Home / ಲೇಖನಗಳು / ಪ್ರವಾದಿ ಮತ್ತು ಸಹಾಬಿಗಳು ಕುರ್‌ಆನ್‌ಗೆ ಕೊಡುತ್ತಿದ್ದ ಪ್ರಾಶಸ್ತ್ಯ ಹೇಗಿತ್ತು?

ಪ್ರವಾದಿ ಮತ್ತು ಸಹಾಬಿಗಳು ಕುರ್‌ಆನ್‌ಗೆ ಕೊಡುತ್ತಿದ್ದ ಪ್ರಾಶಸ್ತ್ಯ ಹೇಗಿತ್ತು?

  •  ಮರ್ಯಮ್ ಶಹೀರಾ

“ನಿಜವಾದ ಸತ್ಯವಿಶ್ವಾಸಿಗಳು- ಅವರ ಮುಂದೆ ಅಲ್ಲಾಹನ ‘ಸೂಕ್ತ’ಗಳನ್ನು ಓದಿದಾಗ ಅವರ ವಿಶ್ವಾಸ ವೃದ್ಧಿಸುತ್ತದೆ. (ಪವಿತ್ರ ಕುರ್‌ಆನ್-8:2).

ತಿಲಾವತುಲ್ ಕುರ್‌ಆನ್ ಅಂದರೆ ಕುರ್‌ಆನ್ ಅಧ್ಯಯನ ಅಂದರೆ ಕೇವಲ ಪಠಣ ಮಾತ್ರವಲ್ಲ ಅದರ ಅಧ್ಯಯನ ಚಿಂತನ-ಮಂಥನ, ಹಾಗೂ ಮನಸ್ಸು ಮತ್ತು ಶರೀರದ ಮೇಲೆ ಪ್ರಭಾವ ಉಂಟಾಗಬೇಕು, ಹೃದಯ ಕಂಪಿಸಬೇಕು. ಅದು ಅವನಿಗೆ ಸನ್ಮಾರ್ಗ ಲಭಿಸಿದೆ ಎಂಬುದರ ಲಕ್ಷಣ.

“ಅಲ್ಲಾಹನು ಅತ್ಯುತ್ತಮ ವಾಣಿಯನ್ನು ಅವತರಿಸಿರುವನು. ಎಲ್ಲ ಭಾಗಗಳೂ ಸಮಾನ ಸ್ವರೂಪವಾಗಿರುವಂತಹ ಗ್ರಂಥವಿದು. ಇದರಲ್ಲಿ ವಿಷಯಗಳು ಪುನರಾವರ್ತಿಸಲ್ಪಟ್ಟಿವೆ. ಇದನ್ನು ಕೇಳಿದಾಗ, ತಮ್ಮ ಪ್ರಭುವನ್ನು ಭಯಪಡುವವರಿಗೆ ರೋಮಾಂಚನವಾಗುತ್ತದೆ ಮತ್ತು ಅವರ ಶರೀರ ಹಾಗೂ ಹೃದಯಗಳು ಮೃದುವಾಗಿ ಅಲ್ಲಾಹನ ಸ್ಮರಣೆಯ ಕಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ. ಇದರ ಮೂಲಕ ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ತರುತ್ತಾನೆ ಮತ್ತು ಅಲ್ಲಾಹನೇ ಸನ್ಮಾರ್ಗ ತೋರದಿದ್ದರೆ ಅಂತಹವನಿಗೆ ಬೇರಾವ ಮಾರ್ಗದರ್ಶಕನೂ ಇಲ್ಲ.” (ಪವಿತ್ರ ಕುರ್‌ಆನ್-39: 23)

ಈ ಗ್ರಂಥದಲ್ಲಿ ತಿಳಿಸಲಾಗಿರುವ ವಿಷಯಗಳನ್ನು ಗ್ರಹಿಸಿ ಅದರ ಗಾಂಭೀರ್ಯತೆ ಮತ್ತು ಗೌರವವನ್ನು ಅರಿತುಕೊಂಡು ಅದನ್ನು ಅನುಸರಿಸುವಾಗ ತಿಲಾವತುಲ್ ಕುರ್‌ಆನ್ ಈ ಭೂಮಿಯ ಮೇಲೆ ಸಂಭವಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‌ಆನನ್ನು ಸ್ವೀಕರಿಸಿದ ಮೊದಲ ಮಾನವ. ಓದಲು, ಬರೆಯಲು ಬಾರದ ಪ್ರವಾದಿ ಮುಹಮ್ಮದ್(ಸ)ರೊಂದಿಗೆ ಓದಿರಿ ಎಂದು ಹೇಳಿದಾಗ ಅವರು ಓದ ತೊಡಗಿದರು. ಅಲ್ಲಿಂದ ಅವರ(ಸ) ಜೀವನ, ಸ್ವಭಾವ ಕುರ್‌ಆನ್ ಆಗಿ ಮಾರ್ಪಟ್ಟಿತ್ತು.

ಆಯಿಶಾ(ರ)ರೊಂದಿಗೆ ಸಹಾಬಿಗಳು ಪ್ರಶ್ನಿಸಿದರು, ಪ್ರವಾದಿ(ಸ)ರವರ ಜೀವನ ಹೇಗಿದೆ? ಅದಕ್ಕುತ್ತರವಾಗಿ ಆಯಿಶಾ(ರ)ರು ಒಂದೇ ವಾಕ್ಯದಲ್ಲಿ, “ಅವರ ಸ್ವಭಾವವು ಕುರ್‌ಆನ್” ಆಗಿದೆ ಎಂದರು.
ಇನ್ನೊಂದು ವರದಿಯಲ್ಲಿ, “ಅವರು ಭೂಮಿಯ ಮೇಲೆ ನಡೆದಾಡುವ ಕುರ್‌ಆನ್ ಆಗಿದ್ದಾರೆ” ಎಂದು ಹೇಳಿದ್ದರು. ಇಲ್ಲಿ ಕುರ್‌ಆನ್ ಅಧ್ಯಯನ (ತಿಲಾವತುಲ್ ಕುರ್‌ಆನ್) ಬಹಳ ಸ್ಪಷ್ಟ.

ಒಂದು ಉದಾಹರಣೆ ಮಾತ್ರ:
ಉಹುದ್ ಯುದ್ಧದಲ್ಲಿ ಅವರ ಆಪ್ತ ಸಂಗಾತಿಗಳು ಹುತಾತ್ಮರಾದಾಗ ಪ್ರವಾದಿ(ಸ)ರವರು ದುಃಖವನ್ನು ತಾಳಲಾರದೆ ಈ ರೀತಿ ಹೇಳುತ್ತಾರೆ, “ಇನ್ನೊಂದು ಸಂದರ್ಭದಲ್ಲಿ ಕುರೈಶರನ್ನು ಇದೇ ರೀತಿಯಲ್ಲಿ ನಾನು ಸದೆಬಡೆಯುವೆನು” ಎಂದು. ಕೂಡಲೇ ಪವಿತ್ರ ಕುರ್‌ಆನಿನ ಸೂಕ್ತಗಳು ಅವತೀರ್ಣವಾಗುತ್ತವೆ:
“ನಿಮ್ಮ ಪ್ರಭುವಿನ ಕ್ಷಮೆಯ ಕಡೆಗೆ ಮತ್ತು ಭೂಮಿ-ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ಧಾವಿಸಿರಿ. ಅದು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲ್ಪಟ್ಟಿರುತ್ತದೆ. ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ- ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಪವಿತ್ರ ಕುರ್‌ಆನ್- 3: 133-134)

ಪ್ರವಾದಿ ಮುಹಮ್ಮದ್(ಸ)ರು ಇದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ಪ್ರತೀಕಾರ ತೀರಿಸುವ ಸಾಮರ್ಥ್ಯವಿದ್ದರೂ “ಇಂದು ನೀವೆಲ್ಲರೂ ಸ್ವತಂತ್ರರು, ಯಾರೊಂದಿಗೂ ಪ್ರತೀಕಾರವಿಲ್ಲ” ಎಂದು ಹೇಳಲು ಪ್ರವಾದಿ ಮುಹಮ್ಮದ್(ಸ)ರಿಗೆ ಸಾಧ್ಯವಾದದ್ದು ಈ ರೀತಿಯ ತಿಲಾವತುಲ್ ಕುರ್‌ಆನಿನಿಂದಾಗಿತ್ತು.

“ನಿಮ್ಮ ಕಡೆಗೆ ದಿವ್ಯವಾಣಿಯ ಮೂಲಕ ಕಳುಹಿಸಲ್ಪಟ್ಟಿರುವ ಈ ಗ್ರಂಥವನ್ನು ಪಠಿಸಿರಿ”. (ಪವಿತ್ರ ಕುರ್‌ಆನ್- 29: 45)

ಸಹಾಬಿಗಳು ಕೂಡ ಆ ರೀತಿಯ ಕುರ್‌ಆನ್ ಪಠಣದಿಂದಾಗಿ ನರಕದ ಅಂಚಿನಲ್ಲಿದ್ದವರು ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ, ಅವರೂ ಅಲ್ಲಾಹನಿಂದ ಸಂಪ್ರೀತರಾದರು ಎಂಬ ಬಿರುದಿಗೆ ಪಾತ್ರರಾದರು.

ಸಹಾಬಿಗಳು ಹೇಳುತ್ತಾರೆ: “ಪ್ರವಾದಿ(ಸ) ಅವರಿಗೆ ಕುರ್‌ಆನ್ ಅವತೀರ್ಣವಾದಾಗ ಅದನ್ನು ನಮಗೆ ಕಲಿಸಿಕೊಡುತ್ತಿದ್ದರು. ನಾವು ಅದನ್ನು ಕಂಠಪಾಠ ಮಾಡುತ್ತಿದ್ದೆವು. ಆದರೆ ಆ ದಿವ್ಯ ಜ್ಞಾನವನ್ನು ಜೀವನದಲ್ಲಿ ಅಳವಡಿಸದೆ ಮುಂದಿನದ್ದನ್ನು ಕಲಿಯುತ್ತಿರಲಿಲ್ಲ. ತಿಲಾವತ್ ಅಂದರೆ ಇದುವೇ ಆಗಿದೆ.

ಅಬೂಬಕ್ಕರ್(ರ)ರ ಮಗಳು, ಪ್ರವಾದಿ ಪತ್ನಿ ಆಯಿಶಾ(ರ)ರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರಲ್ಲಿ ಕೆಲವು ಮಂದಿ ಮುಗ್ಧ ಮುಸ್ಲಿಮರೂ ಸೇರಿದ್ದರು. ಅಬೂಬಕ್ಕರ್‌ರ ಹತ್ತಿರದ ಸಂಬಂಧಿಕರಾದ ಮಿಸ್ತಹ್ ಬಿನ್ ಅಸಾಸ: ಕೂಡ ಒಬ್ಬರಾಗಿದ್ದರು. ಬಡ ಕುಟುಂಬದ ವ್ಯಕ್ತಿಯಾಗಿದ್ದರಿಂದ ಅವರಿಗೆ ಸಹಾಯ ಮಾಡುತ್ತಿದ್ದರು. ಈ ಮನ ನೋಯಿಸುವ ಘಟನೆಯ ಬಳಿಕ ಅಬೂಬಕ್ಕರ್(ರ) ಆ ವ್ಯಕ್ತಿ ತನ್ನ ಜೊತೆಗಿನ ಬಂಧುತ್ವವನ್ನಾಗಲಿ ಜೀವನದಾದ್ಯಂತ ಮಾಡುತ್ತಾ ಬಂದ ಉಪಕಾರಗಳನ್ನಾಗಲಿ ಪರಿಗಣಿಸದೆ ತನ್ನ ಜೊತೆ ಹಾಗೆ ವರ್ತಿಸಿದ್ದರಿಂದ ಮುಂದೆ ತಾನು ಆ ವ್ಯಕ್ತಿಗೆ ಯಾವುದೇ ಉಪಕಾರ ಮಾಡಲಾರೆನೆಂದು ಪ್ರತಿಜ್ಞೆ ಮಾಡಿದ್ದರು. ಇದು ಅಲ್ಲಾಹನಿಗೆ ಮೆಚ್ಚುಗೆಯಾಗಲಿಲ್ಲ. ಕೂಡಲೇ ಕುರ್‌ಆನ್ ಸೂಕ್ತ ಅವತೀರ್ಣವಾಗುತ್ತದೆ: “ನಿಮ್ಮಲ್ಲಿ ಅನುಗ್ರಹೀತರು ಮತ್ತು ಸಾಮರ್ಥ್ಯವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗುವವರಿಗೂ ಸಹಾಯ ಮಾಡಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿ ಬಿಡಬಾರದು. ಅವರನ್ನು ಕ್ಷಮಿಸಿ ಬಿಡಬೇಕು ಮತ್ತು ಮನ್ನಿಸಬೇಕು. ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾ ನೆ.” (ಪವಿತ್ರ ಕುರ್‌ಆನ್- 24: 22)

ಇದನ್ನು ಆಲಿಸುತ್ತಲೇ ಅಬೂಬಕ್ಕರ್(ರ) ಉದ್ಗರಿಸುತ್ತಾರೆ: ಅಲ್ಲಾಹನಾಣೆ, ಓ ನನ್ನ ಪ್ರಭೂ, ನೀನು ನಮ್ಮ ಅಪರಾಧಗಳನ್ನು ಕ್ಷಮಿಸಬೇಕೆಂದು ನಾವು ಇಚ್ಚಿಸುತ್ತೇವೆ” ಎಂದರು. ಈ ಪ್ರಕಾರ ಅವರು ಪುನಃ ಮಿಸ್ತಹ್‌ರಿಗೆ ಸಹಾಯ ಒದಗಿಸ ತೊಡಗಿದರು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …