Home / ಲೇಖನಗಳು / ಮಹಿಳೆಗೆ ಉಪವಾಸದಿಂದ ಎಲ್ಲಿಯವರೆಗೆ ರಿಯಾಯಿತಿ?

ಮಹಿಳೆಗೆ ಉಪವಾಸದಿಂದ ಎಲ್ಲಿಯವರೆಗೆ ರಿಯಾಯಿತಿ?

@ ಇಲ್ಯಾಸ್ ಮೌಲವಿ

ರೋಗಿಗಳಿಗೆ ಉಪವಾಸ ಆಚರಿಸದಿರುವ ಅನುಮತಿಯಿದೆಯಲ್ಲವೇ? ಇದು ಯಾವ ರೀತಿಯ ರೋಗಗಳಿಗೆ ಅನ್ವಯವಾಗುತ್ತದೆ?
ಅತ್ಯಂತ ಮಾರಕ ರೋಗವಿರುವವರಿಗೆ ಈ ರಿಯಾಯಿತಿ ಇದೆ. ಉಪವಾಸ ಆಚರಿಸಿದರೆ ಸಮಸ್ಯೆಯುಂಟಾಗಬಹುದಾದ ರೋಗಗಳನ್ನು ಇಲ್ಲಿ ಉದ್ದೇಶಿಸಲಾಗಿದೆ.
1. ಉಪವಾಸ ಆಚರಿಸಿದರೆ ರೋಗ ಉಲ್ಬಣವಾಗುವುದು.
2. ರೋಗ ಶಮನ ನಿಧಾನವಾಗುವುದು.
3. ಇವೆರಡು ಆಗದಿದ್ದರೂ ಉಪವಾಸದಿಂದ ದೇಹಕ್ಕೆ ಹೆಚ್ಚು ಕಷ್ಟವಾಗುವುದು.
4. ಉಪವಾಸದಿಂದ ರೋಗ ಉಂಟಾಗುವುದು. (ಉದಾ: ಆರೋಗ್ಯಕ್ಕೆ ಸಂಬಂಧಿಸಿದ ಕಾರಣದಿಂದ ಹೊಟ್ಟೆಯು ಖಾಲಿಯಾಗಿರಬಾರದು ಎಂಬ ವೈದ್ಯರ ಆದೇಶ.)
ಇಮಾಮ್ ನವವಿ ಹೇಳುತ್ತಾರೆ: “ಅಷ್ಟೊಂದು ಕಷ್ಟಕರವಲ್ಲದ ರೋಗದ ಕಾರಣದಿಂದ ಉಪವಾಸ ಉಪೇಕ್ಷಿಸಬಾರದು ಎಂಬ ವಿಷಯದಲ್ಲಿ ನಮ್ಮ ನಡುವೆ ಚರ್ಚೆಯಿಲ್ಲ.”
(ಶರಹುಲ್ ಮುಹದ್ದಬ್ 6: 261)

ರಮಝಾನ್‍ನಲ್ಲಿ ಉಪವಾಸ ಆಚರಿಸಲೋ ಅಥವಾ ಬಿಟ್ಟು ಹೋದ ಉಪವಾಸವನ್ನು ಹಿಡಿದು ಮುಗಿಸಲೋ ಆಗದವರು ಫಿದಿಯ ನೀಡಬೇಕೆಂದು ಹೇಳಲಾಗಿದೆ. ಆ ಫಿದಿಯದ ಉದ್ದೇಶವೇನು? ಎಷ್ಟು ನೀಡಬೇಕು?
ರಮಝಾನ್‍ನಲ್ಲಿ ಉಪವಾಸ ಆಚರಿಸಲು ಮತ್ತು ಬಿಟ್ಟ ಉಪವಾಸವನ್ನು ಹಿಡಿದು ಮುಗಿಸಲು ಸಾಧ್ಯವಾಗದವರು ಪ್ರತಿ ಉಪವಾಸಕ್ಕೆ ಬದಲಾಗಿ ಫಿದಿಯಾ ನೀಡಬೇಕೆಂದು ಕುರ್‍ಆನ್ ಹಾಗೂ ಸುನ್ನತ್ ಸ್ಪಷ್ಟವಾಗಿ ಕಲಿಸಿಕೊಟ್ಟಿದೆ. ಓರ್ವ ದರಿದ್ರರಿಗೆ ಆಹಾರ ನೀಡಬೇಕು ಎಂದು ಹೇಳಿದ್ದಲ್ಲದೆ ಅದರ ಅಳತೆಯನ್ನೋ ಸಂಖ್ಯೆಯನ್ನೋ ಸ್ಪಷ್ಟವಾಗಿ ವಿವರಿಸಿಲ್ಲ. ಆದ್ದರಿಂದಲೇ ಈ ವಿಷಯದಲ್ಲಿ ಸಹಾಬಿಗಳ ಕಾಲದಿಂದಲೇ ಭಿನ್ನ ನಿಲುವು ಹೊಂದಿರುವವರನ್ನು ಕಾಣಬಹುದು.
ಆದ್ದರಿಂದ ಈ ವಿಷಯದಲ್ಲಿ ಹಲವು ಅಭಿಪ್ರಾಯಗಳನ್ನು ಕಾಣಬಹುದು. ಒಂದು ಸ್ವಾಅï (2,200 ಗ್ರಾಂ), ಅರ್ಧ ಸ್ವಾಅï (1,100 ಗ್ರಾಂ) ಒಂದು ಮುದ್ದ್ (ಎರಡು ಕೈಗಳನ್ನು ಸೇರಿಸಿ ಹಿಡಿಯುವಷ್ಟು ಅಳತೆ ಅಥವಾ 543 ಗ್ರಾಂ) ಹೀಗೆ.

ಆದರೆ ಇವೆಲ್ಲವೂ ವಿದ್ವಾಂಸರ ಅಭಿಪ್ರಾಯಗಳೇ ಹೊರತು ಕುರ್‍ಆನ್ ಅಥವಾ ಸುನ್ನತ್‍ನಲ್ಲಿ ಸ್ಪಷ್ಟಪಡಿಸಿದ್ದಲ್ಲ. ಆದ್ದರಿಂದಲೇ ಈ ಭಿನ್ನಾಭಿಪ್ರಾಯ ಏನಿದ್ದರೂ ಓರ್ವ ವ್ಯಕ್ತಿಗೆ ಹೊಟ್ಟೆ ತುಂಬುವಷ್ಟು ಆಹಾರ ನೀಡಬೇಕು. ಅದು ಆಹಾರವೂ ಆಗಬಹುದು  ಅಥವಾ ಅದರ ಊಟದ ಹಣ ನೀಡಿದರೂ ಸಾಕು. ಕಾಲ, ದೇಶಗಳಿಗೆ ಅನುಗುಣವಾಗಿ ಅದರ ಅಳತೆಯಲ್ಲಿ ವ್ಯತ್ಯಾಸವಿರಬಹುದು. ನಮ್ಮಲ್ಲಿ ನೂರು ರೂಪಾಯಿ ಕೊಟ್ಟರೆ ಎರಡೂವರೆ ಕೆಜಿ ಅಕ್ಕಿಯನ್ನು ಖರೀದಿಸಲು ಸಾಕಾಗುತ್ತದೆ. ಹೊಟೇಲ್‍ಗೆ  ಹೋಗಿ ಆಹಾರ ಸೇವಿಸಲೂ ಅಲ್ಲಿಂದಲ್ಲಿಗೆ ಅದು ಸಾಕಾದೀತು. ಹಾಗೆ ಆಗುವಾಗ ಒಂದು ತಿಂಗಳ ರಮಝಾನ್‍ಗೆ ಮೂರು ಸಾವಿರ ರೂಪಾಯಿ ನೀಡಬಹುದು. ಉತ್ತರ ಭಾರತದಲ್ಲಿ ಹಸಿವಿನಿಂದಿರುವವರು ಧಾರಾಳವಿದ್ದಾರೆ. ಒಂದು ಹೊತ್ತಿನ ಆಹಾರಕ್ಕಾಗಿ ಆಶಿಸುವವರು. ಅವರಿಗೆ ತಲುಪಿಸುವಂತಹ ಸೌಲಭ್ಯ ಇಂದು ನಮ್ಮಲ್ಲಿ ಇರುವುದರಿಂದ ಹಾಗೆ ಮಾಡುವುದು ಒಳ್ಳೆಯದು. ಆದರೆ ನಮ್ಮ ಪ್ರದೇಶದಲ್ಲೇ ಅಂತಹವರು ಇದ್ದರೆ ಅವರಿಗೇ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಫಿದಿಯ ಎಂದು ಹೇಳಿರುವಾಗ, ವಿಶೇಷವಾಗಿ ಉಪವಾಸ ಪಾರಣೆ ಹಾಗೂ ಸಹ್ರಿಗೆ ಬೇಕಾದ ಆಹಾರವಾಗಿರುವುದು ಉತ್ತಮ. ಒಂದು ದಿನ ಬಡವನಾದ ಓರ್ವನಿಗೆ ಸಹ್ರಿಗೆ ಹಾಗೂ ಇಫ್ತಾರ್‍ಗೆ ಆಗುವ ರೀತಿಯಲ್ಲಿ ಆಹಾರವನ್ನೋ ಅಥವಾ ಅದನ್ನು ಖರೀದಿಸುವ  ಹಣವೋ ಕೊಟ್ಟರೆ ಉತ್ತಮ. ಉಪವಾಸ ಪಾರಣೆ ಹಾಗೂ ಸಹ್ರಿಗೆ ಆಹಾರ ನೀಡುವುದು ಎಂಬ ಅಭಿಪ್ರಾಯದಿಂದ ತೊಡಗಿ ಈ ಬಗ್ಗೆ ಬೇರೆ ಹಲವು ಅಭಿಪ್ರಾಯಗಳೂ ಇವೆ. ಬಡ ವ್ಯಕ್ತಿಗೆ ಉಪವಾಸದ ದಿನಕ್ಕೆ ಬೇಕಾದ ಆಹಾರವನ್ನು ಒದಗಿಸಿ ಕೊಡುವುದೇ ಉತ್ತಮವೆಂಬುದು ಪ್ರಬಲ ಅಭಿಪ್ರಾಯ.

ಗರ್ಭಿಣಿಯಾದ ಕಾರಣ ದೈಹಿಕ ತೊಂದರೆಗಳಿಂದ ಉಪವಾಸ ಆಚರಿಸಲು ಸಾಧ್ಯವಾಗಲಿಲ್ಲ. ರಮಝಾನ್‍ನ ಬಳಿಕ ಮಗುವಿಗೆ ಹಾಲುಣಿಸುವ ಕಾರಣ ಬಿಟ್ಟು ಹೋದದ್ದನ್ನು ಹಿಡಿಯಲೂ ಸಾಧ್ಯವಾಗಲಿಲ್ಲ. ಕೆಲವರು ಗರ್ಭಿಣಿಯರು ಉಪವಾಸ ಬಿಟ್ಟರೆ ಕಝಾ ಮಾಡಬೇಕೆಂದಿಲ್ಲವೆಂದು ಹೇಳುತ್ತಾರೆ. ಇದರ ಕುರಿತು ಇಸ್ಲಾಮ್‍ನ ವಿಧಿಯೇನು?
ಗರ್ಭಿಣಿ ಹಾಗೂ ಸ್ತನಪಾನ ಮಾಡಿಸುವವರು ಉಪವಾಸ ಆಚರಿಸದಿರುವ ಕುರಿತು ವಿದ್ವಾಂಸರು ವಿಭಿನ್ನ ನಿಲುವುಗಳನ್ನು ತಾಳಿದ್ದಾರೆ. ಅಂತಹವರ ಕುರಿತು ಅಲ್ಲಾಹ್ ಹಾಗೂ ಪ್ರವಾದಿಯವರು ಸ್ಪಷ್ಟಪಡಿಸಿಲ್ಲದ ಕಾರಣ ಈ ಭಿನ್ನತೆ.

ಅವರನ್ನು ಎರಡು ರೀತಿಯಲ್ಲಿ ಬೇರ್ಪಡಿಸಬಹುದು.

ಒಂದು: ನ್ಯಾಯಯುತ ಯಾವುದೇ ತೊಂದರೆ ಇಲ್ಲದಿದ್ದರೂ ಉಪವಾಸ ತೊರೆದವರು. ಉದಾಹರಣೆಗೆ ಗರ್ಭಿಣಿಯೋ ಹಾಲುಣಿಸುವವಳೋ ಆಗಿದ್ದರೂ ಉಪವಾಸ ಆಚರಣೆಯಿಂದ ದೈಹಿಕವಾದ ಯಾವುದೇ ತೊಂದರೆಯಿಲ್ಲದವರು. ಹಗಲು ಆಹಾರ ಸೇವಿಸಿದುದರಿಂದ ತನಗೆ ಅಥವಾ ಹಾಲು ಕಡಿಮೆಯಾಗಿ ಮಗು ಹಸಿವೆಗೆ ಬೀಳುವ ಸಾಧ್ಯತೆ ಇಲ್ಲದವರು. ಹೀಗಿರುವಾಗ ಉಪವಾಸ ಆಚರಿಸದಿರುವುದು ಅಪರಾಧವಾಗಿದೆ. ಅದು ಕಝಾ ಹಿಡಿಯಬೇಕಾದುದೂ, ಫಿದಿಯ ನೀಡಬೇಕಾದುದೂ, ತೌಬ ಮಾಡಬೇಕಾದುದೂ ಆಗಿದೆ.

ಎರಡು: ನ್ಯಾಯಯುತ ಕಾರಣದಿಂದ ಉಪವಾಸ ತ್ಯಜಿಸಬೇಕಾಗಿ ಬಂದವರು. ಇದು ಎರಡು ರೀತಿಯಲ್ಲಾಗಿರಬಹುದು.
1. ಸ್ವತಃ ತೊಂದರೆಯನುಭವಿಸುವುದು. ಉದಾಹರಣೆಗೆ ಗರ್ಭಿಣಿ ಅಥವಾ ಹಾಲುಣಿಸುವುದರಿಂದ ದೈಹಿಕ ಸಂಕಷ್ಟಗಳುಂಟಾದ ಕಾರಣಕ್ಕೆ ಉಪವಾಸ ಬಿಡುವವರು. ಇವರನ್ನು ರೋಗಿಗಳ ಗಣಕ್ಕೆ ಸೇರಿಸಿ ಆ ರಿಯಾಯಿತಿಯನ್ನು ನೀಡಬಹುದೆಂದು ವಿದ್ವಾಂಸರು ಹೇಳಿದ್ದಾರೆ. ಅಂದರೆ ತಾತ್ಕಾಲಿಕವಾಗಿ ಉಪವಾಸ ಆಚರಿಸದೆ ನಂತರ ಅದನ್ನು ಹಿಡಿಯಬೇಕು ಎಂದರ್ಥ. ಇಂತಹ ಸ್ತ್ರೀಯರು ಉಪವಾಸ ಹಿಡಿಯಬಾರದೆಂಬ ವಿಷಯದಲ್ಲಿ ತರ್ಕವಿಲ್ಲ. ರಮಝಾನ್‍ನಲ್ಲಿ ರೋಗದ ಕಾರಣ ಉಪವಾಸ ತೊರೆದವರು ತಮ್ಮ ಸೌಕರ್ಯದಲ್ಲಿ ಇನ್ನೊಂದು ರಮಜಾನ್‍ನ ಮೊದಲು ಆಚರಿಸಬೇಕು. ಅದೊಂದು ಅಪರಾಧವಲ್ಲವಾದುದರಿಂದ ತೌಬ ಮಾಡಬೇಕಾದ ಅಗತ್ಯವಿಲ್ಲ. ಆದರೆ ಉದಾಸೀನದಿಂದಾಗಿ ರಮಝಾನ್‍ಗಿಂತ ಮೊದಲು ಆಚರಿಸದಿದ್ದರೆ  ಕಝಾದೊಂದಿಗೆ ಪ್ರಾಯಶ್ಚಿತ್ತವನ್ನು ನೀಡಬೇಕು.

2. ಉಪವಾಸ ಆಚರಿಸಲು ಆರೋಗ್ಯ ಸಮಸ್ಯೆ, ಶಾರೀರಿಕ ಸಮಸ್ಯೆ ಇಲ್ಲ. ಹಾಗಿದ್ದರೂ ಗರ್ಭಿಣಿ ತನ್ನ ಮಗುವಿನ ವಿಷಯದಲ್ಲಿ ಗಮನಹರಿಸಬೇಕೆಂದೂ, ದೀರ್ಘ ಹೊತ್ತು ಆಹಾರ ಪಾನೀಯ ಬಿಟ್ಟರೆ ಮಗುವಿಗೆ ಏನಾದರೂ ತೊಂದರೆಯಾದೀತೆಂದೂ ವೈದ್ಯರು ಹೇಳಿರುವುದರಿಂದ ಉಪವಾಸ ಆಚರಿಸದವರು. ಮಗುವಿಗೆ ಹಾಲು ಕೊಡುವ ಪ್ರಾಯದಲ್ಲಿ ಅದನ್ನು ನಿಲ್ಲಿಸದೆ ಕೊಡಬೇಕೆಂದೂ ದೀರ್ಘ ಹೊತ್ತು ಕೊಡದಿದ್ದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಂದೂ ವೈದ್ಯರು ಹೇಳಿರುವುದರಿಂದ ಹಿಡಿಯದವರು.
ಇಂತಹ ಸಂದರ್ಭಗಳಲ್ಲಿ ಗರ್ಭಿಣಿಯರು, ಸ್ತನಪಾನ ಮಾಡಿಸುವವರು ಉಪವಾಸ ತೊರೆಯವುದಕ್ಕೆ ವಿರೋಧವಿಲ್ಲ.

ಇಂತಹ ಸ್ತ್ರೀಯರು ತಮ್ಮ ಮಕ್ಕಳ ಜೀವ ಹಾಗೂ ಆರೋಗ್ಯವು ಅಪಾಯಕ್ಕೀಡಾಗದಿರಲು ಉಪವಾಸ ಆಚರಿಸದವರಾಗಿದ್ದಾರೆ. ಮುಳುಗುವನನ್ನು ರಕ್ಷಿಸಲು ನೀರಿಗೆ ಹಾರಿದಾಗ ಉಪವಾಸ ಮುರಿದವನ ಅಥವಾ ಇನ್ನೋರ್ವನನ್ನು ಅಪಾಯದಿಂದ  ಪಾರುಗೊಳಿಸಲು ಉಪವಾಸ ತೊರೆಯಬೇಕಾಗಿ ಬಂದವನ ಗಣಕ್ಕೆ ಇವರು ಸೇರುತ್ತಾರೆಂದೂ, ಇಂಥವರು ನಷ್ಟವಾದ ಉಪವಾಸವನ್ನು ಆಚರಿಸುವುದರೊಂದಿಗೆ ಪ್ರತಿ ಉಪವಾಸಕ್ಕೂ ಫಿದಿಯ(ಓರ್ವ ದರಿದ್ರನಿಗೆ ಆಹಾರ) ವನ್ನೂ ನೀಡಬೇಕೆಂಬುದು ಒಂದು ಅಭಿಪ್ರಾಯ. ಬಹಳ ಸಂದಿಗ್ಧತೆಯಿಂದ ಉಪವಾಸ ಆಚರಿಸಲು ಸಾಧ್ಯ ಎಂಬ ವಿಭಾಗಕ್ಕೆ ಸೇರಿದವರು ದರಿದ್ರರಿಗೆ ಆಹಾರ ನೀಡಬೇಕು ಎಂಬ ಅಲ್‍ಬಕರದ 184ನೇ ಸೂಕ್ತವೇ ಇವರಿಗೆ ಆಧಾರ. ಈ ಸೂಕ್ತದ ವಿವರಣೆಯಲ್ಲಿ ಗರ್ಭಿಣಿಯು  ಮತ್ತು ಎದೆ ಹಾಲುಣಿಸುವವರು ಆತಂಕ ಪಡುತ್ತಾರೆಂದಾದರೆ ಉಪವಾಸ ಹಿಡಿಯಬೇಕಿಲ್ಲ. ಎಂಬ ಇಬ್ನು ಅಬ್ಬಾಸ್‍ರ ಅಭಿಪ್ರಾಯವನ್ನು ಅಬೂದಾವೂದ್ ಉದ್ಧರಿಸಿದ್ದನ್ನು ಆಧಾರವಾಗಿ ತೋರಿಸುತ್ತಾರೆ. ಇಲ್ಲಿ `ಅವರು ಆತಂಕ ಪಡುವವರಾಗಿದ್ದಾರೆ’ ಎಂದು  ಕುರ್‍ಆನ್ ಉದ್ಧರಿಸಿದ್ದಲ್ಲಿ “ತಮ್ಮ ಮಕ್ಕಳ ವಿಷಯದಲ್ಲಿ ಎಂಬುದನ್ನು ಸೇರಿಸಿ ಇಮಾಮ್ ಅಬೂದಾವೂದ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.” (ಅಬೂದಾವೂದ್ 2320)

ಇಲ್ಲಿ ಮಕ್ಕಳು ಮತ್ತು ಗರ್ಭಸ್ಥ ಶಿಶುವಿನ ಆರೋಗ್ಯದ ಕುರಿತ ಆತಂಕದಿಂದ ಉಪವಾಸವನ್ನು ಉಪೇಕ್ಷಿಸುವುದರಲ್ಲಿಯೂ ಶಾರೀರಿಕವಾದ ತೊಂದರೆಗಳಿಂದ ಉಪವಾಸ ತ್ಯಜಿಸುವುದರಲ್ಲಿಯೂ ವ್ಯತ್ಯಾಸವಿಲ್ಲವೆಂದು ಕೆಲವು ವಿದ್ವಾಂಸರ ವಾದ. ಅವರ ದೃಷ್ಟಿಕೋನದಂತೆ ಶಿಶುಗಳು ಕೂಡ ಅವರ ದೇಹದ ಅವಯವದಂತೆಯೇ ಆಗಿದ್ದಾರೆ. (ಅಶ್ಹರಹುಲ್ ಕಬೀರ್ 1/539, ಅಲ್ ಮೌಸುಆತ್ತುಲ್ ಫಿಖ್‍ಹಿಯ್ಯ್ 28154) ತನ್ನ ಯಾವುದಾದರೂ ಅವಯವಕ್ಕೆ ರೋಗ ಭಾದಿಸಿದ ಕಾರಣ ಉಪವಾಸ ಆಚರಿಸಲು ಸಾಧ್ಯವಾಗದ ರೋಗಿ ಇನ್ನೊಂದು ದಿನ ಆ ಉಪವಾಸವನ್ನು ಪೂರ್ಣ ಗೊಳಿಸಬೇಕು ಎಂಬುದಾಗಿದೆ ವಿಧಿ. ಅದರ ಹೊರತು ಫಿದಿಯ ಕೊಡಬೇಕಾಗಿಲ್ಲ. ಆದ್ದರಿಂದ ಶಿಶುಗಳ ವಿಷಯದಲ್ಲಿ ಆತಂಕವಿರುವ ಕಾರಣ ಉಪವಾಸ ತ್ಯಜಿಸಬೇಕಾಗಿ ಬಂದ ಗರ್ಭಿಣಿಯರು ಅವರಿಗೆ ತಪ್ಪಿ ಹೋದ ಉಪವಾಸವನ್ನು ನಂತರ ಪೂರ್ತಿಗೊಳಿಸಿದರೆ ಸಾಕು. ಅದರೊಂದಿಗೆ ಫಿದಿಯಾವನ್ನು ನೀಡಬೇಕಾಗಿಲ್ಲ. (ಕಶ್ಶಾಫುಲ್ ಖಿನಾಅï 2/313)

ಪ್ರವಾದಿ(ಸ)ರು ಹೇಳಿರುವರು: “ಅಲ್ಲಾಹನು ಪ್ರಯಾಣಿಕನಿಗೆ ನಮಾಝ್‍ನಲ್ಲಿ ಅರ್ಧ ಭಾಗ, ಗರ್ಭಿಣಿಯರು, ಸ್ತನಪಾನ ಮಾಡಿಸುವವರಿಗೆ ಉಪವಾಸದಲ್ಲಿ ರಿಯಾಯಿತಿ ತೋರಿದ್ದಾನೆ.” (ಅಹ್ಮದ್: 19047, ನಸಾಈ: 2286, ತಿರ್ಮಿದಿ: 719)

ಇಲ್ಲಿ ಪ್ರಯಾಣಿಕರೊಂದಿಗೆ ಗರ್ಭಿಣಿ ಹಾಗೂ ಸ್ತನಪಾನ ಮಾಡಿಸುವವರನ್ನು ಸೇರಿಸಿಕೊಳ್ಳಲಾಗಿದೆ. ಮಾತ್ರವಲ್ಲ, ಅವರು ತಮಗೋ, ಮಗುವಿಗಾಗಿಯೋ ಎಂದು ಕೂಡಾ ಪ್ರತ್ಯೇಕಿಸಿಲ್ಲ. ಪ್ರಯಾಣಿಕರು, ಗರ್ಭಿಣಿಯರು, ಎದೆ ಹಾಲುಣಿಸುವವರು ಎಂದು  ಸಮಾನವಾಗಿಯೇ ಹೇಳಲಾಗಿದೆ. (ಅಹ್‍ಕಾಮುಲ್ ಕುರ್‍ಆನ್, ಜಿಸ್ಸಾಸ್ 1/224)

ಸಹಾಬಿಗಳಲ್ಲಿನ ಕುರ್‍ಆನ್ ವ್ಯಾಖ್ಯಾನಕಾರರಾದ ಇಬ್ನು ಅಬ್ಬಾಸ್‍ರು ಈ ವರ್ಗದವರು. ಉಪವಾಸ ಪೂರ್ತಿಗೊಳಿಸಿದರೆ ಸಾಕೆಂಬ ದೃಷ್ಟಿಕೋನದವರಾಗಿದ್ದಾರೆ. (ಮುಸನ್ನಫ್ ಅಬ್ದುರ್ರಝಾಕ್ 2/218).

ಸಾಮಾನ್ಯವಾಗಿ ಅತ್ಯಂತ ಸುಲಭವಾಗಿರುವ ಮದ್‍ಹಬ್ ಅದು. ಸಹಾಬಿಗಳಲ್ಲಿ ಅತ್ಯಂತ ಕಠಿಣ ದೃಷ್ಟಿಕೋನವಿರುವವರೆಂದು ಹೇಳಲಾಗುವ ಇಬ್ನು ಉಮರ್ ಹಲವು ವಿಚಾರಗಳಲ್ಲಿ ಇಬ್ನು ಅಬ್ಬಾಸ್‍ರಿಗೆ ವಿರುದ್ಧವಾಗಿದ್ದರು. ಆದರೆ ಈ ವಿಷಯದಲ್ಲಿ ಇಬ್ಬರಿಗೂ ಏಕ ಅಭಿಪ್ರಾಯವಿರುವುದು ಆಶ್ಚರ್ಯ. ಅವರ ಆಶಯದಂತೆ ಇಂತಹ ಸ್ತ್ರೀಯರು ಉಪವಾಸ ಆಚರಿಸಿದರೆ ಸಾಕು. ಅದು ಮಗುವಿಗಾಗಿ ಉಪವಾಸ ತ್ಯಜಿಸಿದ್ದರೂ ಕೂಡ (ತಿರ್ಮಿದಿ 3/94, ಅಸ್ಸುನನುಲ್ ಕುಬ್ರಾ 4/250, ಮುಸ್ವನಫ್  ಅಬುದಿರ್ರಝಾಕ್ 75/61).

ಹೆಚ್ಚಿನ ವಿದ್ವಾಂಸರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಬಳಿಕ ಶೈಖ್ ಯೂಸುಫುಲ್ ಕರ್ಝಾವಿ ಹೇಳುವ ವಿಚಾರಗಳು ಪ್ರಸಕ್ತವೆನಿಸುತ್ತದೆ. ಅವರು ಹೇಳುತ್ತಾರೆ, “ಪದೇ ಪದೇ ಗರ್ಭಧರಿಸುವುದು,  ಹಾಲುಣಿಸಬೇಕಾದ ಸ್ತ್ರೀಯರ ವಿಷಯದಲ್ಲಿ ನಾನು ಇಬ್ನು ಉಮರ್ ಹಾಗೂ ಇಬ್ನು ಅಬ್ಬಾಸ್‍ರ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ. ಅವಳು ರಮಝಾನ್‍ನಲ್ಲಿ ಒಂದೋ ಗರ್ಭಿಣಿ ಅಥವಾ ಹಾಲುಣಿಸುವವಳು ಆಗಿರುತ್ತಾಳೆ. ಆದ್ದರಿಂದ ಬಿಟ್ಟು ಹೋದ ಉಪವಾಸವನ್ನು ಹಿಡಿಯಬೇಕೆಂದು ಆದೇಶಿಸದೇ ಪ್ರಾಯಶ್ಚಿತ್ತ ಮಾಡಿದರೆ ಸಾಕು ಎಂದು ಹೇಳಿ ಇವರ ಮೇಲೆ ಕರುಣೆ ತೋರಲಾಗಿದೆ. ಪ್ರಾಯಶ್ಚಿತ್ತವಾಗಿ ಆಹಾರವನ್ನು ನಿಶ್ಚಯಿಸಿದ್ದರಿಂದ ಬಡ ಹಾಗೂ ದರಿದ್ರರಿಗೆ ಸಾಂತ್ವನವಿದೆ. ಆದರೆ ಇಂದಿನ ಹೆಚ್ಚಿನ ಮುಸ್ಲಿಮ್ ಮಹಿಳೆಯರು ವಿಶೇಷವಾಗಿ ನಗರದ ಮಹಿಳೆಯರು ಗರ್ಭಧಾರಣೆಯಂತಹ ಪರಿಸ್ಥಿತಿಯನ್ನು ಆಯುಷ್ಯದಲ್ಲಿ ಮೂರು ಬಾರಿ ಮಾತ್ರ ಅನುಭವಿಸುತ್ತಾರೆ. ಗರ್ಭಧಾರಣೆಯ ನಡುವೆ ದೀರ್ಘ ಅಂತರವನ್ನು ಕಾಯ್ದುಕೊಳ್ಳುವ  ಇಂತಹವರು ಉಪವಾಸ ಆಚರಿಸಲು ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಹೆಚ್ಚಿನ ವಿದ್ವಾಂಸರ ಅಭಿಪ್ರಾಯವು ಅದುವೆ” (ಫಿಖ್‍ಹುನ್ವಿಯಾಮ್ ಪುಟ 72) ಇದೇ ದೃಷ್ಟಿಕೋನ ಶಾಹ್‍ವಲಿಯುಲ್ಲಾಹ್‍ದ್ದಹ್ಲವಿ, ಸೌದಿ ಫತ್‍ವಾ ಕಮಿಟಿಗೂ ಇದೆ. (ಫತ್ವಾ  ಇಸ್ಲಾಮಿಯ್ಯ 1/396).

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …