Home / ವಾರ್ತೆಗಳು / 123 ಕೇಂದ್ರಗಳು, 1000 ಕಾರ್ಯಕರ್ತರು: ರಾಜ್ಯಾದ್ಯಂತ ಸೇವಾ ಚಟುವಟಿಕೆಯಲ್ಲಿ ನಿರತವಾಗಿರುವ ಜಮಾಅತೆ ಇಸ್ಲಾಮೀ ಹಿಂದ್

123 ಕೇಂದ್ರಗಳು, 1000 ಕಾರ್ಯಕರ್ತರು: ರಾಜ್ಯಾದ್ಯಂತ ಸೇವಾ ಚಟುವಟಿಕೆಯಲ್ಲಿ ನಿರತವಾಗಿರುವ ಜಮಾಅತೆ ಇಸ್ಲಾಮೀ ಹಿಂದ್

ಬೆಂಗಳೂರು, ಏಪ್ರಿಲ್ 3- ಕೊರೋನಾದ ಕಾರಣದಿಂದ ರಾಜ್ಯಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಯಲ್ಲಿರುವ ಜನರ ನೆರವಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತೊಡಗಿಸಿಕೊಂಡಿದೆ. ಬೀದರ್ ನಿಂದ ಚಾಮರಾಜ ನಗರದವರೆಗೆ ಸುಮಾರು 123 ರಿಲೀಫ್ ಕೇಂದ್ರಗಳನ್ನು ಮಾಡಿಕೊಂಡು ಜಮಾಅತ್ ಪರಿಹಾರ ಕಾರ್ಯಗಳಲ್ಲಿ ನಿರತವಾಗಿದೆ.

ಮುಖ್ಯವಾಗಿ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಬೀದಿಬದಿಯಲ್ಲಿ ಮಲಗುವವರು, ಬಡವರು, ವಲಸೆ ಕಾರ್ಮಿಕರು, ಹಕ್ಕಿಪಿಕ್ಕಿ ಜನಾಂಗಗಳು ಮುಂತಾದವರಿಗೆ ರೇಷನ್ ತಲುಪಿಸುವ ಮತ್ತು ಊಟ ವಿತರಿಸುವ ಕೈಂಕರ್ಯದಲ್ಲಿ ಜಮಾಅತ್ ತೊಡಗಿಸಿಕೊಂಡಿದೆ. ಜೊತೆಗೆ ಕೊರೋನಾದ ಕುರಿತಂತೆ ಜಾಗೃತಿಯನ್ನೂ ಮೂಡಿಸುತ್ತಿದೆ. ಬೆಂಗಳೂರಿನಲ್ಲಿ ಜಮಾಅತ್ ರಾಜ್ಯ ಕಾರ್ಯದರ್ಶಿ ಡಾ/ ತಾಹಾ ಮತೀನ್ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳನ್ನು ಸೇರಿಸಿಕೊಂಡು ಮರ್ಸಿ ಮಿಷನ್ ಎಂಬ ವೈದ್ಯರ ಸೇವಾ ತಂಡವನ್ನು ರಚಿಸಲಾಗಿದ್ದು ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಇದು ಕಾರ್ಯನಿರತವಾಗಿದೆ. ಕೊರೋನಾ ಪೀಡಿತರನ್ನು ಮತ್ತು ಅವರ ಕುಟುಂಬವನ್ನು ಕೇಂದ್ರೀಕರಿಸಿ ಈ ತಂಡ ಕಾರ್ಯಾಚರಿಸುತ್ತಿದೆ. ಹಾಗೆಯೇ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಿಡ್ನಿ ಕಾಯಿಲೆಯಂತಹ ನಿತ್ಯ ರೋಗಿಗಳ ಡಯಾಲಿಸಿಸ್ ಸೇರಿದಂತೆ ರೋಗಿಗಳಿಗೆ ಔಷಧಿ ವಿತರಣೆ ಮುಂತಾದುವುಗಳಲ್ಲಿಜಮಾಅತ್ ತನ್ನ ಕೊಡುಗೆಯನ್ನು ನೀಡುತ್ತಿದೆ.

ಜೊತೆಗೆ, ಮಾರುಕಟ್ಟೆ ಇತ್ಯಾದಿ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತಂತೆ ಜನಜಾಗೃತಿಯನ್ನು ಮೂಡಿಸುತ್ತಿದೆ. ಜಮಾ ಅತ್ ನ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕರ್ತರು ರಾಜ್ಯಾದ್ಯಂತ ಸೇವಾ ಕಾರ್ಯದಲ್ಲಿ ನಿರತರಾಗಿದ್ದು,ಈ ಎಲ್ಲ ಚಟುವಟಿಕೆಗಳು ಜಮಾಅತೆ ಇಸ್ಲಾಮೀ ಹಿಂದ್ ನ ಸೇವಾ ವಿಭಾಗವಾದ HRS (ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ)ನ ಅಧೀನದಲ್ಲಿ ನಡೆಯುತ್ತಿದೆ.

HRS ತಂಡಕ್ಕೆ ಸೇವಾ ಚಟುವಟಿಕೆ ಹೊಸತಲ್ಲ. ಪ್ರವಾಹ, ಅನಾಹುತ ಸಹಿತ ಸಂಕಷ್ಟಗಳ ಸಂದರ್ಭಗಳನ್ನು ಎದುರಿಸುವುದಕ್ಕಾಗಿಯೇ ಅದು ಹುಟ್ಟಿಕೊಂಡಿದೆ. ಕಳೆದ ವರ್ಷ ಕೇರಳದಲ್ಲಿ ಪ್ರವಾಹ ಉಂಟಾದಾಗ ಸುಮಾರು 50 ಮಂದಿಯ ತಂಡ ಎರಡು ವಾರಗಳ ಕಾಲ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಅಸ್ಸಾಮ್ ಪ್ರವಾಹದ ಸಂದರ್ಭದಲ್ಲೂ ತನ್ನ ಕಾರ್ಯಕರ್ತರನ್ನು ಕಳುಹಿಸಿಕೊಟ್ಟಿತ್ತು. ಕೊಡಗಿನಲ್ಲಿ ಕಾಣಿಸಿಕೊಂಡ ಪ್ರವಾಹಕ್ಕೆ ತನ್ನ 300ಕ್ಕಿಂತಲೂ ಅಧಿಕ ಕಾರ್ಯಕರ್ತರನ್ನು ಅದು ಸಕ್ರಿಯ ಗೊಳಿಸಿತ್ತು. ಇಲ್ಲಿ ಸುಮಾರು 50 ಮನೆಗಳನ್ನು ದಾನಿಗಳ ಸಹಕಾರದಿಂದ ಪೀಡಿತರಿಗೆ ನಿರ್ಮಿಸಿಕೊಟ್ಟಿತ್ತು. HRS ನಲ್ಲಿ ತರಬೇತಿ ಪಡೆದ ಸಿದ್ಧ ಕಾರ್ಯಕರ್ತರ ಪಡೆಯಿದೆ. ಅವಘಡದ ಸಂದರ್ಭದಲ್ಲಿ ಅದು ಕಾರ್ಯನಿರತವಾಗುತ್ತದೆ.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …