Home / ವಾರ್ತೆಗಳು / ಕಡು ಬಡತನದಲ್ಲಿ ಬೆಳೆದ ಇಥಿಯೋಪಿಯಾ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಕಡು ಬಡತನದಲ್ಲಿ ಬೆಳೆದ ಇಥಿಯೋಪಿಯಾ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ

ನಾರ್ವೆ: ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್‌ಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಸಹಕಾರ ಮತ್ತು ಶಾಂತಿ ಸ್ಥಾಪನೆಗಾಗಿ ಪರಿಶ್ರಮಿಸಿದ ಹಾಗೂ ನೆರೆಯ ಎರಿಟ್ರಿಯಾ ಜೊತೆಗಿನ ಗಡಿ ಸಂಘರ್ಷವನ್ನು ಪರಿಹರಿಸಿದ ವಿಶೇಷ ಸಾಧನೆಗಾಗಿ ಅವರಿಗೆ ಈ ಮನ್ನಣೆ ದೊರೆತಿದೆ.

ಮುಸ್ಲಿಂ ತಂದೆ ಮತ್ತು ಕ್ರಿಶ್ಚಿಯನ್ ತಾಯಿಗೆ ಜನಿಸಿ ವಿದ್ಯುತ್ ಮತ್ತು ನೀರಿನ ಸೌಲಭ್ಯವೂ ಇಲ್ಲದ ಗುಡಿಸಿಲಿನಲ್ಲಿ ಬೆಳೆದು ಕಡು ಬಡತನದಲ್ಲೇ ಬಾಲ್ಯ ಯೌವ್ವನಗಳನ್ನು ಸವೆಸಿದ 42ನೇ ವಯಸ್ಸಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವ ಅಬಿ ಅಹ್ಮದ್ ಜೀವನ ವೃತ್ತಾಂತ ಅತ್ಯಂತ ರೋಚಕ ಕಥೆಯಾಗಿದೆ. ಆಧುನಿಕ ತಂತ್ರಜ್ಞಾನದಿಂದ ಆಕರ್ಷಿತನಾಗಿ ರೇಡಿಯೋ ಆಪರೇಟರ್ ಆಗಿ ಮಿಲಿಟರಿ ಸೇವೆ ಸೇರಿದ ಅಬಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿ ಸೈಬರ್ ಬೇಹುಗಾರಿಕೆ ವಿಭಾಗದ ಮುಖ್ಯಸ್ಥರಾದರು.

ಆ ನಂತರ ಶರವೇಗದಲ್ಲಿ ರಾಜಕೀಯ ರಂಗದಲ್ಲೂ ಪ್ರವರ್ಧಮಾನಕ್ಕೆ ಬಂದ ಅಬಿ ಅಹ್ಮದ್ ಮಂತ್ರಿಯಾಗಿ ಇದೀಗ ಪ್ರಧಾನ ಮಂತ್ರಿಯಾಗಿ ಬಡತನದ ಬೇಗುದಿಯಲ್ಲೇ ಬೇಯುತ್ತಾ ಬಂದಿರುವ ಈ ಆಫ್ರಿಕಾ ದೇಶದಲ್ಲಿ ಹೊಸ ಬೆಳಕಿನ ಆಶಾಕಿರಣವಾಗಿ ಬೆಳಗುತ್ತಿದ್ದಾರೆ. ಅಧಿಕಾರದ ಗದ್ದುಗೆಯೇರಿದ ಕೂಡಲೇ ಜೈಲಿನಲ್ಲಿದ್ದ ಭಿನ್ನಮತೀಯರನ್ನು ಬಿಡುಗಡೆಗೊಳಿಸಿ ಎರಿಟ್ರಿಯಾ ಜತೆ ಶಾಂತಿ ಒಪ್ಪಂದ ಮಾಡಿಕೊಂಡರು.

ಸರ್ಕಾರದ ದಬ್ಬಾಳಿಕೆಗಾಗಿ ಬಹಿರಂಗ ಕ್ಷಮೆ ಕೋರಿ ಭಯೋತ್ಪಾದಕರ ಹಣೆಪಟ್ಟಿ ಹಚ್ಚಿ ಗಡಿಪಾರು ಮಾಡಲಾಗಿದ್ದ ಬಂಡುಕೋರರನ್ನು ಮತ್ತೆ ತಾಯ್ನಾಡಿಗೆ ಬರ ಮಾಡಿಕೊಂಡರು. ಇಥಿಯೋಪಿಯಾದ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಜನರ ಜೀವನ ಸುಧಾರಣೆಗೆ ಶ್ರಮಿಸುತ್ತಿರುವ ಈ ಜನಪ್ರಿಯ ಜನ ನಾಯಕ ಯುವ ಪೀಳಿಗೆಯ ಕಣ್ಮಣಿಯಾಗಿದ್ದಾರೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …