Home / ಲೇಖನಗಳು / ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಪವಿತ್ರ ಕುರ್ ಆನಿನ ಪ್ರಶ್ನೆ

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಪವಿತ್ರ ಕುರ್ ಆನಿನ ಪ್ರಶ್ನೆ

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ?” ಪವಿತ್ರ ಕುರ್ ಆನ್ 56: 58-59)

ಈ ಸಂಕ್ಷಿಪ್ತ ನುಡಿಗಳಲ್ಲಿ ಒಂದು ಪ್ರಮುಖ ಪ್ರಶ್ನೆಯನ್ನು ಮಾನವನ ಮುಂದಿರಿಸಲಾಗಿದೆ. ಈ ಜಗತ್ತಿನ ಇತರೆಲ್ಲ ವಿಷಯಗಳನ್ನು ಬದಿಗಿರಿಸಿ ಮಾನವನು ತನ್ನನ್ನು ಹೇಗೆ ಸೃಷ್ಟಿಸಲಾಗಿದೆಯೆಂದು ಕೇವಲ ಸ್ವಂತದ ಬಗ್ಗೆ ಆಲೋಚಿಸಿ ನೋಡಲಿ. ಹಾಗಾದರೆ ಆತನಲ್ಲಿ ಕು‌ರ್ ಆನಿನ ಮೂಲ ಶಿಕ್ಷಣವಾಗಿರುವ ಏಕದೇವತ್ವ ಮತ್ತು ಪರಲೋಕದ ಕುರಿತು ಕಿಂಚಿತ್ತೂ ಸಂಶಯ ಉಳಿಯಲಾರದು.

ಪುರುಷನು ತನ್ನ ವೀರ್ಯವನ್ನು ಸ್ತ್ರೀಯ ಗರ್ಭಕ್ಕೆ ತಲುಪಿಸುವ ಮೂಲಕ ಮಾನವನ ಜನನವಾಗುತ್ತದೆ. ಆದರೆ ಆ ವೀರ್ಯದಲ್ಲಿ ಮಗು ಜನಿಸುವ ಮತ್ತು ಅದರಲ್ಲಿಯೂ ಮಾನವ ಮಗುವನ್ನೇ ಹುಟ್ಟಿಸುವ ಸಾಮರ್ಥ್ಯವು ಸ್ವಯಂ ಬೆಳೆಯಿತೇ? ಅಥವಾ ಮಾನವನೇ ಅದನ್ನು ಬೆಳೆಸಿದನೇ? ಅಥವಾ ಅಲ್ಲಾಹನ ಹೊರತು ಬೇರೆ ಯಾರಾದರೂ ಬೆಳೆಸಿದರೇ? ಅಥವಾ ಆ ವೀರ್ಯದಿಂದ ಗರ್ಭಧಾರಣೆ ಮಾಡಿಸುವ ಸಾಮರ್ಥ್ಯವು ಪುರುಷ ಮತ್ತು ಸ್ತ್ರೀಗೆ ಅಥವಾ ಜಗತ್ತಿನ ಬೇರೆ ಯಾವುದಾದರೂ ಶಕ್ತಿಗಿದೆಯೇ?

ಗರ್ಭಧಾರಣೆಯ ಬಳಿಕ ಹೆರಿಗೆಯವರೆಗೆ ತಾಯಿಯ ಗರ್ಭದಲ್ಲಿ ಹಂತ ಹಂತವಾಗಿ ಮಗುವಿನ ಬೆಳವಣಿಗೆ ಮತ್ತು ಪೋಷಣೆ, ಪ್ರತಿಯೊಂದು ಮಗುವಿನ ಪ್ರತ್ಯೇಕ ರೂಪ, ಪ್ರತಿಯೊಂದು ಮಗುವಿನ ಅಂತರಂಗದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ವಿವಿಧ ಶಾರೀರಿಕ-ಮಾನಸಿಕ ಪ್ರತಿಭೆಗಳನ್ನು ಇರಿಸಿ, ಅದೊಂದು ವಿಶಿಷ್ಟ ವ್ಯಕ್ತಿತ್ವದ ಮಾನವನನ್ನಾಗಿ ಬೆಳೆಯುವುದು ಇತ್ಯಾದಿ ಪ್ರಕ್ರಿಯೆಗಳು ಏಕದೇವನ ಹೊರತು ಅನ್ಯರ ಕೆಲಸವೇ? ಇದರಲ್ಲಿ ಇತರರ ಕಿಂಚಿತ್ತಾದರೂ ಪಾತ್ರವಿದೆಯೇ? ಈ ಕಾರ್ಯವನ್ನು ಸ್ವತಃ ತಂದೆ ತಾಯಿಗಳು ಮಾಡುತ್ತಾರೆಯೇ? ಯಾರಾದರೂ ವೈದ್ಯರು ಮಾಡುತ್ತಾರೆಯೇ? ಅಥವಾ ಅದೇ ರೀತಿಯಲ್ಲಿ ಹುಟ್ಟಿರುವ ಪ್ರವಾದಿಗಳು ಅಥವಾ ಔಲಿಯಾಗಳು ಮಾಡುತ್ತಾರೆಯೇ? ಅಥವಾ ಸ್ವತಃ ಒಂದು ನಿರ್ದಿಷ್ಟ ನಿಯಮಕ್ಕೆ ಬದ್ಧವಾಗಿರುವ ಸೂರ್ಯ, ಚಂದ್ರ, ನಕ್ಷತ್ರಾದಿಗಳು ಮಾಡುತ್ತವೆಯೇ? ಅಥವಾ ಸ್ವತಃ ಯಾವುದೇ ಜ್ಞಾನ, ಯುಕ್ತಿ, ಇಚ್ಛೆ ಅಧಿಕಾರವಿಲ್ಲದ ನಿಸರ್ಗ (Nature) ಮಾಡುತ್ತಿದೆಯೇ?

ಹಾಗೆಯೇ ಮಗು ಗಂಡಾಗಬೇಕೇ, ಹೆಣ್ಣಾಗಬೇಕೇ, ಸುಂದರವಾಗಬೇಕೇ, ಕುರೂಪವಾಗಬೇಕೇ, ಬಲಾಢ್ಯವಾಗಬೇಕೇ, ದುರ್ಬಲವಾಗಬೇಕೇ, ಕುರುಡ, ಕುಂಟ, ಕಿವುಡನಾಗಬೇಕೇ, ಬುದ್ಧಿಶಾಲಿಯಾಗಬೇಕೇ, ಮಂದಬುದ್ಧಿಯಾಗಬೇಕೇ? ಇತ್ಯಾದಿಗಳನ್ನು ಅಲ್ಲಾಹನ ಹೊರತು ಬೇರೆ ಯಾರಾದರೂ ನಿರ್ಣಯಿಸುತ್ತಾರೆಯೇ? ಹಾಗೆಯೇ ಸಮುದಾಯಗಳ ಇತಿಹಾಸದಲ್ಲಿ ಯಾವಾಗ ಯಾವ ಸಮುದಾಯದಲ್ಲಿ ಆ ಸಮುದಾಯವನ್ನು ಪ್ರಗತಿಯ ಉತ್ತುಂಗಕ್ಕೇರಿಸುವ ಅಥವಾ ಅಧಃಪತನದ ಪಾತಾಳಕ್ಕೆ ದೂಡುವ ಯಾವೆಲ್ಲ ಸದ್ಗುಣ ಅಥವಾ ದುರ್ಗುಣಗಳಿರುವ ಜನರನ್ನು ಸೃಷ್ಟಿಸಬೇಕೆಂದು ಅಲ್ಲಾಹನ ಹೊರತು ಬೇರೆ ಯಾರಾದರೂ ನಿರ್ಧರಿಸುತ್ತಾರೆಯೇ?

ಹಠ ಮತ್ತು ಪಕ್ಷಪಾತವನ್ನು ತೊರೆದು ಸ್ವಂತ ಬುದ್ದಿಶಕ್ತಿಯನ್ನು ಉಪಯೋಗಿಸಿ ಆಲೋಚಿಸುವ ಯಾವನೇ ವ್ಯಕ್ತಿಗೆ ಬಹುದೇವ ಅಥವಾ ನಾಸ್ತಿಕವಾದದ ಆಧಾರದಲ್ಲಿ ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವೆಂದು ವ್ಯಕ್ತವಾದೀತು. ಅದರ ಏಕೈಕ, ಸಮರ್ಪಕ ಉತ್ತರ ಹೀಗಿದೆ: ಮಾನವನು ಆಮೂಲಾಗ್ರವಾಗಿ ದೇವನಿರ್ಮಿತ ಮತ್ತು ದೇವಪೋಷಿತನಾಗಿದ್ದಾನೆ. ವಾಸ್ತವಿಕತೆ ಹೀಗಿರುವಾಗ ದೇವನಿಂದ ನಿರ್ಮಿಸಿ ಪೋಷಿಸಲ್ಪಡುತ್ತಿರುವ ಮಾನವನಿಗೆ ಆ ಸೃಷ್ಟಿಕರ್ತನ ವಿರುದ್ಧವಾಗಿ ನಾನೇ ಸರ್ವತಂತ್ರ ಸ್ವತಂತ್ರನೆಂದು ವಾದಿಸುವ ಅಥವಾ ಅವನ ಹೊರತು ಇತರರ ದಾಸ್ಯತನ ಸ್ವೀಕರಿಸುವ ಹಕ್ಕು ಎಲ್ಲಿಂದ ಬಂತು?

ತೌಹೀದ್‌ (ಏಕದೇವತ್ವ) ನಂತೆಯೇ ಪರಲೋಕದ ವಿಷಯದಲ್ಲಿಯೂ ಪ್ರಶ್ನೆಯು ನಿರ್ಣಾಯಕವಾಗಿದೆ. ಅತಿ ಪ್ರಬಲ ದೂರದರ್ಶಕದಿಂದ ಮಾತ್ರ ನೋಡಬಹುದಾದ ಜೀವಾಣುವಿನಿಂದ ಮಾನವನ ಸೃಷ್ಟಿಯಾಗಿದೆ. ಈ ವೀರ್ಯಾಣುವು ಸ್ತ್ರೀ ದೇಹದ ಅಂಧಕಾರದಲ್ಲಿ ಯಾವುದೋ ವೇಳೆಯಲ್ಲಿ ಅಷ್ಟೇ ಕುಲ್ಲಕ ಮತ್ತು ಸೂಕ್ಷ್ಮದರ್ಶಕದಿಂದ ಮಾತ್ರ ನೋಡಬಹುದಾದ ಸ್ತ್ರೀ ಅಂಡಾಣುವಿನೊಂದಿಗೆ ಸೇರುತ್ತದೆ. ಆ ಬಳಿಕ ಅವುಗಳ ಸಂಯೋಗದಿಂದ ಮಾನವ ಜನ್ಮದ ಮೂಲ ಬಿಂದುವಾಗಿರುವ ಒಂದು ಅತಿಸಣ್ಣ ಜೀವಕೋಶವಾಗು(Cell)ತ್ತದೆ. ಈ ಕೋಶವು ಪ್ರಬಲ ಸೂಕ್ಷ್ಮದರ್ಶಕವಿಲ್ಲದ ಕಾಣಿಸದಷ್ಟು ತುಚ್ಚವಾಗಿರುವುದು, ಅಲ್ಲಾಹನು ಈ ಮರಿಕೋಶವನ್ನು 9 ತಿಂಗಳು ಮತ್ತು ಕೆಲವು ವಾರ ಬೆಳೆಸಿ ತಾಯಿಯ ಗರ್ಭದಲ್ಲಿ ಒಂದು ಜೀವಂತ ಮಾನವನನ್ನು ರಚಿಸುತ್ತಾನೆ. ಈ ಸೃಷ್ಟಿ ಪ್ರಕ್ರಿಯೆಯು ಪೂರ್ಣವಾದಾಗ ತಾಯಿಯ ದೇಹವು ಸ್ವತಃ ಅದನ್ನು ಈ ಲೋಕದಲ್ಲಿ ಗದ್ದಲವೆಬ್ಬಿಸಲಿಕ್ಕಾಗಿ ಹೊರಹಾಕುತ್ತದೆ. ಹೀಗೆಯೇ ಎಲ್ಲ ಮಾನವರೂ ಈ ಲೋಕಕ್ಕೆ ಬರುತ್ತಾರೆ. ನಮ್ಮಂಥ ಮಾನವರು ಹುಟ್ಟುತ್ತಿರುವುದನ್ನು ಅವರು ದಿನನಿತ್ಯ ನೋಡುತ್ತಾರೆ. ಆದರೂ ಇಂದು ಈ ರೀತಿ ಮಾನವನನ್ನು ಸೃಷ್ಟಿಸುತ್ತಿರುವ ದೇವನಿಗೆ ಬೇರೊಂದು ಸಂದರ್ಭದಲ್ಲಿ ತನ್ನ ಸೃಷ್ಟಿಯಾಗಿರುವ ಮಾನವನನ್ನು ಬೇರೊಂದು ರೀತಿಯಲ್ಲಿ ಪುನಃ ಸೃಷ್ಟಿಸಲು ಸಾಧ್ಯವಿಲ್ಲವೆಂದು ಅವಿವೇಕಿಗಳು ಮಾತ್ರ ವಾದಿಸಬಲ್ಲರು.

SHARE THIS POST VIA

About editor

Check Also

ಏಕತೆಯ ಸಂದೇಶ ಸಾರುವ ಹಜ್ಜ್

ಇದು ಇಸ್ಲಾಮಿನ ಐದು ಮೂಲಭೂತ ಕಡ್ಡಾಯ ಕರ್ಮಗಳಲ್ಲಿ ಕೊನೆಯದಾಗಿರುವ ಹಜ್ ಕರ್ಮ ಎಂಬ ಮುಸ್ಲಿಮರ ಪವಿತ್ರ ಯಾತ್ರೆ. ಇದು ವಿಶ್ವದಾದ್ಯಂತದ …