Home / ಲೇಖನಗಳು / ಪ್ರವಾದಿ(ಸ) ಹೀಗಿದ್ದರು…

ಪ್ರವಾದಿ(ಸ) ಹೀಗಿದ್ದರು…

✍️ ಇರ್ಶಾದ್ ಮೂಡಬಿದ್ರೆ

ಮಕ್ಕಾ ನಗರದಲ್ಲಿ ಪ್ರವಾದಿ(ಸ) ಜನಿಸಿದಾಗ ಅವರ ನಾಡಿನಲ್ಲಿ ಕೆಡುಕುಗಳು ಅಗಾಧವಾಗಿತ್ತು. ದರೋಡೆ, ಸುಲಿಗೆ, ಕೊಲೆ, ಕುಡಿತ, ಅಶ್ಲೀಲತೆ, ಹೆಣ್ಣು ಮಕ್ಕಳ ಹತ್ಯೆ, ಜೂಜಾಟ, ಕರಿಯ-ಬಿಳಿಯ ಅನ್ನುವ ದ್ವೇಷ, ಬಡ್ಡಿಗೆ ಹಣ, ಮಾಟ-ಮಂತ್ರಗಳಲ್ಲಿ ಅಂಧವಿಶ್ವಾಸ, ಸಣ್ಣ ಜಗಳಕ್ಕೂ ವರ್ಷಗಟ್ಟಲೆಯ ಹಗೆತನ, ವ್ಯಾಪಾರದಲ್ಲಿ ಮೋಸ, ನಗ್ನ ದೇಹದಲ್ಲಿ ಕಅಬಾ ಮಂದಿರದ ಪ್ರದಕ್ಷಿಣೆ ಇತ್ಯಾದಿ ಇತ್ಯಾದಿ.

ಪ್ರವಾದಿ ಮುಹಮ್ಮದ್(ಸ) ಈ ಎಲ್ಲಾ ಕೆಡುಕುಗಳನ್ನು ಅಳಿಸಿ ಹಾಕಿದರು. ಆ ನಾಡಿಗೆ ಸಭ್ಯತೆ, ಸದಾಚಾರ, ಚಾರಿತ್ರ್ಯ ಹಾಗೂ ನ್ಯಾಯ ತಂದುಕೊಟ್ಟರು. ಅಲ್ಲಿ ಆರಾಧಿಸುತ್ತಿದ್ದ ಅಸಂಖ್ಯಾತ ದೇವತೆಗಳನ್ನು ಕಿತ್ತು ಹಾಕಿ ವಿಶ್ವಕ್ಕೆ ಏಕದೇವ ಮಾತ್ರವೆಂದು ಸಾರಿದರು. ನಮ್ಮ ಇಹಲೋಕದ ಕರ್ಮಗಳ ಫಲಕ್ಕೆ ನಾಳೆಯ ಪರಲೋಕದಲ್ಲಿ ತಕ್ಕ ಪ್ರತಿಫಲ ಸಿಗಲಿದೆಯೆಂದು ಎಚ್ಚರಿಸಿದರು. ಅಂದು ಚದುರಿ ಹೋಗಿದ್ದ ಅನೇಕ ಜನಾಂಗ-ಪಂಗಡಗಳನ್ನು ಒಂದೆಡೆ ಒಗ್ಗೂಡಿಸಿದರು. ಅವರಲ್ಲಿನ ದ್ವೇಷ-ಹಗೆತನವನ್ನು ದೂರಗೊಳಿಸಿದರು. ಅವರಿಗಾಗಿ ಸುವ್ಯವಸ್ಥಿತವಾದ ಆಡಳಿತ ನೀಡಿದರು. ಮುಂದೆ ಅದು ಉಳಿದ ಆಳ್ವಿಕೆಗಾರರಿಗೆ ಮಾದರಿ ಅನಿಸಿತು.

ಪ್ರವಾದಿ(ಸ) ಅವರ ಬದುಕಿನ ನೈಜ ಗುರಿ ದಿಕ್ಕುತಪ್ಪಿದ ಮನುಷ್ಯನನ್ನು ಕೆಟ್ಟ ಹಾದಿಯಿಂದ ಸನ್ಮಾರ್ಗದತ್ತ ಕರೆತರುವುದೇ ಆಗಿತ್ತು. ಅದರ ಮೂಲಕ ಪರಲೋಕದ ಜೀವನವನ್ನು ದೇವ ಸಂಪ್ರೀತಿಯಲ್ಲಿ ಪ್ರಾಪ್ತ ಗೊಳಿಸುವುದೇ ಮುಖ್ಯ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಈ ಜಗತ್ತಿಗೆ ರಾಯಭಾರಿಯಾಗಿ ಆಗಮಿಸಿದರು. ತನ್ನ ಉನ್ನತ ನಡೆ, ನುಡಿ, ನಿಷ್ಠೆ, ಆದ ರ್ಶಗಳಿಂದ ಇತರರಿಗೆ ಮಾರ್ಗದರ್ಶಕರಾದರು.

ಮೈಕಲ್ ಹಾರ್ಟ್ ಅನ್ನುವ ಕ್ರೈಸ್ತ ಧರ್ಮೀಯು ಇತಿಹಾಸಜ್ಞ ಅವರನ್ನು ಈ ಜಗದ ಅತ್ಯಂತ ಪ್ರಭಾವಿ ನಾಯಕರೆಂದು ಗುರುತಿಸಿದರು. ಈ ಲೋಕದಲ್ಲಿ ಗತಿಸಿದ ನೂರು ಮಹಾ ಪುರುಷರ ಶ್ರೇಷ್ಠರಲ್ಲಿ ಪ್ರವಾದಿ ಮುಹಮ್ಮದ್(ಸ) ಅವರಿಗೆ ಮೊದಲ ಸ್ಥಾನ ಕಲ್ಪಿಸಿದರು.

ಮಕ್ಕಾ ನಗರದಲ್ಲಿ ಪ್ರವಾದಿ(ಸ) ಅವರಿಗೆ ಸತ್ಯಸಂಧ (ಸಾದಿಕ್) ಹಾಗೂ ಪ್ರಾಮಾಣಿಕ(ಅಮೀನ್)ರೆಂದು ಉಪ ನಾಮವಿತ್ತು. ಅವರು ವ್ಯಾಪಾರ ವ್ಯವಹಾರದಲ್ಲಿ ಆಗಲಿ, ಸಂಸಾರಿಕ ಜೀವನದಲ್ಲಾಗಲಿ, ಯಾವತ್ತೂ ಸುಳ್ಳಿನ ಆಸರೆಯನ್ನು ಪಡೆಯಲಿಲ್ಲ. ಅವರನ್ನು ಕಟುವಾಗಿ ವಿರೋಧಿಸುತ್ತಿದ್ದ ಶತ್ರು ಕೂಡ ಅವರ ಈ ಗುಣವನ್ನು ಗೌರವಿಸುತ್ತಿದ್ದ.

ಒಮ್ಮೆ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಪ್ರವಾದಿ(ಸ) ಒಂದು ಪ್ರಶ್ನೆ ಕೇಳಿದರು, “ಈ ಬೆಟ್ಟದ ಇನ್ನೊಂದು ಬದಿಯಲ್ಲಿ ಒಂದು ಬೃಹತ್ ಸೇನೆಯು ಜಮೆಗೊಂಡಿದೆ. ಅದು ನಮ್ಮ ಮೇಲೆ ದಾಳಿ ಮಾಡಲು ಸಿದ್ಧವಾಗಿ ನಿಂತಿದೆ. ಇದನ್ನು ನೀವು ನಂಬುವಿರಾ?” ಆಗ ಎಲ್ಲರೂ ಒಂದೇ ಒಕ್ಕೊರಳಿನಿಂದ, “ನಾವು ಖಂಡಿತವಾಗಿ ನಂಬುತ್ತೇವೆ. ಏಕೆಂದರೆ ನೀವು ಯಾವತ್ತೂ ಸುಳ್ಳೇ ಆಡದ ಚೇತನ” ಅಂದರು. ಪ್ರವಾದಿ(ಸ) ಅವರ `ಸಾದಿಕ್’ ಅನ್ನುವ ಈ ಉಪನಾಮೆಗೆ ಈ ಒಂದೇ ಒಂದು ಉದಾಹರಣೆ ಸಾಕು! ಇಂತಹ ಅನುಪಮ ವ್ಯಕ್ತಿತ್ವ ನಿಜಕ್ಕೂ ಅಪರೂಪ!

ಪ್ರವಾದಿ(ಸ) ಈ ಜಗಕ್ಕೆ ಕರುಣೆಯ ಬೆಳಕಾಗಿ ಉದಯಿಸಿದರು. ಏಟಿಗೆ ಪ್ರತಿ ಏಟು ಅನ್ನುವ ಕ್ರಾಂತಿಕಾರಕ ಧೋರಣೆಯು ಅವರಲ್ಲಿ ಇರಲಿಲ್ಲ. ಸಮರಗಳ ಪ್ರಸ್ತಾಪ ಬಂದಾಗ ಅವರು ಅದಕ್ಕಾಗಿ ಸಾಕಷ್ಟು ತಾಳ್ಮೆ ಸಹನೆ ಅನುಸರಿಸುತ್ತಿದ್ದರು. ಹಲವು ಬಾರಿ ಸಂದಾನಕ್ಕೆ ಸಿದ್ಧರಾಗುತ್ತಿದ್ದರು. ಕೊನೆಗೆ ಎಲ್ಲಾ ಮಾತುಕತೆಗಳು ಮುರಿದು ಬಿದ್ದು ವಿರೋಧಿಗಳು ಆಕ್ರಮಣ ಮಾಡಿದಾಗ ಅನಿವಾರ್ಯವಾಗಿ ಯುದ್ಧಕ್ಕೆ ಅಣಿಯಾಗುತ್ತಿದ್ದರು. ಇಸ್ಲಾಮ್ ಶಾಂತಿಯ ಧರ್ಮವೆಂದು ಸಾರಿದ ಅವರು ಯಾವತ್ತೂ ದಂಡೆತ್ತಿ ಹೋಗಿಲ್ಲ.

ಎಲ್ಲೂ ದರೋಡೆ-ಸುಲಿಗೆ ಮಾಡಿಲ್ಲ. ಹಲವು ಬಾರಿ ಅವರ ಅನುಚರರು, ಶತ್ರುಗಳು ನೀಡುತ್ತಿರುವ ದೌರ್ಜನ್ಯದ ಕುರಿತು ಪ್ರವಾದಿ(ಸ) ಅವರಲ್ಲಿ ದೂರಿಕೊಂಡರು. ಈ ಕುರಿತು ಅವರ ವಿರುದ್ಧ ಪ್ರತೀಕಾರ ತೀರಿಸುವಂತೆ ಸಲಹೆ ನೀಡಿದರು. ಆದರೆ ಪ್ರವಾದಿ(ಸ) ಒಪ್ಪಿಕೊಳ್ಳಲಿಲ್ಲ. ಮೊದಲಾಗಿ ಅವರು ದೇವನಲ್ಲಿ ಶತ್ರುಗಳಿಗೆ ಒಳ್ಳೆಯ ಬುದ್ಧಿ ನೀಡೆಂದು ಪ್ರಾರ್ಥಿಸಿದರು. ಈ ಹಿಂಸೆ-ರಕ್ತಪಾತದಿಂದ ರಕ್ಷಣೆ ನೀಡೆಂದು ಬೇಡಿಕೊಂಡರು. ಈ ಕರುಣಾಮಯಿಗೆ ಜೀವ ರಕ್ಷಣೆ ಮುಖ್ಯವಾಗಿತ್ತು.

ಮುಂದೆ ಪ್ರವಾದಿ(ಸ) ಅವರು ಅರಬ್ ಸಾಮ್ರಾಜ್ಯಕ್ಕೆ ಅಧಿಪತಿಯಾದರು. ಯುದ್ಧಗಳಲ್ಲಿ ಅನಿವಾರ್ಯವಾಗಿ ಭಾಗಿಯಾಗಬೇಕಾಯಿತಾದರೂ ಹತರಾದವರ ಸಂಖ್ಯೆ ಕೇವಲ 1014. ವೈರಿ ಸೈನ್ಯದಲ್ಲಿ 759 ಆದರೆ, ತಮ್ಮವರು 255 ಮಂದಿ ಮಾತ್ರ. ನಾವು ಎರಡನೇ ಜಾಗತಿಕ ಸಮರದ ಇತಿಹಾಸವನ್ನು ಗಮನಿಸಿದರೆ ಅದರಲ್ಲಿ ಸುಮಾರು 1 ಕೋಟಿ ಆರು ಲಕ್ಷ ಮಂದಿ ಹತ್ಯೆಗೀಡಾಗಿದ್ದಾರೆ. ಬರೇ ರಶ್ಯನ್ ಕ್ರಾಂತಿಯಲ್ಲೇ ಒಂದು ಕೋಟಿಗೂ ಅಧಿಕ ಮಂದಿ ಇಹಲೋಕ ತ್ಯಜಿಸಿದ್ದಾರೆ. ಪ್ರವಾದಿ(ಸ) ಅವರ ಯುದ್ಧ ಹೇಗಿತ್ತು ಅನ್ನುವುದನ್ನು ಅಂದಾಜಿಸಲು ಇದು ಧಾರಾಳ ಸಾಕು.

ಪ್ರವಾದಿ(ಸ) ಗೆದ್ದರಾದರೂ ವಿಜಯೋತ್ಸವ ಆಚರಿಸಲಿಲ್ಲ. ಮನಸಾರೆ ಸಂತೋಷ ಪಡಲಿಲ್ಲ. ತನ್ನ ದಂಡ ನಾಯಕರನ್ನು ಕರೆದು, ಶತ್ರು ಪಾಳೆಯದ ಬಂಧಿತ ಕೈದಿಗಳ ಗಾಯಗಳಿಗೆ ಉತ್ತಮ ಚಿಕಿತ್ಸೆ- ಸೇವೆ ನೀಡಲು ಆದೇಶಿಸಿದರು. ಸೆರೆಯಾದ ಮಹಿಳೆಯರಿಗೆ-ಮಕ್ಕಳಿಗೆ-ವೃದ್ಧರನ್ನು ಯಾವತ್ತೂ ಪೀಡಿಸಬಾರದೆಂದು ಆದೇಶಿಸಿದರು. ರಣರಂಗದಲ್ಲಿ ಹತರಾದ ಯೋಧರ ಕಳೇಬರಕ್ಕೆ ಲಿಂಗ ಭೇದ ಮಾಡಕೂಡದೆಂದು ಅಪ್ಪಣೆ ಮಾಡಿದರು. ಈ ಕಾರಣವಾಗಿಯೇ ಸೋಲುಂಡ ಶತ್ರು ಸೇನೆಯ ಸಾವಿರಾರು ಸೈನಿಕರು ಅವರ ಅನುಯಾಯಿಗಳಾದರು. ಮುಂದೆ ಅವರು ಪ್ರವಾದಿ(ಸ) ಅವರಿಗಾಗಿ ಪ್ರಾಣಕ್ಕೆ ಪ್ರಾಣ ನೀಡಲು ಸಿದ್ಧರಾದರು. ನಿಜವಾಗಿ ಯುದ್ಧದ ಗೆಲುವು ಗೆಲುವಲ್ಲ. ಹೃದಯ ಗೆದ್ದ ವಿಜಯವೇ ನಿಜವಾದ ಗೆಲುವು ಅನ್ನುವುದು ಅವರು ತೋರಿಸಿಕೊಟ್ಟರು.

ಪ್ರವಾದಿ(ಸ) ತನ್ನ ಬದುಕಿನಲ್ಲಿ ಯುವಕರಿಗೆ ಆದರ್ಶ ನಾಯಕರಾಗಿ, ವ್ಯವಹಾರದಲ್ಲಿ ನಿಪುಣ ವ್ಯಾಪಾರಿಯಾಗಿ, ಪತ್ನಿಯರಿಗೆ ಯೋಗ್ಯ ಪತಿಯಾಗಿ, ಮಕ್ಕಳಿಗೆ ಮಮತೆಯ ತಂದೆಯಾಗಿ, ಅಬಲ ಮಹಿಳೆಯರಿಗೆ ಶಕ್ತಿಯಾಗಿ, ಬಡವ- ನಿರ್ಗತಿಕ ರಿಗೆ ರಕ್ಷಕರಾಗಿ, ಸೇನೆಗೆ ದಕ್ಷ ದಂಡನಾಯಕನಾಗಿ, ಆಳ್ವಿಕೆಯಲ್ಲಿ ಶ್ರೇಷ್ಠ ಆಡಳಿತಗಾರನಾಗಿ ಮಿಂಚಿದರು. ಅವರು ಸಾರಿದ ಶಾಂತಿ, ಸಹನೆ, ಕರುಣೆ, ಏಕತೆ ಮತ್ತು ಸಮಾನತೆಯ ಮಂತ್ರವು ಇಡೀ ಮುಸ್ಲಿಮ್ ಸಮುದಾಯಕ್ಕೆ ಮುನ್ನುಡಿ ಬರೆಯಿತು. ಅವರ ಸರಳ ಜೀವನ, ಕುಟುಂಬ ಸಂಬಂಧದ ಪಾಠಗಳು ಯಾವುದೇ ಕಾಲಘಟ್ಟ ಹಾಗೂ ಯಾವುದೇ ಕಠಿಣ ವೇಳೆಯಲ್ಲೂ ಸೂಕ್ತವಾಗಿ ಹೊಂದಿಕೊಳ್ಳುವ ತರಬೇತಿಯಾಗಿತ್ತು. ಅವರ ಏಕದೇವತ್ವದ ಬೋಧನೆ ಮತ್ತು ಆರಾಧನೆಯ ಕ್ರಮಗಳು ಆಧ್ಯಾತ್ಮಿಕ ಲೋಕಕ್ಕೆ ಹೊಸ ಅಧ್ಯಾಯ ಬರೆದವು. ಇಹಲೋಕದ ಜೀವನ ಬರೇ ಕ್ಷಣಿಕ. ಮುಂದಿನ ಬದುಕು ಶಾಶ್ವತ ಅನ್ನುವ ಅವರ ಉಪದೇಶ ಮನುಷ್ಯನ ಬದುಕಿನ ಗುರಿಯನ್ನೇ ಬದಲಾಯಿಸಿತು. ಇದನ್ನು ಅನುಸರಿಸಿ ಲಕ್ಷಾಂತರ ಮಂದಿ ಅವರ ಅನುಯಾಯಿಗಳಾದರು.

ಮುಂದೆ ಇಸ್ಲಾಮ್ ಧರ್ಮವು ಜಗತ್ತಿನಲ್ಲಿಯೇ ತ್ವರಿತ ಹಾದಿಯಲ್ಲಿ ಸಾಗಿ ದ್ವಿತೀಯ ಧರ್ಮವಾಗಿ ಬೆಳೆಯಿತು. ಆ ದ್ವಿತೀಯ ಕ್ರಾಂತಿಯೂ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತು. ಅದರ ಸುಗಂಧವು ಎಲ್ಲಡೆ ಪಸರಿಸಿತು. ಪ್ರವಾದಿ(ಸ) ವಿಶ್ವಮಾನ್ಯರಾದರು. ಇವತ್ತಿಗೂ ಅವರ ಒಂದೇ ಒಂದು ಚಿತ್ರವಿಲ್ಲ- ಆದರೆ ಎಲ್ಲರ ಹೃದಯ ಹೊಕ್ಕ ಅವರು ಪ್ರತಿಯೊಬ್ಬರ ಉಸಿರಾದರು. ದಿನನಿತ್ಯ ಐದು ಬಾರಿ ಕೂಗುವ ಬಾಂಗಿಗೆ ಜಗದ ಎಲ್ಲೆಡೆ ಪ್ರತಿಧ್ವನಿಯಾದರು.

ಇಂತಹ ಅಮರತ್ವಕ್ಕೆ ಅವರು ಯಾವತ್ತೂ ಪವಾಡದ ಮೊರೆಯಾಗಲಿ, ಜಾದು-ಮಂತ್ರದ ಆಸರೆಯನ್ನು ಹಿಡಿಯಲಿಲ್ಲ. ಯಾವುದೇ ಮಾತಿನ ಚಳಕವನ್ನೂ ತೋರಿಸಲಿಲ್ಲ. ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದರು. ನುಡಿದಂತೆ ನಡೆದು ತೋರಿಸಿದರು. ಬಡತನದಲ್ಲಿ ಹುಟ್ಟಿ, ಬಡತನದಲ್ಲಿಯೇ ಗತಿಸಿ ಅಮರರಾದರು.

ಪವಿತ್ರ ಕುರ್‌ಆನ್ ಎಂಬುದು ಪ್ರವಾದಿ(ಸ) ಈ ಜಗತ್ತಿಗೆ ನೀಡಿದ ಮಹಾನ್ ಕೊಡುಗೆ. ಸಮಾಜದಲ್ಲಿನ ಶಾಂತಿ, ಸುವ್ಯ ವಸ್ಥೆ ಮತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಅದು ಸನ್ಮಾರ್ಗದ ದಿವ್ಯ ಬೆಳಕು. ಪ್ರವಾದಿ ವಚನಗಳ `ಹದೀಸ್’ ಅವರ ಆದರ್ಶ ನಡೆ ನುಡಿಗಳ ಹೆಜ್ಜೆ ಗುರುತುಗಳು. ಈ ಎರಡನ್ನೂ ಅನುಸರಿಸಿ ನಡೆದರೆ ಜಗತ್ತಿನಲ್ಲಿ ವೈರತ್ವ ಇರದು-ಶತ್ರುಗಳು ಕಾಣದು. ಎಲ್ಲೆಡೆ ಶಾಂತಿಯ ಹಾದಿ ಕಾಣಿಸಿಕೊಳ್ಳುವುದು. ಇದಕ್ಕಾಗಿಯೇ `ಇಸ್ಲಾಮ್’ ಅನ್ನುವ ಪದಕ್ಕೆ `ಶಾಂತಿ’ಯೆಂಬ ಅರ್ಥ ಬಂದಿದೆ. ಅದು ಯಾವತ್ತೂ ಅಶಾಂತಿ, ದಂಗೆ, ಗಲಭೆ, ಕೊಲೆ, ಸುಲಿಗೆ, ಮೋಸ, ವಂಚನೆ, ಅಸತ್ಯ, ಅನ್ಯಾಯಕ್ಕೆ ಮೌಲ್ಯ ನೀಡದು. ಭಯೋತ್ಪಾದನೆಗೆ ಪ್ರೋತ್ಸಾಹ ನೀಡದು. ಇದನ್ನು ಮೀರಿ ನಡೆದರೆ ಆತ ಪ್ರವಾದಿ(ಸ) ಅವರ ಅನುಯಾಯಿ ಆಗಲಾರ. ಅಲ್ಲಾಹನ ಭಕ್ತನೂ ಆಗಲಾರ. ಕೇವಲ ಇಸ್ಲಾಮಿನ ನಾಮ ಹೊತ್ತ ನಾಮಾಧಾರಿ ಮಾತ್ರ. ಆತನಿಗೆ ಪರಲೋಕದಲ್ಲಿ ಸ್ಥಾನವೂ ಇಲ್ಲ. ಕ್ಷಮೆಯೂ ಇಲ್ಲ.

ಪ್ರವಾದಿ(ಸ) ಅವರನ್ನು ನೈಜವಾಗಿ ಪ್ರೀತಿಸುವವರು ಅವರ ಹಾದಿಯಲ್ಲಿ ಸಾಗಬೇಕು. ಅವರ ಬದುಕು-ಬೋಧನೆಗಳನ್ನು ಅನುಸರಿಸಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನರ ತಪ್ಪುಗಳನ್ನು, ಅವರ ಅತಿರೇಕಗಳನ್ನು ಸಹನೆಯಿಂದ ಅವರನ್ನು ಪ್ರವಾದಿ(ಸ)ಯಂತೆ ಸೌಜನ್ಯದಿಂದ ತಿದ್ದಿ, ತಿಳಿಹೇಳಬೇಕು. ಸದ್ಗುಣಗಳಿಂದಲೇ ಮನಸ್ಸು ಗೆಲ್ಲಬೇಕು. ಆಗಲೇ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು ಸಾಧ್ಯ.

SHARE THIS POST VIA

About editor

Check Also

ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್

✍️ ಪಿ.ಕೆ. ವಿಜಯ ರಾಘವನ್ ಮುಹಮ್ಮದ್ ಪ್ರವಾದಿ(ಸ) ಯಾರಾಗಿದ್ದರು? ಅವರು ಓರ್ವ ಕನ್ಯೆಗಿಂತಲೂ ಹೆಚ್ಚು ಲಜ್ಜಾವಂತರಾಗಿದ್ದರು ಎಂದು ಕೇಳಿದಾಗ ಆಶ್ಚರ್ಯವಾಯಿತು. …