Home / ವಾರ್ತೆಗಳು / ಸಂಗ್ರಹಿಸಿದ 36 ಲಕ್ಷ ರೂ. ‘ಝಕಾತ್’ ಈದುಲ್ ಫಿತ್ರ್ ದಿನ ‘ದಾನ’ವಾಗಿ ಊರಿನ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಘಟಕ ಕೊಡುಗೆ ನೀಡಿದ ಮುಸ್ಲಿಮರು

ಸಂಗ್ರಹಿಸಿದ 36 ಲಕ್ಷ ರೂ. ‘ಝಕಾತ್’ ಈದುಲ್ ಫಿತ್ರ್ ದಿನ ‘ದಾನ’ವಾಗಿ ಊರಿನ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಘಟಕ ಕೊಡುಗೆ ನೀಡಿದ ಮುಸ್ಲಿಮರು

ಮುಂಬೈ: ಮಹಾರಾಷ್ಟ್ರದ ಇಚಲ್ಕರಂಜಿ ಪಟ್ಟಣದಲ್ಲಿ ಮುಸ್ಲಿಮರು ಈದುಲ್ ಫಿತ್ರನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಜ್ಯದಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡವನ್ನು ಗಮನಿಸಿ ಇಲ್ಲಿನ ಮುಸ್ಲಿಮರು ಈದ್ ಸಂದರ್ಭ ನೀಡಲಾಗುವ ಝಕಾತ್ (ಕಡ್ಡಾಯ ದಾನ)  ಹಾಗೂ ಸದಖಾ ರೂಪದಲ್ಲಿ 36 ಲಕ್ಷ ರೂ. ಹಣವನ್ನು  ಇಂದಿರಾ ಗಾಂಧಿ ಸ್ಮಾರಕ ಸಿವಿಲ್ ಆಸ್ಪತ್ರೆಯಲ್ಲಿ  ತೀವ್ರ ನಿಗಾ ಘಟಕ ಸ್ಥಾಪಿಸಲು ಕೊಡುಗೆಯಾಗಿ ನೀಡಿದ್ದಾರೆ.

ಇವರ ಕೊಡುಗೆಯ ಫಲವಾಗಿ ಇದೀಗ ಕೊರೋನ ವಿರುದ್ಧ ಹೋರಾಡಲು ಹತ್ತು ಹಾಸಿಗೆಗಳ ಸರ್ವಸಜ್ಜಿತ  ಐಸಿಯು ಘಟಕ ಸಿದ್ಧಗೊಂಡಿದೆ. ಸುಸಜ್ಜಿತ ಐಸಿಯುವನ್ನು ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, “ಈ ಪಟ್ಟಣದ ಮುಸ್ಲಿಮರು ತಮ್ಮ ಉದಾತ್ತ ಕಾರ್ಯದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಲ್ಲಿಯ ತನಕ ನಾವು ಈ ಕೊರೋನ ವೈರಸ್ ಅನ್ನು ದಿಟ್ಟತನದಿಂದ ಹಾಗೂ ತಾಳ್ಮೆಯಿಂದ ಎದುರಿಸಿದ್ದೇವೆ. ಇದರ ವಿರುದ್ಧ ಹೋರಾಡಲು ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಹಬ್ಬಗಳನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕೆಂದು ಮುಸ್ಲಿಂ ಸಮುದಾಯ ತೋರಿಸಿಕೊಟ್ಟಿದೆ” ಎಂದರು.

ಮಹಾರಾಷ್ಟ್ರದ ಮ್ಯಾಂಚೆಸ್ಟರ್ ಎಂದೇ ಕರೆಯಲ್ಪಡುವ ಇಚಲ್ಕರಂಜಿ ಪಟ್ಟಣದ ಒಟ್ಟು 2.88 ಲಕ್ಷ ಜನ ಸಂಖ್ಯೆಯಲ್ಲಿ ಶೇ 78.32ರಷ್ಟು ಮಂದಿ ಹಿಂದುಗಳಾಗಿದ್ದರೆ, ಶೇ 15.98ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ. ಇಲ್ಲಿನ ಹೆಚ್ಚಿನ ಜನರು ವಿದ್ಯುತ್ ಮಗ್ಗಗಳಲ್ಲಿ ನೇಯುವ ವೃತ್ತಿಯವರು.

ಇತರ ಸರಕಾರಿ ಆಸ್ಪತ್ರೆಗಳಂತೆ ಇಲ್ಲಿನ ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಯೂ ಅನುದಾನದ ಕೊರತೆಯಿಂದ ನಲುಗುತ್ತಿತ್ತು. ಅಲ್ಲಿ ಸಾಕಷ್ಟು ಸೌಲಭ್ಯಗಳು ಹಾಗೂ ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಅತ್ತ ತಲೆ ಹಾಕುತ್ತಿರಲಿಲ್ಲ. ಇದೀಗ ಹೊಸ ಐಸಿಯು ಅಲ್ಲಿರುವುದರಿಂದ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆ ಬರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …