Home / ಲೇಖನಗಳು / ಸಹನೆ, ತ್ಯಾಗ, ಬಲಿದಾನದ ಸಂಕೇತ

ಸಹನೆ, ತ್ಯಾಗ, ಬಲಿದಾನದ ಸಂಕೇತ

@ ನಝೀರ್ ಅಹ್ಮದ್ ಖಾಜಿ, ವಿಜಯಪುರ

ವಿಶ್ವದ ಎಲ್ಲಾ ಧರ್ಮೀಯರಲ್ಲಿಯೂ ಹಬ್ಬಾಚಾರಣೆ ಇದೆ. ಮುಸಲ್ಮಾನರಲ್ಲಿ ಎರಡು ಹಬ್ಬಗಳಿವೆ. ಒಂದು ರಮಝಾನ್ ಮತ್ತೊಂದು ಬಕ್ರೀದ್ (ಈದುಲ್ ಅಝ್ಹಾ).

ರಮಝಾನ್ ತಿಂಗಳು ಸಂಪೂರ್ಣವಾಗಿ ಉಪವಾಸ ಆಚರಿಸಿದ ಬಳಿಕ ಮುಸ್ಲಿಮರು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಇನ್ನೊಂದು ಬಕ್ರೀದ್ ಹಬ್ಬ. ಈ ಎರಡು ಹಬ್ಬಗಳಲ್ಲಿ ಮುಸ್ಲಿಮರು ಪ್ರವಾದಿಗಳ ಮಾದರಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಓರ್ವರು ಅಂತ್ಯ ಪ್ರವಾದಿ ಮುಹ್ಮಮದ್(ಸ) ಆದರೆ ಇನ್ನೊಬ್ಬರು ಪ್ರವಾದಿ ಹ. ಇಬ್ರಾಹೀಮ್(ಅ) ಆಗಿದ್ದಾರೆ.

ಹ. ಇಬ್ರಾಹೀಮರು ಯಹೂದಿಯರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಗೌರವಿಸುವ ಓರ್ವ ಮಹಾನ್ ಪ್ರವಾದಿಯಾಗಿದ್ದರು. ದೇವನ ಮಾರ್ಗದಲ್ಲಿ ಅವರು ಅನೇಕ ರೀತಿಯ ಸತ್ವ ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಇವುಗಳ ಉಲ್ಲೇಖಗಳು ಮೂರೂ ಧರ್ಮಗಳ ಗ್ರಂಥಗಳಾದ ತೋರಾ, ಬೈಬಲ್ ಮತ್ತು ಕುರ್‌ಆನ್‌ನಲ್ಲಿ ಸಿಗುತ್ತವೆ.

ಹ. ಇಬ್ರಾಹೀಮ್(ಅ) ಅಲ್ಲಾಹನ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು. ಅವರು ಜನ್ಮ ತಾಳಿದಾಗ ಸಮಾಜ ಕೆಡುಕುಗಳಿಂದ ತುಂಬಿ ತುಳಕಾಡುತ್ತಿತ್ತು. ಅಸಾಧ್ಯವಾದುದನ್ನು ಸಾಧಿಸುವ ಛಲಗಾರ ಅವರಾಗಿದ್ದರು. ಪ್ರವಾದಿ ಇಬ್ರಾಹೀಮ್(ಅ) ರಷ್ಟು ಸತ್ವ ಪರೀಕ್ಷೆಗೆ ಒಳಗಾದ ಯಾವ ಪ್ರವಾದಿಗಳನ್ನೂ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಆ ಎಲ್ಲಾ ಪರೀಕ್ಷೆಗಳಲ್ಲಿ ಅವರು ಜಯಶಾಲಿಗಳಾದರು. ಅವರು ಜಗತ್ತಿನ ಎಲ್ಲ ಸಮುದಾಯದ ನಾಯಕರಾದರು. ಅವರ ಪತ್ನಿ, ಪುತ್ರ ಎಲ್ಲರೂ ಸತ್ವ ಪರೀಕ್ಷೆಗೆ ಸಿದ್ಧರಾದರು. ಈ ಮೂಲಕ ಸತ್ವ ಪರೀಕ್ಷೆಗಳಿಗೆ ನಾವು ಸಿದ್ಧರಾಗಬೇಕು ಎಂಬ ಸಂದೇಶವನ್ನು ನಮಗೆ ನೀಡಲಾಗಿದೆ.

ಇಬ್ರಾಹೀಮ್‌ರು(ಅ) ಏಕದೇವಾರಾಧನೆಯ ಪ್ರಬಲ ಪ್ರತಿಪಾದಕರಾಗಿದ್ದರು. ಅನೇಕ ಪರೀಕ್ಷೆಗಳಿಗೆ ಪಾತ್ರರಾದ ಇಬ್ರಾಹೀಮ್(ಅ) ಅವರಿಗೆ ಮತ್ತೊಂದು ಕಠಿಣ ಪರೀಕ್ಷೆ ಎದುರಾಗುತ್ತದೆ. ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬೇಕಾಗಿದ್ದ ಪುತ್ರ ಇಸ್ಮಾಈಲರನ್ನು ಬಲಿ ಕೊಡಬೇಕು ಎಂಬ ದೇವವಾಣಿ ಕನಸಿನ ಮೂಲಕ ಆಗುತ್ತದೆ. ಮಗನಿಗೆ ದೇವಾದೇಶದ ಕುರಿತು ಹೇಳಿದಾಗ ಅವರು ಕೂಡಾ ಪಾಲಿಸಿರಿ, ನಾನಂತೂ ಸದಾ ಸಿದ್ಧ ಎಂದು ಹೇಳುತ್ತಾರೆ. ಅವರು ಮಗನನ್ನು ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊರಳನ್ನು ಕೊಯ್ಯಲು ಸಿದ್ಧರಾಗುತ್ತಾರೆ. ಆದರೆ ಕೊರಳು ಮುರಿಯುವುದಿಲ್ಲ. ಅಲ್ಲಿ ಅಶರೀರವಾಣಿ ಮೊಳಗುತ್ತದೆ. ಇಬ್ರಾಹೀಮರೇ, ನೀವು ನಿಮಗೆ ಬಿದ್ದ ಸ್ವಪ್ನವನ್ನು ಸಾಕಾರಗೊಳಿಸಿದಿರಿ. ತಕ್ಷಣ ಟಗರು ಒಂದು ಪ್ರತ್ಯಕ್ಷವಾಗುತ್ತದೆ. ಇಬ್ರಾಹೀಮ್‌ರು(ಅ) ಚೂರಿಯಿಂದ ಅದನ್ನು ದಿಬ್ಹ ಮಾಡುತ್ತಾರೆ. ಈ ಮಹಾ ಬಲಿದಾನದ ಸಂಕೇತವಾಗಿ ಜಗತ್ತಿನ ಮುಸ್ಲಿಮರು ಬಕ್ರೀದ್ ದಿನದಂದು ಸಾಮೂಹಿಕವಾಗಿ ಬಲಿ ನೀಡುತ್ತಾರೆ. ಅದು ಹ. ಇಬ್ರಾಹೀಮ್(ಅ)ರ ಸ್ಮರಣೆಯಾಗಿದೆ. ಹೀಗೆ ಈದ್ ತ್ಯಾಗ, ಬಲಿದಾನ, ಸಹನೆಯ ಸಮ್ಮಿಲನವಾಗಿದೆ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …