Home / ಲೇಖನಗಳು / ಪ್ರವಾದಿ ಮುಹಮ್ಮದ್ (ಸ) ಮತ್ತು ವಿಗ್ರಹ ದ್ವಂಸ

ಪ್ರವಾದಿ ಮುಹಮ್ಮದ್ (ಸ) ಮತ್ತು ವಿಗ್ರಹ ದ್ವಂಸ

‘ಅಲ್ಲಾಹ್’ ಎಂದು ಕರೆಯಲು ಕಾರಣವೇನು?

ಮುಸ್ಲಿಮರು ಸೃಷ್ಟಿಕರ್ತನನ್ನು ಅನ್ಯಭಾಷೆಯಾದ ಅರಬಿಯಲ್ಲಿ ‘ಅಲ್ಲಾಹ್’ ಎಂದು ಸಂಬೋಧಿಸುವುದು ಏಕೆ? ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸೂಕ್ತ ಹೆಸರು ನೀಡಿದರೆ ಸಾಲದೆ ? (ಉದಾಹರಣೆಗೆ ನಾವು ದೇವರು, ಈಶ್ವರ ಎಂದು ಹೇಳುತ್ತೇವೆ.)

ಇಡೀ ಪ್ರಪಂಚವನ್ನೂ ಅದರಲ್ಲಿರುವ ಸಕಲವನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಶಕ್ತಿಯ ಹೆಸರು ‘ಅಲ್ಲಾಹ್’ ಎಂದಾಗಿದೆ. ದೇವರು, ಈಶ್ವರ, ಗಾಡ್, ಸೃಷ್ಟಿಕರ್ತ, ಖುದಾ ಮೊದಲಾದ ಹೆಸರುಗಳನ್ನು ಸೃಷ್ಟಿಕರ್ತನನ್ನು ಪರಿಚಯಿಸಲು ಉಪಯೋಗಿಸಬಹುದು. ಆದರೆ ಏಕನೂ ನಿರಾಕಾರನೂ ಆದ ಶಕ್ತಿಯನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತವಾದ ಪದ ಅಲ್ಲಾಹ್ ಎಂದಾಗಿದೆ. ಅರಬಿ ಭಾಷೆಯಲ್ಲಿ ಈ ಪದಕ್ಕೆ ಬಹುವಚನವೋ, ಲಿಂಗಭೇದವೋ ಇಲ್ಲ ಆದ್ದರಿಂದ ಅಲ್ಲಾಹ್’ ಎಂಬ ಪದಕ್ಕೆ ಸರಿಸಮಾನವಾದ ಅನುವಾದ ವಿಶ್ವದ ಯಾವ ಭಾಷೆಯಲ್ಲೂ ಇಲ್ಲ ದೇವರು, ಗಾಡ್, ಖುದಾ ಎಂಬವುಗಳೆಲ್ಲಾ ಅರಬಿಯ ಇಲಾಹ್ ಎಂಬ ಪದದ ಭಾವಾರ್ಥವಾಗಿದೆ. ಬದಲಾಗಿ ಅದು ಅಲ್ಲಾಹ್ ಎಂಬ ಪದದ ಭಾಷಾರ್ಥವಲ್ಲ ದೇವ ಎಂಬ ಪದಕ್ಕೆ ದೇವರು, ದೇವಿ ಎಂದೂ, ಗೋಡ್, ಗೋಡಸ್ ಎಂಬೆಲ್ಲಾ ಪ್ರಯೋಗ ಸಾಧ್ಯವಿದೆಯಲ್ಲವೇ? ದೇವ, ಈಶ್ವರ, ಗಾಡ್, ಖುದಾಗಳಿಗೆ ‘ಅಲ್ಲಾಹ್’ ಎಂಬ ಪದದಂತೆ ಗೌರವ ಖಂಡಿತ ಲಭಿಸುವುದಿಲ್ಲ. ಕೋಟಿಗಳ ಒಡೆಯನನ್ನು ಕೋಟೀಶ್ವರನೆಂದು ‘ಗಾಡ್ ಆಫ್ ಸ್ಮೋತ್ ಕಿಂಗ್ಸ್’ ಎಂದೆಲ್ಲಾ ನಾವು ಸುಲಭವಾಗಿ ಹೇಳಿ ಬಿಡುತ್ತೇವೆ. ಅಲ್ಲಾಹ್ ಎಂಬುದು ಇಂತಹ ಎಲ್ಲ ಪದ ಪ್ರಯೋಗಗಳಿಗೂ, ವಚನ, ಲಿಂಗ ಬದಲಾವಣೆಗೂ ಅತೀತವಾದ ನಾಮ ಪದವಾಗಿದೆ. ಆದ್ದರಿಂದ ಸೃಷ್ಟಿಕರ್ತನ ವಿಶೇಷತೆಗಳನ್ನು ನೇರವಾಗಿ ಪ್ರತಿನಿಧಿಸಲು ಅತ್ಯಂತ ಸೂಕ್ತ ಹೆಸರು ಇದುವೇ ಆಗಿದೆ. ಆದ್ದರಿಂದ ವಿಶ್ವದ ಜನತೆಗೆ ಸೃಷ್ಟಿಕರ್ತನನ್ನು ಪರಿಚಯಿಸಲು ಅಲ್ಲಾಹ್ ಎಂಬ ಹೆಸರನ್ನು ಸೂಚಿಸಲಾಗಿದೆ. ಅಂತ್ಯ ಪ್ರವಾದಿಯ ಮೂಲಕ ಈ ಹೆಸರನ್ನು ನಿಶ್ಚಯಿಸಲಾಗಿದೆ. ಅದರೊಂದಿಗೆ ನಿಶ್ಚಿತ, ಆರಾಧನಾ ಕರ್ಮಗಳನ್ನು ಹೊರತು ಪಡಿಸಿ, ಸೃಷ್ಟಿಕರ್ತನನ್ನು ಪರಿಚಯಿಸಲು, ಅಭಿಸಂಬೋದಿಸಲು ‘ಅಲ್ಲಾಹ್’ ಎಂಬ ಪದವೇ ಆಗಬೇಕೆಂದಿಲ್ಲ. ಅದನ್ನು ಪ್ರಾದೇಶಿಕ ಭಾಷೆಯಲ್ಲೋ ಇತರ ಭಾಷೆಗಳಲ್ಲೋ ಪ್ರಯೋಗಿಸಬಹುದು.

ವಿಗ್ರಹ ಧ್ವಂಸ

ಭಾರತದ ಹಿಂದೂಗಳಂತೆ ಮಕ್ಕಾದ ಅರಬರು ವಿಗ್ರಹ ಆರಾಧಕರಾಗಿದ್ದರು. ಕಅಬಾದಲ್ಲಿ ನೂರಾರು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮುಹಮ್ಮದ್(ಸ)ರಿಗೆ ಅಧಿಕಾರ ದೊರೆತಾಗ ಬಲಪ್ರಯೋಗದಿಂದ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಇದರ ಕುರಿತು ಏನೆನ್ನುತ್ತೀರಿ ?

ವಿಶ್ವದಲ್ಲಿ ಯಾವುದೇ ಧರ್ಮ ಬಹುದೇವಾರಾಧನೆಯನ್ನು ಅಂಗೀಕರಿಸಿಲ್ಲ. ವಿಗ್ರಹಾರಾಧನೆಯನ್ನು ಆದೇಶಿಸಲೂ ಇಲ್ಲ. ಹಿಂದೂ ಧರ್ಮದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಿಂದುಗಳು ಮೊದಲು ವಿಗ್ರಹಗಳನ್ನು ಆರಾಧಿಸುತ್ತಿರಲಿಲ್ಲ. ಕಾಲ ಕ್ರಮೇಣ ಅದು ಅವರಲ್ಲಿ ಸೇರಿಕೊಂಡ ಅನಾಚಾರವಾಗಿದೆ. ಪ್ರಮುಖ ಪಂಡಿತರು, ಹಿಂದೂ ಪುನರುತ್ಥಾನವಾದಿಗಳು ಇದನ್ನು ಬಹಳ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಶ್ರೀ ದಯಾನಂ ಸರಸ್ವತಿಯವರ ನಿಲುವನ್ನು ಕೆ. ಗೋಕುಲಾನಂದನ್ ಹೀಗೆ ವಿವರಿಸುತ್ತಾರೆ: ಈಶ್ವರನಿಂದ ಭಿನ್ನವಾದ ಪದಾರ್ಥಗಳನ್ನು ಪೂಜಿಸುವುದರ ಪ್ರತಿಫಲವು ದುಃಖವಾಗಿರುತ್ತದೆ. ಈಶ್ವರನಿಗೆ ಹಲವು ನಾಮಗಳಿವೆ. ಆದರೆ ಅವೆಲ್ಲಾ ಒಂದೇ ಶಕ್ತಿಯ ಪರ್ಯಾಯವಾಗಿದೆ. ಈಶ್ವರನು ಸರ್ವವ್ಯಾಪಿಯೂ, ಸ್ವಯಂಭುವೂ ಅನಾದಿಯೂ, ಅನಂತವೂ ಆಗಿದ್ದಾನೆ. ‘ಅಜ ಏಕ ಪಾತ್’ (ಯಜುರ್ 34-53) ‘ಸಪರ್ಯಗಾಯ್ ಚ್ರಶ್ರಮಕಾಯ್ಮ’ (ಯಜುರ್ 40-8) ಎಂಬ ಯಜುರ್ವೇದದ ವಚನಗಳಿಂದ ಈಶ್ವರನು ಜನ್ಮ ತಾಳುವುದಿಲ್ಲವೆಂಬುದು ಸ್ಪಷ್ಟವಾಗುತ್ತಿದೆಯೆಂದು ಎತ್ತಿ ತೋರಿಸಿದರು. ಆದ್ದರಿಂದ ಅವತಾರವೆಂಬ ನಂಬಿಕೆಯೂ, ಅದರ ಆಧಾರದಲ್ಲಿ ವೈಷ್ಣವರು ಪ್ರಚುರಪಡಿಸುವ ಅವತಾರ ಕಥೆಗಳೂ ಕಟ್ಟುಕಥೆಗಳಾಗಿವೆ. ಆದ್ದರಿಂದ ಗೀತೆ 4-7 ರ:

ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ!
ಅಭ್ಯುತ್ಥಾನ ಮಧರ್ಮಹಸ್ಯ
ತದಾತ್ಮನಂ ಸೃಜಾಮೈಹಂ

ಎಂಬ ವಚನವು ಸ್ವೀಕರಾರ್ಹವಲ್ಲ, ಅಸಂಖ್ಯಾತ ಸದ್ಗುಣ ಸಂಪನ್ನತೆಯ ಸ್ವಭಾವಗಳಿರುವ ಈಶ್ವರನು ಕಂಸ ರಾವಣರನ್ನು ಕೊಲ್ಲಲು ಅವತರಿಸಬೇಕಾದ ಅಗತ್ಯವಿಲ್ಲ. ಈಶ್ವರನು ಅತ್ಯಂತ ನೀಚ ವ್ಯಕ್ತಿಯನ್ನು ಕೊಲ್ಲಲು ಹುಟ್ಟು ಸಾವನ್ನು ಸ್ವೀಕರಿಸುತ್ತಾನೆಂಬ ವಿಶ್ವಾಸ ಮೂರ್ಖತನದ್ದಾಗಿದೆ. ‘ತಂದೆತಾಯಿಗಳು ಆಚಾರ್ಯರು, ಅತಿಥಿಗಳ ಸೇವೆ ಮಾಡುವುದೇ ದೇವ ಪೂಜೆ ಬದಲಾಗಿ ಶಿಲೆಗಳನ್ನು ಪೂಜಿಸುವುದಲ್ಲ’

ಮಹಾಭಾರತದ 4400 ಶ್ಲೋಕಗಳನ್ನು ವ್ಯಾಸರು ರಚಿಸಿದ್ದಾರೆ. ಶಿಷ್ಯರು 5600 ಶ್ಲೋಕಗಳನ್ನು ಸೇರಿಸಿದರು. ಒಟ್ಟು 4000 ಶ್ಲೋಕಗಳು ನೈಜ ಮಹಾಭಾರತದಲ್ಲದೆ ಉಳಿದವುಗಳು ಹಲವು ಕಾಲಗಳಲ್ಲಿ ಸೇರಿಸಲಾಗಿದೆ. ಜ್ಯೋತಿಷಿಗಳು, ಮಂತ್ರವಾದಿಗಳು ಮೂಢರನ್ನು ವಂಚಿಸುತ್ತಾರೆ. ಜ್ಯೋತಿರ್ಗೊಳಗಳೆಂದರೆ ಅಚೇತನ ವಸ್ತುಗಳು. ಅವುಗಳು ಕೋಪಿಸುವುದೂ, ದುಃಖಿಸುವುದೂ ಇಲ್ಲ, ಗ್ರಹ, ನಕ್ಷತ್ರ, ಜಾತಕ, ರಾಶಿ, ಮುಹೂರ್ತಗಳನ್ನು ನೋಡಿ ಫಲಗಳನ್ನು ಹೇಳುವವರು ವಂಚಕರು ಇಂತಹವರು ಗಣಿತಶಾಸ್ತ್ರ ಹಾಗು ಜ್ಯೋತಿಷ್ಯ ಶಾಸ್ತ್ರವನ್ನು ಮರೆಯಾಗಿಸಿ ವಂಚಿಸುತ್ತಿದ್ದಾರೆ. ಮಾಟ, ಮಂತ್ರ, ವಶೀಕರಣ, ಸಮ್ಮೋಹನ ಕರ್ಮಗಳಲ್ಲಿ ವಿಶ್ವಾಸವಿರಿಸುವವರು ಮೂರ್ಖರಾಗಿದ್ದಾರೆ.

”ಯಜುರ್ವೇದ 32-3 ರಂತೆ ಪ್ರಪಂಚವೆಂಬ ವಿಸ್ಮಯಕ್ಕೆ ಒಂದು ಪ್ರತಿಮೆಯನ್ನು ನಿರ್ಮಿಸಲು ಸಾಧ್ಯವಿಲ್ಲ, ವೈದಿಕರು ವಿಗ್ರಹಾರಾಧಕರಾಗಿರಲಿಲ್ಲ. ಜೈನ ಧರ್ಮೀಯರು ತೀರ್ಥಂಕರರ ಪ್ರತಿಮೆಯನ್ನು ನಿರ್ಮಿಸಿದರು. ಅವರಿಂದಾಗಿ ಭಾರತದಲ್ಲಿ ವಿಗ್ರಹಾರಾಧನೆ ಪರಂಪರೆ ಆರಂಭವಾಯಿತು. ವಿಗ್ರಹಾರಾಧನೆಯಿಂದ ತಮ್ಮ ಆಶೆ ಅಭಿಲಾಷೆಗಳನ್ನು ಪೂರೈಸಬಹುದೆಂದೂ ಈಶ್ವರ ಅನುಗ್ರಹಿಸುತ್ತಾನೆಂದೂ ವಿಶ್ವಾಸವಿರಿಸುವವರು ಅದೇ ವೇಳೆ ಸರಿಯಾದ ಕಾರ್ಯವನ್ನು ನಿರ್ವಹಿಸದೆ ಸಮಯ ಹಾಗೂ ಸಂಪತ್ತನ್ನು ಪೋಲು ಮಾಡುತ್ತಿದ್ದಾರೆ. ದೇವಾಲಯಗಳ ಪೂಜಾರಿಗಳು, ಪುರೋಹಿತರು ಭಕ್ತರನ್ನು ವಂಚಿಸಿ ಹಣ ಲಪಟಾಯಿಸುತ್ತಿದ್ದಾರೆ.

ನಿರ್ಜೀವ ಶಿಲೆಯನ್ನು ಪೂಜಿಸುವುದರಿಂದ ಮಾನಸಿಕ ಶಕ್ತಿಯು ಪೋಲಾಗುತ್ತದೆ. ಮನಸ್ಸು ಕಲ್ಲಾಗಿ ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. (ಗೋಕುಲಾನಂದನ್.ಕೆ-ಆಧುನಿಕ ಭಾರತೀಯ ಚರಿತ್ರೆ, ಜನರಲ್ ಎಡಿಟರ್ ಡಾ. ಸಿ. ವಿಶ್ವನಾಥನ್ ನಾಯರ್, ಯೂನಿವರ್ಸಿಟಿ ಬುಕ್ಸ್ ಪಬ್ಲಿಕೇಶನ್ ಕ್ಯಾಲಿಕಟ್, ಪುಟ 58)

ಮಕ್ಕಾದ ಅರಬರು ಮೊದಲು ವಿಗ್ರಹ ಪೂಜಕರಾಗಿರಲಿಲ್ಲ. ಜನವಾಸವಿಲ್ಲದ ನೀರಿನ ಒರತೆಯಿಲ್ಲದ, ಫಲಶೂನ್ಯವಾದ ಮರಭೂಮಿಯಲ್ಲಿ ಪ್ರವಾದಿ ಇಬ್ರಾಹೀಮ್ ಹಾಗೂ ಅವರ ಕುಟುಂಬದ ಆಗಮನದೊಂದಿಗೆ ಜನವಾಸ ಆರಂಭವಾಯಿತು. ಇಬ್ರಾಹೀಮ್ (ಅ) ವಿಗ್ರಹರಾಧನೆಯನ್ನು ಖಂಡಿಸುವವರೂ, ಏಕದೇವಾರಾಧಕರೂ ಆಗಿದ್ದರೆಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಪ್ರವಾದಿ ಇಬ್ರಾಹೀಮ್(ಅ) ತನ್ನ ಮಗ ಪ್ರವಾದಿ ಇಸ್ಮಾಯೀಲ್‌ರೊಂದಿಗೆ ಸೇರಿ ಕಅಬಾ ನಿರ್ಮಿಸಿದರು. ಅದನ್ನು ಏಕದೇವಾರಾಧನೆಗಾಗಿ ನಿರ್ಮಿಸಲಾಗಿತ್ತು. ಮಾತ್ರವಲ್ಲ ಏಕದೇವಾರಾಧನೆಗಾಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟ ಪ್ರಥಮ ಭವನವೂ ಅದುವೇ ಆಗಿದೆ. ಕುರ್‌ಆನ್ ಹೇಳುತ್ತದೆ: “ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸಲ್ಪಟ್ಟ ಪ್ರಥಮ ಆರಾಧನಾಲಯವು ಮಕ್ಕಾದಲ್ಲಿರುವುದೇ ಆಗಿರುತ್ತದೆ. ಅದಕ್ಕೆ ಶುಭ ಸಮೃದ್ಧಿಗಳನ್ನು ನೀಡಲಾಗಿತ್ತು ಮತ್ತು ಅದು ಸಮಗ್ರ ಲೋಕದವರಿಗೆ ಸನ್ಮಾರ್ಗದರ್ಶನದ ಕೇಂದ್ರವನ್ನಾಗಿ ಮಾಡಲ್ಪಟ್ಟಿತು.” (3:96)

ಪವಿತ್ರ ಕಅಬಾ ಭವನದಲ್ಲಿ ವಿಗ್ರಹಗಳನ್ನು ತಂದಿರಿಸಿದವನು ಖುಝಾಅ ಗೋತ್ರದ ಸರದಾರನಾದ ಅಮ್ರ್ ಇಬ್ನುಲು ಅಯ್ಯ ಎಂಬುವನಾಗಿದ್ದನು. ಅವನು ಮುಆಬ್’ ಎಂಬ ಪ್ರದೇಶದಿಂದ ತಂದ ಹುಬಲ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದನು. ಇಸಾಫ್ ಹಾಗೂ ನಾಯಿಲ ವಿಗ್ರಹಗಳು ಕಅಬಾದಲ್ಲಿ ಸ್ಥಾಪಿಸಲ್ಪಟ್ಟವು. ಹೀಗೆ ಏಕದೇವಾರಾಧನೆಗಾಗಿ ನಿರ್ಮಿತವಾದ ಕಅಬಾವು ವಿಗ್ರಹಾಲಯವಾಗಿ ಪರಿವರ್ತಿತವಾಯಿತು. ಪ್ರವಾದಿ ಮುಹಮದ್ (ಸ)ರ ಕಾಲದಲ್ಲಿ ಅಲ್ಲಿ ಮುನ್ನೂರಕ್ಕಿಂತ ಅಧಿಕ ವಿಗ್ರಹಗಳಿದ್ದವು. ಪ್ರವಾದಿತ್ವ ಲಭಿಸಿದ ಹದಿಮೂರು ವರ್ಷ ಪ್ರವಾದಿಗಳು ಮಕ್ಕಾದಲ್ಲೇ ಜೀವಿಸಿದರು. ಬಹುದೇವಾರಾಧನೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಪ್ರವಾದಿಯವರು ತಮ್ಮ ಪೂರ್ವ ಪಿತಾಮಹರಾದ ಇಬ್ರಾಹೀಮ್ ಹಾಗೂ ಇಸ್ಮಾಯೀಲ್‌ರು ನಿರ್ಮಿಸಿದ ಕಅಬಾದಲ್ಲಿ ತುಂಬಿಸಲಾಗಿದ್ದ ವಿಗ್ರಹವನ್ನು ತೆರವುಗೊಳಿಸಿರಲಿಲ್ಲ. ನಂತರ ಅಲ್ಲಿನ ಜನತೆ ಸಂಪೂರ್ಣವಾಗಿ ಇಸ್ಲಾಮಿನ ಅನುಯಾಯಿಗಳಾದರು. ಅಲ್ಲಿ ವಿಗ್ರಹಾರಾಧಕರು ಯಾರೂ ಉಳಿದಿರಲಿಲ್ಲ, ಇಸ್ಲಾಮಿನ ವಿರುದ್ಧ ರಣರಂಗದಲ್ಲಿ ಹೋರಾಡಿದವರೂ ಕೂಡಾ ಪ್ರವಾದಿಯವರ ಆತ್ಮೀಯ ಅನುಯಾಯಿಗಳಾಗಿ ಬದಲಾದರು. ಅಂತಹ ಸಂದರ್ಭದಲ್ಲಿ ಪ್ರವಾದಿವರ್ಯರು ಕಅಬಾದ ವಿಗ್ರಹಗಳನ್ನು ತೆಗೆದು ಹಾಕಿದರು. ವಿಗ್ರಹಾರಾಧನೆಗಾಗಿ ಪ್ರವಾದಿಯವರ ವಿರುದ್ಧ
ಯುದ್ಧರಂಗದಲ್ಲಿ ಹೋರಾಟಕ್ಕೆ ನೇತೃತ್ವ ನೀಡಿದ್ದ ಅಬೂಸುಫ್ಯಾನ್ ಇಸ್ಲಾಮ್ ಸ್ವೀಕರಿಸ ಬಳಿಕ “ಮನಾತ್’ ಎಂಬ ವಿಗ್ರಹವನ್ನು ತೆಗೆದು ಹಾಕಿದ್ದರು. ಹೀಗೆ ಮಕ್ಕಾದ ವಿಗ್ರಹಾರಾಧಕರಾಗಿದ್ದವರೇ ತಮ್ಮ ಸರ್ವಸ್ವವೆಂದು ಬಗೆದಿದ್ದ ವಿಗ್ರಹಗಳನ್ನು ಕಅಬಾದಿಂದ ಅಳಿಸಿ ಹಾಕಿದರು ಮತ್ತು ಕಅಬಾವನ್ನು ಪೂರ್ವಸ್ಥಿತಿಗೆ ತಲುಪಿಸಿದರು. ವಿಗ್ರಹಗಳಿರುವಾಗ ಕಅಬಾದ ಕೀಲಿಕೈಯನ್ನು ಜೋಪಾನವಾಗಿರಿಸಿದ್ದ ಉಸ್ಮಾನ್ ಬಿನ್ ತಲ್ಹಾ ವಿಗ್ರಹಗಳ ತೆರವಿನ ಬಳಿಕವೂ ಕಅಬಾದ ಕೀಲಿಕೈಯ ಸಂರಕ್ಷಕರಾಗಿದ್ದರೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ತಮ್ಮ ಆರಾಧ್ಯ ವಸ್ತುಗಳಿರುವ ಸಂದರ್ಭದಲ್ಲಿ ಕಅಬಾದ ರಕ್ಷಣೆಗೆ ನೇತೃತ್ವ ನೀಡಿದವರು ಅದರ ನಾಶದ ಬಳಿಕವೂ ಅದರ ರಕ್ಷಣೆಯ ಹೊಣೆಯನ್ನು ಮುಂದುವರಿಸಿದರೆಂದರೆ ಅವರ ಆದರ್ಶದಲ್ಲಾದ ಬದಲಾವಣೆ ಎಷ್ಟು ಪ್ರಬಲವಾಗಿರಬಹುದೆಂದು ಊಹಿಸಬಹುದು. ಆದರ್ಶ ಕ್ರಾಂತಿಯಿಂದ ಮಕ್ಕಾವಾಸಿಗಳ ಮನದಲ್ಲಿದ್ದ ವಿಗ್ರಹಗಳನ್ನು ಅಳಿಸಿದ ಬಳಿಕ ಪ್ರವಾದಿಯವರು ಅವರಿಂದಲೇ ಆರಾಧಕರಾರೂ ಇಲ್ಲದಂತಾದ ವಿಗ್ರಹಗಳನ್ನು ಅಳಿಸಿದರು.

ಇಸ್ಲಾಮ್ ಏಕದೇವಾರಾಧನೆಯನ್ನು ಸಾರಿ, ವಿಗ್ರಹಾರಾಧನೆಯನ್ನು ಅಷ್ಟೇ ಸ್ಪಷ್ಟವಾಗಿ ನಿಷೇಧಿಸುತ್ತದೆ. ಆದರೆ ವಿಗ್ರಹಗಳನ್ನು ಅಥವಾ ಇತರ ಆರಾಧ್ಯ ವಸ್ತುಗಳನ್ನು ನಿಂದಿಸುವುದನ್ನು ಮತ್ತು ಅವಹೇಳನ ಮಾಡುವುದನ್ನು ನಾಶಗೊಳಿಸುವುದನ್ನು ಖಂಡಿತ ಅನುಮತಿಸುವುದಿಲ್ಲ. ಪವಿತ್ರ ಕುರ್‌ಆನ್ ಹೇಳುತ್ತದೆ :”ಓ ಮುಸ್ಲಿಮರೇ, ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ.” (6:108) .ವಿಶ್ವಾಸ, ನಂಬಿಕೆ, ಆರಾಧನೆಯ ವಿಷಯಗಳಲ್ಲಿ ಯಾವುದೇ ರೀತಿಯ ಬಲಪ್ರಯೋಗ ಸಲ್ಲದು. ಪ್ರತಿಯೊಬ್ಬರೂ ತಾವಿಚ್ಛಿಸಿದ ದಾರಿಯನ್ನು ಆಯ್ದುಕೊಳ್ಳಬಹುದು. ಸತ್ಯ, ಅಸತ್ಯ, ಸರಿ, ತಪ್ಪು, ಸನ್ಮಾರ್ಗ, ದುರ್ಮಾರ್ಗವನ್ನು ಬೇರ್ಪಡಿಸಿ ತಿಳಿಸುವ ಜವಾಬ್ದಾರಿ ಮಾತ್ರ ವಿಶ್ವಾಸಿಗಳಿಗಿದೆ. ಪವಿತ್ರ ಕುರ್‌ಆನ್ನಲ್ಲಿ ಹೇಳಲಾಗಿದೆ:’ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿಲ್ಲದವರು ನಿರಾಕರಿಸಲಿ.” (ಪವಿತ್ರ ಕುರ್‌ಆನ್ 18:29)

ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗಗಳಿಂದ ಬೇರ್ಪಡಿಸಲ್ಪಟ್ಟಿದೆ. ಇನ್ನು ‘ತಾಗೂತ್’ (ಅತಿಕ್ರಮ)ನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟಾತನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. ಅಲ್ಲಾಹನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. (ಪವಿತ್ರ ಕುರ್‌ಆನ್2:256)

“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …