Home / ಲೇಖನಗಳು / ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು ವಿನಮ್ರ ಹೃದಯದಿಂದ ಕ್ಷಮಾಯಾಚನೆ ಮಾಡಬೇಕು. ಇದು ಇಹಲೋಕ ಮತ್ತು ಪರಲೋಕದ ಎಲ್ಲಾ ಒಳಿತುಗಳ ಬಾಗಿಲಿನ ಕೀಲಿಕೈ ಆಗಿದೆ. ಸತ್ಯವಿಶ್ವಾಸಿಗಳನ್ನು ಸ್ವರ್ಗದೆಡೆಗೆ ಕೊಂಡೊಯ್ಯುವ ಒಂದು ಪ್ರಬಲವಾದ ಅಸ್ತ್ರವಾಗಿದೆ.

ಇಸ್ತಿಗ್ ಫಾರ್ ಎಂಬುದು ನಾಲಗೆ, ಮನಸ್ಸು, ಹೃದಯ ಒಂದು ಸೇರಿ ಮಾಡುವಂತಹ ಆಧ್ಯಾತ್ಮಿಕ ದೇವಸ್ಮರಣೆಯಾಗಿದೆ. ಅದು ಮನುಷ್ಯನ ಮನಸ್ಸು ಮತ್ತು ಆತ್ಮವನ್ನು ಪಾಪಗಳಿಂದ ಶುದ್ಧೀಕರಿಸುತ್ತದೆ. ಇದು ಮನುಷ್ಯನನ್ನು ಅಲ್ಲಾಹನೊಂದಿಗೆ ನಿಕಟಗೊಳಿಸುವ, ಹೃದಯವನ್ನು ಮೃದುಗೊಳಿಸುವ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಲ್ಲಾಹನ ಕೆಲವೊಂದು ಗುಣನಾಮಗಳು ಕ್ಷಮೆಯ ವ್ಯವಹಾರಕ್ಕೆ ಸಂಬಂಧಿಸಿದೆ. ಗಫೂರ್ (ಪಾಪಗಳನ್ನು ಕ್ಷಮಿಸುವವನು), ಅಲ್ ಗಾಫಿರ್ (ಪಾಪಗಳನ್ನು ಕ್ಷಮಿಸುವವನು), ಅಲ್ ಗಫ್ಫಾರ್ (ಪಾಪಗಳನ್ನು ನಿರಂತರ ಕ್ಷಮಿಸುವವನು).

ಪ್ರವಾದಿ ಮುಹಮ್ಮದ್(ಸ) ಎಲ್ಲಾ ನಮಾಝ್ ನ ನಂತರ 3 ಬಾರಿ ಅಸ್ತಗ್ ಫಿರುಲ್ಲಾಹ್ ಎಂದು ಹೇಳುತ್ತಿದ್ದರು. ಪ್ರವಾದಿ ಮುಹಮ್ಮದ್(ಸ) ದಿನಂಪ್ರತಿ ಕೆಲವೊಮ್ಮೆ 100 ಕ್ಕಿಂತಲೂ ಹೆಚ್ಚು ಬಾರಿ ಅಲ್ಲಾಹನೊಂದಿಗೆ ಕ್ಷಮೆ ಯಾಚಿಸುತ್ತಿದ್ದರು. ಪ್ರವಾದಿ ಮುಹಮ್ಮದ್(ಸ)ರ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟಿತ್ತು.

“ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿ ಅವನಿಗೆ ಶರಣು ಹೋಗಿರಿ. ಅವನು ಒಂದು ನಿಶ್ಚಿತ ಕಾಲಾವಧಿಯವರೆಗೆ ನಿಮಗೆ ಉತ್ತಮ ಜೀವನಾಧಾರಗಳನ್ನು ನೀಡುವನು.” (ಪವಿತ್ರ ಕುರ್ ಆನ್ 11:3)

ನಿಂತುಕೊಂಡಿರುವಾಗಲೂ, ಕುಳಿತಿರುವಾಗಲೂ, ಮಲಗಿರುವಾಗಲೂ, ನಡೆಯುವಾಗಲೂ, ಅನಾವಶ್ಯಕವಾಗಿ ಮಾತನಾಡುವಾಗಲೂ, ನಿರರ್ಥಕ ವಿಷಯಗಳನ್ನು ಕೇಳುವಾಗ, ಅಶ್ಲೀಲ ದೃಶ್ಯಗಳನ್ನು ಕಾಣುವಾಗ, ವಿಜಯ ಹೊಂದಿದಾಗಲೂ, ಸೋಲಿನ ಸಮಯದಲ್ಲೂ, ಯಾತ್ರೆ ಮಾಡುವಾಗಲೂ, ಮನೆಯಲ್ಲಿರುವಾಗಲೂ, ವ್ಯರ್ಥ ಕೆಲಸ ಮಾಡುತ್ತಿರುವಾಗಲೂ, ದುಃಖದ ಸಂದರ್ಭದಲ್ಲಿ, ಆಘಾತ ಮತ್ತು ಅಪಘಾತಗಳು ಸಂಭವಿಸಿದಾಗ ಕ್ಷಮಾ ಯಾಚನೆ ಮಾಡುತ್ತಿರಿ. ಇದು ನಮ್ಮಜೀವನದ ಎಲ್ಲಾ ಸಮಸ್ಯೆಗಳಿಗೆ ಮತ್ತು ಕಷ್ಟಗಳಿಗೆ ಪರಿಹಾರವಾಗಿದೆ.

ಭವಿಷ್ಯದ ಬಗ್ಗೆ ಭಯಪಟ್ಟು ಯಾವುದೇ ಪ್ರಯೋಜನವಿಲ್ಲ. ದುಃಖಿತರಾದಾಗ, ತೊಂದರೆಗೊಳಗಾದ, ಬೇಸರಗೊಂಡಾಗ, ಮನಸ್ಸಿಗೆ ನೋವಾದಾಗ, ಖಿನ್ನರಾದಾಗ, ಗಾಬರಿಯಾದಾಗ, ಹತಾಶರಾದಾಗ, ನಿರಾಶರಾದಾಗ, ರೋಗಗಳು ಬಂದಾಗ, ತಪ್ಪುಗಳು ಮತ್ತು ನಷ್ಟಗಳು ಸಂಭವಿಸಿದಾಗ ಕ್ಷಮಾಯಾಚನೆ ಮಾಡುತ್ತ ಮನಸ್ಸನ್ನು ಶಾಂತಗೊಳಿಸಿರಿ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬಂದಾಗ ಮತ್ತು ಶೈತಾನನು ಮನಸ್ಸುಗಳಲ್ಲಿ ಪದೇಪದೇ ದುಷ್ಪ್ರೇರಣೆ ಉಂಟು ಮಾಡುವಾಗ ಕ್ಷಮಾಯಾಚನೆ ಮಾಡುತ್ತಾ ಧೈರ್ಯ ತುಂಬಿರಿ. ನಿಮಗೆ ವಿವಾಹವಾಗದಿದ್ದರೆ, ವಿವಾಹವಾಗಿ ಮಕ್ಕಳಿಲ್ಲದಿದ್ದರೆ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡುತ್ತಾ ಸಂಪೂರ್ಣ ಭರವಸೆಯೊಂದಿಗೆ ಪ್ರಾರ್ಥಿಸಿರಿ. ಕ್ಷಮಾಯಾಚನೆಗೆ ಮನುಷ್ಯನಿಗೆ ಬರುವಂತಹ ಎಲ್ಲಾ ವಿಪತ್ತುಗಳನ್ನು ತಡೆಯುವ ಶಕ್ತಿ ಇದೆ.

“ರಾತ್ರಿಯ ಕೊನೆಯ ಘಳಿಗೆಗಳಲ್ಲಿ ಅಲ್ಲಾಹನೊಡನೆ ಪಾಪ ವಿಮೋಚನೆಗಾಗಿ ಪ್ರಾರ್ಥಿಸುತ್ತಾರೆ.” (ಪವಿತ್ರ ಕುರ್ ಆನ್ 3:17)

ಮಾನವನ ಸನ್ಮಾರ್ಗಕ್ಕಾಗಿ ಇಹಲೋಕಕ್ಕೆ ಆಗಮಿಸಿದ ಎಲ್ಲಾ ಪ್ರವಾದಿಗಳು ಪಶ್ಚಾತ್ತಾಪದ ಮಹತ್ವ ಮತ್ತು ಕ್ಷಮಾಯಾಚನೆಯ ಪ್ರಾಮುಖ್ಯತೆಯನ್ನು ಬೋಧಿಸಿರುವುದಾಗಿ ಇಸ್ಲಾಮಿನ ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತದೆ.

ಆದಮ್(ಅ) ಸ್ವರ್ಗದಲ್ಲಿ ತಪ್ಪು ಮಾಡಿದಾಗ, ಯೂನುಸ್(ಅ) ಮೀನಿನ ಹೊಟ್ಟೆಯಲ್ಲಿ ಸಿಲುಕಿದಾಗ , ಮೂಸಾ(ಅ), ದಾವೂದ್(ಅ), ಸುಲೈಮಾನ್(ಅ) ,ನೂಹ್(ಅ)ರು ವಿವಿಧ ಸಂದರ್ಭಗಳಲ್ಲಿ ಕ್ಷಮಾಯಾಚನೆ ಮಾಡಿದ ಉದಾಹರಣೆಗಳನ್ನು ಪವಿತ್ರ ಕುರ್ ಆನ್ ಪರಿಚಯ ಪಡಿಸುತ್ತದೆ. ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್(ಅ) ಕಅಬಾ ಭವನ ನಿರ್ಮಿಸುವಾಗ ಅಲ್ಲಾಹನೊಂದಿಗೆ ಪಶ್ಚಾತ್ತಾಪ ಪಡುತ್ತಾ ಕಅಬಾ ಭವನವನ್ನು ನಿರ್ಮಿಸಿದರೆಂದು ಕುರ್ ಆನ್ ನಲ್ಲಿ ವಿವರಿಸಲಾಗಿದೆ.

ಹೂದ್(ಅ) ಹೇಳಿದರು: “ಓ ನನ್ನ ಜನಾಂಗ ಬಾಂಧವರೇ, ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ ಮತ್ತು ಪಶ್ಚಾತ್ತಾಪ ಪಟ್ಟು ಆತನ ಕಡೆಗೆ ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು ಮತ್ತು ನಿಮ್ಮ ಈಗಿನ ಶಕ್ತಿಗೆ ಇನ್ನಷ್ಟು ಶಕ್ತಿಯನ್ನು ವರ್ಧಿಸಿ ಕೊಡುವನು.” (ಪವಿತ್ರ ಕುರ್ ಆನ್ 11:53)

ಮಳೆಯಿಂದ ಬೆಳೆ ಉತ್ಪಾದನೆಯಾಗುತ್ತದೆ, ನದಿಯು ತುಂಬಿ ಹರಿಯುತ್ತದೆ. ಭೂಮಿಯ ಏಳಿಗೆ, ಆರ್ಥಿಕತೆಯ ಸೌಂದರ್ಯ ಮತ್ತು ಒಂದು ರಾಷ್ಟ್ರದ ಅಭಿವೃದ್ಧಿಯು ಮಳೆಯನ್ನು ಅವಲಂಭಿಸಿರುತ್ತದೆ.

ಒಮ್ಮೆ ಬರಗಾಲದ ಸಂದರ್ಭದಲ್ಲಿ ಉಮರ್(ರ) ಮಳೆಗಾಗಿ ಪ್ರಾರ್ಥಿಸಲು ಹೊರಟು ಕೇವಲ ಕ್ಷಮೆ ಯಾಚನೆ ಮಾಡಿದರು. ಜನರು ಕೇಳಿದರು – ಅಮೀರುಲ್ ಮೂಮಿನೀನ್! ತಾವು ಮಳೆಗಾಗಿ ಪ್ರಾರ್ಥಿಸಲೇ ಇಲ್ಲ. ಉಮರ್(ರ) ಹೇಳಿದರು- ನಾನು ಮಳೆ ಬರುವಂತಹ ಆಕಾಶದ ದ್ವಾರಗಳನ್ನೇ ತಟ್ಟಿದ್ದೇನೆ. ಅನಂತರ ನೂಹ್ ಅಧ್ಯಾಯದ ಈ ಸೂಕ್ತಗಳನ್ನು ಓದಿ ಕೇಳಿಸಿದರು. (ಇಬ್ನು ಜರೀರ್, ಇಬ್ನು ಕಸೀರ್)

ನೂಹ್(ಅ) ತಮ್ಮ ಜನಾಂಗದವರೊಡನೆ ಹೇಳಿದರು:
“ನಿಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ- ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳವಾಗಿ ಮಳೆ ಸುರಿಸುವನು, ನಿಮಗೆ ಸೊತ್ತು ಸಂತಾನಗಳನ್ನು ದಯಪಾಲಿಸುವನು, ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು.” (ಸೂರ ನೂಹ್ :10 – 12)

ಒಮ್ಮೆ ಹಸನ್ ಬಸರಿಯವರ ಸಭೆಯಲ್ಲಿ ಒಬ್ಬರು ಕ್ಷಾಮದ ಬಗ್ಗೆ ತೋಡಿಕೊಂಡರು. ಅದಕ್ಕೆ ಅವರು- ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಿರಿ ಎಂದುತ್ತರಿಸಿದರು. ಇನ್ನೊಬ್ಬರು ದಾರಿದ್ರ್ಯದ ಬಗ್ಗೆ , ಮತ್ತೊಬ್ಬರು ಮಕ್ಕಳಿಲ್ಲದ ಬಗ್ಗೆ ಮಗದೊಬ್ಬರು ತನ್ನ ಹೊಲದಲ್ಲಿ ಬೆಳೆ ಕಡಿಮೆಯಾಗಿರುವುದರ ಬಗ್ಗೆ ಹೇಳಿಕೊಂಡರು. ಅವರು ಪ್ರತಿಯೊಬ್ಬರಿಗೂ ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಿರಿ ಎಂದೇ ಉತ್ತರಿಸಿದರು. ಜನರು ಕೇಳಿದರು ತಾವು ಜನರ ಬೇರೆ ಬೇರೆ ದೂರುಗಳಿಗೆ ಒಂದೇ ಉತ್ತರ ನೀಡುತೀರಲ್ಲ. ಯಾಕೆ? ಆಗ ಅದಕ್ಕೆ ಉತ್ತರವಾಗಿ ಅವರು ನೂಹ್ ಅಧ್ಯಾಯದ ಇದೇ ಸೂಕ್ತಗಳನ್ನು ಓದಿ ಕೇಳಿಸಿದರು.

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಯಾವ ವ್ಯಕ್ತಿ ಇಸ್ತಿಗ್ ಫಾರನ್ನು (ಕ್ಷಮಾಯಾಚನೆ) ತನ್ನ ಮೇಲೆ ಕಡ್ಡಾಯ ಗೊಳಿಸುವನೋ ಅವನಿಗೆ ಅಲ್ಲಾಹನು ಎಲ್ಲ ಇಕ್ಕಟ್ಟುಗಳಿಂದ ಹೊರಬರಲು ದಾರಿ ಮಾಡಿಕೊಡುವನು. ಎಲ್ಲ ದುಃಖ ದುಮ್ಮಾನಗಳಿಂದ ಅವನಿಗೆ ಮುಕ್ತಿ ಕೊಡುವನು ಮತ್ತು ಅವನು ಊಹಿಸಿಯೂ ಇಲ್ಲದಿದ್ದ ಸ್ಥಳದಿಂದ ಅವನಿಗೆ ಜೀವನಾಧಾರ ಒದಗಿಸುವನು.”(ಅಬೂ ದಾವೂದ್)

✍️ಖದೀಜ ನುಸ್ರತ್

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …