Home / ಲೇಖನಗಳು / ಪ್ರವಾದಿ ಇಬ್ರಾಹೀಮ್(ಅ) ಮತ್ತು ಇತಿಹಾಸ

ಪ್ರವಾದಿ ಇಬ್ರಾಹೀಮ್(ಅ) ಮತ್ತು ಇತಿಹಾಸ

  • ಜಿ.ಎಂ. ಶರೀಫ್ ಹೂಡೆ

ಕಅಬಾ ಭವನದ ನಿರ್ಮಾಣ

ಹಝ್ರತ್ ಇಬ್ರಾಹೀಮ್(ಅ) ವಾಸಿಸುತ್ತಿದ್ದ ಆ ಮಕ್ಕಾ ಪ್ರದೇಶ ಒಂದೊಮ್ಮೆ ನಿರ್ಜನವಾಗಿತ್ತು. ಆದರೆ ಅನಂತರದಲ್ಲಿ ಜನರು ಅಲ್ಲಿಗೆ ಬಂದು ವಾಸಿಸಲಾರಂಭಿಸಿದರು. ಹಾಗಾಗಿ ಅಲ್ಲಿ ಏಕೈಕ ಸೃಷ್ಟಿಕರ್ತನನ್ನು ಆರಾಧಿಸುವಂತಹ ಭವನದ ಅಗತ್ಯವಿತ್ತು. ಹಾಗೆ ಅಲ್ಲಾಹನ ಆಜ್ಞೆ ಸಿಕ್ಕಿದೊಡನೆ ಹಝ್ರತ್ ಇಬ್ರಾಹೀಮ್(ಅ) ಕಅಬಾ ಭವನ ನಿರ್ಮಾಣಕ್ಕೆ ಕೈ ಹಾಕಿದರು. ಆ ನಡುವೆ ಅವರು ಈ ರೀತಿ ಪ್ರಾರ್ಥಿಸುತ್ತಿದ್ದರು, “ಓ ನಮ್ಮ ಪ್ರಭೂ! ನಮ್ಮಿಂದ ಈ ಸೇವೆಯನ್ನು ಸ್ವೀಕರಿಸು. ನಿಶ್ಚಯವಾಗಿ ನೀನು ಎಲ್ಲವನ್ನೂ ಆಲಿಸುವವನೂ ಎಲ್ಲವನ್ನೂ ಅರಿಯುವವನೂ ಆಗಿರುತ್ತೀ.”

ಹಝ್ರತ್ ಇಬ್ರಾಹೀಮ್(ಅ) ಮತ್ತು ಹಝ್ರತ್ ಇಸ್ಮಾಈಲ್(ಅ) ಅವರ ನಿರಂತರ ಪರಿಶ್ರಮದ ನಂತರ ಕಅಬಾ ಭವನ ನಿರ್ಮಾಣಗೊಂಡಿತು. ಅದು ಮುಸ್ಲಿಮರ ಜಾಗತಿಕ ಕೇಂದ್ರವಾಗಿ ಮಾರ್ಪಟ್ಟಿತು. ಕಅಬಾವು ಮುಸ್ಲಿಮರ ಕಿಬ್ಲಾ(ಅಭಿಮುಖಿ ಕೇಂದ್ರ) ವಾಗಿದ್ದು ವಿಶ್ವದೆಲ್ಲೆಡೆಯ ಮುಸ್ಲಿಮರು ಇದೇ ಕಿಬ್ಲಾದತ್ತ ಮುಖ ಮಾಡಿ ನಮಾಝ್ (ಪ್ರಾರ್ಥನೆ) ನಿರ್ವಹಿಸುತ್ತಾರೆ. ಸ್ಥಿತಿವಂತರು ಜೀವನದಲ್ಲೊಂದು ಬಾರಿ ಈ ಭವನದ ಹಜ್ಜ್ ಯಾತ್ರೆ ಕೈಗೊಳ್ಳುತ್ತಾರೆ. ಜಾಗತಿಕ ಮುಸ್ಲಿಮರ ವಾರ್ಷಿಕ ಮಹಾ ಸಮಾವೇಶವು ಇಲ್ಲಿಯೇ ಜರುಗುತ್ತದೆ. ಈ ಮಹಾ ಕಾರ್ಯದ ಮೂಲಕ ಅಲ್ಲಾಹನು ಆ ಮಹಾನ್ ಪ್ರವಾದಿಗಳಿಬ್ಬರನ್ನು ಜಗತ್ತು ಇಂದಿಗೂ ಎಂದೆಂದಿಗೂ ಸ್ಮರಿಸುವಂತೆ ಮಾಡಿರುವನು. ಹೀಗೆ ಕಅಬಾ ಭವನ ನಿರ್ಮಾಣದ ಸಮಯ ದಲ್ಲಿ ಹಝ್ರತ್ ಇಬ್ರಾಹೀಮ್(ಅ) ಮಾಡಿದ “ಜನಮನಗಳು ಇವರ ಕಡೆಗೆ ಒಲಿಯುವಂತೆ ಮಾಡು” ಮತ್ತು “ಈ ನಗರವನ್ನು ಶಾಂತಿಯ ನಗರವನ್ನಾಗಿ ಮಾಡು” ಎಂಬ ಪ್ರಾರ್ಥನೆಗಳು ಸ್ವೀಕೃತಗೊಂಡಂತಾಯಿತು.

ವೃದ್ಧಾಪ್ಯದಲ್ಲಿ ಸಂತಾನ ಭಾಗ್ಯ

ಹಝ್ರತ್ ಇಬ್ರಾಹೀಮ್(ಅ)ರ ಮೊದಲ ಪತ್ನಿ ಹಝ್ರತ್ ಸಾರಾ(ಅ)ರಿಗೆ ಆವರೆಗೆ ಯಾವುದೇ ಮಕ್ಕಳಾಗಿರಲಿಲ್ಲ. ಅವರು ಬಂಜೆಯೆಂಬುದು ಖಾತ್ರಿಯಾಗಿತ್ತು. ಹೀಗಿರುತ್ತಾ ಒಮ್ಮೆ ಹಝ್ರತ್ ಇಬ್ರಾಹೀಮ್(ಅ)ರಲ್ಲಿಗೆ ಇಬ್ಬರು ದೇವಚರರು ಬಂದರು. ಅವರಿಗೆ ಓರ್ವ ಮೇಧಾವಿ ಪುತ್ರನ ಸುವಾರ್ತೆ ನೀಡಿದರು. ಅದನ್ನು ಕೇಳಿ ಹಝ್ರತ್ ಇಬ್ರಾಹೀಮ್(ಅ) ರಿಗೆ ಅಚ್ಚರಿಯಾಯಿತು. ಆ ಸಂದರ್ಭದಲ್ಲಿ ಹಝ್ರತ್ ಇಬ್ರಾಹೀಮ್(ಅ) ಮತ್ತು ಹಝ್ರತ್ ಸಾರಾ(ಅ) ಬಹಳ ಮುದಿ ಪ್ರಾಯಕ್ಕೆ ತಲುಪಿದ್ದರು. ಬಾಳಿನ ಈ ಕೊನೆಗಾಲದಲ್ಲಿ ಇಂತಹ ಒಂದು ಶುಭ ಸುದ್ದಿ ಅವರಲ್ಲಿ ಆಶ್ಚರ್ಯವನ್ನುಂಟು ಮಾಡಿತು. ಹಾಗೆಯೇ ತನ್ನ ಮನದಾಳದಲ್ಲಿ ಉದ್ಭವಿಸಿದ ಪ್ರಶ್ನೆಯನ್ನು ಇಬ್ರಾಹೀಮ್ (ಅ) ದೇವಚರರಲ್ಲಿ ಕೇಳಿಯೇ ಬಿಟ್ಟರು,

“ಈ ವೃದ್ಧಾಪ್ಯದಲ್ಲಿ ನೀವು ನನಗೆ ಪುತ್ರನ ಸುವಾರ್ತೆ ನೀಡುತ್ತೀರಾ? ನೀವೆಂತಹ ಸುವಾರ್ತೆ ನೀಡುತ್ತಿರುವಿರೆಂದು ಕೊಂಚ ಯೋಚಿಸಿರಿ!” ಅದಕ್ಕೆ ಉತ್ತರಿಸುತ್ತಾ ದೇವಚರರು, “ನಾವು ನಿಮಗೆ ಪರಮ ಸತ್ಯವಾಗಿರುವ ಸುವಾರ್ತೆ ನೀಡಿರುತ್ತೇವೆ. ನೀವು ನಿರಾಶರಾಗಬೇಡಿರಿ” ಎಂದರು. ಅದನ್ನು ಕೇಳಿದ ಹಝ್ರತ್ ಇಬ್ರಾಹೀಮ್(ಅ)ರು “ತನ್ನ ಪ್ರಭುವಿನ ಅನುಗ್ರಹದ ಬಗ್ಗೆ ಪಥಭ್ರಷ್ಟರು ಮಾತ್ರ ನಿರಾಶರಾಗುತ್ತಾರೆ” ಎಂದರು.

ಹಝ್ರತ್ ಸಾರಾ(ಅ) ಕೂಡಾ ಅಲ್ಲೇ ನಿಂತಿದ್ದರು. ಈ ವಿಷಯವನ್ನು ಕೇಳಿದ ಅವರು, “ಅಕಟ, ನನ್ನ ದೌರ್ಭಾಗ್ಯವೇ! ನಾನು ಹಣ್ಣು ಮುದುಕಿಯೂ ನನ್ನ ಪತಿ ಅತಿ ವೃದ್ಧರೂ ಆಗಿರುವಾಗ ನನ್ನಲ್ಲಿ ಮಕ್ಕಳಾಗುವರೇ? ಇದಂತು ಅತ್ಯಂತ ಸೋಜಿಗದ ವಿಷಯ!” ಎನ್ನತೊಡಗಿದರು. ಅದಕ್ಕೆ ದೇವಚರರು, “ಅಲ್ಲಾಹನ ಆಜ್ಞೆಯ ಬಗ್ಗೆ ಆಶ್ಚರ್ಯ ಪಡುತ್ತೀರಾ? ಓ ಇಬ್ರಾಹೀಮರ ಮನೆಯವರೇ, ನಿಮ್ಮ ಮೇಲೆ ಅಲ್ಲಾಹನ ದಯೆ ಮತ್ತು ಸಮೃದ್ಧಿಗಳಿವೆ. ನಿಜವಾಗಿಯೂ ಅಲ್ಲಾಹ್ ಅತ್ಯಧಿಕ ಸ್ತುತ್ಯರ್ಹನೂ ಮಹಿಮಾವಂತನೂ ಆಗಿರುತ್ತಾನೆ” ಎಂದು ಉತ್ತರಕೊಟ್ಟರು.

ಅದನ್ನು ಕೇಳಿದ ಸಾರಾ ಚೀರುತ್ತಾ, ಮುಖಕ್ಕೆ ಬಡಿದು ಕೊಳ್ಳುತ್ತಾ “ವೃದ್ಧೆ, ಬಂಜೆ” ಎನ್ನತೊಡಗಿದರು. ಇದು ಅವರಲ್ಲಿ ಉಂಟಾದ ಆನಂದಾತಿರೇಕ ಮತ್ತು ಆಶ್ಚರ್ಯಮಿಶ್ರಿತ ಸ್ಥಿತಿಯನ್ನು ಸೂಚಿಸುತ್ತಿತ್ತು. ಆಗ ದೇವಚರರು ಅಲ್ಲಾಹನ ಆಜ್ಞೆಯನ್ನು ಸೂಚಿಸುತ್ತಾ ಹೀಗೆ ಹೇಳಿದರು- “ನಿನ್ನ ಪ್ರಭು ಹೀಗೆಯೇ ಹೇಳಿರುತ್ತಾನೆ. ಅವನು ಮಹಾ ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುತ್ತಾನೆ”.

ಈ ಘಟನೆ ನಡೆದು ಕೆಲವು ಸಮಯ ಕಳೆಯಿತು. ಅಲ್ಲಾಹನು ಹಝ್ರತ್ ಸಾರಾರಿಗೆ ಇಸ್ಹಾಕ್ ಎಂಬ ಸಜ್ಜನ ಪುತ್ರನನ್ನು ದಯಪಾಲಿಸಿದನು. ಅವರು ಕಾಲಕ್ರಮೇಣ ಬೆಳೆದು ನಿಂತರು. ಫೆಲೆಸ್ತೀನ್ ನಗರದಲ್ಲಿ ವಾಸಿಸತೊಡಗಿದರು. ಬೈತುಲ್ ಮಕ್ದಿಸ್‌ನ್ನು ಕೇಂದ್ರವಾಗಿಸಿ ತಂದೆ ಇಬ್ರಾಹೀಮ್(ಅ) ಆರಂಭಿಸಿದ ಸತ್ಯ ಸಂದೇಶ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡರು. ಒಳಿತನ್ನು ಹರಡುವ, ಕೆಡುಕನ್ನು ಅಳಿಸುವ ಪ್ರಯತ್ನವನ್ನು ಮಾಡಿದರು. ಬೈತುಲ್ ಮಕ್ದಿಸ್ ಅಂದು ಇಸ್ಲಾಮಿನ ಜಾಗತಿಕ ಕೇಂದ್ರವಾಗಿಯೂ, ಮುಸ್ಲಿಮರ ಆರಾಧನಾ ಕರ್ಮದ (ನಮಾ ಝ್‌ನ) ಅಭಿಮುಖಿ ಕೇಂದ್ರವಾಗಿಯೂ ಮಾರ್ಪಟ್ಟಿತ್ತು. ಹಝ್ರತ್ ಮುಹಮ್ಮದ್(ಸ) ಅಂತಿಮ ಪ್ರವಾದಿಯಾಗಿ ನೇಮಕ ಗೊಳ್ಳುವ ತನಕವೂ ಅದಕ್ಕೆ ಆ ವಿಶೇಷತೆ ಲಭ್ಯವಾಗಿತ್ತು. ಅನಂತರ ಕಅಬಾ ಭವನವು ಆ ಶ್ರೇಷ್ಠತೆಗೆ ಪಾತ್ರವಾಯಿತು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …