Home / ಲೇಖನಗಳು / ಅಸೂಯೆ: ಎಲ್ಲ ಪಾಪಗಳ ಜನನಿ

ಅಸೂಯೆ: ಎಲ್ಲ ಪಾಪಗಳ ಜನನಿ

ಅಸೂಯೆಯು ಮನಸ್ಸಿನ ಅತೀ ದೊಡ್ಡ ರೋಗವಾಗಿದೆ. ಅಸೂಯೆಯು ಎಲ್ಲ ಪಾಪಗಳ ಜನನಿ ಎಂದು ಹೇಳಬಹುದು.

ಪ್ರವಾದಿ(ಸ)  ಹೇಳಿದರು, “ಅಸೂಯೆಯಿಂದ ದೂರವಿರಿ. ಯಾಕೆಂದರೆ ಬೆಂಕಿಯು ಕಟ್ಟಿಗೆಯನ್ನು ಉರಿಸುವಂತೆ ಅಸೂಯೆಯು ಒಳಿತುಗಳನ್ನು ನುಂಗಿ ಹಾಕುತ್ತದೆ.” ಅಸೂಯೆಯು ಒಂದು ಮರದ ಅತಿ ಕೆಟ್ಟ ಬೀಜವಾಗಿದೆ. ಅಸೂಯೆಯು ಶತ್ರುತ್ವ, ಗೀಬತ್, ಸುಳ್ಳಾರೋಪ, ಸುಳ್ಳು  ಹೇಳುವುದು, ಇತರರಿಗೆ ಬೆನ್ನು ತೋರಿಸುವುದು ಮುಂತಾದ ಪಾಪಗಳಿಗೆ ನಾಂದಿಯಾಗುತ್ತದೆ.

ಈ ಲೋಕದ ಪ್ರಥಮ ಕೊಲೆಗೆ ಅಸೂಯೆಯು ಕಾರಣವಾಗಿತ್ತು. ಹ. ಯೂಸುಫ್(ಅ)ರನ್ನು ಅವರ ಅಣ್ಣಂದಿರು ಪಾಳು ಬಾವಿಗೆ ದೂಡಲು ಅಸೂಯೆಯು ಕಾರಣವಾಗಿತ್ತು. ತನಗಿಂತ ಮಿಗಿಲಾಗಿ ಇತರರಿಗೆ ದೊರೆತಾಗ ಮನುಷ್ಯ ಅಸೂಯೆ ಪಡುತ್ತಾನೆ. ಅದು ಸಂಪತ್ತು, ಖ್ಯಾತಿ ಅಥವಾ ಇನ್ನೇನೂ ಆಗಿರಬಹುದು. ಆದರೆ ಅಸೂಯೆ ಪಡುವವನು ಅಲ್ಲಾಹನು ಅವನಿಗೆ ಮಾಡಿದ ಅನುಗ್ರಹಗಳನ್ನು ಮರೆಯುತ್ತಾನೆ.

ಪ್ರವಾದಿ(ಸ) ಒಮ್ಮೆ ಹೇಳಿದರು, “ಅವರು ಅಲ್ಲಾಹನ ಅನುಗ್ರಹದ ಶತ್ರುಗಳು.” ಸಹಾಬಿಗಳು ಅವರು ಯಾರೆಂದು ಕೇಳಿದಾಗ ಪ್ರವಾದಿ(ಸ) ಉತ್ತರಿಸಿದರು,  “ಯಾರಿಗಾದರೂ ಅಲ್ಲಾಹನು ಅನುಗ್ರಹ ನೀಡಿದ್ದರೆ ಅವನ ಮೇಲೆ ಅಸೂಯೆ ಪಡುವವರು.” ಒಂದರ್ಥದಲ್ಲಿ ಅಸೂಯೆ  ಪಡುವುದೆಂದರೆ ಅಲ್ಲಾಹನು ಇತರರಿಗೆ ನೀಡಿದ ಅನುಗ್ರಹಗಳು ನಾವು ಪ್ರಶ್ನಿಸಿದಂತಾಗುತ್ತದೆ. ಈ ಮೂಲಕ ಖಂಡಿತವಾಗಿಯೂ ಅಲ್ಲಾಹನ ಕ್ರೋಧಕ್ಕೆ ಪಾತ್ರರಾಗುವ ಸಾಧ್ಯತೆ ಇದೆ.

ಅಸೂಯೆಗೆ ಕಾರಣಗಳು

1. ದ್ವೇಷ:
ಅಸೂಯೆಗಿರುವ ಮುಖ್ಯ ಕಾರಣ ಒಬ್ಬನಿಗೆ ಯಾರದಾದರೂ ಮೇಲೆ ದ್ವೇಷವಿರುವುದು.

2. ಅಹಂಕಾರ ಹಾಗೂ ಖ್ಯಾತಿಯೊಂದಿಗೆ ಪ್ರೀತಿ:
ನಾನು ಎಂಬ ಶೈತಾನನ ಗುಣ ಅಸೂಯೆಗಿರುವ ಇನ್ನೊಂದು ಕಾರಣ. ಎಲ್ಲರೂ ನನಗೆ ಪ್ರಾಧಾನ್ಯ ನೀಡಬೇಕು, ನನಗೇ ಖ್ಯಾತಿ ಸಿಗಬೇಕು ಎಂದು ಭಾವಿಸುವಾಗ ಹಾಗೂ ಅದು ಇತರರಿಗೆ ದೊರೆತಾಗ ಮನಸ್ಸು ತನ್ನಿಂತಾನೇ ಅಸೂಯೆ ಪಡಲು ಪ್ರಾರಂಭಿಸುತ್ತದೆ.

3. ಲೋಕದ ಮೇಲಿನ ಪ್ರೀತಿ:
ಪರಲೋಕವನ್ನು ಮರೆತು ನಶ್ವರವಾದ ಈ ಲೋಕವನ್ನು ಪ್ರೀತಿಸಲು ಆರಂಭಿಸುವಾಗ ಮನದಲ್ಲಿ ಇತರರೊಂದಿಗೆ ಸ್ಪರ್ಧಾ ಮನೋಭಾವ ಬೆಳೆದು ಅಸೂಯೆಯು ಮನದಲ್ಲಿ ಬೇರೂರ ತೊಡಗುತ್ತದೆ.

ಅಸೂಯೆಗೆ ಮದ್ದು

1. ಲೋಕದ ವಾಸ್ತವಿಕತೆಯನ್ನು ಅರಿಯುವುದು:
ಈ ಲೋಕವು ಒಂದು ಪರೀಕ್ಷಾ ಕೊಠಡಿಯಲ್ಲದೆ ಇನ್ನೇನೂ ಅಲ್ಲ ಎಂಬ ವಾಸ್ತವಿಕತೆಯನ್ನು ಸದಾ ನೆನಪಿನಲ್ಲಿಡಬೇಕು. ಒಂದು ವೇಳೆ ಅಲ್ಲಾಹನು ಯಾರಿಗಾದರೂ ಹೆಚ್ಚು ನೀಡಿದ್ದರೆ ಅದು ಕೆಲವು ಸಮಯಗಳ ವರೆಗೆ ಮಾತ್ರ ಹಾಗೂ ಯಾರಿಗೆ ಎಷ್ಟು ಹೆಚ್ಚು ಈ ಲೋಕದಲ್ಲಿ ನೀಡಲ್ಪಡುತ್ತದೋ ಅಷ್ಟೇ ಹೆಚ್ಚು ಅದರ ಬಗ್ಗೆ ವಿಚಾರಣೆ ನಾಳೆ ಪರಲೋಕದಲ್ಲಿ ನೀಡಲಿಕ್ಕಿದೆ ಎಂಬುದನ್ನು ಅರಿತಿರಬೇಕು.  ಅಲ್ಲಾಹನು ಕುರ್‌ಆನಿನಲ್ಲಿ ಸೂರಃ ಅನ್ನಿಸಾದ 32ನೇ ಆಯತ್‌ನಲ್ಲಿ ಹೇಳುತ್ತಾನೆ, “ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ  ಅಧಿಕವಾಗಿ ನೀಡಿದ್ದರೆ ಅದಕ್ಕಾಗಿ ಆಶೆ ಪಡಬೇಡಿರಿ.” ಖುರ‍್ರಮ್ ಮುರಾದ್ ಅವರು ತಂದೆಯ ಅಂತಿಮ ಉಪದೇಶ ಎಂಬ ಕೃತಿಯಲ್ಲಿ ಹೇಳುತ್ತಾರೆ, “ಈ ನಶ್ವರ ಲೋಕದ ಅತಿದೊಡ್ಡ ಅನುಗ್ರಹವೂ ನೈಜ ಅನುಗ್ರಹವೇ ಅಲ್ಲ. ಅದೇ ರೀತಿ ಇಲ್ಲಿನ ಅತೀ ದೊಡ್ಡ ಸಂಕಷ್ಟವೂ  ನೈಜ ಸಂಕಷ್ಟವೇ ಅಲ್ಲ.” ಈ ಲೋಕದ ನಿಜವಾದ ವಾಸ್ತವಿಕತೆ ಹಾಗೂ ನಮ್ಮ ಜೀವನದ ನಿಜವಾದ ಉದ್ದೇಶವನ್ನು ಅರಿತು ಆ ಉದ್ದೇಶ  ಸಾಧನೆಗಾಗಿ ತನ್ನ ಜೀವನ್ನು ಸಾಗಿಸುವಾಗ ಮನಸ್ಸು ಎಂದೂ ಯಾರ ಬಗ್ಗೆಯೂ ಅಸೂಯೆ ಪಡದು.

2. ಕುರ್‌ಆನಿನೊಂದಿಗೆ ಸಂಬಂಧ:
ಅಸೂಯೆಯು ಹೃದಯದ ರೋಗವಾಗಿರುವುದರಿಂದ ಕುರ್‌ಆನ್ ಅದಕ್ಕಿರುವ ಅತ್ಯುತ್ತಮ ಮದ್ದಾಗಿದೆ. ಸೂರಃ ಯೂನುಸ್‌ನ 57ನೇ  ಆಯತ್‌ನಲ್ಲಿ ಅಲ್ಲಾಹನು ಹೇಳುತ್ತಾನೆ, “ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಉಪದೇಶ ಬಂದಿದೆ. ಇದು ಮನಸ್ಸಿನೊಳಗಿನ ಕಾಯಿಲೆಗಳಿಗೆ ಗುಣೌಷಧವಾಗಿದೆ.”

3. ಇದ್ದುದರಲ್ಲಿ ಸಂತೃಪ್ತಿ:
ಇದ್ದುದರಲ್ಲಿ ಸಂತೃಪ್ತಿ ಪಡುವ ಮನಸ್ಸು ಹೃದಯದ ಹೆಚ್ಚಿನ ಕೆಡುಕುಗಳಿಂದ ದೂರವಿರುತ್ತದೆ. ಈ ಲೋಕದಲ್ಲಿ ಹೆಚ್ಚಿಂದೆರೆ ಹೊನ್ನು,  ಖ್ಯಾತಿ, ಅಧಿಕಾರ, ಅದಕ್ಕಿಂತ ಹೆಚ್ಚೇನೂ ಸಿಗದು. ಎಲ್ಲವನ್ನು ಒಂದು ದಿನ ಇಲ್ಲಿಯೇ ಬಿಟ್ಟು ಹೋಗಬೇಕೆಂಬ ಪ್ರಜ್ಞೆಯೊಂದಿಗೆ ಅಲ್ಲಾಹನು ನೀಡಿದ್ದುದರಲ್ಲಿ ಸಂತೃಪ್ತಿಪಟ್ಟು ಜೀವಿಸಲು ತೊಡಗಿದಾಗ ಅಸೂಯೆಯು ನಮ್ಮ ಮನಸ್ಸಿನೊಳಗೆ ಪ್ರವೇಶಿಸಲಾರದು.

4. ಉಡುಗೊರೆ ಕೊಡುವುದು:
ಪ್ರವಾದಿ(ಸ) ಹೇಳಿದರು, “ಪರಸ್ಪರ ಕೈ ಕುಲುಕಿರಿ, ಪರಸ್ಪರ ಕಾಣಿಕೆಗಳನ್ನು ನೀಡಿರಿ ಹಾಗೂ ಒಬ್ಬರನ್ನೊಬ್ಬರು ಪ್ರೀತಿಸಿರಿ. ಇದು  ದ್ವೇಷವನ್ನು ದೂರ ಮಾಡುತ್ತದೆ.” ನಾವು ಯಾರ ಬಗ್ಗೆ ಅಸೂಯೆ ಪಡುತ್ತೇವೆಯೋ ಅವರಿಗೆ ಉಡುಗೊರೆಗಳನ್ನು ಕೊಡಲು  ಪ್ರಯತ್ನಿಸಬೇಕು. ಹೀಗೆ ಮಾಡುವಾಗ ನಮ್ಮ ನಡುವೆ ಪ್ರೀತಿ ಬೆಳೆಯುತ್ತದೆ. ಆದರೆ ಹೀಗೆ ಮಾಡುವುದು ಖಂಡಿತವಾಗಿಯೂ ಅಷ್ಟು  ಸುಲಭದ ಕಾರ್ಯವಲ್ಲ. ಶೈತಾನನು ನಮ್ಮನ್ನು ಇದರಿಂದ ತಡೆಯಲು ಪ್ರಯತ್ನಿಸುವನು. ಆದರೆ ಅಲ್ಲಾಹನ ಪ್ರೀತಿಯನ್ನು  ಬಯಸುವವರಿಗೆ ಇದು ಕಷ್ಟಕರವಲ್ಲ.

5. ಅಲ್ಲಾಹನೊಂದಿಗೆ ಪಶ್ಚಾತ್ತಾಪ ಹಾಗೂ ಪ್ರಾರ್ಥನೆ:
ಈ ಮಹಾ ರೋಗವನ್ನು ನಮ್ಮ ಮನಸ್ಸಿನಿಂದ ಹೋಗಲಾಡಿಸಲು ಅಲ್ಲಾಹನೊಂದಿಗೆ ಸದಾ ಪ್ರಾರ್ಥಿಸುತ್ತಿರಬೇಕು ಹಾಗೂ ನಾವು ಪಟ್ಟ  ಅಸೂಯೆಗಾಗಿ ಸದಾ ಪಶ್ಚಾತ್ತಾಪ ಪಡುತ್ತಿರಬೇಕು.

@ ಅಬೂ ಝೀಶಾನ್

SHARE THIS POST VIA

About editor

Check Also

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು …