Home / ಲೇಖನಗಳು / ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?

✍️ ಎ.ಕೆ.ಕುಕ್ಕಿಲ

ಕ್ರಿ.ಶ. 622, ಮುಹರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು?

ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. ಇಸ್ಲಾಮೀ ಇತಿಹಾಸದ ಬಹುಮುಖ್ಯ ಮಗ್ಗುಲಾದ ಹುದೈಬಿಯಾ ಒಪ್ಪಂದ ನಡೆದಿರುವುದು ದುಲ್ ಕಅದ್ 6ರಂದು.  ಕ್ರಿ.ಶ. 630ರ ರಮಝಾನ್‌ನಲ್ಲಿ ಇಸ್ಲಾಮೀ ಇತಿಹಾಸದ ಮೈಲುಗಲ್ಲೆಂದೇ  ವಿಶ್ಲೇಷಿಸಲಾಗುವ ಮಕ್ಕಾ ವಿಜಯ ದೊರಕಿದೆ. ಇದಲ್ಲದೇ, ಇಸ್ಲಾಮೀ ಇತಿಹಾಸದಲ್ಲಿ ಇಂಥ ಇನ್ನೂ ಒಂದಕ್ಕಿಂತ  ಹೆಚ್ಚು ಘಟನೆಗಳಿವೆ.

ಆದರೆ, ಇವಾವುದನ್ನೂ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಿಗೆ ಆಧಾರವಾಗಿ ಖಲೀಫಾ ಉಮರ್(ರ) ಬಳಸಿಕೊಳ್ಳದಿರಲು ಕಾರಣವೇನು? ಬದ್ರ‍್ ನಲ್ಲಿ  ಇಲ್ಲದ ಏನನ್ನು ಅವರು ಹಿಜ್‌ರಾದಲ್ಲಿ ಕಂಡುಕೊಂಡರು?  ಮಕ್ಕಾ ವಿಜಯಕ್ಕಿಂತ ಹಿಜ್‌ರಾ ಮುಖ್ಯವಾಗುವುದಕ್ಕೆ ಕಾರಣ ಏನಿರಬಹುದು?

ನಿಜವಾಗಿ, ತನ್ನ 53ನೇ ಪ್ರಾಯದಲ್ಲಿ ಪ್ರವಾದಿ(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸುತ್ತಾರೆ. ಅದಾಗಲೇ ಮಕ್ಕಾದಲ್ಲಿದ್ದ  ಹೆಚ್ಚಿನ ಪ್ರವಾದಿ(ಸ) ಅನುಯಾಯಿಗಳು ಮದೀನಾಕ್ಕೆ ವಲಸೆ ಹೋಗಿದ್ದರು. ಉಳಿದವರೂ ಮಕ್ಕಾವನ್ನು ಬಿಡಲಿದ್ದಾರೆ ಎಂಬುದು ಪ್ರವಾದಿ ವಿರೋಧಿಗಳಿಗೆ ದಿಟವಾಗಿತ್ತು. ಆದ್ದರಿಂದ, ಈ ವಲಸೆಯನ್ನು ತಡೆಯಬೇಕು ಮತ್ತು ಅದಕ್ಕಾಗಿ ಪ್ರವಾದಿಯನ್ನು(ಸ) ವಧಿಸಬೇಕು ಎಂಬ ಸಂಚನ್ನು ಅವರು ಹೂಡಿದರು.

ಎಲ್ಲ ಬುಡಕಟ್ಟುಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಗುಂಪು ರಚಿಸಿ ಅರ್ಧರಾತ್ರಿ ಪ್ರವಾದಿ(ಸ) ಮನೆಯ ಸುತ್ತ ನಿಲ್ಲಿಸಿದರು. ಪ್ರವಾದಿ(ಸ) ಹತ್ಯೆಯ ಬಳಿಕ ಸಂಭಾವ್ಯ ಪ್ರತೀಕಾರವನ್ನು ಈ ವಿರೋಧಿಗಳು ನಿರೀಕ್ಷಿಸಿದ್ದರು. ಆದರೆ ಮಕ್ಕಾದ ಎಲ್ಲ ಬುಡಕಟ್ಟುಗಳೂ ಜೊತೆ ಸೇರಿ ಹತ್ಯೆ ನಡೆಸಿದರೆ ಪ್ರವಾದಿಯ ಹಾಶಿಮ್ ಮನೆತನಕ್ಕೆ ಈ ಎಲ್ಲ ಬುಡಕಟ್ಟುಗಳ ವಿರುದ್ಧ ಪ್ರತೀಕಾರ ತೀರಿಸಲು ಸಾಧ್ಯವಿಲ್ಲ ಎಂಬ ತಂತ್ರದ ಭಾಗವಾಗಿಯೇ ಈ ವಿಶೇಷ ಗುಂಪನ್ನು ರಚಿಸಲಾಗಿತ್ತು.

ಈ ಷಡ್ಯಂತ್ರವನ್ನು ಅಲ್ಲಾಹನು ಪ್ರವಾದಿಗೆ(ಸ) ತಿಳಿಸಿರುವುದನ್ನು ಪವಿತ್ರ ಕುರ್‌ಆನ್  (8:30) ಉಲ್ಲೇಖಿಸಿದೆ. ಪ್ರವಾದಿ ಹಿಡಿ ಮರಳನ್ನು ತೆಗೆದು ತನ್ನ ಮನೆ ಎದುರು ನಿಂತಿದ್ದ ಹತ್ಯೆಕೋರ ಗುಂಪಿನ ಮೇಲೆ ಎಸೆಯುತ್ತಾರೆ ಮತ್ತು  ಅವರ ಮುಂದೆಯೇ ಪ್ರವಾದಿ(ಸ) ಆ ರಾತ್ರಿ ಹೊರಟು ಹೋಗುತ್ತಾರೆ ಎಂಬುದು ಇಸ್ಲಾಮೀ ಇತಿಹಾಸದಲ್ಲಿ ದಾಖಲಾಗಿದೆ.

ಅಲ್ಲದೇ, ವಲಸೆಯ  ಭಾಗವಾಗಿ ಪ್ರವಾದಿ(ಸ) ತನ್ನ ಸಂಗಾತಿ ಅಬೂಬಕರ್(ರ) ಜೊತೆ ತೂರ್ ಎಂಬ ಗುಹೆಯಲ್ಲಿ ಮೂರು ದಿನಗಳ ಕಾಲ ತಂಗಿದಾಗ ಗುಹೆಯ  ದ್ವಾರದಲ್ಲಿ ಪಾರಿವಾಳ ಗೂಡು ಕಟ್ಟಿ ಮೊಟ್ಟೆ ಇಡುವುದು, ಜೇಡ ಬಲೆ ಕಟ್ಟುವುದೂ ನಡೆಯುತ್ತದೆ. ಆ ಮೂಲಕ ಇವರನ್ನು ಹುಡುಕಿಕೊಂಡು  ಬಂದ ಶತ್ರುಗಳು ಈ ಗುಹೆಯಲ್ಲಿ ಅವರಿರಲು ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ. ಪ್ರವಾದಿಯನ್ನು ಹುಡುಕಿಕೊಂಡು ಬಂದ ಸುರಾಕಾ  ಎಂಬವನ ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುವುದು ಮತ್ತು ವಲಸೆಯ ದಾರಿಯಾಗಿ ಪ್ರವಾದಿಯವರು(ಸ) ಉಮ್ಮು ಮುಆದ್‌ರ ಮನೆಯಲ್ಲಿ ತಂಗುವುದು, ಅವರ ಸಣಕಲು ಆಡು ದಷ್ಟಪುಷ್ಟವಾಗಿ ಹಾಲು ನೀಡುವುದೂ ನಡೆಯುತ್ತದೆ.

ಆದರೆ, ಈ ಪವಾಡಗಳ ಆಚೆಗೆ, ಹಿಜ್‌ರಾ ಮುಖ್ಯವಾಗುವುದು ಪ್ರವಾದಿಯ(ಸ) ದೂರದೃಷ್ಟಿ, ಧೈರ್ಯ, ಪ್ರತಿತಂತ್ರ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ ವಿಧಾನಗಳಿಗಾಗಿ ಎಂದೇ ಹೇಳಬಹುದು.

ತನ್ನ ಮನೆಯ ಸುತ್ತ ನಿಂತಿದ್ದ ಹತ್ಯೆಕೋರ ಗುಂಪಿನ ಕಡೆಗೆ ಮರಳನ್ನೆಸೆದು ಆ ಅರ್ಧರಾತ್ರಿ ಹೊರಟು  ಹೋಗುವ ಮೊದಲು ಪ್ರವಾದಿ(ಸ) ತನ್ನ ಜಾಗದಲ್ಲಿ ಆಪ್ತ ಅಲಿ(ರ)ರನ್ನು ಮಲಗಿಸಿದ್ದರು. ತನ್ನನ್ನು ಕೊಲ್ಲಲೆಂದು ಮನೆಯನ್ನು ಸುತ್ತುವರಿದು ನಿಂತವರು ತಾನಿನ್ನೂ ಮನೆಯೊಳಗೆ ಮಲಗಿದ್ದೇನೆಂದು ಭಾವಿಸಲಿ ಎಂಬುದು ಅವರ ಉದ್ದೇಶವಾಗಿತ್ತು. ಅಲ್ಲಾಹನ ಸಹಾಯದ  ಹೊರತಾಗಿಯೂ ಪ್ರವಾದಿ(ಸ) ಇಂಥದ್ದೊಂದು ಪ್ರತಿತಂತ್ರವನ್ನು ಹೆಣೆದರು ಎಂಬುದು ಇಲ್ಲಿ ಬಹಳ ಮುಖ್ಯ.

ಆ ಬಳಿಕ ಪ್ರವಾದಿ(ಸ)  ನೇರವಾಗಿ ಮದೀನಾದ ಕಡೆಗೆ ನಡೆಯಲಿಲ್ಲ. ಮದೀನಾಕ್ಕೆ ತೀರಾ ವಿರುದ್ಧ ದಾರಿಯಲ್ಲಿ ಸಾಗಿ ತೂರ್ ಎಂಬ ಗುಹೆಯ ಒಳಗೆ ಅಡಗಿಕೊಂಡರು.  ಬೆನ್ನಟ್ಟಿ ಬರುವ ಶತ್ರುಗಳ ದಾರಿ ತಪ್ಪಿಸುವುದೇ ಇದರ ಗುರಿಯಾಗಿತ್ತು. ಬಳಿಕ ಬೆನ್ನಟ್ಟಿ ಬಂದ ಶತ್ರುಗಳು ಈ ಗುಹೆಯ ಸಮೀಪಕ್ಕೆ ಬಂದುದು ಮತ್ತು ಅವರ ಕಾಲ ಸಪ್ಪಳ ಕೇಳಿಸುವುದೂ ನಡೆಯಿತು. ಸಂಗಡಿಗ ಅಬೂಬಕರ್ ಆತಂಕಿತರಾದರು. ಶತ್ರುಗಳು ಇಣುಕಿ ನೋಡಿಬಿಟ್ಟರೆ ಎಂಬ ಭಯವನ್ನು ಅವರು ತೋಡಿಕೊಂಡರು. ಆಗ, ‘ಭಯ ಪಡಬೇಡಿ, ಅಲ್ಲಾಹನು ನಮ್ಮ ಜೊತೆ ಇದ್ದಾನೆ’ (9:40) ಎಂದು ಪ್ರವಾದಿ(ಸ) ಸಾಂತ್ವನ ಪಡಿಸುವುದು ಕುರ್‌ಆನ್ ನಲ್ಲಿದೆ. ಶತ್ರುಗಳ ತಂತ್ರಕ್ಕೆ ಪ್ರತಿತಂತ್ರವನ್ನು ಹೆಣೆದ ಬಳಿಕ ಅಲ್ಲಾಹನ ಮೇಲೆ ಅಚಂಚಲ ಮತ್ತು ಕಲ್ಮಶವಿಲ್ಲದ ವಿಶ್ವಾಸ ಇಟ್ಟುಕೊಳ್ಳಬೇಕು ಎಂಬ ಅತಿ ಪ್ರಬಲವಾದ ಸಂದೇಶವನ್ನು ಅವರು ನೀಡಿದರು. ಶತ್ರುಗಳು ಕೈಯಳತೆಯ ದೂರವಷ್ಟೇ ಇದ್ದಾಗ ಪ್ರವಾದಿ ಈ  ಆತ್ಮವಿಶ್ವಾಸದ ಮಾತನ್ನಾಡಿದ್ದರು ಎಂಬುದು ಇಲ್ಲಿ ಬಹಳ ಮುಖ್ಯ.

ಅಲ್ಲಿಂದ ಪ್ರವಾದಿ(ಸ) ಮತ್ತು ಅಬೂಬಕರ್ ಹೊರಟು ಹೋಗುತ್ತಾರೆ. ಇತ್ತ  ಅವರನ್ನು ಹುಡುಕಿ ನಿರಾಶರಾದ ಶತ್ರುಗಳು ಅವರನ್ನು ಪತ್ತೆ ಹಚ್ಚುವವರಿಗೆ 100 ಒಂಟೆಗಳ ಇನಾಮು ಘೋಷಿಸುತ್ತಾರೆ. ಇದರಿಂದ ಪ್ರೇರಿತನಾದ  ಸುರಾಕಾ ಎಂಬ ಮರಳುಗಾಡಿನ ಚತುರ ವ್ಯಕ್ತಿ ಪ್ರವಾದಿ(ಸ)ರ ಬೆನ್ನಟ್ಟುತ್ತಾರೆ. ಮಾತ್ರವಲ್ಲ, ಪ್ರವಾದಿಯ ಹತ್ತಿರಕ್ಕೂ ತಲುಪುತ್ತಾರೆ. ಆದರೆ ಅವರ ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುತ್ತದೆ. ಆಗ ಪ್ರವಾದಿ(ಸ) ಈ ಸುರಾಕಾನಲ್ಲಿ ಹೀಗೆ ಹೇಳುತ್ತಾರೆ,

‘ಒಂದು ದಿನ ರೋಮ್‌ನ  ಚಕ್ರಾಧಿಪತಿ ಕಿಸ್ರಾನ ಕೈ ಬಳೆ ನಿನ್ನ ಕೈಗೆ ಬರಲಿದೆ.’ ಅಂದರೆ ನಿನ್ನ ಜೀವಂತ ಕಾಲದಲ್ಲೇ  ರೋಮ್ ಸಾಮ್ರಾಜ್ಯವು ಇಸ್ಲಾಮೀ ಸಾಮ್ರಾಜ್ಯದ ಅಧೀನಕ್ಕೆ ಒಳಪಡಲಿದೆ ಎಂದು ಅರ್ಥ. ಇದು ಆ ಬಳಿಕ ನಿಜವೂ ಆಯಿತು.

ನಿಜವಾಗಿ, ಸುರಾಕಾನಲ್ಲಿ ಇಂಥದ್ದೊಂದು ಮಾತನ್ನು ಹೇಳುವಾಗ ಪ್ರವಾದಿಗೆ(ಸ) ಮಕ್ಕಾದಲ್ಲಿ ಅಸ್ತಿತ್ವವೇ ಇರಲಿಲ್ಲ. ಮದೀನಾ  ಹೇಗೆ ಸ್ವೀಕರಿಸುತ್ತದೆ  ಎಂಬುದೂ ಅವರಿಗೆ ದೃಢವಿರಲಿಲ್ಲ. ತನ್ನದೆಂದು ಹೇಳಿಕೊಳ್ಳುವ ಒಂದು ಊರೇ ಇಲ್ಲದ ಸಮಯದಲ್ಲೂ ಪ್ರವಾದಿ(ಸ) ಆಡಿರುವ ಈ  ಮಾತುಗಳು ಓರ್ವ ಸತ್ಯವಿಶ್ವಾಸಿಯಲ್ಲಿ ಇರಬೇಕಾದ ಆತ್ಮವಿಶ್ವಾಸ, ದೂರದೃಷ್ಟಿ ಮತ್ತು ಅಚಲ ದೇವವಿಶ್ವಾಸದ ಮಹತ್ವವನ್ನು ಹೇಳುತ್ತದೆ. ಒಂದುರೀತಿಯಲ್ಲಿ,

ಅಲ್ಲಾಹನ ಮಾರ್ಗದರ್ಶನದ ಹೊರತಾಗಿಯೂ ಪ್ರವಾದಿ(ಸ) ಹಲವು ಪ್ರಾಯೋಗಿಕ ಮತ್ತು ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡರು. ಸಾಂದರ್ಭಿಕ ತಂತ್ರಗಳನ್ನು ಹೆಣೆದರು. ಅತ್ಯಪೂರ್ವವಾದ ದೂರದೃಷ್ಟಿಯನ್ನೂ ಹೊಂದಿದ್ದರು. ಜೊತೆಗೇ ಅಲ್ಲಾಹನ ಮೇಲೆ ಅಚಂಚಲವಾದ  ವಿಶ್ವಾಸವನ್ನೂ ಇಟ್ಟಿದ್ದರು. ಓರ್ವ ನಾಯಕ ಹೇಗಿರಬೇಕು ಮತ್ತು ಅತ್ಯಂತ ಸವಾಲಿನ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಮನಸ್ಥಿತಿ ಏನಿರಬೇಕು  ಎಂಬುದನ್ನು ಹಿಜ್‌ರಾ ಸ್ಪಷ್ಟಪಡಿಸುತ್ತದೆ. ಸುತ್ತುವರಿದಿರುವ ಶತ್ರುಗಳು ಇನ್ನೇನು ಗುರಿ ಸಾಧಿಸಿಯೇ ಬಿಡುತ್ತಾರೆ ಎಂಬಂತ  ಸ್ಥಿತಿಯಿದ್ದರೂ ಸ್ಥಿಮಿತ ಕಳಕೊಳ್ಳದೇ ಪ್ರತಿತಂತ್ರವನ್ನು ಹೂಡುವುದು ಮತ್ತು ಅಲ್ಲಾಹನ ಮೇಲೆ ಅಣುವಿನಷ್ಟೂ ಕಲ್ಮಶವಿಲ್ಲದ ವಿಶ್ವಾಸವನ್ನು ಹೊಂದುವುದೇ ಮುಹರ‍್ರಮ್‌ನ  ಪಾಠ.

ಬದ್ರ‍್ ನಲ್ಲಿ  ಪ್ರವಾದಿಯ ಜೊತೆ 313 ಮಂದಿ ಅನುಯಾಯಿಗಳು ಇದ್ದರು. ಹುದೈಬಿಯಾ ಒಪ್ಪಂದದ ವೇಳೆ 1400ರಷ್ಟು ಸಂಗಡಿಗರಿದ್ದರು. ಮಕ್ಕಾ ವಿಜಯದ ಸಮಯದಲ್ಲಂತೂ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿತ್ತು. ಆದರೆ, ಮುಹರ‍್ರಂ 1ರಂದು ನಡೆದ ಹಿಜ್‌ರಾ ಹಾಗಲ್ಲ. ಪ್ರವಾದಿ  ಮುಹಮ್ಮದ್(ಸ) ಮತ್ತು ಅಬೂಬಕರ್(ರ) ಎಂಬ ಇಬ್ಬರ ಜೊತೆ ಮೂರನೆಯವನಾಗಿ ಇದ್ದುದು ಅಲ್ಲಾಹನು ಮಾತ್ರ. ಇನ್ನೊಂದು ಕಡೆ ಮಕ್ಕಾದ ಅಷ್ಟೂ ಬುಡಕಟ್ಟುಗಳು ಕತ್ತಿ ಹಿರಿದು ನಿಂತಿದ್ದುವು. ಇದು ಇಸ್ಲಾಮಿನ ಪಾಲಿಗೆ ಪ್ರಪ್ರಥಮ ಅಳಿವು-ಉಳಿವಿನ ಸಂದರ್ಭವಾಗಿತ್ತು. ಈ ಸಂದರ್ಭವನ್ನು ಪ್ರವಾದಿ(ಸ) ಹೇಗೆ ಎದುರಿಸುತ್ತಾರೆ ಎಂಬುದೂ ಐತಿಹಾಸಿಕವಾಗಿಯೂ ದಾಖಲಾಗುವುದಿತ್ತು. ಇಸ್ಲಾಮಿನ ಭವಿಷ್ಯವೂ ಪ್ರವಾದಿ ಕೈಗೊಳ್ಳುವ ನಿರ್ಧಾರ ಮತ್ತು ತೋರುವ ಆತ್ಮವಿಶ್ವಾಸವನ್ನು ಹೊಂದಿಕೊಂಡಿತ್ತು. ಆ ಕಾರಣದಿಂದಲೇ ಮುಹರ‍್ರಂ ಒಂದರ ಹಿಜ್‌ರಾ  ಮುಖ್ಯವಾಗುತ್ತದೆ.

ಬಹುಶಃ, ಇತರೆಲ್ಲವುಗಳಿಗಿಂತ ಮುಹರ‍್ರಂ ಅನ್ನೇ ಖಲೀಫಾ ಉಮರ್ (ರ) ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಆಯ್ಕೆ ಮಾಡಿರುವುದಕ್ಕೆ ಇವೆಲ್ಲ  ಕಾರಣವಾಗಿರಬಹುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” …