Home / ಲೇಖನಗಳು / ಹಬ್ಬದ(ಈದ್) ಶಿಷ್ಟಾಚಾರಗಳು

ಹಬ್ಬದ(ಈದ್) ಶಿಷ್ಟಾಚಾರಗಳು

✍️ಐ.ಎಲ್.

ಈದ್‌ನ ದಿನಗಳಲ್ಲಿ ತಕ್ಬೀರ್ ಹೇಳಲು ನಿಗದಿತ ಸಮಯವಿದೆ. ಈದುಲ್ ಫಿತ್ರ್ ಗೆ ಚಂದ್ರದರ್ಶನವಾದ ಗಳಿಗೆಯಿಂದ ಇಮಾಮ್ ನಮಾಝ್‌ಗೆ ಬರುವವರೆಗೆ, ಈದುಲ್ ಅಝ್ಹಾಕ್ಕೆ ಸಂಬಂಧಿಸಿ ದುಲ್‌ಹಜ್ಜ್ ಒಂದರಿಂದ ದುಲ್‌ಹಜ್ಜ್ 13ರ ಸೂರ್ಯಾಸ್ತಮಾನವದವರೆಗೂ ತಕ್ಬೀರ್ ಹೇಳಬಹುದು. ಬಲಿ ಪೆರ್ನಾಲ್‌ಗೆ ಕಡ್ಡಾಯ ನಮಾಝ್‌ನ ಬಳಿಕ ಅರಫಾ ದಿನ ಫಜ್ರ‍್ ನಿಂದ ಅಯ್ಯಾಮುತ್ತಶ್ರೀಕ್‌ನ ಕೊನೆಯ ದಿನದ ಅಸರ್ ನಮಾಝ್‌ನ ವರೆಗೂ ಹೇಳಬಹುದು.

ಸ್ನಾನ, ಸುಗಂಧ ದ್ರವ್ಯ ಮತ್ತು ವಸ್ತ್ರಧಾರಣೆ
ಈದ್‌ನ ದಿನಗಳಲ್ಲಿ ಸ್ನಾನ ಮಾಡುವುದು, ಸುಂದರ ವಸ್ತ್ರಗಳನ್ನು ಧರಿಸುವುದು ಮತ್ತು ಸುಗಂಧ ದ್ರವ್ಯವನ್ನು ಸವರುವುದು ಸುನ್ನತ್ ಆಗಿದೆ. ಪ್ರವಾದಿಯವರು(ಸ) ಎಲ್ಲಾ ಹಬ್ಬದ ದಿನಗಳಲ್ಲೂ ಯಮನ್‌ನಲ್ಲಿ ಸಿದ್ಧಪಡಿಸಲಾಗುವ ಒಂದು ರೀತಿಯ ಸುಂದರವಾದ ವಸ್ತ್ರವನ್ನು ಧರಿಸುತ್ತಿದ್ದರೆಂದು ಜಅಫರುಬ್ನು ಮುಹಮ್ಮದ್ ತನ್ನ ತಂದೆಯ ಮೂಲಕ ನಿವೇದಿಸಿದ್ದಾರೆ. (ಶಾಫೀ, ಬಗವಿ)

ಹಬ್ಬದ ದಿನದಲ್ಲಿ ಒಳ್ಳೆಯ ವಸ್ತ್ರ ಧರಿಸಲು, ಲಭಿಸುವುದರಲ್ಲಿ ಉತ್ತಮ ಸುಗಂಧ ದ್ರವ್ಯ ಉಪಯೋಗಿಸಲು, ಬಲಿಯರ್ಪಿಸುವಾಗ ಹೆಚ್ಚು ಬೆಲೆಬಾಳುವುದನ್ನು ಬಲಿಯರ್ಪಿಸಲು ಪ್ರವಾದಿವರ್ಯರು(ಸ) ನಮ್ಮೊಡನೆ ಆದೇಶಿಸಿದ್ದರೆಂದು ಹಸನುಸ್ಬಿಬ್‌ತ್(ರ) ಪ್ರಸ್ತಾಪಿಸಿದ್ದಾರೆ.

ಪ್ರವಾದಿ(ಸ)ರು ಹಬ್ಬದ ದಿನಗಳಲ್ಲಿ ಇರುವುದರಲ್ಲಿ ಉತ್ತಮ ವಸ್ತ್ರ ಧರಿಸುತ್ತಿದ್ದರೆಂದು, ಹಬ್ಬ ಮತ್ತು ಜುಮಾದಂದು ಧರಿಸಲು ಪ್ರವಾದಿ(ಸ)ರಲ್ಲಿ ಪೂರ್ಣ ಉಡುಪನ್ನು ಹೊಂದಿದ್ದರು ಎಂದು ಇಬ್ನ್ ಅಲ್-ಕಯ್ಯಿಮ್ ಹೇಳುತ್ತಾರೆ.

ಪ್ರವಾದಿಯವರು(ಸ) ಈದುಲ್ ಫಿತ್ರ್ ನಂದು ಆಹಾರ ಸೇವಿಸದೆ ಮಸೀದಿಗೆ ಹೊರಡುತ್ತಿರಲಿಲ್ಲ. ಈದುಲ್ ಅಝ್ಝಾ ದಿನದಂದು ಮಸೀದಿಯಿಂದ ಮರಳಿ ಬರುವವರೆಗೆ ಆಹಾರವನ್ನು ಸೇವಿಸುತ್ತಿರಲಿಲ್ಲವೆಂದು ಬುರೈದ(ರ) ಹೇಳುತ್ತಾರೆ. (ಅಹ್ಮದ್, ತಿರ್ಮಿದಿ, ಇಬ್ನು ಮಾಜ)

ಅಹ್ಮದ್‌ರ ವರದಿಯಲ್ಲಿ ಮರಳಿ ಬಂದರೆ ತನ್ನ ಬಲಿಯ ಮಾಂಸದಿಂದ ಪ್ರವಾದಿವರ್ಯರು(ಸ) ಆಹಾರ ಸೇವಿಸುತ್ತಿದ್ದರು ಎಂದೂ ಇದೆ.

ಮುಸಲ್ಲಗೆ ಹೊರಡುವುದು
ಪೆರ್ನಾಲ್ ನಮಾಝ್ ಮಸೀದಿಯಲ್ಲಿ ನಿರ್ವಹಿಸಬಹುದಾದರೂ ಮಳೆಯಂತಹ ಅಡ್ಡಿಯಿಲ್ಲದಿದ್ದರೆ ಅದನ್ನು ತೆರೆದ ಮೈದಾನದಲ್ಲಿ ನಿರ್ವಹಿಸುವುದು ಉತ್ತಮ. ಕಾರಣವೇನೆಂದರೆ ಪ್ರವಾದಿ(ಸ)ರು ಹಬ್ಬದ ನಮಾಝ್‌ಗಳನ್ನು ಈದ್ಗಾಗಳಲ್ಲಿ ನೆರವೇರಿಸುತ್ತಿದ್ದರು. ಮಳೆಯ ಕಾರಣದಿಂದ ಒಂದು ಬಾರಿ ಮಾತ್ರ ಪ್ರವಾದಿಯವರು(ಸ) ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದ್ದರು.

ಈದ್ ನಮಾಝ್‌ಗಾಗಿ ಮಹಿಳೆಯರು ಮಕ್ಕಳು ಹೋಗುವ ಅನುಮತಿಯಿದೆ. ಈ ವಿಷಯದಲ್ಲಿ ಕನ್ಯೆಯರು, ವಿವಾಹಿತೆಯರು, ವಿಧವೆಗಳು, ವೃದ್ಧೆಯರು, ಆರ್ತವಸ್ಥಿತಿ ಇರುವವರು ಎಂಬ ವ್ಯತ್ಯಾಸವಿಲ್ಲ. “ಪುಣ್ಯ ಕರ್ಮ ಮತ್ತು ಮುಸ್ಲಿಮರ ಪ್ರಾರ್ಥನೆಯಲ್ಲಿ ಭಾಗವಹಿಸಲು ಈದ್ ದಿನದಂದು ಕನ್ಯೆಯರನ್ನು, ಋತುಮತಿಗಳನ್ನು ಕರೆತರಲು ನಮಗೆ ಆದೇಶಿಸಲಾಗಿತ್ತು. ಆದರೆ ಋತುಮತಿಗಳು ನಮಾಝ್‌ನಿಂದ ದೂರವಿರಬೇಕು” ಎಂದು ಉಮ್ಮು ಅತ್ವಿಯ್ಯ(ರ) ಪ್ರಸ್ತಾಪಿಸಿದ್ದಾರೆ. (ಬುಖಾರಿ, ಮುಸ್ಲಿಮ್)

ಈದ್‌ನ ದಿನಗಳಲ್ಲಿ ಪ್ರವಾದಿಯವರು(ಸ) ತಮ್ಮ ಪತ್ನಿಯರನ್ನೂ, ಪುತ್ರಿಯರನ್ನೂ ಹೊರಗೆ ಕರೆತರುತ್ತಿದ್ದರೆಂದು ಇಬ್ನು ಅಬ್ಬಾಸ್ ಹೇಳುತ್ತಾರೆ. (ಇಬ್ನು ಮಾಜ, ಬೈಹಕಿ)

ಒಂದು ಈದ್‌ನ ದಿನದಂದು ನಾನು ಪ್ರವಾದಿಯವರೊಂದಿಗೆ ಹೋದೆ. ಪ್ರವಾದಿ(ಸ) ನಮಾಝ್ ನಿರ್ವಹಿಸಿ, ಖುತ್ಬಾ ಮಾಡಿದ ಬಳಿಕ ಮಹಿಳೆಯರ ಬಳಿಗೆ ಹೋಗಿ ಸದುಪದೇಶ ಮಾಡಿದರು ಮತ್ತು ದಾನ-ಧರ್ಮ ಮಾಡಲು ಆದೇಶಿಸಿದರು” ಎಂದು ಇಬ್ನು ಅಬ್ಬಾಸ್(ರ) ವರದಿ ಮಾಡಿರುವರು.

ಈದ್ ನಮಾಝ್‌ನ ಸಮಯ
ಸೂರ್ಯ ಮೂರು ಮೀಟರ್ ಎತ್ತರಕ್ಕೆ ಬಂದಲ್ಲಿಂದ ಮಧ್ಯಾಹ್ನದವರೆಗೆ ಇರುತ್ತದೆ. ಬಲಿ ನೀಡಲು ಸಮಯ ದೊರೆಯಲಿಕ್ಕಾಗಿ ಈದುಲ್ ಅಝ್ಝಾ ನಮಾಝ್ ಬೇಗನೇ ನಿರ್ವಹಿಸಲಾಗುವುದೆಂದೂ, ಫಿತ್ರ್ ಝಕಾತ್ ನೀಡಲು ಸಮಯ ದೊರೆಯಲು ಈದುಲ್ ಫಿತ್ರ್ ಸ್ವಲ್ಪ ತಡ ಮಾಡುವುದು ಸುನ್ನತ್ ಎಂದೂ, ಇದರಲ್ಲಿ ಅಭಿಪ್ರಾಯ ವ್ಯತ್ಯಾಸದ ಕುರಿತು ತಿಳಿದಿಲ್ಲವೆಂದು ಇಬ್ನು ಖುದಾಮ ಹೇಳುತ್ತಾರೆ.

ಈದ್ ನಮಾಝ್‌ನ ತಕ್ಬೀರ್‌ಗಳು
ಈದ್ ನಮಾಝ್ ಎರಡು ರಕಅತ್ ಆಗಿದೆ. ಇದರಲ್ಲಿ ಒಂದೇ ರಕಅತ್‌ನಲ್ಲಿ ತಕ್ಬೀರತುಲ್ ಇಹ್ರಾಮ್‌ನ ಬಳಿಕ ಏಳು ಬಾರಿ, ಎರಡನೆಯದರಲ್ಲಿ 5 ಬಾರಿ ತಕ್ಬೀರ್ ಹೇಳುವುದೂ, ಪ್ರತಿಯೊಂದು ತಕ್ಬೀರ್‌ಗೂ ಕೈ ಎತ್ತುವುದು ಸುನ್ನತ್ ಆಗಿದೆ.

ಪ್ರವಾದಿ(ಸ) ಒಂದು ಪೆರ್ನಾಲ್ ನಮಾಝ್‌ನಲ್ಲಿ ಒಂದನೇಯದರಲ್ಲಿ ಏಳು, ಎರಡನೇ ರಕಅತ್‌ನಲ್ಲಿ ಐದು, ಹೀಗೆ ಒಟ್ಟು ಹನ್ನೆರಡು ತಕ್ಬೀರ್ ಹೇಳಿದರೆಂದೂ, ಅದರ ಮೊದಲೋ, ಬಳಿಕವೋ ಬೇರೆ ನಮಾಝ್ ಮಾಡುತ್ತಿರಲಿಲ್ಲವೆಂದೂ ಅಮ್ರ್ ಇಬ್ನು ಶುಐಬ್ ತನ್ನ ತಂದೆಯ ಮೂಲಕ ನಿವೇದಿಸಿದ್ದಾರೆ. (ಅಹ್ಮದ್, ಇಬ್ನು ಮಾಜ)

ಎರಡು ತಕ್ಬೀರ್‌ಗಳ ನಡುವೆ ಪ್ರವಾದಿಯವರು(ಸ) ಸ್ವಲ್ಪ ವಿರಾಮ ತೆಗೆದುಕೊಂಡಿದ್ದರೂ ತಕ್ಬೀರ್‌ಗಳ ನಡುವೆ ಏನಾದರೂ ಬೇರೆಯೇ ದಿಕ್ರ್ ಇದೆಯಾ ಎಂಬ ಬಗ್ಗೆ ಪ್ರವಾದಿವರ್ಯ(ಸ)ರಿಂದ ಉಲ್ಲೇಖವಿಲ್ಲ. ಆದರೆ ಇಬ್ನು ಮಸ್‌ವೂದ್(ರ) ಅಲ್ಲಾಹನನ್ನು ಸ್ತುತಿಸಿ, ಹೊಗಳುತ್ತಲೂ ಪ್ರವಾದಿ (ಸ)ಯವರ ಮೇಲೆ ಸ್ವಲಾತ್ ಹೇಳುತ್ತಲೂ ಇದ್ದರೆಂದೂ, ಹಾಗೆ ಮಾಡಲು ಹೇಳಲಾಗಿದೆಯೆಂದೂ ಪ್ರಬಲವಾದ ಪರಂಪರೆಯ ಮೂಲಕ ತ್ವಬ್ರಾನಿ ಮತ್ತು ಬೈಹಕಿ ಬರೆದಿದ್ದಾರೆ. ಮೇಲೆ ಹೇಳಿದ ತಕ್ಬೀರ್‌ಗಳು ಸುನ್ನತ್ ಮಾತ್ರವಾಗಿದೆ. ಮರೆತೋ, ತಿಳಿದೋ ಅದನ್ನು ಉಪೇಕ್ಷಿಸಿದರೆ ನಮಾಝ್ ಅಸಿಂಧುವಾಗುವುದಿಲ್ಲ.

ಪೆರ್ನಾಲ್ ನಮಾಝ್ ಯಾರಿಗೆಲ್ಲಾ?
ಪುರುಷರು, ಮಹಿಳೆಯರು, ಮಕ್ಕಳು, ಖಾಯಂ ನಿವಾಸಿಗಳು ಮತ್ತು ಪ್ರಯಾಣಿಕರು, ಈದ್ ನಮಾಝ್ ಅನ್ನು ಸಾಮೂಹಿಕವಾಗಿ, ಒಂಟಿಯಾಗಿ ಮನೆಯಲ್ಲಿ, ಮಸೀದಿಯಲ್ಲಿ ಅಥವಾ ಈದ್ಗಾದಲ್ಲಿ ಮಾಡಿದರೆ ಅದು ಸಿಂಧುವಾಗಿರುತ್ತದೆ. ಓರ್ವನಿಗೆ ಜಮಾಅತ್‌ನೊಂದಿಗಿನ ನಮಾಝ್ ತಪ್ಪಿದರೆ ಆತ ಎರಡು ರಕಅತ್ ನಮಾಝ್ ನಿರ್ವಹಿಸಬೇಕು.

ಹಬ್ಬದ ಖುತ್ಬಾ
ಈದ್ ನಮಾಝ್‌ನ ಬಳಿಕ ಖುತ್ಬಾ ನಿರ್ವಹಿಸುವುದು ಮತ್ತು ಅದನ್ನು ಗಮನವಿಟ್ಟು ಆಲಿಸುವುದು ಸುನ್ನತ್ ಆಗಿದೆ.

ಅಬೂ ಸಈದ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ಈದ್ ದಿನದಂದು ಈದ್ಗಾಗೆ ಬಂದರೆ ಮೊದಲು ಈದ್ ನಮಾಝ್ ನಿರ್ವಹಿಸಿ ಬಳಿಕ ಸಾಲಾಗಿ ಕುಳಿತುಕೊಂಡಿರುವವರನ್ನುದ್ದೇಶಿಸಿ ಉಪದೇಶವನ್ನು ನೀಡುತ್ತಿದ್ದರು.

ಪೆರ್ನಾಲ್‌ನಲ್ಲಿ ಎರಡು ಖುತ್ಬಾವಿದೆಯೆಂದೂ, ಒಂದರ ನಂತರ ಕುಳಿತುಕೊಳ್ಳಬೇಕೆಂಬ ಎಲ್ಲಾ ವರದಿಗಳೂ ದುರ್ಬಲವಾಗಿದೆ. ಪೆರ್ನಾಲ್‌ಗೆ ಕುತ್ಬಾ ಪುನರಾವರ್ತಿಸುವ ವಿಷಯದಲ್ಲಿ ಒಂದು ಖಚಿತ ವರದಿಯೂ ಇಲ್ಲವೆಂದು ನವವಿ ಹೇಳುತ್ತಾರೆ.

ಆಹಾರ, ಆಟ ವಿನೋದಗಳು
ಅನಸ್(ರ) ಹೇಳಿರುವರು: “ಪ್ರವಾದಿ(ಸ) ಮದೀನಾಕ್ಕೆ ಬಂದಿದ್ದ ಸಂದರ್ಭದಲ್ಲಿ ಅಲ್ಲಿನವರಿಗೆ ಆಟ ಅಥವಾ ಮನರಂಜನೆಗೆಂದು ಎರಡು ದಿನಗಳಿದ್ದವು ಎಂದು ಪ್ರವಾದಿ(ಸ)ರು ಹೇಳಿದ್ದರು. ಹಬ್ಬದ ದಿನದಂದು ಕೆಲವು ಅಬಿಸೀನಿಯಾದವರು ಪ್ರವಾದಿಯವರ(ಸ) ಬಳಿ ಆಟ ವಾಡುತ್ತಿದ್ದರು. ನಾನು ಪ್ರವಾದಿ(ಸ)ರ ಭುಜದ ಮೇಲಿನಿಂದ ನೋಡಿದಾಗ ಪ್ರವಾದಿಯವರು(ಸ) ತನ್ನ ಭುಜವನ್ನು ಸ್ವಲ್ಪ ಕೆಳಕ್ಕೆ ಇಳಿಸಿದರು. ಅವರು ಆಡುವುದನ್ನು ನೋಡಿದ ನಂತರ ನಾನು ಹಿಂತಿರುಗಿದೆ. (ಅಹ್ಮದ್, ಬುಖಾರಿ, ಮುಸ್ಲಿಮ್)

ಹಫೀಝುಬ್ನು ಹಜರ್ ಅವರು ಫತ್ಹುಲ್ ಬಾರಿಯಲ್ಲಿ ಹೇಳುತ್ತಾರೆ: “ನಮ್ಮ ಧರ್ಮವು ವಿಶಾಲವೂ ಆರಾಮದಾಯಕವೆಂದು ಮದೀನಾದ ಯಹೂದಿಯರು ತಿಳಿದುಕೊಳ್ಳಲಿ. ಸತ್ಯ ಮತ್ತು ವಿಶಾಲತೆಯುಳ್ಳ ಒಂದು ಮಾರ್ಗದಿಂದ ನಾನು ಬಂದಿದ್ದೇನೆ ಎಂದು ಇಬ್ನು ಅಲ್ ರ‍್ರಾಜ್ ಉರ್ವತ್‌ನಿಂದ ಅಬುಸ್ಸಿನಾರ್ ಮೂಲಕ ಉಲ್ಲೇಖಿಸಿದ್ದಾರೆ.

ಈದ್ ಶುಭಾಶಯಗಳು
“ಈದ್ ಮುಬಾರಕ್, ತಖಬ್ಬಲಲ್ಲಾಹು ಮಿನ್ಹಾ ವಮಿನ್‌ಕುಮ್… ಮೊದಲಾದ ಶುಭಾಶಯ ವಾಕ್ಯಗಳೊಂದಿಗೆ ಶುಭಾಶಯ ಹೇಳಬಹುದು.

ಪ್ರವಾದಿಯವರ(ಸ) ಸಹಾಬಿಗಳು ಹಬ್ಬದ ದಿನದಂದು ಪರಸ್ಪರ ಭೇಟಿಯಾಗುವಾಗ ತಖಬ್ಬಲಲ್ಲಾಹು ಮಿನ್ನಾ ವಮಿನ್ (ನಮ್ಮಿಂದಲೂ ನಿಮ್ಮಿಂದಲೂ ಅಲ್ಲಾಹನು ಸ್ವೀಕರಿಸಲಿ) ಎಂದು ಹೇಳುತ್ತಿದ್ದರೆಂದು ಜುಬೈರುಬ್ನು ನಫೀರ್ ಪ್ರಸ್ತಾಪ ಮಾಡಿದ್ದಾರೆ.

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …