Home / ಪ್ರಶ್ನೋತ್ತರ / ಬಲಿಮಾಂಸ ಇತರ ಧರ್ಮೀಯರಿಗೆ ನೀಡಬಹುದೇ?

ಬಲಿಮಾಂಸ ಇತರ ಧರ್ಮೀಯರಿಗೆ ನೀಡಬಹುದೇ?

ಈದುಲ್ ಅಝ್ಹಾಕ್ಕೆ ಸಂಬಂಧಿಸಿದ ಬಲಿ ಮಾಂಸವನ್ನು ಇತರ ಧರ್ಮೀಯರಿಗೆ ನೀಡುವ ಕುರಿತು ಇಸ್ಲಾಮಿನ ವಿಧಿಯೇನು?

ಈದುಲ್ ಅಝ್ಹಾ ಸಂದರ್ಭದಲ್ಲಿ ಮಾಡುವ ಪ್ರಾಣಿ ಬಲಿಯ ಮಾಂಸವನ್ನು ಮುಸ್ಲಿಮೇತರರಿಗೆ ನೀಡುವುದಕ್ಕೆ ಅನುಮತಿ ಇದೆಯೆಂದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯ. ಇದು ಪ್ರಬಲವೂ ಆಗಿದೆ.

ಮುಸ್ಲಿಮೇತರರಿಗೆ ಬಲಿ ಮಾಂಸ ನೀಡಬಾರದು ಎಂಬ ಪವಿತ್ರ ಕುರ್‌ಆನ್ ಸೂಕ್ತ ಅಥವಾ ಪ್ರವಾದಿ ವಚನಗಳು ಇಲ್ಲ. ನಿಯಮಗಳು ಸ್ಪಷ್ಟವಾಗಿ ಮೌಲ್ಯೀಕರಿಸದ ಅಥವಾ ನಿಷೇಧಿಸದ ಎಲ್ಲವೂ ಮೂಲಭೂತವಾಗಿ ಅನುಮತಿಸಲ್ಪಟ್ಟಿದೆ.

ಒಂದು ಕಾರ್ಯವನ್ನು ಅನುಮತಿಸಿಲ್ಲ ಅಥವಾ ನಿಷೇಧಿಸಲಾಗಿದೆ ಎಂದು ಹೇಳಲು ಇಸ್ಲಾಮೀ ಕಾನೂನಿನ ಪ್ರಕಾರ ಸ್ಪಷ್ಟವಾದ ಪುರಾವೆಗಳು ಇರಬೇಕು. ಅಬ್ದುಲ್ಲಾ ಬಿನ್ ಉಮರ್ ಮೊದಲಾದವರ ಕಾರ್ಯವಿಧಾನಗಳು ಮತ್ತು ಶೇಖ್ ಇಬ್ನು ಬಾಝ್ ಸೇರಿದಂತೆ ವಿದ್ವಾಂಸರ ನಿಲುವುಗಳೂ ಇದರ ಪರವಾಗಿದೆ. ನೆರೆಕರೆಯವರು, ಕುಟುಂಬಿಕರು, ಸಂಬಂಧಿಕರು, ಬಡವರು ಮೊದಲಾದವರಿಗೆ ಬಲಿ ಮಾಂಸ ನೀಡಬಹುದು.

ಶತ್ರುಗಳಲ್ಲದವರಿಗೆ ಒಳಿತು (ಬರ‍್ರ್) ಮಾಡುವುದನ್ನು ನಿಷೇಧಿಸಲಾಗಿಲ್ಲ ಎಂಬ ಪವಿತ್ರ ಕುರ್‌ಆನ್ ವಚನವು ವಿದ್ವಾಂಸರು ಉಲ್ಲೇಖಿಸುವ ಮೊದಲ ಪುರಾವೆ. “ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಅಲ್ಲಾಹನು ನ್ಯಾಯಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ.” (ಅಲ್ ಮುಮ್ತಹಿನ: 8)

ಉಲೂಹಿಯತ್‌ನ ಮಾಂಸವನ್ನು ನೆರೆಕರೆ, ಆಪ್ತರು ಹಾಗೂ ದರಿದ್ರರಾದ ಮುಸ್ಲಿಮೇತರರಿಗೆ ನೀಡುವುದು ಪವಿತ್ರ ಕುರ್‌ಆನ್ ಅಂಗೀಕರಿಸುವ ಒಳಿತು ಮತ್ತು ಪುಣ್ಯ (ಬರ‍್ರ್)ದಲ್ಲಿ ಸೇರುತ್ತದೆ. ಪ್ರಮುಖ ತಾಬಿಈ ವಿದ್ವಾಂಸರಾದ ಮುಜಾಹಿದ್ ಉದ್ಧರಿಸುತ್ತಾರೆ, ಪ್ರವಾದಿ ಅನುಚರರಾದ ಅಬ್ದುಲ್ಲಾ ಇಬ್ನು ಉಮರ್(ರ)ರ ಮನೆಯಲ್ಲಿ ಒಂದು ಆಡನ್ನು ಬಲಿ ನೀಡಲಾಯಿತು. ಇದನ್ನು ನೋಡಿದ ಅವರು, ‘ನಿಮ್ಮ ನೆರೆಮನೆಯ ಯಹೂದಿಗೆ ಮಾಂಸ ನೀಡಿದಿರಾ?’ ಎಂದು ಕೇಳಿದರು. ಬಳಿಕ ಅವರು ಹೇಳಿದರು, ‘ಪ್ರವಾದಿ(ಸ)ರು ಹೇಳುವುದನ್ನು ನಾನು ಕೇಳಿದ್ದೆ. ವಾರೀಸು ಸೊತ್ತಿನಲ್ಲಿ ನೆರೆಯವನಿಗೂ ಹಕ್ಕು ಇದೆ ಎಂದು ಭಾವಿಸುವ ರೀತಿಯಲ್ಲಿ ನೆರೆಯವರ ವಿಷಯದಲ್ಲಿ ಜಿಬ್ರೀಲ್ ನನಗೆ ಉಪದೇಶಿಸಿದ್ದರು.’ (ತಿರ್ಮಿದಿ 1943, ಇದು ಪ್ರಬಲವೆಂದು ಅಲ್ಬಾನಿ ದಾಖಲಿಸಿದ್ದಾರೆ.)

ಮುಸ್ಲಿಮರು ಬಲಿ ನೀಡಿದ ಮಾಂಸ ಮತ್ತು ಐಚ್ಛಿಕ ದಾನವನ್ನು ಮುಸ್ಲಿಮೇತರರಿಗೂ ನೀಡಬಹುದು ಎಂದು ಈ ಘಟನೆ ತಿಳಿಸಿಕೊಡುತ್ತದೆ. ಬಹುದೇವಾರಾಧಕರಾದ ತಾಯಿಗೆ ಹಣ ನೀಡಲು ಅಸ್ಮಾ ಬಿನ್ತ್ ಅಬೂಬಕರ್‌ರೊಂದಿಗೆ ಪ್ರವಾದಿ(ಸ) ಆದೇಶಿಸಿರುವರು. (ಬುಖಾರಿ 2946) ಸಂಬಂಧಗಳನ್ನು ಜೋಡಿಸಲು ಮುಸ್ಲಿಮೇತರರಿಗೆ ದಾನ ನೀಡಬಹುದೆಂದು ಈ ಹದೀಸ್ ಸೂಚಿಸುತ್ತದೆ. ಯಹೂದಿ ಮಹಿಳೆಗೆ ಆಯಿಶಾ(ರ) ರು ದಾನ ಮಾಡಿದ್ದು ಹದೀಸ್‌ಗಳಲ್ಲಿ ಕಾಣಬಹುದು. (ಮುಸ್ನದ್ ಅಹ್ಮದ್, 24815) ಇವೆಲ್ಲವೂ ಈ ವಿಷಯದಲ್ಲಿ ವಿದ್ವಾಂಸರು ಉದ್ಧರಿಸಿರುವ ಆಧಾರಗಳಾಗಿವೆ.

ಬಲಿ ಮಾಂಸ ಮುಸ್ಲಿಮೇತರರಿಗೆ ನೀಡಬಾರದು ಎಂದು ಇಮಾಮ್ ಶಾಫಿಈ ಅಭಿಪ್ರಾಯಪಟ್ಟಿರುವುದಾಗಿ ಮದ್‌ಹಬ್ ಗ್ರಂಥಗಳಲ್ಲಿ ಕಾಣಬಹುದು. (ತುಹ್‌ಫಾ, ಹಾಶಿಯತು ಇಬ್ನು ಖಾಸಿಂ) ಆದರೆ ಈ ನಿಲುವಿಗೆ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯಿಂದ ಆಧಾರ ಪ್ರಮಾಣಗಳನ್ನು ಉದ್ಧರಿಸಿಲ್ಲ. ಆದ್ದರಿಂದ ಈ ವಾದಕ್ಕೆ ಅಸ್ತಿತ್ವವಿಲ್ಲ. ಅದೇವೇಳೆ, ಕಡ್ಡಾಯವಲ್ಲದ ದಾನವನ್ನು ಮುಸ್ಲಿಮೇತರರಿಗೆ ನೀಡಬಹುದೆಂದು ಇಮಾಮ್ ಶಾಫಿಈ ಹೇಳಿರುವರು.

ದರಿದ್ರರಿಗೆ ಆಹಾರ ನೀಡುವವರನ್ನು ಅಲ್ಲಾಹನು ಪ್ರಶಂಸಿಸಿದ ಕುರ್‌ಆನ ವಚನವನ್ನು ಇಮಾಮ್ ಶಾಫಿಈ ಆಧಾರವಾಗಿ ಉಲ್ಲೇಖಿಸಿದ್ದಾರೆ. (ಕಿತಾಬುಲ್ ಉಮ್ಮ್) ಆದರೆ ಶಾಫಿಈ ಮದ್‌ಹಬ್‌ನ ಪ್ರಮುಖ ವಿದ್ವಾಂಸರಾದ ಇಮಾಮ್ ನವವಿ ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದೆಂದು ಸ್ಪಷ್ಟ ಪಡಿಸಿರುವರು. ಶಾಫಿಈ ಮದ್‌ಹಬ್‌ನ ಅಧಿಕೃತ ಕೃತಿಗಳಲ್ಲೊಂದಾದ ಶರಹುಲ್ ಮುಹದ್ದಬ್‌ನಲ್ಲಿ ಹೀಗೆ ಕಾಣಬಹುದು, “ಇಮಾಮ್ ಹಸನುಲ್ ಬಸ್ವರಿ, ಇಮಾಮ್ ಅಬೂಹನೀಫಾ ಮೊದಲಾದವರು ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದು ಎಂದು ಹೇಳಿರುವರು.”

ಮುಸ್ಲಿಮರಿಗೆ ಪ್ರಥಮ ಪ್ರಾಶಸ್ತ್ಯವೆಂದು ಇಮಾಮ್ ಮಾಲಿಕ್‌ರ ದೃಷ್ಟಿಕೋನ. ಶಾಫಿಈ ಮದ್‌ಹಬ್‌ನಲ್ಲಿ ಪ್ರಸ್ತಾವನೀಯವಾದ ಒಂದು ಅಭಿಪ್ರಾಯವನ್ನು ನಾನು ನೋಡಿಲ್ಲ. ಆದರೆ ಶಾಫಿಈ ಕರ್ಮಶಾಸ್ತ್ರದ ಒಟ್ಟು ಅಭಿಪ್ರಾಯವನ್ನು ಮುಂದಿರಿಸಿ ನೋಡುವಾಗ, ಐಚ್ಛಿಕವಾದ ಬಲಿ ಮಾಂಸ ಮುಸ್ಲಿಮೇತರರಿಗೆ ನೀಡುವುದು ಅನುಮತಿಸಲ್ಪಟ್ಟಿದೆ ಎಂದು ತಿಳಿಯಬಹುದು.

ಹರಕೆಯ ಮೂಲಕವೋ ಅಥವಾ ಇತರ ಕಡ್ಡಾಯವಾಗುವ ಬಲಿ ಮಾಂಸವನ್ನು ನೀಡಬಾರದು. (ಶರಹುಲ್ ಮುಹದ್ದಬ್ 8/316) ಶಾಫಿಈ ಕರ್ಮಶಾಸ್ತ್ರದಂತೆ ಈದುಲ್ ಅಝ್ಹಾದ ಬಲಿದಾನ ಕಡ್ಡಾಯವಲ್ಲ. ಪ್ರಬಲವಾದ ಸುನ್ನತ್ ಮಾತ್ರವಾಗಿದೆ. ಆದ್ದರಿಂದ ಮುಸ್ಲಿಮೇತರರಿಗೆ ನೀಡಬಹುದೆಂದು ಇಮಾಮ್ ನವವಿಯವರ ನಿಲುವು.

ಬಲಿಮಾಂಸ ಐಚ್ಛಿಕ ದಾನದಲ್ಲಿ ಸೇರುತ್ತದೆ. ದರಿದ್ರದ ಆಹಾರವಾಗಿಯೂ ಸಂಬಂಧಗಳನ್ನು ಗಟ್ಟಿಗೊಳಿಸುವ ದಾರಿಯಾಗಿಯೂ ಇದನ್ನು ಪರಿಗಣಿಸಬಹುದು. ಆದ್ದರಿಂದ ಶ್ರೇಷ್ಠ ವಿದ್ವಾಂಸರಾದ ಇಬ್ನು ಖುದಾಮ ಮುಸ್ಲಿಮೇತರರಿಗೂ ಬಲಿ ಮಾಂಸ ನೀಡಬಹುದೆಂದು ಅಭಿಪ್ರಾಯ ಪಟ್ಟಿರುವರು. “ಇದರಲ್ಲಿ ಮುಸ್ಲಿಮರಲ್ಲದವರನ್ನು ತಿನ್ನಿಸುವುದು ಅನುಮತಿಸಲ್ಪಟ್ಟಿದೆ. ಹಸನ್ ಅಬೂ ಝೌರುಮ್, ಹನಫಿ ಪಂಡಿತರು ಇದೇ ಅಭಿಪ್ರಾಯ ದಾಖಲಿಸಿರುವರು. ಏಕೆಂದರೆ ಅದು ಐಚ್ಛಿಕ ದಾನವಾಗಿದೆ. ಸುರಕ್ಷಿತ ಪೌರನಿಗೂ ಬಂಧಿತನಿಗೂ ಅದು ನೀಡಬಹುದು, ಬೇರೆ ಎಲ್ಲಾ ದಾನಗಳಂತೆ.” (ಇಬ್ನು ಖುದಾಮ, ಅಲ್ ಮುಗ್ನಿ 21/482)

ಆಧುನಿಕ ಸಲಫಿ ವಿದ್ವಾಂಸರಲ್ಲಿ ಪ್ರಮುಖರಾದ ಇಬ್ನು ಬಾಝ್ ಯುದ್ಧವಲ್ಲದ ಮುಸ್ಲಿಮೇತರನಿಗೆ, ಶಾಂತಿಯಿಂದ ಪರಸ್ಪರ ಕರಾರುಗಳಲ್ಲಿ ಒಟ್ಟು ಸೇರುವವರಿಗೆ, ಬಲಿಮಾಂಸ, ದಾನ ಧರ್ಮಗಳನ್ನು ನೀಡಬಹುದೆಂದು ಸ್ಪಷ್ಟಪಡಿಸಲಾಗಿದೆ. (ಮಜ್‌ಮುಉ ಫತಾವಾ ಇಬ್ನು ಬಾಸ್ 18/148)

‘ಪರಸ್ಪರ ಕರಾರಿನೊಂದಿಗೆ ಜೀವಿಸುವ ಮುಸ್ಲಿಮರಲ್ಲದವನಿಗೆ ಬಲಿ ಮಾಂಸ ನೀಡಬಹುದು.’ ಅವರ ದಾರಿದ್ರ‍್ಯ, ಕುಟುಂಬದೊಂದಿಗಿನ ಸಂಬಂಧ, ನೆರೆಕರೆ ಸಂಬಂಧ ಮೊದಲಾದ ಕಾರಣಗಳಿಂದ ಪರಸ್ಪರ ಮಮತೆ ಉಂಟಾಗಲು ಬಲಿ ಮಾಂಸ ನೀಡಲು ಅನುಮತಿಸಲಾಗಿದೆ. ಅಲ್ ಮುಮ್ತಹಿನ ಅಧ್ಯಾಯದ 8ನೇ ಸೂಕ್ತದ ವಿವರಣೆಯಲ್ಲಿ ಇದನ್ನು ಕಾಣಬಹುದು. (ಫತ್‌ವಾ ಸಂಖ್ಯೆ 1/424)

ಮುಸ್ಲಿಮರನ್ನು ಕೊಲ್ಲುವಂತಹ ಯುದ್ಧ ಶತ್ರುಗಳಲ್ಲದ ಮುಸ್ಲಿಮೇತರರಿಗೂ ಬಲಿ ಮಾಂಸ ನೀಡಬಹುದೆಂದು ಸ್ವಾಲಿಹುಬ್ನು ಉಸೈಮಿನ್ ಸ್ಪಷ್ಟಪಡಿಸಿರುವರು. (ಫತಾವಾ ಇಬ್ನು ಉಸೈಮಿನ್)

ದರಿದ್ರರಿಗೆ ಅನಾಥರಿಗೆ ನೀಡುವ ಐಚ್ಛಿಕ ದಾನ-ಧರ್ಮಗಳು, ಆಹಾರ ವಿತರಣೆ, ಇತರ ಸಹಾಯಗಳು, ನೆರೆ ಕರೆ ಸಂಬಂಧ ಮೊದಲಾದವುಗಳಲ್ಲಿ ಯಾವುದೇ ಧಾರ್ಮಿಕ ತಾರತಮ್ಯವನ್ನು ಪವಿತ್ರ ಕುರ್‌ಆನ್‌ನಲ್ಲಿ ಕಾಣುವುದು ಸಾಧ್ಯವಿಲ್ಲ. ವಿಭಿನ್ನ ನಂಬಿಕೆಗಳ ಜನರು ಪರಸ್ಪರ ಹತ್ತಿರದಲ್ಲಿ ವಾಸಿಸುವ ಸಾಮಾಜಿಕ ಪರಿಸರದಲ್ಲಿ ಮಾಂಸ ವಿತರಣೆ ಮೊದಲಾದ ವಿಷಯದಲ್ಲಿ ತೊಂದರೆ ಉಂಟಾಗುವ ರೀತಿಯ ತಾರತಮ್ಯ ತೋರಿಸುವುದು ಇಸ್ಲಾಮೀ ತತ್ವಗಳಿಗೆ ನಿಲುಕುವ ಮತ್ತು ಸಮೂಹದ ಉತ್ತಮ ಹಿತಾಸಕ್ತಿಗೆ ಗುಣಕರವಾದುದಲ್ಲ. ಆ ಅರ್ಥದಲ್ಲಿ ಐಚ್ಛಿಕ ದಾನವೆಂಬ ರೀತಿಯಲ್ಲಿ ಬಲಿಮಾಂಸ ಮುಸ್ಲಿಮರಲ್ಲದವರಿಗೂ ನೀಡಬಹುದೆಂದು ಇಬ್ನು ಖುದಾಮರಿಂದ ಇಬ್ನು ಬಾಝ್ ವರೆಗಿನ ವಿದ್ವಾಂಸರ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಹೇಳಬಹುದು.

 

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …