Home / ವಾರ್ತೆಗಳು / ಮನುಷ್ಯ ಸಂಬಂಧಗಳನ್ನು ಬಲಪಡಿಸಿ, ದ್ವೇಷ ಭಾವನೆಯನ್ನು ದೂರ ಸರಿಸಿ – ಮುಹಮ್ಮದ್ ಕುಂಞ

ಮನುಷ್ಯ ಸಂಬಂಧಗಳನ್ನು ಬಲಪಡಿಸಿ, ದ್ವೇಷ ಭಾವನೆಯನ್ನು ದೂರ ಸರಿಸಿ – ಮುಹಮ್ಮದ್ ಕುಂಞ

ಜಮಾಅತೆ ಇಸ್ಲಾಮಿ ಹಿಂದ್ ಲಿಂಗಸಗೂರು ವತಿಯಿಂದ ಸದ್ಭಾವನಾ ಕಾರ್ಯಕ್ರಮ

ಲಿಂಗಸುಗೂರು : ಜಗತ್ತಿನ ಎಲ್ಲಾ ಧರ್ಮಗಳು ಹೇಳಿಕೊಟ್ಟ ಬಹುದೊಡ್ಡ ಸಂದೇಶ ಮಂದಹಾಸ. ನಾವು ಇದನ್ನು ಮರೆತಿದ್ದೇವೆ. ಮಂದಹಾಸ-ಮುಗುಳುನಗೆಯ ಮೂಲಕ ಮನುಷ್ಯ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಕಾಲ ಇದಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಮಂಗಳೂರಿನ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸ್ಥಳೀಯ ಗಡಿಯಾರ ಚೌಕ ಬಳಿ ಭಾನುವಾರ ಸಂಜೆ ಆಯೋಜಿಸಿದ್ದ ಸದ್ಭಾವನಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ಧರ್ಮಗಳೂ ಪ್ರೀತಿ, ಸಹೋದರತೆ, ಶಾಂತಿಯನ್ನು ಬೋಧಿಸುತ್ತವೆ. ಮನುಷ್ಯರ ಮೂಲಕ ಮಾತ್ರ ದೇವರ ಬಳಿ ತಲುಪಲು ಸಾಧ್ಯ ಎನ್ನುವುದು ಧರ್ಮಗಳ ಸಾರವಾಗಿದೆ. ಇನ್ನೊಬ್ಬರಿಗೆ ಕಷ್ಟ ಕೊಡುವ ಮತ್ತು ಹೀನಾಯವಾಗಿ ಕಂಡು ದೇವರಲ್ಲಿ ಒಳಿತನ್ನು ಮಾಡು ಎಂದು ಪ್ರಾರ್ಥಿಸಿದರೆ ಏನು ಫಲ.?

ಎಲ್ಲಾ ರೀತಿಯ ಆಧುನಿಕ ಸವಲತ್ತುಗಳನ್ನು ಹೊಂದಿದ್ದರೂ ಮನುಷ್ಯನಿಗೆ ನೆಮ್ಮದಿ ಇಲ್ಲವಾಗಿದೆ. ದೈವತ್ವದಿಂದ ದೂರವಾದ ಫಲವೇ ಇದಾಗಿದೆ. ಮನಸ್ಸಿಗೆ ಶಾಂತಿ ನೆಮ್ಮದಿ ಕಂಡುಕೊಳ್ಳಲು ಸನ್ಮಾರ್ಗದತ್ತ ಬಾರದೇ ಪರರ ದೂಷಣೆ ಮಾಡುವಲ್ಲೇ ನಾವು ನಿರತರಾಗಿರುತ್ತೇವೆ. ಮಾನಸಿಕ ಸಮಸ್ಯೆ, ಸಂಕಷ್ಟದಿಂದ ಮನುಷ್ಯ ಸೋತು ಹೋಗಿದ್ದಾನೆ. ನೆಮ್ಮದಿಯ ಬದುಕಿಗೆ ಶಾಂತಿ-ಸಹನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಧರ್ಮ ಸಹಿಷ್ಣುತೆ-ಸದ್ಭಾವನೆಯ ಚಿಂತನೆಗಳನ್ನು ಜಗತ್ತಿನಾದ್ಯಂತ ಪಸರಿಸುವ ಅವಶ್ಯಕತೆ ಇದೆ. ಸದ್ಭಾವನಾ ವೇದಿಕೆಯ ಮೂಲಕ ಎಲ್ಲರೂ ಒಂದಾಗಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಮಾನವರಾಗಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕಿದೆ ಎಂದು ಮುಹಮ್ಮದ್ ಕುಂಞ ಹೇಳಿದರು.

ವಿಜಯ ಮಹಾಂತೇಶ್ವರ ಶಾಖಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಕ್ಯಾಥೊಲಿಕ್ ಚರ್ಚ್ ಫಾದರ್ ಆನಂದ ಕುಮಾರ ಸಾನಿಧ್ಯ ವಹಿಸಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಇಂಥಹ ಕಾರ್ಯಕ್ರಮಗಳು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿವೆ. ಸದ್ಭಾವನಾ ಕಾರ್ಯಕ್ರಮದ ಮೂಲಕ ಎಲ್ಲಾ ಧರ್ಮೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿರುವುದು ಶ್ಲಾಘನೀಯ ಕಾರ್ಯವೆಂದು ಮಾತನಾಡಿದರು.

ಪುಸ್ತಕ ಬಿಡುಗಡೆ

 

ಸದ್ಭಾವನೆಯ ಕುರಿತಾದ ಬಸವ ತತ್ವ ಮತ್ತು ಇಸ್ಲಾಂ, ಪ್ರವಾದಿ ಮುಹಮ್ಮದ್(ಸ)ಎಲ್ಲರಿಗಾಗಿ ಎನ್ನುವ ಎರಡು ಪುಸ್ತಕಗಳನ್ನು ವೇದಿಕೆಯಲ್ಲಿ ಗಣ್ಯರು ಬಿಡುಗಡೆ ಮಾಡಿದರು.

ತಂಜಿಮುಲ್ ಮುಸ್ಲಿಮೀನ್ ಕಮೀಟಿ ಅದ್ಯಕ್ಷ ಲಾಲ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಪ್ರೊ.ಜಿ.ವಿ.ಕೆಂಚನಗುಡ್ಡ ಸೇರಿ ಇತರರು ವೇದಿಕೆಯಲ್ಲಿ ಇದ್ದರು.

ಹಾಫೀಜ್ ಖಾಜಿ ಯುನೂಸ್ ಕರಡಕಲ್ ಕುರ್‌ಆನ್ ಪಠಣ ಮಾಡಿದರು. ಡಾ.ಮುಹಮ್ಮದ್ ಜಾವೇದ್ ಕನ್ನಡಾನುವಾದ ಮಾಡಿದರು. ಮೌಲಾನ ಹಾಫೀಜ್ ಅನ್ವರ್ ಪಾಷಾ ಉಮರಿ ಸ್ವಾಗತಿಸಿದರು. ಮುಹಮ್ಮದ್ ಜಹೀರುದ್ದೀನ್ ನಿರೂಪಿಸಿದರು. ಮೌಲಾನಾ ಹಾಫೀಜ್ ಸೈಯದ್ ಅಬು ಸಯೀದ್ ಖಾಸ್ಮಿ ವಂದಿಸಿದರು.

ವರದಿ : ಖಾಜಾಹುಸೇನ್

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …