Home / ಲೇಖನಗಳು / ಪ್ರವಾದಿಯನ್ನು(ಸ) ಓದುವಾಗ ಗಮನಿಸದ ಅಂಶಗಳು

ಪ್ರವಾದಿಯನ್ನು(ಸ) ಓದುವಾಗ ಗಮನಿಸದ ಅಂಶಗಳು

ಇರ್ಶಾದ್, ಬೆಂಗಳೂರು

ಪ್ರವಾದಿ ಮುಹಮ್ಮದ್(ಸ)ರ ಜೀವನದ ಅಧ್ಯಯನ ನಡೆಸುವಾಗ ಅವರ ಕರೆಗೆ ಓಗೊಟ್ಟು ಇಸ್ಲಾಮ್ ಸ್ವೀಕರಿಸಿ ತಮ್ಮ ಜೀವನವನ್ನೇ ಈ ಸಂದೇಶಕ್ಕಾಗಿ ಮುಡಿಪಾಗಿಟ್ಟ ಸಹಾಬಿಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ನಾವು ಆಗಾಗ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಅದರಿಂದ ಪ್ರೇರಣೆ ಪಡೆಯುವ ಪ್ರಯತ್ನ ಮಾಡುತ್ತೇವೆ.

ಆದರೆ ಪ್ರವಾದಿ ಮುಹಮ್ಮದ್(ಸ)ರ ಸಂದೇಶ ಸ್ವೀಕರಿಸದಿದ್ದರೂ ಅವರ ಜೀವನದ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ಅವರಿಗೆ ಬೆಂಬಲ ನೀಡಿದ ಹಲವಾರು ಮಹಾನ್ ವ್ಯಕ್ತಿಗಳ ಪೈಕಿ ಅಬೂತಾಲಿಬ್ ಮತ್ತು ವರಖಾ ಬಿನ್ ನೌಫಾಲ್ ಹೊರತುಪಡಿಸಿ ಇತರರ ಕುರಿತು ನಮ್ಮಲ್ಲಿ ಚರ್ಚೆಯಾಗುವುದು ತುಂಬಾ ಕಡಿಮೆ.

ಹಿಜರತ್ ನಂತಹ ಅತ್ಯಂತ ಪ್ರಮುಖ ಸಂದರ್ಭದಲ್ಲಿ ಪ್ರವಾದಿ(ಸ) ಮತ್ತು ಅಬೂಬಕರ್(ರ) ಅವರಿಗೆ ಮಾರ್ಗದರ್ಶಿಯಾಗಿದ್ದ ಅಬ್ದುಲ್ಲಾ ಇಬ್ನು ಅರೀಕತ್ ಮುಸ್ಲಿನಾಗಿರಲಿಲ್ಲ. ಅದೇ ರೀತಿ ಇಥಿಯೋಪಿಯಾದ ರಾಜನ ಬಳಿ ಪ್ರವಾದಿ(ಸ)ರು ತಮ್ಮ ರಾಯಭಾರಿಯಾಗಿ ಕಳಿಸಿದ್ದ ಅಮ್ರ್ ಇಬ್ನ್ ಉಮಯ್ಯಾ ಅದ್ದಮರಿ ಒಬ್ಬ ಕ್ರೈಸ್ತರಾಗಿದ್ದರು. ಮದೀನಾದ ಮುಖೈರಿಕ್ ಎಂಬ ಒಬ್ಬ ಯಹೂದಿ ರಬ್ಬಿ (ಧಾರ್ಮಿಕ ಗುರು) ಉಹುದ್ ಯುದ್ಧದಲ್ಲಿ ಪ್ರವಾದಿಯವರ(ಸ) ಪರವಾಗಿ ಹೋರಾಡಿ ವೀರ ಮರಣವನ್ನು ಹೊಂದುತ್ತಾರೆ. ಅಷ್ಟೇ ಅಲ್ಲ ತನ್ನ ಮರಣದ ನಂತರ ತನ್ನ ಇಡೀ ಆಸ್ತಿಯನ್ನು ಪ್ರವಾದಿ(ಸ)ರಿಗೆ ನೀಡಬೇಕೆಂದು ಉಯಿಲು ಬರೆದಿಡುತ್ತಾರೆ. ಏಳು ತೋಟಗಳಿಗಿಂತ ಅಧಿಕವಾಗಿದ್ದ ಇವರ ಆಸ್ತಿ ಇಸ್ಲಾಮಿನ ಮೊಟ್ಟ ಮೊದಲ ವಕ್ಫ್ ಆಸ್ತಿಯಾಗಿತ್ತು. ಯುದ್ಧದ ನಂತರ ಇವರ ಬಳಿ ಬಂದ ಪ್ರವಾದಿ(ಸ)ರು ಇವರನ್ನು `ಅತ್ಯುತ್ತಮ ಯಹೂದಿ’ ಎಂದು ಕರೆದಿದ್ದರು.

ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಇಂಥವರ ಕುರಿತೇ ಈ ರೀತಿ ಹೇಳಿರಬಹುದು,
“ಗ್ರಂಥದವರಲ್ಲಿ ಕೆಲವರು ಅಲ್ಲಾಹನ ಮೇಲೆ ವಿಶ್ವಾಸವಿಡುತ್ತಾರೆ. ನಿಮ್ಮ ಕಡೆಗೆ ಕಳುಹಿಸಿದ ಗ್ರಂಥದ ಮೇಲೂ ಇದಕ್ಕಿಂತ ಮುಂಚೆ ಸ್ವತಃ ಅವರ ಕಡೆಗೆ ಕಳುಹಿಸಿದ ಗ್ರಂಥದ ಮೇಲೂ ವಿಶ್ವಾಸವಿಡುತ್ತಾರೆ. ಅಲ್ಲಾಹನ ಮುಂದೆ ಬಾಗಿರುತ್ತಾರೆ ಮತ್ತು ಅಲ್ಲಾಹನ ಸೂಕ್ತಗಳನ್ನು ಅವರು ಅಲ್ಪ ಬೆಲೆಗೆ ಮಾರಿ ಬಿಡುವುದಿಲ್ಲ. ಅವರ ಪ್ರತಿಫಲ ಅವರ ಪ್ರಭುವಿನ ಬಳಿ ಇದೆ ಮತ್ತು ಅಲ್ಲಾಹ್ ಲೆಕ್ಕ ತೀರಿಸುವುದರಲ್ಲಿ ಅತಿ ಶೀಘ್ರನು.” (ಪವಿತ್ರ ಕುರ್‌ಆನ್: 3: 199)

ಇದೇ ರೀತಿಯ ಒಂದು ಸಜ್ಜನ ವ್ಯಕ್ತಿತ್ವ ಮುತಿಮ್ ಬಿನ್ ಅದಿಯವರದ್ದಾಗಿತ್ತು.
ಪ್ರವಾದಿ(ಸ) ಮತ್ತು ಅಬ್ದ್ ಮನಾಫ್ ಗೋತ್ರ ಕುರೈಶರಿಂದ ಕಠಿಣ ಬಹಿಷ್ಕಾರ ಎದುರಿಸುತ್ತಿದ್ದಾಗ ಹಸಿದ ಮಕ್ಕಳ ಅಳು ಕೇಳಲಾಗದೆ ಮುತಿಮ್ ಬಿನ್ ಅದಿ ರಾತ್ರಿಯ ಸಮಯದಲ್ಲಿ ಧಾನ್ಯ, ನೀರು ಮತ್ತು ಇತರ ಆಹಾರ ಸಾಮಗ್ರಿಗಳನ್ನು ಹೊತ್ತ ಒಂಟೆಯನ್ನು ಮುಸ್ಲಿಮರ ಬಳಿ ಸಾಗಿಸುತ್ತಿದ್ದರು. ಇದಲ್ಲದೆ ಮೂರು ವರ್ಷಗಳ ಕಠಿಣ ಬಹಿಷ್ಕಾರವನ್ನು ಕೊನೆಗಾಣಿಸುವಲ್ಲಿಯೂ ಇವರು ಪ್ರಮುಖ ಪಾತ್ರವಹಿಸಿದರು.

ಸಂದೇಶ ಪ್ರಚಾರಕ್ಕಾಗಿ ತಾಯಿಫ್‌ಗೆ ತೆರಳಿದ್ದ ಪ್ರವಾದಿ ಮುಹಮ್ಮದ್(ಸ)ರು ಮಕ್ಕಾಗೆ ಮರಳಿದಾಗ ಅವರ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದುದು ಅಬು ತಾಲಿಬ್ ಆಗಿದ್ದರು. ಆದರೆ ಅವರ ನಿಧನದ ನಂತರ ಅವರಿಗೆ ಅಭಯಾಶ್ರಯ ನೀಡಲು ಇನ್ನೋರ್ವ ಚಿಕ್ಕಪ್ಪ ಮಕ್ಕಾದ ನಾಯಕ ಅಬೂಲಹಬ್ ನಿರಾಕರಿಸಿದ. ಹೀಗಾಗಿ ತಾಯಿಫ್‌ನಿಂದ ಮಕ್ಕಾ ಪ್ರವೇಶಿಸಲು ಪ್ರವಾದಿ(ಸ) ರಿಗೆ ರಕ್ಷಣೆಯ ಆವಶ್ಯಕತೆಯಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾದಿ(ಸ)ರಿಗೆ ಅಭಯಾಶ್ರಯ ನೀಡಿದ್ದಲ್ಲದೆ ಅದರ ಕುರಿತು ತನ್ನ ಮಕ್ಕಳೊಂದಿಗೆ ಕಾಬಾದ ಬಳಿ ತೆರಳಿ ಕುರೈಶರ ನಡುವೆ ಅದರ ಘೋಷಣೆಯನ್ನು ಮಾಡಿದವರು ಮುತಿಮ್ ಬಿನ್ ಅದಿಯ್ಯ್. ಈ ಘೋಷಣೆಯ ಬಳಿಕ ಸುಮಾರು ಒಂದೂವರೆ- ಎರಡು ವರ್ಷ ಪ್ರವಾದಿ(ಸ)ರು ಮುತಿಮ್ ಬಿನ್ ಅದಿಯ್ಯ್ ಯವರ ರಕ್ಷಣೆಯಲ್ಲಿದ್ದರು. ಬದ್ರ್ ಯುದ್ಧದ ಮುಂಚೆಯೇ ಮುತಿಮ್ ಬಿನ್ ಅದಿಯ್ಯ್ ಮರಣ ಹೊಂದಿದರು.

ಬದ್ರ್ ಯುದ್ಧದ ನಂತರ ಸೆರೆಯಾಗಿದ್ದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಕೈದಿಗಳೊಂದಿಗೆ ಏನು ಮಾಡಬೇಕೆಂಬ ವಿಷಯ ಪ್ರಸ್ತಾಪವಾದಾಗ ಪ್ರವಾದಿ(ಸ)ರು ಈ ರೀತಿ ಹೇಳುತ್ತಾರೆ,
“ಇಂದು ಮುತಿಮ್ ಬಿನ್ ಅದಿಯ್ಯ್ ಜೀವಂತವಾಗಿದ್ದು ಒಂದೇ ಒಂದು ಮಾತು ಹೇಳಿದ್ದರೆ ನಾನು ಇವರನ್ನೆಲ್ಲ ಯಾವುದೇ ರೀತಿಯ ಪರಿಹಾರ ಧನ ಪಡೆಯದೆ ಬಿಡುಗಡೆ ಮಾಡಿಬಿಡುತ್ತಿದ್ದೆ.” ಇದು ಪ್ರವಾದಿ(ಸ)ರಿಗೆ ಮುತಿಮ್ ಬಿನ್ ಅದಿಯ್ಯ್ ಯವರ ಮೇಲಿದ್ದ ಅಪಾರ ಗೌರವವನ್ನು ಸೂಚಿಸುತ್ತದೆ.

ಈ ರೀತಿಯ ಅನೇಕ ಘಟನೆಗಳು ನಮಗೆ ಪ್ರವಾದಿ(ಸ)ರ ಸೀರತ್‌ನಲ್ಲಿ ಕಾಣಸಿಗುತ್ತವೆ. ಪ್ರವಾದಿ(ಸ)ರನ್ನು ತನ್ನ ಅತ್ತ್ಯುತ್ತಮ ಮಾದರಿಯೆಂದು ನಂಬಿರುವ ಮುಸ್ಲಿಮರಿಗೆ ವಿಶೇಷವಾಗಿ ಭಾರತೀಯ ಮುಸ್ಲಿಮರಿಗೆ ಇವುಗಳಲ್ಲಿ ಹಲವಾರು ನಿದರ್ಶನಗಳಿವೆ. ದ್ವೇಷ ಹರಡುವ ಮತ್ತು ಜನರಲ್ಲಿ ಒಡಕು ಉಂಟು ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಕೆಲವು ಜನಗಳ ಮಧ್ಯೆ ಈಗಲೂ ಸಾವಿರಾರು ಆಧುನಿಕ ಮುತಿಮ್ ಬಿನ್ ಅದಿಯ್ಯ್ ಮತ್ತು ಅಬೂ ತಾಲಿಬರುಗಳು ಇದ್ದಾರೆ. ಅಂಥವರನ್ನು ಸಂಪರ್ಕಿಸಿ ಸಹಕಾರ ಮತ್ತು ಸಮನ್ವಯದ ಸಂಬಂಧ ಬೆಳೆಸಬೇಕಾಗಿದೆ, ಗುರುತಿಸಿ ಗೌರವಿಸಬೇಕಾಗಿದೆ.

ಅದೇ ರೀತಿ ಇಸ್ಲಾಮ್ ಮತ್ತು ಮುಸ್ಲಿಮರ ವೈರಿಗಳಿಗಾಗಿಯೂ ಪ್ರಾರ್ಥಿಸಬೇಕಾಗಿದೆ, ಅಲ್ಲಾಹನು ಬಯಸಿದಲ್ಲಿ ಅವರಲ್ಲೇ ನಮಗೆ ಉಮರ್ ಸಿಗಬಹುದು, ಖಾಲಿದ್ ಬಿನ್ ವಲೀದ್ ಸಿಗಬಹುದು ಅಥವಾ ಅವರ ಮಕ್ಕಳಲ್ಲಿ ಇಕ್ರಿಮಾ ಬಿನ್ ಅಬೂಜಹಲ್ ಸಿಗಬಹುದು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …