Home / ಲೇಖನಗಳು / ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” (ಅಲ್ ಕಲಮ್: 4)

ಪ್ರವಾದಿ ಮುಹಮ್ಮದ್(ಸ)ರು ಈ ರೀತಿ ಹೇಳಿರುವರು, “ಉತ್ತಮ ಚಾರಿತ್ರ್ಯವನ್ನು ಪರಿಪೂರ್ಣಗೊಳಿಸಲಿಕ್ಕಾಗಿ ನನ್ನನ್ನು ಅಲ್ಲಾಹನ ವತಿಯಿಂದ ನಿಯೋಗಿಸಲಾಗಿದೆ.” (ಮೂಅತ್ತಾ)

1.ಸತ್ಯಸಂಧ:
ಪ್ರವಾದಿ ಮುಹಮ್ಮದ್(ಸ)ರು ಸತ್ಯಸಂಧ ವ್ಯಕ್ತಿಯಾಗಿದ್ದರು. ಅವರು ತಮ್ಮ ಜೀವಮಾನದಲ್ಲಿ ಎಂದೂ ಸುಳ್ಳು ಹೇಳಿದವರಲ್ಲ. ಪ್ರವಾದಿತ್ವಕ್ಕಿಂತ ಮೊದಲೇ ಜನರು ಅವರನ್ನು ‘ಅಸ್ಸಾದಿಕ್’ (ಸತ್ಯಸಂಧ) ಮತ್ತು ‘ಅಲ್ ಅಮೀನ್’ (ಪ್ರಾಮಾಣಿಕ) ಎಂಬ ಬಿರುದಿನಿಂದ ಕರೆಯುತ್ತಿದ್ದರು. ಪ್ರವಾದಿತ್ವ ಘೋಷಣೆಯಾದ ಬಳಿಕವೂ ಅವರ ಪ್ರಾಣಶತ್ರುಗಳಿಗೆ ಕೂಡ ಅವರನ್ನು ಸುಳ್ಳುಗಾರನೆಂದು ಹೇಳುವ ಧೈರ್ಯವಿರಲಿಲ್ಲ.

ಅಬೂಜಹಲ್ ಇಸ್ಲಾಮಿನ ಬಹುದೊಡ್ಡ ಶತ್ರುವಾಗಿದ್ದ. ಅವನು ಪ್ರವಾದಿಯವರೊಡನೆ(ಸ), “ಮುಹಮ್ಮದ್! ನಾನು ನಿನ್ನನ್ನು ಸುಳ್ಳುಗಾರನೆಂದು ಹೇಳುವುದಿಲ್ಲ. ಆದರೆ ನೀನು ತಂದಂತಹ ಸಂದೇಶವನ್ನು ಸುಳ್ಳಾಗಿಸುತ್ತೇನೆ” ಎಂದು ಹೇಳುತ್ತಿದ್ದ. ಇದು ಪ್ರವಾದಿ ಮುಹಮ್ಮದ್(ಸ)ರಿಗೆ ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲಿನ ಪಾವನ ಜೀವನದ ಕುರಿತು ಸಾಕ್ಷಿಯಾಗಿದೆ. ಪ್ರವಾದಿ ಮುಹಮ್ಮದ್(ಸ)ರ ಮಾತು, ಕೃತಿಯಲ್ಲಿ ಸಾಮ್ಯತೆಯಿತ್ತು. ಯಾವುದನ್ನು ಹೇಳುತ್ತಿದ್ದರೋ ಅದನ್ನು ಮಾಡುತ್ತಿದ್ದರು. ಯಾವುದನ್ನು ಮಾಡಿ ತೋರಿಸುತ್ತಿದ್ದರೋ ಅದರ ಕುರಿತು ಹೇಳುತ್ತಿದ್ದರು. ಯಾವ ಒಳಿತುಗಳ ಬಗ್ಗೆ ಅವರು ಜನರಿಗೆ ಉಪದೇಶಿಸುತ್ತಿದ್ದರೋ ಅವುಗಳನ್ನು ಸ್ವತಃ ಮಾಡುತ್ತಿದ್ದರು. ಯಾವ ಕೆಡುಕಿನ ಕುರಿತು ಜನರನ್ನು ಎಚ್ಚರಿಸುತ್ತಿದ್ದರೋ ಅವುಗಳಿಂದ ಸ್ವತಃ ದೂರವುಳಿಯುತ್ತಿದ್ದರು. ಸತ್ಯಸಂಧತೆಯನ್ನು ಪಾಲಿಸಿರಿ ಮತ್ತು ಸುಳ್ಳಿನಿಂದ ದೂರವಿರಿ ಎಂಬುದಾಗಿ ಸದಾ ಉಪದೇಶಿಸುತ್ತಿದ್ದರು.

ತಮಾಷೆ ಮತ್ತು ನಗಿಸಲಿಕ್ಕಾಗಿಯೂ ಸುಳ್ಳು ಹೇಳಬಾರದು. ಅದು – ನಿಷಿದ್ದವಾಗಿದೆ ಎಂದು ಸಾರಿದರು. ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವುದೇ ವೈರುಧ್ಯತೆ ಇರಲಿಲ್ಲ. ಅವರ ಸಂಪೂರ್ಣ ಜೀವನವು ಕನ್ನಡಿಯಂತೆ ಜನರ ಮುಂದೆ ಪಾರದರ್ಶಕವಾಗಿತ್ತು. ವೈಯಕ್ತಿಕ ಜೀವನದಲ್ಲಿ ಎಂದೂ ಸುಳ್ಳಾಡದವರು ಎನ್ನುವಾಗ, ಅಲ್ಲಾಹನು ತನ್ನನ್ನು ಪ್ರವಾದಿಯಾಗಿ ನೇಮಿಸಿದ್ದಾನೆಂದೂ ತನ್ನ ಮೇಲೆ ಪವಿತ್ರ ಕುರ್‌ಆನ್ ಅವತೀರ್ಣಗೊಳಿಸಿದ್ದಾನೆ ಎಂದೂ ಅಲ್ಲಾಹನ ಹೆಸರೆತ್ತಿ ಅವರು ಸುಳ್ಳಾಡಬಹುದು ಎಂದು ಭಾವಿಸಲು ಸಾಧ್ಯವಿದೆಯೇ? ಪವಿತ್ರ ಕುರ್‌ಆನ್ ಅವರ(ಸ) ಕುರಿತು ಹೀಗೆ ಹೇಳುತ್ತದೆ. “ಅವರು ತಮ್ಮ ಸ್ವಚಿತ್ತದಿಂದ ನುಡಿಯುವುದಿಲ್ಲ. ಇದು ಅವರಿಗೆ ಅವತೀರ್ಣ ಗೊಳ್ಳುವ ಒಂದು ವಹ್ಯ್ (ದಿವ್ಯವಾಣಿ) ಆಗಿದೆ.” (ಅನ್ನಜ್ಮ್: 3-4)

ಮಾನವನ ಮುಖವು ಅವನ ವ್ಯಕ್ತಿತ್ವದ ಪ್ರತಿಬಿಂಬವಾಗಿರುತ್ತದೆ. ಈ ಕಾರಣದಿಂದಾಗಿಯೇ ಯಾವನೇ ಒಬ್ಬ ಅಪರಿಚಿತ ವ್ಯಕ್ತಿ ಬಂದು ಪ್ರವಾದಿ ಮುಹಮ್ಮದ್(ಸ)ರನ್ನು ಭೇಟಿಯಾದರೂ ಅವನ ಹೃದಯದಾಳದಿಂದ ಅಲ್ಲಾಹನಾಣೆ, ಇದು ಯಾವನೇ ಸುಳ್ಳುಗಾರ ವ್ಯಕ್ತಿಯ ಮುಖವಾಗಿರಲು ಸಾಧ್ಯವಿಲ್ಲ’ ಎಂಬ ಮಾತು ಹೊರಡುತ್ತಿತ್ತು.

2.ಸೌಮ್ಯ ಸ್ವಭಾವಿ:
ಪ್ರವಾದಿ ಮುಹಮ್ಮದ್(ಸ)ರು ವಿಶಾಲ ಹೃದಯಿ ಮತ್ತು ಸೌಮ್ಯ ಸ್ವಭಾವದವರಾಗಿದ್ದರು. ಅವರು ಕಠಿಣ ಹೃದಯಿಯಾಗಿರುತ್ತಿದ್ದರೆ, ತಮ್ಮ ದೌತ್ಯದಲ್ಲಿ ಎಂದೂ ಸಪಲತೆಯನ್ನು ಹೊಂದಲು ಸಾಧ್ಯವಿರಲಿಲ್ಲ.

ಪವಿತ್ರ ಕುರ್‌ಆನ್‌ನಲ್ಲಿ ಈ ರೀತಿ ಬಂದಿದೆ, “ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ, ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದುರಿ ಹೋಗುತ್ತಿದ್ದರು.” (ಆಲಿ ಇಮ್ರಾನ್: 159)

ಪವಿತ್ರ ಕುರ್‌ಆನ್ ಪ್ರವಾದಿ ಮುಹಮ್ಮದ್ (ಸ)ರಿಗೆ ವತ್ಸಲ, ಕರುಣಾಳು ಮತ್ತು ಲೋಕಾನುಗ್ರಹಿ ಎಂಬ ಬಿರುದನ್ನು ನೀಡಿದೆ.’ ಪ್ರವಾದಿ ಮುಹಮ್ಮದ್ (ಸ)ರು ಈ ರೀತಿ ಹೇಳಿರುವರು, “ಯಾರು ಸೌಮ್ಯ ಸ್ವಭಾವದಿಂದ ವಂಚಿತನಾದನೋ ಅವನು ಎಲ್ಲ ರೀತಿಯ ಒಳಿತುಗಳಿಂದ ವಂಚಿತನಾದನು.”? ಆದ್ದರಿಂದಲೇ ಪ್ರವಾದಿ ಮುಹಮ್ಮದ್(ಸ)ರನ್ನು ಒಮ್ಮೆ ಭೇಟಿಯಾದವರು ಅವರಿಂದ ಆಕರ್ಷಿತರಾಗುತ್ತಿದ್ದರು.

ಹ. ಝೈದ್(ರ), ಪ್ರವಾದಿಯವರ(ಸ) ಸೇವಕರಾಗಿದ್ದರು. ಅವರ ತಂದೆಗೆ ಝೈದ್ ಪ್ರವಾದಿಯವರ(ಸ) ಬಳಿ ಇರುವ ವಿವರ ತಿಳಿದು ಮಕ್ಕಾಗೆ ಬಂದರು. ಆದರೆ ಝೈದ್(ರ), ಯಾವ ಕಾರಣಕ್ಕೂ ಪ್ರವಾದಿಯವರನ್ನು(ಸ) ಬಿಟ್ಟು ಹೋಗಲು ಒಪ್ಪಲಿಲ್ಲ. ಅದೇ ರೀತಿ ಹ. ಅನಸ್(ರ) ಹತ್ತು ವರ್ಷಗಳ ಕಾಲ ಮದೀನದಲ್ಲಿ ಪ್ರವಾದಿಯವರ(ಸ) ಸೇವೆಯನ್ನು ಮಾಡಿದ್ದರು. ಅವರು ಹೇಳುತ್ತಾರೆ, “ಪ್ರವಾದಿ ಮುಹಮ್ಮದ್(ಸ)ರು ಎಂದೂ ನನಗೆ ಹೊಡೆದಿರಲಿಲ್ಲ. ನನ್ನನ್ನು ಬೈದಿರಲಿಲ್ಲ. ಕೋಪಿಸಿಕೊಂಡಿರಲಿಲ್ಲ. ಎಂದೂ ಈ ಕೆಲಸವನ್ನು ಏಕೆ ಮಾಡಲಿಲ್ಲ, ಏಕೆ ಇದನ್ನು ಮಾಡಿದೆ ಎಂದು ಪ್ರಶ್ನಿಸಿರಲಿಲ್ಲ. ಸದಾ ಪ್ರೀತಿ ವಾತ್ಸಲ್ಯದೊಂದಿಗೆ ಒಡನಾಡಿಕೊಂಡಿದ್ದರು.” ಈ ಉದಾಹರಣೆಗಳು ಪ್ರವಾದಿಯವರ(ಸ) ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದವುಗಳಾಗಿವೆ.

ಸಾಮಾನ್ಯವಾಗಿ ಜನರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಅಂತರವಿರುತ್ತದೆ. ಆದರೆ ಪ್ರವಾದಿ ಮುಹಮ್ಮದ್(ಸ)ರು ಎಂದೂ ಆ ರೀತಿ ಇರಲಿಲ್ಲ. ಮನೆಯಿಂದ ಹೊರಗಿದ್ದಾಗಲೂ ಪ್ರವಾದಿಯವರ(ಸ) ವರ್ತನೆ ಹೇಗಿತ್ತೆಂದರೆ, ಯಾರಾದರೂ ಅವರೊಂದಿಗೆ ಕೆಟ್ಟ ರೀತಿಯಲ್ಲಿ ವ್ಯವಹರಿಸಿದರೆ, ಅವರೊಂದಿಗೂ ಕ್ಷಮೆ ಮತ್ತು ಒಳಿತಿನಿಂದ ವ್ಯವಹರಿಸುತ್ತಿದ್ದರು. ಪ್ರವಾದಿ(ಸ) ಹೇಳಿರುವರು, “ಯಾರು ಇತರರ ಮೇಲೆ ಕರುಣೆ ತೋರುವುದಿಲ್ಲವೋ ಅಲ್ಲಾಹನು ಅವರ ಮೇಲೆ ಕರುಣೆ ತೋರುವುದಿಲ್ಲ.” ಅವರ ಶಿಕ್ಷಣದಲ್ಲಿ ಮಾನವರೊಂದಿಗೆ ಮಾತ್ರವಲ್ಲ, ಪ್ರಾಣಿಗಳೊಂದಿಗೂ ಕರುಣೆಯಿಂದ ವ್ಯವಹರಿಸಬೇಕು ಎಂಬ ಮಾರ್ಗದರ್ಶನ ದೊರೆಯುತ್ತದೆ. ಯಾರೊಂದಿಗೂ ವೈಯಕ್ತಿಕ ಕಾರಣಕ್ಕೆ ಪ್ರತೀಕಾರವೆಸಗಲಿಲ್ಲ. ಈ ಗುಣ ವಿಶೇಷವೇ ಅವರನ್ನು ಕರುಣಾಮಯಿಯಾಗಿಸಿತು.

ಮಕ್ಕಾ ನಿವಾಸಿಗಳು ಅವರನ್ನು ಗೇಲಿ ಮಾಡಿದರು, ಕವಿ, ಹುಚ್ಚ, ಜಾದೂಗಾರ ಎಂದರು. ನಾನಾ ರೀತಿಯಿಂದ ಪೀಡಿಸಿದರು. ದಾರಿಯಲ್ಲಿ ಮುಳ್ಳುಗಳನ್ನು ಹರಡಿದರು. ಹೊಲಸನ್ನು ಎಸೆದರು. ತಾಯಿಫ್‌ನವರಂತೂ ಕಲ್ಲು ಹೊಡೆದು ಗಾಯಗೊಳಿಸಿದರು. ಹಿಜ್ರತ್ (ವಲಸೆ)ಗೆ ಹೊರಡುವ ದಿನ ಮಕ್ಕಾ ವಾಸಿಗಳು ಅವರ ಮನೆಯನ್ನು
ಸುತ್ತುವರಿದು, ಅವರನ್ನು ಕೊಲ್ಲುವ ಸಂಚನ್ನೂ ಹೂಡಿದ್ದರು. ಹಿಜ್ರತ್‌ ನಂತರವೂ ಯುದ್ಧಗಳನ್ನು ಮಾಡಿದರು. ಆಕ್ರಮಣ ನಡೆಸಿದರು. ಯುದ್ಧಗಳಲ್ಲಿ ಪ್ರವಾದಿಯವರ(ಸ) ಆಪ್ತ ಸಂಬಂಧಿಕರನ್ನು ಕೊಲ್ಲಲಾಯಿತು. ಅವರ ಕರುಳನ್ನು ಕಿತ್ತು ಜಗಿಯಲಾಯಿತು. ಆದರೆ ಮಕ್ಕಾ ವಿಜಯದ ಸಂದರ್ಭದಲ್ಲಿ ಎಲ್ಲ ಶತ್ರುಗಳು ಅವರ ಮುಂದೆ ಸಾಲಾಗಿ ತಲೆ ತಗ್ಗಿಸಿ ನಿಂತಿದ್ದರು. ಅವರು ಮನಸ್ಸು ಮಾಡಿದ್ದರೆ ಪ್ರತೀಕಾರವಾಗಿ ಅಲ್ಲಿ ರಕ್ತದ ಕೋಡಿಯನ್ನೇ ಹರಿಸಬಹುದಿತ್ತು. ಆದರೆ ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ)ರವರು ಅವರೊಡನೆ “ನಾನು ನಿಮ್ಮೊಂದಿಗೆ ಯಾವ ರೀತಿ ವರ್ತಿಸುವೆನೆಂದು ನೀವು ನಿರೀಕ್ಷಿಸುತ್ತೀರಿ” ಎಂದು ಕೇಳುತ್ತಾರೆ. ಆಗ ಜನರೆಲ್ಲರೂ “ತಮ್ಮ ಪ್ರೀತಿ ಪಾತ್ರ ಸಹೋದರನಂತೆ ವರ್ತಿಸುವಿರೆಂದು ನಿರೀಕ್ಷಿಸುತ್ತೇವೆ” ಎಂದು ಉತ್ತರಿಸಿದರು. ಪ್ರತ್ಯುತ್ತರವಾಗಿ ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಮೇಲೆ ಇಂದು ಯಾವ ಅಪವಾದವೂ ಇಲ್ಲ. ಹೋಗಿ. ನೀವು ಸ್ವತಂತ್ರರಾಗಿರುವಿರಿ.””

ಇದು ಸಾಮಾನ್ಯ ವ್ಯಕ್ತಿಯ ಚಾರಿತ್ರ್ಯವಾಗಿರಲು ಸಾಧ್ಯವಿಲ್ಲ. ಇಂತಹ ಉನ್ನತ ಚಾರಿತ್ರ್ಯಕ್ಕೆ ಇತಿಹಾಸದಲ್ಲಿ ಯಾವುದೇ ಸಾಟಿಯಿಲ್ಲ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಜಾಗತಿಕ ಕಾನೂನುಗಳು

✍️ ಮುಷ್ತಾಕ್ ಹೆನ್ನಾಬೈಲ್ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು …