Home / ಲೇಖನಗಳು / ಹಜ್ಜ್ ಎಂದರೆ ಅರಫಾ

ಹಜ್ಜ್ ಎಂದರೆ ಅರಫಾ

ಸಈದ್ ಇಬ್ನುಲ್ ಮುಸಯ್ಯಿಬ್(ರ) ರಿಂದ ವರದಿ: ಆಯಿಶಾ(ರ) ಹೇಳಿದರು: ಅಲ್ಲಾಹನ ಪ್ರವಾದಿ ಹೇಳಿದ್ದಾರೆ- “ಅಲ್ಲಾಹನು ಅತೀ ಹೆಚ್ಚು ಜನರನ್ನು ನರಕದಿಂದ ಮುಕ್ತಿಗೊಳಿಸಲು ಅರಫಾ ದಿನದಂತೆ ಬೇರೆ ದಿನ ಇಲ್ಲ. ಅಂದು ಅಲ್ಲಾಹನು ಸಮೀಪಕ್ಕೆ ಬರುತ್ತಾನೆ. ನಂತರ ಅವರ ಕುರಿತು ಅಭಿಮಾನದಿಂದ ದೇವ ಚರರೊಂದಿಗೆ ಮಾತನಾಡುತ್ತಾನೆ. ಬಳಿಕ ಕೇಳುತ್ತಾನೆ: ಅವರು ಏನನ್ನು ಬಯಸಿ ದ್ದಾರೆ?” (ಮುಸ್ಲಿಮ್)

ಇದು ಅರಫಾ ದಿನದ ಮಹತ್ವ ಮತ್ತು ಪ್ರಾಧಾನ್ಯತೆಯನ್ನು ವಿವರಿಸುವ ಪ್ರವಾದಿ ವಚನವಾಗಿದೆ. ಈ ಹದೀಸ್‌ನ ಕೊನೆಯ ವಾಕ್ಯವಾದ ಅವರು ಏನನ್ನು ಬಯಸಿದ್ದಾರೆ? ಎಂಬುದರ ವ್ಯಾಖ್ಯಾನವನ್ನು ಮಿರ್ಖಾತುಲ್ ಮಫಾತೀಹ್‌ನಲ್ಲಿ ಹೀಗೆ ತಿಳಿಸಲಾಗಿದೆ: “ಹಾಜಿಗಳು ಧಾರಾಳ ಸಂಪತ್ತನ್ನು ವ್ಯಯಿಸಿ, ಕುಟುಂಬ, ಊರನ್ನು ಬಿಟ್ಟು ಶಾರೀರಿಕ ಕಷ್ಟಗಳನ್ನು ಅನುಭವಿಸುತ್ತಾ ಅರಫಾದಲ್ಲಿ ಒಟ್ಟುಗೂಡಿರುವುದು ಅಲ್ಲಾಹನ ತೃಪ್ತಿ, ಸಾಮಿಪ್ಯ ಮತ್ತು ಪಾಪ ವಿಮೋಚನೆಯನ್ನು ಬಯಸಿ ಮಾತ್ರ. ಇದು ಆ ವಾಕ್ಯದ ಉದ್ದೇಶ ಅಲ್ಲದಿದ್ದರೂ ಇಲ್ಲಿ ತಲುಪಿದ ಒಬ್ಬನ ಪ್ರತಿಫಲವನ್ನೂ ಅವನು ವ್ಯರ್ಥಗೊಳಿಸುವುದಿಲ್ಲ. ಅವರು ಏನನ್ನು ಉದ್ದೇಶಿಸುತ್ತಾರೋ ಅದು ಲಭಿಸುತ್ತದೆ ಎಂದು ಆಗುತ್ತದೆ ಅಥವಾ ಪ್ರತಿಯೊಬ್ಬರ ಉದ್ದೇಶ, ಆತ್ಮಾ ರ್ಥತೆಯನ್ನು ನೋಡಿ ಅವನ ಸ್ಥಾನವನ್ನು ತೀರ್ಮಾನಿಸಲಾಗುವುದು ಎಂದೂ ಆಗಬಹುದು.” (ಭಾಗ: 5, ಪುಟ 1800)

ಹಜ್ಜ್ ನ  ಕರ್ಮಗಳಲ್ಲಿ ಅರಫಾದಲ್ಲಿ ತಂಗುವುದು ಅತ್ಯಂತ ಪ್ರಾಮುಖ್ಯತೆಯುಳ್ಳದ್ದಾಗಿದೆ. ಪ್ರವಾದಿ(ಸ) ಹೇಳಿದರು:
“ಹಜ್ಜ್ ಎಂದರೆ ಅರಫಾ ಆಗಿದೆ. ಹಜ್ಜೆಂದರೆ ಅರಫಾವಾಗಿದೆ. ಹಜ್ಜ್ ಎಂದರೆ ಅರಫಾವಾಗಿದೆ.” (ತಿರ್ಮಿದಿ)

ಇದನ್ನು ವಿವರಿಸುತ್ತಾ ಶೈಖುಲ್ ಇಸ್ಲಾಮ್ ಇಬ್ನು ತೈಮಿಯ(ರ) ಬರೆದಿದ್ದಾನೆ- “ಹಜ್ಜ್ ಎಂದರೆ ಅರಫಾ” ಎಂದು ಹೇಳಿದುದರ ಉದ್ದೇಶ ಅರಫಾ ಹಜ್ಜ್ ನ ಅಡಿಪಾಯವಾಗಿದೆಯೆಂದೂ, ಇತರ ಕರ್ಮಗಳು ಅದರ ಶಾಖೆಗಳೆಂದೂ ಆಗಿದೆ.”

ಅರಫಾದಲ್ಲಿ ಸೇರಿದ ಹಾಜಿಗಳ ಮಹತ್ವವನ್ನು ವರ್ಣಿಸುತ್ತಾ ಪ್ರವಾದಿಯವರು(ಸ) ಒಮ್ಮೆ ಹೀಗೆ ಹೇಳಿದರು:
“ಅರಫಾದಲ್ಲಿರುವವರ ಕುರಿತು ಅಲ್ಲಾಹನು ಹೆಮ್ಮೆಯಿಂದ ಮಲಕ್‌ಗಳೊಂದಿಗೆ ಹೇಳುವನು. ಜಡೆಗಟ್ಟಿದ ಕೂದಲು, ಧೂಳು ತುಂಬಿದ ದೇಹದೊಂದಿಗಿರುವ ನನ್ನ ದಾಸರನ್ನು ನೋಡಿ.” (ಅಹ್ಮದ್)

ಇನ್ನೊಂದು ಹದೀಸ್‌ನಲ್ಲಿ ಇದೇ ಆಶಯವನ್ನು ಈ ರೀತಿ ವಿವರಿಸಲಾಗಿದೆ- ಪ್ರವಾದಿ(ಸ) ಹೇಳಿರುವುದಾಗಿ ಜಾಬಿರ್(ರ)ರು ವರದಿ ಮಾಡುಟತ್ತಾರೆ, “ಅರಫಾ ದಿನಕ್ಕಿಂತ ಅಲ್ಲಾಹನ ಬಳಿ ಮಹತ್ವವಿರುವ ಬೇರೆ ದಿನವಿಲ್ಲ. ಈ ದಿನದಲ್ಲಿ ಅಲ್ಲಾಹನು ಕೆಳಗಿನ ಆಕಾಶಕ್ಕೆ ಇಳಿದು ಬರುತ್ತಾನೆ. ನನ್ನ ದಾಸರನ್ನು ನೋಡಿ. ಧೂಳು ತುಂಬಿದ ವಸ್ತ್ರದೊಂದಿಗೆ, ಕೆದರಿದ ಕೂದಲಿನೊಂದಿಗೆ ತಲ್ಬಿಯತ್ ಹೇಳಿ ಅವರು ಬಂದಿದ್ದಾರೆ. ನನ್ನ ಕರುಣೆಯನ್ನು ನಿರೀಕ್ಷಿಸಿ ದೂರ ದಿಕ್ಕುಗಳಿಂದ ಅವರು ಬಂದು ತಲುಪಿದ್ದಾರೆ. ಅವರು ನನ್ನ ಶಿಕ್ಷೆಯನ್ನು ನೇರವಾಗಿ ಕಂಡಿಲ್ಲ. ಅರಫಾ ದಿನದಂತೆ, ಧಾರಾಳ ಸಂಖ್ಯೆಯಲ್ಲಿ ನರಕದಿಂದ ಮುಕ್ತಿ ನೀಡುವ ಬೇರೆ ದಿನವಿಲ್ಲ.” (ಬೈಹಕಿ)

ಅನಸುಬ್ನು ಮಾಲಿಕ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ಅರಫಾಕ್ಕೆ ಬಂದರು. ಆಗ ಸೂರ್ಯನು ಅಸ್ತಮಿಸುವ ಸಮಯವಾಗಿತ್ತು. ಅವರು ಬಿಲಾಲ್(ರ)ರೊಂದಿಗೆ ಹೇಳಿದರು, “ಬಿಲಾಲ್… ಎಲ್ಲರೊಡನೆ ಈಚೆಗೆ ಗಮನಕೊಡಲು ಹೇಳಿ.” ಬಿಲಾಲ್ ಎದ್ದು ನಿಂತು ಹೇಳಿದರು: “ಅಲ್ಲಾಹನ ಪ್ರವಾದಿಯವರಿಗೆ(ಸ) ನಮ್ಮೊಂದಿಗೆ ಏನೋ ಮಾತನಾಡಲಿಕ್ಕಿದೆ. ಎಲ್ಲರೂ ಮೌನವಾಗಿರಿ.” ಜನರು ಮೌನ ವಹಿಸಿದರು. ಪ್ರವಾದಿಯವರು(ಸ) ಹೇಳಿದರು: “ಜನರೇ, ಈಗ ನನ್ನ ಬಳಿ ಜಿಬ್ರೀಲ್(ಅ) ಬಂದರು. ನನ್ನ ಪ್ರಭುವಿನ ಸಲಾಂ ತಿಳಿಸಿದರು.” ನಂತರ ಹೀಗೆ ಹೇಳಿದರು: “ನಿಶ್ಚಯವಾಗಿಯೂ ಅರಫಾದಲ್ಲೂ ಮಶ್‌ಅರ್‌ನಲ್ಲೂ ಇರುವವರಿಗೆ ಅಲ್ಲಾಹನು ಕ್ಷಮೆ ನೀಡಿದ್ದಾನೆ. ಅವರ ಜವಾಬ್ದಾರಿಯನ್ನು ಅವನು ವಹಿಸಿಕೊಂಡಿದ್ದಾನೆ.”

ಆಗ ಉಮರ್(ರ) ಎದ್ದು ನಿಂತು ಕೇಳಿದರು: “ಅಲ್ಲಾಹನ ಪ್ರವಾದಿವರ್ಯರೇ(ಸ), ಇದು ನಮಗೆ ಮಾತ್ರ ಸೀಮಿತವಾದ ವಿಷಯವೇ?” ಪ್ರವಾದಿ(ಸ) ಹೇಳಿದರು: “ಇದು ನಿಮ್ಮ ಬಳಿಕ ಅಂತ್ಯ ದಿನದವರೆಗೆ ಬರಲಿರುವ ಎಲ್ಲರಿಗೂ ಸಂಬಂಧಿಸಿದೆ.” ಆಗ ಉಮರ್(ರ) ಹೇಳಿದರು: “ಅಲ್ಲಾಹನು ಅತ್ಯಂತ ಪರಿಶುದ್ಧನೂ, ಒಳಿತುಳ್ಳವನೂ ಆಗಿದ್ದಾನೆ.” (ಇಬ್ನುಅಬ್ದಿಲ್ ರ‍್ರ್)

ಒಮ್ಮೆ ಓರ್ವ ಯಹೂದಿ ವ್ಯಕ್ತಿ ಉಮರ್(ರ)ರ ಬಳಿಗೆ ಬಂದು ಹೇಳಿದರು, “ಅಮೀರುಲ್ ಮುಅï‌ಮಿನೀನ್: ನಿಮ್ಮ ಗ್ರಂಥದಲ್ಲಿ ನೀವೆಲ್ಲರೂ ಪಾರಾಯಣ ಮಾಡುವ ಒಂದು ವಾಕ್ಯವಿದೆ. ನಮ್ಮ ಯಹೂದಿ ಸಮೂಹಕ್ಕೆ ಅದು ಅವತೀರ್ಣವಾಗುತ್ತಿದ್ದರೆ ನಾವು ಅಂದು ಹಬ್ಬವನ್ನು ಆಚರಿಸುತ್ತಿದ್ದೆವು.”

ಉಮರ್ ಕೇಳಿದರು: “ಆ ವಾಕ್ಯ ಯಾವುದು?”
ಯಹೂದಿ ಹೇಳಿದರು: “ಇಂದು ನಾನು ನಿಮ್ಮ ಧರ್ಮನ್ನು ನಿಮಗಾಗಿ ಪರಿಪೂರ್ಣಗೊಳಿಸಿದ್ದೇನೆ. ನನ್ನ ಕೊಡುಗೆಯನ್ನು ನಿಮ್ಮ ಮೇಲೆ ಪರಿಪೂರ್ಣಗೊಳಿಸಿದ್ದೇನೆ ಮತ್ತು ಇಸ್ಲಾಮನ್ನು ನಿಮ್ಮ ಧರ್ಮವೆಂಬ ನೆಲೆಯಲ್ಲಿ ಅಂಗೀಕರಿಸಿದ್ದೇನೆ.” (5: 3)

ಉಮರ್(ರ)ರು ಹೇಳಿದರು: “ಆ ವಾಕ್ಯ ಅವತರಿಸಿದ ದಿನ ನನಗೆ ತಿಳಿದಿದೆ. ಅದು ಇಳಿದ ಸ್ಥಳವೂ ತಿಳಿದಿದೆ. ಅಲ್ಲಾಹನ ಪ್ರವಾದಿಯವರಿಗೆ ಒಂದು ಶುಕ್ರವಾರದಂದು ಅರಫಾದಲ್ಲಿ ಈ ಆಯತ್ ಅವತೀರ್ಣಗೊಂಡಿದೆ.” (ಮುಸ್ಲಿಮ್)

ಅರಫಾ ದಿನವು ಪ್ರಾರ್ಥನೆಗೆ ಅತೀ ಹೆಚ್ಚು ಪ್ರಾದಾನ್ಯತೆಯಿರುವ ದಿನವಾಗಿದೆ. ಪ್ರವಾದಿಯವರು(ಸ) ಹೇಳಿದರು: “ಅತ್ಯಂತ ಉತ್ತಮ ಪ್ರಾರ್ಥನೆ ಅರಫಾ ದಿನದ ಪ್ರಾರ್ಥನೆಯಾಗಿದೆ.” (ತಿರ್ಮಿದಿ)

ಹಾಜಿಯಲ್ಲದವರಿಗೆ ಈ ದಿನದಲ್ಲಿ ಉಪವಾಸ ಆಚರಿಸುವುದು ಅತ್ಯಂತ ಪುಣ್ಯದಾಯಕವಾಗಿದೆ. ಪ್ರವಾದಿಯವರು(ಸ) ಹೇಳಿದರು: “ಅರಫಾ ದಿನದಲ್ಲಿ ಉಪವಾಸ ವ್ರತ ಆಚರಿಸುವವರಿಗೆ ಅದರ ಹಿಂದಿನ ಒಂದು ವರ್ಷದ ಮತ್ತು ಮುಂದಿನ ಒಂದು ವರ್ಷದ ಪಾಪಗಳು ಕ್ಷಮಿಸಲ್ಪಡುವುದು.” (ಮುಸ್ಲಿಮ್)

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …