Home / ವಾರ್ತೆಗಳು / ನನ್ನ ಯಶಸ್ಸಿನಲ್ಲಿ ಇಸ್ಲಾಮಿನ ಪಾತ್ರ ನಿರ್ಣಾಯಕ: ಅಕೋನ್

ನನ್ನ ಯಶಸ್ಸಿನಲ್ಲಿ ಇಸ್ಲಾಮಿನ ಪಾತ್ರ ನಿರ್ಣಾಯಕ: ಅಕೋನ್

ಶಾರ್ಜಾ : ತಾನು ನಂಬಿರುವ ಇಸ್ಲಾಂ ಧರ್ಮವೇ ತನ್ನ ಯಶಸ್ಸಿನ ಮೂಲ ಎಂದು ಖ್ಯಾತ ಅಮೆರಿಕನ್-ಸೆನಗಲೀಸ್ ಗಾಯಕ, ರಾಪರ್ ಅಕೋನ್ (ಅಲಿಯೋನ್ ಥಿಯಮ್) ಹೇಳಿದ್ದಾರೆ.

ಸೋಮವಾರ ಶಾರ್ಜಾ ಎಂಟ್ರಪ್ರನೇರಿಯಲ್ ಫೆಸ್ಟಿವಲ್ ಅಂಗವಾಗಿ ಶಾರ್ಜಾ ಎಕ್ಸ್‍ಪೋ ಸೆಂಟರ್‍ ನಲ್ಲಿ 2,000ಕ್ಕೂ ಅಧಿಕ ಮಂದಿಯೆದುರು ಭಾಷಣ ಮಾಡಿದ ಅಕೋನ್, ಕಾರು ಕಳ್ಳನಿಂದ ಪಾಪ್ ಸ್ಟಾರ್ ಹಾಗೂ ಸಾಮಾಜಿಕ ಉದ್ಯಮಿಯಾದ ತಮ್ಮ ಜೀವನದ ಪಯಣವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ತನ್ನ ಹಾಡುಗಳ ಮಿಲಿಯಗಟ್ಟಲೆ ಆಲ್ಬಂಗಳು ಮಾರಾಟವಾಗಿ, ತಮಗೆ ಹಲವು ಗ್ರಾಮಿ ಪ್ರಶಸ್ತಿಗಳು ದೊರೆತರೂ ಸಂಗೀತ ಕ್ಷೇತ್ರದಾಚೆಗಿನ ಜೀವನವೇ ತಮಗೆ ಹೆಚ್ಚು ಸಮಾಧಾನ ನೀಡುತ್ತದೆ ಎಂದು ಈ ಗಾಯಕ ಹೇಳಿಕೊಂಡಿದ್ದಾರೆ.

ಆಫ್ರಿಕಾದ್ಯಂತ ಸೌರ ವಿದ್ಯುತ್ ಒದಗಿಸುವ ತನ್ನ ಅಕೋನ್ ಲೈಟಿಂಗ್ ಆಫ್ರಿಕಾ ಪ್ರಾಜೆಕ್ಟ್ ಇರಲಿ ಅಥವಾ ಭವಿಷ್ಯದ ಕ್ರಿಪ್ಟೋ ಕರೆನ್ಸಿ ಯೋಜನೆಯಾಗಿರಲಿ, ತನ್ನ ಹೆಚ್ಚಿನ ಔದ್ಯಮಿಕ ಕ್ರಮಗಳು ಇಸ್ಲಾಮಿಕ್ ಧರ್ಮದಿಂದ ಪ್ರಭಾವಿತವಾಗಿವೆ ಎಂದು 46 ವರ್ಷದ ಈ ಗಾಯಕ ಹೇಳಿಕೊಂಡಿದ್ದಾರೆ.

“ಕೆಲವೊಮ್ಮೆ ನಮಗೆ ಬೇಕಿಲ್ಲದೇ ಇದ್ದಾಗ ಕೆಲವೊಂದು ಸಂಗತಿಗಳು ನಡೆಯುತ್ತವೆ ಹಾಗೂ ದೇವರು ಇವುಗಳನ್ನು ನಡೆಸುತ್ತಾನೆ. ತಮ್ಮ ಗುರಿಯ ಆಧ್ಯಾತ್ಮಿಕ ಕೋನವನ್ನು ಅಥವಾ ತಮ್ಮ ಯಶಸಿನ ಆಧ್ಯಾತ್ಮಿಕ ಅಂಗವನ್ನು ಹೆಚ್ಚಾಗಿ ಉದ್ಯಮಿಗಳು ಅಲ್ಲಗಳೆಯುತ್ತಾರೆ” ಎಂದು ಅಕೋನ್ ಹೇಳಿದರು.

ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವಾಗ ವೃತ್ತಿ ಜೀವನದಲ್ಲಿ ಸಾಧಿಸಬೇಕಿದ್ದುದನ್ನು ಪರಾಮರ್ಶಿಸುವುದು ಆಧ್ಯಾತ್ಮಿಕತೆಯಿಂದ ಸಾಧ್ಯವಾಯಿತು ಎಂದು ಅಕೋನ್ ಹೇಳುತ್ತಾರೆ.

“ನನಗೆ ನಿಜವಾದ ಯಶಸ್ಸು ನನ್ನ ನಂಬಿಕೆ. ದೇವರು ನನ್ನತ್ತ ನಗು ಬೀರದೇ ಇದ್ದರೆ ನಾನು ಯಶಸ್ವಿಯಲ್ಲ. ನನ್ನ ಬ್ಯಾಂಕಿನಲ್ಲಿ ಬಿಲಿಯಗಟ್ಟಲೆ ಡಾಲರ್ ಇದ್ದರೂ ನನಗೆ ಪರಿವೆಯಿಲ್ಲ. ಅಷ್ಟೊಂದು ಹಣ ಬ್ಯಾಂಕಿನಲ್ಲಿಟ್ಟು ಏನು ಸಾಧಿಸಿದಂತಾಗುತ್ತದೆ” ಎಂದು ಅವರು ಪ್ರಶ್ನಿಸಿದರು.

ತನ್ನ ಈ ಅಭಿಪ್ರಾಯವೇ 5,000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವ ಅಕೋನ್ ಲೈಟಿಂಗ್ ಆಫ್ರಿಕಾ ಪ್ರಾಜೆಕ್ಟ್ ಗೆ ನಾಂದಿಯಾಯಿತು ಎಂದು ಅವರು ಹೇಳಿದರು.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …