Home / ವಾರ್ತೆಗಳು / ಲಾಠಿಯೇ ಎಲ್ಲವೂ ಅಲ್ಲ; ಮಾನವೀಯ ಸ್ಪಂದನೆಯ ಮೂಲಕ ಜನಮನ ಗೆದ್ದ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್: ಜನರ ಮೆಚ್ಚುಗೆ

ಲಾಠಿಯೇ ಎಲ್ಲವೂ ಅಲ್ಲ; ಮಾನವೀಯ ಸ್ಪಂದನೆಯ ಮೂಲಕ ಜನಮನ ಗೆದ್ದ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್: ಜನರ ಮೆಚ್ಚುಗೆ

ಚಿಕ್ಕಮಗಳೂರು, ಏಪ್ರಿಲ್ 5- ಲಾಠಿ ಏಟು, ಬೈಗುಳ, ಥಳಿತ ಇತ್ಯಾದಿಗಳೇ ಪೊಲೀಸ್ ಇಲಾಖೆಯಲ್ಲ ಎಂಬುದು ಅಲ್ಲಲ್ಲಿಂದ ವ್ಯಕ್ತವಾಗುತ್ತಿದೆ. ನಾಗರಿಕರ ಪಾಲಿಗೆ ಇದು ಬಹುದೊಡ್ಡ ಭರವಸೆ. ಚಿಕ್ಕಮಗಳೂರಿನ ನಗರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಾನವೀಯ ಕಾರ್ಯಗಳು ನಾಗರಿಕರಿಂದ ಪ್ರಶಂಸೆಗೆ ಪಾತ್ರವಾಗಿವೆ. ಲಾಕ್ ಡೌನ್ ನ ಬಳಿಕ ಲಾಠಿಯೇ ಸುದ್ದಿಯಲ್ಲಿರುವಾಗ ಚಿಕ್ಕ ಮಗಳೂರು ನಗರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರು ಮಾನವೀಯ ಸ್ಪಂದನೆಯ ಮೂಲಕ ಜನಮನ ಗೆದ್ದಿದ್ದಾರೆ.

ಲಾಕ್ ಡೌನ್ ನಿಂದಾಗಿ ನಾಗರಿಕ ಸಮಾಜ ಅನುಭವಿಸುತ್ತಿರುವ ತೊಂದರೆಗಳು ಅಷ್ಟಿಷ್ಟಲ್ಲ. ಮುಖ್ಯವಾಗಿ ಭಿಕ್ಷುಕರು, ವಲಸೆ ಕಾರ್ಮಿಕರು, ಬಡವರು ಇದರ ನೇರ ಪರಿಣಾಮಕ್ಕೆ ತುತ್ತಾಗಿದ್ದಾರೆ. ಇವರ ಸಂಕಟ ಅರ್ಥವಾಗಬೇಕಾದರೆ, ಹೃದಯ ವಿಶಾಲವಾಗಿರಬೇಕು. ಸಮಸ್ಯೆಯನ್ನು ತೆರೆದು ನೋಡುವ ವ್ಯವಧಾನವೂ ಇರಬೇಕು. ಚಿಕ್ಕಮಗಳೂರು ನಗರ ವೃತ್ತ ನಿರೀಕ್ಷಕ ಸಲೀಮ್ ಅಬ್ಬಾಸ್ ಅವರು ಜನಮನ ಗೆದ್ದಿರುವುದು ಅವರ ಈ ಮಾನವೀಯ ಸ್ಪಂದನೆಗಾಗಿ. ನಗರದ ಪ್ರಮುಖ ರಸ್ತೆಗಳಲ್ಲಿ ಮುಚ್ಚಿರುವ ಅಂಗಡಿಗಳ ಬಾಗಿಲಲ್ಲಿ ಭಿಕ್ಷುಕರು, ನಿರ್ಗತಿಕರು ದಿಕ್ಕುಗಾಣದೆ ಕುಳಿತಿದ್ದನ್ನು ಕಂಡ ಅವರು ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಮಾಸ್ಕ್ ವಿತರಿಸಿದ್ದಾರೆ.

ನಗರದ ಎಂಜಿ ರಸ್ತೆಗೆ ನೀರು ಹಾಕಿ ಶುಚಿಗೊಳಿಸುತ್ತಿದ್ದ ನಗರಸಭೆಯ ಜೊತೆ ಅವರು ಕೈಜೋಡಿಸಿರುವುದು ನಾಗರಿಕರ ಪ್ರೀತಿಗೆ ಪಾತ್ರವಾಗಿದೆ. ಇದೇ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನವನ್ನು ಅವರು ನೀರಿನಿಂದ ಶುಚಿಗೊಳಿಸಿದ ವಿಡಿಯೋವನ್ನು ನಾಗರಿಕರೇ ವೈರಲ್ ಮಾಡಿದ್ದರು. ಕೂಲಿ ಕಾರ್ಮಿಕರು ವಾಸವಾಗಿರುವ ಶಾಂತಿನಗರ ಬಡಾವಣೆಗೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ಸಂಗ್ರಹಿಸಲಾಗಿದ್ದ ದಿನಸಿ ಸಾಮಗ್ರಿಗಳನ್ನು ಅನೇಕ ಮನೆಗಳಿಗೆ ಅವರು ಸಂಗಡಿಗರ ಜೊತೆ ವಿತರಣೆ ಮಾಡಿದ್ದಾರೆ.

ದಂಟರಮಕ್ಕಿ ಬಳಿ ಅನಾಥವಾಗಿದ್ದ ನಿರ್ಗತಿಕರನ್ನು ಸಾರ್ವಜನಿಕ ದೇಣಿಗೆಯಿಂದ ನಡೆಸಲಾಗುತ್ತಿರುವ ಸಹಾಯ ಹಸ್ತ ಎಂಬ ನಿರ್ಗತಿಕ ಕೇಂದ್ರಕ್ಕೆ ದಾಖಲಿಸಿದರಲ್ಲದೆ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಹಾಗೆಯೇ, ಬೀದಿ ವ್ಯಾಪಾರಿಗಳು, ಕೂಲಿಕಾರ್ಮಿಕಲ್ಲಿ ಸಾಮಾಜಕ ಅಂತರದ ಬಗ್ಗೆ, ಮಾಸ್ಕ್ ನ ಉಪಯೋಗದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಜೊತೆಗೆ ಅನಾರೋಗ್ಯ ಪೀಡಿತರನ್ನು ತನ್ನದೇ ವಾಹನದಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಾ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಹೇಗೆ ಮಾನವೀಯವಾಗಿ ಸ್ಪಂದಿಸಬಹುದು ಅನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೂ ಸುದ್ದಿ ಬರೆದು ಅವರನ್ನು ಕೊಂಡಾಡಿವೆ.

 

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …