Home / ಲೇಖನಗಳು / ಇಸ್ಲಾಮ್: ಸ್ವಚ್ಛತೆಯ ಪಾಠಗಳು

ಇಸ್ಲಾಮ್: ಸ್ವಚ್ಛತೆಯ ಪಾಠಗಳು

@ ಎ.ಪಿ. ಶಂಶೀರ್

2018ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಪಾನ್ ಮತ್ತು ಬೆಲ್ಜಿಯಂನ ನಡುವೆ ನಡೆದ ಪಂದ್ಯವು ಬಹಳ ಜಿದ್ದಾಜಿದ್ದಿನಿಂದ ಕೂಡಿತ್ತು. ಆ ವಿಶ್ವಕಪ್‍ನ ಅತ್ಯಂತ ಫೇವರಿಟ್ ತಂಡವೆಂದು ಹೇಳಲಾಗಿದ್ದ ಬೆಲ್ಜಿಯಂನ ವಿರುದ್ಧ ಕೊನೆಯ ನಿಮಿಷದವರೆಗೂ ಹೋರಾಡಿ 3-2 ಎಂಬ ಸ್ವಲ್ಪ ವ್ಯತ್ಯಾಸದೊಂದಿಗೆ ಜಪಾನ್ ಸೋಲೊಪ್ಪಿಕೊಂಡಿತ್ತು. ಆದರೆ ಈ ಎಲ್ಲಾ ವಿಷಯಗಳಿಂದ ಆ ಪಂದ್ಯವು ಚರಿತ್ರೆಯಲ್ಲಿ ಸ್ಮರಣೀಯವಾದದ್ದಲ್ಲ. ತಮ್ಮ ಪ್ರೀತಿಯ ತಂಡ ಹೋರಾಡಿ ಸೋತರೂ, ಅದರ ನೋವನ್ನು ತೋರ್ಪಡಿಸದೆ ಪಂದ್ಯದ ಬಳಿಕ ಜಪಾನ್‍ನ ಫುಟ್ಬಾಲ್ ಪ್ರೇಮಿಗಳೆಲ್ಲರೂ ಸೇರಿ ಕ್ರೀಡಾಂಗಣದ ಮೂಲೆ ಮೂಲೆಗಳಲ್ಲಿ ಪ್ರೇಕ್ಷಕರು ಬಿಟ್ಟು ಹೋದ ವಸ್ತುಗಳು, ಕಸ, ಮಾಲಿನ್ಯಗಳನ್ನು ಸ್ವಚ್ಛಗೊಳಿಸುವ ದೃಶ್ಯವು ವಿಶ್ವದ ಜನರ ಹೃದಯವನ್ನು ಗೆದ್ದಿತು. ಸ್ಟೇಡಿಯಂನ ಒಳ ಹೊರಗನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅದನ್ನು ಸಂಘಟಕರಿಗೆ ಒಪ್ಪಿಸಿಯೇ ಅವರು ಮರಳಿದರು.

ಜಪಾನೀಯರ ಈ ಒಂದು ನಡವಳಿಕೆಯು ಅವರ ದೇಶಕ್ಕೂ ಹಾಗೂ ಅಲ್ಲಿನ ಜನತೆಗೂ ದೊರೆಕಿಸಿಕೊಟ್ಟ ಘನತೆ, ಅಭಿಮಾನ ಸಣ್ಣದಲ್ಲ. ವಿಶೇಷವಾಗಿ ತಮ್ಮ ತಂಡವು ಸೋತಾಗ ಕೋಪದಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ನಾಶಮಾಡಿ, ಎಲ್ಲೆಡೆಯೂ ಬಿಸಾಡಿ ದಾರಿಗಳನ್ನು ಮಲಿನಗೊಳಿಸಿ ಮಾತ್ರ ಅಭ್ಯಾಸವಿರುವವರಿಗೆ ಇದೊಂದು ಹೊಸ ದೃಶ್ಯವಾಗಿದೆ. ಪಂದ್ಯದಲ್ಲಿ ಸೋತರೂ ತಮ್ಮ ಉದಾತ್ತವಾದ ಸ್ವಚ್ಛತಾ ಪ್ರಜ್ಞೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಲು ಅವರು ಮಾಡಿದ ತ್ಯಾಗ ಮನೋಭಾವದಿಂದ ಅವರು ಜನಮನವನ್ನು ಗೆದ್ದರು. ತಮ್ಮ ಪರಿಸರ ಹಾಗೂ ಸ್ವಚ್ಛತಾ ಪ್ರೇಮವನ್ನು ಬಹಿರಂಗ ಪಡಿಸುವುದರೊಂದಿಗೆ ಜನತೆಗೆ ಅವರ ಕರ್ತವ್ಯವನ್ನು ನೆನಪಿಸಿಕೊಡಲು ಆ ಜಪಾನಿಗರಿಗೆ ಸಾಧ್ಯವಾಯಿತು.

ನಿಜವಾಗಿ ತಮ್ಮ ಮೂಲಭೂತ ವಿಶ್ವಾಸಗಳಿಂದಲೂ, ಧರ್ಮವು ನೀಡುವ ನಿರಂತರ ಪಾಠಗಳಿಂದಲೂ ಮುಸ್ಲಿಮ್ ಸಮುದಾಯವು ನಿಂತುಕೊಳ್ಳಬೇಕಾದ ಸ್ಥಾನವದು. ಉತ್ತಮ ಸಮುದಾಯಕ್ಕೆ ಕಾಲಹರಣ ಸಂಭವಿಸುವ ಇಂತಹ ಉತ್ತಮ ಮೌಲ್ಯಗಳು ಇತರರಿಂದ ನಮ್ಮ ಮುಂದೆ ಬಹಿರಂಗವಾಗುವಾಗ ಅದರ ಕುರಿತು ಪುನರ್ ಚಿಂತನೆಗೆ ಅವಕಾಶ ದೊರೆಯುತ್ತದೆ.

`ಇಮಾತತುಲ್ ಅದಾ ಅನಿತ್ತರೀಖ್’ ಎಂಬುದು ಇಸ್ಲಾಮ್‍ನ ಸುಪ್ರದಾನವಾದ ಹಲವು ಸಾಂಕೇತಿಕ ಪದಗಳೊಂದಿಗೆ ಸೇರಿಸಬೇಕಾದ ಪದಗಳು. `ದಾರಿಯಿಂದ ಉಪದ್ರವವನ್ನು ನೀಗಿಸುವುದು’ ಎಂಬ ಸರಳ ಅರ್ಥದೊಂದಿಗೆ ಅದು ಬಹಳ ಆಳವೂ ಗಂಭೀರವೂ ಆದ ಸಂದೇಶವನ್ನು ನೀಡುತ್ತದೆ. ಇಸ್ಲಾಮೀ ನಾಗರಿಕತೆಯಲ್ಲಿ ಸ್ವಚ್ಛತೆಯ ಅರಿವನ್ನು ಇದು ಸಾದರಪಡಿಸುತ್ತದೆ.

ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ಭೂಮಿಯಲ್ಲಿ ನಮಗೆ ಉಳಿಯುವ ಅರ್ಹತೆಯನ್ನು ಸೂಚಿಸುತ್ತದೆ. ದಾರಿಯಿಂದ ಹಾಗೂ ಪರಿಸರಗಳಿಂದ ಮನುಷ್ಯರಿಗೂ ಜೀವಜಾಲಗಳಿಗೂ ತೊಂದರೆ ನೀಡದಿರುವುದು, ನಮ್ಮ ವಾಯು ಮಂಡಲವನ್ನು ಮಲಿನಗೊಳಿಸದಿರುವುದು ಇಸ್ಲಾಮೀ ಶಿಷ್ಟಾಚಾರವಾಗಿದೆ. ವಿಶ್ವಾಸದ ಭಾಗವೂ ಹೌದು. ಈ ಭೂಮಿಯನ್ನು ಎಲ್ಲಾ ಮನುಷ್ಯರಿಗೂ, ಜೀವಜಾಲಗಳಿಗೂ ಆರೋಗ್ಯವಂತರಾಗಿ ಬಾಳಲು ಯೋಗ್ಯವಾಗಿ ಉಳಿಸುವುದು ಮತ್ತು ಬರುವ ತಲೆಮಾರುಗಳಿಗೆ ಅದೇ ರೀತಿಯಲ್ಲಿ ಒಪ್ಪಿಸುವುದು ಓರ್ವ ಪ್ರಜೆಯೆಂಬ ಕಾರಣಕ್ಕೆ ಅದಕ್ಕಿಂತಲೂ ಹೆಚ್ಚಾಗಿ `ಸತ್ಯವಿಶ್ವಾಸಿ’ ಎಂಬ ಕಾರಣಕ್ಕೆ ನಮ್ಮ ಕರ್ತವ್ಯವಾಗಿದೆ.

ಪ್ರಜೆ ಎಂಬುವುದಕ್ಕಿಂತ ವಿಶ್ವಾಸಿಯೆಂಬ ಪ್ರಜ್ಞೆಯೇ ಇಲ್ಲಿ ಮುಂದೆ ಸಾಗಲು ಪ್ರೇರಕವಾಗುತ್ತದೆ. ಪ್ರಜೆಯು ಯಾವಾಗಲೂ ಸರಕಾರವು ರೂಪಿಸುವ ಕಾನೂನುಗಳ ಚೌಕಟ್ಟಿನಲ್ಲೇ ವಿಷಯವನ್ನು ನೋಡುತ್ತಾರೆ. ಅಲ್ಲಿ ದೇಶದ ಗಡಿಗಳಲ್ಲಿ, ದೃಷ್ಟಿಕೋನದಲ್ಲಿ ವೈವಿಧ್ಯತೆಯಿರುತ್ತದೆ. ಆದರೆ ಸತ್ಯವಿಶ್ವಾಸಿಯ ಮೂಲ ಸಂಕಲ್ಪಗಳು ಆ ರೀತಿಯಲ್ಲ. ಆತ ವಿಶ್ವದ ಯಾವ ಮೂಲೆಗೆ ತಲುಪಿದರೂ ಇಸ್ಲಾಮ್‍ನ ಉದಾತ್ತವಾದ ಸಂಸ್ಕಾರ ಅಲ್ಲಿ ಪ್ರತಿಫಲಿಸುತ್ತದೆ. ಗುಣ, ಸ್ವಭಾವ, ವರ್ತನೆಗಳಲ್ಲಿ ಮಾತ್ರವಲ್ಲ ಸ್ವಚ್ಛತೆ, ಪರಿಸರದ ಕಾಳಜಿಯಲ್ಲೂ ಇತರರಿಗಿಂತ ಭಿನ್ನವಾಗಿರುತ್ತಾನೆ. ಯಾವ ದೇಶಕ್ಕೆ ಹೋದರೂ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಲಾರ. ಸಾರ್ವಜನಿಕರು ನಡೆದಾಡುವ ದಾರಿಯಲ್ಲಿ ಉಗುಳಲಾರ. ಕಾರಣವೇನೆಂದರೆ `ಲಾ ಲರಾರ ವಲಾ ಅರಾರ’ ಸ್ವಂತಕ್ಕೂ ಇತರರಿಗೂ ಸತ್ಯವಿಶ್ವಾಸಿ ದ್ರೋಹ ಮಾಡಲಾರ ಎಂಬ ಪ್ರವಾದಿ ವಚನವು ಅವನಿಗೆ ಪ್ರೇರಕವಾಗಿರುತ್ತದೆ. ಅಸಂಖ್ಯಾತ ಸಣ್ಣ ಸಣ್ಣ ಪ್ರವಾದಿ ವಚನಗಳಿಂದ ಶುಚಿತ್ವ ಮತ್ತು ಪರಿಸರದ ಕುರಿತು ತಿಳಿಯಲು ಸಾಧ್ಯವಿದೆ. `ಶುದ್ದಿಯು ಸತ್ಯವಿಶ್ವಾಸದ ಅರ್ಧಾಂಶವಾಗಿದೆ’ ಎಂಬುದು ಸುಪರಿಚಿತವಾದ ಪ್ರವಾದಿ ವಚನವಾಗಿದೆ.

ಕಟ್ಟಿ ನಿಂತಿರುವ ನೀರಿನಲ್ಲಿ ಮೂತ್ರ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಥಮಿಕ ಕರ್ಮಗಳನ್ನು ನೆರವೇರಿಸಿ ಮಲಿನಗೊಳಿಸಬಾರದು. ದಾರಿಯಿಂದ ಮುಳ್ಳನ್ನು ತೆಗೆದು ಅಡೆತಡೆ ನಿವಾರಿಸುವುದು ವಿಶ್ವಾಸದ ಭಾಗವಾಗಿದೆ ಮೊದಲಾದ ಪ್ರವಾದಿ ವಚನಗಳೆಲ್ಲವೂ ಇಸ್ಲಾಮ್‍ನ ಸ್ವಚ್ಛತೆಯ ಕುರಿತ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಹಮಾಂ: ಇಸ್ಲಾಮೀ ನಾಗರಿಕತೆಯ ಉಜ್ವಲ ಹೆಗ್ಗುರುತು

ಪ್ರಸಿದ್ಧ ಬರಹಗಾರ ಅಲೀ ಅಝ್ಝಾಲಿ ಖಿರಾಆತುನ್ ಫಿಲ್ ಫಿಕ್ರಿಲ್ ಮಿಅಮಾರಿ ವಲಾ ಇಮ್ರಾನಿಲ್ ಅರಬಿ ವಲ್ ಇಸ್ಲಾಮ್ ಎಂಬ ಕೃತಿಯಲ್ಲಿ ಅರಬ್ ಇಸ್ಲಾಮೀ ನಾಗರಿಕತೆಯ ವಾಸ್ತುಶಿಲ್ಪ ಕಲೆಯ ಕುರಿತು, ಕಟ್ಟಡ ನಿರ್ಮಾಣ ರೀತಿಗಳ ವೈವಿಧ್ಯಗಳ ಕುರಿತು ಚರಿತ್ರೆಯ ಆಧಾರದಲ್ಲಿ ವಿವರಿಸಿದ್ದಾರೆ. ಇಸ್ಲಾಮೀ ಚರಿತ್ರೆಯ ಆರಂಭ ಕಾಲದಲ್ಲಿ ವಿಶೇಷವಾಗಿ ರೋಮನ್ನು ವಶಪಡಿಸಿದ ಬಳಿಕ ದೊಡ್ಡ ಮಸೀದಿಗಳನ್ನು ನಿರ್ಮಿಸಲು ನೀಡುತ್ತಿದ್ದ ಪ್ರಾಶಸ್ತ್ಯದಂತೆಯೇ ಆಡಳಿತಗಾರರು ವಿಶಾಲವಾದ ಸೌಕರ್ಯಗಳಿಂದ ಕೂಡಿದ ಧಾರಾಳ ಸ್ವಚ್ಛತಾ ಕೋಣೆಗಳುಳ್ಳ ಕಟ್ಟಡಗಳನ್ನು (ಹಮ್ಮಾಮಾತ್) ನಿರ್ಮಿಸಿದ್ದರೆಂದು ಅವರು ಬರೆದಿದ್ದಾರೆ.

ಅಮ್ರ್ ಇಬ್ನುಲ್ ಆಸ್ ಈಜಿಪ್ಟ್ ನ ರಾಜ್ಯಪಾಲರಾಗಿರುವಾಗ ಪ್ರಸ್ತಾತ್ ನಗರದಲ್ಲಿ ಮೊದಲು ಹಮ್ಮಾಮನ್ನು ಕಟ್ಟಿಸಿದರೆಂದು ದಾಖಲೆಯಿದೆ. ಕೇವಲ ಸ್ನಾನ ಗೃಹಗಳು ಎಂಬುದರ ಬದಲಾಗಿ, ಬಟ್ಟೆ ಒಗೆಯಲು, ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಉಪಯೋಗಿಸಲಾಯಿತು. ಅಬ್ಬಾಸಿಯಾ ಆಡಳಿತಗಾರರಾಗಿದ್ದ ಮಅಮೂನ್‍ರ ಕಾಲದಲ್ಲಿ ದೊಡ್ಡ ನಗರಗಳಲ್ಲೂ ಸಣ್ಣ ಪಟ್ಟಣ, ಗ್ರಾಮಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಹಮ್ಮಾಮನ್ನು ನಿರ್ಮಿಸಲಾಗಿತ್ತೆಂದು ಇತಿಹಾಸಕಾರ ಇಬ್ನು ಖಲ್‍ದುನ್ ವಿವರಿಸುತ್ತಾರೆ. ಅರಬ್ ಇಸ್ಲಾಮೀ ಭೂಮಿಯನ್ನು ಸಂದರ್ಶಿಸಿದ ಸಂಚಾರಿ ಇಬ್ನು ಬತೂತರು ಕೂಡಾ ಇದನ್ನು ದಾಖಲಿಸಿದ್ದಾರೆ. ಅವು ಶಿಲ್ಪ ಚತುರತೆಯಿಂದಲೂ ನಿರ್ಮಾಣದ ನೈಪುಣ್ಯತೆಯಿಂದಲೂ ಯಾತ್ರಿಕರ ಗಮನ ಸೆಳೆಯುತ್ತಿತ್ತು.

ಇಸ್ಲಾಮೀ ನಾಗರಿಕ ಚರಿತ್ರೆಯಲ್ಲಿ ಸ್ವಚ್ಛತೆ ಹಾಗೂ ಪರಿಸರ ಜಾಗೃತಿಯ ಗೋಪುರಗಳಾಗಿ ಸ್ಥಾನ ಪಡೆದಿದೆ. ಮುಸ್ಲಿಮ್ ಸ್ಪೈನ್‍ನ ಮೂಲಕ ನಂತರ ಈ ಶುಚಿತ್ವದ ಪ್ರಜ್ಞೆಯು ಯುರೋಪನ್ನು ತಲುಪಿತು. ಅನಂತರ ಅದರಲ್ಲಿ ಬಹಳ ಬದಲಾವಣೆಗಳುಂಟಾದುವು. ಇಸ್ಲಾಮೀ ನಾಗರಿಕತೆಯು ನೀಡಿದ ಈ ಪ್ರಜ್ಞೆಯನ್ನು ಬಹಳ ಉತ್ಸಾಹದೊಂದಿಗೆ ಇತರ ನಾಗರಿಕತೆಗಳು ಅಳವಡಿಸಿಕೊಂಡು ಪ್ರಯೋಜನ ಪಡೆದುದನ್ನು ನಾವು ನಂತರ ಕಂಡೆವು.

ಶುಚಿತ್ವ ಮತ್ತು ಸೌಂದರ್ಯದ ಧರ್ಮ

ಬೆಳಿಗ್ಗೆ ಎಚ್ಚರವಾದೊಡನೆ ಓರ್ವ ವಿಶ್ವಾಸಿಯ ಶುಚಿತ್ವದ ಪ್ರಜ್ಞೆಯು ಜಾಗೃತವಾಗುತ್ತದೆ. ಹಾಸಿಗೆಯಲ್ಲಿ ಮಲಗುವ ವಿಶ್ವಾಸಿಯು ಕೆಲವು ಸಿದ್ಧತೆಯೊಂದಿಗೆ ತೆರಳುತ್ತಾನೆ. ಅಂಗಶುದ್ಧಿ (ವುಝೂ) ಮಾಡಿ ಕುರ್‍ಆನ್‍ನ ನಿಶ್ಚಿತ ಅಧ್ಯಾಯಗಳನ್ನು ಪಾರಾಯಣ ಮಾಡಿ ಪ್ರವಾದಿಗಳು ಕಲಿಸಿದ ಪ್ರಾರ್ಥನೆಗಳನ್ನು ಹೇಳಿ ಧ್ಯಾನ ನಿರ್ಭರವಾದ ಮನಸ್ಸಿನಿಂದ ನಿದ್ರೆ ಹೋಗುತ್ತಾನೆ. ನಿದ್ದೆಯಿಂದ ಏಳುವಾಗಲೂ ಪ್ರಾರ್ಥನೆಯೊಂದಿಗೆ ಏಳುತ್ತಾನೆ. ಮರಣದ ಬಳಿಕ ಜೀವನವನ್ನು ಮರಳಿಸಿದ ಅಲ್ಲಾಹನಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾ ವಿಶ್ವಾಸಿಯು ಆ ದಿನವನ್ನು ಆರಂಭಿಸುತ್ತಾನೆ. ಪ್ರಾರ್ಥನೆಯೊಂದಿಗೆ ಎದ್ದ ವಿಶ್ವಾಸಿಯು ತನ್ನ ದೇಹದೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಪ್ರವಾದಿ ವಚನವೇ ಇಸ್ಲಾಮಿನ ಶುಚಿತ್ವದ ಪ್ರಾಧಾನ್ಯತೆಯನ್ನು ಅನಾವರಣಗೊಳಿಸುತ್ತದೆ.

ಇಮಾಮ್ ಬುಖಾರಿ, ಇಮಾಮ್ ಮುಸ್ಲಿಮ್ ಉದ್ಧರಿಸಿದ ಅಬೂಹುರೈರ(ರ) ವರದಿ ಮಾಡಿದ ಹದೀಸ್ ಹೀಗಿದೆ, “ನಿದ್ದೆಯಿಂದ ಎದ್ದ ಕೂಡಲೇ ನಿಮ್ಮ ಕೈಗಳನ್ನು ಮೂರು ಬಾರಿ ತೊಳೆದು ಸ್ವಚ್ಛಗೊಳಿಸದೆ ಪಾತ್ರೆಗೆ ಕೈ ಹಾಕಬಾರದು. ಏಕೆಂದರೆ, ರಾತ್ರಿ ನಿದ್ದೆಯಲ್ಲಿ ನಿಮ್ಮ ಕೈಗಳು ಎಲ್ಲೆಲ್ಲ ಹೋಗಿದೆಯೆಂದು ನಿಮಗೆ ತಿಳಿದಿಲ್ಲವಲ್ಲವೇ?”

ಅತ್ಯಂತ ಅಪಾಯಕಾರಿಯಾದ ನಿಫ ವೈರಸ್ ಇತ್ತೀಚೆಗೆ ವರದಿಯಾದಾಗ ಆರೋಗ್ಯಾಧಿಕಾರಿಗಳು ಸೂಚಿಸಿದ ಮುಂಜಾಗ್ರತಾ ಕ್ರಮವೆಂದರೆ, ಎಲ್ಲರೂ ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಸ್ವಚ್ಛವಾಗಿರಿಸಬೇಕು ಎಂದಾಗಿತ್ತು.

ಕೈಗಳು ನಮ್ಮ ದೇಹದ ರೋಗ ಮತ್ತು ಆರೋಗ್ಯವನ್ನು ನಿರ್ಣಯಿಸುವ ಪ್ರಧಾನ ಅವಯವವಾಗಿದೆ. ಒಂದು ದಿನದಲ್ಲಿ ವ್ಯಕ್ತಿಯ ಕೈಯು ಎಲ್ಲೆಲ್ಲ ಸ್ಪರ್ಶಿಸುತ್ತದೆ. ರೋಗಾಣುಗಳನ್ನು ಇಷ್ಟೊಂದು ಸುಲಭವಾಗಿ ದೇಹಕ್ಕೆ ಸೇರಿಸಿಕೊಳ್ಳುವ ಅವಯವ ಬೇರೆ ಇಲ್ಲ. ಆದ್ದರಿಂದ ಪ್ರವಾದಿ(ಸ)ರು ವಿಶ್ವಾಸಿಯ ದಿನಚರಿಯಲ್ಲಿ ಪ್ರಥಮ ಸ್ಥಾನವನ್ನು ಕೈಗಳ ಸ್ವಚ್ಛತೆಗೆ ನೀಡಿದ್ದಾರೆ.

ನನ್ನ ಸಮುದಾಯಕ್ಕೆ ಕಷ್ಟವಾಗದಿರುತ್ತಿದ್ದರೆ ನಾನು ಐದು ಬಾರಿ ಹಲ್ಲುಜ್ಜಲು ತಿಳಿಸುತ್ತಿದ್ದೆ ಎಂದು ಪ್ರವಾದಿಯವರು ಹೇಳುವಾಗ ಅಲ್ಲಿಯೂ ಇಸ್ಲಾಮಿನ ಸ್ವಚ್ಛತೆಯ ಸುಂದರ ಪಾಠ ಅನಾವರಣಗೊಳ್ಳುತ್ತದೆ.

ಶೌಚಾಲಯಕ್ಕೆ ಪ್ರವೇಶಿಸುವಾಗ ಚಪ್ಪಲಿ ಧರಿಸಿ ಪ್ರಾರ್ಥನೆಯೊಂದಿಗೆ ಒಳಪ್ರವೇಶಿಸಲು ಹೇಳುವ ಇಸ್ಲಾಮ್, ಅವಶ್ಯಕತೆಗಳನ್ನು ಪೂರೈಸಿ ಹೊರಬರುವಾಗ ಆ ಶೌಚಾಲಯವನ್ನು ಇತರರು ಉಪಯೋಗಿಸಲು ಸಾಧ್ಯವಾಗುವ ರೀತಿಯಲ್ಲಿ ಸ್ವಚ್ಛಗೊಳಿಸಿಯೇ ಬರಬೇಕೆಂದು ಸೂಚಿಸುತ್ತದೆ. ನಮಾಝ್ನ ಮೊದಲು ಅಂಗಶುದ್ಧಿ ಮಾಡುವಾಗ ಕಾಲಿನ ಹಿಮ್ಮಡಿ ಸಂಪೂರ್ಣವಾಗಿ ತೊಳೆಯದವನಿಗೆ ನಾಶವೆಂಬ ಪ್ರವಾದಿ ವಚನವು ಅದರ ಅಗತ್ಯತೆಯನ್ನು ಮನವರಿಕೆ ಮಾಡುತ್ತದೆ. ಅಲ್ಲಾಹನ ಮುಂದೆ ಅತ್ಯಂತ ಶುದ್ಧಿಯಾಗಿ ನಿಲ್ಲಬೇಕೆಂಬುದು ಧರ್ಮದ ಬೇಡಿಕೆ.

ಶುಚಿತ್ವದ ರೀತಿ, ವಿಧಾನಗಳನ್ನು ನವೀಕರಿಸಲು ವಿಶ್ವಾಸಿಗೆ ಸಾಧ್ಯವಾಗಬೇಕು. ಶುಚಿತ್ವವು ವಿಶ್ವಾಸದ ಅರ್ಧಾಂಶವಾಗಿದೆ ಎಂದು ಹೇಳಿದ ಮುಸ್ಲಿಮರ ನಂಬಿಕೆಯನ್ನು ಪ್ರಶ್ನಿಸಿದವರಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ತರಬೇಕೆಂಬುದು ಅವರ ಆಶಯ. ಅಹ್ಮದ್ ಅಮೀನ್ ಬರೆಯುತ್ತಾರೆ, “ಓರ್ವ ವ್ಯಕ್ತಿ ಹೌಲ್‍ನಿಂದ ಎರಡು ಕೈಗಳಿಂದಲೂ ನೀರು ತೆಗೆದು ಮುಖವನ್ನು ಸಂಪೂರ್ಣವಾಗಿ ತೊಳೆಯುತ್ತಾನೆ. ಆ ನೀರು ಮರಳಿ ಹೌಲ್‍ಗೆ ಸೇರುತ್ತದೆ. ಹೌಲ್ ಎಲ್ಲಾ ರೋಗಗಳ ಕೇಂದ್ರವಾಗಿದೆ. ಕಣ್ಣು ನೋವು ಇರುವವರು ಇತರ ಚರ್ಮ ರೋಗವಿರುವ ರೋಗಿಯೂ ಇದೇ ಹೌಲ್‍ನಲ್ಲಿ ಮುಖ ತೊಳೆಯುತ್ತಾನೆ. ಮುಖದ ಕೊಳೆ ಕಶ್ಮಲಗಳು ಹೌಲನ್ನು ಸೇರುತ್ತದೆ. ಧಾರ್ಮಿಕ ವಿಶ್ವಾಸದ ಕಾರಣದಿಂದ ಇಂತಹ ಅಪಾಯಗಳನ್ನು ಕಂಡಿಲ್ಲವೆಂಬಂತೆ ನಟಿಸಬಾರದು. ನಳ್ಳಿಗಳು ಅತ್ಯಾಧುನಿಕ ವಿಧಾನಗಳು ಬಂದಿರುವಾಗ ಈ ಕುರಿತು ಚಿಂತಿಸುವುದು ಒಳ್ಳೆಯದು.

ಕೇರಳದ ಖ್ಯಾತ ಸಾಹಿತಿ ವೈಕಂ ಮುಹಮ್ಮದ್ ಬಶೀರ್‍ ರ ನಿಸಾರ್ ಅಹ್ಮದ್ ಎಂಬ ಕಥಾ ಪಾತ್ರವು ಮುಸ್ಲಿಮರ ಕಾಲಹರಣಗೊಂಡಿರುವ ಹಲವಾರು ಮೌಲ್ಯಗಳಲ್ಲಿ ಮುಖ್ಯವಾಗಿರುವ ಶುಚಿತ್ವದ ಕುರಿತು ತಮ್ಮ ವ್ಯಾಕುಲತೆಯನ್ನು ಹಂಚಿಕೊಳ್ಳುತ್ತದೆ.

ನೀವು ಒಂದು ನಗರಕ್ಕೆ ತಲುಪಿ, ಮಸೀದಿಯನ್ನು ಹುಡುಕುತ್ತೀರೆಂದಾದರೆ ಎಲ್ಲಿಂದ ಮೂತ್ರದ ಘಾಟು ವಾಸನೆ ಬರುತ್ತದೋ ಅಲ್ಲಿ ಒಂದು ಮಸೀದಿ ಇರಬಹುದೆಂದು ಊಹಿಸಿ ಎಂದು ಒಮ್ಮೆ ಬಶೀರ್ ಹೇಳಿದ್ದು ಸ್ವಚ್ಛತಾ ಪ್ರಜ್ಞೆಯ ಕೊರತೆಯನ್ನು ಸ್ಪಷ್ಟಪಡಿಸುತ್ತದೆ. ಇಂತಹ ಹಲವಾರು ವಿಮರ್ಶೆಗಳನ್ನು ಮುಸ್ಲಿಮ್ ಲೋಕವು ಸ್ವಾಗತಿಸಿದೆ. ಅಂಥ ಸಕಾರಾತ್ಮಕ ಪ್ರತಿಕ್ರಿಯೆಯು ಸ್ವಚ್ಛತೆಯ ಕುರಿತ ಜಾಗೃತಿಯು ಬೆಳೆದು ಬರಲು ಕಾರಣವಾಗುತ್ತದೆ. ಶುಚಿತ್ವದ ಜಾಗೃತಿಯನ್ನು ಮೂಡಿಸುವ, ಪರಿಸರ ಸಂರಕ್ಷಣೆಯ ಪ್ರಜ್ಞೆಯಿಂದ ನಾಗರಿಕತೆಗಳನ್ನು ಪ್ರಕಾಶಮಾನಗೊಳಿಸಿದ ಇಸ್ಲಾಮೀ ದರ್ಶನವನ್ನು ಕಾಲವು ಕಾಯುತ್ತಿದೆ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಮಹಿಳೆ

✍️ ರಶೀದ್, ಉಪ್ಪಿನಂಗಡಿ ಸ್ತ್ರೀ ಸ್ವಾತಂತ್ರ‍್ಯದ ವಿಚಾರ ಬಂದಾಗ ಇಸ್ಲಾಮನ್ನು ತಪ್ಪಾಗಿ ಗ್ರಹಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಬರೀ ಬುರ್ಖಾವನ್ನು …