Home / ಲೇಖನಗಳು / ಯಾರು ಹಾಜಿ?

ಯಾರು ಹಾಜಿ?

ಅಮೀನುಲ್ ಹಸನ್
(ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ)
ಅನು: ಮುಖ್ತಾರ್ ಅಹ್ಮದ್, ಪಾಣೆಮಂಗಳೂರು

ಜಗತ್ತಿನ ದಶದಿಕ್ಕುಗಳಿಂದ ಹಾಜಿಗಳು ಮಕ್ಕಾದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತಂಡೋಪತಂಡವಾಗಿ ಅಲ್ಲಿಗೆ ತಲುಪುತ್ತಾರೆ. ವಾಸ್ತವದಲ್ಲಿ ಇದು ಅಲ್ಲಾಹನು ಹ. ಇಬ್ರಾಹೀಮ್(ಅ)ರಿಗೆ ಕೊಟ್ಟ ಆಜ್ಞೆಯ ಕರೆಯಾಗಿದೆ. “ಮತ್ತು ಜನರಿಗೆ ಹಜ್ಜ್ ಯಾತ್ರೆಗಾಗಿ ಸಾರ್ವತ್ರಿಕ ಕರೆ ನೀಡಿರಿ. ಅವರು ದೂರ ದೂರದ ಪ್ರದೇಶಗಳಿಂದೆಲ್ಲ ಕಾಲ್ನಡಿಗೆಯಲ್ಲೂ ಒಂಟೆಗಳ ಮೇಲೆ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ.” (ಅಲ್ ಹಜ್ಜ್: 27) ಅದಕ್ಕಾಗಿ ಜನರು ಲಬ್ಬೈಕ್ ಎನ್ನುತ್ತಾ ಯಾತ್ರೆ ಬೆಳೆಸುತ್ತಾರೆ. ಎಲ್ಲಾ ಕಡೆಯೂ ಒಂದೇ ಧ್ವನಿ ಮೊಳಗುತ್ತದೆ.

“ಓ ಅಲ್ಲಾಹ್, ನಾನು ಹಾಜರಿದ್ದೇನೆ. (ಹೌದು) ನಾನು ಹಾಜರಿದ್ದೇನೆ. ನಿನಗೆ ಸಹಭಾಗಿಯೂ ಇಲ್ಲ ಇದೋ ಹಾಜರಿದ್ದೇನೆ. ಸಕಲಸ್ತುತಿ, ಅನುಗ್ರಹಗಳು ಮತ್ತು ಅಖಿಲ ಪ್ರಭುತ್ವ ನಿನ್ನದು. ಇದರಲ್ಲಿ ನಿನ್ನ ಸಹಭಾಗಿ ಯಾರೂ ಇಲ್ಲ”.

ಈ ಘೋಷಣೆಯ ಮೂಲಕ ಒಂದು ರೀತಿಯ ಆಧ್ಯಾತ್ಮಿಕ ಯಾತ್ರೆ ಆರಂಭವಾಗುತ್ತದೆ. ಅದರೊಂದಿಗೆ ಭೌತಿಕವಾದ ಯಾತ್ರೆಯೂ ಚಾಲ್ತಿಯಲ್ಲಿರುತ್ತದೆ. ಇದರ ಬಗ್ಗೆ ತರಬೇತಿ ಮತ್ತು ಗೈಡ್ ಸಿಗುತ್ತದೆ. ಅದರಲ್ಲಿ ಯಾವ ಕರ್ಮ ಯಾವಾಗ, ಹೇಗೆ ಮಾಡಬೇಕೆಂದು ಕಲಿಸಿಕೊಡಲಾಗುತ್ತದೆ. ಆದರೆ ಆಧ್ಯಾತ್ಮಿಕ ಯಾತ್ರೆಯು ಬಹಳ ಸ್ಫೂರ್ತಿದಾಯಕವಾಗಿ ಆರಂಭವಾಗಬೇಕು. ಹೆಚ್ಚಿನವರು ಹಜ್ಜ್ ನ ಜೀವಾಳವಾದ ಆಧ್ಯಾತ್ಮಿಕ ಯಾತ್ರೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಹಜ್ಜ್ ನ ಜೀವಾಳವನ್ನೊಮ್ಮೆ ಪರಿಶೀಲಿಸೋಣ. ಮಿಖಾತ್ (ನಿಶ್ಚಿತಗಡಿ) ತಲುಪಿದಾಗ, ಸ್ನಾನ ಮಾಡಿ ಸಂಕಲ್ಪ ಮಾಡಿ ಇಹ್ರಾಮ್ ಬಟ್ಟೆ ಉಡಬೇಕು.

ಈ ಇಹ್ರಾಮ್ ಎಂದರೇನು? ತನ್ನ ಸಾಮಾನ್ಯ ಉಡುಗೆ ತೊಡುಗೆಗಳನ್ನು ಕಳಚಿ ಪುರುಷರು ಒಂದು ಪಂಚೆ ಮತ್ತು ಚಾದರ ಹಾಗೂ ಪಾದರಕ್ಷೆ(ಚಪ್ಪಲಿ)ಯ ಹೊರತು ಬೇರೇನೂ ಇಲ್ಲದ ಸಾತ್ವಿಕ ಉಡುಪು.

ನಾವು ಧರಿಸುವ ಬಟ್ಟೆ ನಮ್ಮ ಗುರುತಾಗಿರುತ್ತದೆ. ಧರಿಸಿದ ಬಟ್ಟೆ ನೋಡಿ ಆತನ ಪ್ರದೇಶ ಮತ್ತು ಜನಾಂಗವನ್ನು ಗುರುತಿಸಲಾಗುತ್ತದೆ. ಆದರೆ ಅಲ್ಲಾಹನ ದರ್ಬಾರಿಗೆ ತಲುಪುವಾಗ ಯಾವ ಐಡೆಂಟಿಟಿಯೂ ಇಲ್ಲ. ಎಲ್ಲ ಗುರುತುಗಳನ್ನು ದಫನ ಮಾಡಿ ಬಿಡಲಾಗುತ್ತದೆ. ಒಂದು ಅರ್ಥದಲ್ಲಿ ಅದು ಗೋರಿಯೊಳಗೆ ತಲುಪುವ ಅನುಭವ ನೀಡುತ್ತದೆ.

ಎರಡು ತುಂಡು ಬಿಳಿ ಬಟ್ಟೆಯೊಂದಿಗೆ ಹಾಜಿ ಮೀಖಾತ್‌ನಲ್ಲಿ ಇಳಿಯುತ್ತಾನೆ/ಳೆ. ಇದರ ಬಳಿಕ ಹಾಜಿಯ ಬಳಿ ಯಾವುದೇ ಐಡೆಂಟಿಟಿ ಇರುವುದಿಲ್ಲ. ಈ ಮೂಲಕ ಆಗ “ನಾನು” ಎಂಬ ಅಹಮನ್ನು ದಫನಗೊಳಿಸಿದ ಮಾತ್ರವಲ್ಲ, ಅಲ್ಲಾಹನ ದಾಸನೆಂಬ ಗುರುತಿನ ಹೊರತು, ಮತ್ತ್ಯಾವ ಗುರುತು ಆತನಿಗಿಲ್ಲ. ಆತ ಎಲ್ಲ ಕಡೆಗಳಲ್ಲೂ ಹಾಜಿ ಎಂದು ಕರೆಯಲ್ಪಡುತ್ತಾನೆ.

ನಿಶ್ಚಿತ ಗಡಿಯಿಂದ ಹೊರಟ ನಂತರವೂ ಪುನಃ ಲಬ್ಬೈಕ್ ಎಂಬ ತಲ್ಬಿಯಾ ಪ್ರಾರಂಭಿಸುತ್ತಾನೆ. ಬಹಳ ವೇಗವಾಗಿ ಪ್ರಯಾಣ ಮುಂದುವರಿಸುತ್ತಾನೆ. ಇದು ಮಹಶರ ಮೈದಾನದ ಕಡೆ ಓಡುವಂತಹ ದೃಶ್ಯವಾಗಿದೆ. ಎಲ್ಲರ ದಿಕ್ಕು, ಗುರಿ ಒಂದೇ ಆಗಿರುತ್ತದೆ. ಅಲ್ಲಾಹನ ಆರ್ಶ್ ನ ಕಡೆಗೆ ಹೋಗುತ್ತಾರೆ. ಅರ್ಶ್ ನ ಕೆಳಗೆ ಕಅಬ ಭವನವಿದೆ. ಮಾನವನ ಅಂತಿಮ ಯಾತ್ರೆಯೂ ಅರ್ಶ್ ನ ಕಡೆಗೇ ಆಗಿರುತ್ತದೆ.

ಮಕ್ಕಾ ತಲುಪಿದ ಬಳಿಕ ಆತನಿಗೆ ಸಮಾಧಾನವಾಗುವುದಿಲ್ಲ. ಆತ ತನ್ನ ಎಲ್ಲ ಅಗತ್ಯ ವಸ್ತುಗಳನ್ನು ಒಂದು ಕಡೆ ಅಥವಾ ಕೊಠಡಿಯಲ್ಲಿಟ್ಟು, ಮಸ್ಜಿದುಲ್ ಹರಮ್‌ನ ಕಡೆಗೆ ಧಾವಿಸುತ್ತಾನೆ. ಕಅಬ ಭವನ ಕಣ್ಣಾರೆ ಕಾಣುವಾಗ ಆತನ ಸ್ಥಿತಿ ವರ್ಣನಾತೀತವಾಗಿರುತ್ತದೆ. ರೋಮಾಂಚನವಾಗುತ್ತದೆ. ಆತ ಪ್ರೀತಿ ಮತ್ತು ಭಯದಿಂದ ಕಂಪಿತನಾಗುತ್ತಾನೆ. ಹಜರುಲ್ ಅಸ್ವದ್‌ನ ಕಡೆಗೆ ಮುಖ ಮಾಡಿ ಆಧ್ಯಾತ್ಮಿಕತೆಯಲ್ಲಿ ಮುಳುಗುತ್ತಾನೆ. ಇಡೀ ಜಗತ್ತನ್ನೇ ಮರೆತು ಬಿಡುತ್ತಾನೆ. ಕಣ್ಣಿನಿಂದ ಅಶ್ರುಧಾರೆ ಇಳಿಯಲಾರಂಭಿಸುತ್ತದೆ. ಏನು ಹೇಳಬೇಕು, ಹೇಳಬಾರದೆಂದು ಗೊತ್ತಾಗದೆ ಗದ್ಗದಿತನಾಗುತ್ತಾನೆ. ಪ್ರಫುಲ್ಲನಾಗುತ್ತಾನೆ. ಸಂತೋಷ ಪಡುತ್ತಾನೆ. ತನ್ನ ಗತಪಾಪಗಳನ್ನು ನೆನಪಿಸಿಕೊಳ್ಳುತ್ತಾನೆ. ಕಿಯಾಮತ್ ನಂದು ಅರ್ಶ್ ನ ಬಳಿ ತಲುಪಿದಾಗ ಇದೇ ಸ್ಥಿತಿ ಎದುರಾಗಬಹುದು… ಇನ್ಶಾ ಅಲ್ಲಾಹ್.

ಏಕೆಂದರೆ ಅಂದು ಪ್ರಭುವಿನ ಭೇಟಿಯಾಗುವ ದಿನವಾಗಿರುವುದು. ಆತನ ಪ್ರಭು ಆತನಿಂದ ಸಂತುಷ್ಟನಾಗುವನು. ಅದನ್ನು ಊಹಿಸಲೂ ಸಾಧ್ಯವಿಲ್ಲ. ತನ್ನ ಪಾಪಗಳನ್ನು ಸ್ಮರಿಸಿ ಪಶ್ಚಾತ್ತಾಪ ಪಟ್ಟು ಪುಟಿದೇಳುವನು. ತದನಂತರ ಆತ ತವಾಫ್ (ಪ್ರದಕ್ಷಿಣೆ) ಮಾಡಲು ಹೊರಡುತ್ತಾನೆ. ಹಜರುಲ್ ಅಸ್ವದ್ (ಕಪ್ಪು ಶಿಲೆಯ) ನಿಶ್ಚಿತ ಕೋನದಿಂದ ಪ್ರದಕ್ಷಿಣೆಗೆ ಅಣಿಯಾಗುವಾಗ, ಅದನ್ನು ಸ್ಪರ್ಶಿಸಿ, ಚುಂಬಿಸಿ ಅಥವಾ ದೂರದಿಂದ ಸನ್ನೆ ಮಾಡುತ್ತಾನೆ.

ಅದನ್ನೊಮ್ಮೆ ನಾವೆಲ್ಲ ಕಲ್ಪಿಸಿಕೊಂಡು ದರ್ಶಿಸುವಂತಾಗಬೇಕು. ಆ ದೃಶ್ಯವೂ ಅವಿಸ್ಮರಣೀಯ. ಕಪ್ಪು ಶಿಲೆಯನ್ನು ಕೈಯಿಂದ ಸ್ಪರ್ಶಿಸುವುದೆಂದರೆ ಅಲ್ಲಾಹನ ಕೈ ಹಿಡಿದಂತಹ ಅನುಭೂತಿಯಾಗುತ್ತದೆ. ಆತನ ಹಸ್ತದ ಮೇಲೆ ಕೈಯಿಟ್ಟು ಕರಾರು ಮಾಡುವಂತಹ ಭಾವನೆಯುಂಟಾಗಬೇಕು. ಇನ್ನು ಮುಂದೆ ನಿನ್ನ ಆಜ್ಞೆ, ನಿರ್ದೇಶನಗಳ ಪಾಲನೆ ಮಾಡುವ ಪ್ರಮಾಣ ಮಾಡುವಂತಹ ಪ್ರಜ್ಞೆಯುಂಟಾಗಬೇಕು. ನಿನ್ನ ಶಿಕ್ಷಣದ ಪ್ರಕಾರ ಅನುಸರಣೆ ಮಾಡುವ ಪ್ರತಿಜ್ಞೆ ಮಾಡಬೇಕು.

ಪ್ರದಕ್ಷಿಣೆ ಮಾಡುವಾಗ ಕಅಬ ಭವನ ತನ್ನ ಎಡಬದಿಯಲ್ಲಿರುತ್ತದೆ. ಅಲ್ಲಿ ಮನುಷ್ಯ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾನೆ. ಏಕೆಂದರೆ ವಿಶ್ವದ ಪ್ರತಿಯೊಂದು ಕಣ ಕಣವೂ, ಸೂರ್ಯ-ಚಂದ್ರ ಮಾತ್ರವಲ್ಲ ಬ್ರಹ್ಮಾಂಡದ ಎಲ್ಲ ಗ್ರಹಗಳೂ ಇದೇ ರೀತಿ Anti Clock ಆಗಿ ತಿರುಗುತ್ತವೆ. ಅಣುಗಳು(Atom) ಸಹ ತಮ್ಮ ಎಲೆಕ್ಟ್ರಾನ್‌ನೊಳಗೆ ಇದೇ ರೀತಿ ತಿರುಗುತ್ತದೆ. ಪ್ರತಿಯೊಬ್ಬ ಹಾಜಿಯೂ ಕಅಬ ಭವನ ತಲುಪಿ, ಇದೇ ರೀತಿ ತಿರುಗುತ್ತಾ, ನಾನು ಕೂಡ ಈ ವಿಶ್ವದೊಂದಿಗೆ ಸೇರಿಕೊಂಡಿದ್ದೇನೆ, ಅದಕ್ಕೆ ನಾನು ಬದ್ಧನಾಗಿದ್ದೇನೆಂದು ಘೋಷಣೆ ಮಾಡುತ್ತಾನೆ. ಅಲ್ಲಾಹನ ಅನುಸರಣೆ ಮಾಡುವುದರಲ್ಲಿ ಪೈಪೋಟಿ ನಡೆಸುತ್ತಾನೆ. ಈ ಮೂಲಕ ಅಲ್ಲಾಹನ ಮೇಲಿನ ಪ್ರೀತಿಯನ್ನು ಪ್ರಕಟಪಡಿಸುತ್ತಾನೆ. ಅಲ್ಲಾಹನೇ ನನ್ನ ಕೇಂದ್ರ ಬಿಂದು.

ಈ ರೀತಿ ಅವನು ತನ್ನ ಧರ್ಮವನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಏಕನಿಷ್ಠೆಯಿಂದ ಅಲ್ಲಾಹನ ದಾಸ್ಯಾರಾಧನೆ ಮಾಡಬೇಕು. ಹೀಗೆಯೇ ಮುಂದಿನ ಜೀವನವನ್ನು ಕಳೆಯಬೇಕು. ಅಲ್ಲಾಹನ ಸಂಪ್ರೀತಿಯನ್ನು ಮುಂದಿಟ್ಟುಕೊಂಡು ಪ್ರತಿಯೊಂದು ನಿರ್ಧಾರ, ತೀರ್ಮಾನಗಳನ್ನು ಮಾಡಿ ಬದುಕಬೇಕು. ಆತ ಅಲ್ಲಾಹನ ಪ್ರೇಮದಲ್ಲಿ ಭಾವುಕನಾಗಿ ಮೈಮರೆತುಕೊಳ್ಳುತ್ತಾನೆ. ಏಳು ಬಾರಿಯ ಪ್ರದಕ್ಷಿಣೆಯ ಅರ್ಥ ಪರಿಪೂರ್ಣತೆಯ ಸಂಕೇತ. ಏಳು ಆಕಾಶ-ಏಳು ಭೂಮಿ ಅಂದರೆ ಸಕಲ ಆಕಾಶಗಳು ತಿರುಗುವಂತೆ ನಾನೂ ಅಲ್ಲಾಹನ ನಿಯಮ ನಿರ್ದೇಶನಗಳ ಪ್ರಕಾರ ಚಲಿಸುತ್ತಿದ್ದೇನೆ. ಸೂರ್ಯ, ಚಂದ್ರ, ಬ್ರಹ್ಮಾಂಡ ನಿನ್ನ ಆಜ್ಞೆಯ ಪ್ರಕಾರ ತಿರುಗುವುದಾದರೆ ನಾನೂ ಸಿದ್ಧನೆಂಬ ಪ್ರೇಮ ಪ್ರಕಟನೆಯಾಗಿದೆ. ತನ್ನ ಮುಂದಿನ ಇಡೀ ಜೀವನವೂ ನೀನು ತೋರಿಸಿ ಕೊಟ್ಟ ಹಾದಿಯ ಪ್ರಕಾರ ಸುತ್ತುವೆನು ಎಂಬ ಪ್ರತಿಜ್ಞೆಯಾಗಿದೆ. ಇದು ಪ್ರೇಮಿಯೊಬ್ಬನ ಅನುಸರಣೆಯ ಪ್ರಮಾಣವಾಗಿದೆ. ತನ್ನ ಪ್ರತಿಯೊಂದು ಕರ್ಮದ ಲಕ್ಷ್ಯ ಅಲ್ಲಾಹನಾಗಿದ್ದಾನೆ. ಅಲ್ಲಾಹನ ಇಷ್ಟದ ಪ್ರಕಾರ ಆಗಿರಬೇಕು.

 

ತವಾಫ್ ಆದ ತಕ್ಷಣ ಹಾಜಿಯು ಮಕಾಮು ಇಬ್ರಾಹೀಮ್‌ನ ಬಳಿ ನಿಂತು ಎರಡು ರಕಅತ್ ತವಾಫ್‌ನ ನಫಿಲ್ ನಮಾಝ್’ ನಿರ್ವಹಿಸುತ್ತಾನೆ. ಪ್ರಥಮ ರಕಅತ್‌ನಲ್ಲಿ ಸೂರಃ ಕಾಫಿರೂನ್ ಮತ್ತು ಎರಡನೇ ರಕಅತ್‌ನಲ್ಲಿ ಸೂರಃ ಇಖ್ಲಾಸ್ ಪಠಿಸುತ್ತಾನೆ. ಇದರ ಬಗ್ಗೆ ಪವಿತ್ರ ಕುರ್‌ಆನ್ ಹೇಳುತ್ತದೆ, “ಇಬ್ರಾಹೀಮರು ಆರಾಧನೆಗಾಗಿ ನಿಲ್ಲುವ ಸ್ಥಾನವನ್ನು ನೀವು ಸ್ಥಿರವಾದ ನಮಾಝ್ ನ ತಾಣವನ್ನಾಗಿಸಿಕೊಳ್ಳಿರಿ.” (2: 125)

ಇದರರ್ಥ ಹ. ಇಬ್ರಾಹೀಮ್(ಅ)ರ ಸ್ಥಾನಕ್ಕೆ ತಲುಪಿರಿ. ಅವರು ಪರೀಕ್ಷೆಗಳಲ್ಲಿ ವಿಜಯಗಳಿಸಿದರು. ತ್ಯಾಗ ಬಲಿದಾನ ನೀಡಿದರು. ಅವರು ನಿಷ್ಕಳಂಕರಾಗಿ ಏಕಾಗ್ರತೆಯೊಂದಿಗೆ ಜೀವನ ಸಾಗಿಸಿದ್ದರು.ಬಹುದೇವ ವಿಶ್ವಾಸದಿಂದ ದೂರ ನಿಂತರು. ಕುಟುಂಬವನ್ನು ತರಬೇತುಗೊಳಿಸಿದರು. ಸ್ವಪ್ನದಲ್ಲಿ ಅಲ್ಲಾಹನು ಬಯಸಿದಂತೆ ತನ್ನ ಪುತ್ರನ ಬಲಿಯರ್ಪಣೆಗೂ ಸಿದ್ಧರಾದರು. ಈ ರೀತಿ ಮಕಾಮು ಇಬ್ರಾಹೀಮ್ ಬಳಿ ನಿಂತು ಎರಡು ರಕಅತ್ ನಮಾಝ್ ನಿರ್ವಹಿಸುವುದರಿಂದ ತವಾಫ್ ಪೂರ್ಣಗೊಳ್ಳುತ್ತದೆ. ಆದರೆ ಅಲ್ಲಿಗೆ ತಲುಪಿದಾಗ ಹ. ಇಬ್ರಾಹೀಮ್(ಅ)ರ ಸ್ವಭಾವ,ಚಾರಿತ್ರ್ಯವನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಮಾತ್ರವಲ್ಲ ಹ. ಇಸ್ಮಾಯಿಲ್ ಮತ್ತು ಹ.ಹಾಜಿರಾ(ಅ)ರನ್ನು ಸ್ಮರಿಸಿಕೊಳ್ಳಬೇಕು. ನಾವು ಒಬ್ಬ ವ್ಯಕ್ತಿಯಾಗಿ ಹಜ್ಜ್ ಕರ್ಮ ನಿರ್ವಹಿಸುವಾಗಲೂ ಈ ಮೂವರ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಆಗ ಅವರಲ್ಲಿದ್ದಂತಹ ಭಾವನೆಗಳು ನಮ್ಮಲ್ಲೂ ಉಂಟಾಗುತ್ತದೆಯೇ ಎಂದು ಅವಲೋಕನ ನಡೆಸಬೇಕು.

ಇಬ್ರಾಹೀಮ್(ಅ)ರ ಮುಸಲ್ಲಾದ ಮೇಲೆ ನಿಂತು ಹಾಜಿ ನಮಾಝ್ ಮಾಡುವಾಗ ಮೊದಲ ರಕಅತ್‌ನಲ್ಲಿ ಕುಲ್ ಯಾ ಅಯ್ಯುಹಲ್ ಕಾಫಿರೂನ್ ಪಠಿಸುತ್ತಾ, ಸತ್ಯನಿಷೇಧ ಮತ್ತು ಬಹುದೇವ ವಿಶ್ವಾಸವನ್ನು ನಿರಾಕರಿಸುತ್ತಾನೆ. ಎರಡನೇ ರಕಅತ್‌ನಲ್ಲಿ ಸೂರಃ ಇಖ್ಲಾಸ್ ಪಠಿಸಿ, ತೌಹೀದ್ (ಏಕ ದೇವವಿಶ್ವಾಸ) ಘೋಷಿಸುತ್ತಾನೆ.ಇದು ತವಾಫ್ (ಪ್ರದಕ್ಷಿಣೆಯ)ನ ಸ್ಫೂರ್ತಿಯಾಗಿದೆ.

ಅದರ ನಂತರ ಝಮ್ ಝಮ್‌ನ ಬಾವಿಯ ಬಳಿಗೆ ತಲುಪಿದಾಗ ಅಲ್ಲಿ ಹ. ಇಸ್ಮಾಯಿಲ್(ಅ) ನೆನಪಾಗಬೇಕು. ಎಲ್ಲಾ ಕಡೆಯಿಂದಲೂ ನಿರೀಕ್ಷೆಗಳು ಹುಸಿಗೊಂಡಾಗ, ಮಾನವನ ಎಲ್ಲ ಪ್ರಯತ್ನಗಳೂ ವಿಫಲಗೊಂಡಾಗ ಅಲ್ಲಾಹನ ಚಮತ್ಕಾರಗಳು ಪ್ರಕಟವಾಗುತ್ತವೆ. ಝಮ್ ಝಮ್ ನೀರು ಕುಡಿಯುವಾಗ ಇದನ್ನು ಸ್ಮರಿಸಬೇಕು. ನಮ್ಮ ಜೀವನದಲ್ಲೂ ಪೂರ್ತಿಗೊಳ್ಳದ ಆಕಾಂಕ್ಷೆಗಳು, ಪರಿಹಾರವಾಗದ ಸಮಸ್ಯೆಗಳು ಇದೇ ರೀತಿ ಪರಿಹಾರವಾಗುವುದೆಂಬ ನಿರೀಕ್ಷೆ ನಮಗಿರಬೇಕು.

ಇದಾದ ಬಳಿಕ ಹಾಜಿ ಸಈ’ ಮಾಡಲು ಹೋಗುತ್ತಾನೆ. ಸಫಾ ಮತ್ತು ಮರ್ವಾ ಬೆಟ್ಟಗಳ ಮಧ್ಯೆ ಓಡಾಟ. ಅವುಗಳ ಮಧ್ಯೆ ಮುಕ್ಕಾಲು ಕಿಲೋ ಮೀಟರ್‌ಗಳ ಅಂತರವಿದೆ. ಇಲ್ಲೂ ಏಳು ಬಾರಿ ನಡೆಯಬೇಕಾಗುತ್ತದೆ. ಇದರರ್ಥ ಜೀವನ ಪರ್ಯಂತ ಇಂತಹ ಪ್ರಯತ್ನವನ್ನು ಮಾಡುವೆವು ಎಂಬ ಅಲ್ಲಾಹನ ಮೇಲಿನ ಪ್ರೇಮ ಪ್ರಕಟನೆಯಾಗಿದೆ. ಮಾತ್ರವಲ್ಲ ಮಾನವನ ಅಸ್ತಿತ್ವವನ್ನು ಉಳಿಸಲಿಕ್ಕಾಗಿ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಲು ಪ್ರಯತ್ನಿಸುವ ಹೆಸರಾಗಿದೆ ಸಈ’.

ಹ. ಹಾಜಿರಾ(ಅ) ಈ ಬೆಟ್ಟಗಳನ್ನೇರಿ ಯಾವುದಾದರೂ ಯಾತ್ರಾ ತಂಡ ಕಾಣುವುದೋ? ಅನ್ನ ಪಾನೀಯ ಸಿಗುವುದೋ ಎಂಬ ಪ್ರಯತ್ನ ನಡೆಸಿದ್ದರು. ಅವರ ಮಗು ಇಸ್ಮಾಈಲ್(ಅ) ಹಸಿವಿನಿಂದ ಬಿಕ್ಕಳಿಸಿ ಅಳುತ್ತಿತ್ತು. ಅದನ್ನು ಮಾತೆ ಹಾಜಿರಾರಿಂದ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಅವರು ಪ್ರಯತ್ನ ನಡೆಸಿದ ಸ್ಥಳವನ್ನುಸಈ’ ಎನ್ನಲಾಗುತ್ತದೆ. ಮನುಷ್ಯರೊಂದಿಗಿನ ಪ್ರೀತಿ- ಮಮತೆಯ ಪ್ರಕಟನೆಯಾಗಿದೆ ಅದು. ಹಾಜಿರಾ ಆ ಪ್ರಯತ್ನವನ್ನು ಮಾಡಿ ತೋರಿಸಿದರು.

ತವಾಫ್ (ಪ್ರದಕ್ಷಿಣೆ) ಅಲ್ಲಾಹನೊಂದಿಗಿನ ಪ್ರೀತಿಯ ಪ್ರಕಟನೆಯಾದರೆ ಸಈ ಎಂಬುದು ಮನುಷ್ಯ ಪ್ರೇಮ ಮತ್ತು ಆತನ ಅಸ್ತಿತ್ವವನ್ನು ಬಾಕಿಯಾಗಿ ಉಳಿಸುವ ಪ್ರಯತ್ನದ ಹೆಸರಾಗಿದೆ. ಅದರ ಪರಿಣಾಮವನ್ನು ತೋರಿಸುವುದು ಅಲ್ಲಾಹನ ಚಮತ್ಕಾರವಾಗಿದೆ. ಎಷ್ಟೆಲ್ಲಾ ಸಾಧ್ಯವೋ, ಆ ಪ್ರಯತ್ನವನ್ನು ನಿಷ್ಕಳಂಕವಾಗಿ ಏಕಾಗ್ರತೆಯಿಂದ ಮಾಡಬೇಕು. ಆಗ ಅಸಾಧ್ಯವಾದುದನ್ನು ಅಲ್ಲಾಹನು ಸಾಧ್ಯವನ್ನಾಗಿ ಮಾಡಿ ಅನುಗ್ರಹಿಸುತ್ತಾನೆ. ಅದರಲ್ಲಿ ಸಮೃದ್ಧಿಯೂ ಇರುತ್ತದೆ.

ಸಫಾ ಅಂದರೆ ಪರಿಶುದ್ಧ. ಮನುಷ್ಯರಿಗಾಗಿ ಕೆಲಸ ಮಾಡುವಾಗ ಮನಸ್ಸು ಪರಿಶುದ್ಧವಾಗಿರಬೇಕು. ನಿಶ್ಶರ್ಥವಾದ ಪ್ರೀತಿ. ಅದರಲ್ಲಿ ಬೇರೇನೂ ಕಲಬೆರಕೆಗಳಿರಬಾರದು. ಹಾಗಾಗಿ ಆ ಬೆಟ್ಟದ ಹೆಸರು ಸಫಾ (ಪರಿಶುದ್ಧ) ಎಂದಾಗಿದೆ. ಅಲ್ಲಿಂದ ಆರಂಭವಾದ ನಡಿಗೆ ಮರ್ವಾ ಬೆಟ್ಟದ ಕಡೆಗೆ. ಮರ್ವಾ ಅಂದರೆ ಸಹಾನೂಭೂತಿ, ಅನುಕಂಪ, ದಾಕ್ಷಿಣ್ಯ, ಘನತೆ, ಗೌರವ. ಅದನ್ನು ಮರ್ವಾ ತಲುಪಿ ಮನುಷ್ಯ ತನ್ನೊಳಗೆ ಜೀವಂತಗೊಳಿಸುತ್ತಾನೆ. ತವಾಫ್‌ನಲ್ಲಿ ಅಲ್ಲಾಹನ ಪ್ರೀತಿ ಪ್ರಕಟಿಸಿದಂತೆ, ಸಈಯಲ್ಲಿ ಮಾನವಕುಲದ ಮೇಲೆ ಪ್ರೀತಿ ಪ್ರಕಟಿಸುತ್ತಾನೆ. ಏಳು ಬಾರಿ ಎರಡು ಬೆಟ್ಟಗಳ ಮಧ್ಯೆ ಓಡಿದ ಬಳಿಕ ಹೊರ ಬಂದು ತನ್ನ ತಲೆಗೂದಲನ್ನು ಕತ್ತರಿಸುತ್ತಾನೆ ಅಥವಾ ತಲೆ ಬೋಳಿಸುತ್ತಾನೆ. ನಾನು ಈ ತನಕ ಮಾಡಿದ ಪಾಪಗಳನ್ನು ಕಳಚಿ ಬಿಡುತ್ತೇನೆಂದು ತಲೆಗೂದಲನ್ನು ಕತ್ತರಿಸುತ್ತಾನೆ. “ಓ ಅಲ್ಲಾಹ್! ಈ ತನಕ ನಾನು ನನ್ನ ಸ್ವೇಚ್ಛೆಯ ಪ್ರಕಾರ ಜೀವಿಸುತ್ತಿದ್ದೆ. ಇನ್ನು ಮುಂದೆ ನನ್ನ ತಲೆಯ ಜುಟ್ಟನ್ನು ಹಿಡಿದು ನೇರ ಮಾರ್ಗದಲ್ಲಿ ಮುನ್ನಡೆಸು. ನನ್ನನ್ನು ಪುಣ್ಯದ ಮಾರ್ಗದಲ್ಲಿ ನಡೆಸು.”

ಹಜ್ಜ್ ಯಾತ್ರೆ ಓರ್ವ ಹೋರಾಟಗಾರನ (ಮುಜಾಹಿದ್) ಜೀವನ ನೆನಪಿಸುತ್ತದೆ. ಆತ ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟುಗಳಲ್ಲಿ ತಂಗುತ್ತಾನೆ. ಅಲ್ಲೂ ಸ್ಥಿರ ಕಟ್ಟಡಗಳನ್ನು ಕಟ್ಟಿಸಬಹುದಿತ್ತು. ಆದರೆ ಟೆಂಟುಗಳಲ್ಲಿ ನಿಲ್ಲಿಸಿ ತಾತ್ಕಾಲಿಕ ಜೀವನದಲ್ಲಿ ಪರಿಶ್ರಮ ನಡೆಸಬೇಕೆಂದು ಸ್ಮರಿಸಿಕೊಳ್ಳಬೇಕಾಗಿದೆ.

ಮಿನಾದಲ್ಲಿ ಮೂರು ಜಮರಾತ್‌ಗಳಿವೆ ಅಂದರೆ ಮೂರು ಪಿಶಾಚಿಗಳು ಅಥವಾ ಇಸ್ಲಾಮಿನ ಮೂರು ಶತ್ರುಗಳಿವೆ. ಅದು ಕೆಲವೊಮ್ಮೆ ರಟ್ಟೆ ಬಲದ ರೂಪದಲ್ಲಿ ಬಂದರೆ, ಇನ್ನು ಕೆಲವೊಮ್ಮೆ ಬುದ್ಧಿ ಶಕ್ತಿಯ ರೂಪದಲ್ಲಿ ಬರುತ್ತದೆ ಮತ್ತು ಧನ ಶಕ್ತಿಯ ರೂಪದಲ್ಲಿ ಎದುರಾಗುತ್ತದೆ. ಬಲಾಢ್ಯರು, ಧನಾಢ್ಯರು ಮತ್ತು ಬುದ್ಧಿಶಕ್ತಿಗಳಲ್ಲಿ ಎಲ್ಲ ಕಾಲದಲ್ಲೂ ಇಸ್ಲಾಮಿನ ಶತ್ರುಗಳಿದ್ದರು. ಅದಕ್ಕಾಗಿ ಸಾಂಕೇತಿಕವಾಗಿ ಜಮರಾತ್‌ನ ಮೇಲೆ ಕಲ್ಲೆಸೆದು ಇಸ್ಲಾಮಿನ ಶತ್ರುಗಳ ವಿರುದ್ಧ ಹೋರಾಡುತ್ತಾ ಇರುವೆನೆಂದು ಪ್ರತಿಜ್ಞೆ ಮಾಡಬೇಕಾಗಿದೆ. ಅನ್ಯಾಯದ ವಿರುದ್ಧ ಹೋರಾಡಿ, ಇಸ್ಲಾಮಿನ ಧ್ವಜವನ್ನು ಬಿಗಿಯಾಗಿ ಹಿಡಿಯುವೆನೆಂಬ ಕರಾರು ಮಾಡಬೇಕಾಗಿದೆ.

ಇವೆಲ್ಲ ಆದ ಬಳಿಕ ಪುನಃ ಆತ ತನ್ನ ಇಹ್ರಾಮಿನ ಬಟ್ಟೆಯನ್ನು ಕಳಚಿ ದೈನಂದಿನ ಸಾಮಾನ್ಯ ಉಡುಗೆ ತೊಡುಗೆಗಳೊಂದಿಗೆ ತನ್ನ ಕೇಂದ್ರಕ್ಕೆ (Head Quaters) ತಲುಪುತ್ತಾನೆ. ಪುನಃ ಮೀನಾಕ್ಕೆ ಹೋಗಿ ತಂಗುತ್ತಾನೆ. ಇದು ಒಬ್ಬ ಮುಸ್ಲಿಮನ ಹಜ್ಜ್ ಯಾತ್ರೆಯಾಗಿದೆ.

 

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …