Home / ಲೇಖನಗಳು / ಹಜ್ಜ್ ವಿಧಿ-ವಿಧಾನಗಳ ಸಮಗ್ರ ಮಾಹಿತಿ

ಹಜ್ಜ್ ವಿಧಿ-ವಿಧಾನಗಳ ಸಮಗ್ರ ಮಾಹಿತಿ

✍️ ಡಾ| ಕೆ. ಇಲ್ಯಾಸ್ ಮೌಲವಿ

ಜೀವನದಲ್ಲಿ ಹಜ್ಜ್ ಕರ್ಮವನ್ನು ನಿರ್ವಹಿಸುವ ಅವಕಾಶವು ಬಹಳ ಅಪರೂಪವಾಗಿ ಲಭಿಸುತ್ತದೆ. ಆದ್ದರಿಂದ ಹಜ್ಜ್ ಮತ್ತು ಉಮ್ರಾಕ್ಕೆ ಹೊರಡುವ ಮುನ್ನ ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರಿಯಾಗಿ ಅರಿತುಕೊಳ್ಳುವುದು, ಗ್ರಹಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾಡುವ ಕರ್ಮಗಳು ತಖ್ವಾ ಇಲ್ಲದ ಕರ್ಮಗಳಂತೆ ನಿಷ್ಫಲವಾಗಿದೆ. ಸಾಮಾನ್ಯವಾಗಿ ಜೀವನದಲ್ಲಿ ಒಂದು ಬಾರಿ ಲಭಿಸುವ ಈ ಅವಕಾಶವನ್ನು ನಿಷ್ಫಲಗೊಳಿಸುವುದು. ನಮ್ಮ ಕಠಿಣ ಪರಿಶ್ರಮ, ಸಂಪತ್ತು, ಪರಲೋಕದ ಪ್ರತಿಫಲ ಹೀಗೆ ಎಲ್ಲವನ್ನೂ ನಷ್ಟಗೊಳಿಸುತ್ತದೆ.

ಆದ್ದರಿಂದ ಸಿದ್ಧತೆಯಲ್ಲಿ ಅತಿ ಪ್ರಧಾನವಾದದ್ದು ಜ್ಞಾನದ ಸಿದ್ಧತೆ. ಹಜ್ಜ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ, ಪುಸ್ತಕಗಳು, ಲೇಖನಗಳನ್ನು ಓದಿ. ವಿಡಿಯೋ, ಕ್ಯಾಸೆಟ್‌ಗಳಲ್ಲಿ ವೀಕ್ಷಿಸಿ ಹಾಗೂ ಭಾಷಣಗಳನ್ನು ಆಲಿಸಿ ಹಜ್ಜ್ ನ ಕುರಿತು ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಹಜ್ಜ್ ಕರ್ಮ ನಿರ್ವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ಅದನ್ನು ಕೇಳುವುದು ಹೆಚ್ಚು ಉಪಕಾರ ವಾಗುತ್ತದೆ. ಕೇವಲ ಹಜ್ಜ್ ನ ವಿಧಿಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು, ಅದರ ಆತ್ಮವೂ ಉದ್ದೇಶವೂ ಪ್ರತಿಯೊಂದು ಕರ್ಮಗಳ ಚಿಹ್ನೆಗಳು ಹಾಗೂ ಸ್ಥಳಗಳಲ್ಲಿ ಹಿಂದಿನ ಚರಿತ್ರೆಯನ್ನು ತಿಳಿದುಕೊಳ್ಳುವುದು ಆತ್ಮಾರ್ಥತೆಯಿಂದ, ಭಕ್ತಿಪೂರ್ವಕವಾಗಿ ಹಜ್ಜ್ ನಿರ್ವಿಹಿಸಲು ನಮಗೆ ಪ್ರೇರಕ ವಾಗುತ್ತದೆ.

ಹಜ್ಜ್ ನ ಕರ್ಮಗಳು
1.ಇಹ್‌ರಾಮ್, 2. ಅರಫಾದಲ್ಲಿ ತಂಗುವುದು, 3, ತ್ವವಾಫುಲ್ ಇಫಾದ, 4. ಸಫಾ-ಮರ್ವಾದ ನಡುವ ಸಈ, 5. ಕೂದಲು ಬೋಳಿಸುವುದು ಅಥವಾ ಕತ್ತರಿಸುವುದು.

ಹಜ್ಜ್ ನ ರುಕ್‌ನುಗಳಲ್ಲಿ ಯಾವುದನ್ನಾದರೂ ಉಪೇಕ್ಷಿಸಿದರೆ ಅಥವಾ ನಷ್ಟವಾದರೆ ಹಜ್ಜ್ ಸ್ವೀಕೃತವಲ್ಲ. ಅದನ್ನು ನಿರ್ವಹಿಸುವುದು ಮಾತ್ರ ಪರಿಹಾರ. ರುಕ್ನುಗಳನ್ನು ಪ್ರಾಯಶ್ಚಿತ ಮಾಡುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಇಹ್ರಾಮ್ ಧರಿಸದಿದ್ದರೆ ಹಜ್ಜ್ ನಷ್ಟವಾಗುತ್ತದೆ. ಅರಫಾದಲ್ಲಿ ತಂಗಲು ನಿಶ್ಚಿತ ಸಮಯದಲ್ಲಿ ಸಾಧ್ಯವಾಗದಿದ್ದರೆ ಹಜ್ಜ್ ನಷ್ಟವಾಗುತ್ತದೆ. ಹಾಗೆ ಸಂಭವಿಸಿದರೆ ತ್ವವಾಫ್, ಸಈ, ಕೂದಲು ಕತ್ತರಿಸಿ, ಅಂದರೆ ಉಮ್ರಾ ಕರ್ಮಗಳನ್ನು ನಿರ್ವಹಿಸಿ ಇಹ್ರಾಮ್‌ನಿಂದ ವಿರಮಿಸಬಹುದು. ಮುಂದಿನ ವರ್ಷ ಹಜ್ಜ್ ಕರ್ಮವನ್ನು ನಿರ್ವಹಿಸಿ ಅರಫಾ ನಷ್ಟವಾದದ್ದಕ್ಕೆ ಬಲಿಯರ್ಪಿಸಲೂ ಬೇಕು. (ಹನಫಿ ಕರ್ಮಶಾಸ್ತ್ರ ಪ್ರಕಾರ ಬಲಿಯರ್ಪಿಸಬೇಕಾಗಿಲ್ಲ) ತ್ವವಾಫುಲ್ ಇಫಾದ ಮತ್ತು ಸಅï‌ಯ್ ನಷ್ಟವಾದರೆ ಅದನ್ನು ನಿರ್ವಹಿಸಿಯೇ ಪರಿಹಾರ ಕಂಡುಕೊಳ್ಳಬೇಕು. ತ್ವವಾಫುಲ್ ಇಫಾದ ಅಥವಾ ಸಅï‌ಯ್ ಮಾಡದೆ ಮಕ್ಕಾದಿಂದ ನಿರ್ಗಮಿಸಿದರೆ ಮರಳಿ ಬಂದು ಅವೆರಡನ್ನು ನಿರ್ವಹಿಸಿದರೆ ಮಾತ್ರ ಹಜ್ಜ್ ಸರಿಯಾಗುತ್ತದೆ. ಅದರ ನಡುವೆ ಪತಿ-ಪತ್ನಿ ಲೈಂಗಿಕ ಸಂಪರ್ಕವಾಗಿದ್ದರೆ ಅದಕ್ಕೆ ಪ್ರಾಯಶ್ಚಿತವಾಗಿ ಬಲಿ ನೀಡಿದರೆ ಸಾಕು. ಕೂದಲು ಸ್ವದೇಶದಲ್ಲೂ ಕತ್ತರಿಸಿಕೊಳ್ಳಬಹುದು.

ಹಜ್ಜ್ ನ ವಾಜಿಬ್‌ಗಳು
1.ಮೀಖಾತ್‌ನಲ್ಲಿ ಇಹ್ರಾಮ್ ಧರಿಸುವುದು.

2.ಬಲಿ ಕರ್ಮದ ಹಿಂದಿನ ರಾತ್ರಿ ಮುಝ್ಝಲಿಫದಲ್ಲಿ ತಂಗುವುದು.

3.ತಶ್ರೀಕ್‌ನ ದಿನಗಳಲ್ಲಿ ಮಿನಾದಲ್ಲಿ ಉಳಿಯುವುದು.

4.ಜಮ್ರಾಗಳಲ್ಲಿ ಕಲ್ಲೆಸೆಯುವುದು.

5.ವಿದಾಯ ತವಾಫ್ ನಿರ್ವಹಿಸುವುದು.

ಮನಪೂರ್ವಕವಾಗಿ ಇವುಗಳಲ್ಲಿ ಯಾವುದಾದರೂ ವಾಜಿಬ್ ಅನ್ನು ಉಪೇಕ್ಷಿಸಿದರೆ ಅಥವಾ ನಷ್ಟವಾದರೆ ಪ್ರತಿಯೊಂದಕ್ಕೂ ಬದಲಿಯಾಗಿ ಹರಮ್‌ನಲ್ಲಿ ಒಂದೊಂದು ಆಡನ್ನು ಬಲಿ ನೀಡಿ ಬಡವರಿಗೆ ಹಂಚಬೇಕು. ಅದರಿಂದ ಸ್ವಲ್ಪವನ್ನೂ ಸ್ವತಃ ತಿನ್ನಬಾರದು. ಬಲಿ ನೀಡಲು ಸಾಧ್ಯವಾಗದವರು ಪಶ್ಚಾತ್ತಾಪಪಟ್ಟು ಮರಳಬೇಕು. ಉದ್ದೇಶ ಪೂರ್ವಕವಲ್ಲದೆ ವಾಜಿಬ್ (ಕಡ್ಡಾಯ) ನಷ್ಟವಾದರೆ ಅವರು ತಪ್ಪುಗಾರರಲ್ಲ. ಈ ಪ್ರಾಯಶ್ಚಿತದೊಂದಿಗೆ ಹಜ್ಜ್ ಸಿಂಧುವಾಗುತ್ತದೆ. ಬಲಿ ನೀಡುವ ಬದಲು 10 ಉಪವಾಸ ಹಿಡಿದರೂ ಸಾಕಾಗುವುದು.

ಹಜ್ಜ್ ನ ಸುನ್ನತ್‌ಗಳು
ಸುನ್ನತ್ ಉಪೇಕ್ಷಿಸುವುದರಿಂದ ಅದು ಹಜ್ಜ್ ನ ಸಿಂಧುತ್ವವನ್ನು ಬಾಧಿಸುವುದಿಲ್ಲ.

1.ಇಹ್ರಾಮ್‌ಗೆ ಮೊದಲು ಸ್ನಾನ ಮತ್ತು ಸುಗಂಧ ದ್ರವ್ಯ ಪೂಸುವುದು.

2.ಪುರುಷರು ಬಿಳಿ ಬಣ್ಣದ ಅರ್ಧ ಲುಂಗಿ, ಭುಜದಲ್ಲಿ ಹಾಕುವ ಬಟ್ಟೆಯನ್ನು ಧರಿಸಿಕೊಂಡು ಇಹ್ರಾಮ್‌ನಲ್ಲಿ ಪ್ರವೇಶಿಸುವುದು.

3.ತಲ್ಬಿಯತ್-ಉಚ್ಛ ಸ್ವರದಲ್ಲಿ ಹೇಳುವುದು.

4.ಅರಫಾ ದಿನದ ಹಿಂದಿನ ರಾತ್ರಿ (ದುಲ್ ಹಜ್ಜ್ 8ರ ರಾತ್ರಿ) ಮಿನಾದಲ್ಲಿ ರಾತ್ರಿ ತಂಗುವುದು.

5.ಹಜರುಲ್ ಅಸ್ವದ್ ಅನ್ನು ಚುಂಬಿಸುವುದು.

6.ಉಮ್ರಾ ಅಥವಾ ಖುದೂಮ್‌ನ ತ್ವವಾಫ್‌ನಲ್ಲಿ ಇದ್‌ತ್ವಿಬಾಅï (ಮೇಲಿನ ಲುಂಗಿಯ ಮಧ್ಯಭಾಗ ಬಲ ಕಂಕುಳದಲ್ಲೂ ಎರಡು ತುದಿಗಳು ಎಡ ಭುಜಗಳಲ್ಲಿ ಆಗುವ ರೀತಿಯಲ್ಲಿ ಹಾಕುವುದು)

7.ಉಮ್ರಾ ಅಥವಾ ಖುದೂಮಿನ ತ್ವವಾಫ್‌ನಲ್ಲಿ (ಮೊದಲ 3 ಪ್ರದಕ್ಷಿಣೆ ಮಾತ್ರ) ರಮಲ್/ವೇಗದಲ್ಲಿ ನಡೆಯುವುದು.

8.ಮುಫ್ರಿದ್‌ಗೂ ಖಾರಿನಿಗೂ ಖುದೂಮಿನ ತ್ವವಾಫ್.

9.ತ್ವವಾಫ್‌ನ ಬಳಿಕ ಮಖಾಮು ಇಬ್ರಾಹೀಮ್‌ನಲ್ಲಿ 2 ರಕಅತ್ ನಮಾಝ್.

ಇಹ್ರಾಮಿನ ಪೂರ್ವ ಸಿದ್ಧತೆಗಳು
ಇಹ್ರಾಮ್‌ಗೆ ಪ್ರವೇಶಿಸುವ ಮೊದಲು ಉಗುರು ಕತ್ತರಿಸುವುದು, ಕಂಕುಳದ ಮತ್ತು ಗುಪ್ತಾಂಗದ ಕೂದಲು ತೆಗೆಯುವುದು, ಸ್ನಾನ ಮಾಡುವುದು, ವುಝೂ ಮಾಡುವುದು ಮುಂತಾದ ಕಾರ್ಯಗಳು ಪುರುಷರಿಗೂ- ಸ್ತ್ರೀಯರಿಗೂ ಒಂದೇ ರೀತಿಯಲ್ಲಿ ಸುನ್ನತ್ ಆಗಿದೆ. ಆದರೆ ಮೀಸೆ ಕತ್ತರಿಸುವುದು ಶರೀರಕ್ಕೆ ಸುಗಂಧ ಪೂಸುವುದು ಎಂಬುದು ಪುರುಷರಿಗೆ ಸುನ್ನತ್ತಾಗಿದೆ.

ನಂತರ ಪುರುಷರಲ್ಲಿ ಸಾಮಾನ್ಯ ವಸ್ತ್ರವನ್ನು ಕಳಚಿ ಒಂದು ಬಟ್ಟೆ ಲುಂಗಿಯಂತೆ ಉಟ್ಟುಕೊಳ್ಳಬೇಕು. ಇನ್ನೊಂದು ಹೆಗಲ ಮೇಲೆ ಹೊದ್ದುಕೊಳ್ಳಬೇಕು. ಬಟ್ಟೆಯು ಬಿಳಿಯಾಗಿರುವುದು ಉತ್ತಮ. ಮಹಿಳೆಯರಿಗೆ ಇಹ್ರಾಮ್‌ನಲ್ಲಿ ಪ್ರತ್ಯೇಕ ವಸ್ತ್ರವೋ, ಅದಕ್ಕೆ ವಿಶೇಷ ಬಣ್ಣವೋ ಸುನ್ನತ್ತಲ್ಲ.

ಇಹ್ರಾಮ್
ಹಜ್ಜ್ ಮತ್ತು ಉಮ್ರಾಕ್ಕೆ ಮಾಡುವ ನಿಯತ್‌ಗೆ ಇಹ್ರಾಮ್ ಎಂದು ಹೇಳಲಾಗುತ್ತದೆ. ನಿಷಿದ್ಧಗೊಳಿಸುವುದು, ನಿಷೇಧಿಸುವುದು ಎಂಬುದು ಇಹ್ರಾಮ್ ಎಂಬ ಪದದ ಅರ್ಥ.

ಹಜ್ಜ್ ಮತ್ತು ಉಮ್ರಾಕ್ಕಾಗಿ ನಿಯ್ಯತ್ ಮಾಡುವುದರೊಂದಿಗೆ ಸಾಮಾನ್ಯವಾಗಿ ಅನುಮತಿಸಲ್ಪಟ್ಟ ಹಲವು ವಿಷಯಗಳು ನಿಷಿದ್ಧವಾಗುವುದರಿಂದ ಇಹ್ರಾಮ್ ಎಂಬ ಪದವನ್ನು ಉಪಯೋಗಿಸಲಾಗುತ್ತದೆ.

ಇಹ್ರಾಮ್‌ಗೆ ಪ್ರವೇಶಿಸಲು ಕಡ್ಡಾಯ ನಮಾಝ್‌ನ ಬಳಿಕ ಆದರೆ ಉತ್ತಮ. ಇಹ್ರಾಮನ್ನು ಉದ್ದೇಶಿಸಿಕೊಂಡು ಎರಡು ರಕಅತ್ ನಮಾಝ್ ಮಾಡುವುದು ಸುನ್ನತ್ ಎಂದು ಹೆಚ್ಚಿನ ಇಮಾಮರ ಅಭಿಪ್ರಾಯ. ಅದರ ನಂತರ ಉಮ್ರಾಕ್ಕೆ ಇಹ್ರಾಮ್ ಮಾಡುವವರು `ಅಲ್ಲಾಹುಮ್ಮಾ ಲಬ್ಬೈಕ್ ಉಮ್ರತನ್’ (ಅಲ್ಲಾಹನೇ, ಉಮ್ರಾಕ್ಕೆ ಇಹ್ರಾಮ್ ಧರಿಸಿ ಕೊಂಡು ನಾನು ನಿನ್ನ ಕರೆಗೆ ಉತ್ತರ ನೀಡುತ್ತಿದ್ದೇನೆ) ಎಂದೂ, ಹಜ್ಜ್ ಗೆ ಇಹ್ರಾಮ್ ಮಾಡುವವರು `ಅಲ್ಲಾಹುಮ್ಮ ಲಬ್ಬೈಕ್ ಹಜ್ಜನ್’ (ಅಲ್ಲಾಹನೇ, ಹಜ್ಜ್ ಇಹ್ರಾಮ್ ಧರಿಸಿ ನಿನ್ನ ಕರೆ ಉತ್ತರ ನೀಡುತ್ತಿದ್ದೇನೆ.) ಎಂದೂ, ಹಜ್ಜ್ ಮತ್ತು ಉಮ್ರಾ ಒಟ್ಟಾಗಿ ನಿರ್ವಹಿಸಲು ಇಹ್ರಾಮ್ ಮಾಡುವವರು ಅಲ್ಲಾಹುಮ್ಮ ಲಬ್ಬೈಕ ಹಜ್ಜನ್ ವ ಉಮ್ರತನ್’ (ಅಲ್ಲಾಹನೇ, ಹಜ್ಜ್ ಮತ್ತು ಉಮ್ರಾಕ್ಕೆ ಇಹ್ರಾಮ್ ಧರಿಸಿಕೊಂಡು ನಿನ್ನ ಕರೆಗೆ ಉತ್ತರ ನೀಡುತ್ತೇನೆ) ಎಂದು ಹೇಳುವುದು ಸುನ್ನತ್ ಆಗಿದೆ.

ಇಹ್ರಾಮ್‌ಗೆ ಪ್ರವೇಶಿಸಿದ ಸ್ತ್ರೀ-ಪುರುಷರಿಗೆ ಕೆಳಗೆ ಹೇಳುವ ಕಾರ್ಯಗಳು ನಿಷಿದ್ಧವಾಗಿದೆ.

1.ಕೂದಲು ತೆಗೆಯುವುದು, ಉಗುರು ಕತ್ತರಿಸುವುದು, ಸುಗಂಧ ದ್ರವ್ಯ ಉಪಯೋಗಿಸುವುದು.

2.ಕುಂಕುಮ ಬಣ್ಣದಲ್ಲಿ ಮುಳುಗಿಸಿದ ವಸ್ತ್ರ ಉಪಯೋಗಿಸುವುದು.

3.ಸಂಭೋಗ, ವಿಷಯಾಸಕ್ತಿಯ ಮಾತುಗಳು, ಸ್ಪರ್ಶ, ವಿವಾಹ, ವಿವಾಹ ಸಂಬಂಧದ ಮಾತುಕತೆ ಮೊದಲಾದವು.

4.ಪಕ್ಷಿ-ಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಬೇಟೆಯಾಡುವುದಕ್ಕೆ ಸಹಾಯ ಮಾಡುವುದು.

5.ನಿಷಿದ್ಧ ಮಾತು, ಅನಗತ್ಯ ತರ್ಕ-ವಿತರ್ಕಗಳಲ್ಲಿ ತೊಡಗುವುದು.

ಈ ವಿಷಯಗಳಲ್ಲಿ ಸ್ತ್ರೀ-ಪುರುಷರು ಸಮಾನರಾಗಿದ್ದಾರೆ. ಆದರೆ, ಇಹ್ರಾಮ್‌ನಲ್ಲಿ ಪ್ರವೇಶಿಸಿದ ಪುರುಷರಿಗೆ ಮಾತ್ರ ನಿಷಿದ್ಧವಾದ ಇನ್ನೂ ಕೆಲವು ಕಾರ್ಯಗಳಿವೆ:

1.ಶರೀರದ ಆಕೃತಿಯ ಅಥವಾ ಅವಯವಗಳ ಆಕೃತಿಯಲ್ಲಿ ಹೊಲಿದ ವಸ್ತ್ರ ಧರಿಸುವುದು ಎಲ್ಲಾ ಪುರುಷರಿಗೆ ನಿಷಿದ್ಧವಾಗಿದೆ. ಶರ್ಟ್, ಬನಿಯನ್, ಪೈಜಾಮ, ಪ್ಯಾಂಟ್, ಅಂಡರ್‌ವೇರ್, ಸಾಕ್ಸ್ ಮೊದಲಾದವು.

2.ಟೊಪ್ಪಿ, ಮುಂಡಾಸು ಮೊದಲಾದ ತಲೆಯನ್ನು ಮುಚ್ಚುವ ವಸ್ತ್ರಗಳನ್ನು ಧರಿಸಬಾರದು. ಮಹಿಳೆಯರು ಹೊಲಿದ ವಸ್ತ್ರವನ್ನು ಉಪಯೋಗಿಸಬಹುದಾದರೂ ಕೈ ಚೀಲ ಧರಿಸುವುದು, ಮುಖದ ಮೇಲೆ ಪರದೆ ಹಾಕುವುದು ಕೂಡದು.

ತವಾಫ್
ಹಾಜಿಗಳು ಮಕ್ಕಾ ತಲುಪಿದ ಬಳಿಕ ಪ್ರಥಮವಾಗಿ ಕೂಡಲೇ ತವಾಫ್ ಮಾಡಬೇಕಾಗಿದೆ. ಕಅಬಾ ಭವನಕ್ಕೆ ಅದರ ಹೊರಭಾಗದಿಂದ ಬರುವ ಏಳು ಸುತ್ತುಗಳು ತವಾಫ್ ಎನ್ನಲಾಗುತ್ತದೆ.
ಉಮ್ರಾಕ್ಕಾಗಿ ಇಹ್ರಾಮ್ ಮಾಡಿದವರು ಮೊದಲು ನಿರ್ವಹಿಸುವ ತವಾಫ್ ಉಮ್ರಾದ ಕಡ್ಡಾಯ ತವಾಫ್ ಆಗಿದೆ. ಹಜ್ಜ್ ಗೆ ಮಾತ್ರವೋ ಅಥವಾ ಉಮ್ರಾ ಮತ್ತು ಹಜ್ಜ್ ಗೆ ಜೊತೆಯಾಗಿ ಇಹ್ರಾಮ್ ಧರಿಸಿದವರು ನಿರ್ವಹಿಸುವುದು ಹಜ್ಜ್ ನ ಸುನ್ನತ್ತಾದ `ತ್ವವಾಫುಲ್ ಖುದೂಮ್’ ಆಗಿರುತ್ತದೆ.

ಮಕ್ಕಾಕ್ಕೆ ತಲುಪಿದ ಕೂಡಲೇ ನಿರ್ವಹಿಸುವ ತವಾಫ್‌ಗೆ ಮೊದಲು ಪುರುಷರ ಇಹ್ರಾಮ್‌ನ ಹೊದೆಯುವ ಬಟ್ಟೆಯನ್ನು ಬಲ ಭುಜವು ಹೊರಗೆ ಕಾಣುವಂತೆ ಬಲ ಕಂಕುಳಿನ ಅಡಿಗೆ ಇಟ್ಟು ಅದರ ಒಂದು ಸೆರಗನ್ನು ಎಡ ಹೆಗಲ ಮೇಲೆ ಹಾಕಿಕೊಳ್ಳುವುದು ಸುನ್ನತ್ ಆಗಿದೆ. ಮೊದಲ ಮೂರು ಸುತ್ತು ಕಾಲನ್ನು ಹತ್ತಿರ ಹತ್ತಿರ ಇಟ್ಟುಕೊಂಡು ವೇಗವಾಗಿ ನಡೆಯುವುದು ಸುನ್ನತ್ ಆಗಿದೆ.

ಕಅಬಾದ ಹಜ್‌ರುಲ್ ಅಸ್ವದ್ ಇರುವ ಮೂಲೆಯಿಂದ ತವಾಫ್ ಆರಂಭಿಸಬೇಕು. ಸಾಧ್ಯವಾದರೆ ಹಜರುಲ್ ಅಸ್ವದನ್ನು ಚುಂಬಿಸುವುದು ಸುನ್ನತ್ ಆಗಿದೆ. ಸಾಧ್ಯವಾಗದಿದ್ದರೆ ಕೈಯಿಂದ ಅಥವಾ ಯಾವುದರಿಂದಲಾದರೂ ಹಜರುಲ್ ಅಸ್ವದನ್ನು ಮುಟ್ಟಿ ಅದನ್ನು ಚುಂಬಿಸಬೇಕು. ಇದೂ ಅಸಾಧ್ಯವೆಂದಾದರೆ ನೂಕುನುಗ್ಗಲಿಗೆ ಹೋಗದೆ ದೂರದಿಂದಲೇ ಅದರ ನೇರಕ್ಕೆ ಕೈ ಎತ್ತಿ `ಬಿಸ್ಮಿಲ್ಲಾಹಿ ಅಲ್ಲಾಹು ಅಕ್ಬರ್’ (ಅಲ್ಲಾಹನ ನಾಮದಿಂದ ನಾನು ಆರಂಭಿಸುತ್ತೇನೆ. ಅಲ್ಲಾಹನು ದೊಡ್ಡವನು) ಎಂದು ಹೇಳಿ ತವಾಫ್ ಆರಂಭಿಸಿದರೆ ಸಾಕು.

ತವಾಫ್ ಮಾಡುತ್ತಿರುವಾಗ ಯಾವುದೇ ದುವಾ, ಕುರ್‌ಆನ್ ಪಾರಾಯಣವನ್ನು ಮಾಡಬಹುದು. ತವಾಫ್‌ನ ಬಳಿಕ ಮಕಾಮು ಇಬ್ರಾಹೀಮ್‌ನ ಹಿಂದೆ ಎರಡು ರಕಅತ್ ಸುನ್ನತ್ ನಮಾಝ್ ನಿರ್ವಹಿಸಬೇಕು. ಅದರಲ್ಲಿ ಮೊದಲ ರಕಅತ್‌ನಲ್ಲಿ ಫಾತಿಹಾದ ಬಳಿಕ ಸೂರಃ ಅಲ್ ಕಾಫಿರೂನ್ ಮತ್ತು ಎರಡನೇ ರಕಅತ್‌ನಲ್ಲಿ ಸೂರತುಲ್ ಇಖ್ಲಾಸ್ ಓದುವುದು ಸುನ್ನತ್ ಆಗಿದೆ. ಮಕಾಮು ಇಬ್ರಾಹೀಮ್‌ನ ಹಿಂದೆ ಸೌಕರ್ಯವಿಲ್ಲದಿದ್ದರೆ ಹರಮ್‌ನ ಯಾವುದೇ ಭಾಗದಲ್ಲೂ ಪ್ರಸ್ತುತ ಎರಡು ರಕಅತ್ ನಮಾಝ್ ಮಾಡಬಹುದು. ತವಾಫ್ ಮತ್ತು ನಮಾಝ್‌ನ ಬಳಿಕ ಝಂ ಝಂ ನೀರು ಕುಡಿಯುವುದು ಸುನ್ನತ್ ಆಗಿದೆ.

ಸಈ
ಉಮ್ರಾಕ್ಕೆ ಇಹ್ರಾಮ್ ಮಾಡಿದವರು ಬಳಿಕ ಸಫಾ ಮರ್ವಾದ ನಡುವೆ ಸಈ ಮಾಡುತ್ತಾರೆ. ಹಜ್ಜ್ ಗಾಗಿ ಇಹ್ರಾಮ್ ಧರಿಸಿದವರು ದುಲ್‌ಹಜ್ 10ರ ಬಳಿಕವೋ, ತವಾಫುಲ್ ಇಫಾದರ ಬಳಿಕವೋ ಸಈ ನಡೆಸಬೇಕು.
ಸಫಾ ಮತ್ತು ಮರ್ವಾ ಮಕ್ಕಾದ ಎರಡು ಬೆಟ್ಟಗಳಾಗಿವೆ. ಅವೆರಡರ ನಡುವೆ ವೇಗವಾಗಿ ನಡೆಯುವುದಕ್ಕೆ ಸಈ ಎಂದು ಹೇಳಲಾಗುತ್ತದೆ.

ಸಫಾದಿಂದ ಸಈ ಆರಂಭಿಸಬೇಕು. ಸಫಾ ಬೆಟ್ಟಕ್ಕೆ ಹತ್ತುವಾಗ ಅಲ್‌ಬಕರಃ 18 “ನಿಶ್ಚಯವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಚಿಹ್ನೆಗಳಾಗಿವೆ” ಎಂಬ ಆಯತ್ ಓದುವುದು ಸುನ್ನತ್ ಆಗಿದೆ. ನಂತರ ಕಿಬ್ಲಾದ ನೇರಕ್ಕೆ ತಿರುಗಿ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ತಕ್ಬೀರ್ ಹೇಳಿ, ಅಲ್ಲಾಹನನ್ನು ಪ್ರಕೀರ್ತಿಸಿ, ಕೈ ಎತ್ತಿ ಪ್ರಾರ್ಥಿಸಬೇಕು. ಬಳಿಕ ಮರ್ವಾದ ಕಡೆಗೆ ನಡೆಯಬೇಕು. ಹಸಿರು ಸಂಕೇತಗಳ ನಡುವೆ ಪುರುಷರು ಓಡಬೇಕು. ಮರ್ವಾದ ಕಡೆಗೆ ಹತ್ತುವಾಗ ಸಫಾಕ್ಕೆ ಏರುವಾಗ ಮಾಡಿದಂತೆ ಆಯತ್ ಓದಬೇಕು. ಮೇಲೆ ತಲುಪಿದರೆ ಕಿಬ್ಲಾಕ್ಕೆ ಅಭಿಮುಖವಾಗಿ ನಿಂತು ಕೈಗಳನ್ನು ಎತ್ತಿ ದಿಕ್ರ್-ದುವಾ ಹೇಳಬಹುದು. ಸಈನಲ್ಲಿ ಹೇಳಲು ಪ್ರತ್ಯೇಕ ದುವಾಗಳು ನಿಶ್ಚಯಿಸಲ್ಪಟ್ಟಿಲ್ಲ. ಪ್ರತಿಯೊಬ್ಬರೂ ತಮಗೆ ಸಾಧ್ಯವಾಗುವ ದಿಕ್ರ್-ದುವಾ ಹೇಳಿದರೆ ಸಾಕಾಗುತ್ತದೆ.

ಮರ್ವಾಕ್ಕೆ ಹತ್ತುವಾಗ ಸಫಾಕ್ಕೆ ಹತ್ತುವಾಗ ಮಾಡಿದಂತೆ ಕುರ್‌ಆನ್ ಆಯತ್ ಓದುವುದು, ಮೇಲೆ ತಲುಪಿದರೆ ಕಅಬಾದ ಕಡೆಗೆ ತಿರುಗಿ ದಿಕ್ರ್ ದುವಾ ಹೇಳುವುದು ಸುನ್ನತ್ ಆಗಿದೆ. ನಂತರ ಪುನಃ ಸಫಾದ ಕಡೆಗೆ ನಡೆಯಬೇಕು. ಹೀಗೆ ಏಳು ಬಾರಿ ಸಈ ನಡೆಸಬೇಕು. ಸಫಾದಿಂದ ಮರ್ವಾದ ಕಡೆಗೆ ನಡೆಯುವ ನಡಿಗೆಯನ್ನು ಒಂದು ಸಈ ಆಗಿಯೂ, ಮರ್ವಾದಿಂದ ಸಫಾದ ಕಡೆಗೆ ಮರಳಿ ನಡೆಯುವುದು ಎರಡನೇ ಸಈ ಆಗಿಯೂ ಲೆಕ್ಕ ಹಾಕಲಾಗುವುದು.
ಅನಂತರ ಉಮ್ರಾಕ್ಕೆ ಇಹ್ರಾಮ್ ಮಾಡಿದವರಿಗೆ ಕೂದಲು ಕತ್ತರಿಸಿ ಅಥವಾ ಬೋಳಿಸಿ ಇಹ್ರಾಮ್‌ನಿಂದ ಮುಕ್ತವಾಗಬಹುದು.

ದುಲ್‌ಹಜ್ಜ್ 8ರ ಕರ್ಮಗಳು
ದುಲ್‌ಹಜ್ಜ್ ಎಂಟರಿಂದ ಹದಿಮೂರರ ವರೆಗಿನ ದಿನಗಳಲ್ಲಿ ಹಜ್ಜ್ ನ ಪ್ರಮುಖ ಕರ್ಮಗಳು ನಿರಂತರವಾಗಿ ನಡೆಯುವುದು. ಹಜ್ಜ್ ಗಾಗಿ ಇಹ್ರಾಮ್ ಮಾಡಿದವರು ದುಲ್‌ಹಜ್ಜ್ 8ಕ್ಕೆ ಮಿನಾಕ್ಕೆ ಹೊರಡುತ್ತಾರೆ. ಉಮ್ರಾ ಮುಗಿಸಿ ಇಹ್ರಾಮ್‌ನಿಂದ ಹೊರ ಬಂದವರೂ ಮಕ್ಕಾ ನಿವಾಸಿಗಳೂ ಅಂದು ಹಜ್ಜ್ ಗೆ ಇಹ್ರಾಮ್ ಮಾಡುತ್ತಾರೆ.

ಪ್ರತಿಯೊಬ್ಬರೂ ಅವರವರ ವಾಸ ಸ್ಥಾನದಿಂದ ಇಹ್ರಾಮ್ ಮಾಡಬೇಕು. ಅಂದು ಝುಹರ್, ಅಸರ್, ಮಗ್ರಿಬ್ ಇಶಾ ನಮಾಝ್‌ಗಳು ಮರುದಿನ ಸುಬಹ್ ನಮಾಝ್ ಮಿನಾದಲ್ಲಿ ನಿರ್ವಹಿಸುವುದು ಮತ್ತು ಅಂದು ರಾತ್ರಿ ಅಲ್ಲಿ ತಂಗುವುದು ಸುನ್ನತ್ ಆಗಿದೆ.

ದುಲ್‌ಹಜ್ ಎಂಟರಂದೇ ಮಿನಾಕ್ಕೆ ಹೋಗುವುದು ಹಜ್ಜ್ ನ ಕಡ್ಡಾಯ ಕರ್ಮವಲ್ಲ. ಓರ್ವರು ದುಲ್‌ಹಜ್ ಒಂಭತ್ತರಂದು ಮಕ್ಕಾದಿಂದ ಇಹ್ರಾಮ್ ಧರಿಸಿ ನೇರವಾಗಿ ಅರಫಾಕ್ಕೆ ಹೋಗುವುದಾದರೆ ಹಜ್ಜ್ ಗೆ ದೋಷವೇನೂ ಸಂಭವಿಸುವುದಿಲ್ಲ. ಸುನ್ನತ್ ನಷ್ಟವಾಗುತ್ತದೆ ಎಂದು ಮಾತ್ರ. ಮಿನಾದಲ್ಲಿ ತಂಗುವ ದಿನಗಳಲ್ಲೆಲ್ಲಾ ಪ್ರತಿಯೊಂದು ನಮಾಝ್ ಅದರದರ ಸಮಯದಲ್ಲೇ ನಿರ್ವಹಿಸಬೇಕು. ಆದರೆ ಝುಹರ್, ಅಸರ್, ಇಶಾ ನಮಾಝ್‌ಗಳು ಕಸ್ರ್ ಮಾಡಿ ಎರಡು ರಕಅತ್‌ನಂತೆ ನಿರ್ವಹಿಸಬೇಕು.

ದುಲ್‌ಹಜ್ 9ರ ಕರ್ಮಗಳು
ದುಲ್‌ಹಜ್ 9 ಹಜ್ಜ್ ನ ಪ್ರಧಾನ ದಿನವಾಗಿದೆ. ದುಲ್‌ಹಜ್ ಒಂಭತ್ತು (ಅರಫಾ ದಿನ)ರಂದು ಸೂರ್ಯೋದಯದ ಬಳಿಕ ಹಾಜಿಗಳು ಮಿನಾದಿಂದ ಅರಫಾದೆಡೆಗೆ ಹೊರಡುವರು. ಹಜ್ಜ್ ಅರಫಾ ಆಗಿದೆ ಎಂದು ಪ್ರವಾದಿ(ಸ) ಹೇಳಿದ್ದರು.

ಸೌಲಭ್ಯವಿದ್ದರೆ ಮಧ್ಯಾಹ್ನದವರೆಗೆ ಅರಫಾದ ಗಡಿಯಲ್ಲಿರುವ ನಮಿರದಲ್ಲಿ ಕಳೆಯುವುದು. ಝುಹರ್, ಅಸರ್ ನಮಾಝ್ ಅಲ್ಲಿ ನಿರ್ವಹಿಸುವುದು ಸುನ್ನತ್ ಆಗಿದೆ. ಅದಕ್ಕೆ ಸೌಕರ್ಯವಿಲ್ಲದವರು ಅರಫಾದಲ್ಲಿ ಇಳಿದು ಅಲ್ಲಿ ಝುಹರ್, ಅಸರ್ ನಮಾಝ್ ನಿರ್ವಹಿಸಿದರೆ ಅದಕ್ಕೆ ವಿರೋಧವಿಲ್ಲ. ಝುಹರ್ ಮತ್ತು ಅಸರ್ ನಮಾಝನ್ನು ಝುಹರ್‌ನ ಸಮಯದಲ್ಲಿ ಒಂದು ಬಾಂಗ್‌ನೊಂದಿಗೆ ಮತ್ತು ಎರಡು ಇಕಾಮತ್‌ನೊಂದಿಗೆ ಜಮ್ಮ್ ಕಸ್ರ್ ಮಾಡಿ ಮಾಡಬೇಕು. ಸುನ್ನತ್ ನಮಾಝ್ ನಿರ್ವಹಿಸಬೇಕಾಗಿಲ್ಲ. ಝುಹರ್-ಅಸರ್ ನಮಾಝ್‌ನ ಬಳಿಕ ಅರಫಾ ನಿಲ್ಲುವಿಕೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಕಿಬ್ಲಾಕ್ಕೆ ಮುಖಮಾಡಿ ನಿಂತುಕೊಂಡು ಕೈ ಎತ್ತಿ ಧಾರಾಳವಾಗಿ ದ್ಸಿಕ್ರ್ ದುವಾಗಳನ್ನು ಮಾಡುವುದು ಸುನ್ನತ್ ಆಗಿದೆ. ತಲ್ಬಿಯತ್ ಮತ್ತು ಕುರ್‌ಆನ್ ಪಾರಾಯಣವೂ ಉತ್ತಮವಾಗಿದೆ.

ಸೂರ್ಯಾಸ್ತಮಾನದವರೆಗೆ ಅರಫಾದಲ್ಲಿ ನಿಲ್ಲಬೇಕು. ಅದಕ್ಕಿಂತ ಮೊದಲು ಅರಫಾದ ಗಡಿಯನ್ನು ದಾಟಬಾರದು. ಸೂರ್ಯಾಸ್ತಮದ ಬಳಿಕ ಹಾಜಿಗಳು ಮುಝ್ದಲಿಫಕ್ಕೆ ಹೋಗುತ್ತಾರೆ. ಮಗ್ರಿಬ್ ಮತ್ತು ಇಶಾ ನಮಾಝ್ ಮುಝ್ದಲಿಫಾಕ್ಕೆ ತಲುಪಿದ ಬಳಿಕ ಮಾಡಬೇಕು. ಮಗ್ರಿಬ್ ಮೂರು ರಕಅತ್ ಮತ್ತು ಇಶಾ ಎರಡು ರಕಅತ್ ಜಮ್ಮ್ ಮತ್ತು ಕಸ್ರ್ ಆಗಿ ಒಂದು ಬಾಂಗ್ ಎರಡು ಇಕಾಮತ್ ಕೊಟ್ಟು ನಿರ್ವಹಿಸಬೇಕು.

ಹಾಜಿಗಳು ಮುಝ್ದಲಿಫದಲ್ಲಿ ಅಂದು ರಾತ್ರಿ ತಂಗಬೇಕು. ಆದರೆ ಸ್ತ್ರೀಯರು, ಮಕ್ಕಳು, ರೋಗಿಗಳು ಮುಂತಾದವರು ಮತ್ತು ಅವರೊಂದಿಗೆ ಹೋಗುವವರಿಗೂ ಅರ್ಧರಾತ್ರಿಯ ಬಳಿಕ ಮಿನಾಕ್ಕೆ ಹೊರಡಬಹುದು. ಇತರರು ಸುಬಹ್ ನಮಾಝ್ ಮಾಡಿ, ಬೆಳಗಾದ ಬಳಿಕ ಮುಝ್ದಲಿಫಕ್ಕೆ ಹೊರಡಬೇಕು. ಸುಬಹ್ ನಮಾಝ್‌ನ ಬಳಿಕ ಕಿಬ್ಲಾಕ್ಕೆ ಅಭಿಮುಖವಾಗಿ ನಿಂತು ಕೈ ಎತ್ತಿ ಧಾರಾಳ ದಿಕ್ರ‍್ ಗಳು ದುವಾಗಳನ್ನು ಮಾಡುವುದು ಸುನ್ನತ್ ಆಗಿದೆ.

ಜಮ್ರತುಲ್ ಅಖಬಾದಲ್ಲಿ ಎಸೆಯಲಿಕ್ಕಿರುವ ಏಳು ಕಲ್ಲುಗಳನ್ನು ಮುಝ್ದಲಿಫಾದಿಂದ ಹೆಕ್ಕಬೇಕು: ಮಿನಾದಿಂದಲೂ ತೆಗೆದು ಕೊಳ್ಳಬಹುದು.

ದುಲ್‌ಹಜ್ 10 ರ ಕರ್ಮಗಳು
ದುಲ್‌ಹಜ್ 10 ಹಜ್ಜ್ ನ ಅತ್ಯಂತ ನಿಬಿಢವಾದ ದಿನವಾಗಿದೆ. ಅಂದು ಕೆಳಗೆ ಹೇಳುವ ಕರ್ಮಗಳನ್ನು ನಿರ್ವಹಿಸಬೇಕು.

1.ಜಮ್ರತುಲ್ ಅಕಬಾದಲ್ಲಿ ಕಲ್ಲೆಸೆಯುವುದು.

ಹಾಜಿಗಳು ಮುಝ್ದಲಿಫದಿಂದ ಮಿನಾಕ್ಕೆ ತಲುಪಿದ ಬಳಿಕ ಮೊದಲು ನಿರ್ವಹಿಸುವ ಕರ್ಮ ಜಮ್ರತುಲ್ ಅಕಬಾಕ್ಕೆ ಕಲ್ಲೆಸೆಯುವುದು. ಜಮ್ರಾದ ಬಳಿ ತಲುಪಿದಾಗ ತಲ್ಬಿಯತ್ ನಿಲ್ಲಿಸಿ ಏಳು ಕಲ್ಲುಗಳನ್ನು ಜಮ್‌ರಾಕ್ಕೆ ಎಸೆಯಬೇಕು. ಒಂದೊಂದು ಕಲ್ಲು ಎಸೆಯುವಾಗಲೂ `ಅಲ್ಲಾಹು ಅಕ್ಬರ್’ ಎಂದು ಹೇಳುವುದು ಸುನ್ನತ್ ಆಗಿದೆ.

2.ಬಲಿ ಕರ್ಮ
ಜಮ್‌ರತುಲ್ ಅಖಬದ ಕಲ್ಲೆಸೆತದ ಬಳಿಕ ಬಲಿ ನೀಡಲಿಕ್ಕಿರುವವರು ಅದನ್ನು ನಿರ್ವಹಿಸಬೇಕು. ಹಜ್ಜ್ ತಿಂಗಳಲ್ಲಿ ಉಮ್ರಾ ನಿರ್ವಹಿಸಿ ಅದೇ ವರ್ಷ ಹಜ್ಜ್ ನಿರ್ವಹಿಸುವವರಿಗೂ ಹಜ್ಜ್ ಉಮ್ರಾ ಒಟ್ಟಿಗೆ ನಿರ್ವಹಿಸುವವರಿಗೂ ಬಲಿ ಕರ್ಮ ಕಡ್ಡಾಯವಾಗಿದೆ. ಹಜ್ಜ್ ಮಾತ್ರ ನಿರ್ವಹಿಸುವವರಿಗೆ ಬಲಿ ಕರ್ಮವು ನಿರ್ಬಂಧವಿಲ್ಲ.

ಆಡು, ಕುರಿ, ಒಂಟೆ ಇವುಗಳು ಬಲಿ ಪ್ರಾಣಿಗಳು. ಆಡಾದರೆ ಒಬ್ಬನಿಗೆ ಒಂದು ಬಲಿ ನೀಡಬೇಕು. ಒಂಟೆಯೋ ಅಥವಾ ಇತರವೋ ಆದರೆ ಒಂದು ಪ್ರಾಣಿಯನ್ನು 7 ಜನರಿಗೆ ಹಂಚಿಕೊಳ್ಳಬಹುದು. ಬಲಿ ಕರ್ಮ ದುಲ್‌ಹಜ್ಜ್ 10ಕ್ಕೆ ನಿರ್ವಹಿಸಬೇಕೆಂಬ ನಿರ್ಬಂಧವಿಲ್ಲ. ಬಲಿಯ ಸಮಯ ದುಲ್‌ಹಜ್ಜ್ ಹದಿಮೂರರ ಸೂರ್ಯಾಸ್ತಮಾನದವರೆಗೆ ಇದೆ. ಬಲಿ ಕರ್ಮವನ್ನು ಸ್ವಂತವಾಗಿ ನಿರ್ವಹಿಸಲು ಸಾಧ್ಯವಾಗದವರು ಹಲವು ವರ್ಷಗಳಿಂದ ಸೌದಿ ಸರಕಾರವು ಏರ್ಪಡಿಸಿರುವ ಕೂಪನ್ ಉಪಯೋಗಿಸಬಹುದು.

ಬಲಿ ಕರ್ಮಕ್ಕೆ ಒಬ್ಬನಿಗೆ ಸಾಧ್ಯವಾಗದೆ ಹೋದರೆ 10 ದಿನ ಉಪವಾಸ ಆಚರಿಸಬೇಕು. ಮೂರು ಉಪವಾಸ ಹಜ್ಜ್ ಕಾಲದಲ್ಲೂ ಏಳು ಉಪವಾಸ ಊರಿಗೆ ಮರಳಿದ ಬಳಿಕವು ಹಿಡಿಯಬೇಕು.

3.ಕೂದಲು ತೆಗೆಯುವುದು
ನಂತರ ಹಾಜಿಗಳು ಕ್ಷೌರ ಮಾಡಬೇಕು ಅಥವಾ ಕೂದಲು ಕತ್ತರಿಸಬೇಕು. ಬೋಳಿಸುವುದೂ ಅಥವಾ ಕತ್ತರಿಸಿದರೂ ಆಗಬಹುದು. ಆದರೆ ಬೋಳಿಸುವುದು ಕತ್ತರಿಸುವುದಕ್ಕಿಂತ ಉತ್ತಮ. ಮಹಿಳೆಯರು ಕೂದಲಿನ ತುದಿಯಿಂದ ಒಂದು ಬೆರಳಿನಷ್ಟು ಕೂದಲನ್ನು ಕತ್ತರಿಸಬೇಕು.

4.ತವಾಫುಲ್ ಇಫಾದ
ಹಜ್ಜ್ ನ ಕಡ್ಡಾಯ ತವಾಫ್ ಆದ ತವಾಫುಲ್ ಇಫಾದ ಅಂದೇ ನಿರ್ವಹಿಸುವುದು ಉತ್ತಮ. ಅದನ್ನು ನಂತರ ಮಾಡುವುದಾದರೂ ವಿರೋಧವಿಲ್ಲ. ಆದರೆ ಅದನ್ನು ಪ್ರಾಯಶ್ಚಿತದಿಂದ ಪರಿಹರಿಸಲು ಸಾಧ್ಯವಿಲ್ಲದ ಹಜ್ಜ್ ನ ರುಕ್ನು ಆಗಿರುವುದರಿಂದ, ಇಹ್ರಾಮ್‌ನಿಂದ ಸಂಪೂರ್ಣ ಹೊರಬರಬೇಕಾದರೆ ಅದು ಒಂದು ಉಪಾಧಿಯಾಗಿರುವುದರಿಂದ ಸಾಧ್ಯವಾದಷ್ಟು ಮೊದಲೇ ನಿರ್ವಹಿಸುವುದು ಉತ್ತಮ.

5.ಸಈ
ಹಜ್ಜ್ ನ ಇನ್ನೊಂದು ಕಡ್ಡಾಯ ಕರ್ಮ ಸಫಾ-ಮರ್ವಾದ ನಡುವಿನ ಸಈ. ತವಾಫುಲ್ ಇಫಾದದ ಬಳಿಕ ಅದನ್ನು ನಿರ್ವಹಿಸಬೇಕು.

ಜಮ್ರತುಲ್ ಅಕಬಾದ ಕಲ್ಲೆಸೆತ, ಕ್ಷೌರ ಮಾಡಿಸುವುದು ಮುಗಿದ ಬಳಿಕ ಹಾಜಿಗಳು ಇಹ್ರಾಮ್‌ನಿಂದ ಅಂಶಿಕವಾಗಿ ಹೊರಬರಬಹುದು. ಸ್ತ್ರೀ- ಪುರುಷ ಮಿಲನ ಹೊರತುಪಡಿಸಿ, ಇಹ್ರಾಮ್‌ಗೆ ನಿಷಿದ್ಧವಾದ ಎಲ್ಲಾ ಕಾರ್ಯಗಳೂ ಧರ್ಮಬದ್ಧ. ತವಾಫುಲ್ ಇಫಾದವನ್ನು ನಿರ್ವಹಿಸಿ ಆದರೆ ಸ್ತ್ರೀ-ಪುರುಷ ಸಂಸರ್ಗ ಧರ್ಮಬದ್ಧವಾಗಿದೆ.

ಅಯ್ಯಾಮುತ್ತಶ್ರೀಕ್‌ನಂದು ಮಿನಾದಲ್ಲಿ ತಂಗುವುದು
ಹಾಜಿಗಳು ಹಬ್ಬದ ದಿನವಲ್ಲದೆ ಮೂರು ದಿನ ಮಿನಾದಲ್ಲಿ ತಂಗಬೇಕು. ದುಲ್‌ಹಜ್ಜ್ 11, 12, 13. ಈ ದಿನಗಳಲ್ಲಿ ಮೂರು ಜಮ್ರ‍ ಗಳಲ್ಲಿ ಕಲ್ಲೆಸೆಯಬೇಕು. ಒಂದನೇ ಮತ್ತು ಎರಡನೇ ಜಮ್ರ‍ ಗಳಿಗೆ ಕಲ್ಲೆಸೆದ ಬಳಿಕ ಕಿಬ್ಲಾಕ್ಕೆ ಅಭಿಮುಖವಾಗಿ ನಿಂತು ಪ್ರಾರ್ಥಿಸುವುದು ಸುನ್ನತ್ ಆಗಿದೆ.
ಕಲ್ಲೆಸೆಯುವ ದೈಹಿಕ ಸಾಮರ್ಥ್ಯ ಇಲ್ಲದವರಿಗೆ ಇತರರಿಗೆ ವಹಿಸಿಕೊಡಬಹುದು. ವಹಿಸಿಕೊಡಲ್ಪಟ್ಟಿರುವ ವ್ಯಕ್ತಿಯು ಆ ವರ್ಷ ಹಜ್ಜ್ ನಿರ್ವಹಿಸುವ ವ್ಯಕ್ತಿಯಾಗಿರಬೇಕು. ಇತರರಿಗಾಗಿ ಎಸೆಯುವ ವ್ಯಕ್ತಿ ಪ್ರತಿಯೊಂದು ಜಮ್ರಾದಲ್ಲಿಯೂ ಮೊದಲು ಸ್ವಂತಕ್ಕಾಗಿ ಎಸೆದು ಬಳಿಕ ಅಲ್ಲಿ ನಿಂತುಕೊಂಡೇ ವಹಿಸಿಕೊಟ್ಟ ವ್ಯಕ್ತಿಗಾಗಿ ಎಸೆದರೆ ಸಾಕು. ಜಮ್ರಾಗಳಲ್ಲಿ ಕಲ್ಲೆಸೆಯಲು ಇತರರಿಗೆ ವಹಿಸಿದವರೂ ನಿಶ್ಚಿತ ದಿನಗಳಲ್ಲಿ ಮಿನಾದಲ್ಲಿ ತಂಗುವುದು ಕಡ್ಡಾಯವಾಗಿದೆ.

ದುಲ್‌ಹಜ್ 12 ಕ್ಕೆ ಜಮ್ರಾದ ಕಲ್ಲೆಸೆತದ ಬಳಿಕ ಮಿನಾ ಬಿಡಲು ಉದ್ದೇಶಿಸಿದವರಿಗೆ ಹಾಗೆ ಮಾಡಬಹುದು. ಆದರೆ ಮಿನಾ ಬಿಡುವವರು ಸೂರ್ಯಾಸ್ತಮಾನಕ್ಕಿಂತ ಮೊದಲು ಮಿನಾದಿಂದ ಸೂರ್ಯಾಸ್ತಮಾನಕ್ಕೆ ಮೊದಲು ಮಿನಾದಿಂದ ಹೊರಟಿರಬೇಕು. ಇಲ್ಲದಿದ್ದರೆ ಅಂದು ರಾತ್ರಿಯೂ ಮಿನಾದಲ್ಲಿ ನಿಂತು ಮರುದಿನ ಕಲ್ಲೆಸೆಯುವುದು ಕಡ್ಡಾಯವಾಗುತ್ತದೆ. ದುಲ್‌ಹಜ್ 12ಕ್ಕೆ ಮಿನಾ ಬಿಡುವವರು ಹದಿಮೂರಕ್ಕೆ ಎಸೆಯಬೇಕಾದ ಕಲ್ಲುಗಳನ್ನು ಮೊದಲೇ ಎಸೆಯಬೇಕಾಗಿಲ್ಲ.

ಜಮ್ರತುಲ್ ಅಖಬಾದ ಕಲ್ಲೆಸೆತ, ಕೂದಲು ಕತ್ತರಿಸುವುದು ಅದರ ಬಳಿಕ ಹಾಜಿಗಳಿಗೆ ಇಹ್ರಾಮ್‌ನಿಂದ ಭಾಗಶಃ ಮುಕ್ತರಾಗಬಹುದು. ಇದನ್ನು ಒಂದನೇ ತಹಲ್ಲುಲ್ ಎಂದು ಹೇಳಲಾಗುತ್ತದೆ. ಸ್ತ್ರೀ-ಪುರುಷದ ಸಂಸರ್ಗದ ಹೊರತು, ಇಹ್ರಾಮ್‌ಗೆ ನಿಷಿದ್ಧವಾದ ಇತರೆಲ್ಲಾ ಕಾರ್ಯಗಳು ಅವರಿಗೆ ಅನುಮತಿಸಲ್ಪಡುತ್ತದೆ. ತವಾಫುಲ್ ಇಫಾದವನ್ನು ನಿರ್ವಹಿಸಿದ ಬಳಿಕ ಸ್ತ್ರೀ-ಪುರುಷ ಸಂಸರ್ಗ ಅನುವದನೀಯವಾಗುತ್ತದೆ. ಇದಕ್ಕೆ ಎರಡನೇ ತಹಲ್ಲುಲ್ ಎನ್ನಲಾಗುತ್ತದೆ.
ಜಮ್ರತುಲ್ ಅಖಬಾದಲ್ಲಿ ಕಲ್ಲೆಸೆತ, ಬಲಿ, ಕೇಶಮುಂಡವ ಅಥವಾ ಕೂದಲು ಕತ್ತರಿಸುವುದು, ತವಾಫುಲ್ ಇಫಾದ ಎಂಬ ಕ್ರಮಗಳನ್ನು ಪಾಲಿಸುವುದು ಉತ್ತಮ. ಆದರೆ ಇದು ಕ್ರಮ ತಪ್ಪಿದರೆ ವಿರೋಧವಿಲ್ಲ. ಕಾರಣ, ಬಲಿ ಕರ್ಮದ ಕರ್ಮಗಳಲ್ಲಿ ಮುಂದೆಯೋ ಹಿಂದೆಯೋ ಮಾಡಿದ ಕುರಿತು ಪ್ರವಾದಿ(ಸ)ರೊಡನೆ ಕೇಳಿದಾಗ ಎಲ್ಲಾ ಕಾರ್ಯದಲ್ಲೂ ಹಾಗೆ ಮಾಡಿ, ಅದರಲ್ಲಿ ತಪ್ಪಿಲ್ಲ ಎಂಬುದೇ ಉತ್ತರವಾಗಿದೆ.

ಹಬ್ಬದ ರಾತ್ರಿಯ ಅರ್ಧ ರಾತ್ರಿಯಿಂದ ಕಲ್ಲೆಸೆತದ ಸಮಯ ಆರಂಭವಾಗುತ್ತದೆ. ಅಯ್ಯಾಮುತ್ತಶ್ರೀಖ್‌ನ ಅಸ್ತಮಾನದ ವರೆಗೆ ಎಸೆಯುವ ಸಮಯವಾಗಿದೆ. ಹಬ್ಬದ ದಿನ ಸೂರ್ಯವು ಉದಯಿಸಿದಾಗಿನಿಂದ ಮಧ್ಯದಿಂದ ಇಳಿಯುವವರೆಗೆ ಸಮಯವು ಅತ್ಯಂತ ಶ್ರೇಷ್ಠ.

ತವಾಫುಲ್ ವಿದಾಯ
ಹಜ್ಜ್ ನ ಕೊನೆಯ ಕರ್ಮ ತವಾಫುಲ್ ವಿದಾಯ. ಹಾಜಿಗಳು ಮಕ್ಕಾ ಬಿಡುವಾಗ ನಿರ್ವಹಿಸುವ ತವಾಫ್ ಆಗಿರುವುದರಿಂದ ಅದಕ್ಕೆ ವಿದಾಯ ತವಾಫ್ ಎಂಬ ಹೆಸರಿದೆ. ಆರ್ತವ, ಹೆರಿಗೆ ಮುಂತಾದ ಕಾರಣದಿಂದ ದೈಹಿಕ ತೊಂದರೆ ಅನುಭವಿಸುವ ಸ್ತ್ರೀಯರ ಹೊರತು ಎಲ್ಲಾ ಹಾಜಿಗಳಿಗೂ ಅದು ಕಡ್ಡಾಯವಾಗಿದೆ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …