Home / ಲೇಖನಗಳು / ಇಬ್ರಾಹೀಮ್‌ರಿಗೆ(ಅ) ಎದುರಾದ ಪರೀಕ್ಷೆಗಳು

ಇಬ್ರಾಹೀಮ್‌ರಿಗೆ(ಅ) ಎದುರಾದ ಪರೀಕ್ಷೆಗಳು

– ಅಕ್ಬರ್ ಅಲಿ, ಉಡುಪಿ
(ಜ.ಇ. ಹಿಂದ್, ರಾಜ್ಯ ಕಾರ್ಯದರ್ಶಿ)

ಸುಮಾರು 5 ಸಾವಿರ ವರ್ಷಗಳ ಹಿಂದೆ ಇರಾಕಿನ ಉರ್ ನಗರದಲ್ಲಿ ಪ್ರವಾದಿ ಇಬ್ರಾಹೀಮ್‌ರ(ಅ) ಜನನವಾಯಿತು. ಅಂದಾಜು 5 ಲಕ್ಷ ಜನ ಸಂಖ್ಯೆಯ ಈ ನಗರದಲ್ಲಿ ಆಡಂಬರದ ಬದುಕು, ಭೌತಿಕವಾದ, ಬಡ್ಡಿ, ಬಹುದೇವ ವಿಶ್ವಾಸ, ಸೂರ್ಯ, ಚಂದ್ರ, ನಕ್ಷತ್ರಗಳ ಆರಾಧನೆ, ಮೂರ್ತಿ ಪೂಜೆ ಉತ್ತುಂಗದಲ್ಲಿತ್ತು. ಸಮಾಜವು ಅಮಿಲೊ ಎಂಬ ಮೇಲ್ವರ್ಗವಾಗಿ ಮಶ್‌ಕಿಯೋ ಎಂಬ ಸಾಮಾನ್ಯ ವರ್ತಕ ಮತ್ತು ವ್ಯವಸಾಯ ವರ್ಗವಾಗಿ ಹಾಗೂ ಆರೋ ಎಂಬ ಕೆಳ ವರ್ಗವಾಗಿ ವಿಭಜಿಸಲ್ಪಟ್ಟಿತ್ತು. ಅಮಿಲೊ ಎಂಬ ಉನ್ನತ ವರ್ಗದಲ್ಲಿ ಪ್ರವಾದಿ ಇಬ್ರಾಹೀಮ್(ಅ) ಹುಟ್ಟಿದರು. ಅವರ ತಂದೆ ಅಝರ್ ಮೂರ್ತಿಗಳನ್ನು ತಯಾರಿಸುವ ಕಾರ್ಖಾನೆಯ ಮಾಲಕರಾಗಿದ್ದರು. ಅಲ್ಲದೇ ನಮ್ರೂದ್ ಎಂಬ ರಾಜನ ಪುರೋಹಿತರೂ ನ್ಯಾಯಾಧೀಶರೂ ಆಗಿದ್ದರು.

ರಾಜ ಪ್ರತ್ಯಕ್ಷ ದೇವನಾಗಿದ್ದ. ಅಲ್ಲದೆ ಅಲ್ಲಿ ಸರಿಸುಮಾರು 5000 ದೇವತೆಗಳ ಪೂಜೆ ನಡೆಯುತ್ತಿತ್ತು. ಊರಿಗೊಬ್ಬ ದೇವರು, ಮನೆಗೊಬ್ಬ ದೇವರು ಇದ್ದರು. ಮಹಾದೇವ `ನನ್ನರ್’ (ಚಂದ್ರ ದೇವ) ನಕಸಾ ಶಮಾಶ್ (ಸೂರ್ಯ ದೇವ), ನನ್ನಾರ್ ಪತ್ನಿಯ ಮಂದಿರವೂ ಇತ್ತು. ಇಬ್ರಾಹೀಮ್(ಅ) ಈ ಎಲ್ಲವುಗಳಿಂದ ಬೇಸತ್ತು ತನ್ನ ನೈಜ ಸೃಷ್ಟಿಕರ್ತನ ಹುಡುಕಾಟದಲ್ಲಿ ನಿರತರಾದರು ಎಂದು ಪವಿತ್ರ ಕುರ್‌ಆನ್ (03:191) ಹೇಳುತ್ತದೆ.

ಅವರು ದೇವನನ್ನು ಕಂಡುಕೊಂಡ ವಿಧಾನವನ್ನು ಕುರ್‌ಆನ್ ಹೀಗೆ ವಿವರಿಸುತ್ತದೆ:
“ಅನಂತರ ಚಂದ್ರನು ಪ್ರಕಾಶಿಸುತ್ತಿರುವುದು ಕಂಡಾಗ, “ಇದು ನನ್ನ ಪ್ರಭು” ಎಂದರು. ಆದರೆ ಅದೂ ಮುಳುಗಿದಾಗ, “ನನ್ನ ಪ್ರಭು ನನಗೆ ಮಾರ್ಗದರ್ಶನವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು. ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿ ಕಂಡು, “ಇದೇ ನನ್ನ ಪ್ರಭು! ಇದು ಎಲ್ಲಕ್ಕಿಂತಲೂ ದೊಡ್ಡದಾಗಿದೆ” ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು: “ಓ ನನ್ನ ಜನಾಂಗ ಬಾಂಧವರೇ, ನೀವು ದೇವನ ಸಹಭಾಗಿಯಾಗಿಸುವವುಗಳಿಂದೆಲ್ಲ ನಾನು ವಿರಕ್ತನು. ನಾನು ಏಕನಿಷ್ಠೆಯಿಂದ ನನ್ನ ಮುಖವನ್ನು ಭೂಮಿ ಆಕಾಶಗಳನ್ನು ಸೃಷ್ಟಿಸಿದವನ ಕಡೆಗೆ ತಿರುಗಿಸಿದೆನು. ನಾನು ಎಷ್ಟು ಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವ ರಲ್ಲಿ ಸೇರಿದವನಲ್ಲ.” (6: 77-79)

ನಾನು ಬಹುದೇವ ವಿಶ್ವಾಸಿಗಳೊಂದಿಗೆ ಸೇರಿಲ್ಲ ಎಂಬ ಅವರ ಘೋಷಣೆಯು ಸಂಘರ್ಷದ ಬಿರುಗಾಳಿಯನ್ನು ಎಬ್ಬಿಸಿತು. ಅವರು ತಂದೆಯೊಂದಿಗೆ ಕೇಳಿದರು,
ಪ್ರೀತಿಯ ಅಪ್ಪ, ನೋಡಲಾಗದ ಆಲಿಸಲಾಗದ, ತಮಗೆ ಅಪಾಯ ಒದಗಿದಾಗ ಪ್ರತಿರೋಧ ಮಾಡಲಾಗದ ಈ ಕೃತಕ ದೇವರುಗಳನ್ನು ನೀವೇಕೆ ಆರಾಧಿಸುತ್ತೀರಿ? ನೀವೂ ನಿಮ್ಮ ಜನಾಂಗವೂ ಫಥಭ್ರಷ್ಟತೆಯಲ್ಲಿರುವುದು ಕಾಣಿಸುತ್ತಿದೆ. ಅಪ್ಪಾ, ತಮಗೆ ಬಂದಿರದ ಜ್ಞಾನವೊಂದು ನನ್ನ ಬಳಿಗೆ ಬಂದಿದೆ. ನೀವು ನನ್ನನ್ನು ಅನುಸರಿಸಿರಿ.

ಇಬ್ರಾಹೀಮ್, ನೀನು ನಮ್ಮ ಆರಾಧ್ಯರುಗಳಿಂದ ವಿಮುಖನಾಗಿರುವೆಯಾ? ನಾನು ನಿನ್ನನ್ನು ಕಲ್ಲೆಸೆದು ಕೊಂದು ಹಾಕುವೆ. ನಡೆ ನಿನ್ನ ಮುಖ ತೋರಿಸಬೇಡ. ನೀನು ನನ್ನಿಂದ ಶಾಶ್ವತವಾಗಿ ತೊಲಗಿಬಿಡು ಎಂದು ತಂದೆ ಹೇಳುತ್ತಾರೆ.

ಒಂದು ಕಡೆ ತಾನೇ ದೇವನೆಂದು ನಮೂದ್ರ್ ಸಾರಿದ್ದರೆ ಇನ್ನೊಂದು ಕಡೆ ಇಬ್ರಾಹೀಮ್(ಅ)ರು ಏಕದೇವ ಸಿದ್ಧಾಂತದ ಬಗ್ಗೆ ಗಂಭೀರ ಚರ್ಚೆ ಪ್ರಾರಂಭಿಸುತ್ತಾರೆ.

ಯಾರ ಅಂಕಿತದಲ್ಲಿ ನನ್ನ ಮತ್ತು ನಿಮ್ಮ ಜೀವನ ಮರಣಗಳಿವೆಯೊ, ಯಾರು ಏಕೈಕನೋ ಆತನನ್ನೇ ನಾನು ಆರಾಧಿಸುತ್ತೇನೆ ಎಂಬ ಅಭಿಪ್ರಾಯ ಇಬ್ರಾಹೀಮ್‌ರದು(ಸ). ಆಗ ನಮ್ರೂದ್, ನಾನೂ ಸಹ ಜೀವನ ಮರಣ ನೀಡುವವ ಎಂದು ಹೇಳುತ್ತಾರೆ. ಅಲ್ಲದೇ ಇಬ್ಬರು ಕೈದಿಗಳನ್ನು ತಂದು ನಿರಪರಾಧಿಯನ್ನು ವಧಿಸಿ ಅಪರಾಧಿಯನ್ನು ಬಿಡುಗಡೆಗೊಳಿಸುತ್ತಾನೆ. ಆಗ ಇಬ್ರಾಹೀಮ್(ಅ) ಮರು ಸವಾಲು ಹಾಕುತ್ತಾರೆ- ನನ್ನ ಪ್ರಭು ಸೂರ್ಯನನ್ನು ಪೂರ್ವದಿಂದ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ. ನೀನು ಪಶ್ಚಿಮದಿಂದ ಉದಯಿಸಿ ಪೂರ್ವದಿಂದ ಅಸ್ತಮಿಸು.

ಇದು ನಮ್ರೂದನ ಅಹಂಕಾರಕ್ಕೆ ಎಸೆದ ಸವಾಲಾಗಿತ್ತು. ಸಭೆಯಲ್ಲಿ ಕೋಲಾಹಲ. ಅಹಂಕಾರಕ್ಕೆ ನೀಡಿದ ಬಲವಾದ ಹೊಡೆತ. ಇವನನ್ನು ಹೀಗೆ ಬಿಟ್ಟರಾಗದು, ವಧಿಸಬೇಕು, ಸುಡಬೇಕು, ಜೀವನ ಪರ್ಯಂತ ಬಂಧಿಖಾನೆಗೆ ಹಾಕಬೇಕು ಎಂಬಿತ್ಯಾದಿ ನಾನಾ ರೀತಿಯ ಚರ್ಚೆಗಳು.

ಒಬ್ಬ ದೇವ ಪ್ರೇಮಿಯನ್ನು ಸುಡಲು ಅಗ್ನಿಜ್ವಾಲೆ ನಿರ್ಮಾಣವಾಗುತ್ತದೆ. ಸಾವಿರಾರು ಮಂದಿ ವೀಕ್ಷಕರು. ಅವರಲ್ಲಿ ಇಬ್ರಾಹೀಮರ(ಅ) ತಂದೆ ಆಝರ್ ಕೂಡಾ ಇದ್ದರು. ಎತ್ತರದ ಕಣಿವೆಯಲ್ಲಿ ನಿಂತಿದ್ದ ಇಬ್ರಾಹೀಮ್(ಅ)ರನ್ನು ಬಲವಾಗಿ ನೂಕಿ ಬೆಂಕಿಯ ಕೆಂಡಕ್ಕೆ ಎಸೆಯಲಾಗುತ್ತದೆ. ಬೆಂಕಿಯಲ್ಲಿ ಬೆಂದು ಭಸ್ಮವಾದರೆಂದು ಜನರು ಸಂತೋಷ ಪಡುತ್ತಾರೆ. ಆದರೆ, ಅಲ್ಲಾಹನ ತಂತ್ರಗಾರಿಕೆಯ ಮುಂದೆ ಎಲ್ಲವೂ ವಿಫಲ.

ಅಲ್ಲಾಹನ ಆಜ್ಞೆಯಾಗುತ್ತದೆ, `ಓ ಅಗ್ನಿಯೇ ಇಬ್ರಾಹೀಮ್(ಅ)ರನ್ನು ಸುಡಬೇಡ, ನೀನು ತಣ್ಣಗಾಗು.’ ಇಬ್ರಾಹೀಮ್(ಅ) ಸುರಕ್ಷಿತವಾಗಿ ಆ ಜ್ವಾಲೆಯಿಂದ ಹೊರಬರುತ್ತಾರೆ.

ಮುಂದೆ ಪುತ್ರ ಇಸ್ಮಾಯಿಲ್(ಅ)ರ ಜನನವಾಗುತ್ತದೆ. ಮಗ ಯೌವನಕ್ಕೆ ಕಾಲಿಡುವಾಗ ಇನ್ನೊಂದು ಪರೀಕ್ಷೆ. ಮಗನನ್ನು ತಾಯಿಯ ಜತೆ ನಿರ್ಜನ ಪ್ರದೇಶಕ್ಕೆ ಬಿಟ್ಟು ಬರಬೇಕೆಂಬ ಅಲ್ಲಾಹನ ಆದೇಶ. ಅವರು ಹೆಂಡತಿ ಮಗನೊಂದಿಗೆ ಸ್ವಲ್ಪ ಖರ್ಜೂರ ಹಾಗೂ ನೀರಿನೊಂದಿಗೆ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊರಡುತ್ತಾರೆ. ಮಕ್ಕಾ ತಲುಪುತ್ತಾರೆ. ಇದಾಗಿ ಕೆಲವೇ ಸಮಯದ ನಂತರ ಅಲ್ಲಾಹನ ಮತ್ತೊಂದು ಆಜ್ಞೆ. ಇಸ್ಮಾಈಲ್(ಅ)ರನ್ನು ಬಲಿ ನೀಡಬೇಕು. ಅವರು ಅದಕ್ಕೂ ಮುಂದಾದಾಗ ಅಶರೀರ ವಾಣಿ, ನಿಲ್ಲು ಇಬ್ರಾಹೀಮ್, ನೀನು ನಿನ್ನ ಸ್ವಪ್ನವನ್ನು ಸಾಬೀತುಪಡಿಸಿ ತೋರಿಸಿದೆ. ಇದೋ ನಿನ್ನ ಮಗನ ಬಲಿದಾನದ ಬದಲಿಗೆ ಈ ಆಡನ್ನು ಬಲಿ ನೀಡು. ನೀನು ಇನ್ನು ಮುಂದೆ ಸರ್ವ ಜನರ ನಾಯಕ.

ಬಳಿಕ ಕಅಬಾ ಭವನದ ಮರು ನಿರ್ಮಾಣಕ್ಕೆ ಅಲ್ಲಾಹನ ಆಜ್ಞೆ. ಭವನ ಪೂರ್ಣಗೊಳ್ಳುತ್ತದೆ. ಬಳಿಕ ಜನರನ್ನು ಅಲ್ಲಾಹನ ಭವನದತ್ತ ಕರೆಯುತ್ತಾರೆ, ಅಂದಿನಿಂದ ಇಂದಿನ ತನಕ ಮತ್ತು ಮುಂದೆಯೂ ಇಡೀ ಜಗತ್ತು ಅದನ್ನು ಅನುಸರಿಸಲಿದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …