Home / ಪ್ರಶ್ನೋತ್ತರ / ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?

ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?

✍️ ಏ.ಕೆ. ಕುಕ್ಕಿಲ

ಕೆಲವು ಆರೋಪಗಳಿವೆ.
1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ.
2. ಅವರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ.
3. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಾರೆ.
4. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ.
5. ಅವರು ಅರೇಬಿಕ್ ಭಾಷೆಯಲ್ಲಿರುವ ಗ್ರಂಥ ಪಠಿಸುತ್ತಾರೆ… ಇತ್ಯಾದಿ ಇತ್ಯಾದಿ.

ಅಂದಹಾಗೆ,
ಮುಸ್ಲಿಮರ ಆರಾಧನೆ, ಆಚರಣೆ, ಆಹಾರ ಕ್ರಮ, ಗ್ರಂಥ ಭಾಷೆ, ವಸ್ತ್ರ ವಿನ್ಯಾಸ ಇತ್ಯಾದಿಗಳಿಗೂ ದೇಶನಿಷ್ಠೆಗೂ ಸಂಬಂಧವನ್ನು ಕಲ್ಪಿಸುವ ಮತ್ತು ಆ ಮುಖಾಂತರ ಅವರ ದೇಶನಿಷ್ಠೆಯನ್ನು ಕಟಕಟೆಯಲ್ಲಿ ನಿಲ್ಲಿಸುವ ಆರೋಪಗಳು ಇದರಾಚೆಗೂ ಇರಬಹುದು. ಹಾಗಂತ, ಇಂಥ ಆರೋಪಗಳನ್ನೆಲ್ಲ ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ತಿರಸ್ಕರಿಸಿ ಬಿಡುವುದು ಸುಲಭ. ಆದರೆ ಇಂಥ ಆರೋಪಗಳನ್ನು ಸಾರಾಸಗಟು ತಿರಸ್ಕರಿಸಿ ಬಿಡುವುದರಿಂದ ಇನ್ನೊಂದು ಸವಾಲೂ ಎದುರಾಗುತ್ತದೆ. ಈ ಆರೋಪಗಳು ಅದಾಗಲೇ ಜನಸಾಮಾನ್ಯರಲ್ಲಿ ಉಂಟು ಮಾಡಿರಬಹುದಾದ ಗೊಂದಲಗಳಿಗೆ ಪರಿಹಾರ ಏನು? ಈ ಆರೋಪಗಳು ಎಲ್ಲೇ ಹುಟ್ಟಿರಲಿ ಮತ್ತು ಅದರ ಪ್ರಾಮಾಣಿಕತೆ-ಅಪ್ರಾಮಾಣಿಕತೆಯ ವಿಶ್ಲೇಷಣೆಗಳು ಏನೇ ಇರಲಿ, ಜನಸಾಮಾನ್ಯರ ಮಟ್ಟಿಗೆ ಅವು ಮುಖ್ಯವಾಗುವುದಿಲ್ಲ ಮತ್ತು ಸಹಜ ಸಂಗತಿಗಳಾಗಿ ಅವರು ಇಂಥವುಗಳನ್ನು ಸ್ವೀಕರಿಸುವ ಸಾಧ್ಯತೆಯೂ ಇರುತ್ತದೆ.

ನಿಜವಾಗಿ,
ಬೌದ್ಧ, ಹಿಂದೂ, ಯಹೂದಿ, ಕ್ರೈಸ್ತ, ಇಸ್ಲಾಮ್ ಸಹಿತ ಪ್ರತಿಯೊಂದು ಧರ್ಮಕ್ಕೂ ಮತ್ತು ಅವನ್ನು ಅನುಸರಿಸುವ ಪ್ರತಿಯೋರ್ವ ಅನುಯಾಯಿಗೂ ಅವರದ್ದೇ ಆದ ಐಡೆಂಟಿಟಿ ಇರುತ್ತದೆ. ಧರ್ಮಗ್ರಂಥ ಇರುತ್ತದೆ. ಪವಿತ್ರ ಕ್ಷೇತ್ರಗಳೂ, ಆರಾಧನೆ ಮತ್ತು ಆಹಾರ ಕ್ರಮಗಳೂ ವಸ್ತ್ರ ವಿನ್ಯಾಸಗಳೂ ಇರುತ್ತವೆ. ಆದರೆ ಈ ಸತ್ಯ ಚರ್ಚೆಗೆ ಒಳಗಾಗುವುದೇ ಇಲ್ಲ ಅಥವಾ ಇವು ಚರ್ಚೆಯಾಗದಂತೆ ಉದ್ದೇಶ ಪೂರ್ವಕವಾಗಿ ಅಡಗಿಸಿಡಲಾಗುತ್ತದೆ.

ಉದಾಹರಣೆಗೆ,
ಗೌತಮ ಬುದ್ಧನ ವಚನಗಳ ಸಂಗ್ರಹವಾದ ತ್ರಿಪಿಟಿಕವು ಪಾಲಿ ಭಾಷೆಯಲ್ಲಿದೆ. ಈ ಪಾಲಿ ಭಾಷೆ ಇವತ್ತು ಜನಸಾಮಾನ್ಯರಿಗೆ ಬಹುತೇಕ ಅಪರಿಚಿತವಾಗಿದೆ. ಇದು ಆಡು ಭಾಷೆಯಾಗಿಯೂ ಉಳಿದಿಲ್ಲ. ಅಲ್ಲದೇ, ಲುಂಬಿನಿ, ಬುದ್ಧಗಯಾ, ಸಾರಾನಾಥ್ ಮತ್ತು ಖುಷಿನಗರ್ ಅನ್ನು ಬೌದ್ಧರು ಪವಿತ್ರ ಸ್ಥಳಗಳಾಗಿ ಪರಿಗಣಿಸುತ್ತಾರೆ. ಅಲ್ಲಿಗೆ ತೀರ್ಥಯಾತ್ರೆ ಹೋಗುತ್ತಾರೆ. ಇವುಗಳ ಪೈಕಿ ಮೂರು ಸ್ಥಳಗಳು ಭಾರತದಲ್ಲಿದ್ದರೆ, ಲುಂಬಿನಿ ನೇಪಾಳದಲ್ಲಿದೆ. ಹಾಗಂತ, ನೇಪಾಳಕ್ಕೆ ತೀರ್ಥಯಾತ್ರೆ ಹೋಗುವ ಬೌದ್ಧರನ್ನು ನೇಪಾಳಕ್ಕೆ ನಿಷ್ಠರು ಎಂದು ಹೇಳಬಹುದೇ? ಇದೇ ನೇಪಾಳದಲ್ಲಿ ಪಶುಪತಿನಾಥ ದೇವಾಲಯ ಎಂಬ ಪ್ರಸಿದ್ಧ ಕ್ಷೇತ್ರವಿದೆ. ಭಾರತೀಯ ಹಿಂದೂಗಳು ಇಲ್ಲಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಹಾಗಂತ, ಇವರ ದೇಶನಿಷ್ಠೆಯನ್ನು ಅನುಮಾನಿಸಬಹುದೇ? ಭಾರತೀಯ ಮುಸ್ಲಿಮರು ಮಕ್ಕಾಕ್ಕೆ ತೀರ್ಥಯಾತ್ರೆ ಕೈಗೊಳ್ಳುವುದು ಮತ್ತು ಮಕ್ಕಾದ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುವುದೆಲ್ಲ ದೇಶನಿಷ್ಠೆಯನ್ನು ಅನುಮಾನಿಸುವುದಕ್ಕೆ ಆಧಾರವಾಗುವುದಾದರೆ ಭಾರತೀಯ ಹಿಂದೂಗಳು ಮತ್ತು ಬೌದ್ಧರು ನೇಪಾಳಕ್ಕೆ ತೀರ್ಥಯಾತ್ರೆ ಹೋಗುವುದನ್ನು ಯಾಕೆ ದೇಶನಿಷ್ಠೆಯ ಕಟಕಟೆಯಲ್ಲಿ ನಿಲ್ಲಿಸಬಾರದು?

ನಿಜವಾಗಿ,
ಒಂದು ಸಮುದಾಯದ ದೇಶನಿಷ್ಠೆಗೂ ಆ ಸಮುದಾಯದ ಆರಾಧನೆ, ಆಚರಣೆ, ಆಹಾರ ಕ್ರಮ ಮತ್ತು ಉಡುಪಿಗೂ ಸಂಬಂಧ ಇಲ್ಲ. ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್ ಅರಬಿ ಭಾಷೆಯಲ್ಲಿದೆ. ಕ್ರೈಸ್ತರ ಬೈಬಲ್ ಮತ್ತು ಯಹೂದಿಯರ ತೋರಾ ಹಿಬ್ರೂ ಭಾಷೆಯಲ್ಲಿದೆ. ವೇದ-ಉಪನಿಷತ್‌ಗಳು ಸಂಸ್ಕೃತ ಭಾಷೆಯಲ್ಲಿವೆ. ಹಾಗಂತ, ಜಗತ್ತಿನಲ್ಲಿರುವ ಯಹೂದಿಗಳು ಮತ್ತು ಕ್ರೈಸ್ತರೆಲ್ಲ ಹಿಬ್ರೂ ಭಾಷೆಯಲ್ಲಿ, ಹಿಂದೂಗಳೆಲ್ಲ ಸಂಸ್ಕೃತದಲ್ಲಿ, ಬೌದ್ಧರೆಲ್ಲ ಪಾಲಿಯಲ್ಲಿ ಮಾತಾಡುತ್ತಿಲ್ಲ. ಮುಸ್ಲಿಮರೆಲ್ಲ ಅರೇಬಿಕ್ ಭಾಷೆಯಲ್ಲೂ ಮಾತಾಡುತ್ತಿಲ್ಲ. ಅವರೆಲ್ಲ ಯಾವ್ಯಾವ ರಾಷ್ಟ್ರಗಳಲ್ಲಿದ್ದಾರೋ ಅಲ್ಲಿಯ ಭಾಷೆಗೆ ಕುರ್‌ಆನನ್ನು, ಬೈಬಲ್, ತೋರಾ, ವೇದ ಅಥವಾ ತ್ರಿಪಿಟಿಕಾವನ್ನು ಅನುವಾದಿಸಿದ್ದಾರೆ. ಕುರ್‌ಆನ್‌ನ ಅನುವಾದ ಕನ್ನಡ ಭಾಷೆಯಲ್ಲೂ ಇದೆ. ಭಾರತೀಯ ಸಂಸ್ಕೃತಿಯನ್ನು ಮುಸ್ಲಿಮರು ಅಳವಡಿಸಿಕೊಂಡಿದ್ದಾರೆ ಅನ್ನುವುದಕ್ಕೆ ಇರುವ ಹಲವು ಉದಾಹರಣೆಗಳಲ್ಲಿ ಇದೂ ಒಂದು. ತಾನಿರುವ ಮಣ್ಣಿಗೆ ಇಸ್ಲಾಮ್ ನಿಷ್ಠ ಆಗಿಲ್ಲದೇ ಇರುವುದಾದರೆ ಮತ್ತು ಮುಸ್ಲಿಮರ ನಿಷ್ಠೆ ಮಕ್ಕಾಕ್ಕೆ ಮಾತ್ರ ಎಂದಾಗಿರುತ್ತಿದ್ದರೆ ಅರೇಬಿಕ್ ಭಾಷೆಯಲ್ಲಿರುವ ಕುರ್‌ಆನನ್ನು ಕನ್ನಡಕ್ಕೆ ಅನುವಾದಿಸುವುದು ಪಾಪವಾಗುತ್ತಿತ್ತು.

ಪ್ರವಾದಿ ಮುಹಮ್ಮದ್‌ರು(ಸ) ಸೌದಿ ಅರೇಬಿಯಾದ ಮಕ್ಕಾದಲ್ಲಿ ಹುಟ್ಟಿದರು. ಅವರ ಭಾಷೆ ಅರೇಬಿಕ್. ಮುಸ್ಲಿಮರು ನಮಾಝ್ ಗೆ ಮುಖ ಮಾಡುವ ಕಾಬಾ ಇರುವುದೂ ಮಕ್ಕಾದಲ್ಲೇ. ಒಂದು ವೇಳೆ, ಕಾಬಾವು ಮಕ್ಕಾದಲ್ಲಲ್ಲದೆ ಭಾರತದಲ್ಲಿರುತ್ತಿದ್ದರೆ ಭಾರತೀಯ ಮುಸ್ಲಿಮರು ಬಿಡಿ, ಜಗತ್ತಿನ ಎಲ್ಲ ಮುಸ್ಲಿಮರೂ ಭಾರತದಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಿದ್ದರು. ಕಾಬಾ ಅನ್ನುವುದು ದೇಶನಿಷ್ಠೆಯ ಸಂಕೇತ ಅಲ್ಲ. ಅದೊಂದು ದಿಕ್ಕು ಅಥವಾ ಅರೇಬಿಕ್ ಭಾಷೆಯಲ್ಲಿ ಹೇಳುವುದಾದರೆ ಕಿಬ್ಲಾ. ಜಗತ್ತಿನೆಲ್ಲೆಡೆಯಿರುವ ಮುಸ್ಲಿಮರು ನಮಾಝ್ ನ ವೇಳೆ ಈ ಕಾಬಾದತ್ತ ಮುಖ ಮಾಡುತ್ತಾರೆ. ಮಾತ್ರವಲ್ಲ, ದಫನ ಮಾಡುವಾಗಲೂ ಈ ದಿಕ್ಕಿನತ್ತ ಮೃತದೇಹದ ಮುಖ ಬರುವಂತೆ ಮಾಡಲಾಗುತ್ತದೆ. 5 ಬಾರಿ ಅಝಾನ್ ಕೊಡುವುದೂ ಇದೇ ದಿಕ್ಕಿಗೆ ತಿರುಗಿಕೊಂಡು. ಹಜ್ಜ್ ನ ವೇಳೆ ಪ್ರಾಣಿ ಬಲಿಯನ್ನೂ ಈ ಕಿಬ್ಲಾಕ್ಕೆ ಅಭಿಮುಖೀಕರಿಸಿ ನೀಡಲಾಗುತ್ತದೆ. ಒಂದು ರೀತಿಯಲ್ಲಿ, ಮುಸ್ಲಿಮರ ಏಕತೆಯನ್ನು, ಐಡೆಂಟಿಟಿಯನ್ನು ಬಿಂಬಿಸುವ ಸಂಕೇತವಾಗಿ ಈ ಕಾಬಾವನ್ನು ನೋಡಲಾಗುವುದೇ ಹೊರತು ಅದರಾಚೆಗೆ ದೇಶನಿಷ್ಠೆಗೂ ಅದಕ್ಕೂ ಸಂಬಬಂಧವೇ ಇಲ್ಲ.

ಪ್ರವಾದಿ ಮುಹಮ್ಮದರು 53 ವರ್ಷಗಳ ಕಾಲ ಮಕ್ಕಾದಲ್ಲೇ ಜೀವಿಸಿದ್ದರು. ಆ ಬಳಿಕ ಅವರು ಪಕ್ಕದ ಮದೀನಾಕ್ಕೆ ವಲಸೆ ಹೋದರು. ಆ ಎಲ್ಲ ಸಂದರ್ಭಗಳಲ್ಲೂ ಅವರು ಮತ್ತು ಅವರ ಅನುಯಾಯಿಗಳು ಫೆಲೆಸ್ತೀನಿನ ಜೆರುಸಲೇಮ್‌ನಲ್ಲಿರುವ ಮಸ್ಜಿದುಲ್ ಅಕ್ಸಾಕ್ಕೆ ಮುಖ ಮಾಡಿ ಪ್ರಾರ್ಥನೆ ನಡೆಸುತ್ತಿದ್ದರು. ಮದೀನಾಕ್ಕೆ ತೆರಳಿ ಸುಮಾರು 17 ತಿಂಗಳಾದ ಬಳಿಕ ಪ್ರಾರ್ಥನೆಯ ದಿಕ್ಕನ್ನು ಮಸ್ಜಿದುಲ್ ಅಕ್ಸಾದಿಂದ ಮಕ್ಕಾದಲ್ಲಿರುವ ಕಾಬಾದೆಡೆಗೆ ತಿರುಗಿಸುವಂತೆ ದೇವನಿಂದ ಅವರಿಗೆ ಆದೇಶ ಬಂತು. ಈ ಆದೇಶವು ಕುರ್‌ಆನಿನ 2ನೇ ಅಧ್ಯಾಯದ 149ನೇ ವಚನದಲ್ಲಿದೆ. ಆ ಬಳಿಕದಿಂದ ಜಗತ್ತಿನ ಎಲ್ಲೇ ಇರುವ ಮುಸ್ಲಿಮರು ಕಾಬಾದತ್ತ ಮುಖ ಮಾಡಿ ನಮಾಝ್ ಮಾಡುತ್ತಿದ್ದಾರೆ. ಪ್ರಯಾಣ ಮತ್ತಿತರ ಅನಿವಾರ್ಯ ಸಂದರ್ಭಗಳಲ್ಲಿ ಈ ನಿಯಮಕ್ಕೆ ವಿನಾಯಿತಿಯನ್ನು ಬಿಟ್ಟರೆ ಉಳಿದಂತೆ ಕಾಬಾದತ್ತ ಮುಖ ಮಾಡಿ ನಮಾಝ್ ಮಾಡುವುದು ಮುಸ್ಲಿಮರ ಪಾಲಿಗೆ ಕಡ್ಡಾಯ. ಮುಖ್ಯವಾಗಿ, ಮಸೀದಿಗಳನ್ನು ಕಿಬ್ಲಾಕ್ಕೆ ಅಭಿಮುಖವಾಗಿಯೇ ಕಟ್ಟಲಾಗುತ್ತದೆ. ಅಲ್ಲಿ ನಮಾಝ್ ಗೆ ನೇತೃತ್ವ ನೀಡುವವರು ನಿಲ್ಲುವುದಕ್ಕಾಗಿ ಮಿಹ್ರಾಬ್ ಅಥವಾ ಪುಟ್ಟ ಕೊಠಡಿ ರೂಪದ ರಚನೆಯನ್ನು ಮಾಡಲಾಗುತ್ತದೆ. ಕುರ್‌ಆನಿನ 19ನೇ ಅಧ್ಯಾಯದ 11ನೇ ವಚನದಲ್ಲಿ ಈ ಮಿಹ್ರಾಬ್ ಎಂಬ ಪದವು ಏಕೈಕ ಬಾರಿ ಉಲ್ಲೇಖಗೊಂಡಿದೆ. ಮಸೀದಿಯಲ್ಲಿ ಈ ಮಿಹ್ರಾಬ್ ನಿರ್ಮಿಸುವ ಕ್ರಮವು ಉಮಯ್ಯರ ಆಡಳಿತ ಕಾಲದಲ್ಲಿ ಚಾಲ್ತಿಗೆ ಬಂತು ಎಂದು ಹೇಳಲಾಗುತ್ತದೆ.

ಅಂದಹಾಗೆ,
ಭಾರತೀಯ ಮುಸ್ಲಿಮರು ಈ ದೇಶಕ್ಕಲ್ಲದೆ ಬೇರಾವುದೇ ರಾಷ್ಟ್ರಕ್ಕೂ ಯಾಕೆ ನಿಷ್ಠರಾಗಬೇಕು? ಭಾರತವನ್ನು ಬಿಟ್ಟು ಜಗತ್ತಿನ ಉಳಿದ ಯಾವುದೇ ಮುಸ್ಲಿಮ್ ರಾಷ್ಟ್ರಕ್ಕೆ ಭಾರತೀಯ ಮುಸ್ಲಿಮರು ಪ್ರಯಾಣಿಸುವುದಾದರೂ ಪಾಸ್‌ಪೋರ್ಟ್ ನ ಅಗತ್ಯ ಇದೆ. ವೀಸಾದ ಅಗತ್ಯ ಇದೆ. ವೀಸಾದ ಅವಧಿಗಿಂತ ಒಂದೇ ಒಂದು ಗಂಟೆ ಹೆಚ್ಚು ತಂಗಿದರೂ ಈ ರಾಷ್ಟ್ರಗಳು ಸಹಿಸುವುದಿಲ್ಲ. ಅಂಥವರನ್ನು ಬಂಧಿಸಿ ಜೈ ಲಿಗಟ್ಟುತ್ತದೆ. ಮುಸ್ಲಿಮರು ಎಂಬ ಕಾರಣಕ್ಕಾಗಿ ಈ ನಿಯಮದಲ್ಲಿ ಈ ಯಾವ ರಾಷ್ಟ್ರಗಳೂ ರಿಯಾಯಿತಿಯನ್ನು ತೋರುವುದಿಲ್ಲ. ಅಷ್ಟಕ್ಕೂ ಸೌದಿ ಅರೇಬಿಯಾದಲ್ಲಿರುವ ಕಾಬಾಕ್ಕೆ ತೀರ್ಥಯಾತ್ರೆಗೆಂದು ಹೋದ ಭಾರತೀಯ ಮುಸ್ಲಿಮರನ್ನೂ ಅವಧಿಗಿಂತ ಒಂದು ದಿನ ಹೆಚ್ಚು ಉಳಿದುಕೊಳ್ಳುವುದಕ್ಕೆ ಆ ರಾಷ್ಟ್ರ ಅನುಮತಿಸುವುದಿಲ್ಲ. ಸೌದಿ ನಾಗರಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಮತ್ತು ರಿಯಾಯಿತಿಗಳು ಭಾರತದಿಂದ ಹೋದ ಮುಸ್ಲಿಮರಿಗೆ ಸಿಗುವುದಿಲ್ಲ. ಸೌದಿ ಉದ್ಯೋಗ ನೀತಿಯು ಸೌದಿ ನಾಗರಿಕರಿಗೆ ಆದ್ಯತೆಯನ್ನು ಕೊಡುತ್ತದೆಯೇ ಹೊರತು ಭಾರತೀಯ ಮುಸ್ಲಿಮರಿಗಿಲ್ಲ. ಸೌದಿ ಅಧ್ಯಕ್ಷರ ಆಯ್ಕೆಯಲ್ಲಿ ಮತ್ತು ಅದರ ವಿದೇಶಾಂಗ ನೀತಿ, ಆರ್ಥಿಕ, ರಾಜಕೀಯ ನಿಯಮಗಳ ರಚನೆಯಲ್ಲಿ ಭಾರತೀಯ ಮುಸ್ಲಿಮರಿಗೆ ಯಾವ ಪಾಲೂ ಇಲ್ಲ. ಇದು ಪಾಕಿಸ್ತಾನಕ್ಕೂ ಅನ್ವಯಿಸುತ್ತದೆ. ಅಫಘಾನಿಸ್ತಾನಕ್ಕೂ ಅನ್ವಯಿಸುತ್ತದೆ.

ಆದರೆ, ಭಾರತವು ತನ್ನ ನಾಗರಿಕರಾದ ಮುಸ್ಲಿಮರಿಗೆ ಈ ಯಾವ ನಿಯಂತ್ರಣವನ್ನೂ ಹೇರುವುದಿಲ್ಲ. ಇಲ್ಲಿ ಮುಸ್ಲಿಮರು ಬದುಕಬೇಕಾದರೆ ಪಾಸ್‌ಪೋರ್ಟ್ ನ ಅಗತ್ಯ ಇಲ್ಲ. ವೀಸಾದ ಅಗತ್ಯ ಇಲ್ಲ. ಇಲ್ಲಿ ಭೂಮಿ ಖರೀದಿಸಬಹುದು, ಉದ್ದಿಮೆ ಸ್ಥಾಪಿಸಬಹುದು, ಸೇನೆಯನ್ನೋ ಪೊಲೀಸ್ ಇಲಾಖೆಯನ್ನೋ ಯಾವ ನಿಯಂತ್ರಣ ಮತ್ತು ಷರತ್ತುಗಳಿಲ್ಲದೇ ಸೇರಬಹುದು. ಮತದಾನದ ಹಕ್ಕಿದೆ, ಆಡಳಿತವನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಹಕ್ಕಿದೆ, ಆಡಳಿತದಲ್ಲಿ ಭಾಗಿಯಾಗುವ ಹಕ್ಕೂ ಇದೆ. ಇಲ್ಲಿ ಮುಸ್ಲಿಮರು ನ್ಯಾಯಾಧೀಶರಾಗಬಹುದು, ರಾಷ್ಟ್ರಪತಿ, ಪ್ರಧಾನಿಯಾಗಬಹುದು, ಐಎಎಸ್, ಐಪಿಎಸ್ ಅಧಿಕಾರಿಗಳಾಗಬಹುದು. ಅಲ್ಲದೇ, ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳು ಭಾರತೀಯ ಮುಸ್ಲಿಮರ ಅಭಿವೃದ್ಧಿಗೆಂದೇ ಹತ್ತು-ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಪಾಕಿಸ್ತಾನವಾಗಲಿ, ಸೌದಿ ಅರೇಬಿಯಾವಾಗಲಿ ಭಾರತೀಯ ಮುಸ್ಲಿಮರಿಗೆಂದು ಯಾವ ಯೋಜನೆಯನ್ನೂ ತಯಾರಿಸಿಟ್ಟಿಲ್ಲ. ಅವು ತಂತಮ್ಮ ದೇಶದ ನಾಗರಿಕರನ್ನು ಮಾತ್ರ ಇಂಥ ಯೋಜನೆಗಳಿಗೆ ಪರಿಗಣಿಸುತ್ತದೆಯೇ ಹೊರತು ಭಾರತೀಯ ಮುಸ್ಲಿಮರನ್ನಲ್ಲ.

ಇಷ್ಟಿದ್ದೂ,
ಭಾರತೀಯ ಮುಸ್ಲಿಮರು ಅನ್ಯ ರಾಷ್ಟ್ರಗಳಿಗೆ ನಿಷ್ಠರಾಗುವುದಾದರೂ ಯಾತಕ್ಕೆ? ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸಬೇಕೆಂದು ಬಯಸುವವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ದೇಶನಿಷ್ಠೆಯನ್ನು ಅನುಮಾನಿಸಿ, ಸುಳ್ಳುಗಳನ್ನು ಹಂಚುತ್ತಿದ್ದಾರೆ. ಅವರ ಆಹಾರ, ಆರಾಧನೆ, ಅಭಿನಂದನಾ ರೀತಿ ಮತ್ತು ವೇಷ-ಭೂಷಣಗಳಿಗೆ ಉತ್ಪ್ರೇಕ್ಷಿತ ವ್ಯಾಖ್ಯಾನವನ್ನು ಕೊಟ್ಟು ಜನಸಾಮಾನ್ಯರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ.

ನಿಜವಾಗಿ,
ಇಸ್ಲಾಮ್, ಹಿಂದೂ, ಯಹೂದಿ, ಕ್ರೈಸ್ತ ಧರ್ಮಗಳ ಆರಾ ಧನೆ, ಆಚರಣೆ, ಆಹಾರ ಕ್ರಮಗಳಲ್ಲಿ ಮೂಲಭೂತ ವ್ಯತ್ಯಾಸ ಇದೆ. ಈ ವ್ಯತ್ಯಾಸಗಳನ್ನು ವೈವಿಧ್ಯತೆಗಳಾಗಿ ನೋಡಬೇಕೇ ಹೊರತು ವೈರತ್ವದಿಂದ ಅಲ್ಲ. ಏಕದೇವನನ್ನು ಮಾತ್ರ ಆರಾಧಿಸುವುದು ಇಸ್ಲಾಮ್ ಧರ್ಮದ ಮೂಲತತ್ವ. ಅದರರ್ಥ, ಹಿಂದೂಗಳನ್ನು ವಿರೋಧಿಸುವುದಕ್ಕಾಗಿಯೇ ಏಕದೇವಾರಾಧನೆಯನ್ನು ಮಾಡುತ್ತಿದ್ದಾರೆ ಎಂದಲ್ಲ. ಅದವರ ಆರಾಧನಾ ರೀತಿ. ಅದು ವೈರತ್ವದ ಪ್ರದರ್ಶನ ಅಲ್ಲ. ಅದನ್ನು ಧಾರ್ಮಿಕ ವೈವಿಧ್ಯತೆಯಾಗಿಯೇ ಪರಿಗಣಿಸಬೇಕು.

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …