದರವಾಗಿ ಚಿತ್ರಿಸುತ್ತಾರೆ. ಇನ್ನು ಕೆಲವರು ತಮ್ಮ ಕಿಸೆಗಳಲ್ಲೂ, ವಾಹನಗಳಲ್ಲೂ ಕುರ್‍ಆನ್‍ನ ಪ್ರತಿಗಳನ್ನು ಇರಿಸಿಕೊಂಡು ಪುಣ್ಯವನ್ನು ಗಳಿಸಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ರೋಗ ಶಮನ  ಹಾಗೂ ಸಾಂತ್ವನಕ್ಕಾಗಿ ಕುರ್‍ಆನ್ ಅಥವಾ ಅದರ ಸೂಕ್ತಗಳನ್ನು ಜೊತೆಗೆ ಒಯ್ಯುತ್ತಿರುತ್ತಾರೆ. ಹಲವರು ಕುರ್‍ಆನ್‍ನ ಚಿಕಿತ್ಸೆಗಾಗಿ, ರೋಗ ಶಮನಕ್ಕಾಗಿ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಮುಸ್ಲಿಮರ ಕಾರ್ಯಕ್ರಮಗಳು ಕುರ್‍ಆನ್‍ನಿಂದ  ಆರಂಭಗೊಂಡು ಕುರ್‍ಆನ್ ಪಠಣದಿಂದಲೇ ಕೊನೆಗೊಳ್ಳುವುದನ್ನೂ ನಾವು ಕಾಣುತ್ತೇವೆ. ಕುರ್‍ಆನ್ ಪಾರಾಯಣಕ್ಕಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಇಷ್ಟೆಲ್ಲವಿದ್ದರೂ ಕುರ್‍ಆನ್‍ನ ಹಕ್ಕನ್ನು ಅತ್ಯಂತ ಹೆಚ್ಚು ಹಾನಿಗೊಳಿಸುವವರು ಮುಸ್ಲಿಮರಾಗಿದ್ದಾರೆ ಎಂಬುದು ವಾಸ್ತವಿಕತೆಯಾಗಿದೆ. ಕಾರಣವೇನೆಂದರೆ ಕುರ್‍ಆನ್ ಅವರನ್ನು ಬೌದ್ಧಿಕವಾಗಿ ಸಾಗಿಸುವ ಮಾರ್ಗದರ್ಶಕವಾಗಿಲ್ಲ. ಹೃದಯಗಳನ್ನು  ಆಕರ್ಷಿಸುವ, ಸ್ವಾಧೀನಗೊಳಿಸುವ ಶಕ್ತಿಯಾಗುತ್ತಿಲ್ಲ. ಸ್ವಭಾವ ಗುಣಗಳು, ವರ್ತನೆಗಳನ್ನು ಚಲಿಸುವಂತೆ ಮಾಡುವ ಚಾಲಕ ಶಕ್ತಿಯಾಗುತ್ತಿಲ್ಲ. ಸ್ವಂತವನ್ನು ಬದಲಾವಣೆಗೊಳಿಸುವ ಪ್ರೇರಕ ಶಕ್ತಿಯೂ ಆಗುತ್ತಿಲ್ಲ.

ಮೇಲೆ ಹೇಳಿದ ಕುರ್‍ಆನ್ ನೊಂದಿಗಿನ ಮುಸ್ಲಿಮರ ಪರಿಗಣನೆಯೆಲ್ಲವೂ ಚರ್ಮದ ಮೇಲ್ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಅದು ಒಳಭಾಗಕ್ಕೆ ತಲುಪುವುದಿಲ್ಲ. ಅದು ಕೇವಲ ರೂಪ ಮಾತ್ರ. ವಾಸ್ತವಕ್ಕೆ ತಲುಪುವುದಿಲ್ಲ. ಶಾಖೆಗಳಲ್ಲಿ ಮಾತ್ರ ಉಳಿದಿದೆ.  ಮೂಲಕ್ಕೆ ತಲುಪುತ್ತಿಲ್ಲ. ಅವುಗಳಲ್ಲಿ ಕೆಲವು ಯಾವುದೇ ಆಧಾರಗಳಿಲ್ಲದ, ಬೆಂಬಲವಿಲ್ಲದ ನವೀನವಾದಗಳಾಗಿವೆ. ಇಂತಹ ನವೀನಾಚಾರಗಳ ಕುರಿತು ಜಾಗರೂಕರಾಗಬೇಕೆಂದು ಪ್ರವಾದಿಯವರು(ಸ) ನೆನಪಿಸಿದ್ದಾರೆ. “ಹೊಸದಾಗಿ ಉಂಟಾಗುವ  ಕಾರ್ಯಗಳ ಕುರಿತು ನೀವು ಜಾಗರೂಕರಾಗಿರಿ. ಎಲ್ಲಾ ಬಿದ್‍ಅತ್‍ಗಳು ಪಥಭ್ರಷ್ಟತೆಯಾಗಿದೆ.” (ಅಬೂದಾವೂದ್, ತಿರ್ಮಿದಿ, ಇಬ್ನುಮಾಜಃ, ಅಹ್ಮದ್)

ಕುರ್‍ಆನ್‍ನೊಂದಿಗೆ ಹೋಲಿಸಲಾಗುವಂತಹ ಯಾವುದೇ ವಸ್ತು ಈ ಲೋಕದಲ್ಲಿಲ್ಲವೆಂದು ಅಲ್ಲಾಹನು ಹೇಳುತ್ತಾನೆ: “ಹೇ ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಲ್ಪಟ್ಟಿರುವುದನ್ನೆಲ್ಲಾ ಅನುಸರಿಸಿರಿ ಮತ್ತು ನಿಮ್ಮ ಪಾಲಕ ಪ್ರಭುವನ್ನು  ಇತರ ಸಂರಕ್ಷಕರನ್ನು ಅನುಸರಿಸಬೇಡಿ. ಆದರೆ ನೀವು ಉಪದೇಶವನ್ನು ಅಲ್ಪವೇ ಸ್ವೀಕರಿಸುತ್ತೀರಿ.” (ಅಲ್ ಅಅïರಾಫ್- 3)

ಕುರ್‍ಆನನ್ನು ನಮ್ಮ ಇಮಾಮ್ ಹಾಗೂ ಮಾರ್ಗದರ್ಶಕವಾಗಿ ಮಾಡುವುದೇ ಕುರ್‍ಆನ್‍ನ ಅನುಸರಣೆ. ಕುರ್‍ಆನ್ ನಮ್ಮ ಮಾರ್ಗದರ್ಶಕವಾಗಿ ಮುಂದೆ ಸಾಗುತ್ತಾ ನಾವು ಅದನ್ನು ಹಿಂಬಾಲಿಸಬೇಕು. ಕುರ್‍ಆನನ್ನು ನಮ್ಮ ಹಿಂದಿರಿಸುವುದೋ,  ವಿಧಿಗಳಿಂದ ತಪ್ಪಿಸಿಕೊಳ್ಳುವ ಒಂದು ಉಪಾಧಿಯಾಗಿ ಕುರ್‍ಆನನ್ನು ಮಾರ್ಪಡಿಸಲಾರದು. ಯಾರಾದರೂ ಕುರ್‍ಆನನ್ನು ಆತನ ದಾರಿ ದೀಪವಾಗಿ ಮಾಡಿದರೆ ಅದು ಅವನನ್ನು ಸ್ವರ್ಗಕ್ಕೆ ತಲುಪಿಸುತ್ತದೆ. ಯಾರಾದರೂ ಕುರ್‍ಆನನ್ನು ಅವಗಣಿಸಿದನೋ,  ಅದು ಅವನನ್ನು ನರಕಕ್ಕೆ ತಲುಪಿಸುತ್ತದೆ. ಎಂತಹ ದುರಂತ ನೋಡಿ!

ಕುರ್‍ಆನ್ ವಿವಿಧ ಸ್ತರಗಳಲ್ಲಿರುವ ಜನರನ್ನು ಅಭಿಸಂಬೋಧಿಸುತ್ತದೆ. ಉತ್ತಮ ಕಾರ್ಯಗಳನ್ನು ನಡೆಸಬೇಕೆಂದು ಅಲ್ಲಾಹನು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾನೆ. ಅಲ್ಲಾಹನು ಹೇಳುತ್ತಾನೆ: “ನಿಮ್ಮ ಕಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಕಳಿಸಲಾಗಿರುವ  ಗ್ರಂಥದ ಅತ್ಯುತ್ತಮ ತಾತ್ಪರ್ಯವನ್ನು ಅನುಸರಿಸಿರಿ. ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಮೇಲೆ ಹಠಾತ್ತನೆ ಯಾತನೆಯು ಬಂದೆರಗುವುದಕ್ಕೆ ಮುಂಚೆ- (ಅಝ್ಝುಮರ್- 55)” ಆದ್ದರಿಂದ ನನ್ನ ದಾಸರಿಗೆ ಶುಭ ವಾರ್ತೆ ಯಿದೆ. ಆದುದರಿಂದ ನಿಮ್ಮ ಮಾತನ್ನು ಚೆನ್ನಾಗಿ ಆಲಿಸುವ ಹಾಗೂ ಅದರ ಅತ್ಯುತ್ತಮ ಭಾಗವನ್ನು ಅನುಸರಿಸುವ ನನ್ನ ದಾಸರಿಗೆ ಶುಭ ವಾರ್ತೆ ನೀಡಿರಿ. ಇವರೇ ಅಲ್ಲಾಹನಿಂದ ಸನ್ಮಾರ್ಗ ನೀಡಲ್ಪಟ್ಟವರು ಮತ್ತು ಇವರೇ ಬುದ್ಧಿವಂತರು. (ಅಝ್ಝುಮರ್ 18) ಇಂತಹ ಸೂಕ್ತಗಳಿಂದ  ಅಲ್ಲಾಹನು ವಿಶ್ವಾಸಿಗಳು ಒಳ್ಳೆಯದರಲ್ಲಿ ತೃಪ್ತಿ ಪಟ್ಟರೆ ಸಾಲದು. ಅತ್ಯಂತ ಉತ್ತಮವಾದವುಗಳನ್ನು ಹೃದಯದೊಂದಿಗೆ ಸೇರಿಸಿಕೊಂಡು ಜೀವನ ಶೈಲಿಯಾಗಿ ಬದಲಾಯಿಸಬೇಕು ಎಂಬುದಾಗಿದೆ.

ಈ ಆಕಾಶ-ಭೂಮಿಗಳ ಸರ್ವ ಚರಾಚರಗಳ, ಪ್ರಪಂಚದ ಸಕಲ ಅಲಂಕಾರಗಳ ಸೃಷ್ಟಿಗಳ ಹಿಂದೆ ಒಂದು ಉದ್ದೇಶವೂ ಯುಕ್ತಿಯೂ ಇದೆಯೆಂದು ಅಲ್ಲಾಹನು ಹೇಳುತ್ತಾನೆ. ಯಾರು ಉತ್ತಮ ಸತ್ಕರ್ಮಗಳನ್ನು ಮಾಡುತ್ತಾರೆಂದೂ ತಿಳಿಯಲಿಕ್ಕಾಗಿದೆ.  ಆರು ದಿನಗಳಲ್ಲಿ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಅವನಾಗಿದ್ದಾನೆ. ಅವನ ಸಿಂಹಾಸನವು ನೀರಿನಿಂದಾವೃತವಾಗಿತ್ತು. ನಿಮ್ಮಲ್ಲಿ ಸತ್ಕರ್ಮವನ್ನು ಮಾಡುವವನು ಯಾರು ಎಂದು ಪರೀಕ್ಷಿಸಲು. (ಹೂದ್: 7)

“ವಾಸ್ತವದಲ್ಲಿ ಇವರ ಪೈಕಿ ಯಾರು ಉತ್ತಮ ಕರ್ಮಗಳನ್ನು ಮಾಡುತ್ತಾರೆಂದು ಪರೀಕ್ಷಿಸಲಿಕ್ಕಾಗಿ ನಾವು ಈ ಭೂಮಿಯಲ್ಲಿರುವ ಎಲ್ಲ ವಸ್ತುಗಳನ್ನು ಭೂಮಿಗೆ ಅಲಂಕಾರವನ್ನಾಗಿ ಮಾಡುತ್ತೇವೆ” (ಅಲ್‍ಕಹ್ಫ್).

“ಅವನು ಅತ್ಯಂತ ಮಂಗಲಮಯನು. ಅವನ ಕೈಯಲ್ಲಿ (ವಿಶ್ವದ) ಪ್ರಭುತ್ವವಿದೆ  ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮಥ್ರ್ಯ ಉಳ್ಳವನಾಗಿದ್ದಾನೆ. ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. ಅವನು ಪ್ರಬಲನೂ ಕ್ಷಮಾಶೀಲನೂ  ಆಗಿರುತ್ತಾನೆ.” (ಅಲ್ ಮುಲ್ಕ್: 1-2)

ಈ ಎಲ್ಲಾ ಸೂಕ್ತಗಳಲ್ಲಿ ಒಳಿತು ಮಾಡುವವನ ಕೆಡುಕು ಮಾಡುವವನ ನಡುವೆ ಸ್ಪರ್ಧೆಯಲ್ಲ. ಸತ್ಯವಿಶ್ವಾಸಿಗಳಲ್ಲೇ ಒಳಿತು ಮಾಡುವವನು ಮತ್ತು ಉತ್ತಮ ಕಾರ್ಯವೆಸಗುವವನ ನಡುವೆಯೇ ಸ್ಪರ್ಧೆ. ಆದ್ದರಿಂದ ಕುರ್‍ಆನ್ ಹಲವು ಕಾರ್ಯಗಳನ್ನು  ವಿವರಿಸುವ ಸಂದರ್ಭಗಳಲ್ಲಿ ಅತ್ಯಂತ ಉತ್ತಮವಾದದ್ದನ್ನು ಸೂಚಿಸುವ `ಅಹ್‍ಸನ್’ ಎಂಬ ಪದವನ್ನು ಉಪಯೋಗಿಸಿದೆ. ಅನಾಥರ ಸಂಪತ್ತು ನೋಡಿಕೊಳ್ಳಲು (ಅಲ್‍ಅನ್‍ಆಮ್: 152) ಕೆಡುಕಿನಿಂದ ತಡೆಯಲು (ಅಲ್ ಮೂಅïಮಿನೂನ್: 96,  ಫುಸ್ಸಿಲತ್: 34), ಸಂವಾದಗಳು (ಅನ್ನಹ್ಲ್: 125) ಎಂಬ ವಿಷಯಗಳಲ್ಲೆಲ್ಲಾ ಅತ್ಯಂತ ಉತ್ತಮವಾದುದನ್ನು ಪರಿಗಣಿಸಬೇಕೆಂದು ಅಲ್ಲಾಹನು ಎಚ್ಚರಿಸಿದ್ದಾನೆ.

ಸಹಾಬಿಗಳಲ್ಲೂ, ಸಚ್ಚಾರಿತ್ರ್ಯವಂತರಾದ ಪೂರ್ವಜರಲ್ಲೂ ಕುರ್‍ಆನ್ ಮಾದರಿಯನ್ನು ಸೃಷ್ಟಿಸಿದೆ. ಆದ್ದರಿಂದ ನಮ್ಮ ಜೀವನದಲ್ಲೂ ಕುರ್‍ಆನನ್ನು ಅನು ಸರಿಸಬೇಕು ಎಂದು ನಾವು ಬಯಸುತ್ತೇವೆ.

ಕುರ್‍ಆನ್‍ನ ಸ್ವಭಾವ:
ಇಂದು ಮುಸ್ಲಿಮರ ಜೀವನದಲ್ಲಿ ಕುರ್‍ಆನ್‍ನ ಸ್ವಭಾವವು ಕಳೆದು ಹೋಗುತ್ತಿದೆ. ಅದು ಯಾವುದೆಂದು ಆಯಿಶಾ(ರ)ರು ನಮಗೆ ಸ್ಪಷ್ಟಪಡಿಸಿದ್ದಾರೆ. ಪ್ರವಾದಿ(ಸ)ರ ಸ್ವಭಾವದ ಕುರಿತು ಆಯಿಶಾ(ರ)ರೊಡನೆ ಕೇಳಿದಾಗ ಅವರು ಹೇಳಿದರು; “ಪ್ರವಾದಿಯವರ  ಸ್ವಭಾವ ಕುರ್‍ಆನ್ ಆಗಿತ್ತು” (ಮುಸ್ಲಿಮ್). ಪ್ರವಾದಿಯವರ(ಸ) ವೈಯಕ್ತಿಕ ಜೀವನ, ಸಾಮಾಜಿಕ ಜೀವನ, ಹಗಲಿನ ವ್ಯವಹಾರಗಳು, ರಾತ್ರಿಯ ಕರ್ಮಗಳು, ಕುಟುಂಬ- ಅನುಯಾಯಿಗಳೊಂದಿಗಿನ ವ್ಯವಹಾರಗಳು, ಆರ್ಥಿಕ ವ್ಯವಹಾರಗಳು,  ಶತ್ರುಗಳೊಂದಿಗೆ ಶಾಂತಿಯ ಹಾಗೂ ಯುದ್ಧದ ಸಂದರ್ಭಗಳ ದೃಷ್ಟಿಕೋನಗಳು… ಹೀಗೆ ಎಲ್ಲವನ್ನೂ ನೋಡಬೇಕಾದರೆ ಅವರು ಕುರ್‍ಆನನ್ನು ತೆರೆದು ಓದಲಿ. ಅದರಲ್ಲಿ ಅವರು ಸತ್ಯವಿಶ್ವಾಸಿಗಳ, ಸೂಕ್ಷ್ಮಮತಿಗಳ, ಸಾಮೀಪ್ಯ ಪಡೆದವರ, ದೇವನ  ದಾಸರ ಗುಣಗಳು, ವಿಶೇಷಗಳನ್ನು ಓದುತ್ತಾರೆ. ಅಲ್ಲಾಹನ ಆದೇಶಗಳು ನಿಷೇಧಗಳನ್ನು ಕಾಣುತ್ತಾರೆ. ಆಗ ಅವರಿಗೆ ಪ್ರವಾದಿಯವರ(ಸ) ಸ್ವಭಾವ ಗುಣಗಳು ಯಾವುದೆಂದು ತಿಳಿದು ಬರುತ್ತದೆ. ಪೂರ್ವಜರಾದ ಪ್ರವಾದಿಗಳ ಗುಣಗಳನ್ನು, ಶ್ರೇಷ್ಠತೆಗಳನ್ನು  ತಿಳಿದುಕೊಳ್ಳಬಹುದು. ಇವೆಲ್ಲವೂ ಮುಹಮ್ಮದ್(ಸ)ರಲ್ಲೂ ಮೇಳೈಸಿದ್ದವು ಎಂದು ಅರ್ಥವಾಗುತ್ತದೆ. ಆದ್ದರಿಂದ ಹಲವಾರು ಪ್ರವಾದಿಗಳ ಕಥೆಗಳನ್ನು ಹೇಳಿದ ಬಳಿಕ ಅಲ್ಲಾಹನು ಉಚ್ಚರಿಸುತ್ತಾನೆ, “ಅವರನ್ನೇ ಅಲ್ಲಾಹನು ಸತ್ಯ ಮಾರ್ಗದಲ್ಲಿ ನಡೆಸಿದ್ದಾನೆ.  ಆದ್ದರಿಂದ ಅವರ ಮಾರ್ಗವನ್ನು ನೀನೂ ಹಿಂಬಾಲಿಸು.” (ಅನ್‍ಆಮ್ 90). “ನಾನು ಸಚ್ಚಾರಿತ್ರ್ಯದ ಪೂರ್ತೀಕರಣಕ್ಕಾಗಿ ನೇಮಿಸಲಾಗಿದೆ” ಎಂದು ಪ್ರವಾದಿಯವರು(ಸ) ಸ್ಪಷ್ಟಪಡಿಸಿದ್ದನ್ನು ನಾವು ಕಾಣುತ್ತೇವೆ.

ಅಲ್ಲಾಹನು ಅಂತ್ಯ ಪ್ರವಾದಿಯನ್ನು ಎಲ್ಲರಿಗೂ ಮಾದರಿಯೂ, ಮಾರ್ಗದರ್ಶಕರಾಗಿಯೂ ಮಾಡಿದ್ದಾನೆ. ಅವರು ಎಲ್ಲರೂ ಅನುಸರಿಸಬೇಕಾದ ನಾಯಕ. ಅವರನ್ನು ಅನುಸರಿಸಿದವರು ಒಮ್ಮೆಯೂ ಪಥಭ್ರಷ್ಟರಾಗಲಾರರು. “ನಿಸೃಂಶಯವಾಗಿಯೂ  ನಿಮಗೆ ಅಲ್ಲಾಹನ ಪ್ರವಾದಿವರ್ಯರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹ್ ಮತ್ತು ಅಂತ್ಯ ದಿನದಲ್ಲಿ ನಿರೀಕ್ಷೆ ಅರ್ಪಿಸಿದವರಿಗೆ ಮತ್ತು ಅಲ್ಲಾಹನನ್ನು ಧಾರಾಳವಾಗಿ ಸ್ಮರಿಸುವವರಿಗೆ.” (ಅಲ್ ಅಹ್‍ಝಾಬ್: 21)

ಇಂದಿನ ಮುಸ್ಲಿಮರ ಪರಿಸ್ಥಿತಿಯನ್ನು ಅವಲೋಕಿಸಿ. ಪ್ರವಾದಿ(ಸ)ರೊಂದಿಗೆ ಎಲ್ಲರಿಗೂ ವೈಚಾರಿಕ ಸಂಬಂಧವಿದೆ. ಅವರ ಹೆಸರು ಕೇಳುವಾಗ ಜೋರಾಗಿ ಸಲಾತ್ ಮತ್ತು ಸಲಾಮ್ ಹೇಳುತ್ತೇವೆ. ಎಲ್ಲರ ಮನೆಗಳಲ್ಲೂ ಮುಹಮ್ಮದ್, ಅಹ್ಮದ್ ಅಥವಾ  ಪ್ರವಾದಿಗಳು, ಸಹಾಬಿಗಳ ಹೆಸರುಗಳು ಇರುವವರಿರಬಹುದು. ಪ್ರವಾದಿವರ್ಯರ(ಸ) ಜೀವನದ ಹೆಚ್ಚಿನ ಸಂದರ್ಭಗಳನ್ನು ನೆನಪಿಸಿಕೊಳ್ಳದೆ ಮುಸ್ಲಿಮರಲ್ಲಿ ಬಹುಸಂಖ್ಯಾತರ ದಿನಗಳು ಕಳೆದು ಹೋಗಲಾರದು. ಆದರೆ ಇವರಲ್ಲಿ ಪ್ರವಾದಿವರ್ಯರ(ಸ)  ಸ್ವಭಾವ ಅಥವಾ ಕುರ್‍ಆನ್‍ನ ಸ್ವಭಾವ ಎಷ್ಟು ಮಂದಿಯಲ್ಲಿದೆ? ಪ್ರವಾದಿ(ಸ)ರ ಜೀವನದಿಂದ ಆರಿಸಿಕೊಂಡ, ಜನರಿಗಾಗಿ ಉತ್ತಮ ಸಮುದಾಯವಾಗಿ ನೆಲೆನಿಂತ, ಸ್ವಭಾವ ಹಾಗೂ ಕರ್ಮಗಳಿಂದ ಜನರ ನಡುವೆ ಸತ್ಯ ಸಾಕ್ಷ್ಯವನ್ನು ನಿರ್ವಹಿಸಿದ, ಪ್ರವಾದಿವರ್ಯರ(ಸ) ಅನುಯಾಯಿಗಳು ಹಾಗೂ ಸಚ್ಚರಿತರಾದ ಪೂರ್ವಿಕರು ತೋರಿದಂತಹ ಸ್ವಭಾವ ಇಂದು ಮುಸ್ಲಿಮರ ಜೀವನದಲ್ಲಿದೆಯೇ? ಪ್ರವಾದಿ ಮುಹಮ್ಮದ್(ಸ) ಮತ್ತು ಅನುಚರರು ತಮ್ಮ ಕುರ್‍ಆನ್‍ನ ಸ್ವಭಾವದ ಮೂಲಕ ವಿಶ್ವದಲ್ಲಿ ಇಸ್ಲಾಮನ್ನು  ಪ್ರಚಾರ ಮಾಡಿದರು.

ಕುರ್‍ಆನ್ ಆಕರ್ಷಣೆ:
ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಅರಬಿಗಳಲ್ಲಿ ಕುರ್‍ಆನ್ ಉಂಟು ಮಾಡಿದ ಮಾರ್ಪಾಡು ಏನೆಂಬ ಬಗ್ಗೆ ಯೋಚಿಸಿ. ಕುರ್‍ಆನ್ ಅವರ ಜೀವನದಲ್ಲಿ ಭೂಕಂಪ ಹಾಗೂ ಸಂಚಲನವನ್ನು ಸೃಷ್ಟಿಸಿತು. ಅವರ ಯುಕ್ತಿ, ಚಿಂತನೆ, ಹೃದಯ, ಭಾವನೆ, ಕರ್ಮಗಳು, ಸ್ವಭಾವಗಳು, ವ್ಯವಹಾರಗಳು… ಹೀಗೆ ಎಲ್ಲದರಲ್ಲೂ ಕುರ್‍ಆನ್ ಕ್ರಾಂತಿಯನ್ನು ನಿರ್ಮಿಸಿತು. ಅಲ್ಲೆಲ್ಲ ಅತ್ಯುತ್ತಮವಾದ ಸ್ವಭಾವ ಗುಣಗಳನ್ನು ಸ್ವೀಕರಿಸಲಾಯಿತು. “ಅಲ್ಲಾಹನು ಅತ್ಯಂತ ಶ್ರೇಷ್ಠವಾದ ವಚನಗಳನ್ನು ಇಳಿಸಿದನು. ವಚನಗಳು  ಪರಸ್ಪರ ಹೊಂದಾಣಿಕೆ ಇರುವಂತಹದ್ದು, ಪುನರಾವರ್ತಿಸಲ್ಪಟ್ಟಂತಹ ಗ್ರಂಥವಿದು. ಅದನ್ನು ಆಲಿಸುವಾಗ ತಮ್ಮ ದೇವನನ್ನು ಭಯಪಡುವವರ ಚರ್ಮಗಳು ರೋಮಾಂಚನಗೊಳ್ಳುವುದು. ನಂತರ ಅವರ ಚರ್ಮಗಳು ಹೃದಯಗಳನ್ನು ಅಲ್ಲಾಹನನ್ನು  ಸ್ಮರಿಸುವ ರೀತಿಯಲ್ಲಿ ವಿನಯಶೀಲವಾಗುತ್ತದೆ. ಇದುವೇ ಅಲ್ಲಾಹನ ಮಾರ್ಗದರ್ಶನ. ಅದರ ಮೂಲಕ ಅವನು ಇಚ್ಛಿಸಿದವನನ್ನು ನೇರ ಮಾರ್ಗಕ್ಕೆ ತರುತ್ತಾನೆ. ಅಲ್ಲಾಹನು ದಾರಿ ತಪ್ಪಿಸಿದವರನ್ನು ನೇರ ಮಾರ್ಗಕ್ಕೆ  ತಲುಪಿಸಲು ಯಾರಿಗೂ ಸಾಧ್ಯವಿಲ್ಲ?  ಕುರ್‍ಆನ್‍ನ ಸ್ವಾಧೀನವನ್ನು ಕುರ್‍ಆನ್ ವಿಶ್ಲೇಷಿಸಿದ್ದು ಹೀಗೆ.

ಪ್ರವಾದಿ(ಸ)ರ ಅನುಚರರು ಕುರ್‍ಆನನ್ನು ಕಂಠಪಾಠ ಮಾಡಿದ್ದು, ಗೌರವಿಸಿದ್ದು ಕೇವಲ ಹೃದಯದಲ್ಲಿ ಮಾತ್ರ ಆಗಿರಲಿಲ್ಲ. ಅವರ ಜೀವನದಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಇಬ್ನು ಮಸ್‍ವೂದ್(ರ)ರು ಹೇಳಿರುವರು: “ನಮ್ಮಲ್ಲಿ ಪ್ರತಿಯೊಬ್ಬರು ಕುರ್‍ಆನ್‍ನ ಸ್ವಲ್ಪ ಸೂಕ್ತಗಳನ್ನು ಕಲಿತರೆ, ಅದರ ಆಶಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವವರೆಗೆ ಬೇರೆ ಸೂಕ್ತಗಳನ್ನು ಕಲಿಯುತ್ತಿರಲಿಲ್ಲ” (ತ್ವಬ್ರಾನಿ). ಇದೇ ರೀತಿ ಬೇರೆ ಸಹಾಬಿಗಳ ಕುರಿತು ಇಂತಹದೇ ವರದಿಗಳನ್ನು ಕಾಣಲು ಸಾಧ್ಯವಿದೆ.

ಜೀವನದಲ್ಲಿ ಕುರ್‍ಆನ್‍ನ ಎಲ್ಲಾ ಆದೇಶಗಳನ್ನು ಪಾಲಿಸಿ, ಅದನ್ನು ಜೀವನ ಶೈಲಿಯಾಗಿ ರೂಪಿಸಲು ಕುರ್‍ಆನನ್ನು 23 ವರ್ಷಗಳಲ್ಲಿ ಹಂತ ಹಂತವಾಗಿ ಅವತೀರ್ಣಗೊಳಿಸಲಾಗಿತ್ತು. ಜನರು ಅವರ ಆಶಯಗಳನ್ನು ಗ್ರಹಿಸಿ, ಜೀವನದಲ್ಲಿ  ಅಳವಡಿಸಿಕೊಳ್ಳಲು ಅಲ್ಲಾಹನು ಅವಕಾಶ ನೀಡಿದ್ದನು. ಅಲ್ಲಾಹನು ಹೇಳುತ್ತಾನೆ, “ನೀವು ಈ ಕುರ್‍ಆನನ್ನು ಸಂದರ್ಭೋಚಿತವಾಗಿ ಜನರಿಗೆ ಹೇಳಿಕೊಡಲಿಕ್ಕಾಗಿ ನಾವಿದನ್ನು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿದ್ದೇವೆ. ಮತ್ತು ಇದನ್ನು ನಾವು (ಸಂದರ್ಭಾನುಸಾರ) ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ” (ಬನೀ ಇಸ್ರಾಈಲ್: 106).

ಪ್ರವಾದಿವರ್ಯರ(ಸ) ಅನುಚರರು ಕುರ್‍ಆನನ್ನು ತಮ್ಮ ಜೀವನದ ಮಾದರಿಯಾಗಿ ಅಂಗೀಕರಿಸಿ, ಪ್ರಾಯೋಗಿಕ ರೂಪಕ್ಕೆ ಇಳಿಸಿದರು. ಕುರ್‍ಆನ್‍ನ ಪ್ರತಿಯೊಂದು  ಸೂಕ್ತವನ್ನು ಅನುಸರಿಸಲು ಪ್ರಯತ್ನಿಸಿದರು. ಅದಕ್ಕೆ ಪ್ರವಾದಿ ಶಿಷ್ಯರ ಜೀವನದಲ್ಲಿ ಧಾರಾಳ ಉದಾಹರಣೆಯನ್ನು ಕಾಣಬಹುದು.

ಅಬೂತಲ್ಹಾ(ರ)ರು ಬೈರೂಹ ಎಂಬ ತನ್ನ ಅತ್ಯಂತ ಪ್ರೀತಿಯ ತೋಟವನ್ನು ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲು ಕಾರಣ ಪವಿತ್ರ ಕುರ್‍ಆನ್‍ನ ಈ ಸೂಕ್ತವಾಗಿತ್ತು. “ನೀವು ನಿಮಗೆ ಬಹಳ ಪ್ರಿಯವಾಗಿರುವ ವಸ್ತುಗಳನ್ನು (ಅಲ್ಲಾಹನ ಮಾರ್ಗದಲ್ಲಿ)  ವ್ಯಯಿಸುವ ತನಕವೂ ಪುಣ್ಯದ ಮಟ್ಟವನ್ನು ತಲುಪಲಾರಿರಿ.”
(ಅಲಿ ಇಮ್ರಾನ್: 92)

ಝಿಲ್‍ಝಾಲ್ ನಂತಹ ಸೂರಃಗಳು ಸಹಾಬಿಗಳಲ್ಲಿ ಸೃಷ್ಟಿಸಿದ ಕಂಪನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅಬೂಬಕ್ಕರ್(ರ) ಸೇರಿದಂತೆ ಸಹಾಬಿಗಳು ಈ ಸೂರಃದ ಕುರಿತು ಆಲೋಚಿಸಿ ಅಳುತ್ತಿದ್ದರೆಂಬ ವರದಿಗಳಿವೆ. ಮದ್ಯದ ಸುಖದಲ್ಲಿ ತಲ್ಲೀನರಾಗಿದ್ದ  ಸಹಾಬಿಗಳು, ಅದನ್ನು ನಿಷೇಧಿಸಿದ ಸೂಕ್ತಗಳು ಬಂದ ಕೂಡಲೇ ಅವೆಲ್ಲವನ್ನೂ ತ್ಯಜಿಸಿ ಬಿಟ್ಟರು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.

ಸ್ತ್ರೀ-ಪುರುಷರೂ ಸೇರಿದ ಒಂದು ದೊಡ್ಡ ಸಮೂಹವನ್ನು ಕುರ್‍ಆನ್ ಸಂಪೂರ್ಣವಾಗಿ ಬದಲಾಯಿಸಿತು. ಅವರು ಅಜ್ಞಾನದಿಂದ ಇಸ್ಲಾಮಿನೆಡೆಗೆ ಸಂಪೂರ್ಣವಾಗಿ ಬದಲಾಯಿಸಲ್ಪಟ್ಟಿದ್ದರು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …