Home / ವಾರ್ತೆಗಳು / 500 ವಲಸೆ ಕಾರ್ಮಿಕರಿಗೆ ಊಟ ಒದಗಿಸುತ್ತಿರುವ ವಿವೇಕ್ ನಗರ ಪೊಲೀಸ್ ಠಾಣೆ: ನೀವು ನಮ್ಮ ಅಥಿತಿಗಳು ಎಂದ ಇನ್ಸ್ ಪೆಕ್ಟರ್ ರಫೀಕ್

500 ವಲಸೆ ಕಾರ್ಮಿಕರಿಗೆ ಊಟ ಒದಗಿಸುತ್ತಿರುವ ವಿವೇಕ್ ನಗರ ಪೊಲೀಸ್ ಠಾಣೆ: ನೀವು ನಮ್ಮ ಅಥಿತಿಗಳು ಎಂದ ಇನ್ಸ್ ಪೆಕ್ಟರ್ ರಫೀಕ್

ಬೆಂಗಳೂರು, ಏಪ್ರಿಲ್ 5- ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರ ಅತಿರೇಕದ ವರ್ತನೆಯನ್ನು ಬಿಂಬಿಸುವ ವಿಡಿಯೋಗಳು ಮತ್ತು ಚಿತ್ರಗಳು ದೇಶಾದ್ಯಂತ ವರದಿಯಾಗುತ್ತಿರುವ ನಡುವೆಯೇ ಪೊಲೀಸ್ ಮಾನವೀಯತೆಯ ಚೂರು-ಪಾರು ಸುದ್ಧಿಗಳು ಕೂಡ ವರದಿಯಾಗುತ್ತಿವೆ. ಆದರೆ ಅತಿರೇಕದ ವರ್ತನೆಗಳಿಗೆ ಹೋಲಿಸಿದರೆ ಈ ಸುದ್ದಿಗಳು ವ್ಯಾಪಕವಾಗಿ ಹರಿದಾಡದೆ ಇರುವುದರಿಂದ ಪೊಲೀಸರನ್ನೆಲ್ಲ ಕೆಟ್ಟವರೆಂದು ನಂಬುವಂತಹ ಸನ್ನಿವೇಶ ಎದುರಾಗಿದೆ. ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಸಿಬಂದಿಗಳು ಈ ಹಿನ್ನೆಲೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

ಸರಕಾರ ಲಾಕ್ ಡೌನ್ ಘೋಷಿಸಿದ ದಿನದಿಂದ ಈ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಫೀಕ್ ಕೆ ಎಂ ಮತ್ತು ಸಿಬಂದಿಗಳು ಮಾನವೀಯತೆಯ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಸುದ್ದಿಗೀಡಾಗಿದ್ದಾರೆ. ಲಾಕ್ ಡೌನ್ ಆದ ದಿನದಿಂದಲೇ ಜನರಿಗೆ ಊಟ ವಿತರಿಸುವ, ಸಂಕಷ್ಟಕ್ಕೆ ಒಳಗಾದವರನ್ನು ಪತ್ತೆಹಚ್ಚುವ ಕಾರ್ಯಗಳನ್ನು ಸ್ವಪ್ರೇರಣೆಯಿಂದ ಈ ಠಾಣೆ ವಹಿಸಿಕೊಂಡಿತ್ತು. ಇದರ ನೇತೃತ್ವವನ್ನು ಇನ್ಸ್ ಪೆಕ್ಟರ್ ರಫೀಕ್ ಕೆ ಎಂ ಅವರು ವಹಿಸಿಕೊಂಡಿದ್ದರು. ಕಳೆದ ಎಪ್ರಿಲ್ ಒಂದನೇ ತಾರೀಕಿನಂದು ತನ್ನ ಠಾಣಾ ಸರಹದ್ದಿನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಸರ್ವೆ ಮಾಡುವ ಕೆಲಸವನ್ನು ಮುಗಿಸಿ ಬೆಂಗಳೂರಿನ ಹಿರಿಯ ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗೆ ಠಾಣೆಯಿಂದ ಪತ್ರ ಬರೆಯಲಾಗಿತ್ತು. ಆ ಪತ್ರದ ಪ್ರಕಾರ,

ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಕರ್ನಾಟಕದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಠಾಣಾ ಸರಹದ್ದಿನಲ್ಲಿ ಠಾಣಾ ವ್ಯಾಪ್ತಿಯ ಬೇರೆಬೇರೆ ಕಡೆ ಚದುರಿಕೊಂಡು 385 ಮಂದಿ ಇದ್ದು, ಅವರೆಲ್ಲರಿಗೂ ಊಟದ ವ್ಯವಸ್ಥೆಯಾಗಬೇಕಾಗಿದೆ. ಕೆಲಸ ಇಲ್ಲದೇ ಇರುವುದರಿಂದ ಅಗತ್ಯದ ಊಟಕ್ಕೂ ದಿನಸಿ ವಸ್ತುಗಳ ಖರೀದಿಗೂ ಹಣಕಾಸಿನ ತೊಂದರೆ ಇದೆ. ಒಂದುವೇಳೆ,

ಅವರಿಗೆ ಊಟ ಒದಗಿಸದೇ ಇದ್ದಲ್ಲಿ ಅವರು ತಮ್ಮ ಸ್ವಂತ ಊರಿಗೆ ವಲಸೆ ಹೋಗುವ ಅಪಾಯವೂ ಇದೆ. ಆದ್ದರಿಂದ ಠಾಣಾ ಸರಹದ್ದಿನಲ್ಲಿ ವಾಸವಾಗಿರುವ ವಲಸೆ ಕೂಲಿ ಕಾರ್ಮಿಕರಿಗೆ ಅಗತ್ಯವಿರುವ ಊಟದ ವ್ಯವಸ್ಥೆ ಅಥವಾ ಪಡಿತರ ವ್ಯವಸ್ಥೆಯನ್ನು ಅವರು ಇರುವ ಸ್ಥಳಗಳಿಗೆ ಸರಬರಾಜು ಮಾಡಬೇಕು ಎಂದು ಇನ್ಸ್ ಪೆಕ್ಟರ್ ರಫೀಕ್ ಕೆ ಎಂ ಅವರು ಬೆಂಗಳೂರಿನ ಕಿರಿಯ ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಮತ್ತು ಅದರ ಪ್ರತಿಯನ್ನು ಬೆಂಗಳೂರಿನ ಪೊಲೀಸ್ ಮುಖ್ಯಸ್ಥರಿಗೂ ಕಳುಹಿಸಿಕೊಟ್ಟಿದ್ದರು.

ಇದರ ನಡುವೆಯೇ ಠಾಣಾ ಸರಹದ್ದಿನಲ್ಲಿ ಉಳಿದುಕೊಂಡಿರುವ ಕಾರ್ಮಿಕರನ್ನು ಸ್ವತಃ ಭೇಟಿಯಾಗಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರಲ್ಲದೆ ಸರಕಾರದ ಸಹಕಾರ ಬರುವ ಮೊದಲೇ ದಾನಿಗಳಿಂದ ಅಷ್ಟೂ ಮಂದಿಗೂ ಊಟ ಒದಗಿಸುವ ವ್ಯವಸ್ಥೆಯನ್ನು ಮಾಡಿದರು. ಈ ಸರಹದ್ದಿನ ಹೊರಗಡೆ ಸುಮಾರು ನೂರರಷ್ಟು ಕಾರ್ಮಿಕರು ಇದ್ದು, ಅವರಿಗೂ ಈ ಠಾಣೆಯ ವತಿಯಿಂದಲೇ ಆಹಾರ ಸರಬರಾಜು ಆಗುವಂತೆ ನೋಡಿಕೊಂಡರು. ಇದೀಗ,

ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ದಾನಿಯೊಬ್ಬರು ಮುಂದೆ ಬಂದಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೆ ಈ ಸುಮಾರು 500 ಮಂದಿಗೆ ಎರಡು ಹೊತ್ತಿನ ಊಟ ನೀಡುವುದಾಗಿ ಹೆಸರು ಹೇಳಲಿಚ್ಛಿಸದ ಆ ದಾನಿ ಭರವಸೆ ನೀಡಿದ್ದಾರೆ ಎಂದು ಇನ್ಸ್ ಪೆಕ್ಟರ್ ರಫೀಕ್ ಕೆ ಎಂ ಅವರು ತಿಳಿಸಿದ್ದಾರೆ. ಅದೇವೇಳೆ, ಬೆಳಗಿನ ಆಹಾರಕ್ಕಾಗಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ, ಎಣ್ಣೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅವರು ಸ್ವತಃ ಮುತುವರ್ಜಿ ವಹಿಸಿ ಎಲ್ಲಾ ಕಾರ್ಮಿಕರಿಗೂ ನೀಡಿದ್ದಾರೆ.

ಲಾಕ್ ಡೌನ್ ಮುಗಿಯುವವರೆಗೆ ನೀವು ಇಲ್ಲೇ ಇರಿ. ನೀವು ನಮ್ಮ ಅತಿಥಿಗಳು, ನಿಮಗೆ ಬೇಕಾದ ಎಲ್ಲಾ ಸೌಲಭ್ಯವನ್ನು ನಾವು ಒದಗಿಸಿಕೊಡುತ್ತೇವೆ ಎಂದು ಅವರು ಈ ಕಾರ್ಮಿಕರಲ್ಲಿ ಧೈರ್ಯ ತುಂಬುವ ವೀಡಿಯೋವೊಂದು ಇತ್ತೀಚಿಗೆ ಭಾರೀ ಪ್ರಶಂಸೆ ಗಿಟ್ಟಿಸಿತ್ತು. ಅವರ ಮಾತುಗಳನ್ನು ಕೇಳಿ ಕಾರ್ಮಿಕರು ಅಭಿಮಾನದಿಂದ ಮೆಚ್ಚಿಕೊಳ್ಳುವ ಮತ್ತು ತಾವು ಸುರಕ್ಷಿತ ಎನ್ನುವ ಭಾವನೆಯಿಂದ ಮಾತಾಡುವುದೂ ನಡೆದಿತ್ತು.

ಒಂದು ಕಡೆ ಪೊಲೀಸ್ ಲಾಠಿ ಏಟು, ಅತಿರೇಕದ ವರ್ತನೆಗಳು, ಬೈಗುಳ ಸುದ್ದಿಯಲ್ಲಿದ್ದರೆ ಇನ್ನೊಂದು ಕಡೆ ಅದೇ ಇಲಾಖೆಯು ಮಾನವೀಯ ಕಾರಣಕ್ಕಾಗಿಯೂ ಸುದ್ದಿಯಲ್ಲಿದೆ. ಜನರನ್ನು ತಿದ್ದುವುದಕ್ಕೆ ಲಾಠಿ ಒಂದೇ ಪರಿಹಾರ ಅಲ್ಲ, ಅದರಾಚೆಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಅವರ ಸಂಕಟಗಳಿಗೆ ಸ್ಪಂದಿಸುವ ಮತ್ತು ನೀವು ನಮ್ಮವರು ಎಂಬ ಭಾವನೆಯೊಂದನ್ನು ಅವರಲ್ಲಿ ಬಿತ್ತುವ ಮೂಲಕವೂ ಅವರನ್ನು ಗೆಲ್ಲಬಹುದು ಹಾಗೂ ಕಾನೂನಿನ ಪಾಲನೆಗೆ ಅವರನ್ನು ಪಕ್ಕಾಗಿಸಬಹುದು ಅನ್ನುವ ಸಂದೇಶವನ್ನು ವಿವೇಕನಗರ ಪೊಲೀಸ್ ಠಾಣೆ ರಾಜ್ಯಕ್ಕೆ ಒದಗಿಸಿದೆ. ಅದಕ್ಕಾಗಿ ಠಾಣಾ ವ್ಯಾಪ್ತಿಯ ಜನರು ಇನ್ಸ್ ಪೆಕ್ಟರ್ ರಫೀಕ್ ಅವರನ್ನು ಬಹಳವೇ ಮೆಚ್ಚಿಕೊಂಡಿದ್ದಾರೆ.

 

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …