Home / ಲೇಖನಗಳು / ಆ ಹತ್ತು ಮಂದಿಯನ್ನು ಪ್ರವಾದಿ ಆಕ್ಷೇಪಿಸಲು ಕಾರಣವೇನು?

ಆ ಹತ್ತು ಮಂದಿಯನ್ನು ಪ್ರವಾದಿ ಆಕ್ಷೇಪಿಸಲು ಕಾರಣವೇನು?

✍️ ಏ.ಕೆ. ಕುಕ್ಕಿಲ

1. ಶರಾಬಿಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವವರು
2. ಶರಾಬು ತಯಾರಿಸುವವರು
3. ಶರಾಬು ಕುಡಿಯುವವರು
4. ಶರಾಬು ಕುಡಿಸುವವರು
5. ಶರಾಬು ಸರಬರಾಜು ಮಾಡುವವರು
6. ಯಾರಿಗಾಗಿ ಸರಬರಾಜು ಮಾಡಲಾಗುತ್ತದೋ ಅವರು
7. ಶರಾಬು ಮಾರಾಟ ಮಾಡುವವರು
8. ಶರಾಬು ಖರೀದಿಸುವವರು
9. ಉಡುಗೊರೆಯಾಗಿ ನೀಡುವವರು
10. ಶರಾಬಿನ ವರಮಾನದಿಂದ ಬದುಕುವವರು

ಈ ಹತ್ತು ವಿಧದ ಜನರನ್ನು ಪ್ರವಾದಿ ಮುಹಮ್ಮದ್(ಸ) ಶಪಿಸಿದ್ದಾರೆ. ಅಂದಹಾಗೆ, ಶಾಪಕ್ಕೆ ಅಪವಾದವೆಂಬಂತೆ ಬದುಕಿರುವ ಪ್ರವಾದಿಯವರು ಈ ವಿಷಯದಲ್ಲಿ ಇಷ್ಟು ನಿಷ್ಠುರವಾಗಲು ಕಾರಣವೇನು? ತನ್ನ ಸಹಜ ಮೃದು ಸ್ವಭಾವಕ್ಕಿಂತ ಭಿನ್ನವಾಗಿ ಶರಾಬಿನ ಬಗ್ಗೆ ಕಟುವಾಗಿ ನಡೆದುಕೊಳ್ಳಲು ಏನು ಪ್ರೇರಣೆ?

ಕುಡಿತವು ಓರ್ವ ವ್ಯಕ್ತಿಯ ಸಹಜ ಬಯಕೆಯಲ್ಲ. ಅದು ಪ್ರಕೃತಿಯ ಬೇಡಿಕೆಯೂ ಅಲ್ಲ. ಅದು ಮನುಷ್ಯರೇ ತಮ್ಮ ಸ್ವೇಚ್ಛೆಗೆ ತಯಾರಿಸಿಕೊಂಡ ಪೇಯ. ಆದ್ದರಿಂದಲೇ ಅದು ಸರ್ವ ಕೆಡುಕುಗಳ ಮಾತೆಯಾಗಿ ಸಮಾಜವನ್ನು ಕಾಡುತ್ತಿದೆ. ಕುಡುಕನಿಗೆ ಮತ್ತಿನ ಸಂದರ್ಭದಲ್ಲಿ ತಾನು ಏನು ಹೇಳುತ್ತಿದ್ದೇನೆ ಅಥವಾ ಏನು ಮಾಡುತ್ತಿದ್ದೇನೆ ಎಂಬುದು ಕೆಲವು ಸಂದರ್ಭಗಳಲ್ಲಿ ಗೊತ್ತಿರುವುದಿಲ್ಲ. ಆದರೆ, ಈ ಗೊತ್ತಿಲ್ಲದ ಸಂದರ್ಭದಲ್ಲಿ ಆತ ಏನು ಹೇಳಿದ್ದನೋ/ಳೋ ಅದು ಆತನ ಜೊತೆಗಿರುವವರಿಗೆ ಅಥವಾ ಆತನನ್ನು ಮುಖಾಮುಖಿಯಾದವರಿಗೆ ಗೊತ್ತಿರುತ್ತದೆ. ಮಾತ್ರವಲ್ಲ, ಆ ಮಾತುಗಳು ಅವರನ್ನು ಒಂದೋ ಸಿಟ್ಟಿಗೆ ಅಥವಾ ಅಸಹನೆಗೆ ಒಳಪಡಿಸಿರುತ್ತದೆ. ನಾಲ್ಕು ಮಂದಿಯ ಮುಂದೆ ತನ್ನನ್ನು ಅವಮಾನಿಸುವ, ಘನತೆಗೆ ಕುಂದುಂಟು ಮಾಡುವ ಮಾತುಗಳನ್ನಾಡಿದ ಆತನ ಬಗ್ಗೆ ಸಹಜವಾಗಿ ಅಸಂತೋಷ ವ್ಯಕ್ತವಾಗುತ್ತದೆ. ಇದು ಘಟನೆಯ ಒಂದು ಮಗ್ಗುಲಾದರೆ, ಕುಡಿತದ ಮತ್ತಿನಲ್ಲಿ ಆತ/ಕೆ ಆಡಿದ ಮಾತುಗಳು ಸಾರ್ವಜನಿಕರಲ್ಲಿ ಆತನ ಗೌರವವನ್ನು ಕುಂದಿಸುತ್ತದೆ. ಹೀಗೆ ಕುಡಿಯುವುದು ನೆಮ್ಮದಿ ಕಂಡುಕೊಳ್ಳುವುದಕ್ಕಾದರೂ ಕುಡಿದ ಬಳಿಕ ಆತ ಸಾರ್ವಜನಿಕರ ನೆಮ್ಮದಿ ಕದಡುವುದಷ್ಟೇ ಅಲ್ಲ, ತನ್ನ ನೆಮ್ಮದಿಯನ್ನೂ ಹಾಳು ಮಾಡಬಲ್ಲ ಇನ್ನಷ್ಟು ಸಂದರ್ಭಗಳನ್ನು ಸೃಷ್ಟಿಸಿರುತ್ತಾನೆ.

ಸಾಮಾನ್ಯವಾಗಿ,
ಕುಡಿತವು ಮನೆಯಲ್ಲಿಯೋ ಪತ್ನಿ-ಮಕ್ಕಳೊಂದಿಗೋ ಕಳೆಯಬೇಕಾದ ಸಮಯದಲ್ಲೇ ಆಗಿರುತ್ತದೆ. ಕಚೇರಿ ಅಥವಾ ಉದ್ಯೋಗದ ವೇಳೆ ಕುಡಿಯುವುದರಿಂದ ಕೆಲಸ ತಪ್ಪುವ ಭೀತಿಯಿರುತ್ತದೆ. ಆದ್ದರಿಂದ ಕೆಲಸದ ನಂತರದ ಸಮಯವನ್ನು ಹೆಚ್ಚಿನವರು ಕುಡಿತಕ್ಕೆ ಮೀಸಲಿಡುತ್ತಾರೆ. ಹೀಗೆ ಪತ್ನಿ-ಮಕ್ಕಳೊಂದಿಗೆ ಕಳೆಯಬೇಕಾದ ಬಹು ಅಮೂಲ್ಯ ಸಮಯವನ್ನು ಕುಡಿತವು ಹಾಳು ಮಾಡಿಬಿಡುತ್ತದೆ.

ಒಂದುವೇಳೆ, ಕುಡಿದು ಮನೆಗೆ ಬಂದರೂ ಪತ್ನಿ-ಮಕ್ಕಳೊಂದಿಗೆ ಆತ ಸಹಜವಾಗಿ ವರ್ತಿಸಲಾರ. ನೆಮ್ಮದಿಯನ್ನು ಪಡಕೊಳ್ಳುವುದಕ್ಕಾಗಿ ಕುಡಿಯುವ ವ್ಯಕ್ತಿಯು ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೋ ಅವರೆಲ್ಲರ ನೆಮ್ಮದಿಯನ್ನು ಹಾಳು ಮಾಡುತ್ತಾನೆ. ಮಾತ್ರವಲ್ಲ, ಆತ ಅಮಲು ಇಳಿದ ಬಳಿಕ ಸಾಮಾನ್ಯ ಸ್ಥಿತಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ವಿನಾ ಕಾರಣ ನೆಮ್ಮದಿ ಕೆಡಿಸಿದ ತಂದೆ ಅಥವಾ ಪತಿಯ ಮೇಲೆ ಮಕ್ಕಳು ಇಲ್ಲವೇ ಪತ್ನಿ ಸಿಟ್ಟಾಗಿರುತ್ತಾರೆ. ಆದ್ದರಿಂದ ಆ ದಿನವು ಅಥವಾ ಕೆಲವು ದಿನಗಳು ನೆಮ್ಮದಿರಹಿತವಾಗಿ ಕಳೆದುಹೋಗುತ್ತದೆ. ಈ ಸ್ಥಿತಿಯು ಆತನನ್ನು ಪುನಃ ಕುಡಿತದ ಮೊರೆ ಹೋಗುವಂತೆ ಮಾಡುತ್ತದೆ.

ಪ್ರವಾದಿ ಮುಹಮ್ಮದ್(ಸ)ರು ಒಂದು ಘಟನೆಯನ್ನು ಹೀಗೆ ವಿವರಿಸಿದ್ದಾರೆ-

ಸಾತ್ವಿಕನಾದ ಓರ್ವ ವ್ಯಕ್ತಿಯು ಒಂದು ಸನ್ನಿವೇಶಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗುತ್ತಾನೆ. ಕೈದಿಯಾಗಿರುವ ಆತನ ಮುಂದೆ ಮೂರು ಕೆಡುಕುಗಳನ್ನು ಇರಿಸಲಾಗುತ್ತದೆ. ಮದ್ಯ, ವ್ಯಭಿಚಾರ ಮತ್ತು ಹತ್ಯೆ. ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಆತನಿಗೆ ಎದುರಾಗುತ್ತದೆ. ಸಾತ್ವಿಕನಾದ ಆತ ಆ ಮೂರರ ಬಗ್ಗೆಯೂ ತೀರಾ ಜಿಗುಪ್ಸೆ ಉಳ್ಳವ. ಬದುಕಿನಾದ್ಯಂತ ಆ ಮೂರನ್ನೂ ತಿರಸ್ಕರಿಸಿದವ. ಆದರೆ, ಕೈದಿಯಾಗಿ ಆತ ಆಜ್ಞೆಯನ್ನು ಪಾಲಿಸಲೇಬೇಕಾಗುತ್ತದೆ. ಆದ್ದರಿಂದ, ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಮೂರರಲ್ಲಿರುವ ಕೆಡುಕುಗಳ ಪ್ರಮಾಣವನ್ನು ಅಳೆಯುತ್ತಾನೆ. ವ್ಯಭಿಚಾರ ಮತ್ತು ಹತ್ಯೆಯ ಎದುರು ಆತನಿಗೆ ಮದ್ಯಪಾನವು ತುಸು ಸೌಮ್ಯ ಕೆಡುಕಾಗಿ ಕಾಣಿಸುತ್ತದೆ. ಯಾಕೆಂದರೆ, ಮದ್ಯಪಾನವು ಆತನೊಬ್ಬನಿಗೇ ಸಂಬಂಧಿಸಿದ ಸಂಗತಿಯಾದರೆ, ವ್ಯಭಿಚಾರ ಮತ್ತು ಹತ್ಯೆಯು ಇತರರಿಗೆ ಸಂಬಂಧಿಸಿದ್ದು. ಏನೇ ಆದರೂ ಕೆಡುಕಿನಲ್ಲಿ ಭಾಗವಹಿಸಲೇಬೇಕಲ್ಲವೇ? ಇಂಥ ಅನಿವಾರ್ಯತೆಯಲ್ಲಿ ಇತರರಿಗೆ ತೊಂದರೆಯಾಗದ ಆಯ್ಕೆಯೇ ಉತ್ತಮ ಎಂದು ಭಾವಿಸಿ ಆತ ಮದ್ಯವನ್ನು ಆಯ್ಕೆ ಮಾಡುತ್ತಾನೆ. ಆದರೆ ಮದ್ಯ ಸೇವಿಸುತ್ತಾ ಆತ ಸ್ವಯಂ ನಿಯಂತ್ರಣ ಕಳಕೊಳ್ಳುತ್ತಾನೆ. ಎಲ್ಲಿಯವರೆಗೆಂದರೆ, ಆತ ಯಾವುದನ್ನು ಮಹಾಪಾಪ ಎಂದು ಪರಿಗಣಿಸಿದ್ದನೋ ಅದೇ ಪಾಪವನ್ನು ಮಾಡುತ್ತಾನೆ. ಮದ್ಯದ ಅಮಲಿನಲ್ಲಿ ಆತ ವ್ಯಭಿಚಾರ ಮಾಡಿದನಲ್ಲದೇ ಹತ್ಯೆಯನ್ನೂ ಮಾಡಿಬಿಡುತ್ತಾನೆ.

ಪವಿತ್ರ ಕುರ್‌ಆನ್ ಹೀಗೆ ಹೇಳುತ್ತದೆ-
1. ಮದ್ಯ ಮತ್ತು ಜೂಜಿನಲ್ಲಿ ಮಹತ್ತರವಾದ ಕೇಡಿದೆ. (2:219)
2. ಮದ್ಯ ಮತ್ತು ಜೂಜಿನ ಮೂಲಕ ಶೈತಾನನು ನಿಮ್ಮೊಳಗೆ ವೈರತ್ವ ಹಾಗೂ ದ್ವೇಷವನ್ನುಂಟು ಮಾಡಲು ಇಚ್ಛಿಸುತ್ತಾನೆ. (5:91)

ಅಂದಹಾಗೆ, ನಮ್ಮಲ್ಲೊಂದು ವಿಶಿಷ್ಟ ಪದ್ಧತಿಯಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಯಾವುದಾದರೂ ಕೆಲವು ಸ್ವಯಂ ಸೇವಾ ಸಂಘಟನೆಗಳು ಕೆಲವು ಧಾರ್ಮಿಕ ಸಂಸ್ಥೆಗಳು ಅಥವಾ ಧರ್ಮಗುರುಗಳು ಮಾತ್ರ ಹೇಳುತ್ತಿರುವುದಲ್ಲ. ಸರಕಾರವೇ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಅನ್ನುತ್ತದೆ. ಈ ಬಗ್ಗೆ ನಮ್ಮ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಖಚಿತತೆ ಇದೆ ಎಂದರೆ, ಮದ್ಯದ ಬಾಟಲಿಗಳಲ್ಲೇ ಇದನ್ನು ಅಚ್ಚು ಹಾಕಲಾಗುತ್ತದೆ. ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ, ಸರಕಾರಿ ಕಚೇರಿಗಳ ಎದುರು, ಜಿಲ್ಲಾಧಿಕಾರಿ ಕಚೇರಿಯ ಆಸುಪಾಸಿನಲ್ಲಿ ಮತ್ತು ಎಲ್ಲರೂ ದೃಷ್ಟಿ ಬೀರಬಹುದಾದ ಸಾಮಾನ್ಯ ಜನವಸತಿ ಪ್ರದೇಶಗಳಲ್ಲಿ ಕುಡಿತದ ವಿರುದ್ಧ ಸರಕಾರವೇ ಬೃಹತ್ ಫ್ಲಕ್ಸ್ ಗಳನ್ನು ಹಾಕುತ್ತದೆ. ಕುಡಿತದಿಂದಾಗಿ ಪತ್ನಿ-ಮಕ್ಕಳು ಬೀದಿಪಾಲಾಗುವ ಬಗ್ಗೆ, ಹಸಿವಿನ ಹೊಟ್ಟೆಯ ಬಗ್ಗೆ ಚಿತ್ರಸಹಿತ ಜಾಹೀರಾತನ್ನೂ ಮುದ್ರಿಸುತ್ತದೆ. ಸಿನಿಮಾಗಳಲ್ಲಿ ಮದ್ಯಪಾನದ ದೃಶ್ಯ ಪ್ರಸಾರವಾಗುವ ವೇಳೆ, ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆಯನ್ನೂ ಪ್ರಸಾರ ಮಾಡಲಾಗುತ್ತದೆ. ಆದರೆ,
ಇದೇ ಸರಕಾರ ಅಬಕಾರಿ ಎಂಬ ಖಾತೆಯನ್ನೇ ಹುಟ್ಟುಹಾಕಿ ಜನರಿಗೆ ಯಥೇಚ್ಛ ಮದ್ಯ ಸರಬರಾಜೂ ಮಾಡುತ್ತದೆ. ಇದಕ್ಕೆ ಏನರ್ಥ?

ಇಲ್ಲಿ ಇನ್ನೊಂದು ಅಂಶವನ್ನೂ ಎತ್ತಿ ಹೇಳಬೇಕಿದೆ. ಅದುವೇ ಮಾಧ್ಯಮ. ಒಂದು ಪುಟದಲ್ಲಿ ಮದ್ಯವಿರೋಧಿ ಸರಕಾರಿ ಜಾಹೀರಾತು ಮತ್ತು ಇನ್ನೊಂದು ಪುಟದಲ್ಲಿ ಮದ್ಯ ತಯಾರಕ ಕಂಪೆನಿಗಳ ಆಕರ್ಷಕ ಜಾಹೀರಾತನ್ನು ಯಾವ ಮುಜುಗರವೂ ಇಲ್ಲದೇ ಇವು ಪ್ರಕಟಿಸುತ್ತಿವೆ. ಒಂದು ಪುಟದಲ್ಲಿ ಕುಡಿದು ಪತ್ನಿಯನ್ನು ಕೊಲೆಗೈದ, ಅತ್ಯಾಚಾರ ನಡೆಸಿದ, ಹೆತ್ತವರ ಮೇಲೆ ಹಲ್ಲೆ ನಡೆಸಿದ, ಸಾರ್ವಜನಿಕರಿಗೆ ತೊಂದರೆ ನೀಡಿದ… ಇಂಥ ಹತ್ತು ಹಲವು ಸುದ್ದಿಗಳಿರುವಾಗ, ಇನ್ನೊಂದು ಪುಟದಲ್ಲಿ ಮದ್ಯ ಕಂಪೆನಿಗಳ ಜಾಹೀರಾತು ಇರುತ್ತದೆ. ಇದು ಎಷ್ಟು ಸಹಜವಾಗಿದೆಯೆಂದರೆ, ಪತ್ರಿಕೆಯನ್ನು ಓದುವ ಅಥವಾ ಚಾನೆಲನ್ನು ವೀಕ್ಷಿಸುವವರೂ ಇದನ್ನು ಸಹಜವಾಗಿಯೇ ಸ್ವೀಕರಿಸತೊಡಗಿದ್ದಾರೆ.

ನಿಜವಾಗಿ, ಮದ್ಯಪಾನದಿಂದ ಸಮಾಜ ಹಾಳಾಗುತ್ತದೆ ಎಂಬ ಭಾವ ಸಾರ್ವತ್ರಿಕವಾದುದು. ಈ ಸಂಕಟ ಅಮೇರಿಕವನ್ನೂ ಕಾಡಿತ್ತು. ಆದ್ದರಿಂದಲೇ, ಅಮೇರಿಕನ್ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್ರ್ ಕಾಲದಲ್ಲಿ ಅಮೇರಿಕವು ಮದ್ಯ ನಿಷೇಧಕ್ಕೆ ಮುಂದಾಯಿತು. ಖಿhe ಓobಟe ಇxಠಿeಡಿimeಟಿಣ – ಎಂಬ ಹೆಸರಲ್ಲಿ ಪ್ರಸಿದ್ಧವಾಗಿರುವ ಆ ಪ್ರಯತ್ನವು ಎಷ್ಟು ಬೇಗ ಜಾರಿಗೊಂಡಿತೋ ಅಷ್ಟೇ ಬೇಗ ವಿಫಲವಾಯಿತು. ಅಮೇರಿಕದ ನಿಷೇಧ ಭೀತಿಯಿಂದಾಗಿ ಮದ್ಯ ತಯಾರಿಕ ಕಂಪೆನಿಗಳು ಬಾಗಿಲು ಮುಚ್ಚಿದುವು. ಮದ್ಯ ಚಟದಿಂದ ಹೊರಬರಲಾಗದ ಜನರು ಅಕ್ರಮ ಮದ್ಯಕ್ಕೆ ಜೋತು ಬಿದ್ದರು. ಒಂದುಕಡೆ ಮದ್ಯ ನಿಷೇಧದಿಂದ ಆದಾಯಕ್ಕೆ ಖೋತಾವಾದರೆ ಇನ್ನೊಂದೆಡೆ ಅಕ್ರಮ ಮದ್ಯ ಮಾರಾಟ ಜಾಲ. ಕೊನೆಗೆ ಮದ್ಯಪಾನ ನಿಷೇಧ ರದ್ಧತಿಗೆ ರೂಸ್‌ವೆಲ್ಟ್ ಸಹಿ ಹಾಕಿದರು. 1914ರಿಂದ 25ರ ನಡುವೆ ಸೋವಿಯತ್ ಯೂನಿಯನ್‌ನಲ್ಲಿ, 1919ರಲ್ಲಿ ಹಂಗೆರಿಯಲ್ಲಿ, 1920-33ರ ವರೆಗೆ ಫಿನ್‌ಲ್ಯಾಂಡ್‌ನಲ್ಲಿ ಮದ್ಯಕ್ಕೆ ನಿಷೇಧ ವಿಧಿಸಲಾಗಿತ್ತು. ಆದರೆ, ಮದ್ಯ ನಿಷೇಧದಿಂದ ಉಂಟಾಗುವ ಆದಾಯ ನಷ್ಟಕ್ಕೆ ಪರ್ಯಾಯ ಮಾರ್ಗವನ್ನು ಇವು ಕಂಡುಕೊಳ್ಳುವಲ್ಲಿ ವಿಫಲವಾದುವು. ಹಾಗೆಯೇ, ಮದ್ಯ ತಯಾರಕ ಕಂಪೆನಿಗಳ ಲಾಭಿ, ಜನರ ಒತ್ತಡ ಮತ್ತು ಮದ್ಯ ಕಂಪೆನಿಗಳೇ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ಕೊಟ್ಟು ಕಳ್ಳಭಟ್ಟಿ ಮೂಲಕ ಜನರ ಸಾವಿಗೂ ಸಂಚು ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದುವು ಮತ್ತು ಈ ಎಲ್ಲ ರಾಷ್ಟ್ರಗಳು ಮದ್ಯನಿಷೇಧವನ್ನು ಹಿಂಪಡೆಯುವಂತೆ ಮಾಡಿದುವು.

ಇದೇವೇಳೆ, ಭಾರತದಲ್ಲೂ ಹಲವು ರಾಜ್ಯಗಳು ಮದ್ಯಪಾನ ನಿಷೇಧಕ್ಕೆ ಪ್ರಯತ್ನ ನಡೆಸಿವೆಯಾದರೂ ಗುಜರಾತ್, ಬಿಹಾರ್, ಮಿಝೋರಾಂ, ನಾಗಾಲ್ಯಾಂಡ್ ಮತ್ತು ಲಕ್ಷ ದ್ವೀಪಗಳನ್ನು ಬಿಟ್ಟರೆ ಉಳಿದ ಯಾವ ರಾಜ್ಯಗಳೂ ಮದ್ಯನಿಷೇಧ ನೀತಿಗೆ ಕಚ್ಚಿ ನಿಂತಿಲ್ಲ. 1991ರಲ್ಲಿ ಮಣಿಪುರದಲ್ಲಿ ಮದ್ಯಪಾನ ನಿಷೇಧ ಜಾರಿಗೆ ಬಂದರೂ ಅದರ ಕೆಲವು ಲೋಪಗಳಿಂದಾಗಿ 2002ರಲ್ಲಿ ಬಹುತೇಕ ನಿಷೇಧವನ್ನು ಹಿಂಪಡೆಯಲಾಯಿತು. 1952ರಲ್ಲಿ ಆಂಧ್ರ ಪ್ರದೇಶದಲ್ಲಿ ಮದ್ಯನಿಷೇಧ ಜಾರಿಗೆ ಬಂತು ಮತ್ತು 1969ರಲ್ಲಿ ನಿಷೇಧ ತೆರವುಗೊಂಡಿತು. ಆದರೆ, 1994ರಲ್ಲಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಸಂಪೂರ್ಣ ಮದ್ಯನಿಷೇಧ ಜಾರಿಗೆ ತಂದರು. ಆದರೆ 1997ರಲ್ಲಿ ಅವರ ಅಳಿಯ ಚಂದ್ರಬಾಬು ನಾಯ್ಡು ನಿಷೇಧವನ್ನು ಹಿಂತೆಗೆದುಕೊಂಡರು. 1996ರಲ್ಲಿ ಹರ್ಯಾಣದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಚುನಾವಣಾ ಪ್ರಣಾಳಿಕೆಯಲ್ಲಿ ಹರ್ಯಾಣ ವಿಕಾಸ್ ಪಾರ್ಟಿಯ ಬನ್ಸಿಲಾಲ್ ಈ ಭರವಸೆ ನೀಡಿದ್ದರು. ಆದರೆ, 1998ರಲ್ಲಿ ಅವರೇ ಈ ಮದ್ಯಪಾನ ನಿಷೇಧವನ್ನು ಹಿಂತೆಗೆದು ಕೊಂಡರು. 1995ರಲ್ಲಿ ಮೀಝೋರಾಂನಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಆದರೆ 2007ರಲ್ಲಿ ಈ ನಿಷೇಧದಲ್ಲಿ ಕೊಂಚ ಸಡಿಲಿಕೆ ಮಾಡಲಾಯಿತಲ್ಲದೇ, ದ್ರಾಕ್ಷಿಯಿಂದ ವೈನ್ ತಯಾರಿಸುವುದಕ್ಕೆ ಅನುಮತಿ ನೀಡಲಾಯಿತು. ಇದಾಗಿ 7 ವರ್ಷಗಳ ಬಳಿಕ 2014ರಲ್ಲಿ ನಿಷೇಧವನ್ನು ಸಂಪೂರ್ಣವಾಗಿ ಹಿಂತೆಗೆಯಲಾಯಿತು. 1953ರಲ್ಲಿ ತಮಿಳುನಾಡಿನಲ್ಲಿ ಪಾನನಿಷೇಧ ಜಾರಿಗೆ ಬಂತು. ಆದರೆ 1972ರಲ್ಲಿ ಅಧಿಕಾರಕ್ಕೆ ಬಂದ ಕರುಣಾನಿಧಿಯವರು ಈ ನಿಷೇಧವನ್ನು ರದ್ದುಪಡಿಸಿದರು. 1977ರಲ್ಲಿ ಅಧಿಕಾರಕ್ಕೇರಿದ ಎಂ.ಜಿ. ರಾಮಚಂದ್ರನ್ ಅವರು ಮದ್ಯದ ಕುರಿತಂತೆ ಕೆಲವು ನಿಯಂತ್ರಣಗಳನ್ನು ಹೇರಿದರು. ಆ ಬಳಿಕ ಅಧಿಕಾರಕ್ಕೆ ಬಂದ ಕರುಣಾನಿಧಿಯವರು ಆ ನಿಯಂತ್ರಣಗಳನ್ನು ತೆರವುಗೊಳಿಸಿದರು.

ಅಷ್ಟಕ್ಕೂ,
ಮದ್ಯಮುಕ್ತ ಸಮಾಜ ಎಂಬ ಸ್ಲೋಗನ್ ಆಲಿಸುವುದಕ್ಕೆ ಎಷ್ಟು ಹಿತಕರವೋ ಅದನ್ನು ನಿಜಗೊಳಿಸುವುದಕ್ಕೆ ಇರುವ ತಡೆಗಳು ನೂರಾರು. ಹಾಗಂತ, ಸಂಪೂರ್ಣ ಪಾನ ನಿಷೇಧಕ್ಕೆ ಇರುವ ತಡೆಗಳು ದಾಟಲು ಸಾಧ್ಯವೇ ಆಗದಷ್ಟು ಪ್ರಬಲವಾದುದು ಎಂದಲ್ಲ. ಇದಕ್ಕೆ ಪ್ರಬಲ ಇಚ್ಛಾಶಕ್ತಿ ಇರಬೇಕು. ನಿಷೇಧಕ್ಕೆ ಪೂರಕವಾದ ಒಂದೊಂದೇ ನಿಯಂತ್ರಣಗಳನ್ನು ಹೇರುತ್ತಾ ಪೂರ್ಣ ನಿಷೇಧದತ್ತ ಸಾಗುವ ಸರಕಾರ ಮತ್ತು ಅಧಿಕಾರಿಗಳುಬೇಕು. ಪ್ರವಾದಿ ಮುಹಮ್ಮದ್(ಸ) ಇಂಥ ಮದ್ಯಮುಕ್ತ ಸಮಾಜವನ್ನು ಸಾಧಿಸಿ ತೋರಿಸಿದರು. ಅದರಲ್ಲಿರುವ ಕೆಡುಕನ್ನು ಮನಗಂಡೇ ಅವರು ನಿಷ್ಠುರ ಮಾತುಗಳನ್ನು ಆಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹರನ್ನು ವರಿಸಿದ ನಟ ಝಹೀರ್ ಇಕ್ಬಾಲ್ ಮದುವೆ ಕಾರ್ಯಕ್ರಮದಲ್ಲಿ ಪಾನಮತ್ತನಾಗಿ ಕಾಣಿಸಿರುವುದನ್ನು ನೋಡಿ ಇವೆಲ್ಲ ನೆನಪಾಯಿತು.

SHARE THIS POST VIA

About editor

Check Also

ಏಕತೆಯ ಸಂದೇಶ ಸಾರುವ ಹಜ್ಜ್

ಇದು ಇಸ್ಲಾಮಿನ ಐದು ಮೂಲಭೂತ ಕಡ್ಡಾಯ ಕರ್ಮಗಳಲ್ಲಿ ಕೊನೆಯದಾಗಿರುವ ಹಜ್ ಕರ್ಮ ಎಂಬ ಮುಸ್ಲಿಮರ ಪವಿತ್ರ ಯಾತ್ರೆ. ಇದು ವಿಶ್ವದಾದ್ಯಂತದ …