Home / ಲೇಖನಗಳು / ಅಂಥ ಅಬೂಲಹಬನೇ ಪ್ರವಾದಿಗೆ(ಸ) ಆಶ್ರಯ ನೀಡಿದ್ದ…

ಅಂಥ ಅಬೂಲಹಬನೇ ಪ್ರವಾದಿಗೆ(ಸ) ಆಶ್ರಯ ನೀಡಿದ್ದ…

✍️ ಏ.ಕೆ. ಕುಕ್ಕಿಲ

1.ಅಬೂಲಹಬ್
2.ಉತ್ಬಾ ಬಿನ್ ರಬೀಅ
3.ಮುತ್‌ಇಮ್ ಬಿನ್ ಅದಿಯ್ಯ್
4.ಸುಹೈಲ್

ಪ್ರವಾದಿ ಮುಹಮ್ಮದ್(ಸ) ಒಂದು ಕಡೆಯಾದರೆ, ಈ ನಾಲ್ವರು ಇನ್ನೊಂದು ಕಡೆ. ಪ್ರವಾದಿ(ಸ) ಉತ್ತರವಾದರೆ ಇವರು ದಕ್ಷಿಣ. ಪ್ರವಾದಿಯ(ಸ) ವಿಚಾರಧಾರೆಯೊಂದಿಗೆ ಕಟು ವೈರತ್ವವನ್ನು ಹೊಂದಿದ ವ್ಯಕ್ತಿಗಳಾಗಿ ಇವರು 6ನೇ ಶತಮಾನದಿಂದ ಈವರೆಗೂ ಗುರುತಿಸಿಕೊಂಡೇ ಬಂದಿದ್ದಾರೆ. ಆದರೆ, ಇವರು ತಮ್ಮ ಜೀವಿತ ಕಾಲದಲ್ಲಿ ನಡಕೊಂಡ ರೀತಿಯಲ್ಲಿ ಅನೇಕ ಪಾಠಗಳಿವೆ.

ಪ್ರವಾದಿಯೊಂದಿಗೆ(ಸ) ಇವರು ಸಾಧಿಸಿಕೊಂಡು ಬಂದ ವೈರತ್ವದ ಕಾರಣದಿಂದಾಗಿ ಅನೇಕ ಬಾರಿ ಇವರ ಬದುಕಿನ ಇನ್ನೊಂದು ಮುಖವನ್ನು ವಿಶ್ಲೇಷಿಸುವ ಪ್ರಯತ್ನವನ್ನು ನಾವು ಮಾಡಿಯೇ ಇಲ್ಲ. ಅಬೂಲಹಬ್ ಅಂದ ತಕ್ಷಣ ನಮ್ಮ ಮುಂದೆ ದ್ವೇಷದ ಪ್ರತಿರೂಪವೊಂದು ಎದ್ದು ನಿಲ್ಲುತ್ತದೆ. ನಿರಾಯುಧರಾದ ಮತ್ತು ಜನಬೆಂಬಲವೂ ಇಲ್ಲದ ಮಧ್ಯವಯಸ್ಕ ಮುಹಮ್ಮದ್‌ರನ್ನು(ಸ) ಆತ ನಡೆಸಿಕೊಂಡ ರೀತಿ ಕಣ್ಣೆದುರು ಹಾದು ಹೋಗುತ್ತದೆ. ಅಬೂಲಹಬ್‌ಗೆ ಸಂಬಂಧಿಸಿ ಮುಹಮ್ಮದ್(ಸ) ಅನ್ಯರಲ್ಲ. ಕಣ್ಣೆದುರಲ್ಲೇ ಬೆಳೆದವರು. ತನ್ನದೇ ಕುರೈಶ್ ಗೋತ್ರದ ವ್ಯಕ್ತಿ. ತನ್ನ ಸಹೋದರ ಅಬ್ದುಲ್ಲಾರ ಮಗ. ತನ್ನನ್ನು ಚಿಕ್ಕಪ್ಪ ಎಂದು ಈ ಮುಹಮ್ಮದ್(ಸ) ಸಂಬೋಧಿಸುವುದೂ ಇವರಿಗೆ ಗೊತ್ತು. ಆದರೆ ಪ್ರವಾದಿ ಮುಹಮ್ಮದ್‌ರಿಗೆ(ಸ) ಈ ಅಬೂಲಹಬ್ ಎಂಥ ವೈರಿಯಾಗಿ ಮಾರ್ಪಟ್ಟರೆಂದರೆ, ಅವರ ಬಗ್ಗೆ ಕುರ್‌ಆನ್‌ನಲ್ಲಿ ಒಂದು ಅಧ್ಯಾಯವೇ ಅವತೀರ್ಣವಾಯಿತು. ಪ್ರವಾದಿ(ಸ) ವಿರೋಧಿ ಸೇನೆಯನ್ನು ಮುನ್ನಡೆಸಿದ ಮತ್ತು ಪ್ರವಾದಿಯನ್ನು ಹತ್ಯೆ ಮಾಡುವುದಕ್ಕಾಗಿ ಮದೀನಾದ ಮೇಲೆ ದಾಳಿ ಮಾಡುವುದಕ್ಕೆ ಮಕ್ಕಾದ ಮಂದಿಯನ್ನು ಪ್ರೇರೇಪಿಸಿ ಬದ್ರ್ ರಣಾಂಗಣಕ್ಕೆ ಕೊಂಡೊಯ್ದ ವ್ಯಕ್ತಿ ಈತ. ಆದರೆ, ಅಬೂಲಹಬ್ ಇಷ್ಟೇ ಅಲ್ಲ ಪ್ರವಾದಿ ಮುಹಮ್ಮದ್‌ರಿಗೆ(ಸ) ಆಶ್ರಯವನ್ನು ಕೊಟ್ಟಿದ್ದ ಅಬೂತಾಲಿಬ್‌ರು ನಿಧನರಾದಾಗ ಮಕ್ಕಾದಲ್ಲಿ ಶೂನ್ಯವೊಂದು ಆವರಿಸಿತು. ಪ್ರವಾದಿ ಮುಹಮ್ಮದ್‌ರಿಗೆ ಕಷ್ಟಕಾಲದಲ್ಲೂ ಆಶ್ರಯ ನೀಡಿದ್ದ ವ್ಯಕ್ತಿ ಇನ್ನಿಲ್ಲವೆಂದ ಮೇಲೆ ಪ್ರವಾದಿ(ಸ) ಆಶ್ರಯರಹಿತರಾದರು. ಈ ಸಂದರ್ಭದಲ್ಲಿ ಪ್ರವಾದಿಗೆ(ಸ) ಆಶ್ರಯ ನೀಡಿದ್ದು ಇದೇ ಅಬೂಲಹಬ್. ಆಗ ಪ್ರವಾದಿಗೆ(ಸ) ಸುಮಾರು 53 ವರ್ಷಗಳಾಗಿದ್ದುವು. ಅಂದರೆ, ತನ್ನ ವಿಚಾರಧಾರೆಯನ್ನು ಜನರ ಮುಂದಿಡುತ್ತಾ ಬರೋಬ್ಬರಿ 13 ವರ್ಷಗಳನ್ನೇ ಪ್ರವಾದಿ(ಸ) ಕಳೆದಿದ್ದರು. ಈ 13 ವರ್ಷಗಳ ಉದ್ದಕ್ಕೂ ಈ ಅಬೂಲಹಬ್ ಪ್ರವಾದಿಗೆ(ಸ) ಇನ್ನಿಲ್ಲದ ಕಾಟವನ್ನೂ ಕೊಟ್ಟಿದ್ದರು. ಆದರೆ, ಪ್ರವಾದಿ(ಸ) ಆಶ್ರಯ ರಹಿತರಾದಾಗ ಇದೇ ಅಬೂಲಹಬ್ ಆಶ್ರಯ ನೀಡಿದರು. ಹಾಗಂತ, ಈ ಆಶ್ರಯ ಮನಸಾರೆ ನೀಡಿದ್ದೋ ಅಲ್ಲವೋ ಎಂಬುದು ಚರ್ಚಾರ್ಹ ಮತ್ತು ಕೆಲವೇ ದಿನಗಳಲ್ಲಿ ಆಶ್ರಯವನ್ನು ಹಿಂತೆಗೆದುಕೊಂಡದ್ದನ್ನು ಪರಿಗಣಿಸಿದರೆ, ಆತನ ವೈರತ್ವದ ಅರಿವಾಗುತ್ತದೆ.

ಇದೇವೇಳೆ, ಪ್ರವಾದಿ(ಸ) ಆಶ್ರಯವನ್ನು ಹುಡುಕುತ್ತಾ ತ್ವಾಯಿಫ್ ಎಂಬ ಪಟ್ಟಣಕ್ಕೆ ಹೋಗುತ್ತಾರೆ. ಅಲ್ಲಿಯ ಸಖೀಫ್ ಗೋತ್ರದವರು ತನಗೆ ರಕ್ಷಣೆ ನೀಡಿಯಾರು ಎಂಬ ಭರವಸೆ ಪ್ರವಾದಿಯವರಲ್ಲಿತ್ತು. ಯಾಕೆಂದರೆ, ತ್ವಾಯಿಫ್ ಎಂಬುದು ಪ್ರವಾದಿಯವರ(ಸ) ತಾಯಿಯ ಊರು. ಝೈದ್ ಬಿನ್ ಹಾರಿಸ್‌ರ ಜೊತೆ ಪ್ರವಾದಿ ತ್ವಾಯಿಫ್‌ಗೆ ಹೋದರೂ ಅಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಇದಕ್ಕೆ ಪ್ರವಾದಿ(ಸ) ವಿಚಾರಧಾರೆಯ ಮೇಲಿನ ಅಸಮಾಧಾನಕ್ಕಿಂತ ಆರ್ಥಿಕ ಲಾಭ-ನಷ್ಟಗಳೇ ಕಾರಣವಾಗಿದ್ದುವು. ಮಕ್ಕಾದ ಕುರೈಶಿ ಬುಡಕಟ್ಟಿನ ಫಾರ್ಮ್ ಹೌಸಾಗಿ ಈ ತ್ವಾಯಿಫ್ ಗುರುತಿಸಿಕೊಂಡಿತ್ತು. ಕುರೈಶರ ವ್ಯಾಪಾರ-ವಹಿವಾಟುಗಳ ಕೇಂದ್ರ ಸ್ಥಾನವಾಗಿ ಅದು ಮಾರ್ಪಟ್ಟಿತ್ತು.

ಒಂದುವೇಳೆ, ಮುಹಮ್ಮದ್‌ರಿಗೆ(ಸ) ಆಶ್ರಯ ಕೊಟ್ಟರೆ ಎಲ್ಲಿ ಕುರೈಶರು ತಿರುಗಿ ಬೀಳುತ್ತಾರೋ ಮತ್ತು ಆರ್ಥಿಕ ರಾಜಧಾನಿಯಾಗಿ ಮಾರ್ಪಟ್ಟಿರುವ ತ್ವಾಯಿಫ್ ಎಲ್ಲಿ ಬರಡು ಭೂಮಿಯಾಗುತ್ತೋ ಎಂಬ ಭಯ ಅವರನ್ನು ಕಾಡಿತು. ಆದ್ದರಿಂದಲೇ, ಪ್ರವಾದಿಯವ ರಿಗೆ(ಸ) ಆಶ್ರಯ ನೀಡಲು ನಿರಾಕರಿಸಿದ್ದಷ್ಟೇ ಅಲ್ಲ, ಅವರ ಮೇಲೆ ದಾಳಿ ಮಾಡಿದರು. ಮಕ್ಕಳ ಮೂಲಕ ಕಲ್ಲೆಸೆದರು. ಪ್ರವಾದಿ(ಸ) ಮತ್ತು ಝೈದ್ ಬಿನ್ ಹಾರಿಸರು ಮೈಯಿಡೀ ರಕ್ತದಿಂದ ತೋಯ್ದುಕೊಂಡು ತ್ವಾಯಿಫ್‌ನಿಂದ ಮರಳುತ್ತಾ ಒಂದು ಖರ್ಜೂರದ ತೋಟದಲ್ಲಿ ಕುಳಿತರು. ಆ ತೋಟ ಇನ್ನಾರದ್ದೂ ಅಲ್ಲ, ಉತ್ಬಾ ಬಿನ್ ರಬೀಅನದ್ದು. ಈತ ಪ್ರವಾದಿಯನ್ನು(ಸ) ಎಷ್ಟು ತೀವ್ರವಾಗಿ ವಿರೋಧಿಸುತ್ತಿದ್ದನೆಂದರೆ, ಕಅಬಾದ ಸನಿಹ ಪ್ರವಾದಿ(ಸ) ಸುಜೂದ್‌ನಲ್ಲಿದ್ದಾಗ ಅವರ ಕೊರಳಿಗೆ ಆಡಿನ ತ್ಯಾಜ್ಯವನ್ನು ಹಾಕಿದ ಗುಂಪಿನಲ್ಲಿ ಇದ್ದವ. ತಲೆ ಎತ್ತಲು ಸಾಧ್ಯವಾಗದೇ ಪ್ರವಾದಿ(ಸ) ಕಷ್ಟಪಡುತ್ತಿದ್ದಾಗ ಗಹಗಹಿಸಿ ನಕ್ಕವ. ‘ಆತನನ್ನು ನೀನು ನೋಡಿಕೋ’ ಎಂದು ಆ ಸಂದರ್ಭದಲ್ಲಿ ಪ್ರವಾದಿ(ಸ) ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಅದೇ ಉತ್ಬಾನ ತೋಟವನ್ನು ಪ್ರವಾದಿ(ಸ) ಪ್ರವೇಶಿಸುತ್ತಾರೆ. ನೋಡಿದರೆ ದೂರದಲ್ಲಿ ಉತ್ಬಾ ಮತ್ತು ಆತನ ಸಹೋದರ ಶೈಬಾ ಕುಳಿತಿರುವುದನ್ನು ಕಾಣುತ್ತಾರೆ. ಅವರೂ ಪ್ರವಾದಿ(ಸ) ಯನ್ನು ನೋಡುತ್ತಾರೆ. ಆದರೆ, ಆ ಸಮಯದಲ್ಲಿ ಅವರು ಪ್ರವಾದಿಯ ವಿರುದ್ಧ ಪ್ರತೀಕಾರ ತೀರಿಸುವುದಿಲ್ಲ. ಅದರ ಬದಲು ತನ್ನ ಗುಲಾಮನನ್ನು ಕರೆದು ಖರ್ಜೂರವನ್ನು ಪಾತ್ರೆಯಲ್ಲಿಟ್ಟು ಪ್ರವಾದಿ(ಸ)ಗೆ ಕೊಡುವಂತೆ ಕಳುಹಿಸಿಕೊಡುತ್ತಾರೆ.

ಈ ಉತ್ಬಾಗೆ ಸಂಬಂಧಿಸಿ ಇನ್ನೊಂದು ಘಟನೆಯೂ ಇದೆ. ಬದ್ರ‍್ ನಲ್ಲಿ ಪ್ರವಾದಿ ಮತ್ತು ವಿರೋಧಿ ಸೇನೆ ಠಿಕಾಣಿ ಹೂಡಿರುವ ಸಂದರ್ಭ. ಪ್ರವಾದಿ(ಸ) ಆ ಕಡೆ ನೋಡುತ್ತಾರೆ. ಒಂಟೆಯ ಮೇಲೇರಿ ಓರ್ವ ವ್ಯಕ್ತಿ ಪ್ರತಿಯೊಬ್ಬರೊಂದಿಗೂ ಮಾತಾಡುವುದನ್ನು ಕಾಣುತ್ತಾರೆ. ‘ಆ ಒಂಟೆಯ ಮೇಲಿರುವ ವ್ಯಕ್ತಿ ಹೇಳಿರುವುದನ್ನು ಕುರೈಶಿಗಳು ಒಪ್ಪಿಕೊಂಡಿರುತ್ತಿದ್ದರೆ ಅವರ ಪಾಲಿಗೆ ಒಳಿತಾಗುತ್ತಿತ್ತು..’ ಎಂದು ಪ್ರವಾದಿ(ಸ) ತನ್ನ ಅನುಯಾಯಿಗಳಲ್ಲಿ ಹೇಳುತ್ತಾರೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಉತ್ಬಾ. ಮದೀನಾದ ಮೇಲೆ ದಾಳಿ ನಡೆಸುವುದು ಬೇಡ ಎಂದು ಈ ಉತ್ಬಾ ಹೇಳಿದ್ದರು. ಅಬೂ ಸುಫಿಯಾನ್ ಯಾವುದೇ ತೊಂದರೆಯಿಲ್ಲದೇ ಮಕ್ಕಾಕ್ಕೆ ಮರಳುತ್ತಿರುವಾಗ ಮದೀನಾದ ಮೇಲೆ ದಾಳಿ ಮಾಡುವುದಕ್ಕೆ ಅರ್ಥವಿಲ್ಲ ಎಂದೂ ಉತ್ಬಾ ವಾದಿಸಿದ್ದರು. ಆದರೆ, ಅಬೂಜಹಲ್ ಒಪ್ಪಲಿಲ್ಲ. ಮುಹಮ್ಮದ್ ರನ್ನು(ಸ) ಮುಗಿಸಿಯೇ ಸಿದ್ಧ ಎಂದು ಪಣತೊಟ್ಟು ಆತ ಬದ್ರ‍್ವಗೆ ಹೊರಟಿದ್ದ. ಆದ್ದರಿಂದ, ಉತ್ಬಾ ಕೂಡಾ ಆ ಸೇನೆಯೊಂದಿಗೆ ಸೇರುವುದು ಅನಿವಾರ್ಯವಾಗಿತ್ತು.

ಹೀಗೆ, ಯುದ್ಧ ಮುಗಿಯಿತು. ಹಲವು ಕುರೈಶಿ ಪ್ರಮುಖರು ಹತರಾದರು. ಅನೇಕರನ್ನು ಪ್ರವಾದಿ(ಸ) ಸೇನೆ ಬಂಧಿಸಿ ಮದೀನಾಕ್ಕೆ ಕೊಂಡೊಯ್ದಿತು. ಮದೀನಾದ ಮಸೀದಿಯ ಬಳಿ ಅವರನ್ನು ಬಂಧನದಲ್ಲಿಡಲಾಯಿತು. ಅಲ್ಲಿಗೆ ಪ್ರವಾದಿ(ಸ) ಬಂದರು. ಬಂಧಿತರಲ್ಲಿ ಝುಬೈರ್ ಬಿನ್ ಮುತ್‌ಇಮ್ ಎಂಬವರೂ ಇದ್ದರು. ‘ಒಂದುವೇಳೆ ಈ ಝುಬೈರ್‌ನ ತಂದೆ ಮುತ್‌ಇಮ್ ಬಿನ್ ಅದಿಯ್ಯ್ ಇವತ್ತು ಜೀವಂತ ಇರುತ್ತಿದ್ದರೆ ಮತ್ತು ಈ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಅವರು ವಿನಂತಿಸಿರುತ್ತಿದ್ದರೆ, ನಾನು ಎಲ್ಲ ಬಂಧಿತರನ್ನೂ ಬಿಡುಗಡೆಗೊಳಿಸುತ್ತಿದ್ದೆ..’ ಎಂದು ಪ್ರವಾದಿ ಹೇಳಿದರು. ಅಂದಹಾಗೆ,
ಹೀಗೆ ಹೇಳುವುದಕ್ಕೆ ಒಂದು ಕಾರಣ ಇತ್ತು, ಪ್ರವಾದಿಯವರ(ಸ) ವಿಚಾರಧಾರೆಗೆ ಮಕ್ಕಾದ ಬಲಾಢ್ಯರೆಲ್ಲ ತಿರುಗಿ ಬಿದ್ದರಲ್ಲ, ಅವರ ಕೋಪ ಅಬೂತಾಲಿಬ್‌ರ ವಿರುದ್ಧ ಸಿಡಿಯಿತು. ಅಬೂತಾಲಿಬ್ ಆಶ್ರಯ ನೀಡದೇ ಇರುತ್ತಿದ್ದರೆ ಈ ಮುಹಮ್ಮದ್(ಸ) ಇಷ್ಟು ಬೆಳೆಯುತ್ತಿರಲಿಲ್ಲ ಎಂಬುದು ಅವರ ಆಕ್ರೋಶ. ಅವರು ನೇರವಾಗಿ ಅಬೂತಾಲಿಬ್‌ರ ಬಳಿಗೆ ಬಂದರು. ಮುಹಮ್ಮದ್‌ರನ್ನು(ಸ) ಆಶ್ರಯದಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಇವರಲ್ಲಿ ಅಬೂಜಹಲ್ ಕೂಡಾ ಇದ್ದ. ಆದರೆ ಅಬೂತಾಲಿಬ್ ನಿರಾಕರಿಸಿದರು. ಹಾಗಂತ, ಅವರೇನೂ ಪ್ರವಾದಿ(ಸ) ವಿಚಾರಧಾರೆಯ ಅನುಯಾಯಿ ಆಗಿರಲಿಲ್ಲ. ಸಾಯುವವರೆಗೂ ಅವರು ಪ್ರವಾದಿ ವಿಚಾರಧಾರೆಯನ್ನು ಒಪ್ಪಿರಲೂ ಇಲ್ಲ. ಆದರೆ, ಮುಹಮ್ಮದ್‌ರನ್ನು(ಸ) ಆಶ್ರಯರಹಿತ ರನ್ನಾಗಿಸುವುದೆಂದರೆ ಅವರನ್ನು ವೈರಿಗಳ ಕೈಗೆ ಹಸ್ತಾಂತರಿಸಿದಂತೆ ಎಂಬುದು ಅವರ ನಂಬಿಕೆಯಾಗಿತ್ತು. ಯಾವಾಗ ಅಬೂತಾಲಿಬ್ ತನ್ನ ತೀರ್ಮಾನಕ್ಕೆ ಬದ್ಧರಾಗಿ ನಿಂತರೋ ಶತ್ರುಗಳು ಬಹಿಷ್ಕಾರ ಘೋಷಿಸಿದರು.

ಪ್ರವಾದಿ(ಸ) ಮತ್ತು ಅಬೂತಾಲಿಬ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿದರು. ಈ ಬಹಿಷ್ಕಾರ ಎಷ್ಟು ಕಠಿಣವಾಗಿತ್ತೆಂದರೆ, ಈ ಕುಟುಂಬಗಳು ಎಲೆಗಳನ್ನು ತಿಂದು ಬದುಕಿರುವುದಾಗಿ ದಾಖಲೆಗಳಲ್ಲಿವೆ. ಇಂಥ ಸಮಯದಲ್ಲಿ ಈ ಕುಟುಂಬದ ನೆರವಿಗೆ ಬಂದವರೇ ಈ ಮುತ್‌ಇಮ್ ಬಿನ್ ಅದಿಯ್ಯ್. ಇವರೇನೂ ಪ್ರವಾದಿಯ(ಸ) ಅನುಯಾಯಿಯಾಗಿರಲಿಲ್ಲ. ಪ್ರವಾದಿ(ಸ)ರ ವಿಚಾರಧಾರೆಯನ್ನು ನಿರಾಕರಿಸಿಯೇ ಕೊನೆಯುಸಿರೆಳೆದವರು. ಆದರೆ, ಇವರು ರಾತ್ರಿ ವೇಳೆ ಈ ಬಹಿಷ್ಕೃತ ಕುಟುಂಬಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದರು. ಕೊನೆಗೆ, ಮೂರು ವರ್ಷಗಳೊಳಗೆ ಈ ಬಹಿಷ್ಕಾರವನ್ನು ತೆರವುಗೊಳಿಸಲು ಕುರೈಶಿ ನಾಯಕರನ್ನು ಒಪ್ಪಿಸಿದ್ದು ಕೂಡಾ ಇದೇ ಮುತ್‌ಇಮ್ ಬಿನ್ ಅದಿಯ್ಯ್ ಆಗಿದ್ದಾರೆ. ಇನ್ನೊಬ್ಬರು,
ಸುಹೈಲ್.

ಮಕ್ಕಾದ ಪ್ರಭಾವಿ ಭಾಷಣಗಾರರಲ್ಲಿ ಮುಂಚೂಣಿಯಲ್ಲಿದ್ದವರು ಈ ಸುಹೈಲ್. ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ವಿಚಾರಧಾರೆಯನ್ನು ಅತ್ಯಂತ ಕಟು ಭಾಷೆಯಲ್ಲಿ ವಿರೋಧಿಸುತ್ತಿದ್ದುದಷ್ಟೇ ಅಲ್ಲ, ವ್ಯಂಗ್ಯಕ್ಕೂ ಗುರಿಪಡಿಸುತ್ತಿದ್ದರು. ಅವರ ಹರಿತ ನಾಲಗೆ ಮಕ್ಕಾದಲ್ಲೇ ಚಿರಪರಿಚಿತವಾಗಿತ್ತು. ಇಂಥ ಸುಹೈಲ್ ಬದ್ರ್ ಕಾಳಗದಲ್ಲಿ ಸೆರೆಸಿಕ್ಕರು. ಅವರನ್ನು ಮದೀನಾಕ್ಕೆ ಕೊಂಡೊಯ್ಯಲಾಯಿತು. ಪ್ರವಾದಿ ಅನುಯಾಯಿಗಳಿಗೆ ಅವರ ನಾಲಗೆಯ ಪ್ರಭಾವ ಗೊತ್ತಿತ್ತು. ಆದ್ದರಿಂದಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಬಯಸಿದರು. ‘ಇನ್ನು ಮುಂದೆ ಇಂಥ ಹಗುರ ಮಾತುಗಳನ್ನಾಡದೇ ಇರಲು ಅವರ ಹಲ್ಲನ್ನು ಉದುರಿಸಬೇಕು…’ ಎಂದು ಪ್ರವಾದಿಯೊಂದಿಗೆ(ಸ) ವಿನಂತಿಸಿದರು. ಆದರೆ, ಪ್ರವಾದಿ(ಸ) ಒಪ್ಪ ಲಿಲ್ಲ. ‘ಈವರೆಗೆ ಅವರು ಹೇಗೆ ಮಾತಾಡಿದ್ದಾರೋ ಅದಕ್ಕಿಂತ ಭಿನ್ನವಾಗಿ ಅವರು ಮುಂದೆ ಮಾತನಾಡಬಹುದು ಮತ್ತು ಅದು ನಮ್ಮ ಪಾಲಿಗೆ ಆಕರ್ಷಕವಾಗಿ ಕಾಣಬಹುದು..’ ಎಂದು ಪ್ರವಾದಿ(ಸ) ಉತ್ತರಿಸಿದರು. ಅದು ಆ ಬಳಿಕ ಸಾಬೀತೂ ಆಯಿತು. ಪ್ರವಾದಿ(ಸ) ನಿಧನದ ಬಳಿಕ ಬಂಡಾಯ ಧ್ವನಿಗಳು ಎದ್ದುವಲ್ಲ, ಅವರನ್ನು ಬದಲಿಸುವಲ್ಲಿ ಸುಹೈಲ್‌ರ ಭಾಷಣ ಪ್ರಮುಖ ಪಾತ್ರ ವಹಿಸಿತ್ತು. ಅಂದಹಾಗೆ,

ಈ ಎಲ್ಲವೂ ಒಂದು ಸತ್ಯವನ್ನು ಹೇಳುತ್ತದೆ. ಎಲ್ಲರೂ ಎಲ್ಲಾ ಸಂದರ್ಭಗಳಲ್ಲೂ ನಮ್ಮ ಪರವೇ ಇರಬೇಕೆಂದಿಲ್ಲ. ನಮ್ಮ ವಿಚಾರಗಳನ್ನು ಎಲ್ಲ ಸಂದರ್ಭಗಳಲ್ಲೂ ಎಲ್ಲರೂ ಒಪ್ಪಬೇಕೆಂದೂ ಇಲ್ಲ. ನಮ್ಮ ಒಂದು ವಿಚಾರವನ್ನು ಒಪ್ಪುವ ವ್ಯಕ್ತಿ, ನಮ್ಮ ಇನ್ನೊಂದು ವಿಚಾರವನ್ನು ವಿರೋಧಿಸಲೂ ಬಹುದು. ನಮ್ಮ ವಿಚಾರವನ್ನು ಸದಾ ವಿರೋಧಿಸುತ್ತಲೇ ಬಂದವರು ಯಾವುದಾದರೂ ಒಂದು ವಿಚಾರಕ್ಕೆ ಬೆಂಬಲ ಸೂಚಿಸಲೂ ಬಹುದು. ವಿಚಾರ ಸ್ವಾತಂತ್ರ‍್ಯ ವಿಫುಲವಾಗಿರುವ ಈ ಕಾಲದಲ್ಲಿ ವೈವಿಧ್ಯಮಯ ಅಭಿಪ್ರಾಯಗಳು ಸಹಜ. ನಮ್ಮ ಅಭಿಪ್ರಾಯವನ್ನು ಒಪ್ಪಿದ ವ್ಯಕ್ತಿ, ನಾಳೆ ನಮ್ಮ ಇನ್ನೊಂದು
ಅಭಿಪ್ರಾಯದೊಂದಿಗೆ ಅಸಹಮತ ವ್ಯಕ್ತಪಡಿಸಿದ ತಕ್ಷಣ ನಾವು ಅಂಥವರನ್ನು ವಿರೋಧಿಗಳು ಎಂದು ದೂರ ತಳ್ಳಬೇಕಿಲ್ಲ. ಆ ನಿರ್ದಿಷ್ಟ ಅಭಿಪ್ರಾಯದ ಜೊತೆ ಅವರಿಗೆ ವಿರೋಧವಿದೆ ಎಂದಷ್ಟೇ ತಿಳಿದುಕೊಳ್ಳಬೇಕು. ಪ್ರವಾದಿಯ(ಸ) ಕಟು ವಿರೋಧಿಗಳಾಗಿಯೂ ಉತ್ಬಾ, ಅಬೂಲಹಬ್, ಸುಹೈಲ್.. ಮುಂತಾದವರು ಆಪತ್ಕಾಲದಲ್ಲಿ ಪ್ರವಾದಿಯ(ಸ) ರಕ್ಷಣೆಗೆ ನಿಂತಿದ್ದಾರೆ.

ಹಾಗಂತ, ಅವರು ಪ್ರವಾದಿಯ(ಸ) ಶಾಶ್ವತ ಬೆಂಬಲಿಗರು ಎಂದಲ್ಲ. ಪ್ರವಾದಿ(ಸ) ಆ ಕ್ಷಣದಲ್ಲಿ ಅವರು ಮಾಡಿದ ಸಹಾಯದ ಲಾಭ ಪಡೆದಿದ್ದರು. ನಮ್ಮ ನಿಲುವಿನಲ್ಲಿ ಈ ವಿಶಾಲತೆ ಇರಬೇಕು. ಅಭಿಪ್ರಾಯ ಭಿನ್ನತೆಯನ್ನು ಶಾಶ್ವತ ವೈರತ್ವವೆಂದು ಭಾವಿಸುವುದರ ಬದಲು ಅದು ಆ ಕ್ಷಣದ ಅಭಿಪ್ರಾಯಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಎಂಬಂತೆ ಅಂಥವುಗಳನ್ನು ಸ್ವೀಕರಿಸಬೇಕು. ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ ಈ ಬಗೆಯ ನಿಲುವು ಬಹಳ ಅಗತ್ಯ. ಅಂದಹಾಗೆ, ಈ ವಿಷಯದಲ್ಲಿ, ಪ್ರವಾದಿಗಿಂತ(ಸ) ಉತ್ತಮ ಮಾದರಿ ಇನ್ನಾರಿದ್ದಾರೆ?

SHARE THIS POST VIA

About editor

Check Also

ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್

✍️ ಪಿ.ಕೆ. ವಿಜಯ ರಾಘವನ್ ಮುಹಮ್ಮದ್ ಪ್ರವಾದಿ(ಸ) ಯಾರಾಗಿದ್ದರು? ಅವರು ಓರ್ವ ಕನ್ಯೆಗಿಂತಲೂ ಹೆಚ್ಚು ಲಜ್ಜಾವಂತರಾಗಿದ್ದರು ಎಂದು ಕೇಳಿದಾಗ ಆಶ್ಚರ್ಯವಾಯಿತು. …