Home / ಲೇಖನಗಳು / ಗುಲಾಮ ಮತ್ತು ರಾಜ

ಗುಲಾಮ ಮತ್ತು ರಾಜ

  • @ ಅಬ್ದುಲ್ ಲತೀಫ್ ಆಲಿಯಾ

ಒಂದೂರಿನಲ್ಲಿ ಒಬ್ಬ ಅರಸನಿದ್ದ. ಅವನಿಗೆ ದೋಣಿ ಓಡಿಸುವುದೆಂದರೆ ತುಂಬಾ ಇಷ್ಟ. ಒಂದು ದಿನ ನದಿಯಲ್ಲಿ ಅವನ ದೋಣಿಯು ಮಗುಚಿ ಬಿತ್ತು. ರಾಜನು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಒಬ್ಬ ಗುಲಾಮನು ಅವನ ರಕ್ಷಣೆಗಾಗಿ ಓಡೋಡಿ ಬಂದು ರಾಜವನ್ನು ರಕ್ಷಿಸಿ ದಡಕ್ಕೆ ತಲುಪಿಸಿದನು. ರಾಜನು ಅತೀವ ಭಯಗೊಂಡಿದ್ದರಿಂದಾಗಿ ವಿಹ್ವಲನಾಗಿ ಮೂರ್ಛೆ ಹೋಗಿದ್ದ. ನಂತರ ಪ್ರಜ್ಞೆ ಮರಳಿದ  ರಾಜನು ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ಹಾಜರು ಪಡಿಸಲು ಆಜ್ಞೆ ಇತ್ತನು. ಅವನ ಆಜ್ಞೆ ಪ್ರಕಾರ ಆ ವ್ಯಕ್ತಿಯನ್ನು ಹಾಜರುಪಡಿಸಲಾಯಿತು. ಅವನೊಬ್ಬ ಗುಲಾಮನಾಗಿದ್ದ.

ಆ ವ್ಯಕ್ತಿಯನ್ನು ನೋಡಿ ಕೃತಜ್ಞತಾಭಾವದಿಂದ ಅವನಿಗೆ ಬಹುಮಾನ ಪುರಸ್ಕಾರಗಳನ್ನು ನೀಡುವುದರ ಬದಲು ಸಿಟ್ಟಿನಿಂದ ರಾಜನು ಅವನೊಂದಿಗೆ, “ಎಲೈ ನೀಚ, ನಿನ್ನ ಮಲಿನ ಕೈಗಳಿಂದ ಈ ಪವಿತ್ರ ಶರೀರವನ್ನು ಮುಟ್ಟಲು ಹೇಗೆ  ಧೈರ್ಯ ಬಂತು ನಿನಗೆ?” ಎಂದ.

ಆಗ ಗುಲಾಮ “ಅಲ್ಲ ಪ್ರಭು, ನಾನು ನಿಮ್ಮನ್ನು ರಕ್ಷಿಸಲಿಕ್ಕೋಸ್ಕರ ಹಾಗೆ ಮಾಡಿದೆ” ಎಂದು ನಡುಗುವ ಸ್ವರದಿಂದ ಹೇಳಿದ.

ಆಗ ರಾಜನು, “ನಿಶ್ಚಯವಾಗಿಯೂ ನೀನು ನಿನ್ನ ಮಲಿನ ಕೈಗಳಿಂದ ನನ್ನ ಶರೀರವನ್ನು ಮಲಿನಗೊಳಿಸಿ ಬಿಟ್ಟೆ. ನಿನ್ನ ಈ ಅಹಂಕಾರಕ್ಕೆ ಮರಣ ದಂಡನೆಯಲ್ಲದೆ ಬೇರೆ ಯಾವ ಶಿಕ್ಷೆಯೂ ಸರಿಯಾಗದು”  ಎಂದು ಹೇಳಿ ಅವನಿಗೆ ಮರಣ ದಂಡನೆ ವಿಧಿಸಿದ.

ಕೆಲವು ದಿನಗಳ ನಂತರ ಅರಸನು ತನ್ನ ರೂಢಿಯಂತೆ ದೋಣಿ ಓಡಿಸಲು ಹೋದ. ದೋಣಿ ಓಡಿಸುವುದರ ಮಧ್ಯೆ ಅವನು ಒಂದು ದೋಣಿಯಿಂದ  ಮತ್ತೊಂದು ದೋಣಿಗೆ ಕಾಲಿಡುವಷ್ಟರಲ್ಲಿ ಕಾಲು ಜಾರಿ ನದಿ ಪಾಲಾದ. ಅವನು ಬೊಬ್ಬಿಡುತ್ತಾ ಜನರೊಂದಿಗೆ ಸಹಾಯ ಯಾಚಿಸಿದ. ಆದರೆ ಒಬ್ಬನೂ ಕೂಡಾ ಅವನ ರಕ್ಷಣೆಗೆ ಮುಂದಾಗಲಿಲ್ಲ. “ನಿನ್ನ  ದುಷ್ಕ್ರತ್ಯದ ಪ್ರತಿಫಲ ಅದೆಷ್ಟು ಬೇಗ ನಿನಗೆ ಲಭಿಸಿತು! ನೀನು ಮರಣದ ಕಹಿಯನ್ನು ಅನುಭವಿಸು” ಎಂಬ ವಾಕ್ಯಗಳು ರಾಜನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು.

ಪ್ರಸ್ತುತ ಕಥೆಯಿಂದ ನಮಗೆ ಎರಡು ವಿಷಯಗಳು ತಿಳಿದು ಬರುತ್ತವೆ. ಒಂದು- ಪರರಿಗೆ ಉಪಕಾರ ಮಾಡುವ ಮಹಾ ಮನಸ್ಸು. ಎರಡು- ಉಪಕಾರ ಮಾಡಿದವನಿಗೆ ಅಪಕಾರವೆಂದೂ ಮಾಡಬಾರದೆಂಬ ಮಹಾ ಮನಸ್ಸು. ಆದ್ದರಿಂದ ನಾವು ಯಾವಾಗಲೂ ಪರರಿಗೆ ಉಪಕಾರವೆಸಗುತ್ತಿರಬೇಕು ಮತ್ತು ಉಪಕಾರ ಮಾಡಿದಾತನಿಗೆ ಎಂದೂ ಅಪಕಾರವೆಸಗಬಾರದು.

ಉಪಕಾರವೆಸಗುವುದರ ಮಹತ್ವದ  ಬಗ್ಗೆ ಪ್ರವಾದಿಯವರು(ಸ) ಹೀಗೆ ಹೇಳಿದರು, “ಯಾರು ಓರ್ವ ಮುಸ್ಲಿಮನ ಲೌಕಿಕ ಸಂಕಷ್ಟವನ್ನು ದೂರಗೊಳಿಸುತ್ತಾನೋ, ಅಲ್ಲಾಹನು ಅವನ ಪರಲೋಕದ ಸಂಕಷ್ಟವನ್ನು ದೂರಗೊಳಿಸುವನು.  ಯಾರು ಆರ್ಥಿಕ ಸಂಕಷ್ಟದಲ್ಲಿರುವವನಿಗೆ ಸೌಲಭ್ಯ ಒದಗಿಸುತ್ತಾನೋ ಅವನಿಗೆ ಅಲ್ಲಾಹನು ಪರಲೋಕದಲ್ಲಿ ಸೌಲಭ್ಯ ಒದಗಿಸುವನು. ಯಾರು ಒಬ್ಬ ಮುಸ್ಲಿಮನ ತಪ್ಪನ್ನು ಮರೆಮಾಚುತ್ತಾನೋ, ಅಲ್ಲಾಹನು  ಅವನ ತಪ್ಪನ್ನು ಮರೆಮಾಚುವನು. ಓರ್ವ ದಾಸನು ತನ್ನ ಮುಸ್ಲಿಮ್ ಸೋದರನ ನೆರವಿಗೆ ನಿಂತಿರುವ ತನಕ ಅಲ್ಲಾಹನು ಅವನ ನೆರವಿಗೆ ನಿಂತಿರುವನು.”

ಆದರೆ ಉಪಕಾರ ಮಾಡುವುದು ಎಷ್ಟು ದೊಡ್ಡ ಶ್ರೇಷ್ಠ ಕರ್ಮವಾಗಿದೆಯೋ ಅಪಕಾರವೆಸಗುವುದು ಅಷ್ಟೇ ದೊಡ್ಡ ಪಾಪವಾಗಿದೆ. ಆದ್ದರಿಂದ ನಾವು ಪ್ರಪ್ರಥಮವಾಗಿ ನಮ್ಮನ್ನು ಸೃಷ್ಟಿಸಿದ ಮತ್ತು ಪರಿಪಾಲಿಸುತ್ತಿರುವ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕು. ಅದೇ ರೀತಿ ಜನರಿಗೆ ಉಪಕಾರ ಮಾಡುವಾಗ ಯಾವುದೇ ರೀತಿಯ ಲೌಕಿಕವಾದ ಪ್ರತಿಫಲಾಪೇಕ್ಷೆಯನ್ನು ಬಯಸ ಕೂಡದು. ಕಾರಣ ಅಲ್ಲಾಹನು ಈ  ರೀತಿ ಹೇಳಿರುತ್ತಾನೆ. “ಹೆಚ್ಚು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ.” (ಕುರ್‍ಆನ್)

ಒಬ್ಬ ನೈಜ ವಿಶ್ವಾಸಿಯು ಅವನು ಮಾಡುವ ಯಾವುದೇ ಉಪಕಾರಕ್ಕೂ ಅಲ್ಲಾಹನು ದುಪ್ಪಟ್ಟು ಪ್ರತಿಫಲವನ್ನು ನೀಡುವನು. ಕಾರಣ ಅವನ ಎಲ್ಲಾ ರೀತಿಯ ಪ್ರತಿಫಲಾಪೇಕ್ಷೆಗಳನ್ನು ಅಲ್ಲಾಹನಿಂದಲೇ ಬಯಸುತ್ತಾನೇ ಹೊರತು ಮನುಷ್ಯರಿಂದಲ್ಲ. ಆದ್ದರಿಂದ ಜನರಿಗೆ ಉಪಕಾರ ಮಾಡುವುದೂ ಉಪಕಾರಿಗಳಿಗೆ ಪ್ರತ್ಯುಪಕಾರ ಮಾಡುವುದೂ ನಮ್ಮ ಗುಣಗಳಲ್ಲಿ ಸೇರಬೇಕು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …