Home / ಪ್ರಶ್ನೋತ್ತರ / ಮುಸ್ಲಿಮೇತರರು ಈದ್ಗಾಹ್‌ಗೆ ಬರಬಹುದೇ?

ಮುಸ್ಲಿಮೇತರರು ಈದ್ಗಾಹ್‌ಗೆ ಬರಬಹುದೇ?

ಮಸೀದಿಗಳನ್ನು ಮತ್ತು ಈದ್ಗಾಹ್ ಗಳಲ್ಲಿ ಹಬ್ಬದ ನಮಾಝ್ ವೀಕ್ಷಿಸಲು ಖುತ್ಬಾ (ಪ್ರವಚನ) ಆಲಿಸಲು ಮುಸ್ಲಿಮರಲ್ಲದವರು ಬರುವುದರ ಕುರಿತು ಇಸ್ಲಾಮಿನ ವಿಧಿಯೇನು?

ಮಸೀದಿ ಮತ್ತು ಈದ್ಗಾಹ್‌ಗಳಲ್ಲಿ ಮುಸ್ಲಿಮೇತರರು ಪ್ರವೇಶಿಸುವುದು ಅನುಮತಿಸಲಾಗಿದೆ. ಇತರ ಧರ್ಮೀಯರು ಮಸೀದಿ ಮತ್ತು ಈದ್ಗಾಹ್‌ಗೆ ಬರುವುದನ್ನು ಮತ್ತು ನಮಾಝ್ ವಿಕ್ಷಿಸುವುದು, ಖುತ್ಬಾ ಆಲಿಸುವುದನ್ನು ತಡೆಯುವ ಆಧಾರ ಪ್ರಮಾಣಗಳು ಇಲ್ಲ. ಪವಿತ್ರ ಕುರ್‌ಆನ್ ಅದನ್ನು ನಿಷೇಧಿಸಿಲ್ಲ.

ಮಕ್ಕಾದ ಮಸ್ಜಿದುಲ್ ಹರಾಮ್‌ಗೆ ಬಹುದೇವಾರಾಧಕರು ಪ್ರವೇಶಿಸಬಾರದೆಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ‘ಆದ್ದರಿಂದ ಈ ವರ್ಷದ ಬಳಿಕ ಅವರು ಮಸ್ಜಿದುಲ್ ಹರಾಮ್‌ನ ಬಳಿ ಸುಳಿಯಬೇಡಿ.’ (ಅತ್ತೌಬ: 28) ಇತರ ಮಸೀದಿಗಳಿಂದ ಮುಸ್ಲಿಮೇತರರ ಪ್ರವೇಶವನ್ನು ತಡೆದಿಲ್ಲ. ಅದು ನಿಷಿದ್ಧವೆಂದಾಗಿದ್ದರೆ ಮಸ್ಜಿದುಲ್ ಹರಾಮ್ ನೊಂದಿಗೆ ಬೇರೆಯದನ್ನೂ ಸೇರಿಸಿಕೊಳ್ಳಬಹುದಿತ್ತು. ಇದೇ ಅಧ್ಯಾಯದಲ್ಲಿ ಮಸೀದಿಯ ಪರಿಪಾಲನೆಯನ್ನು ಮುಸ್ಲಿಮರಲ್ಲದವರಿಗೆ ನೀಡಬಾರದೆಂದೂ ಅದನ್ನು ದೇವಭಯವುಳ್ಳ ಮುಸ್ಲಿಮರು ನಿರ್ವಹಿಸಬೇಕಾದುದೆಂದೂ ಹೇಳಲಾಗಿದೆ. (ಅತ್ತೌಬ: 17,18) ಇಲ್ಲಿಯೂ ಪ್ರವೇಶವನ್ನು ನಿಷೇಧಿಸಿಲ್ಲ ಪರಿಪಾಲನೆಯನ್ನು ಮಾತ್ರ ತಡೆಯಲಾಗಿದೆ.

ಪ್ರವಾದಿ(ಸ)ರ ಚರ್ಯೆಯಲ್ಲಿ ಇತರ ಧರ್ಮೀಯರಿಗೆ ಮಸೀದಿ ಪ್ರವೇಶವನ್ನು ಅನುಮತಿಸಿದ ಪ್ರಾಯೋಗಿಕ ಅನುಭವಗಳನ್ನು ಕಾಣಬಹುದು. ಪ್ರವಾದಿಯವರು(ಸ) ಮುಸ್ಲಿಮೇತರ ಗುಂಪುಗಳನ್ನು ಮಸ್ಜಿದುನ್ನಬವಿಗೆ ಸ್ವಾಗತಿಸಿದ್ದು ಮತ್ತು ಯಹೂದಿಯರು ಮತ್ತಿತರರು ಮಸೀದಿಗೆ ಬಂದದ್ದು ಉದಾಹರಣೆಯಾಗಿದೆ.

ಅನಸ್ ಇಬ್ನು ಮಾಲಿಕ್(ರ)ರು ನಿವೇದಿಸಿದ ಹದೀಸ್‌ನಲ್ಲಿ, ಅವರು ಮಸ್ಜಿದುನ್ನಬವಿಯಲ್ಲಿ ಕುಳಿತಿದ್ದಾಗ ಓರ್ವ ವ್ಯಕ್ತಿ ಮಸೀದಿಗೆ ಬಂದು ಒಂಟೆಯ ಮೊಣ ಕಾಲೂರಿಸಿ ಮುಹಮ್ಮದ್ ಯಾರು ಎಂದು ಕೇಳಿದ ಘಟನೆಯನ್ನು ವಿವರಿಸಲಾಗಿದೆ. ಆಗ ಪ್ರವಾದಿ(ಸ)ರು ಅಲ್ಲಿ ಕುಳಿತುಕೊಂಡಿದ್ದರು. (ಸಹೀಹ್ ಇಬ್ನು ಹಿಬ್ಬಾನ್, 154) ತಮ್ಮವರಾದ ವ್ಯಭಿಚಾರಿಗಳ ವಿಷಯದಲ್ಲಿ ವಿಧಿಯನ್ನು ಕೇಳುತ್ತಾ ಯಹೂದಿಯರು ಪ್ರವಾದಿಯವರನ್ನು ಮಸೀದಿಯ ಒಳಗೆ ಭೇಟಿಯಾದ ಘಟನೆ ಹದೀಸ್‌ನಲ್ಲಿದೆ.

ನಜ್ರಾನ್‌ನಿಂದ ಬಂದ ಕ್ರೈಸ್ತರು ಮಸ್ಜಿದುನ್ನಬವಿಯಲ್ಲಿ ಸಂದರ್ಶಿಸಿದ ಉದಾಹರಣೆ ಪ್ರಸಿದ್ಧವಾಗಿದೆ. ಶಾಫಿಈ, ಹನಫಿ, ಹಂಬಲಿ ಕರ್ಮಶಾಸ್ತ್ರದಲ್ಲಿ ಮುಸ್ಲಿಮೇತರರ ಮಸೀದಿ ಪ್ರವೇಶ ಅನುಮತಿಸಲಾಗಿದೆ. ಹನಫಿ ಕರ್ಮಶಾಸ್ತ್ರ ಬೇಷರತ್ತಾಗಿ ಮಸೀದಿಗೆ ಪ್ರವೇಶ ಅನುಮತಿಸುತ್ತದೆ. ಮುಸ್ಲಿಮರ ಅನುಮತಿಯೊಂದಿಗೆ ಪ್ರವೇಶಿಸಬೇಕೆಂದು ಹಂಬಲಿಗಳ ನಿಲುವು. ಶಾಫಿಈ ಮದ್‌ಹಬ್‌ನಲ್ಲಿ ಒಂದು ವಿಭಾಗ ಅನುಮತಿಸುತ್ತದೆ. ಮಾಲಿಕೀ ಮದ್‌ಹಬ್ ಮತ್ತು ಶಾಫಿಈ ಮದ್‌ಹಬ್‌ನಲ್ಲಿ ಒಂದು ವಿಭಾಗ ಅನುಮತಿಯಿಲ್ಲ ಎಂದು ಅಭಿಪ್ರಾಯವಿರುವವರು. ಇಮಾಮ್ ಅಬೂಬಕರ್ ಜಝ್ಝಾಝ್, ಇಮಾಮ್ ಸರ್ಖಶಿ ಇಬ್ನು ನುಜೈಮ್, ಮುಸ್ವಿಲಿ ಮೊದಲಾದ ಹನಫೀ ವಿದ್ವಾಂಸರು ತಮ್ಮ ಕೃತಿಗಳಲ್ಲಿ ಇದಕ್ಕೆ ಆಧಾರ ಪ್ರಮಾಣಗಳನ್ನು ನೀಡಿರುವರು.

ಮುಸ್ಲಿಮರ ಅನುಮತಿಯಿಂದ ಇತರ ಧರ್ಮೀಯರಿಗೆ ಮಸೀದಿಯಲ್ಲಿ ಪ್ರವೇಶಿಸಬಹುದೆಂದು, ಕುರ್‌ಆನಿನ ಶಿಕ್ಷಣವನ್ನು ಆಲಿಸಬಹುದೆಂದು ಶಾಫಿಈ ಮದ್‌ಹಬ್‌ನ ಪ್ರಮುಖ ವಿದ್ವಾಂಸ ಇಮಾಮ್ ನವವಿ ಬರೆದಿರುವರು. (ಕೌಲತುತ್ವಾಲಿಬೀನ್ 1/403) ಪ್ರಸಿದ್ಧ ಶಾಫಿಈ ವಿದ್ವಾಂಸರಾದ ರಮ್ಲಿ, ಶರ್ವಾನಿ, ಗರ್ಬೀನಿ, ಜುವೈನಿ ಮೊದಲಾದವರು ಇದೇ ನಿಲುವನ್ನು ಹೊಂದಿರುವರು.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …