Home / ಲೇಖನಗಳು / ನಿದ್ದೆ ಮತ್ತು ಎಚ್ಚರ

ನಿದ್ದೆ ಮತ್ತು ಎಚ್ಚರ

@ ಮುಹಮ್ಮದ್ ಯೂಸುಫ್ ಇಸ್ಲಾಹಿ

ಆಕಾಶದಲ್ಲಿ ಕತ್ತಲು ಆವರಿಸತೊಡಗುವಾಗ ಮಕ್ಕಳನ್ನು ಮನೆಯೊಳಗೆ ಸೇರಿಸಬೇಕು. ಆ ಸಮಯದಲ್ಲಿ ಹೊರಗೆ ಆಡಲು ಬಿಡಬಾರದು. ರಾತ್ರಿಯ ಮೊದಲ ಭಾಗ ಸ್ವಲ್ಪ ಕಳೆದರೆ ಅತ್ಯಗತ್ಯಕ್ಕೆ  ಅವರನ್ನು ಹೊರಗೆ ಬಿಡಬಹುದು. ಬಹಳ ಅತ್ಯಗತ್ಯವಿದೆಯೆಂದಾದರೆ ಮಾತ್ರ. ಪ್ರವಾದಿ(ಸ)ರು ಹೇಳಿರುವರು: ರಾತ್ರಿಯಾದಾಗ ಸಣ್ಣ ಮಕ್ಕಳನ್ನು ಹೊರಗೆ ಬಿಡಬಾರದು. ಅದು ಪಿಶಾಚಿಯು  ಭೂಮಿಯಲ್ಲಿ ವಿಹರಿಸುವ ಸಮಯವಾಗಿದೆ. ಆದರೂ ರಾತ್ರಿಯ ಮೊದಲ ಭಾಗ ಕಳೆದರೆ (ಅನಿವಾರ್ಯವಿದ್ದರೆ) ಅವರನ್ನು ಹೊರಗೆ ಕಳಿಸಬಹುದು. [ಸಿಹಾಹುಸ್ಸಿತ್ತ]

ರಾತ್ರಿಯಾದಾಗ ಒಂದು ಪ್ರಾರ್ಥನೆಯನ್ನು ಹೇಳಲು ಪ್ರವಾದಿ(ಸ)ರು ಕಲಿಸಿದ್ದಾರೆ- ಅಲ್ಲಾಹುಮ್ಮ ಬಿಕ ಅಂಸೈನಾ ವಬಿಕ ಅಸ್ಬಹ್‍ನಾ ವಬಿಕ ನಹಿಯಾ ವಬಿಕ ನಮೂತು ವಇಲೈಹಿನ್ನು ಶೂರ್  (ಅಲ್ಲಾಹನೇ, ನಿನ್ನ ಅನುಗ್ರಹದಿಂದ ನಾವು ರಾತ್ರಿಯಲ್ಲಿ ಬದುಕುತ್ತೇವೆ. ನಿನ್ನ ಸಹಾಯದಿಂದ ಪ್ರಭಾತ ಲಭಿಸುತ್ತದೆ. ನಿನ್ನ ಕಾರುಣ್ಯದಿಂದ ನಾವು ಜೀವಿಸುತ್ತಿದ್ದೇವೆ. ನಿನ್ನ ಕರೆ ಬಂದಾಗ ಮರಣ ಬರುತ್ತದೆ. ಕೊನೆಗೆ ನಿನ್ನ ಬಳಿಗೆ ನಾವು ಮರಳುತ್ತೇವೆ). [ತಿರ್ಮಿದಿ]

ಮಗ್ರಿಬ್ ಅದಾನ್‍ನ ಸಮಯದಲ್ಲಿ ಹೀಗೆ ಪ್ರಾರ್ಥಿಸಬೇಕು- ಅಲ್ಲಾಹುಮ್ಮ ಹಾದಾ ಇಖ್‍ಬಾಲು ಲೈಲಿಕ ವಇದ್‍ಬಾರು ನಹಾರಿಕ ವ ಅಸ್ವಾತು ದುಆತಿಕ ಫಗ್‍ಫಿರ್‍ಲೀ. (ಅಲ್ಲಾಹನೇ, ಇದು  ರಾತ್ರಿ ಬರುವ, ಹಗಲು ಮರೆಸುವ ಸಮಯವಾಗಿದೆ. ನಿನ್ನ ಕರೆಗಾರರ-ಮುಅದ್ದಿನ್‍ಗಳ ಸಮಯವಿದು. ನಮ್ಮನ್ನು ಕ್ಷಮಿಸು.) [ತಿರ್ಮಿದಿ, ಅಬೂದಾವೂದ್]

ಇಶಾ ನಮಾಝïನ ಮೊದಲು ಮಲಗಬಾರದು. ಇದರಿಂದ ಇಶಾ ನಮಾಝï ಕೈ ತಪ್ಪಬಹುದು. ನಿದ್ದೆಯೆಂಬ ಮರಣದ ಬಳಿಕ ಅಲ್ಲಾಹನು ಮನುಷ್ಯನ ಪ್ರಾಣವನ್ನು ಅವನಿಗೆ  ಮರಳಿಸುತ್ತಾನೋ ಎಂದು ಯಾರಿಗೆ ಗೊತ್ತು! ಪ್ರವಾದಿ(ಸ)ರು ಒಮ್ಮೆಯೂ ಇಶಾ ನಮಾಝïನ ಮೊದಲು ನಿದ್ರಿಸಿರಲಿಲ್ಲ.

ರಾತ್ರಿಯಾದರೆ ಮನೆಯ ದೀಪವನ್ನು ಬೆಳಗಿಸಿ. ಬೆಳಕಿಲ್ಲದ ಮನೆಯಲ್ಲಿ ಮಲಗದಿರಲು ಪ್ರವಾದಿಯವರು(ಸ) ಗಮನ ಹರಿಸಿದ್ದರು. ರಾತ್ರಿ ಬೇಗನೇ ಮಲಗಿ ಬೆಳಿಗ್ಗೆ ಬೇಗನೇ ಏಳುವ ಜೀವನ ಶೈಲಿ ನಮ್ಮದಾಗಬೇಕು. ಪ್ರವಾದಿಯವರು(ಸ) ಹೇಳಿದರು, ‘ದೇವನ ಸ್ಮರಣೆಗಾಗಿಯೋ ಅಥವಾ ಅತ್ಯಗತ್ಯ ಕಾರ್ಯಗಳಿಗಾಗಿ ಹೊರತು ಇಶಾ ನಮಾಝïನ ಬಳಿಕ ಎದ್ದಿರಬಾರದು.’

ಬೆಳಿಗ್ಗೆ ಬೇಗನೇ ಎದ್ದಿದ್ದೇನಲ್ಲ ಎಂದು ಹೇಳಿ ಹಗಲಿಡೀ ನಿದ್ರಿಸುವುದು ಸರಿಯಲ್ಲ. ರಾತ್ರಿಯನ್ನು ವಿಶ್ರಾಂತಿಯ ಸಮಯವನ್ನಾಗಿ ನಿಶ್ಚಯಿಸಿರುವಾಗ ಹಗಲಿನಲ್ಲಿ ಎಚ್ಚರವಾಗಿರಲು ಮತ್ತು  ಜೀವನದ ವ್ಯವಹಾರಕ್ಕಾಗಿಯೂ ಸಿದ್ಧಪಡಿಸಲಾಗಿದೆ. ಅಲ್ಲಾಹನು ಸೂರಃ ಫುರ್ಖಾನ್‍ನಲ್ಲಿ ಹೇಳುತ್ತಾನೆ, “ರಾತ್ರಿಯನ್ನು ನಿಮಗೆ ಉಡುಪಾಗಿಯೂ ನಿದ್ದೆಯನ್ನು ಪ್ರಶಾಂತಿಯಾಗಿಯೂ ಹಗಲನ್ನು ಎದ್ದೇಳುವ ಸಮಯವಾಗಿಯೂ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ.” (ಸೂಕ್ತ 47)

ಸೂರಃ ಅನ್ನಬಅದಲ್ಲಿ ಹೇಳಲಾಗಿದೆ, “ನಿಮ್ಮ ನಿದ್ದೆಯನ್ನು ವಿಶ್ರಾಂತಿಯ ಸಾಧನವಾಗಿ ಮಾಡಿರುವುದು, ರಾತ್ರಿಯನ್ನು ಮರೆಮಾಡುವ ಸಾಧನವಾಗಿ ಮಾಡಿರುವುದು, ಹಗಲನ್ನು ಉಪಜೀವನವನ್ನರಸುವ ಸಮಯವಾಗಿಯೂ ಮಾಡಿರುವುದು.” (ಸೂಕ್ತ 9-11)

ಸೂರಃ ಅನ್ನಮ್ಲ್‍ನಲ್ಲಿ ಹೇಳಲಾಗಿದೆ, “ನಾವು ರಾತ್ರಿಯನ್ನು ಅವರ ಪ್ರಶಾಂತಿಗಾಗಿಯೂ ಹಗಲನ್ನು ಅವರಿಗೆ ಪ್ರಕಾಶಮಾನವಾಗಿಯೂ ಮಾಡಿರುವುದು ತೋಚುತ್ತಿರಲಿಲ್ಲವೇ? ಇದರಲ್ಲಿ  ಸತ್ಯವಿಶ್ವಾಸವಿಟ್ಟವರಿಗೆ ಅನೇಕ ನಿದರ್ಶನಗಳಿದ್ದವು.” (ಸೂಕ್ತ 86)

ಹಗಲಿನ ಉಪಜೀವನವನ್ನು ಕಂಡುಕೊಳ್ಳಬೇಕು. ರಾತ್ರಿ ವಿಶ್ರಾಂತಿ ಪಡೆಯಬೇಕು ಎಂಬುದು ಈ ಎಲ್ಲ ಸೂಕ್ತಗಳ ಅರ್ಥವಾಗಿದೆ. ಹಗಲಿನಲ್ಲಿ ದುಡಿದು ದಣಿದ ದೇಹವು ರಾತ್ರಿಯ ವಿಶ್ರಾಂತಿಯ  ಬಳಿಕ ಉತ್ಸಾಹದಿಂದ ಎದ್ದೇಳುತ್ತದೆ. ಹೊಸ ಹುಮ್ಮಸ್ಸಿನೊಂದಿಗೆ ನೌಕರಿಯ ಸ್ಥಳಕ್ಕೆ ಹೊರಡಲು ಸಾಧ್ಯವಾಗುತ್ತದೆ. ಆದರೆ ಸುಖಭೋಗ, ಆಟ ವಿನೋದಗಳಿಗಾಗಿ ರಾತ್ರಿಯಿಡೀ ನಿದ್ರಿಸದೆ ಕಳೆದವರು ಅಲ್ಲಾಹನು ನಿಶ್ಚಯಿಸಿದ ಈ ನಿಯಮಗಳನ್ನು ಪರಿಹಾಸ್ಯ ಮಾಡುವುದರೊಂದಿಗೆ ತಮ್ಮ ಆರೋಗ್ಯವನ್ನು ಸ್ವತಃ ನಾಶಪಡಿಸಿಕೊಳ್ಳುತ್ತಾರೆ. ಹಗಲಿನಲ್ಲಿ ನಿದ್ರಿಸುವವರು ತನ್ನ ಕಡ್ಡಾಯ ಕರ್ಮಗಳಲ್ಲಿ ಉದಾಸೀನ ತೋರುವವರಾಗಿದ್ದಾರೆ. ಹಗಲಿನ ನಿದ್ದೆಯು ರಾತ್ರಿಯ ನಿದ್ರೆಗೆ ಬದಲಿಯಾಗಲು ಸಾಧ್ಯವಿಲ್ಲದಿರುವುದರಿಂದ ಸ್ವಶರೀರಕ್ಕೆ ಸಿಗಬೇಕಾದ ವಿಶ್ರಾಂತಿಯನ್ನು  ಇಲ್ಲವಾಗಿಸುತ್ತಾರೆ. ರಾತ್ರಿ ಸ್ವಲ್ಪವೂ ನಿದ್ರಿಸದೆ ಆರಾಧನಾ ಕರ್ಮಗಳಲ್ಲಿ ಮುಳುಗಿ ಸ್ವಂತ ದೇಹವನ್ನು ದಂಡಿಸುವುದನ್ನು ಪ್ರವಾದಿ ಯವರು(ಸ) ಇಷ್ಟಪಟ್ಟಿರಲಿಲ್ಲ.

ಅಬ್ದುಲ್ಲಾಹಿಬ್ನು ಅಮ್ರ್ ರೊಂದಿಗೆ ಒಮ್ಮೆ ಪ್ರವಾದಿಯವರು(ಸ) ಕೇಳಿದರು, “ತಾವು ನಿರಂತರವಾಗಿ ಉಪವಾಸ ಆಚರಿಸುತ್ತೀರಿ ಮತ್ತು ರಾತ್ರಿಯಿಡೀ ನಮಾಝï ನಿರ್ವಹಿಸುತ್ತಿದ್ದೀರಿ ಎಂದು  ಕೇಳಿದ ವಿಷಯವು ಸತ್ಯವೇ?” ಆಗ ಅವರು, “ಹೌದು, ಪ್ರವಾದಿವರ್ಯರೇ, ಸತ್ಯ.” ಆಗ ಪ್ರವಾದಿಯವರು(ಸ) ಉಪದೇಶಿಸಿದರು, “ಹಾಗೆ ಮಾಡಬಾರದು. ಒಮ್ಮೊಮ್ಮೆ ಉಪವಾಸ ಆಚರಿಸಿ. ರಾತ್ರಿಯ ನಮಾಝïನ ವಿಷಯವೂ ಅಷ್ಟೇ. ರಾತ್ರಿಯಲ್ಲಿ ನಿದ್ರಿಸಿ. ನಡುವೆ ಎದ್ದು ನಮಾಝï ನಿರ್ವಹಿಸಿ. ಏಕೆಂದರೆ, ತಮ್ಮ ಶರೀರದೊಂದಿಗೂ ಕಣ್ಣಿನೊಂದಿಗೂ ನಿಮಗೆ ಕೆಲವು  ಬಾಧ್ಯತೆಗಳಿವೆ.” [ಬುಖಾರಿ]

ತುಂಬಾ ಮೆತ್ತನೆಯ ಮೆದುವಾದ ಹಾಸಿಗೆಯನ್ನು ಮಲಗಲು ಉಪಯೋಗಿಸಬಾರದು. ಈ ಲೋಕ ಜೀವನವು ವಿಶ್ವಾಸಿಗಳಿಗೆ ಸುಖಲೋಲುಪತೆಗೂ ಆಲಸ್ಯಕ್ಕೂ ವಿಶ್ರಾಂತಿಗೂ ಇರುವುದಲ್ಲ. ಅದು ತ್ಯಾಗ ಮತ್ತು ಸಮರ್ಪಣೆಗಾಗಿದೆ. ವಿಶ್ವಾಸಿಗಳಿಗೆ ಅಂತಹ ಮನಸ್ಥಿತಿ ಉಂಟಾಗಬೇಕಾದರೆ ತ್ಯಾಗ ಸನ್ನದ್ಧತೆಯೊಂದಿಗೆ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುವ ಜೀವನವನ್ನು ರೂಢಿಸಿಕೊಳ್ಳಬೇಕು.

ಆಯಿಶಾ(ರ)ರು ಉದ್ಧರಿಸುತ್ತಾರೆ, ಪ್ರವಾದಿ(ಸ)ರ ಹಾಸಿಗೆಯು ಒಳಗೆ ಖರ್ಜೂರದ ಎಲೆಗಳಿಂದ ತುಂಬಿಸಿದ, ಚರ್ಮದಿಂದ ಮಾಡಿದ್ದಾಗಿತ್ತು. (ಶಮಾಇಲ್ ತಿರ್ಮಿದಿ)

ಪ್ರವಾದಿ(ಸ)ರು ನಿದ್ರಿಸಲು ಉಪಯೋಗಿಸುತ್ತಿದ್ದ ಹಾಸು ಎಂಥದ್ದೆಂದು ಒಮ್ಮೆ ಪತ್ನಿ ಹಫ್ಸಾ(ರ)ರೊಂದಿಗೆ ಕೆಲವರು ಕೇಳಿದರು. ಅವರು ಹೇಳಿದರು, “ಸೆಣಬಿನಿಂದ ಮಾಡಿದ ಹಾಸನ್ನು  ಹಾಸಿ ಅವರು ಮಲಗುತ್ತಿದ್ದರು. ಒಮ್ಮೆ ಸ್ವಲ್ಪ ಮೆತ್ತಗೆ ಆಗಲಿ ಎಂದು ಭಾವಿಸಿ ನಾನು ಅವರಿಗೆ ಅದನ್ನು ಎರಡು ಮಡಚಿ ಹಾಸಿದೆ.” ಬೆಳಿಗ್ಗೆ ಪ್ರವಾದಿ(ಸ)ರು ಕೇಳಿದರು, “ರಾತ್ರಿ ನನಗೆ ಎಂತಹ  ಹಾಸಿಗೆ ನೀಡಲಾಗಿತ್ತು?” ಹಫ್ಸಾ ಹೇಳಿದರು, “ನಿಮ್ಮ ಅದೇ ಹಾಸಿಗೆ. ಆದರೆ ಸ್ವಲ್ಪ ಮೆತ್ತಗಿರಲೆಂದು ಎರಡಾಗಿ ಮಡಚಿದ್ದೆ.” ಪ್ರವಾದಿ(ಸ)ರು ಹೇಳಿದರು, “ಹಾಗೆ ಮಾಡಕೂಡದು. ಅದನ್ನು  ಎಂದಿನಂತೆಯೇ ಹಾಸಬೇಕು. ಹಾಸಿಗೆಯ ಸುಖವು ರಾತ್ರಿ ನಮಾಝïಗೆ ಏಳಲು ಅಡ್ಡಿಯಾಗುತ್ತದೆ.” (ಶಮಾಇಲ್ ತಿರ್ಮಿದಿ)

ಈ ಲೋಕದಲ್ಲಿ ಸುಖಭೋಗಗಳಿಂದ ದೂರವಿದ್ದು, ಅತ್ಯಂತ ಸರಳತೆ ಹಾಗೂ ತ್ಯಾಗ ಸನ್ನದ್ಧತೆಯೊಂದಿಗೆ ಬದುಕಬೇಕೆಂಬ ಪಾಠವು ಪ್ರವಾದಿ(ಸ)ರ ಜೀವನದಿಂದ ವಿಶ್ವಾಸಿಗೆ ದೊರೆಯುತ್ತದೆ.  ಶರೀರದಲ್ಲಿ ಮಾಲಿನ್ಯಗಳಿಲ್ಲದೆ ಶುದ್ಧವಾಗಿ ಮಲಗಬೇಕು. ಮಲಗುವ ಮೊದಲು ಅಂಗಸ್ನಾನ ಮಾಡಬೇಕು. ಅದು ಪ್ರವಾದಿ(ಸ)ರ ದಿನಚರಿಯಾಗಿತ್ತು. ಸ್ನಾನ ಕಡ್ಡಾಯವಿರುವ ಸಂದರ್ಭಗಳಲ್ಲಿ ಹಲವೊಮ್ಮೆ ನಿದ್ರಿಸಬೇಕಾಗಿ ಬಂದಾಗ ಮಾಲಿನ್ಯದ ಸ್ಥಳದಲ್ಲಿ ಶುಚಿಗೊಳಿಸಿ, ವುಝೂ ಮಾಡಿಯೇ ನಿದ್ರಿಸುತ್ತಿದ್ದರು.

ಮನೆಯ ಬಾಗಿಲನ್ನು ಮುಚ್ಚಿ, ಆಹಾರ ಪದಾರ್ಥಗಳ ಪಾತ್ರೆಯನ್ನು ಮುಚ್ಚಿ ನಿದ್ರಿಸಲು ಹೋಗಬೇಕು. ಬೆಳಕು ನಂದಿಸಬೇಕು. ಒಲೆಯಲ್ಲಿ ಬೆಂಕಿ ಆರಿಸಿದ್ದೇವೆಂದು ಖಾತ್ರಿಪಡಿಸಿಕೊಳ್ಳಬೇಕು.  ಒಮ್ಮೆ ಮದೀನಾದ ಮನೆಯೊಂದಕ್ಕೆ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಪ್ರವಾದಿ(ಸ)ರು ಹೇಳಿದರು, “ಬೆಂಕಿ ನಂದಿಸಿ. ಅದು ನಿಮ್ಮ ಶತ್ರುವಾಗಿದೆ.”
ಇನ್ನೊಮ್ಮೆ ಅವರು ಹೇಳಿದರು, “ರಾತ್ರಿಯಲ್ಲಿ ಬಿಸ್ಮಿಲ್ಲಾ ಹೇಳಿ ಬಾಗಿಲು ಮುಚ್ಚಿ. ಬಿಸ್ಮಿಲ್ಲಾ ಎಂದು ಹೇಳಿ ಬೆಂಕಿಯನ್ನು ನಂದಿಸಿ. ಬಿಸ್ಮಿಲ್ಲಾ ಎಂದು ಹೇಳಿ ನೀರಿನ ಪಾತ್ರೆಗೆ ಮುಚ್ಚಳ ಹಾಕಿ.  ಬಿಸ್ಮಿಲ್ಲಾ ಎಂದು ಹೇಳಿ ಆಹಾರದ ಪಾತ್ರೆಯನ್ನು ಮುಚ್ಚಿಡಿ. ಮುಚ್ಚಳವಿಲ್ಲದಿದ್ದರೆ ಅದಕ್ಕೆ ಏನಾದರೂ ಅಡ್ಡವಾಗಿ ಇಡಿ.” (ಸಿಹಾಹುಸ್ಸಿತ್ತ)

ಕುಡಿಯುವ ನೀರು, ಗ್ಲಾಸ್, ಬೆತ್ತ, ಬೆಂಕಿಪೊಟ್ಟಣ ಅಥವಾ ಟಾರ್ಚ್, ಬ್ರಶ್ ಮೊದಲಾದ ವಸ್ತುಗಳನ್ನು ಮಲಗುವ ಸ್ಥಳದಲ್ಲಿ ಇರಿಸಿಕೊಳ್ಳಬಹುದು. ಅತಿಥಿಯಾಗಿದ್ದರೆ ಅತಿಥೇಯನೊಂದಿಗೆ ಟಾಯ್ಲೆಟ್ ಎಲ್ಲಿದೆಯೆಂದು ಕೇಳಿ ತಿಳಿದುಕೊಳ್ಳಬೇಕು. ಪ್ರವಾದಿ(ಸ)ರು ಮಲಗುವಾಗ ತಮ್ಮ ಬಳಿಯಲ್ಲಿ ಇಂತಹ ಅತ್ಯಗತ್ಯ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದರು. ಎಣ್ಣೆಯ ಬಾಟಲಿ, ಬಾಚಣಿಗೆ,  ಕತ್ತರಿ, ಬ್ರಶ್, ಬೆತ್ತ ಮೊದಲಾದವು.

ನಿದ್ದೆಯಿಂದ ಎದ್ದಾಗ ವಸ್ತ್ರ, ಚಪ್ಪಲಿ ಮೊದಲಾದವನ್ನು ಹುಡುಕಾಡದಿರಲು ಸಮೀಪದಲ್ಲೇ ಇರಿಸಿಕೊಳ್ಳುವುದು ಒಳ್ಳೆಯದು. ಉಪದ್ರವಕಾರಿಗಳಾದ ಜಂತುಗಳು ಅದರೊಳಗೆ  ಸೇರಿಕೊಂಡಿಲ್ಲವೆಂದು ಖಾತ್ರಿಪಡಿಸಲು ಧರಿಸುವ ಮೊದಲು ಅದನ್ನು ಕೊಡವಬೇಕು. ಮಲಗುವ ಮೊದಲು ಹಾಸಿಗೆಯನ್ನು ಕೊಡವಬೇಕು. ನಡುವೆ ಎದ್ದು ಹೋಗಿ ಪುನಃ ಬಂದು  ಮಲಗುವಾಗಲೂ ಅದನ್ನು ಪುನರಾವರ್ತಿಸಬೇಕು. ಪ್ರವಾದಿ(ಸ) ಹೇಳಿದರು, “ಯಾರಾದರೂ ರಾತ್ರಿ ಹಾಸಿಗೆಯಿಂದೆದ್ದು ಹೋಗಿ ಪುನಃ ಮಲಗಲು ಬಂದರೆ ತನ್ನ ರುಮಾಲಿನಿಂದ ತನ್ನ  ಹಾಸಿಗೆಯನ್ನು ಮೂರು ಬಾರಿ ಕೊಡವಲಿ. ಏಕೆಂದರೆ ಹಾಸಿಗೆಯಲ್ಲಿ ಏನು ಬಂದು ಸೇರಿಕೊಂಡಿದೆಯೆಂದು ಆತನಿಗೆ ತಿಳಿದಿರುವುದಿಲ್ಲ.” (ತಿರ್ಮಿದಿ)

ಮಲಗುವ ಕೋಣೆಗೆ ಹೋದಾಗ ಹೇಳುವ ಪ್ರಾರ್ಥನೆಯಿದೆ. ಹ. ಅನಸ್(ರ)ರು ಅದನ್ನು ಉದ್ಧರಿಸುತ್ತಾರೆ.
ಅಲ್‍ಹಮ್ದುಲಿಲ್ಲಾಹಿಲ್ಲಝೀ ಅತ್‍ಅಮನಾ ವಸಖಾನಾ ವಕಫಾನಾ ವಆವಾನಾ ಫಕಮ್ ಮಿಮ್ಮನ್ ಲಾ ಕಾಫಿ ಲಹು ವಲಾ ಮುಅïವಿ (ನಮಗೆ ಆಹಾರ, ಪಾನೀಯ ನೀಡಿದ, ವ್ಯವಹಾರಗಳಲ್ಲಿ  ಸಹಾಯ ಮಾಡಿದ, ಜೀವಿಸಲು ಅಭಯ ನೀಡಿದ ಅಲ್ಲಾಹನಿಗೆ ಸಕಲ ಸ್ತುತಿ. ಯಾವುದೇ ಸಹಾಯಿಯೂ ಅಭಯ ಕೇಂದ್ರವೂ ಲಭಿಸದ ಎಷ್ಟು ಮನುಷ್ಯರಿದ್ದಾರೆ.)
(ಶಮಾಇಲ್ ತಿರ್ಮಿದಿ)

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …