Home / ಲೇಖನಗಳು / ಕಅಬಾ ರಕ್ಷಿಸಿದ ಹಕ್ಕಿಗಳು

ಕಅಬಾ ರಕ್ಷಿಸಿದ ಹಕ್ಕಿಗಳು

  • ಶೈಕ್ ಮುಹಮ್ಮದ್ ಕೆ.

`ಕಅಬಾ’ವನ್ನು ತಿಳಿಯದವರು ಯಾರೂ ಇರಲಾರರು. ಅದು ಅರೇಬಿಯಾದ ಮಕ್ಕಾ ನಗರದಲ್ಲಿದೆ. ಜಗತ್ತಿನ ಅತಿ ಪ್ರಸಿದ್ಧ ಆರಾಧನಾಲಯ. ಕೇವಲ ಅಲ್ಲಾಹನ ಆರಾಧನೆಗಾಗಿ ನಿರ್ಮಿಸಲಾಗಿರುವ ಭವನ. ಜಗತ್ತಿನಾದ್ಯಂತವಿರುವ ಮುಸ್ಲಿಮರು ದಿನಾಲೂ ಐದು ಹೊತ್ತು ಕಅಬಾದತ್ತ ಮುಖ ಮಾಡಿ ನಮಾಝ್ ಮಾಡುತ್ತಾರೆ. ಮರಣದ ಬಳಿಕ ಮೃತ ದೇಹವನ್ನು ಗೋರಿಯಲ್ಲಿ ಇರಿಸುವಾಗ ಅದರ ಮುಖವನ್ನು ಕಅಬಾಕ್ಕೆ ಅಭಿಮುಖವಾಗಿ ಇರಿಸುತ್ತಾರೆ.

ಸುಮಾರು 4000 ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ಕಅಬಾ ಪುನರ್ನಿರ್ಮಿಸಿದ್ದರು. ಅವರ ಪುತ್ರ ಪ್ರವಾದಿ ಇಸ್ಮಾಈಲ್‌ರು ಅವರೊಂದಿಗೆ ಸಹಕರಿಸಿದ್ದರು.

ಅಬ್ರಹಮ್ ಯಮನ್‌ನ ಆಡಳಿತಗಾರನಾಗಿದ್ದ. ಆತ ದುರಹಂಕಾರಿಯಾಗಿದ್ದ. ಅಬ್ರಹಮ್ ಯಮನ್‌ನ ರಾಜಧಾನಿಯಾಗಿದ್ದ ಸನ್‌ಆದಲ್ಲಿ ಒಂದು ಬೃಹತ್ ಕಟ್ಟಡವನ್ನು ಕಟ್ಟಿಸಿದನು. ಜನರು ಆರಾಧನೆಗಾಗಿ ಅಲ್ಲಿಗೆ ಬರಬೇಕೆಂದು ಕರೆ ನೀಡಿದನು. ಆದರೆ ಅರಬರು ಅದನ್ನು ಲೆಕ್ಕಿಸಲಿಲ್ಲ. ಅವರು ಅದನ್ನು ತಿರುಗಿಯೂ ನೋಡಲಿಲ್ಲ. ಅಬ್ರಹಮ್ ಕೋಪಾಂಧನಾದ. ಜನರು ತನ್ನ ಮಂದಿರಕ್ಕೆ ಬಾರದಿರುವುದಕ್ಕೆ ಕಅಬಾ ಎಂಬ ಆರಾಧನಾಲಯವೇ ಕಾರಣವೆಂದು ಆತನಿಗೆ ತೋಚಿತು. ಕಅಬಾವನ್ನು ಧ್ವಂಸಗೊಳಿಸದೆ ತನ್ನ ಯೋಜನೆ ಯಶಸ್ವಿಯಾಗಲಾರದೆಂದು ಆತ ಗ್ರಹಿಸಿದ. ಒಂದು ಮಹಾ ಸೇನೆಯನ್ನು ಸಿದ್ಧಪಡಿಸಿದ. ಅದರಲ್ಲಿ ತರಬೇತಿ ನೀಡಿದ ಅನೇಕ ಆನೆಗಳಿದ್ದುವು. ಆತ ಸೇನೆಯನ್ನು ಕಅಬಾದತ್ತ ಮುನ್ನಡೆಸಿದ.

ಅಬ್ರಹಮ್‌ನ ಸೈನಿಕರು ಮಕ್ಕಾ ನಿವಾಸಿಗಳ ಅನೇಕ ಒಂಟೆಗಳನ್ನು ದೋಚಿದರು. ಅದರಲ್ಲಿ ಅಬ್ದುಲ್ ಮುತ್ತಲಿಬ್‌ರ 200 ಒಂಟೆಗಳೂ ಸೇರಿದ್ದುವು. ಅವರು ಪ್ರವಾದಿ ಮುಹಮ್ಮದರ ಪಿತಾಮಹರು. ಕಅಬಾದ ರಕ್ಷಣೆಯ ಹೊಣೆಯು ಅವರ ಮೇಲಿತ್ತು.

ಅಬ್ರಹಮ್‌ನ ನಾಯಕತ್ವದಲ್ಲಿ ಬೃಹತ್ ಸೇನೆ ಬರುವ ಸುದ್ದಿಯಿಂದ ಮಕ್ಕಾದವರು ಭಯಭೀತರಾದರು. ಎಲ್ಲರೂ ಒಟ್ಟು ಸೇರಿ ಏನು ಮಾಡುವುದೆಂದು ಸಮಾಲೋಚಿಸಿದರು. ಅಬ್ರಹಮ್‌ನ ಸೇನೆಯನ್ನು ನಮ್ಮಿಂದ ಎದುರಿಸಲು ಸಾಧ್ಯ ವಿಲ್ಲವೆಂದು ಅವರಿಗೆ ತೋರಿತು. ಆದ್ದರಿಂದ ಮಕ್ಕಾದಿಂದ ಹೊರ ಹೋಗಲು ನಿರ್ಧರಿಸಿದರು.

ಅಬ್ರಹಮ್ ತನ್ನ ಪ್ರತಿನಿಧಿಯನ್ನು ಅಬ್ದುಲ್ ಮುತ್ತಲಿಬ್‌ರ ಬಳಿಗೆ ಕಳುಹಿಸಿದನು. ಆತ ತಿಳಿಸಿದ: “ನಮ್ಮ ರಾಜರು ನಿಮ್ಮ ನಾಡಿಗೆ ಯುದ್ಧಕ್ಕಾಗಿ ಬಂದಿಲ್ಲ. ಕಅಬಾವನ್ನು ಕೆಡಹಲಿಕ್ಕಾಗಿ ಬಂದಿದ್ದಾರೆ. ನೀವು ಅದನ್ನು ವಿರೋಧಿಸದಿದ್ದರೆ ನಾವು ನಿಮ್ಮೊಡನೆ ಯುದ್ಧ ಮಾಡುವುದಿಲ್ಲ. ನೀವು ವಿರೋ ಧಿಸಿದರೆ ನಾವು ನಿಮ್ಮನ್ನು ಬಿಡುವುದಿಲ್ಲ.”

ಇದನ್ನು ಕೇಳಿ ಅಬ್ದುಲ್ ಮುತ್ತಲಿಬ್ ಹೀಗೆಂದರು, “ನಾವು ನಿಮ್ಮ ರಾಜರೊಡನೆ ಯುದ್ಧ ಮಾಡಬಯಸುವುದಿಲ್ಲ. ನಮಗೆ ಅಂಥ ಶಕ್ತಿಯೂ ಇಲ್ಲ. ಇನ್ನು ಕಅಬಾ ಕೆಡಹುವ ವಿಷಯ, ಅದು ದೇವನ ಭವನವಾಗಿದೆ. ಆತನು ಅದನ್ನು ಕಾಪಾಡ ಬಯಸಿದರೆ ಅದನ್ನು ಧ್ವಂಸಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.”

ತರುವಾಯ ಅಬ್ರಹಮ್‌ನ ಅಪೇಕ್ಷೆಯಂತೆ ಅಬ್ದುಲ್ ಮುತ್ತಲಿಬ್‌ರು ಆತನನ್ನು ಭೇಟಿಯಾದರು. ಸಂಭಾಷಣೆಯ ವೇಳೆ ಅವರು ತಮ್ಮ 200 ಒಂಟೆಗಳನ್ನು ಹಿಂದಿರುಗಿಸುವಂತೆ ವಿನಂತಿಸಿದರು. ಇದರಿಂದ ಅಬ್ರಹಮ್‌ನಿಗೆ ಅಚ್ಚರಿಯಾಯಿತು. ಆತ ಹೀಗೆ ಹೇಳಿದ: “ನಿಮಗೆ ಕಅಬಾದ ಬಗ್ಗೆ ಅತ್ಯಧಿಕ ಪ್ರೀತಿ ಮತ್ತು ಗೌರವವಿದೆ ಎಂದು ನಾನು ಹೇಳಿದ್ದೆ. ನಾನು ಅದನ್ನು ಕೆಡಹಲಿಕ್ಕಾಗಿ ಬಂದಿದ್ದರೂ ನೀವು ಆ ಬಗ್ಗೆ ಮೌನವಾಗಿರುವಿರೇಕೆ? ನೀವು ಒಂಟೆಯ ವಿಷಯ ಮಾತ್ರ ಮಾತಾಡುತ್ತಿದ್ದೀರಲ್ಲಾ?”

“ಹೌದು, ನಾವು ಕಅಬಾ ಭವನವನ್ನು ಅತ್ಯಧಿಕ ಗೌರವಿಸುತ್ತೇವೆ. ಅಂತೆಯೇ ಅತ್ಯಧಿಕ ಪ್ರೀತಿಸುತ್ತಿದ್ದೇವೆ. ಅದು ಅಲ್ಲಾಹನ ಭವನ. ಆತನೇ ಅದನ್ನು ಸಂರಕ್ಷಿಸುತ್ತಾನೆ. ಅಲ್ಲಾಹನು ಅದು ಉಳಿಯಬೇಕೆಂದು ಇಚ್ಛಿಸಿದರೆ ಯಾರಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ಆದರೆ ಒಂಟೆಗಳು ನನ್ನ ಸೊತ್ತಾಗಿವೆ. ಅದನ್ನು ನಾನೇ ಕೇಳಬೇಕಲ್ಲವೇ?” ಅಬ್ದುಲ್ ಮುತ್ತಲಿಬ್ ಹೇಳಿದರು.

ಅಬ್ರಹಮ್ ಒಂಟೆಗಳನ್ನು ಮರಳಿಸಿದ. ತರುವಾಯ ಸೇನೆಯನ್ನು ಕಅಬಾದತ್ತ ನಡೆಸಿದ. ಈ ಸುದ್ದಿ ತಿಳಿದ ಮಕ್ಕಾದ ನಾಯಕರೆಲ್ಲರೂ ಕಅಬಾದಲ್ಲಿ ಬಂದು ಸೇರಿದರು. ಅವರು ಹೀಗೆ ಪ್ರಾರ್ಥಿಸಿದರು, “ಅಲ್ಲಾಹನೇ, ನಿನ್ನ ಭವನವನ್ನು ರಕ್ಷಿಸಲು ನಾವು ಅಸಮರ್ಥರು. ನೀ ನೇ ಅದನ್ನು ರಕ್ಷಿಸು. ನೀನು ಇಚ್ಛಿಸಿದರೆ ಅದನ್ನು ಕೆಡಹಲು ಯಾರಿಂದಲೂ ಸಾಧ್ಯವಿಲ್ಲ. ನೀನು ಬಯಸಿದರೆ ಅದನ್ನು ಉಳಿಸಲಿಕ್ಕೂ ಸಾಧ್ಯವಿಲ್ಲ.”

ಏನಾಶ್ಚರ್ಯ! ಅಬ್ರಹಮ್‌ನ ಸೇನೆಯತ್ತ ಆಕಾಶದಲ್ಲಿ ಅಸಂಖ್ಯಾತ ಹಕ್ಕಿಗಳು ಹಾರಿ ಬಂದುವು. ಅವುಗಳ ಕೊಕ್ಕು ಮತ್ತು ಕಾಲುಗಳಲ್ಲಿ ಸಣ್ಣ ಸಣ್ಣ ಕಲ್ಲುಗಳಿ ದ್ದುವು. ಅವು ಸೇನೆಯನ್ನು ಆನೆಗಳನ್ನು ನಾಶಪಡಿಸುವಂಥ ವಿಷ ಕಲ್ಲುಗಳಾಗಿದ್ದುವು. ಹಕ್ಕಿಗಳು ಉದುರಿಸಿದ ಕಲ್ಲಿನಿಂದ ಸೇನೆ ಧ್ವಂಸವಾಯಿತು. ಅಬ್ರಹಮ್, ಆತನ ಸೇನೆ ಮತ್ತು ಆನೆಗಳಲ್ಲೆವೂ ಸತ್ತು ಬಿದ್ದುವು. ಅಲ್ಲಾಹನ ಶಿಕ್ಷೆಯು ಅವರನ್ನು ನಾಶಪಡಿಸಿತು. ಅಲ್ಲಾಹನು ಕಅಬಾವನ್ನು ರಕ್ಷಿಸಿದನು.

ಮಾನವನು ನಾನಾ ರೀತಿಯ ಲೆಕ್ಕಾಚಾರ ಮಾಡುತ್ತಾನೆ. ಅವೆಲ್ಲವೂ ಈಡೇರಬಹುದೆಂದು ಭಾವಿಸುತ್ತಾನೆ. ಅದಕ್ಕಾಗಿ ಶ್ರಮಿಸುತ್ತಾನೆ. ಆದರೆ ಅಲ್ಲಾಹನು ಬೇರೆಯೇ ತೀರ್ಮಾನಿಸುತ್ತಾನೆ.

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …