Home / ಲೇಖನಗಳು / ಮುಹರ್ರಮ್ ಏನು ವಿಶೇಷ?

ಮುಹರ್ರಮ್ ಏನು ವಿಶೇಷ?

@ ಏ.ಕೆ. ಕುಕ್ಕಿಲ

ಮುಹರ್ರಮ್ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಲನೆಯನ್ನು ಆಧರಿಸಿ ರಚಿಸಲಾಗಿದ್ದರೆ ನಾವು ಸಾಮಾನ್ಯವಾಗಿ ಉಪಯೋಗಿಸುವ ಜನವರಿ-ಫೆಬ್ರವರಿ ಎಂಬ ಕ್ಯಾಲೆಂಡರ್ ಸೂರ್ಯನ ಚಲನೆಯನ್ನು ಆಧರಿಸಿ ರಚಿಸಿದ್ದಾಗಿದೆ.

ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿ ಕೊನೆಗೆ ಮದೀನಾಕ್ಕೆ ವಲಸೆ ಹೋಗುತ್ತಾರೆ. ಈ ವಲಸೆಯಿಂದ ಇಸ್ಲಾಮಿಕ್ ಕ್ಯಾಲೆಂಡರ್ ನ ದಿನಾಂಕ ಆರಂಭವಾಗುತ್ತದೆ. ಅದಕ್ಕೆ ಹಿಜರಿ ಶಕೆ ಎಂದು ಹೇಳಲಾಗುತ್ತೆ. ಈಗ ಹಿಜರಿ ಶಕೆ ಸಾವಿರದ ನಾನೂರ 44.

ಮುಸ್ಲಿಮರಲ್ಲಿ ಮುಹರಂ ತಿಂಗಳಿಗೆ ಬಹಳ ಮಹತ್ವವಿದೆ. ಅದು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಥಮ ತಿಂಗಳು ಎಂಬ ಕಾರಣಕ್ಕಾಗಿ ಮಾತ್ರ ಅಲ್ಲ, ಆ ತಿಂಗಳಲ್ಲಿ ಕೆಲವು ವಿಶೇಷ ಬೆಳವಣಿಗೆಗಳು ನಡೆದಿವೆ. ಇಸ್ಲಾಮಿಕ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಹಲವು ಘಟನೆಗಳಿಗೆ ಮುಹರಂ ತಿಂಗಳು ಸಾಕ್ಷಿಯಾಗಿದೆ. ವಿಶೇಷವಾಗಿ ಮುಹರಂ ತಿಂಗಳ ಹತ್ತಕ್ಕೆ ಬಹಳ ಮಹತ್ವವಿದೆ

ಇಸ್ಲಾಂ ಪ್ರವಾದಿ ಮುಹಮ್ಮದ್ ರಿಂದ ಆರಂಭಗೊಂಡ ಧರ್ಮ ಅಲ್ಲ. ಅವರು ಇಸ್ಲಾಮಿನ ಕೊನೆಯ ಪ್ರವಾದಿ. ಮೊದಲ ಪ್ರವಾದಿ ಆದಿಪಿತ ಆದಂ ಆಗಿದ್ದಾರೆ. ಅವರನ್ನು ಬೈಬಲ್ ಆಡಮ್ ಎಂದು ಕರೆಯುತ್ತೆ. ಮತ್ತು ಅವರ ಪತ್ನಿಯನ್ನು ಈವ್ ಎಂದು ಕರೆಯುತ್ತೆ. ಪವಿತ್ರ ಕುರ್‌ಆನ್ ನಲ್ಲಿ ಆದಮ್ ಮತ್ತು ಹವ್ವ ಎಂದು ಇವರನ್ನು ಕರೆಯಲಾಗಿದೆ

ಅದರ ಬಳಿಕ ಈ ಜಗತ್ತಿಗೆ ಒಳಿತು ಮತ್ತು ಕೆಡುಕನ್ನು ಹೇಳಲು ಮತ್ತು ಮೌಲ್ಯಾಧಾರಿತ ಬದುಕನ್ನು ಕಲಿಸಿಕೊಡಲು ಒಂದು ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳು ಬಂದಿದ್ದಾರೆ ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ದೇವನೊಬ್ಬನೇ ಎಂಬುದು ಅವರೆಲ್ಲರ ಪ್ರತಿಪಾದನೆಯ ಮೂಲ ಅಂಶ. ಈ ಜಗತ್ತಿನಲ್ಲಿ ಮನುಷ್ಯ ಪರೀಕ್ಷಾರ್ಥ ಸೃಷ್ಟಿಸಲ್ಪಟ್ಟಿದ್ದಾನೆ ಮತ್ತು ಸತ್ತ ನಂತರ ಇವರೆಲ್ಲರನ್ನೂ ಜೀವಂತ ಎಬ್ಬಿಸಲಾಗುತ್ತದೆ. ಅಲ್ಲಿ ದೇವನು ವಿಚಾರಣೆ ನಡೆಸುತ್ತಾನೆ. ಯಾರು ಈ ಜಗತ್ತಿನಲ್ಲಿ ಒಳಿತು ಮಾಡಿ ತೀರಿ ಹೋಗಿದ್ದಾರೋ ಅವರಿಗೆ ಶಾಶ್ವತ ಸ್ವರ್ಗ ಲಭ್ಯವಾಗುತ್ತದೆ. ಯಾರು ಕೆಡುಕು ಮಾಡಿರುತ್ತಾರೋ ಅವರಿಗೆ ನರಕ ಪ್ರಾಪ್ತಿಯಾಗುತ್ತೆ ಎಂದು ಎಲ್ಲ ಪ್ರವಾದಿಗಳು ಜನರಿಗೆ ಬೋಧಿಸಿದ್ದಾರೆ ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ.

ಪ್ರವಾದಿಗಳ ಸರಣಿಯಲ್ಲಿ ನೂಹ್ ಅಥವಾ ನೋಹಾ, ಇಬ್ರಾಹೀಮ್ ಅಥವಾ ಅಬ್ರಹಾಂ, ಅಯೂಬ್, ಯೂಸುಫ್ ಮುಂತಾದ ಅನೇಕ ಪ್ರವಾದಿಗಳು ಪವಿತ್ರ ಕುರ್‌ಆನ್ ನಲ್ಲಿಯೂ ಉಲ್ಲೇಖಕ್ಕೆ ಒಳಗಾಗಿದ್ದಾರೆ. ಬೈಬಲ್ ಮತ್ತು ಯಹೂದಿಯರ ತೋರಾದಲ್ಲೂ ಉಲ್ಲೇಖಕ್ಕೆ ಒಳಗಾಗಿದ್ದಾರೆ.

ಪ್ರವಾದಿ ಮುಹಮ್ಮದರು ಮದೀನಾದಲ್ಲಿ ಇದ್ದಾಗ ಯಹೂದಿಯರು ಮುಹರಂ ಹತ್ತರಂದು ಉಪವಾಸ ಆಚರಿಸುವುದನ್ನು ಗಮನಿಸಿದರು. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಈ ದಿನ ನಮಗೆ ಬಹಳ ಪವಿತ್ರ ದಿನ ಎಂದರು ಯಹೂದಿಯರು. ಯಾಕೆಂದರೆ ಸರ್ವಾಧಿಕಾರಿ ಮತ್ತು ಪೀಡಕನಾಗಿದ್ದ ಫಿರ್ ಔನ್ ನ ದಬ್ಬಾಳಿಕೆಯಿಂದ ಇಸ್ರಾಈಲ್ ಸಮುದಾಯ ಅಥವಾ ಯಹೂದಿ ಸಮುದಾಯವನ್ನು ಪ್ರವಾದಿ ಮೂಸಾರು ವಿಮೋಚನೆಗೊಳಿಸಿದ ದಿನ. ಆದ್ದರಿಂದ ನಾವು ಈ ದಿನದಲ್ಲಿ ಉಪವಾಸ ಆಚರಿಸುತ್ತೇವೆ ಎಂದು ಪ್ರವಾದಿ ಮುಹಮ್ಮದ್ ರಿಗೆ ಉತ್ತರಿಸಿದರು. ಫಿರ್ ಔ ನ್ ಆ ಕಾಲದ ಅತಿದೊಡ್ಡ ಪೀಡಕನಾಗಿದ್ದ. ಕಿಬ್ತಿ ಎಂಬ ತನ್ನ ಜನಾಂಗ ಮತ್ತು ಇಸ್ರಾಈಲ್ ಜನಾಂಗದ ನಡುವೆ ತಾರತಮ್ಯ ನೀತಿಯನ್ನು ಕೈಗೊಂಡಿದ್ದ. ಇಸ್ರಾಯಿಲ್ ಸಮುದಾಯದ ಗಂಡು ಮಕ್ಕಳನ್ನೆಲ್ಲ ಹತ್ಯೆ ಮಾಡಲು ಆದೇಶಿಸಿದ್ದ. ಅದಕ್ಕೆ ಕಾರಣ ಅವರು ಮುಂದೊಂದು ದಿನ ತನ್ನ ಚಕ್ರಾಧಿಪತ್ಯಕ್ಕೆ ಅಡ್ಡಿಯಾಗುತ್ತಾರೆ ಎಂಬ ನಂಬಿಕೆ. ಹಾಗೆ ಪ್ರವಾದಿ ಮೂಸ ಇಸ್ರಾಯಿಲ್ ಸಮುದಾಯವನ್ನು ಫಿರ್ ಔ ನ್ ನ ದಬ್ಬಾಳಿಕೆಯಿಂದ ವಿಮೋಚಿಸಿ ಕೊಂಡೊಯ್ಯುತ್ತಾರೆ. ಹಾಗೆ ನೈಲ್ ನದಿಯವರೆಗೆ ಇವರು ತನ್ನ ಸಮುದಾಯವನ್ನು ಕರೆದುಕೊಂಡು ಬರುತ್ತಾರೆ. ಎದುರಲ್ಲಿ ನದಿ. ಮೂಸಾ ಇಸ್ರಾಈಲ್ ಜನಾಂಗದೊಂದಿಗೆ ಹೋಗುತ್ತಿರುವ ಮಾಹಿತಿ ಸಿಕ್ಕ ಫಿರೋನ್ ತನ್ನ ಸೇನೆಯೊಂದಿಗೆ ಬೆನ್ನಟ್ಟುತ್ತಾನೆ. ಆಗ ಮೂಸ ತನ್ನ ಎದುರಿದ್ದ ನದಿಯನ್ನು ದಾಟಲೇಬೇಕಾದ ಸಂದರ್ಭ ಎದುರಾಗುತ್ತೆ. ಆಗ ಅವರು ದೇವನ ಆಜ್ಞೆಯಂತೆ ತನ್ನ ಕೈಯಲ್ಲಿದ್ದ ಬೆತ್ತದಿಂದ ನೈಲ್ ನದಿಗೆ ಹೊಡೆಯುತ್ತಾರೆ. ಮತ್ತು ಆಗ ಅದು ದಾರಿಯಾಗಿ ಬದಲಾಗುತ್ತೆ. ತಾನು ಮತ್ತು ತನ್ನ ಜೊತೆಗಿದ್ದ ಸಮುದಾಯದೊಂದಿಗೆ ಅವರು ನದಿಯಲ್ಲಿ ದಾಟಿ ಹೋಗುತ್ತಾರೆ. ಫಿರೋನ್ ಮತ್ತು ಆತನ ಸೇನೆ ಅವರನ್ನು ಬೆನ್ನಟ್ಟುತ್ತಾ ನೈಲ್ ನದಿಯ ಮಧ್ಯಕ್ಕೆ ತಲುಪಿದಾಗ ದಾರಿ ಮುಚ್ಚಿ ಇಬ್ಬಗವಾಗಿದ್ದ ನದಿ ಜೋಡಿಕೊಳ್ಳುತ್ತೇ. ಹೀಗೆ ಆತ ಮತ್ತು ಸೇನೆ ನೀರಲ್ಲಿ ಮುಳುಗಿ ಸಾವಿಗೀಡಾಗುತ್ತಾರೆ. ಈ ಘಟನೆ ಮುಹರಮ್ ಹತ್ತರ ದಿನದಂದು ನಡೆದಿದೆ. ಈ ವಿಮೋಚನೆಯ ಕಾರಣಕ್ಕಾಗಿ ಯಹೂದಿಯರು ಉಪವಾಸ ಆಚರಿಸುವುದಾಗಿ ಪ್ರವಾದಿ ಮುಹಮ್ಮದರ ಲ್ಲಿ ಹೇಳುತ್ತಾರೆ.

ವಿಶೇಷವಾಗಿ ಮುಹರಂ ಹತ್ತಕ್ಕೆ ಇನ್ನಷ್ಟು ಮಹತ್ವವಿದೆ. ಪ್ರವಾದಿ ಇಬ್ರಾಹೀಮ್ ಅವರನ್ನು ನಂಬ್ರೂದ್ ಎಂಬ ರಾಜ ಬೆಂಕಿಗೆ ಹಾಕಿದ್ದು ಮತ್ತು ಅವರು ಅದರಿಂದ ಪಾರಾದದ್ದು ಮುಹರಂ 10ರಂದು ಎಂದು ಇತಿಹಾಸ ಹೇಳುತ್ತದೆ. ನೂಹ್ ಎಂಬ ಪ್ರವಾದಿ ಜಲಪ್ರಳಯದಿಂದ ತನ್ನ ಸಮುದಾಯವನ್ನು ವಿಮೋಚನೆಗೊಳಿಸಿದ ದಿನ ಕೂಡ ಮುಹರಂ 10 ಎಂದು ಚರಿತ್ರೆ ಹೇಳುತ್ತದೆ. ಹಾಗೆಯೇ ಪ್ರವಾದಿ ಅಯೂಬ್ ರು ದೇವನ ಪರೀಕ್ಷೆಯಿಂದ ಪಾರಾದದ್ದು ಕೂಡ ಮುಹರಂ 10 ರಂದು ಎಂದು ಹೇಳಲಾಗುತ್ತದೆ. ಪ್ರವಾದಿ ಯೂಸುಫ್ ರು ಜೈಲಿನಿಂದ ವಿಮೋಚನೆಗೊಂಡ ದಿನ ಕೂಡ ಮುಹರಂ ಹತ್ತು ಎಂದು ಹೇಳಲಾಗುತ್ತೆ.

ಈ ಹಿನ್ನೆಲೆಯಲ್ಲಿ ಯಹೂದಿಯರು ಮತ್ತು ಮುಸ್ಲಿಮರು ಮುಹರಂ ತಿಂಗಳಿಗೆ ಬಹಳ ಮಹತ್ವ ಕೊಡುತ್ತಾರೆ. ಪ್ರವಾದಿ ಮುಹಮ್ಮದರು ಈ ಎಲ್ಲ ಮಹತ್ವಗಳ ಹಿನ್ನೆಲೆಯಲ್ಲಿ ಮುಹರಮ್ 9 ಮತ್ತು 10 ರಂದು ತಾನು ಉಪವಾಸ ಆಚರಿಸುವುದಾಗಿ ಘೋಷಿಸಿದರು.. ಯಹೂದಿಯರಿಗಿಂತಲೂ ಪ್ರವಾದಿ ಮೂಸ ಅತ್ಯಂತ ಹೆಚ್ಚು ಹತ್ತಿರವಿರುವುದು ನನಗೆ ಎಂದು ಅವರು ಅದಕ್ಕೆ ಸಮರ್ಥನೆಯನ್ನು ಕೂಡ ನೀಡಿದ್ದರು.

ಪ್ರವಾದಿಯವರ ಮೊಮ್ಮಗ ಹಜರತ್ ಹುಸೇನ್ ಅವರು ಕರ್ಬಲ ಎಂಬ ಪ್ರದೇಶದಲ್ಲಿ ಸರ್ವಾಧಿಕಾರಿ ಯಝೀದನ ಸೇನೆಯ ಜೊತೆ ತನ್ನ ಪುಟ್ಟ ಕುಟುಂಬವನ್ನು ಇಟ್ಟುಕೊಂಡು ಹೋರಾಡಿ ಮರಣವನ್ನಪ್ಪಿದ ದಿನ ಕೂಡ ಮುಹರಂ ಹತ್ತು ಆಗಿರೋದ್ರಿಂದ ಇದಕ್ಕೆ ಇನ್ನಷ್ಟು ಮಹತ್ವ ಲಭ್ಯವಾಗಿದೆ.

ಜಾಗತಿಕ ಮುಸ್ಲಿಮರು ಮುಹರಂ 9 ಮತ್ತು 10 ರಂದು ಉಪವಾಸ ಆಚರಿಸುವ ಮೂಲಕ ಈ ದಿನದ ಮಹತ್ವಕ್ಕೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …