Home / ವಾರ್ತೆಗಳು / ಹಿಂಜರಿದ ಸಂಬಂಧಿಕರು: ವೃದ್ಧನ ಅಂತ್ಯಸಂಸ್ಕಾರ ನಡೆಸಿ ಸೌಹಾರ್ದ ಮೆರೆದ ಯುವಕರು

ಹಿಂಜರಿದ ಸಂಬಂಧಿಕರು: ವೃದ್ಧನ ಅಂತ್ಯಸಂಸ್ಕಾರ ನಡೆಸಿ ಸೌಹಾರ್ದ ಮೆರೆದ ಯುವಕರು

ಬೆಂಗಳೂರು, ಎ.19: ಬೆಂಗಳೂರಿನ ಆರ್.ಟಿ.ನಗರ ಸಮೀಪವಿರುವ ಚಾಮುಂಡಿ ನಗರದಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟ ವೃದ್ಧರೊಬ್ಬರ ಅಂತಿಮ ಸಂಸ್ಕಾರಕ್ಕೆ ಯುವಕರು ಹೆಗಲು ಕೊಡುವ ಮೂಲಕ ಸೌಹಾರ್ದದ ಸಂದೇಶವನ್ನು ಸಾರಿದ್ದಾರೆ.

ಮೂಲತಃ ಕೋಲ್ಕತ್ತಾ ಮೂಲದವರಾದ ವೃದ್ಧನ ಕುಟುಂಬಸ್ಥರು ಚಾಮುಂಡಿ ನಗರದಲ್ಲಿ ನೆಲೆಸಿದ್ದರು. ಆದರೆ, ಲಾಕ್‍ಡೌನ್ ಹಾಗೂ ಕೋವಿಡ್-19 ಭಯದಿಂದಾಗಿ ಮೃತರ ಸಂಬಂಧಿಕರೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿರಲಿಲ್ಲ. ಕೆಲವರಂತು ಮೃತದೇಹವನ್ನು ಮುಟ್ಟಲು ಹೆದರುತ್ತಿದ್ದರು ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ಆ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದು ಪೀಸ್ ಫಾರ್ ಹ್ಯೂಮಾನಿಟಿ ಟ್ರಸ್ಟ್ ಅಧ್ಯಕ್ಷ ಸಲೀಮ್ ಪಾಷ ಹಾಗೂ ಎ ಟು ಝೆಡ್ ಯೂಟ್ಯೂಬ್ ಸುದ್ದಿವಾಹಿನಿಯ ಮುಖ್ಯಸ್ಥ ಕನ್ನಡ ನಝೀರ್ ಹಾಗೂ ಅವರ ತಂಡದ ಸದಸ್ಯರು.

ಚಾಮುಂಡಿ ನಗರದಿಂದ ಹೆಬ್ಬಾಳದಲ್ಲಿರುವ ಚಿರಶಾಂತಿ ಧಾಮದವರೆಗೆ ಮೃತದೇಹವನ್ನು ಸಾಗಿಸಿ, ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವೃದ್ಧನ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಲೀಮ್ ಪಾಷ ಹಾಗೂ ಅವರ ಸಂಗಡಿಗರು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

“ಇಂತಹ ಸನ್ನಿವೇಶಗಳು ನಮ್ಮ ತಂಡಕ್ಕೆ ಹೊಸದೇನಲ್ಲ. ಮಾನವೀಯತೆಯನ್ನು ಎತ್ತಿಹಿಡಿಯಲು ಈ ಕಾರ್ಯಕ್ಕೆ ನಾವು ಮುಂದಾದೆವು. ಕಳೆದ ಎಂಟು ದಿನಗಳ ಹಿಂದೆ ಚಾಮುಂಡಿ ನಗರದಲ್ಲಿ ಬಡವರಿಗೆ ರೇಷನ್ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಈ ಕುಟುಂಬ ನಮಗೆ ಪರಿಚಯವಾಗಿತ್ತು. ಈ ಘಟನೆ ಸಂಭವಿಸಿರುವ ಕುರಿತು ಸ್ಥಳೀಯ ಮುಖಂಡರು ಮಾಹಿತಿ ನೀಡುತ್ತಿದ್ದಂತೆ ನಾವು ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಖಚಿತವಾಯಿತು” ಎಂದು ಸಲೀಮ್ ಪಾಷ ತಿಳಿಸಿದರು.

ಎಲ್ಲ ಧರ್ಮಗಳು ಮಾನವೀಯತೆಯನ್ನು ಬೋಧಿಸುತ್ತದೆ. ರಾಜಕೀಯ ಹಾಗೂ ಇನ್ನಿತರ ಕಾರಣಗಳಿಗಾಗಿ ಇವತ್ತು ಧರ್ಮ, ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಆದರೆ, ನಾವು ಮಾನವೀಯತೆಯ ದೃಷ್ಟಿಯಿಂದ ಈ ಕೆಲಸವನ್ನು ಮಾಡಿದ್ದೇವೆ. ದ್ವೇಷ, ಅಸೂಯೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರೀತಿ ಹಾಗೂ ಗೌರವದಿಂದ ಎಲ್ಲವನ್ನೂ ಗಳಿಸಬಹುದು ಎಂದು ಅವರು ಹೇಳಿದರು.

ಮಾನವೀಯತೆಯನ್ನು ಉಳಿಸುವ ಸಂದೇಶ

ಬೆಂಗಳೂರಿನ ಮುಸ್ಲಿಮ್ ಯುವಕರು ಬಡ ಕುಟುಂಬದ ಹಿಂದೂ ಸಹೋದರರೊಬ್ಬರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು, ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಿರುವುದು, ಇಡೀ ವಿಶ್ವ ಮಾನವೀಯತೆಗಾಗಿ ಕೈ ಜೋಡಿಸಬೇಕು ಎಂಬ ಸಂದೇಶ ಸಾರಿದ್ದಾರೆ ಎಂದು ಸಿಗ್ಮಾ ಫೌಂಡೇಷನ್ ಮುಖ್ಯಸ್ಥ ಅಮೀನ್ ಮುದಸ್ಸಿರ್ ತಿಳಿಸಿದ್ದಾರೆ.

ಕ್ರಪೆ: ವಾರ್ತಾ ಭಾರತಿ

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …