Home / ಲೇಖನಗಳು / ಹೊಣೆಗಾರರೇ, ನೀವು ಪ್ರಶ್ನಾರ್ಹರಾಗಿದ್ದೀರಿ…

ಹೊಣೆಗಾರರೇ, ನೀವು ಪ್ರಶ್ನಾರ್ಹರಾಗಿದ್ದೀರಿ…

ಫಾತಿಮಾ ಕೆ.

(ನಾವು ಅವರೊಡನೆ ಹೀಗೆಂದೆವು): “ದಾವೂದ್, ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ಸತ್ಯದೊಂದಿಗೆ ಆಳ್ವಿಕೆ ನಡೆಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮನ್ನು ಅಲ್ಲಾಹನ ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಲೆಕ್ಕಾಚಾರ ನಡೆಯಲಿರುವ ದಿನವನ್ನು ಮರೆತು ಬಿಟ್ಟಿದ್ದಕ್ಕಾಗಿ ಖಂಡಿತವಾಗಿಯೂ ಕಠಿಣ ಯಾತನೆ ಇದೆ.” (ಸ್ವಾದ್: 26)

ಪ್ರವಾದಿ ದಾವೂದ್(ಅ)ರನ್ನು ಸಂಭೋಧಿಸಿ ಅಲ್ಲಾಹನು ಈ ಸೂಕ್ತದಲ್ಲಿ ಈ ಮಾತನ್ನು ಹೇಳಿರುತ್ತಾನೆ. ಅಧಿಕಾರದಲ್ಲಿ ವಿರಾಜಮಾನರಾಗಿರುವವರು ಅಲ್ಲಾಹನೊಡನೆ ಮತ್ತು ಜನರೊಡನೆ ಒಂದೇ ರೀತಿಯಲ್ಲಿ ಕರ್ತವ್ಯ ಬದ್ಧರಾಗಿರುತ್ತಾರೆ. ಜನರೊಂದಿಗೆ ನ್ಯಾಯ ಬದ್ಧವಾಗಿ ವರ್ತಿಸಬೇಕಾದುದು ಅವರ ಜವಾಬ್ದಾರಿಕೆಯಾಗಿದೆ ಎಂಬುದನ್ನು ಅಲ್ಲಾಹನು ಈ ಸೂಕ್ತದಲ್ಲಿ ಎಚ್ಚರಿಸುತ್ತಾನೆ.

ಮನುಷ್ಯನು ಅಧಿಕಾರಕ್ಕಾಗಿ ಹಾತೊರೆಯುವ ಕಾಲವಾಗಿದೆ. ನಾಯಕತ್ವದ ಜವಾಬ್ದಾರಿಕೆಯು ಕರ್ತವ್ಯಬದ್ಧವಾಗಿದೆ. ಪರಲೋಕದಲ್ಲಿ ಅದರ ಕುರಿತು ವಿಚಾರಣೆಯ ದಿನ ಉತ್ತರ ಸಮರ್ಪಿಸಲಿಕ್ಕಿದೆ ಎಂಬ ಬಗ್ಗೆ ಹೆಚ್ಚಿನವರು ಚಿಂತಿಸುವುದಿಲ್ಲ. ಅಧಿಕಾರಕ್ಕೇರಿದವರು ಅನುಷ್ಠಾನಿಸಬೇಕಾದ ಹಲವಾರು ವಿಚಾರಗಳನ್ನು ಇಸ್ಲಾಮ್ ಕಲಿಸಿದೆ. ಅಧಿಕಾರ ಕೇವಲ ಒಂದು ಅಲಂಕಾರವಲ್ಲ. ಅದು ಅಮಾನತ್ ಆಗಿದೆ. ಅದರ ಪ್ರತಿಯೊಂದು ವಿಭಾಗಗಳನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ನಿಭಾಯಿಸಬೇಕಾಗಿದೆ.

ಇಬ್ನ್ ಉಮರ್(ರ)ರಿಂದ ನಿವೇದಿಸಲಾಗಿದೆ. ಪ್ರವಾದಿ(ಸ)ರು ಹೇಳಿದರು- ತಿಳಿಯಿರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗಿದ್ದಾರೆ. ನಿಮ್ಮ ಅಧೀನದಲ್ಲಿರುವವರ ಬಗ್ಗೆ ನೀವು ಉತ್ತರಿಸಬೇಕಾಗಿದೆ. ಜನರ ನಾಯಕ ತನ್ನ ಪ್ರಜೆಗಳ ಬಗ್ಗೆ ಜವಾಬ್ದಾರರಾಗಿದ್ದಾರೆ.” (ಸಹೀಹ್, ಮುಸ್ಲಿಮ್)

ಆದ್ದರಿಂದ ಅಧಿಕಾರ ಮತ್ತು ಜವಾಬ್ದಾರಿಕೆಗಳು ಪ್ರಶ್ನಿಸುವಂತಹದ್ದು ಎಂಬುದನ್ನು ಸ್ಮರಿಸಿ ಅದನ್ನು ನಿಭಾಯಿಸಬೇಕು.

ಅಬೂ ಮೂಸಲ್ ಅಶ್ ಸರಿ(ರ)ರವರು ಮುಅದ್ ಬಿನ್ ಜಬಲ್(ರ)ರನ್ನು ಕರೆದು ಯಮನ್‌ನ ಆಡಳಿತಗಾರರಾಗಿ ನೇಮಿಸಿ ಕಳುಹಿಸಿದಾಗ ಪ್ರವಾದಿ(ಸ)ರು ಅವರೊಂದಿಗೆ ಹೀಗೆ ಉಪದೇಶಿಸಿದ್ದರು- ಈ ಉಪದೇಶವನ್ನು ಆಧುನಿಕ ಯುಗದ ಪ್ರತಿಯೊಬ್ಬ ಅಧಿಕಾರಿಗಳೂ ಅರಿಯಬೇಕಾಗಿದೆ. ಪ್ರವಾದಿ(ಸ) ಹೇಳಿದರು- ನೀವು ಜನರಿಗೆ ಸುಲಭಗೊಳಿಸಿರಿ. ಕಠಿಣ ಗೊಳಿಸದಿರಿ. ಅವರಲ್ಲಿ ಸಂತೋಷವುಂಟು ಮಾಡಿರಿ. ಕೋಪ ಬರುವಂತೆ ಮಾಡದಿರಿ. ನೀವು ಎಲ್ಲರನ್ನೊಳಗೊಂಡು ತೀರ್ಮಾನಿಸಿರಿ. ಪರಸ್ಪರ ಭಿನ್ನತೆಯುಂಟು ಮಾಡಬೇಡಿರಿ.

ಶಾಂತಿಯ ಸಮಾಧಾನದ ಸಹೋದರತೆಯ ಶಿಕ್ಷಣವನ್ನು ಈ ಪ್ರಸ್ತುತ ವಿಚಾರದಲ್ಲಿ ಇಸ್ಲಾಮ್ ಕಲಿಸುತ್ತದೆ. ವರ್ಗ, ವಂಶದ ಪಕ್ಷಪಾತಕ್ಕೆ ಇಸ್ಲಾಮಿನಲ್ಲಿ ಅವಕಾಶವಿಲ್ಲ. ಸಹಿಷ್ಣುತೆಗೆ ಮಾತ್ರ ಇಲ್ಲಿ ಸ್ಥಾನವಿರುವುದು. ನ್ಯಾಯದ ಬಗ್ಗೆ ಬಹಳ ಪ್ರಬಲವಾಗಿ ಪ್ರತಿಪಾದಿಸುತ್ತದೆ. ಕೋಮು ಪಕ್ಷಪಾತದೆಡೆಗೆ ಆಹ್ವಾನಿಸುವವನು, ಅದಕ್ಕಾಗಿ ಯುದ್ಧ ಮಾಡುವವನು ನಮ್ಮವನಲ್ಲ ಎಂಬುದು ಪ್ರವಾದಿವರ್ಯರ(ಸ) ಸಂದೇಶದಿಂದ ತಿಳಿದು ಬರುತ್ತದೆ. ಅದು ನಮಗೆ ನೀಡುವ ಮಾದರೀ ಸಂದೇಶವಾಗಿದೆ.

ಅಧಿಕಾರ ಬಯಸಿ ಹತ್ತಿರ ಸುಳಿಯುವವರನ್ನು ಪ್ರವಾದಿವರ್ಯರು(ಸ) ಸಾಕಷ್ಟು ನಿರುತ್ಸಾಹ ಪಡಿಸುತ್ತಿದ್ದರು. ಒಂದು ವಿಚಾರದಲ್ಲಿ ಅಧಿಕಾರ ಬಯಸಿ ಬಂದ ಅಬೂದರ‍್ರ್(ರ)ರವರೊಡನೆ ಪ್ರವಾದಿವರ್ಯರು(ಸ) ಹೇಳಿದರು, “ಅಬೂದರ‍್ರ್ ಅವರೇ, ನೀವು ಆ ವಿಚಾರದಲ್ಲಿ ಅಶಕ್ತರಾಗಿದ್ದೀರಿ. ಅಧಿಕಾರ ಅಲ್ಲಾಹನಿಂದ ಸಿಗುವಂತಹ ಕಾಪಾಡಬೇಕಾದ ಸೂಕ್ಷ್ಮ ವಸ್ತುವಾಗಿದೆ(ಅಮಾನತ್). ತಮ್ಮ ಕರ್ತವ್ಯ ನಿಭಾಯಿಸದೇ ಇರುವವರು, ನ್ಯಾಯೋಚಿತವಾಗಿ ವರ್ತಿಸದಿರುವವರಿಗೆ ಅವರ ಅಧಿಕಾರವು ಅಂತ್ಯ ದಿನದಂದು ಖೇದ ಮತ್ತು ಅವಮಾನವಾಗಿ ಪರಿಣಮಿಸುವುದು.

ಅಧಿಕಾರದ ಪ್ರತಿ ನಿಮಿಷವೂ ಪ್ರತಿ ದಿನವೂ ಪ್ರತಿ ಕ್ಷಣವೂ ಜನ ಸೇವೆಯಲ್ಲಿ ನಿರತರಾಗಿರಬೇಕಾದುದು ಪ್ರತಿಯೊಬ್ಬ ಆಡಳಿತಗಾರನ ಕರ್ತವ್ಯವಾಗಿದೆ. ಅವನು ಭೂಮಿಯಲ್ಲಿ ಅನ್ಯಾಯವನ್ನು ತೊಡೆದು ಹಾಕಿ ನ್ಯಾಯ ಸಂಸ್ಥಾಪಿಸುವವನಾಗಿದ್ದಾನೆ. ಅವನ ಚಟುವಟಿಕೆಯು ಇದರಲ್ಲಿ ಸಕ್ರಿಯವಾಗಿರಬೇಕು. ಜನರ ಅಗತ್ಯಗಳಲ್ಲಿ ನಿರಂತರ ಸಕ್ರಿಯವಾಗಿ ಸೇವಾರಂಗದ ಭಾಗವಾಗಿರಬೇಕು.

ಅಧಿಕಾರಿಗಳು ಸಕ್ರಿಯವಾಗಿ ಕಾರ್ಯಕ್ಷಮತೆಯಿಂದ ಚಟುವಟಿಕೆಯಲ್ಲಿ ಸದಾ ನಿರತರಾಗಿರಬೇಕು. ತಾನು ಯಾವ ಗುರಿಯ ಈಡೇರಿಕೆಗಾಗಿ ಕಾರ್ಯರಂಗದಲ್ಲಿ ಸಕ್ರಿಯವಾಗಿದ್ದೇನೆಯೋ ಅದನ್ನು ಪೂರ್ತಿಗೊಳಿಸಲು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧನಾಗಿ ನಿಸ್ವಾರ್ಥದಿಂದ ಸಮರ್ಪಣಾ ಮನೋಭಾವ ಅವರಲ್ಲಿರಬೇಕು. ಸೋಲು ಬಂದಾಗ ಸ್ಥೈರ್ಯಗೆಡದೆ ಮರು ಉತ್ಸಾಹದಿಂದ ಆತ್ಮವಿಶ್ವಾಸದಿಂದ ಕಟಿಬದ್ಧರಾಗಿದ್ದುಕೊಂಡು ಮುಂದೆ ಸಾಗಲು ಶಕ್ತರಾಗಿರಬೇಕು. ಸೋಲಿನಿಂದ ಪಾಠ ಕಲಿಯುವ ಸನ್ನದ್ದತೆಯನ್ನೊಳಗೊಂಡು ಧೀರೋಧಾತ್ತವಾದ ಗುಣವನ್ನು ಬೆಳೆಸಿಕೊಳ್ಳಬೇಕು. ನಯ ವಿನಯ ಅವರ ಮುಖದ ಛಾಯೆಯಾಗಿರಬೇಕು. ಅನುಯಾಯಿಗಳ ಸಾಮರ್ಥ್ಯವನ್ನು ಗೌರವಿಸಬೇಕು. ತಾನು ಚಟುವಟಿಕೆಯಲ್ಲಿರುವ ರಂಗಕ್ಕೆ ಸಂಬಂಧಿಸಿದ ಸಕಲ ವಿವರ ವಿಚಾರಗಳನ್ನು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ನಡೆಸುವ ಮನೋಭಾವ ಅವರಲ್ಲಿರಬೇಕು.

ಪ್ರೇರಣಾ ಶಕ್ತಿಯೇ ನಾಯಕತ್ವದ ಪ್ರಬಲ ಆಯುಧ. ಜನರ ಮತ್ತು ಅನುಯಾಯಿಗಳನ್ನು ತನ್ನ ಅಭಿಪ್ರಾಯಕ್ಕೆ ಸಮನ್ವಯಗೊಳಿಸುವ ಸಾಮರ್ಥ್ಯ ನಾಯಕನಲ್ಲಿರಬೇಕು. ನ್ಯಾಯ, ಗೌರವ, ಸೌಮ್ಯತೆ ನಾಯಕರ ವ್ಯಕ್ತಿತ್ವದ ಉಜ್ವಲ ಪ್ರತೀಕವಾಗಿದೆ. ನಿರ್ಲಕ್ಷಿಸಬೇಕಾದುದನ್ನು ನಿರ್ಲಕ್ಷಿಸಿ ಗೌರವಿಸಬೇಕಾದುದನ್ನು ಗೌರವಿಸುವ ಗುಣ ನಾಯಕನಲ್ಲಿರಬೇಕು. ಪ್ರಜೆಗಳ ಸಂಕಷ್ಟಗಳಿಗೆ ತತ್ಕಾಲದಲ್ಲಿ ಪರಿಹಾರ ಕಲ್ಪಿಸುವ ಆಡಳಿತಗಾರನು ಇಹದಲ್ಲಿಯೂ ಪರದಲ್ಲಿಯೂ ಪ್ರತಿಫಲಾರ್ಹವಾಗಿದ್ದಾನೆ. ಆಗ ಜನ ಸೇವೆ ಸಮಾಜ ಸೇವೆ ಪ್ರತಿಫಲಾರ್ಹವಾಗಿ ಪರಿಣಮಿಸುವುದು.

ಇತಿಹಾಸದಲ್ಲಿ ಇದರ ಮಹತ್ತರ ಮಾದರಿಗಳು ನಮಗೆ ಕಾಣ ಸಿಗುವುದು. ಮಸೀದಿಯಲ್ಲಿ ಇಅï‌ತಿಕಾಫ್ ಕುಳಿತಿದ್ದ ಇಬ್ನ್ ಅಬ್ಬಾಸ್(ರ)ರು ದುಃಖಿತನಾಗಿ ಕುಳಿತಿದ್ದ ಓರ್ವ ವ್ಯಕ್ತಿಯನ್ನು ನೋಡಿದರು. ಅವರೊಂದಿಗೆ ವಿಚಾರವೇನೆಂದು ಕೇಳಿದಾಗ, ತಾನು ಹೊಂದಿರುವ ಸಾಲದ ಬಗ್ಗೆ ಕಳವಳದ ಬಗ್ಗೆ ಹೇಳಿದಾಗ ಇಬ್ನ್ ಅಬ್ಬಾಸ್ ಮಸೀದಿಯಿಂದ ಹೊರಟರು. ಇದರ ಕಾರಣವೇನೆಂದು ಕೇಳಿದಾಗ ಪ್ರವಾದಿವರ್ಯರ(ಸ) ರೌಲಾದತ್ತ ಬೆರಳು ತೋರಿಸಿ ಹೇಳಿದರು, ಈ ಗೋರಿಯಲ್ಲಿರುವವರು ಹೀಗೆ ಹೇಳಿರುವುದನ್ನು ನಾನು ಕೇಳಿದ್ದೇನೆ- ಯಾರಾದರೂ ತನ್ನ ಸಹೋದರನ ಅಗತ್ಯ ಪೂರೈಸಲು ಮನೆಯಿಂದ ಹೊರಟು ಆ ಅಗತ್ಯ ಈಡೇರಿಸಿದರೆ ಅದು ಹತ್ತು ವರ್ಷ ಇಅï‌ತಿಕಾಫ್‌ನಲ್ಲಿರುವುದಕ್ಕಿಂತ ಶ್ರೇಷ್ಟವಾಗಿದೆ.” ಇಂತಹ ಮಾದರಿಯನ್ನು ಪ್ರತಿಯೊಬ್ಬ ಸಮಾಜ ಸೇವಕ, ಜನ ನಾಯಕ ಅನುಸರಿಸಬೇಕು.

ಅಧಿಕಾರ ಶೃಂಗಾರವೆಂದು ಬಯಸಬಾರದು. ಅರ್ಹತೆಯುಳ್ಳವರು ತಮ್ಮ ಜವಾಬ್ದಾರಿಕೆ ಪ್ರಜ್ಞೆಯೊಂದಿಗೆ ಅದನ್ನು ನಿರ್ವಹಿಸಿದರೆ ಅದು ಒಂದು ಸಾಲಿಹ್ ಆದ ಪುಣ್ಯ ಕರ್ಮವಾಗಿ ಪರಿಣಮಿಸುವುದು. ಇಲ್ಲದೇ ಹೋದಲ್ಲಿ ಅದು ಪಾಪವಾಗಿ ಪರಿಣಮಿಸುವುದು. ಭ್ರಷ್ಟಾಚಾರ, ಅಕ್ರಮ, ಸ್ವಜನ ಪಕ್ಷಪಾತವು ನಾಶದಂಚಿಗೆ ತಳ್ಳುತ್ತದೆ. ಅಂತಹ ಸಂದರ್ಭಗಳು ಸಮಾಜದಲ್ಲಿ ಅಶಾಂತಿ, ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಅದಕ್ಕೆ ಕಾರಣರಾದವರು ಫಿರ್‌ಔನ್, ನಮ್ರೂದ್, ಖಾರೂನ್ ಜೊತೆ ನಾಳೆ ಪರಲೋಕದಲ್ಲಿ ನರಕದ ಕೊಳ್ಳಿಯಾಗುವರು. ಬದಲಾಗಿ ನ್ಯಾಯಪೂರ್ಣವಾಗಿ ಕಾನೂನು ಪಾಲಿಸುತ್ತಾ ಅಧಿಕಾರ ನಡೆಸುವವರಿಗೆ ಅಲ್ಲಾಹನು ನಾಳೆ ಪರಲೋಕದಲ್ಲಿ ಉನ್ನತ ಪ್ರತಿಫಲ ನೀಡುವ ವಾಗ್ದಾನ ನೀಡಿರುವನು.

ಪ್ರವಾದಿ(ಸ) ಹೇಳಿರುತ್ತಾರೆ, ಅಲ್ಲಾಹನ ನೆರಳಲ್ಲದೆ ಇತರ ಯಾವುದೇ ನೆರಳಿಲ್ಲದ ಅಂತ್ಯ ದಿನದಂದು ಆ ನೆರಳು ಏಳು ವಿಭಾಗದವರಿಗೆ ನೀಡಲಾಗುವುದು. ಅದರಲ್ಲಿ ಮೊದಲನೇ ವಿಭಾಗವು ನ್ಯಾಯಬದ್ಧವಾದ ಆಡಳಿತಗಾರರಾಗಿದ್ದಾರೆ.

ಇತಿಹಾಸದ ಪುಟಗಳನ್ನು ತಿರುವಿದಾಗ ಅಂತಹ ಆಡಳಿತಗಾರರನ್ನು ನಮಗೆ ಕಾಣಬಹುದು. ಮನೆಯ ವಿಚಾರ ಹೇಳಲು ಸೇವಕನು ಬಂದಾಗ ದೀಪ ಆರಿಸಿ ಸಾರ್ವಜನಿಕ ಸೊತ್ತನ್ನು ಸಂರಕ್ಷಿಸಿದ ಉಮರ್ ಬಿನ್ ಅಬ್ದುಲ್ ಅಝೀಝ್, ಜನರ ಸುಖ ದುಃಖಗಳನ್ನು ಅರಿಯಲು ವೇಷ ಬದಲಿಸಿ ರಾತ್ರಿಯ ಅಂತಿಮ ಜಾವವನ್ನು ಹಗಲಿನಂತೆ ಕಳೆದ ಉಮರ್(ರ), ಹತ್ತು ಪಟ್ಟು ಲಾಭವಿದ್ದರೂ ತನ್ನ ವ್ಯಾಪಾರ ಸರಕನ್ನು ಬಡವರಿಗಾಗಿ ಮೀಸಲಿಟ್ಟ ಉಸ್ಮಾನ್(ರ), ತನ್ನ ಜ್ಞಾನವನ್ನು ಬಳಸಿ ಆಡಳಿತಗಾರರನ್ನು ತರಬೇತುಗೊಳಿಸಿ ಮಾದರಿ ಆಡಳಿತ ನಡೆಸಿದ ಹ. ಅಲಿ(ರ) ಜಗತ್ತಿನಲ್ಲಿರುವ ಎಲ್ಲಾ ನಾಯಕರಿಗೆ ದಾರಿ ದೀಪವಾಗಿದ್ದಾರೆ.

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …