Home / ಲೇಖನಗಳು / ಮಕ್ಕಳೊಂದಿಗೆ ಸೇರಿ ಬಾಳಬೇಕಾದ ಮಾತಾಪಿತರು..

ಮಕ್ಕಳೊಂದಿಗೆ ಸೇರಿ ಬಾಳಬೇಕಾದ ಮಾತಾಪಿತರು..

✍️ ಸಿ.ಟಿ. ಸುಹೈಬ್

ಮಕ್ಕಳು ಜೀವನದ ಮಹತ್ತರವಾದ ಅನುಗ್ರಹ ಹಾಗೂ ಅಲಂಕಾರವಾಗಿದೆ. ಮಕ್ಕಳು ಸುಂದರವಾಗಿ ಬಾಳಿ ಬದುಕಬೇಕೆಂಬುದು ಪ್ರತಿಯೋರ್ವ ಮಾತಾಪಿತರ ಪ್ರಾರ್ಥನೆಯಾಗಿದೆ. ಅವರ ಪ್ರತಿಚಲನವಲನಗಳ ಮೇಲೆ ಅವರು ಸದಾ ನಿಗಾ ವಹಿಸುತ್ತಾರೆ. ಅವರು ಬೆಳೆಯುವವರೆಗೆ ಅವರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.

ಜೊತೆಗೆ ಆತಂಕವೂ ಅವರಲ್ಲಿರುತ್ತದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಉತ್ತಮ ಸ್ಥಿತಿಗೆ ತಲುಪಿಸಲು ಎಲ್ಲ ತಂದೆ-ತಾಯಂದಿರೂ ಶ್ರಮಿಸುತ್ತಾರೆ. ಲೌಕಿಕವಾದ ಏಳಿಗೆಯ ಬಗ್ಗೆ ಕನಸು ಕಂಡು ಅದನ್ನು ಸಾಕ್ಷಾತ್ಕಾರಗೊಳಿಸಲು ಎಲ್ಲ ರೀತಿಯ ಬೆಂಬಲ ನೀಡಿ ಗಮನ ಹರಿಸುತ್ತಾರೆ. ಆದರೆ,

ಧಾರ್ಮಿಕವಾಗಿ ಅವರನ್ನು ಪ್ರಬುದ್ಧರನ್ನಾಗಿಸಲು ಎಷ್ಟು ತಂದೆ ತಾಯಂದಿರು ಶ್ರಮಿಸುತ್ತಾರೆ ಎಂಬುದು ಚಿಂತನಾರ್ಹ ವಿಚಾರ. ಮಕ್ಕಳ ಬೆಳವಣಿಗೆ, ತರಬೇತಿಯಲ್ಲಿ ತಂದೆ ತಾಯಂದಿರಿಗೆ ಮಹತ್ತರವಾದ ಪಾತ್ರವಿದೆ. ಸಣ್ಣ ಪ್ರಾಯದಲ್ಲಿ ಮಕ್ಕಳು ಮಾತಾಪಿತರನ್ನು ನೋಡಿ, ಕಂಡು ಕಲಿಯುತ್ತಾರೆ.

‘ಅಯ್ಯುಹಲ್ ವಲದ್’ ಎಂಬ ಪ್ರಸಿದ್ಧ ಗ್ರಂಥದಲ್ಲಿ ಇಮಾಮ್ ಗಝ್ಝಾಲಿಯವರು ಒಂದು ಮಗುವನ್ನು ಲಾಲಿಸಿ ಬೆಳೆಸುತ್ತಿರುವಾಗ ಗಮನಿಸಬೇಕಾದ ಪ್ರಮುಖವಾದ ಕೆಲವು ವಿಚಾರಗಳನ್ನು ಸೂಚಿಸಿದ್ದಾರೆ. ಉತ್ಕೃಷ್ಟವಾದ ಗುಣಗಳನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಬೇಕು. ಪ್ರಾಮಾಣಿಕತೆ, ಸತ್ಯಸಂಧತೆ, ಆತ್ಮಾರ್ಥತೆ, ಕರುಣೆ, ನಯ ವಿನಯ ಮುಂತಾದ ಗುಣಗಳನ್ನು ಬೆಳೆಸಬೇಕು. ಸಂಭಾಷಣೆ, ಆಹಾರ ಸೇವನೆ, ವಸ್ತ್ರಧಾರಣೆ ಮುಂತಾದುದರ ಗೌರವವನ್ನು ಅವರಿಗೆ ಮನಗಾಣಿಸಬೇಕು.

ಮಕ್ಕಳನ್ನು ತಿದ್ದುವಾಗ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಇರಬೇಕು. ವಿವೇಕತನ ಮತ್ತು ಭಾವನಾತ್ಮಕ ವಿಚಾರಗಳ ನಡುವೆ ಸಮತೋಲನ ಕಾಪಾಡಲು ಅವರು ಪ್ರಬುದ್ಧರಾಗಬೇಕು. ಹಣ ಸಂಪತ್ತಿನ ವ್ಯಾಮೋಹ ಅವರಲ್ಲಿ ಬೆಳೆಯದಂತೆ ಎಚ್ಚರ ವಹಿಸಬೇಕು. ಆ ಬಗ್ಗೆ ಉಪದೇಶಗಳನ್ನು ನೀಡುತ್ತಿರಬೇಕು. ಹೀಗೆ ಅವರು ಸುಮಾರು ಇಪ್ಪತ್ತು ವಿಚಾರಗಳನ್ನು ಅದರಲ್ಲಿ ದಾಖಲಿಸಿದ್ದಾರೆ.

ಮಕ್ಕಳು ತಪ್ಪು ಮಾಡಿದರೆ ಮತ್ತು ಅದನ್ನು ಪುನರಾವರ್ತಿಸಿದರೆ ಅದನ್ನು ತಿದ್ದುವ ಕುರಿತು ಇಬ್ನು ಸೀನಾ ಹೀಗೆ ಹೇಳಿದ್ದಾರೆ, ಇದು ಬಹಳ ಯುಕ್ತಿಯಿಂದ ಕಾರ್ಯ ನಿರ್ವಹಿಸಬೇಕಾದ ವಲಯವಾಗಿದೆ. ಒರಟು ಸ್ವಭಾವವನ್ನು ಬದಿಗಿರಿಸಿ ಬಹಳ ಸೌಮ್ಯ ಭಾವದಿಂದ ತಿದ್ದುವುದು ಉತ್ತಮ. ಹೆದರಿಸಿ ಬೆದರಿಸಿ ಪಾಪ ಕೃತ್ಯಗಳಿಂದ ದೂರವಿರುವಂತೆ ಮಾಡುವುದಕ್ಕಿಂತ ಉತ್ತಮ ಉಪದೇಶದ ಮುಖಾಂತರ ತಿದ್ದುವುದು ಉತ್ತಮ. ಎಲ್ಲ ದಾರಿಯೂ ಮುಚ್ಚಿದಾಗ ಕೊನೆಯದಾಗಿ ಬೇರೆ ದಾರಿಯಿಲ್ಲದೆ ಅನಿವಾರ್ಯವಾದಾಗ ಮಾತ್ರ ಶಿಕ್ಷಿಸಬೇಕು.

ಮಕ್ಕಳಿಗೆ ಸದ್ಗುಣಗಳನ್ನು ಕ್ರಮ ಪ್ರಕಾರವಾಗಿ ಕಲಿಸಬೇಕು ಎಂದು ಇಬ್ನು ಖಲ್ದೂನ್ ಎಚ್ಚರಿಸುತ್ತಾರೆ. ಒಮ್ಮೆಲೇ ಆದೇಶಿಸಿದರೆ ಅದನ್ನು ಪಾಲಿಸಿ ಅನುಸರಿಸಲು ಮಕ್ಕಳಿಗೆ ತ್ರಾಸದಾಯಕವಾಗುತ್ತದೆ. ಮಕ್ಕಳ ಜೊತೆಗಿನ ವರ್ತನೆಯಲ್ಲಿಯೂ ಪ್ರೀತಿ, ಕರುಣೆಯು ಮುಖ್ಯವಾಗಿ ತುಂಬಬೇಕು. ಬಲಾತ್ಕಾರದ ತಿದ್ದುವಿಕೆ ಮಕ್ಕಳಲ್ಲಿ ಋಣಾತ್ಮಕ ಪರಿಣಾಮವುಂಟಾಗಿ ಅವರ ಗುಣವನ್ನು ಪ್ರತಿಕೂಲವಾಗಿ ಬಾಧಿಸುತ್ತದೆ ಎಂದೂ ಅವರು ಹೇಳಿರುತ್ತಾರೆ. ತರಬೇತಿಯಲ್ಲಿ ಪ್ರಾಮುಖ್ಯವಾದುದು ಅವರಿಗೆ ವಿಶ್ವಾಸದಲ್ಲಿ ದೃಢತೆಯುಂಟು ಮಾಡುತ್ತದೆ. ಅಲ್ಲಾಹನ ಮೇಲಿನ ಭರವಸೆ, ಅವನ ಸಹಾಯದ ಮೇಲಿರುವ ನಂಬಿಕೆಯನ್ನು ಅವನು ನಿರೀಕ್ಷಿಸುತ್ತಾನೆ ಎಂಬ ಪ್ರಜ್ಞೆ ಅವರಲ್ಲಿ ಬೆಳೆಯುವ ರೀತಿಯಲ್ಲಿ ಹಂಚಿಕೊಳ್ಳಬೇಕು.

ಪ್ರವಾದಿವರ್ಯರ(ಸ) ಇತಿಹಾಸದಲ್ಲಿ ಅವರ ಮೂಲಕ ಅಲ್ಲಾಹನ ಜೊತೆಗಿನ ಸಂಬಂಧವನ್ನು ಮನಸ್ಸಲ್ಲಿ ಅಚ್ಚೊತ್ತುವ ರೀತಿಯಲ್ಲಿ ವಿವರಿಸಿಕೊಡಬೇಕು. ಸ್ವರ್ಗದ ಕುರಿತು ಮೋಹ, ಅಲ್ಲಿಗೆ ತಲುಪಲು ಬಯಕೆ ಅವರ ಮನದಲ್ಲಿ ತುಂಬುವಂತೆ ಮಾಡಬೇಕು.

ಸಣ್ಣ ಹುಡುಗನಾಗಿದ್ದ ಅಬ್ದುಲ್ಲಾ ಬಿನ್ ಅಬ್ಬಾಸ್(ರ)ರಿಗೆ ಪ್ರವಾ ದಿ(ಸ)ರಿಗೆ ಕಲಿಸಿದ ಕೆಲವು ಉಪದೇಶಗಳು ಹದೀಸ್‌ಗಳಲ್ಲಿ ದಾಖಲಾಗಿದೆ.

ಇಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. “ಒಮ್ಮೆ ಪ್ರವಾದಿವರ್ಯರು(ಸ) ಜೊತೆ ನಡೆದುಕೊಂಡು ಹೋಗುತ್ತಿರುವಾಗ, ಮಗನೇ, ನಾನು ನಿನಗೆ ಕೆಲವು ವಿಚಾರಗಳನ್ನು ಕಲಿಸಿಕೊಡುತ್ತೇನೆ. ನೀನು ಅಲ್ಲಾಹನನ್ನು ಮನಸ್ಸಲ್ಲಿ ಸ್ಮರಿಸುತ್ತಾ ನಡೆದರೆ ಅವನ ಸಂರಕ್ಷಣೆ ನಿನಗೆ ಲಭಿಸುತ್ತದೆ. ಅಲ್ಲಾಹನಿಗೆ ಸಂಬಂಧಿಸಿದ ವಿಚಾರಗಳಿಗಾಗಿ ಜೀವಿಸಿದರೆ ನಿನ್ನ ಮುಂದೆ ಆತನನ್ನು ಕಾಣಬಹುದು. ನಿನಗೇನಾದರೂ ಕೇಳಬೇಕೆಂದಿದ್ದರೆ ಅಲ್ಲಾಹನೊಂದಿಗೆ ಯಾಚಿಸು. ನೀನು ಇತರ ಯಾರೊಂದಿಗಾದರೂ ನೆರವು ಯಾಚಿಸುವುದಾದರೆ ಆತನೊಂದಿಗೆ ಮಾತ್ರ ಯಾಚಿಸು. ಸುತ್ತಮುತ್ತಲಿರುವವರು ಎಲ್ಲರೂ ಸೇರಿ ನಿನಗೆ ಏನಾದರೂ ಉಪಕಾರ ಮಾಡಲು ನಿರ್ಧರಿಸಿದರೆ ಅಂತಹ ಒಂದು ಉಪಕಾರವನ್ನು ಅಲ್ಲಾಹನು ನಿನಗೆ ವಿಧಿಸಿಲ್ಲ ಎಂದಾಗಿದ್ದರೆ ಅವರೆಲ್ಲರೂ ಸೇರಿ ಪ್ರಯತ್ನಿಸಿದರೂ ಅದು ನಿನಗೆ ಲಭಿಸದು. ಸುತ್ತ ಮುತ್ತಲಿನ ಪರಿಸರದವರೆಲ್ಲರೂ ನಿನಗೆ ಕಿರುಕುಳ, ಉಪಟಳ ನೀಡಲು ನಿರ್ಧರಿಸಿದರೂ ಅಲ್ಲಾಹನು ವಿಧಿಸಿಲ್ಲ ಎಂದಾದರೆ ಅವರೆಷ್ಟು ಶ್ರಮಿಸಿದರೂ ಅವರಿಂದ ನಿನಗೆ ಯಾವುದೇ ರೀತಿಯ ತೊಂದರೆಯುಂಟು ಮಾಡಲು ಸಾಧ್ಯವಿಲ್ಲ ಎಂದು ಉಪದೇಶಿಸಿದರು.

ಪ್ರವಾದಿವರ್ಯರ(ಸ) ಜೊತೆಗಿನ ಪ್ರೀತಿ, ಗೌರವ, ಬಾಧ್ಯತೆಗಳನ್ನು ಎಲ್ಲಾ ಮಕ್ಕಳ ಮನಸ್ಸಲ್ಲಿ ಉದ್ಭವಿಸುವಂತೆ ಮಾಡಬೇಕು. ಪ್ರವಾದಿಯವರು(ಸ) ಅವರ ಮನಸ್ಸಿನ `ಹೀರೋ’ ಆಗಿ ಬೆಳಗುವಂತೆ ಮಾಡಬೇಕು. ಆರಾಧನಾ ಕರ್ಮ ನಿರ್ವಹಣೆಯಲ್ಲಿ ನಿಷ್ಠೆ ಇರುವ ಮಾನಸಿಕಾವಸ್ಥೆ ಸೃಷ್ಟಿಸಬೇಕು. ನಮಾಝ್, ಉಪವಾಸವನ್ನು ಸ್ವಯಂ ನಿರ್ವಹಿಸುವಂತೆ, ಉಪವಾಸವನ್ನು ಸ್ವಯಂ ನಿರ್ವಹಿಸುವಂತೆ ತರಬೇತಿ ನೀಡಬೇಕು. ಕಡ್ಡಾಯ ಕರ್ಮಗಳು ನಿರ್ವಹಿಸಲು ಪ್ರಾಪ್ತರಾಗದ ಮಕ್ಕಳ ಮೇಲೆ ಒರಟುತನದಿಂದ ಒತ್ತಡ ಹೇರಬಾರದು. ನಿರ್ವಹಿಸದೇ ಇದ್ದರೆ ಕೋಪಗೊಳ್ಳುವುದು ಧನಾತ್ಮಕ ಪರಿಣಾಮ ಬೀರದು.

ಪ್ರಾಮಾಣಿಕತೆ, ಸತ್ಯಸಂಧತೆ, ಕರುಣೆ, ಪರೋಪಕಾರ, ಸಹನೆ ಮುಂತಾದ ಸದ್ಗುಣಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಮಕ್ಕಳಲ್ಲಿ ಒಂದು ಹಂತದಲ್ಲಿ ಕೆಟ್ಟ ಚಾಳಿಗಳಿದ್ದರೆ ಪ್ರಾಯದ ಒಂದು ಹಂತ ದಾಟಿದಾಗ ಬದಲಾಗುತ್ತದೆ. ಕೆಲವದಕ್ಕೆ ಸ್ವಲ್ಪ ಸಮಯ ತಗಲುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟು ಮುಂದುವರಿಯಬೇಕು. ಎಷ್ಟೇ ಪ್ರಯತ್ನಪಟ್ಟರೂ ಬದಲಾಗುವುದಿಲ್ಲ ಎಂದಾದರೆ ಅದಕ್ಕೆ ಅನುಗುಣವಾಗಿ ತಜ್ಞರ ಮುಖಾಂತರ ಪ್ರಯತ್ನಿಸಬೇಕು.

ಸ್ಮಾರ್ಟ್ ಫೋನ್, ಆನ್‌ಲೈನ್ ಗೇಮ್ ಸಕ್ರಿಯವಾಗಿರುವ ಈ ಕಾಲದಲ್ಲಿ ಮೊಬೈಲು ಫೋನ್‌ಗಳನ್ನು ತೀರಾ ನೀಡದೇ ಇರುವ ಬದಲು ಅವರಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ ನೀಡಬೇಕು. ಉಳಿದ ಸಮಯಗಳಲ್ಲಿ ಹೊರಗೆ ಆಟವಾಡಲು ಇತರರೊಂದಿಗೆ ಬೆರೆಯಲು ಪ್ರೇರಣೆ ನೀಡಬೇಕು. ಕ್ರೀಡೆಗೂ ಪ್ರೋತ್ಸಾಹ ನೀಡಿದ ಪ್ರವಾದಿವರ್ಯರ(ಸ) ಶಿಕ್ಷಣಗಳನ್ನು ಗಮನದಲ್ಲಿರಿಸಬೇಕು. ಅನಿಯಂತ್ರಿತವಾದ ಫಾಸ್ಟ್ ಫುಡ್ ಬಳಕೆಯಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಬೇಕು. ವಿವೇಕತನದಿಂದ ಮಕ್ಕಳ ಚಿಂತನಾ ಶೈಲಿಯನ್ನು ಬೆಳೆಸಬೇಕು. ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು ಓದುವ ಹವ್ಯಾಸ ಬೆಳೆಸಲು ಕ್ರಿಯಾತ್ಮಕ ದಾರಿಯನ್ನು ಹುಡುಕಬೇಕು. ನಮ್ಮ ಆಸಕ್ತಿಗಳನ್ನು ಅವರ ಮೇಲೆ ಹೇರುವುದಕ್ಕಿಂತ ಅವರ ಅಭಿರುಚಿಗಳನ್ನು ಅರ್ಥೈಸಿ ಅದನ್ನು ಪ್ರೋತ್ಸಾಹಿಸಬೇಕು.

ಯುವ ತಲೆಮಾರುಗಳಲ್ಲಿ ಸ್ವಾಭಿಮಾನ ಪ್ರಜ್ಞೆ ಅಧಿಕವಿದೆ. ಇತರರ ಮುಂದೆ ನಿಂದನೆಗೆ ಒಳಗಾಗುವುದನ್ನು ಅವರು ಸಹಿಸುವುದಿಲ್ಲ. ಸಣ್ಣ ನಿರ್ಲಕ್ಷ್ಯವೂ ಅವರ ಮನದಲ್ಲಿ ಆಳವಾದ ಗಾಯವುಂಟು ಮಾಡುತ್ತದೆ. ಮಕ್ಕಳ ಚಿಂತನಾಲೋಕ ಮತ್ತು ಹೆತ್ತವರ ಚಿಂತನಾ ಪ್ರಜ್ಞೆಯ ನಡುವೆ ದಿನದಿಂದ ದಿನಕ್ಕೆ ಅಂತರ ಹೆಚ್ಚಾಗುತ್ತಿದೆ. ಹಿಂದೆ ನಮಗಿಂತ ಹೆಚ್ಚಿನ ಜ್ಞಾನ, ತಿಳುವಳಿಕೆ ತಂದೆ-ತಾಯಿಗಳಿಗಿದೆ ಎಂಬ ಭಾವನೆ ಮಕ್ಕಳಲ್ಲಿ ಇತ್ತು.

ಈಗ ಹಾಗಿಲ್ಲ. ಹೊಸ ಟೆಕ್ನಾಲಜಿಯಿಂದ ಅದ್ಭುತ ರೀತಿಯಲ್ಲಿ ಹೊಸ ತಲೆಮಾರುಗಳು ಮುಂದುವರಿಯುತ್ತಿವೆ. ಆದರೆ ಹಲವು ಬಾರಿ ತಂದೆ-ತಾಯಂದಿರಿಗೆ ಅದರ ಹತ್ತಿರವೂ ಸುಳಿಯಲಾಗದು. ಈ ಕಾರಣದಿಂದ ಹಲವು ವಿಚಾರಗಳಲ್ಲಿ ತಂದೆ ತಾಯಂದಿರಿಗಿಂತ ನಾವು ಪ್ರಬುದ್ಧರು ಎಂಬ ಭಾವನೆ ಮಕ್ಕಳಲ್ಲಿರುವುದು ಸಹಜವಾಗಿದೆ. ಅದಕ್ಕಾಗಿ ತನಗೆ ಗೌರವ ಸಿಗಬೇಕೆಂದು ಅವರು ಬಯಸುತ್ತಾರೆ. ಇದನ್ನೆಲ್ಲಾ ತಿಳಿದು ಅರ್ಥೈಸಿ ವಿವೇಕತನದಿಂದ ಕೂಡಿದ ಅಭಿವೃದ್ಧಿಯ ಜೊತೆಗೆ ಮಕ್ಕಳ ಮನದಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಬೆಳೆಸುವುದರಿಂದ ಯಶಸ್ವಿಯಾಗಬಹುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” …